ಹಳೆಯ ಆಟಕ್ಕೆ ಕಳೆ ಕಟ್ಟಿದ ಹೊಸ ಪ್ರಯೋಗ
✍️ ಗಣೇಶ ಆಮೀನಗಡ
ಹಿಮ್ಮೇಳದ ಹಿರಿಯರೊಂದಿಗೆ ಹೊಸ ತಲೆಮಾರಿನ ಕಲಾವಿದರು ಸೇರಿ ಪ್ರಯೋಗಿಸಿದ ಈ ಆಟ ಯಶಸ್ವಿಯಾಯಿತು. ಇದರ ಪ್ರಯೋಗ ಹೆಚ್ಚಬೇಕು ಎಂಬ ಹಂಬಲವಿರುವ ಡಿ.ತಿಪ್ಪಣ್ಣ ಅವರು ಈ ಆಟಕ್ಕೆ ಹೊಸ ರೂಪ ನೀಡಿದ್ದಾರೆ. ಹೊಸ ತಲೆಮಾರಿಗೆ ತೋರಿಸುವ ಉತ್ಸಾಹ ಇರುವ ಅವರ ಶ್ರದ್ಧೆ, ಶ್ರಮ ಸಾರ್ಥಕವಾಗಿದೆ.
ಕಾಂತ ನಿನ್ನ ನುಡಿಯ ಕೇಳಿ ನಲಿವುದೆನ್ನ ಮನವು
ಕಮಲನಯನ ಕಾಂತ ಬಾರೊ ಬೇಗ ಹೋಗೋಣ
ರತಿಯ ಹೋಲುವ ಸತಿಯ ಕಂಡು ಮತಿಯವಂತನೋ
ಅತಿಯಾದ ಪ್ರೀತಿಯಿಂದ ಹರುಷಗೊಂಡಾನೋ
ಇಂಥ ಶೃಂಗಾರಭರಿತ ಸಾಲುಗಳ ಜೊತೆಗೆ ನವರಸಗಳನ್ನು ಒಳಗೊಂಡ ಮೂಡಲಪಾಯ ಯಕ್ಷಗಾನದ ಆಟ ‘ಕರಿರಾಯ ಚರಿತ್ರೆ’ಯು ಈಚೆಗೆ (ಜೂನ್ 16) ಮೈಸೂರಿನ ರಾಜಶೇಖರ ಕದಂಬ ಅವರ ಕದಂಬ ರಂಗ ವೇದಿಕೆಯ 60ನೇ ವರ್ಷದ ಪ್ರಯುಕ್ತ ಏರ್ಪಡಿಸಿದ್ದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿತು.
ಈ ಆಟಕ್ಕೆ ಹೆಜ್ಜೆ ಹಾಕಲು ಕುಣಿತ ಬೇಕಿತ್ತು, ಭಾಗವತರೊಂದಿಗೆ ಹಾಡಲು ಶಾರೀರ ಬೇಕಿತ್ತು ಜೊತೆಗೆ ಕಲಾವಿದರಿಗೆ ಅಭಿನಯವೂ ಇರಬೇಕಿತ್ತು. ಹೀಗೆ ಸಾಹಿತ್ಯ, ಸಂಗೀತ ಹಾಗೂ ನೃತ್ಯ ಮೇಳೈಸಿದ ಈ ಆಟದಲ್ಲಿ ಅಭಿನಯಕ್ಕೂ ಅವಕಾಶವಿತ್ತು. ಸಮೃದ್ಧ ಸಾಹಿತ್ಯ, ಕರ್ನಾಟಕ ಸಂಗೀತ ಒಳಗೊಂಡ ಹಾಡುಗಳು, ಭರತನಾಟ್ಯದ ಮುದ್ರೆಗಳನ್ನು ಬಳಸಿಕೊಂಡ ನೃತ್ಯವಿದ್ದ ಪರಿಣಾಮ ರಂಗಭೂಮಿಯ ಹವ್ಯಾಸಿ ಕಲಾವಿದರು ಪ್ರಸ್ತುತಪಡಿಸಿದ ಈ ಆಟ ಯಶಸ್ವಿಯಾಯಿತು.
ಈ ಆಟ ಯಶಸ್ವಿಯಾಗಲು ಕಾರಣರಾದವರು ಇದರ ನಿರ್ದೇಶಕರಾದ ರಂಗಕರ್ಮಿ ಡಿ. ತಿಪ್ಪಣ್ಣ. ಭಾರತೀಯ ವಾಯುಸೇನೆಯಲ್ಲಿದ್ದ ಅವರು ಅಲ್ಲಿ ನಿವೃತ್ತಿ ಪಡೆದ ನಂತರ ಬ್ಯಾಂಕ್ ಉದ್ಯೋಗಿಯಾಗುವುದರ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯರಾದರು. ಜೊತೆಗೆ ಮೂಡಲಪಾಯ ಯಕ್ಷಗಾನ ಕುರಿತು ಆಸಕ್ತಿಯಿದ್ದ ಪರಿಣಾಮ ಇದನ್ನು ಸಿದ್ಧಗೊಳಿಸಿ ಈಗಾಗಲೇ 3-4 ಆಟಗಳನ್ನು ಪ್ರದರ್ಶಿಸಿದ್ದಾರೆ. ಇದಕ್ಕಾಗಿ ಯಕ್ಷರಂಗ ಎಂಬ ತಂಡ ಕಟ್ಟಿಕೊಂಡಿದ್ದಾರೆ. ಎಂಬತ್ತು ವರ್ಷ ವಯಸ್ಸಿನ ಅವರ ಉತ್ಸಾಹ ದೊಡ್ಡದು. ಮೂಡಲಪಾಯ ಯಕ್ಷಗಾನ ಆಟವೀಗ ನಶಿಸಿಹೋಗುತ್ತಿದೆ, ಅಳಿವಿನಂಚಿನಲ್ಲಿದೆ ಎನ್ನುವುದಕ್ಕಿಂತ ಅಪರೂಪವಾಗುತ್ತಿದೆ ಎನ್ನುವುದನ್ನು ಅರಿತ ಅವರು, ಈ ಪ್ರಕಾರವನ್ನು ಉಳಿಸಲು ಯತ್ನಿಸುತ್ತಿದ್ದಾರೆ.
ಈ ಮೂಡಲಪಾಯ ಆಟವು 15ನೇ ಶತಮಾನದ ಯಕ್ಷ ಕವಿ ಕೆಂಪಣ್ಣಗೌಡರಿಂದ ಆರಂಭವಾಯಿತು ಎನ್ನುವುದು ತಜ್ಞರ ಅಭಿಪ್ರಾಯ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂದನಹಳ್ಳಿಯ ಕೆಂಪಣ್ಣಗೌಡರು ರೈತರು. ಮೂಡಲಪಾಯ ಆಟ ಬರೆದು ಬಿಡುವಿನ ಅವಧಿಯಲ್ಲಿ ರೈತರಿಂದ ಆಡಿಸಿದರು. ಮೈಸೂರು ಭಾಗವನ್ನು ಮೂಡಲಪಾಯ ಎನ್ನುವುದರಿಂದ ಮೂಡಲಪಾಯ ಯಕ್ಷಗಾನ ಆಟವೆಂದಾಯಿತು. ಕರಾವಳಿಯಲ್ಲಿ ಪಡುವಲಪಾಯವೆಂದು, ಉತ್ತರ ಕರ್ನಾಟಕದಲ್ಲಿ ದೊಡ್ಡಾಟ ಎನ್ನುತ್ತಾರೆ.
