ಪೆಟ್ರೋಲ್-ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ : ಸಿಎಂ ಸಿದ್ದರಾಮಯ್ಯ

Update: 2024-06-16 12:18 GMT

ವಿಜಯಪುರ: ‘ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೂ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಇದ್ದದ್ದೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ಜಿಲ್ಲೆಯ ಇಂಚಗೇರಿ ಗ್ರಾಮದ ಹೆಲಿಪ್ಯಾಡ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪೆಟ್ರೋಲ್, ವಿಜಯಪುರದಲ್ಲಿ ನಾವು ಸೋತಿದ್ದೇವೆ. ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ವಿಜಯಪುರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ರಾಜ್ಯದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ 9 ಸ್ಥಾನಗಳನ್ನು ಗಳಿಸಿದ್ದೇವೆ. ಬಿಜೆಪಿ ಕಳೆದ ಬಾರಿ 25 ಇದ್ದನ್ನು ಈ ಬಾರಿ 19ಕ್ಕೆ ಇಳಿದಿದ್ದಾರೆ. ನಮಗೆ ಶೇ.13ರಷ್ಟು ಮತ ಹಂಚಿಕೆಯಾಗಿದೆ. ನಾವು ಸೋತಿದ್ದೇವೆಯೇ?. ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ ಅಷ್ಟೇ ಎಂದು ವಿವರಣೆ ನೀಡಿದರು.

ಸೋತಿರುವುದು ಬಿಜೆಪಿ: ಲೋಕಸಭಾ ಚುನಾವಣೆಯಲ್ಲಿ ಸೋತಿರುವುದು ಬಿಜೆಪಿ. ಕಳೆದ ಬಾರಿ 303 ಸ್ಥಾನಗಳನ್ನು ಪಡೆದು ಈ ಬಾರಿ 240 ಸ್ಥಾನಗಳನ್ನು ಪಡೆದು ಬಿಜೆಪಿ ಸೋತಿದೆ. ಕಳೆದ ಬಾರಿ ಶೇ.31ರಷ್ಟು, ಈ ಬಾರಿ ಶೇ.41ರಷ್ಟು ಮತ ಹಂಚಿಕೆಯಾಗಿದೆ. 15 ಸ್ಥಾನ ಬರಬಹುದೆಂಬ ನಿರೀಕ್ಷೆಯಿತ್ತು. ನಾವು ಸೋತಿದ್ದೇವೆಯೇ?. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕಡಿಮೆ ಮತ ಬಂದಿದೆ, ಮೋದಿ ಅಲೆ ಕಡಿಮೆಯಾಗಿದೆ ಎಂದು ಸ್ಪಷ್ಟಣೆ ನೀಡಿದರು.

ಪೆಟ್ರೋಲ್ ಬೆಲೆ ಕಡಿಮೆ ಇದೆ: ಕರ್ನಾಟಕದಲ್ಲಿ 99.85 ರೂ. ಲೀ ಪೆಟ್ರೋಲ್ ಬೆಲೆಯಿದೆ. ನಿನ್ನೆಯಿಂದ 3 ರೂ.ಹೆಚ್ಚು ಮಾಡಿದ್ದೇವೆ. 102 ರೂ.ಗೆ ಏರಿಕೆಯಾಗಿದೆ. ಇದು ತಮಿಳುನಾಡಿಗೆ ಸಮವಾಗಿದೆ. ಕೇರಳದ ಕಾಸರಗೋಡಿನಲ್ಲಿ 106.66ರೂ.ಗಳಿದೆ. ಆಂಧ್ರದ ಅನಂತಪುರದಲ್ಲಿ 109.44ರೂ., ತೆಲಂಗಾಣದಲ್ಲಿ 107.40ರೂ. ಹಾಗೂ ಮಹಾರಾಷ್ಟ್ರದಲ್ಲಿ 104.46ರೂ. ಇದೆ. ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿನ ದರ ಕಡಿಮೆ ಇದೆ ಎಂದು ಅವರು ಏರಿಕೆಯನ್ನು ಸಮರ್ಥಿಸಿದರು.

ಅನುದಾನ: ಶಾಸಕರಿಗೆ ಅನುದಾನವನ್ನು ನೀಡಲಾಗಿದೆ ಎಂದ ಅವರು, ಗ್ಯಾರಂಟಿ ಯೋಜನೆಗಳನ್ನು ಬಡವರ ಅನುಕೂಲಕ್ಕಾಗಿ ಜಾರಿಮಾಡಿದೆ ಚುನಾವಣೆಗಾಗಿ ಅಲ್ಲ. ಸಾರ್ವಜನಿಕರಲ್ಲಿ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆಂಬ ಆತಂಕಬೇಡ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News