'ಸರ್ವರಿಗೂ ಸೂರು' ಯೋಜನೆಯಡಿ ಸ್ವಂತ ಮನೆ ಕನಸನ್ನು ನನಸು ಮಾಡಿಕೊಂಡ 240 ಕುಟುಂಬ

Update: 2024-03-04 06:01 GMT

ಉಡುಪಿ: ಸ್ವಂತ ಮನೆಯೊಂದನ್ನು ಹೊಂದಬೇಕೆನ್ನುವುದು ಪ್ರತಿಯೊಬ್ಬರ ಕನಸು. ಆದರೆ ಇಂದಿನ ದುಬಾರಿ ಯುಗದಲ್ಲಿ ಈ ಕನಸನ್ನು ನನಸಾಗಿಸಿಕೊಳ್ಳುವುದು ಹೆಚ್ಚಿ ನವರಿಗೆ ಅಷ್ಟೊಂದು ಸುಲಭವೇನಲ್ಲ. ಅದರಲ್ಲೂ ಬಡವರಿಗೆ ಇದು ಹಿಮಾಲಯ ಪರ್ವತದಂತೆ ದಾಟಲು ಕಠಿಣವಾದ ಸವಾಲಾಗಿರುತ್ತದೆ.

ಆದರೆ ಇಂದು ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿವೇಶನರಹಿತರಿಗೆ, ವಸತಿರಹಿತರಿಗೆ ಅದರಲ್ಲೂ ಬಡವರಿಗೆ ಮನೆಗಳನ್ನು ಸುಲಭವಾಗಿ ವಿವಿಧ ಸಹಾಯಧನ, ಅನುದಾನಗಳ ಮೂಲಕ ನೀಡುವ ಹಲವು ಯೋಜನೆಗಳನ್ನು ಹೊಂದಿದ್ದು, ಅದನ್ನು ವಿವಿಧ ರೂಪಗಳಲ್ಲಿ ಕಾರ್ಯರೂಪಕ್ಕೆ ತರುತ್ತಿವೆ.

ಇದೀಗ ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ 'ಸರ್ವರಿಗೂ ಸೂರು' ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನರಹಿತರು ಹಾಗೂ ವಸತಿರಹಿತರಿಗೆ ಅವರದ್ದೇ ಆದ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳುವ ಕನಸನ್ನು ನನಸು ಮಾಡಿದೆ. ಈಗಾಗಲೇ 240 ಕುಟುಂಬಗಳು ಜಿ+3 ಮಾದರಿಯಲ್ಲಿ ವಸತಿ ಸಮುಚ್ಚಯದಲ್ಲಿ ತಮ್ಮದೇ ಆದ ಸೂರಿನಡಿ ಬದುಕುವ ಸಾಗಿಸುವ ಅವಕಾಶ ಪಡೆದುಕೊಂಡಿವೆ.

ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಸ.ನಂ.305/2ಎ1ರಲ್ಲಿ 6.97 ಎಕರೆ ಹಾಗೂ ಸ.ನಂ.319/1ಬಿಯಲ್ಲಿ 1.25 ಎಕರೆ ಸೇರಿದಂತೆ ಒಟ್ಟು 8.22 ಎಕರೆ ಪ್ರದೇಶದಲ್ಲಿ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಲು ನಗರಸಭೆ ಕಾಯ್ದಿರಿಸಿದೆ. ಇದರಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಒಟ್ಟು 460 ಮಂದಿ ನಿವೇಶನ ರಹಿತರಿಗೆ ಜಿ+3 ಮಾದರಿಯಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ.

ಇದಕ್ಕಾಗಿ ಈಗಾಗಲೇ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಯೋಜನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಕಾಮಗಾರಿಯ ಟೆಂಡರ್ ಹಾಗೂ ನಿರ್ವಹಣೆಯನ್ನು ಹೊಂದಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೊದಲ ಹಂತದಲ್ಲಿ ತಲಾ 24 ವಸತಿಗಳನ್ನು ಹೊಂದಿರುವ ಒಟ್ಟು 10 ವಸತಿ ಸಮುಚ್ಚಯಗಳನ್ನು ಹೆರ್ಗ ಗ್ರಾಮದ ಸರಳೇಬೆಟ್ಟು ವಾರ್ಡ್ನ ಬಬ್ಬುಸ್ವಾಮಿ ಲೇಔಟ್ನಲ್ಲಿ ನಿರ್ಮಿಸಿದ್ದು, ಇದರಲ್ಲಿರುವ 240 ವಸತಿಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದೆ.