ಪದ್ಯ ರೂಪದಲ್ಲಿ ಈ ಆಟ ಗ್ರಾಮೀಣ ಪ್ರೇಕ್ಷಕರಿಗೆ ಅರ್ಥವಾಗಲೆಂದು ಕಲಾವಿದರು ಕುಣಿಯುತ್ತ ಅರ್ಥ ಹೇಳಿದರು. ಭಾಗವತರೊಂದಿಗೆ ಇತರ ಹಿಮ್ಮೇಳದವರ ಹಾಡಿಗೆ ತಕ್ಕಂತೆ ಕಲಾವಿದರು ಕುಣಿಯುತ್ತ ಕಥೆಯನ್ನು ವಿಸ್ತರಿಸಿದರು. ಆದರೆ ಕರಾವಳಿಯಲ್ಲಿ ವಿದ್ಯಾವಂತರು, ವಿದ್ವಾಂಸರು ಯಕ್ಷಗಾನದಲ್ಲಿ ತೊಡಗಿಕೊಂಡಂತೆ ಈ ಮೂಡಲಪಾಯ ಆಟದಲ್ಲಿ ತೊಡಗಿಕೊಳ್ಳದ ಪರಿಣಾಮ ಸೊರಗತೊಡಗಿತು. ಇದರೊಂದಿಗೆ ಭಾಗವತರು, ಮದ್ದಳೆಗಾರರು ಮತ್ತು ಮುಖವೀಣೆ ಕಲಾವಿದರೂ ಈಗ ಅಪರೂಪವಾಗುತ್ತಿದ್ದಾರೆ.
ಅಂದು ಪ್ರಯೋಗಗೊಂಡ ಆಟದ ಕುರಿತು; ಕರಿರಾಯ ಎಂಬವನು ಧಾರಾಪುರದ ಮಾರಭೂಪಾಲ ಮತ್ತು ಬನವಂತಾದೇವಿ ಯವರ ಪುತ್ರ. ಹಳೇಬೀಡಿನ ಬಲ್ಲಾಳದೊರೆಯ ಆಹ್ವಾನ ಸ್ವೀಕರಿಸಿ, ಆತನ ಪುತ್ರಿ ಧರಣಿಮೋಹಿಯನ್ನು ಮದುವೆಯಾಗಲು ಸೈನ್ಯದೊಡನೆ ಪ್ರಯಾಣಿಸುತ್ತಾನೆ. ಆಗ ಸುಂದರ ಹಂಸಪಕ್ಷಿಯನ್ನು ಹಿಡಿಯುವ ಯತ್ನದಲ್ಲಿ ತನ್ನ ಸೈನ್ಯದಿಂದ ದೂರವಾಗುತ್ತಾನೆ.
ಆಗ ತೊಂಡನೂರಿನ ಉದ್ದಂಡಿ ರಕ್ಕಸಿಯ ಮಗಳಾದ ಪುಂಡರೀಕಾಕ್ಷಿಯ ಪ್ರೇಮಕ್ಕೆ ಸಿಲುಕಿ, ಆಕೆಯ ಮನೆ ಸೇರುತ್ತಾನೆ. ಆಗ ಇವರ ಪ್ರೇಮ ಪ್ರಕರಣ ಬಯಲಾಗುತ್ತದೆ. ಉದ್ದಂಡಿಗಾದರೋ ತನ್ನ ಮಗಳನ್ನು ಆಕೆಯ ಸೋದರ ಬೊಮ್ಮರಕ್ಕಸನಿಗೆ ಮದುವೆ ಮಾಡಿಕೊಡಬೇಕೆಂಬ ಬಯಕೆ. ಆದರೆ ಪುಂಡರೀಕಾಕ್ಷಿಗೆ ಇಷ್ಟವಿರುವುದಿಲ್ಲ. ಇದಕ್ಕಾಗಿ ಕರಿರಾಯನನ್ನು ಕೊಲ್ಲುವ ಉದ್ದೇಶದಿಂದ ಅವರ ಕಾಲಿಗೆ ಪೆಂಡೆ (ಕಡಗ ರೀತಿಯದು)ಯನ್ನು ಪುಂಡರೀಕಾಕ್ಷಿಯಿಂದಲೇ ಕಟ್ಟಿಸುತ್ತಾಳೆ. ಅಂದು ರಾತ್ರಿ ಬೊಮ್ಮ ಮತ್ತು ಕರಿರಾಯ ಒಂದೇ ಕೋಣೆಯಲ್ಲಿ ಮಲಗಲು ಏರ್ಪಾಟು ಮಾಡುತ್ತಾಳೆ. ಪೆಂಡೆ ಕಟ್ಟಿರುವುದರ ಹಿಂದೆ ಏನೋ ಸಂಚು ಇರಬೇಕೆಂದು ತಿಳಿದ ಪುಂಡರೀಕಾಕ್ಷಿಯು ಮಧ್ಯರಾತ್ರಿಯಲ್ಲಿ ಎದ್ದು ತನ್ನ ಗಂಡನ ಕಾಲಿಗೆ ಕಟ್ಟಿದ್ದ ಪೆಂಡೆಯನ್ನು