“ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸ್ಥಾನ 50ಕ್ಕಿಂತ ಕೆಳಗಿಳಿಯಬಹುದು”

Update: 2024-05-01 18:29 GMT

 

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸು ಉತ್ತರ ಪ್ರದೇಶದಲ್ಲಿ ಪಕ್ಷವು ಗಳಿಸುವ ಸ್ಥಾನದ ಮೇಲೆ ಅವಲಂಬಿತವಾಗಿದೆ. ಉತ್ತರ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಸಂಸದೀಯ ಸ್ಥಾನಗಳನ್ನು ಹೊಂದಿದೆ. 80 ಸಂಸದರು ಉತ್ತರ ಪ್ರದೇಶವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಾರೆ. ಬಿಜೆಪಿಯಿಂದ ಹೆಚ್ಚಿನ ಸಂಸದರು ಈ ರಾಜ್ಯದಿಂದಲೇ ಬರುತ್ತಾರೆ.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯು ಕ್ರಮವಾಗಿ 71 ಮತ್ತು 62 ಸ್ಥಾನಗಳಲ್ಲಿ ಯಶಸ್ಸನ್ನು ಸಾಧಿಸಿತ್ತು. ಹಿಂದಿ ಭಾಷಿಕರರಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಬಹುಮುಖ್ಯವಾಗಿದೆ. ಏಕೆಂದರೆ ಬಿಜೆಪಿಯು ಬೇರೆಡೆ ಹಿಂದಿ ಭಾಷಿಕರಿರುವ ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸಿದರೆ, ಇಲ್ಲಿ ಆ ನಷ್ಟವನ್ನು ಸರಿದೂಗಿಸುವ ಸ್ಥಾನಗಳು ಬಿಜೆಪಿಗೆ ಸಿಗುತ್ತದೆ. ಎಲ್ಲಾ ಹಿಂದಿ ಭಾಷಿಕರಿರುವ ರಾಜ್ಯಗಳಲ್ಲಿ, ಬಿಜೆಪಿ ಬಹುತೇಕ ಎಲ್ಲಾ ಸ್ಥಾನಗಳನ್ನು ಗೆದ್ದಿದೆ. ಕಳೆದ ಒಂದೆರಡು ತಿಂಗಳಿನಿಂದ ಸಮೀಕ್ಷೆಯ ಆಧಾರದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆಯ ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಲಾಗುತ್ತಿದ್ದು, 70 - 80 ಸ್ಥಾನಗಳನ್ನು ದಾಟಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು, ನಮ್ಮ ಕೆಲವು ಸಹೋದ್ಯೋಗಿಗಳು ಎರಡು ಹಂತಗಳಲ್ಲಿ ಉತ್ತರ ಪ್ರದೇಶದ 15 ಸಂಸದೀಯ ಕ್ಷೇತ್ರಗಳಿಗೆ ಪ್ರಯಾಣಿಸಿದರು. ಮೊದಲ ಹಂತದಲ್ಲಿ, ನೋಯ್ಡಾ, ಘಾಝಿಯಾಬಾದ್, ಮೀರತ್, ಮುಝಫರ್‌ನಗರ, ಕೈರಾನಾ ಮತ್ತು ಸಹರಾನ್‌ಪುರ ಗ್ರಾಮಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಮತ್ತು ಬಾರಾಬಂಕಿ, ಮೋಹನ್‌ಲಾಲ್‌ಗಂಜ್, ಉನ್ನಾವ್, ರಾಯ್ ಬರೇಲಿ, ಅಮೇಥಿ, ಪ್ರತಾಪ್‌ಗಢ, ಅಲಹಾಬಾದ್, ಮಿರ್ಜಾಪುರ್ ಮತ್ತು ವಾರಣಾಸಿಗೆ ಎಪ್ರಿಲ್ ಮೂರನೇ ವಾರದಲ್ಲಿ ಹೋದರು.

ಈ ಸಂಪೂರ್ಣ ಪ್ರದೇಶದ ಸುತ್ತಲೂ ಪ್ರಯಾಣಿಸುವುದರಿಂದ ಈ ಬಾರಿ ಉತ್ತರ ಪ್ರದೇಶದಲ್ಲಿ ಕೆಲವು ದೊಡ್ಡ ಬದಲಾವಣೆ ಸಂಭವಿಸಲಿದೆಯೇ ಎಂದು ಸ್ಪಷ್ಟವಾಗಿ ತಿಳಿಯಬಹುದೆಂಬ ಊಹೆ ನಮ್ಮದಾಗಿತ್ತು. ಸಾರ್ವಜನಿಕ ಅಭಿಪ್ರಾಯ ತಿಳಿಯಲು ನಾವು ಯಾವುದೇ ತಾಂತ್ರಿಕ ಸಮೀಕ್ಷೆ ಅಥವಾ ಯಾವುದೇ ಗುಪ್ತಚರ ಮಾಹಿತಿಯನ್ನು ಬಳಸಲು ಹೋಗಿಲ್ಲ. ನೀವು ಬಯಸಿದರೆ, ನಾವು ಬಳಸಿದ ವಿಧಾನವನ್ನು ನೀವು ಮಾಡಬಹುದು. ಫಲಿತಾಂಶವನ್ನು ನಿಮ್ಮ ಪ್ರದೇಶದಲ್ಲಿ ನೀವೇ ಪರಿಶೀಲಿಸಬಹುದು.

ನಾವು, 5-6 ಜನರು ಒಟ್ಟಿಗೆ ಕಾರಿನಲ್ಲಿ ಕುಳಿತು ಬೆಳಿಗ್ಗೆಯಿಂದ ರಾತ್ರಿಯವರೆಗೆ ಹಳ್ಳಿಗಳಲ್ಲಿ ಸುತ್ತಾಡಿ ಸಾಮಾನ್ಯ ಜನರನ್ನು ಮಾತನಾಡಿಸಿದೆವು. ಜನರ ಅಭಿಪ್ರಾಯವೇನು, ಅವರು ಕಳೆದ ಬಾರಿ ಯಾರಿಗೆ ಮತ ಚಲಾಯಿಸಿದರು? ಈ ಬಾರಿ ಅವರ ಮತ ಯಾರಿಗೆ? ಎಂದು ಜನರನ್ನು ಕೇಳಿದೆವು. ಚುನಾವಣಾ ಟ್ರೆಂಡ್ ತಿಳಿಯಲು ನಾವು ದೊಡ್ಡ ಮನೆತನದ ಜನರಲ್ಲಿ ಮಾತನಾಡುವುದಕ್ಕೆ ಹೋಗಲಿಲ್ಲ. ಪತ್ರಕರ್ತರ ಜೊತೆ ಮಾತನಾಡಿ ಅವರ ಅವರ ಅಭಿಪ್ರಾಯ ಕೇಳಲಿಲ್ಲ. ನಾವು ಆರಿಸಿದ್ದು ಸಾಮಾನ್ಯ ಮತದಾರರನ್ನು. ರಸ್ತೆ ಬದಿಯಲ್ಲಿ ಸಿಕ್ಕ ಸಾಮಾನ್ಯ ಜನರೊಂದಿಗೆ ಮಾತನಾಡಿದೆವು. ಗ್ರಾಮಸ್ಥರ ಜೊತೆ ಬೆರೆತು ಚುನಾವಣೆಯ ಕುರಿತು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದೆವು.

ನಮ್ಮ ಪ್ರಯಾಣದ ಸಮಯದಲ್ಲಿ, ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶ, ಬಿಹಾರಕ್ಕೆ ಹೊಂದಿಕೊಂಡಿರುವ ಪೂರ್ವಾಂಚಲ್ ಜಿಲ್ಲೆಗಳು ಮತ್ತು ರಾಜ್ಯದ ದೊಡ್ಡ ನಗರಗಳನ್ನು ತಲುಪಲಾಗಲಿಲ್ಲ. ನಮ್ಮ ಸಂಭಾಷಣೆಗಳು ಮಹಿಳೆಯರಿಗಿಂತ ಪುರುಷರೊಂದಿಗೆ ಹೆಚ್ಚು ನಡೆದವು. ಇದು ನಮ್ಮ ಸಮೀಕ್ಷೆಯ ಮಿತಿಯೂ ಆಗಿರಬಹುದು.