ಇನ್ನೀಗ ಎರಡನೇ ಹಂತದಲ್ಲಿ 220 ವಸತಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಕೆಲವೇ ತಿಂಗಳುಗಳಲ್ಲಿ ಅವುಗಳನ್ನು ಸಹ ವಸತಿರಹಿತರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಿಸಿ ಕೊಡುವ ಕೆಲಸ ಭರದಿಂದ ನಡೆಯುತ್ತಿದೆ.

ರಾಜ್ಯಮಟ್ಟದಲ್ಲಿ ಈ ಯೋಜನೆಯಡಿ ಮೊದಲ ಹಂತದಲ್ಲಿ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಪೂರ್ಣಗೊಂಡಿರುವ 36,789 ಮನೆಗಳ ಲೋಕಾರ್ಪಣೆ ಸಮಾರಂಭ ಶನಿವಾರ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ. ಇದೇ ವೇಳೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ 240 ಮನೆಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿ ಅವುಗಳನ್ನು ಆಯಾ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದರು. ಉಡುಪಿಯ ಮಣಿಪಾಲ ಸಮೀಪ ಸರಳೇಬೆಟ್ಟು

ವಾರ್ಡ್ನ ಬಬ್ಬುಸ್ವಾಮಿ ಲೇಔಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರದ ದಾಖಲೆ ಹಾಗೂ ಮನೆ ಕೀಗಳನ್ನು ಹಸ್ತಾಂತರಿಸಿದ್ದರು.


ಮನೆಗೆ ತಲಾ 7.42 ಲಕ್ಷ ರೂ.: ಇಲ್ಲಿನ ಪ್ರತಿ ವಸತಿಗೃಹಗಳು ತಲಾ 394 ಚದರ ಅಡಿ ಅಳತೆಯಲ್ಲಿ ನಿರ್ಮಾಣಗೊಂಡಿವೆ. 8.22 ಎಕರೆ ವಿಸ್ತೀರ್ಣದಲ್ಲಿ ತಲಾ 24 ಮನೆಗಳಂತೆ ನೆಲ ಮತ್ತು ಮೂರು ಮಹಡಿಗಳ ಒಟ್ಟು 10 ಫ್ಲ್ಯ್ಲಾಟ್ಗಳಲ್ಲಿ 240 ಮನೆಗಳನ್ನು ಪ್ರತೀ ಮನೆಗೆ 7,42,994 ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ ನಿರ್ಮಾಣಗೊಂಡ 240 ಮನೆಗಳಲ್ಲಿ 29 ಮನೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಿದ್ದರೆ, ಉಳಿದ 211 ಮನೆಗಳನ್ನು ಇತರ ಎಲ್ಲಾ ಸಾಮಾನ್ಯ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.

ಪ್ರತೀ ಮನೆಯ ಘಟಕ ವೆಚ್ಚ 7,42,994 ರೂ.ಗಳಲ್ಲಿ ಆಯಾ ಫಲಾನುಭವಿ ನೀಡಬೇಕಾದ ವಂತಿಕೆ 90,000 ರೂ.(ಪರಿಶಿಷ್ಟರಿಗೆ ಇದು 60,000 ರೂ.). ಉಳಿದಂತೆ ಕೇಂದ್ರ ಸರಕಾರ ಪ್ರತಿಯೊಬ್ಬ ಫಲಾನುಭವಿಗೂ 1,50,000 ರೂ. ರಾಜ್ಯ ಸರಕಾರ 1,20,000 ರೂ. (ಪರಿಶಿಷ್ಟರಿಗೆ 2,00,000) ನೀಡಿದೆ. ಉಳಿದಂತೆ ನಗರಸಭೆ ಯೋಜನಾ ವೆಚ್ಚದ ಶೇ.10ರಷ್ಟು ಅನುದಾನವನ್ನು ತಲಾ 74,299ರೂ. ಭರಿಸಿದೆ. ಉಳಿದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲದ ರೂಪದಲ್ಲಿ ಒದಗಿಸಲಾಗಿದೆ. ಇದು ಸಾಮಾನ್ಯ ವರ್ಗಕ್ಕೆ 3,08,695 ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ 2,58,695 ರೂ. ಆಗಿದೆ. ಈಗಾಗಲೇ 31 ಮಂದಿ ತಮ್ಮ ವಸತಿಗೃಹಗಳಲ್ಲಿ ವಾಸ ಮಾಡುತ್ತಿದ್ದಾರೆ. 68 ಮಂದಿಗೆ ಮನೆ ಕೀಯನ್ನು ಹಸ್ತಾಂತರಿಸಲಾಗಿದೆ. ಇನ್ನು 100 ಮಂದಿ ನೋಂದಾಣಿಗೊಂಡು ಮನೆ ಪ್ರವೇಶಕ್ಕೆ ಸಿದ್ಧವಾಗಿದ್ದಾರೆ. ಉಳಿದವರ ದಾಖಲೆ ಪತ್ರಗಳನ್ನು ಶೀಘ್ರವೇ ನೀಡಲಾಗುತ್ತದೆ ಎಂದು ಉಡುಪಿ ನಗರಸಭಾ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.

ಐದು ವರ್ಷಗಳ ಕಾಯುವಿಕೆಗೆ ಕೊನೆ

ಈ ಯೋಜನೆ ಪ್ರಾರಂಭಗೊಂಡಿದ್ದು, 2019ರಲ್ಲಿ. ಇದರಲ್ಲಿ ಹೆಚ್ಚಿನ ಫಲಾನುಭವಿಗಳು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಉಡುಪಿಗೆ ಬಂದು ಇಲ್ಲೇ ನಿಂತ ವಲಸೆ ಕಾರ್ಮಿಕರು. ಹಿಂದುಳಿದ ಪ್ರದೇಶಗಳಿಂದ ಬಂದು ಇಲ್ಲಿನ ಬದುಕಿಗೆ ಹೊಂದಿಕೊಳ್ಳಲು ಪ್ರತಿದಿನ ಸೆಣಸಾಟ ನಡೆಸುವ ಈ ಕಠಿಣ ಪರಿಶ್ರಮ ಬದುಕಿನ ಮಂದಿ, ಕುಟುಂಬದ ಖರ್ಚು ವೆಚ್ಚದೊಂದಿಗೆ ಇಲ್ಲಿನ ದುಬಾರಿ ಮನೆ ಬಾಡಿಗೆ ನೀಡಲು ಹರಸಾಹಸ ಪಡುವವರು. ಹೀಗಾಗಿ ಸರಕಾರದ ಈ ವಸತಿ ಯೋಜನೆಯ ಮೂಲಕ ಅವರು ಸ್ವಂತ ಸೂರಿನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಂದಿನ ಶಾಸಕ ಕೆ.ರಘುಪತಿ ಭಟ್ರ ಸತತ ಪ್ರಯತ್ನಗಳಿಂದ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ವಿವಿಧ ಕಾರಣಗಳಿಂದ ಕಾಮಗಾರಿ ಕುಂಟುತ್ತಾ ಸಾಗಿ, ನಿಗದಿತ ಅವಧಿಗೆ ಪೂರ್ಣಗೊಳ್ಳದಿದ್ದಾಗ

ಬ್ಯಾಂಕ್ ಸಾಲದ ತಿವಿತಕ್ಕೊಳಗಾದ ಫಲಾನುಭವಿಗಳು ಒಂದೆರಡು ಬಾರಿ ನಗರಸಭೆ ಎದುರು ಧರಣಿ, ಪ್ರತಿಭಟನೆಯನ್ನೂ ನಡೆಸಿದ್ದರು. ಮನೆ ಪೂರ್ಣಗೊಂಡರೂ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಸಿಗದಾಗ ಅದಕ್ಕಾಗಿಯೂ ಹೋರಾಟ ನಡೆಸಿದ್ದರು. ಕೊನೆಗೆ ರಘುಪತಿ ಭಟ್ ಅವರೇ ಅಲ್ಲಿಗೆ ಅಗತ್ಯ ಸೌಲಭ್ಯ ದೊರೆಯುವಂತೆ ನೋಡಿಕೊಂಡಿದ್ದರು.

ಇನ್ನೂ ಆಗಿಲ್ಲ ಪಕ್ಕಾ ರಸ್ತೆ, ಬೇಕು ದಾರಿದೀಪ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಮಗಾರಿಯ ಬಗ್ಗೆ ಫಲಾನುಭವಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸದ್ಯ ವಾಸಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳಿವೆ. ಆದರೆ ಇಲ್ಲಿಗೆ ತಲುಪಲು ಪಕ್ಕಾ ರಸ್ತೆಯೇ ಇನ್ನೂ ನಿರ್ಮಾಣಗೊಂಡಿಲ್ಲ. ಈಗಿರುವ ಕಚ್ಛಾ ರಸ್ತೆಯನ್ನು ಪಕ್ಕಾಗೊಳಿಸಿ ಡಾಮರೀಕರಣ ಕಾಮಗಾರಿ ಬೇಗನೇ ನಡೆಯಬೇಕು. ಒಟ್ಟಿಗೆ ಇಲ್ಲಿಗೆ ಬಸ್ ಸಾರಿಗೆ ಕಲ್ಪಿಸಬೇಕು.