ಬಿಚ್ಚಿ ಬೊಮ್ಮನ ಕಾಲಿಗೆ ಕಟ್ಟುತ್ತಾಳೆ. ಇದನ್ನು ಅರಿಯದ ಉದ್ದಂಡಿಯು ಬೊಮ್ಮನ ಕಾಲಲ್ಲಿದ್ದ ಪೆಂಡೆಯನ್ನು ಕಂಡು, ತನ್ನ ಅಳಿಯನೇ ಎಂದು ಭಾವಿಸಿ ಕೊಲ್ಲುತ್ತಾಳೆ. ಆದರೂ ಗಂಡಾಂತರ ಕಾದಿದೆ ಎಂದು ಪುಂಡರೀಕಾಕ್ಷಿಯು ತನ್ನ ಗಂಡನನ್ನು ಅಲ್ಲಿಂದ ದೂರ ಹೋಗುವಂತೆ ಹೇಳುತ್ತಾಳೆ. ಆಗಲೂ ಬಿಡದ ಉದ್ದಂಡಿಯು ಬಾಣಂತಿ ವೇಷ ಧರಿಸಿ ಕರಿರಾಯನನ್ನು ಹುಡುಕುತ್ತ ಹೊರಡುತ್ತಾಳೆ. ಅದೊಂದು ಊರಲ್ಲಿ ಊರಗೌಡರ ಎದುರು ತನ್ನ ಗಂಡ ಮೋಸ ಮಾಡುತ್ತಿದ್ದಾನೆಂದು ನಂಬಿಸುತ್ತಾಳೆ. ಜೊತೆಗೆ ಅಂದು ರಾತ್ರಿ ಗುಡಿಯೊಳಗೆ ಮಲಗಿರುವಾಗ ಕರಿರಾಯನನ್ನು ಕೊಲ್ಲುತ್ತಾಳೆ. ನಂತರ ಪುಂಡರೀಕಾಕ್ಷಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಬಳಿಕ ಶಿವ-ಪಾರ್ವತಿಯರು ಪ್ರತ್ಯಕ್ಷವಾಗಿ ಎಲ್ಲರನ್ನೂ ಬದುಕಿಸುವುದರೊಂದಿಗೆ ಆಟ ಕೊನೆಗೊಳ್ಳುತ್ತದೆ.
ಇಂಥ ಆಟ ಕಳೆಗಟ್ಟಲು ಕಾರಣರಾದವರಲ್ಲಿ 65 ವರ್ಷ ವಯಸ್ಸಿನ ಭಾಗವತರಾದ ಬಸವರಾಜು. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗೌಡನಕಟ್ಟೆ ಗ್ರಾಮದ ಅವರು ಕೃಷಿಕರು ಜೊತೆಗೆ ಮೂಡಲಪಾಯ ಆಟದ ಕಲಾವಿದರಾಗಿದ್ದರು. ಆದರೆ ಭಾಗವತಿಕೆಯತ್ತ ಆಸಕ್ತಿ ಹೆಚ್ಚಿದ್ದರಿಂದ ಭಾಗವತರಾದರು. ಪ್ರದರ್ಶನಗೊಂಡ ದಿನ ಎರಡು ಗಂಟೆಯವರೆಗೂ ನಿಂತೇ ಇದ್ದು ಸೊಗಸಾಗಿ ಹಾಡಿದರು. ಇವರಿಗೆ ತಿ.ನರಸೀಪುರದ ಮಹಾದೇವಪ್ಪಸಾಥಿ ನೀಡಿದರು. ಮುಖವೀಣೆಯಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಂಚೆಕೊಪ್ಪಲು ಗ್ರಾಮದ ಹೆಮ್ಮಿಗೆ ನಾರಾಯಣಸ್ವಾಮಿ ಸಹಕಾರ ನೀಡಿದರು. ಕುಣಿತ ಕಲಿಸಿದವರು ಶಂಕರಪ್ಪಹಾಗೂ ಎಂ.ಎಸ್.ಕಾವೇರಿ. ಪ್ರಸಾದನ, ವೇಷಭೂಷಣ ವಿನ್ಯಾಸ ಹಾಗೂ ತಯಾರಿಕೆ ಡಿ.ಅಶ್ವಥ್ ಕದಂಬ ಅವರದು. ರಮೇಶ್ ಬಾಬು ಗುಬ್ಬಿ ಅವರ ಬೆಳಕು ಇತ್ತು.