ರಾಜ್ಯದ ನೂರಾರು ಸಾಮಾನ್ಯ ಮತದಾರರೊಂದಿಗೆ ನಾವು ನಡೆಸಿದ ಸಂಭಾಷಣೆಯನ್ನು ಆಧರಿಸಿ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ ಈ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಅಂದರೆ 2019 ರಲ್ಲಿ ಗಳಿಸಿದ ತನ್ನ ಸ್ಥಾನವನ್ನು ಸುಧಾರಿಸುವ ಬದಲು, ಬಿಜೆಪಿ ಅಷ್ಟು ಸ್ಥಾನಗಳಿಗೂ ತಲುಪಲು ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಬಿಜೆಪಿಯ ಮತಗಳ ಒಟ್ಟು ಕುಸಿತವೆಷ್ಟು, ಎಷ್ಟು ಸ್ಥಾನಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ಈ ಬಾರಿ ಈ ಬದಲಾವಣೆಯ ಗಾಳಿ ಏಕೆ ಬೀಸುತ್ತಿದೆ ಎಂಬುದೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಾವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಿದೆ.

ಈ ಬದಲಾವಣೆಯ ಗಾಳಿಯನ್ನು ಇದೀಗ ಬಿಜೆಪಿ ವಿರುದ್ಧದ ಬಿರುಗಾಳಿ ಎಂದು ಕರೆಯಲಾಗದು. ರಾಜ್ಯದಲ್ಲಿ ಪ್ರಧಾನಿ ಮೋದಿಯವರ ಮೇಲಿನ ಅಂಧಭಕ್ತಿ ಬಹಳಷ್ಟು ಕಡಿಮೆಯಾಗಿದೆ. ಆದರೆ ಸಾಮಾನ್ಯ ಮತದಾರನಿಗೆ ಇನ್ನೂ ಅವರ ಮೇಲೆ ಕೋಪವಿಲ್ಲ. ಪ್ರಧಾನಿ ಮೋದಿಯ ಮೇಲೆ ನಿರಾಶೆ ಇದೆ. ಅದಕ್ಕಿಂತ ಹೆಚ್ಚಾಗಿ ಅವರ ಮೇಲಿನ ಭರವಸೆ ಕಡಿಮೆಯಾಗಿದೆ. ಈಗ ಕೇವಲ ಮೋದಿ ಹೆಸರನ್ನು ತೆಗೆದುಕೊಂಡ ಮಾತ್ರಕ್ಕೆ ಬೇರೆ ವಿಷಯಗಳ ಚರ್ಚೆ ನಿಲ್ಲುವುದಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 5 ಕೆಜಿ ಪಡಿತರ ಯೋಜನೆಯ ಶ್ರೇಯಸ್ಸನ್ನು ಒಬ್ಬ ಸಾಮಾನ್ಯ ಮತದಾರ ಮೋದಿಯವರಿಗೆ ನೀಡುತ್ತಾನೆ. ಆದರೆ ಈ ಬಾರಿ ಅವರ ಹೆಸರಿಗೆ ಮಾತ್ರ ಮತ ಹಾಕುವುದಿಲ್ಲ.

ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಮೋದಿಗಿಂತ ಸಿಎಂ ಯೋಗಿ ಹೆಚ್ಚು ಜನಪ್ರಿಯರಾಗಿದ್ದಾರೆ. ರಾಜ್ಯದಲ್ಲಿನ ಗೂಂಡಾಗಿರಿಯನ್ನು ಕೊನೆಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತಿದೆ. ಲೋಕಸಭೆ ಚುನಾವಣೆ ಯೋಗಿ ಅವರದ್ದಲ್ಲ ಎಂದು ಹೇಳಲಾಗುತ್ತಿದೆ. ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ ಸಿಂಧಿಯಾ ಅವರಂತೆಯೇ ಯೋಗಿಯವರನ್ನೂ ಬದಿಗೆ ಸರಿಸಬಹುದು ಎಂಬ ಆತಂಕವನ್ನು ಯೋಗಿ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಬಿಜೆಪಿಯ ಬಹುತೇಕ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರ ವಿರುದ್ಧ ಜನ ಸಾಮಾನ್ಯರಲ್ಲಿ ಆಕ್ರೋಶವಿದ್ದು, ಅವರಿಗೆ ತಕ್ಕ ಪಾಠ ಕಲಿಸಲು ಈ ಚುನಾವಣೆಯಲ್ಲಿ ಮತದಾರರು ತಮ್ಮ ಮತಗಳನ್ನು ಬಳಸಲಿದ್ದಾರೆ. ಈ ಚುನಾವಣೆಯು ಮೋದಿಯವರ ಹೆಸರಿಗಿಂತ ಹೆಚ್ಚು ವಿಷಯಾಧಾರರಿತ ಚುನಾವಣೆಯಂತೆ ಕಂಡುಬರುತ್ತಿದೆ. ಹಣದುಬ್ಬರ ಮತ್ತು ನಿರುದ್ಯೋಗ ಪ್ರತಿಯೊಬ್ಬ ಮತದಾರನ ಮನಸ್ಸಿನಲ್ಲಿದೆ. ಗ್ರಾಮೀಣ ಜನರು ತಮ್ಮ ಆರ್ಥಿಕ ಸ್ಥಿತಿಯಿಂದ ಕಂಗಾಲಾಗಿದ್ದಾರೆ. ನೋಟು ಅಮಾನ್ಯೀಕರಣ ಅಥವಾ ಲಾಕ್‌ಡೌನ್‌ನಿಂದ ತಮ್ಮ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಹಲವರು ನೆನಪಿಸಿಕೊಳ್ಳುತ್ತಾರೆ.