ಸಮುಚ್ಚಯಕ್ಕೆ ಸಮೀಪದ ರಸ್ತೆಯಾಗಿರುವ ಜಿಲ್ಲಾಧಿಕಾರಿ ಕಚೇರಿ ಸಮೀಪದ ಮಣಿಪಾಲ ಎಂಡ್ ಪಾಯಿಂಟ್ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಕಾಲು ಸಂಕ ರಚನೆ, ವಸತಿ ಸಮುಚ್ಚಯಕ್ಕೆ ಬರುವ ರಸ್ತೆ ಎರಡೂ ಬದಿ ದಾರಿದೀಪ ವ್ಯವಸ್ಥೆ, ಮುಂದೆ ಸುಮಾರು 500 ಕುಟುಂಬ ಇಲ್ಲಿ ವಾಸಿಸುವ ಕಾರಣ ಇಲ್ಲಿಗೆ ಅಂಗನವಾಡಿ, ವಾಯುವಿಹಾರಕ್ಕೆ ಪಾರ್ಕ್, ಆಟದ ಮೈದಾನ ನಿರ್ಮಾಣಗೊಳ್ಳಬೇಕು ಎಂದು ನಿವಾಸಿಗರು ಈಗಾಗಲೇ ಸದ್ಯ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.

ಸ್ವಂತ ಮನೆಯ ಕನಸು ನನಸಾಗಿರುವುದರಿಂದ ತುಂಬಾ ಖುಷಿಯಾಗಿದೆ. ಮನೆಗೆ ಬಾಡಿಗೆ ಕೊಟ್ಟುಕೊಟ್ಟು ಸಾಕಾಗಿದೆ. ಹೀಗಾಗಿ ಮನೆ ಸಿದ್ಧವಾದ ತಕ್ಷಣ ಇಲ್ಲಿಗೆ ಬಂದಿದ್ದೇವೆ. ಇಲ್ಲಿಗೆ ಬಂದು ಹೋಗಲು ಮಾತ್ರ ಈಗ ಕಷ್ಟಪಡಬೇಕಿದೆ. ಉತ್ತಮ ರಸ್ತೆ ಹಾಗೂ ಇಲ್ಲಿಗೆ ಬಸ್ ವ್ಯವಸ್ಥೆಯಾಗಬೇಕು. ಮಕ್ಕಳಿಗೆ ಅಂಗನವಾಡಿಬೇಕು.

ಸುಶೀಲಾ, ಫಲಾನುಭವಿ ಮಹಿಳೆ

ಮನೆಯ ನಿರ್ಮಾಣ ಉತ್ತಮವಾಗಿದೆ. ಯಾವುದೇ ದೂರುಗಳಿಲ್ಲ. ಆದರೆ ನಾವು ನಮಗೆ ತಕ್ಕಂತೆ ಮನೆಯ ಇಂಟೀರಿಯರ್ ಬದಲಾವಣೆ ಮಾಡಿಕೊಳ್ಳುತಿದ್ದೇವೆ. ಫ್ಲೋರಿಂಗ್ ಬದಲಿಸಿದ್ದೇವೆ. ಒಳಾಂಗಣದಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ಮಾರ್ಪಾಡು ಮಾಡುತ್ತಿದ್ದೇವೆ. ಸುಮಾರು ಎರಡು ಲಕ್ಷ ರೂ. ಹೆಚ್ಚುವರಿ ವೆಚ್ಚ ಮಾಡಿ ಬೇಕಾದ ಸೌಲಭ್ಯ ಅಳವಡಿಸಿಕೊಂಡಿದ್ದೇವೆ. ಮನೆ ನಮಗೆ ಬೇಕಾದಂತೆ ಇರಬೇಕಲ್ಲ ಅದಕ್ಕೆ. ಬರುವ ಯುಗಾದಿಗೆ ಗೃಹ ಪ್ರವೇಶ ಮಾಡುತ್ತೇವೆ.

ಕಸ್ತೂರಿ, ಸದ್ಯ ಇಂದಿರಾ ನಗರದಲ್ಲಿರುವ ಫಲಾನುಭವಿ ಮಹಿಳೆ


ಎರಡನೇ ಹಂತದಲ್ಲೂ 220 ವಸತಿಗೃಹಗಳ ಕಾಮಗಾರಿ ನಡೆಯುತ್ತಿದೆ. ಶೀಘ್ರದಲ್ಲಿ ಅವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುತ್ತೇವೆ. ಈಗಾಗಲೇ 180 ಫಲಾನುಭವಿಗಳನ್ನು ಗುರುತಿಸಿದ್ದೇವೆ. ಆದರೆ ಘಟಕದ ನಿರ್ಮಾಣ ವೆಚ್ಚವನ್ನು 50,000 ರೂ.ಗಳಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ರಂಗಯ್ಯ ಬಡಿಗೇರ, ಕಾರ್ಯನಿರ್ವಾಹಕ ಅಭಿಯಂತರ,

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕೇಂದ್ರ ಶಿವಮೊಗ್ಗ

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಬಿ.ಬಿ. ಶೆಟ್ಟಿಗಾರ್

contributor

Similar News