ಜಾತಿ ಗಣತಿ: ಸುಳ್ಳಲ್ಲದ ಬಿಜೆಪಿಯ ಭೀತಿ ಮತ್ತು ನಿಜವಲ್ಲದ ‘ಇಂಡಿಯಾ’ದ ನಿಟ್ಟುಸಿರು

ಮಂಡಲ್ ವರದಿ ಜಾರಿಯಾದ ಈ ೩೩ ವರ್ಷಗಳ ಅವಧಿಯಲ್ಲಿ ಬಿಜೆಪಿ ಹದಿನೈದು ವರ್ಷ ಆಳ್ವಿಕೆ ನಡೆಸಿದ್ದರೆ, ಹೆಚ್ಚೂಕಮ್ಮಿ ಅಷ್ಟೇ ಅವಧಿಗೆ ಆಳ್ವಿಕೆ ನಡೆಸಿರುವುದು ಇವತ್ತಿನ ‘ಇಂಡಿಯಾ’ ಮೈತ್ರಿ ಕೂಟದ ಪಕ್ಷಗಳು. ಅದರಲ್ಲೂ ವರದಿ ಅನುಷ್ಠಾನಕ್ಕೆ ಬಂದ ಮೊದಲಾರ್ಧದ ಹದಿನೈದು ವರ್ಷಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಆಳ್ವಿಕೆಯೇ ಹೆಚ್ಚು. ಮಂಡಲ್ ವರದಿಯ ನಂತರವೂ ಹಿಂದುಳಿದ ಸಮುದಾಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಸಾಧ್ಯವಾಗಿಲ್ಲ ಎನ್ನುವುದು ನಿಜವಾದರೆ, ಅದಕ್ಕೆ ಯಾರೆಲ್ಲ ಹೊಣೆಗಾರರಾಗಬೇಕಾಗಬಹುದು? ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಜಾತಿಗಣತಿಯು ಬಿಜೆಪಿಗೆ ಆತಂಕ ಹುಟ್ಟಿಸಿರುವುದು ನಿಜವಾದರೂ; ವಿರೋಧಪಕ್ಷಗಳ ಪಾಲಿಗೆ ನಿಟ್ಟುಸಿರು ಬಿಡುವಷ್ಟು ನಿರಾಳ ಹಾದಿಯಂತೂ ಅಲ್ಲ.

Update: 2023-10-10 06:06 GMT

ಏಳೆಂಟು ತಿಂಗಳ ಅವಧಿಯಲ್ಲಿ ದೇಶವು ಲೋಕಸಭಾ ಚುನಾವಣೆ ಎದುರಿಸಲಿದೆ. ಅದಕ್ಕೂ ಮುನ್ನ ಡಿಸೆಂಬರ್‌ನ ಒಳಗೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣದಂತಹ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇಂತಹ ಸಂದರ್ಭದಲ್ಲಿ ಬಿಹಾರದಲ್ಲಿ ಬಿಡುಗಡೆಯಾಗಿರುವ ಜಾತಿಗಣತಿಯ ವರದಿ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯ ಕೇಂದ್ರಬಿಂದುವೆನಿಸಿಕೊಳ್ಳುತ್ತಿದೆ. ಕಳೆದೊಂದು ದಶಕದಿಂದ, ಚುನಾವಣಾ ಫಲಿತಾಂಶಗಳಲ್ಲಿ ನಿರಂತರವಾಗಿ ಮತ್ತು ಸ್ಥಿರವಾಗಿ ಏರುಗತಿ ಕಾಯ್ದುಕೊಂಡಿರುವ ಬಿಜೆಪಿ ಮತ್ತು ಮೋದಿಯವರ ವೇಗಕ್ಕೆ ಈ ಚರ್ಚೆ ಕಡಿವಾಣ ಹಾಕಲಿದೆಯೇ? ಹಿಂದುತ್ವ ರಾಜಕಾರಣದ ಅಡಿಪಾಯದ ಮೇಲೆ ಹುಲುಸಾಗಿ ಬೆಳೆದು ನಿಂತಿರುವ ಬಿಜೆಪಿಯನ್ನು ಶತಾಯಗತಾಯ ಮಣಿಸಲೇಬೇಕೆಂದು ಒಗ್ಗೂಡಿರುವ ‘ಇಂಡಿಯಾ’ ಮೈತ್ರಿಕೂಟದ ವಿರೋಧ ಪಕ್ಷಗಳ ಮಟ್ಟಿಗಂತೂ ಇಂತಹದ್ದೊಂದು ಆಶಾಭಾವನೆ ಇದ್ದಂತಿದೆ. ಈ ಆಶಾಭಾವನೆ ಮೊಳೆಯಲು ಅವುಗಳು ಎಣಿಸಿರುವ ಲೆಕ್ಕಾಚಾರಗಳೇನು? ಅವುಗಳ ಲೆಕ್ಕಾಚಾರ ಫಲಿಸುವುದು ಅಷ್ಟು ಸುಲಭವೇ? ಜಾತಿ ಸಮೀಕ್ಷೆಗೆ ಅಪಸ್ವರ ಹೊರಡಿಸುತ್ತಿರುವ ಬಿಜೆಪಿ, ನಿಜಕ್ಕೂ ಅಧೀರವಾಗಿದೆಯೇ? ಬಿಜೆಪಿಯ ಪ್ರತಿತಂತ್ರಗಳು ಹೇಗಿರಬಹುದು?.....

ಜಾತಿ ಸಮೀಕ್ಷೆ ಹೊರಬಿದ್ದ ಬೆನ್ನಿಗೇ ಪ್ರತಿಪಕ್ಷಗಳ ಮೇಲೆ ದಾಳಿ ನಡೆಸಿದ ಪ್ರಧಾನಿ ಮೋದಿಯವರು ಮಧ್ಯಪ್ರದೇಶದ ಗ್ವಾಲಿಯರ್‌ನ ಚುನಾವಣಾ ರ್ಯಾಲಿಯ ವೇದಿಕೆಯಲ್ಲಿ ‘‘ವಿರೋಧಪಕ್ಷಗಳು ಮಹಾ ಪಾಪ ಮಾಡುತ್ತಿವೆ. ದೇಶವನ್ನು ಜಾತಿಯ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿವೆ’’ ಎಂಬ ಆತಂಕ ಹೊರಹಾಕಿದ್ದರು. ಸೂಕ್ಷ್ಮವಾಗಿ ಗಮನಿಸಿದಾಗ, ಅವರ ಈ ಆತಂಕ ರಾಜಕೀಯ ಪ್ರೇರಿತವಾದುದೆಂಬುದು ಮನದಟ್ಟಾಗುತ್ತದೆ.

ಜಾತಿ ಗಣತಿಯಿಂದ ಬಿಜೆಪಿ ಯಾಕೆ ವಿಚಲಿತವಾಗುತ್ತಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, 1996ರಿಂದಲೂ ಬಿಜೆಪಿಯ ಮತಗಳಿಕೆ ಯಾವ ವಲಯಗಳ ನಡುವೆ ನಿರಂತರವಾಗಿ ಹೆಚ್ಚಾಗುತ್ತಾ ಬರುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಒಬಿಸಿ ಸಮುದಾಯಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.27ರಷ್ಟು ಮೀಸಲಾತಿ ನೀಡಬೇಕೆನ್ನುವ ಮಂಡಲ್ ವರದಿಯನ್ನು ವಿ.ಪಿ.