ನಮ್ಮೆಲ್ಲರನ್ನೂ ಮೋದಿ ಕಾವಲುಗಾರರನ್ನಾಗಿ ಮಾಡಿದ್ದಾರೆ ಎಂದು ರೈತರೊಬ್ಬರು ಹೇಳಿದರು. ಕಾನೂನು ಸುವ್ಯವಸ್ಥೆಗಾಗಿ ಬಿಜೆಪಿ ಸರಕಾರಕ್ಕೆ ಮನ್ನಣೆ ನೀಡಿದರೂ ಈ ಸಮಸ್ಯೆಗಳು ಸರಿದಾರಿಗೆ ಬರುತ್ತಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ವಿಷಯವನ್ನು ಜನರು ಸುಮ್ಮನೇ ಪ್ರಸ್ತಾಪಿಸಲು ಇಷ್ಟಪಡುವುದಿಲ್ಲ. ಹಾಗೇನಾದರೂ ಮಾಡಿದರೆ, ಪ್ರಮುಖ ವಿಷಯಗಳ ಮೇಲೆ ಚುನಾವಣೆಗಳು ನಡೆದಾಗ, ಆಡಳಿತ ಪಕ್ಷವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ನಿಲುವ ಅವರದ್ದು.

ಆದರೆ ಇಲ್ಲಿ ಈ ಎಲ್ಲಾ ಕಾಳಜಿಗಳು ಹೊಸದಲ್ಲ ಎಂದು ಕೇಳಬಹುದು. 2022 ರಲ್ಲೂ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಶಾಸಕರ ಮೇಲೆ ಕೋಪವಿತ್ತು, ಆದರೆ ಬಿಜೆಪಿ ಸೋಲಲಿಲ್ಲ. ಈ ಬಾರಿ ಮತವೇಕೆ ಜಾರುತ್ತಿದೆ? ಬಹುಶಃ ಇದಕ್ಕೆ ಕಾರಣವೆಂದರೆ ಸಾಮಾನ್ಯ ಮತದಾರ ಈಗ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸನ್ನಿಹಿತವಾದ ಅಪಾಯವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಮೋದಿಯವರು ಮೂರನೇ ಬಾರಿಗೆ ಬಂದರೆ ಸರ್ವಾಧಿಕಾರ ಆರಂಭವಾಗುತ್ತದೆ ಎಂಬ ಕಾರಣಕ್ಕೆ ಬದಲಾವಣೆ ಆಗಬೇಕು ಎಂದು ಹಲವರು ಹೇಳಿದ್ದಾರೆ.

ಸಾಮಾನ್ಯ ಗ್ರಾಮಸ್ಥರೊಬ್ಬರು ಮಾತನಾಡುತ್ತಾ, ಮೊದಲ ಬಾರಿಗೆ ಒಬ್ಬರನ್ನು ಮುಖ್ಯಸ್ಥರಾಗಿ ಆರಿಸಿದಾಗ ಅವರು ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ ಮತ್ತು ಸರಿಯಾದ ಕೆಲಸವನ್ನು ಮಾಡುತ್ತಾರೆ ಎಂದು ವಿವರಿಸಿದರು. ಎರಡನೇ ಅವಕಾಶ ಸಿಕ್ಕರೆ ತಂತ್ರಗಳನ್ನು ಕಲಿತು, ಮೂರನೇ ಬಾರಿ ನಾಯಕನಾದರೆ ನಮಗೇ ತಿರುಗುಮಂತ್ರವಾಗುತ್ತಾರೆ ಎಂದರು.

