ಮಹಿಳೆಯರು ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಾಗ ಮಾತ್ರ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ: ರಾಜ್ಯಪಾಲ ಗೆಹ್ಲೋಟ್

Update: 2024-03-11 17:12 GMT

ವಿಜಯಪುರ,: ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಮುಖ್ಯ. ಆ ದೇಶದ ಮಹಿಳೆಯರು ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಾಗ ಮಾತ್ರ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಹೇಳಿದ್ದರು, ‘ನೀವು ಸಮಾಜದ ಪ್ರಗತಿಯ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕಾದರೆ, ಆ ಸಮಾಜದ ಮಹಿಳೆಯರ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ’ ಎಂದು. ಇಂದಿನ ಮಹಿಳೆಯರು ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಂಗ ಸಮಾನತೆಯ ತತ್ವವನ್ನು ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡುವುದು ಮಾತ್ರವಲ್ಲದೆ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯಕ್ಕೆ ಹಕ್ಕುಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರನ್ನು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಬಲಿಕರಣಗೊಳಿಸಲು ಮತ್ತು ಅವರಿಗೆ ಅಭಿವೃದ್ಧಿ ಮತ್ತು ಭದ್ರತೆಗೆ ಅವಕಾಶಗಳನ್ನು ಒದಗಿಸಲು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ. ಬೇಟಿ ಬಚಾವೋ ಬೇಟಿ ಪಢಾವೋ, ವರ್ಕಿಂಗ್ ವುಮೆನ್ ಹಾಸ್ಟೆಲ್, ಒನ್-ಸ್ಟಾಪ್ ಸೆಂಟರ್, ಮಹಿಳಾ ಸಹಾಯವಾಣಿ, ಮಹಿಳಾ ಪೊಲೀಸ್ ಸ್ವಯಂಸೇವಕರು, ಉಜ್ವಲಾ ಯೋಜನೆ, ಮಹಿಳಾ ಶಕ್ತಿ ಕೇಂದ್ರ ಮತ್ತು ಇತರ ಹಲವು ಯೋಜನೆಗಳ ಮೂಲಕ ಭಾರತ ಸರಕಾರವು ಹೆಚ್ಚು ಅಂತರ್ಗತ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು

ಶಿಕ್ಷಣವು ಮಾನವೀಯತೆಯ ಪ್ರಗತಿಗೆ ಪ್ರೇರಕ ಶಕ್ತಿ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ರಾಷ್ಟ್ರವನ್ನು ಹೆಚ್ಚು ಶಕ್ತಿಯುತ ಮತ್ತು ಶ್ರೇಷ್ಠವನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರದ ಪ್ರಗತಿಯಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ನೀತಿ ನಿರೂಪಕರು ಅರಿತುಕೊಂಡಿದ್ದಾರೆ ಮತ್ತು ಆದುದರಿಂದ ಇತ್ತೀಚಿನ ದಶಕಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಎಸ್. ಅಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News