ಸಿಂಗ್ ಸರಕಾರ ತೊಂಭತ್ತರ ದಶಕದಲ್ಲಿ ಜಾರಿಗೆ ತಂದಿತು. ಇದು ಹುಟ್ಟುಹಾಕಿದ ಸಂಚಲನದಿಂದಾಗಿ ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಕೊಂಚ ಹಿನ್ನಡೆಯಾಗಿದ್ದು ನಿಜ. ಆದರೆ, 1992ರ ಬಾಬರಿ ಮಸೀದಿ ಧ್ವಂಸದಂತಹ ಅಗ್ರೆಸಿವ್ ಪ್ರಯತ್ನಗಳಿಗೆ ಮುಂದಾದ ಬಿಜೆಪಿ ತನ್ನ ‘ಕಮಂಡಲ್ ರಾಜಕಾರಣ’ದ ಮೂಲಕ, ಮತಗಳಿಕೆಯನ್ನು ವಿಸ್ತರಿಸಿಕೊಳ್ಳುತ್ತಾ ಬಂತು. ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳಿಗೆ ಸೀಮಿತವಾದ ಪಕ್ಷ ಎಂಬ ಅಪವಾದ ಹೊತ್ತಿದ್ದ ಬಿಜೆಪಿಗೆ, ತಾನು ಅಧಿಕಾರಕ್ಕೇರಬೇಕೆಂದರೆ ಒಬಿಸಿ ಮತಗಳ ಅನಿವಾರ್ಯತೆ ಎಷ್ಟು ಎಂಬುದು ಅಷ್ಟೊತ್ತಿಗಾಗಲೇ ಅರ್ಥವಾಗಿತ್ತು. ಹಾಗಾಗಿ ಅದು ಒಬಿಸಿ ಸಮುದಾಯಗಳ ನಡುವೆ ತನ್ನ ಪ್ರಭಾವ ಹಿಗ್ಗಿಸಿಕೊಳ್ಳಲಾರಂಭಿಸಿತು. ಒಂದೆಡೆ ಧಾರ್ಮಿಕ ಕೋಮುವಾದ, ಮತ್ತೊಂದೆಡೆ ಅಲ್ಲಿಯವರೆಗೂ ಅಧಿಕಾರ ನಡೆಸಿದವರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳು ಬಿಜೆಪಿಯ ಈ ಪ್ರಯತ್ನದಲ್ಲಿ ನೆರವಾಗುತ್ತಾ ಬಂದವು.

ಕಾಂಗ್ರೆಸ್ ಜಾರಿಗೆ ತಂದಿದ್ದ ಉಳುವವನೇ ಭೂ ಒಡೆಯ ಯೋಜನೆಯಿಂದಾಗಿ ಅದಾಗಲೇ ಭೂಮಾಲಕ ಮೇಲ್ಜಾತಿಗಳು ಬಿಜೆಪಿಯತ್ತ ಸರಿದಾಗಿತ್ತು. ಯಾವಾಗ ಒಬಿಸಿ ಸಮುದಾಯಗಳನ್ನೂ ಅದು ಒಳಗೊಂಡಿತೋ, ಅದರ ಫಲವಾಗಿಯೇ 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮೊತ್ತಮೊದಲ ಬಾರಿಗೆ 161 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆ ಚುನಾವಣೆಯಲ್ಲಿ ಶೇ.19ರಷ್ಟು ಒಬಿಸಿ ಮತಗಳು ಬಿಜೆಪಿಗೆ ಲಭಿಸಿದ್ದವು. 1998ರ ಚುನಾವಣೆ ಹೊತ್ತಿಗೆ ಈ ಪ್ರಮಾಣ ಶೇ.26ಕ್ಕೆ ಏರಿತು! ಅಂದರೆ ಏಕಾಏಕಿ ಶೇ.7ರಷ್ಟು ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ಬಿಜೆಪಿಯ ಪಾರಂಪರಿಕ ಮತಗಳಾದ ಮೇಲ್ಜಾತಿ ಮತಗಳಲ್ಲಿ ಏರಿಕೆಯಾಗಿದ್ದು ಕೇವಲ ಶೇ.3ರಷ್ಟು ಮಾತ್ರ. ಅಂದರೆ 1996ರಲ್ಲಿ ಶೇ.35 ಮೇಲ್ಜಾತಿ ಮತಗಳು ಬಿಜೆಪಿಗೆ ಲಭಿಸಿದ್ದರೆ, 1998ರ ಚುನಾವಣೆಯಲ್ಲಿ ಶೇ.38ಕ್ಕೆ ಏರಿಕೆಯಾಗಿತ್ತು. ಮೇಲ್ಜಾತಿ ಮತಗಳ ಏರಿಕೆಗಿಂತಲೂ, ಒಬಿಸಿ ಮತಗಳು ಹೀಗೆ ಅತ್ಯಲ್ಪ ಕಾಲಾವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯತ್ತ ತಿರುಗಿದ್ದವು. ಆದರೆ 2004 (ಶೇ.23) ಮತ್ತು 2009 (ಶೇ.22)ರ ವೇಳೆಗೆ ಅಲ್ಪ ಪ್ರಮಾಣದಲ್ಲಿ ಒಬಿಸಿ ಮತಗಳು ಬಿಜೆಪಿಯಿಂದ ವಿಮುಖವಾಗಿದ್ದು ನಿಜವಾದರೂ, ಕಾಂಗ್ರೆಸ್‌ಗೆ ಸರಿಸಮನಾಗಿ ಒಬಿಸಿ ಮತಗಳನ್ನು ಹಂಚಿಕೊಳ್ಳುವಷ್ಟರ ಮಟ್ಟಿಗೆ ಬಿಜೆಪಿ ವ್ಯಾಪಿಸಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ, ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ, ಅಂದರೆ ಶೇ.34ರಷ್ಟು ಒಬಿಸಿ ಮತಗಳು ಬಿಜೆಪಿಯತ್ತ ಮುಖ ಮಾಡಿದ್ದವು! 2009ರ ಚುನಾವಣೆಗೆ ಹೋಲಿಸಿದರೆ, ಶೇ.12ರಷ್ಟು ಒಬಿಸಿ ಮತಗಳಿಕೆ ಹೆಚ್ಚಾಗಿತ್ತು. ಇಷ್ಟೇ ಶೇಕಡಾ ಏರಿಕೆಯೊಂದಿಗೆ 2019ರ ಚುನಾವಣೆಯಲ್ಲಿ ಬಿಜೆಪಿ ಪಡೆದದ್ದು ಶೇ.44ರಷ್ಟು ಒಬಿಸಿ ಮತಗಳನ್ನು!

ಒಂದೆಡೆ, ತನ್ನ ಪಾರಂಪರಿಕ ಮತಗಳಾದ ಮೇಲ್ಜಾತಿ ಮತಗಳನ್ನು ಅನಾಯಾಸವಾಗಿ ಹೆಚ್ಚಿಸಿಕೊಳ್ಳುತ್ತಾ ಬಂದ ಬಿಜೆಪಿ, ಒಬಿಸಿ ಮತಗಳಿಕೆಯಲ್ಲೂ ಜಿಗಿತ ಕಂಡಿತು. ಮಾತ್ರವಲ್ಲದೇ, ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಎಂಬ ಘೋಷವಾಕ್ಯದೊಂದಿಗೆ ದಲಿತ ಹಾಗೂ ಆದಿವಾಸಿ ಸಮುದಾಯಗಳ ಮತಗಳನ್ನೂ ಸೆಳೆದುಕೊಂಡಿತು. ಇದರಿಂದಾಗಿ ಆಧುನಿಕ ಭಾರತದ ಚುನಾವಣಾ ಇತಿಹಾಸದಲ್ಲಿ ಇಷ್ಟು ಉತ್ತುಂಗಕ್ಕೆ ತಲುಪಲು ಸಾಧ್ಯವಾಗಿದೆ. ಜಾತಿ ಗಣತಿಯ ಕುರಿತಂತೆ ಬಿಜೆಪಿಯನ್ನು ಅಧೀರಗೊಳಿಸುತ್ತಿರುವುದೇ ಈ ಅಂಕಿಅಂಶಗಳು.

ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳ ಹಂಚಿಕೆಯಲ್ಲಿ ಇವತ್ತಿಗೂ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ದೊಡ್ಡಮಟ್ಟದ ಒಬಿಸಿ ಹಾಗೂ ಶೋಷಿತ ಸಮುದಾಯಗಳನ್ನು ಬಿಜೆಪಿ ತನ್ನತ್ತ ಸೆಳೆದುಕೊಳ್ಳಲು ಸಾಧ್ಯವಾದದ್ದು ಹಿಂದುತ್ವ ಮತ್ತು ರಾಷ್ಟ್ರೀಯತೆ ಎಂಬ ಭಾವನಾತ್ಮಕ ಕಣ್ಣುಪಟ್ಟಿಯನ್ನು ಈ ಸಮುದಾಯಗಳಿಗೆ ಬಿಗಿದಿದ್ದರಿಂದ. ತಮ್ಮತಮ್ಮ ಸಮುದಾಯದ ಜಾಗೃತಿ ಮತ್ತು ಅದರಿಂದಾಗುವ ಏಳಿಗೆಯನ್ನು ಮರೆತ ಈ ಸಮುದಾಯದವರು, ಎಲ್ಲಕ್ಕಿಂತ ‘ಧರ್ಮವೇ ಮುಖ್ಯ’, ‘ದೇಶದ ಏಳಿಗೆ’ ದೊಡ್ಡದು ಎಂಬ ಪ್ರಚಾರಕ್ಕೆ ಬಲಿಯಾಗುತ್ತಾ ಬಂದರು. ಹೌದು, ಖಂಡಿತವಾಗಿಯೂ ದೇಶದ ಏಳಿಗೆ ಎನ್ನುವುದು ಎಲ್ಲಕ್ಕಿಂತ ದೊಡ್ಡದು. ಆದರೆ, ದೇಶ ಎಂದರೆ ಭೂಪಟ ಮಾತ್ರವಲ್ಲ; ಅಲ್ಲಿರುವ ಜನ! ಅಂದರೆ ನಾವು-ನೀವು. ನಮ್ಮನ್ನು ಒಳಗೊಂಡ ಜನಸಮುದಾಯ ವೈಯಕ್ತಿಕವಾಗಿ ಮತ್ತು ಸಾಂಘಿಕ ರೂಪದಲ್ಲಿ ಏಳಿಗೆಯನ್ನು ಕಾಣದಿದ್ದರೆ, ದೇಶ ಅಭಿವೃದ್ಧಿಯಾಗುವುದಾದರೂ ಹೇಗೆ? ಹೀಗೆ ತರ್ಕಿಸುವ ಆಲೋಚನೆಯನ್ನು ಅಮೂರ್ತ ಚಿತ್ರಣಗಳ ಮೂಲಕ ಧ್ವಂಸ ಮಾಡಲಾಗಿದೆ. ಅದರ ಪರಿಣಾಮವಾಗಿ ನಮಗೀಗ ರಸ್ತೆ, ಸೇತುವೆ, ಕಟ್ಟಡ, ಪ್ರತಿಮೆಗಳೇ ಅಭಿವೃದ್ಧಿಯ ಸಂಕೇತಗಳಾಗಿವೆ.

ಅಕಸ್ಮಾತ್ ಜಾತಿಗಣತಿಯೇನಾದರೂ ಸಾಧ್ಯವಾಗಿಬಿಟ್ಟರೆ, ಹಿಂದುಳಿದ ಮತ್ತು ಶೋಷಿತ ಸಮುದಾಯದ ಜನ ಪ್ರಗತಿಯಲ್ಲಿ ತಮಗಾಗಿರುವ ಅಸಮಾನತೆ ಹಾಗೂ ಅವಕಾಶಗಳ ಹಂಚಿಕೆಯಲ್ಲಿ ತಮಗಾಗುತ್ತಿರುವ ವಂಚನೆಯ ಕುರಿತು ಜಾಗೃತರಾಗುವ ಸಂಭವವಿದೆ. ಸದ್ಯ ಈ ಸಮುದಾಯಗಳ ಜನರ ಪರಿಸ್ಥಿತಿ ಹೇಗಿದೆಯೆಂದರೆ, ಜಾಗತೀಕರಣದ ಪರಿಣಾಮವಾಗಿ ತಮ್ಮ ಬದುಕಿನಲ್ಲಾಗಿರುವ ಅತ್ಯಲ್ಪ ಆರ್ಥಿಕ ಚೇತರಿಕೆಯನ್ನೇ ‘ನಿನ್ನೆಗಿಂತ ಇಂದು ಉತ್ತಮ’ ಎಂಬ ಮಾನದಂಡದಡಿ, ‘ನಾವು ಅನುಕೂಲವಾಗಿದ್ದೇವೆ’ ಎಂಬ ಅನಿಸಿಕೆಯಲ್ಲಿದ್ದಾರೆ. ಅವರ ಇವತ್ತಿನ ಬದುಕನ್ನು, ಅವರದೇ ನಿನ್ನೆಯ ಬದುಕಿನೊಂದಿಗೆ ತುಲನೆ ಮಾಡಿ ಸಮಾಧಾನ ಹೊಂದುತ್ತಿದ್ದಾರೆ. ವಾಸ್ತವದಲ್ಲಿ, ಈ ಚೇತರಿಕೆ ತಮ್ಮ ಬದುಕಿನಲ್ಲಾಗುತ್ತಿರುವುದಕ್ಕಿಂತ ಮೇಲ್ಜಾತಿಗಳೆನಿಸಿಕೊಂಡವರಲ್ಲಿ ಎಷ್ಟು ವೇಗ ಮತ್ತು ಎಷ್ಟು ಅಜಗಜಾಂತರದಲ್ಲಿ ಘಟಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಾಗ ಅವರು ಜಾಗೃತರಾಗುತ್ತಾರೆ ಮತ್ತು ಧರ್ಮರಾಜಕಾರಣದ ಅಮಲಿನಿಂದ ಹೊರಬಂದು ವಾಸ್ತವ ಬದುಕಿನತ್ತ ಹೆಚ್ಚು ಗಮನಹರಿಸುತ್ತಾರೆ. ಜಾತಿಗಣತಿ ಸಮುದಾಯಗಳ ನಡುವಿನ ಈ ವೈಜ್ಞಾನಿಕ ತುಲನೆಯನ್ನು ಸಾಧ್ಯವಾಗಿಸುತ್ತದೆ. ಇದು ಬಿಜೆಪಿಯ ರಾಜಕೀಯ ಅಸ್ತ್ರಗಳಾದ ಹಿಂದುತ್ವ ಕೋಮುವಾದ ಮತ್ತು ರಾಷ್ಟ್ರೀಯತೆಗಳಂತಹ ವಿಚಾರಗಳನ್ನು ಸವಕಲುಗೊಳಿಸುತ್ತವೆ.

ಬಿಜೆಪಿ ಹೆದರುತ್ತಿರುವುದು ಇದೊಂದೇ ಕಾರಣಕ್ಕೆ ಅಲ್ಲ. ಮಂಡಲ್ ಸಂಚಲನದ ನಂತರ ರಾಜಕಾರಣದಲ್ಲಿ ಘಟಿಸಿದ ಮುಖ್ಯವಾದ ಸಂಗತಿಗಳಲ್ಲಿ ಪ್ರಾದೇಶಿಕ ಪಕ್ಷಗಳ ಪರ್ವ ಕಾಲವೂ ಒಂದು. ಹೆಚ್ಚೂಕಮ್ಮಿ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕತ್ವ ಇರುವುದು ಒಬಿಸಿ ನಾಯಕರ ಕೈಯಲ್ಲಿ. ರಾಷ್ಟ್ರೀಯ ಹಿತಾಸಕ್ತಿಯ ನೆಪ ಮಾಡಿಕೊಂಡು ಬಿಜೆಪಿ, ಪ್ರಾದೇಶಿಕ ಪಕ್ಷಗಳನ್ನು ಶಿಥಿಲಗೊಳಿಸಲು ಯತ್ನಿಸುತ್ತಿದ್ದುದು ಒಬಿಸಿ ಮತಗಳ ಮೇಲೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಕಾರಣಕ್ಕೆ. ಅದರ ಅಪೇಕ್ಷೆಗೆ ತಕ್ಕಂತೆ, ಹಿಂದುಳಿದ ಜಾತಿಗಳಲ್ಲೇ ಒಂದು ಪ್ರಬಲ ಜಾತಿಗೆ ಸೀಮಿತವಾಗಿ ಮತ್ತು ಆಯಾ ನಾಯಕರ ಕುಟುಂಬ ರಾಜಕಾರಣದ ಸ್ವಜನಪಕ್ಷಪಾತಕ್ಕೆ ಪ್ರಾದೇಶಿಕ ಪಕ್ಷಗಳು ತುತ್ತಾಗುತ್ತಾ ಬಂದವು. ಇದರಿಂದಾಗಿ ಅತಿ-ಹಿಂದುಳಿದ ಸಣ್ಣಪುಟ್ಟ ಜಾತಿಗಳ ಗಣನೀಯ ಮತಗಳು, ಪ್ರಬಲ-ಹಿಂದುಳಿದ ಜಾತಿಯ ಪ್ರತಿನಿಧಿಯಂತಾದ ಪ್ರಾದೇಶಿಕ ಪಕ್ಷಗಳಿಂದ ವಿಮುಖವಾದವು. ಚುನಾವಣಾ ಅಂಕಿಅಂಶವನ್ನೇ ತೆಗೆದುಕೊಳ್ಳುವುದಾದರೆ, 1996ರ ಸಾರ್ವತ್ರಿಕ ಚುನಾವಣೆ ವೇಳೆಯಲ್ಲಿ ಒಟ್ಟಾರೆಯಾಗಿ ಶೇ.49ರಷ್ಟು ಒಬಿಸಿ ಮತಗಳನ್ನು ಗಳಿಸಿದ್ದ ಪ್ರಾದೇಶಿಕ ಪಕ್ಷಗಳ ಒಬಿಸಿ ಮತಗಳಿಕೆಯ ಪ್ರಮಾಣ 2019ರ ಚುನಾವಣೆಯ ವೇಳೆಗೆ ಶೇ.27ಕ್ಕೆ ಕುಸಿದಿತ್ತು. ಇಲ್ಲಿ ಕುಸಿತ ಕಂಡ ಅಷ್ಟೂ ಒಬಿಸಿ ಮತಗಳು ಬಿಜೆಪಿಗೆ ಹರಿದುಹೋಗಿದ್ದವು. ಹೇಗೆ ಮಂಡಲ್ ಆಯೋಗದ ವರದಿಯಿಂದ ಪ್ರಾದೇಶಿಕ ಪಕ್ಷಗಳು ಪ್ರವರ್ಧಮಾನಕ್ಕೆ ಬಂದವೋ, ಹಾಗೆ ಸ್ವತಂತ್ರ ಭಾರತದಲ್ಲಿ ಪ್ರಥಮ ಬಾರಿಗೆ ಬಹಿರಂಗಗೊಂಡಿರುವ ಜಾತಿಗಣತಿಯಿಂದಾಗಿ, ಹಿಂದುಳಿದ ಸಮುದಾಯಗಳ ಕ್ರೋಡೀಕರಣಗೊಂಡು, ಮತ್ತೆ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಸ್ತುತತೆಯನ್ನು ಹೆಚ್ಚಿಸಿಕೊಂಡರೆ ರಾಷ್ಟ್ರೀಯ ಪಕ್ಷಗಳ ವೋಟ್‌ಬ್ಯಾಂಕ್ ಛಿದ್ರವಾಗಲಿದೆ. ಸದ್ಯ ಕಾಂಗ್ರೆಸ್, ಕಳೆದುಕೊಳ್ಳಬಹುದಾದುದನ್ನೆಲ್ಲ ಕಳೆದುಕೊಂಡಿರುವುದರಿಂದ ರಾಷ್ಟ್ರೀಯ ಪಕ್ಷವಾಗಿ ಈ ಆತಂಕ ಕಾಡುತ್ತಿರುವುದು ಬಿಜೆಪಿಯನ್ನು ಮಾತ್ರ.