ಈ ಬದಲಾವಣೆಯು ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ. ನಾವು ಕೇಳಿದ ಪ್ರಕಾರ, ಬಿಜೆಪಿಯ ಹಿಂದಿನ ಮತದಾರರ ಪೈಕಿ ನಾಲ್ಕನೇ ಒಂದು ಭಾಗದಷ್ಟು ಜನರು ಈ ಬಾರಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಹೇಳುತ್ತಾರೆ. ಬಿಜೆಪಿಯ ಮತಗಳು ಎಲ್ಲೆಂದರಲ್ಲಿ, ಎಲ್ಲ ಜಾತಿಗಳಲ್ಲಿಯೂ ಜಾರಿಕೊಳ್ಳುತ್ತಿವೆ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ಮತಗಳು ಹೆಚ್ಚು ಕಡಿಮೆ ಹಾಗೇ ಇವೆ. ಬಿ.ಎಸ್.ಪಿ. ಮತದಾರ ಪಕ್ಷದ ಹೆಸರು ಹೇಳಲು ಹಿಂದೇಟು ಹಾಕುತ್ತಾನೆ. ಅಲ್ಲಿ ಕೊಂಚ ಇಳಿಕೆ ಕಾಣುತ್ತಿದೆ. ಆದರೆ ಬಿ.ಎಸ್.ಪಿ ಯಿಂದ ಚದುರಿದ ಮತಗಳು ಬಿಜೆಪಿಗೆ ಹೋಗುತ್ತಿಲ್ಲ. ಇದರ ಆಧಾರದ ಮೇಲೆ ಬಿಜೆಪಿಯ ಸ್ಥಾನಗಳಲ್ಲಿ ಹಿನ್ನಡೆಯಾಗಲಿದೆ ಎನ್ನಬಹುದು.

ಅಂದರೆ, 70 ಬಿಟ್ಟುಬಿಡಿ, ಬಿಜೆಪಿಗೆ 60 ಸ್ಥಾನಗಳನ್ನು ಉಳಿಸುವುದು ಅಸಾಧ್ಯ. 2019 ರಲ್ಲಿ ಬಿಜೆಪಿ ಪಡೆದ ಮತಗಳ ಆರನೇ ಒಂದು ಭಾಗದಷ್ಟು ಮತಗಳನ್ನು ಎಸ್‌ಪಿ ಮತ್ತು ಕಾಂಗ್ರೆಸ್ ಪಡೆದರೆ, ಬಿಜೆಪಿ 50 ಸ್ಥಾನಗಳನ್ನು ಮುಟ್ಟಲು ಸಾಧ್ಯವಿಲ್ಲ. ಈಗಾಗಲೇ 16 ಸ್ಥಾನಗಳಲ್ಲಿ ಮಾತ್ರ ಮತದಾನ ನಡೆದಿದ್ದು, ಪರಿಸ್ಥಿತಿ ಬದಲಾಗಬಹುದು. ಸದ್ಯ ಬಿಜೆಪಿಯ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುವಂತಿದೆ. ಮೊದಲೆರಡು ಹಂತದ ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಶೇ.6ರಷ್ಟು ಮತದಾನದ ಕುಸಿತವೂ ಇದೇ ದಿಕ್ಕಿನತ್ತ ಬೊಟ್ಟು ಮಾಡಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲನುಭವಿಸಿದರೆ, ದೇಶದ ಉಳಿದ ಭಾಗಗಳಲ್ಲಿ ಆಗಿರುವ ನಷ್ಟವನ್ನು ಹೇಗೆ ಸರಿದೂಗಿಸುತ್ತದೆ ಎಂಬುದು ದೊಡ್ಡ ಪ್ರಶ್ನೆ. ಒಂದು ವೇಳೆ ಹೀಗಾದರೆ, 400 ದಾಟುವ ಘೋಷಣೆ ಬಿಡಿ, ಬಿಜೆಪಿ 272ರ ಮ್ಯಾಜಿಕ್ ಸಂಖ್ಯೆ ಹೇಗೆ ದಾಟುತ್ತದೆ?

ಸೌಜನ್ಯ : punjabkesari.in

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಂದ್ರ ಯಾದವ್

contributor

Similar News