ಇನ್ನು ಮುಮ್ಮೇಳದಲ್ಲಿ ಗಣಪತಿಯಾಗಿ ಸಾತ್ವಿಕ್ ತಾನ್ವಿ, ಸರಸ್ವತಿ/ಈಶ್ವರನಾಗಿ ದೀಪ್ತಿ ಶೆಟ್ಟಿ, ಲಕ್ಷ್ಮಿ ಹಾಗೂ ಬಾಣಂತಿಯಾಗಿ ಪ್ರೀತಿ ಶೆಟ್ಟಿ, ಕರಿರಾಯನಾಗಿ ಎಸ್.ಹೇಮಂತ್, ಪುಂಡರೀಕಾಕ್ಷಿ ಯಾಗಿ ಪವಿತ್ರಾ ಪಣಿ, ಉದ್ದಂಡಿಯಾಗಿ ಸಿ.ಲಿಖಿತಾ, ಧರ್ಮಶೀಲನಾಗಿ ಎಚ್.ಎಚ್.ಸುನೀತಾ, ಬಲ್ಲಾಳದೊರೆಯ ಮಂತ್ರಿಯಾಗಿ ಅಭಿಷೇಕ್ ಗೌಡ, ಬವನಂತಾದೇವಿಯಾಗಿ ಉಮಾದೇವಿ ಪಾತ್ರಗಳಿಗೆ ಜೀವ ತುಂಬಿದರು. ಇವರೊಂದಿಗೆ ಹನುಮ ನಾಯ್ಕನಾಗಿ, ಸಾರಥಿಯಾಗಿ ನಿರ್ವಹಿಸಿದವರು ಯು.ಎಸ್.ರಾಮಣ್ಣ. ‘ಅಟ್ಟದ ಮೇಲಾಡುವ ಪುಟ್ಟ ಸಾರಥಿ’ ಎಂದು ಪ್ರತೀ ಪಾತ್ರಧಾರಿಗೆ ಪರಿಚಯಿಸಿಕೊಳ್ಳುತ್ತಿದ್ದ ಎಪ್ಪತ್ತು ದಾಟಿದ ರಾಮಣ್ಣ ಅವರು ಆಟಕ್ಕೆ ಲವಲವಿಕೆ ತುಂಬಿದರು.
ಹಿಮ್ಮೇಳದ ಹಿರಿಯರೊಂದಿಗೆ ಹೊಸ ತಲೆಮಾರಿನ ಕಲಾವಿದರು ಸೇರಿ ಪ್ರಯೋಗಿಸಿದ ಈ ಆಟ ಯಶಸ್ವಿಯಾಯಿತು. ಇದರ ಪ್ರಯೋಗ ಹೆಚ್ಚಬೇಕು ಎಂಬ ಹಂಬಲವಿರುವ ಡಿ.ತಿಪ್ಪಣ್ಣ ಅವರು ಈ ಆಟಕ್ಕೆ ಹೊಸ ರೂಪ ನೀಡಿದ್ದಾರೆ. ಹೊಸ ತಲೆಮಾರಿಗೆ ತೋರಿಸುವ ಉತ್ಸಾಹ ಇರುವ ಅವರ ಶ್ರದ್ಧೆ, ಶ್ರಮ ಸಾರ್ಥಕವಾಗಿದೆ.