ಈಗಾಗಲೇ ಇದಕ್ಕೆ ಪೂರಕವಾದ ಲಕ್ಷಣಗಳು ರಾಜಕೀಯ ಅಖಾಡದಲ್ಲಿ ಗೋಚರಿಸಲು ಶುರುವಾಗಿವೆ. ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ, ನಿಷದ್ ಪಾರ್ಟಿ, ಅಪ್ನಾ ದಳ್(ಸೋನೆಲಾಲ್) ಮತ್ತು ಹಿಂದೂಸ್ತಾನಿ ಆವಾಮ್ ಮೋರ್ಚಾ ಮೊದಲಾದ ಪಕ್ಷಗಳು ಜಾತಿಗಣತಿಯನ್ನು ಬೆಂಬಲಿಸಿವೆ ಮಾತ್ರವಲ್ಲ, ದೇಶಾದ್ಯಂತ ಜಾತಿಗಣತಿಯನ್ನು ನಡೆಸಬೇಕೆಂಬ ಅಭಿಪ್ರಾಯ ಹಂಚಿಕೊಂಡಿವೆ. ಈ ಎಲ್ಲಾ ಪಕ್ಷಗಳು ಹಿಂದುಳಿದ ಸಮುದಾಯಗಳನ್ನು ಪ್ರತಿನಿಧಿಸುವ ಜಾತಿಯ ಪ್ರಭಾವ ಉಳ್ಳಂತಹವು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರಕಾರದಲ್ಲಿ ಮಂತ್ರಿಯೂ ಆಗಿರುವ ನಿಷದ್ ಪಾರ್ಟಿಯ ಸಂಜಯ್ ನಿಷದ್, ‘‘ಹಿಂದುಳಿದ ಜನರಿಗೆ ಸಾಂವಿಧಾನಿಕ ಹಕ್ಕು ಮತ್ತು ರಕ್ಷಣೆ ಕೊಡದಿದ್ದರೆ, ಜನ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುತ್ತಾರೆ’’ ಎಂದು ಹೇಳಿದ್ದರೆ; ಮೋದಿಯವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿರುವ ಅಪ್ನಾ ದಳದ ಅನುಪ್ರಿಯಾ ಪಟೇಲ್ ‘‘ಭಾರತದಲ್ಲಿ ಹಿಂದುಳಿದ ವರ್ಗಗಳ ಬಹುದೊಡ್ಡ ಜನಸಮುದಾಯವಿದೆ. ಅವರಿಗೆ ಕಾರ್ಯಕ್ರಮಗಳನ್ನು ರೂಪಿಸಿ, ಬಲವರ್ಧನೆ ಮಾಡಬೇಕೆಂದರೆ ಜಾತಿಗಣತಿ ಅತ್ಯಗತ್ಯ’’ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ತಮಿಳುನಾಡಿನ ಎನ್‌ಡಿಎ ಮಿತ್ರಪಕ್ಷವಾದ ಪಟ್ಟಾಳಿ ಮಕ್ಕಳ್ ಪಕ್ಷದ ಸಂಸ್ಥಾಪಕ ರಾಮದಾಸ್ ಒಂದುಹೆಜ್ಜೆ ಮುಂದೆಹೋಗಿ, ‘‘ಜಾತಿ ಗಣತಿಯ ಮೂಲಕ ಬಿಹಾರವು ಒಂದು ಜ್ಯೋತಿಯನ್ನು ಬೆಳಗಿಸಿದೆ, ಮುಂದಿನ ದಿನಗಳಲ್ಲಿ ಅದು ಇಡೀ ದೇಶವನ್ನೇ ಬೆಳಗಲಿದೆ’’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜಾತಿಗಣತಿಯಿಂದ ಒಂದುಕಡೆ ತನ್ನ ಮತದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ, ಮತ್ತೊಂದೆಡೆ ಮಿತ್ರಪಕ್ಷಗಳನ್ನೂ ತೊರೆದುಕೊಳ್ಳುವ ಅಪಾಯಕ್ಕೆ ಸಿಲುಕಿರುವುದನ್ನು ಈ ಹೇಳಿಕೆಗಳು ಸಾಬೀತು ಮಾಡುತ್ತವೆ. ಬಿಜೆಪಿ ಈ ಅಪಾಯವನ್ನು ಮೊದಲೇ ಊಹಿಸಿದೆ. ಹಾಗಾಗಿಯೇ ಇತ್ತೀಚೆಗೆ ನಡೆಸಲಾದ ವಿಶೇಷ ಸಂಸತ್ ಅಧಿವೇಶನದಲ್ಲಿ (ಜಾತಿಗಣತಿ ಬಿಡುಗಡೆಗೂ ಮೊದಲೇ) ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಒಬಿಸಿ ಕೇಂದ್ರಿತವಾಗಿ ತಮ್ಮ ಪಕ್ಷ ಹಾಗೂ ಸರಕಾರ ಹೇಗೆ ನಡೆದುಕೊಂಡಿದೆ ಅನ್ನುವುದನ್ನು ವಿವರಿಸಿದ್ದರು. ‘‘ನಮ್ಮ ಪಕ್ಷದ ಶೇ.29ರಷ್ಟು ಸಂಸದರು ಒಬಿಸಿ ಸಮುದಾಯಗಳಿಗೆ ಸೇರಿದವರು. ಎಲ್ಲಾ ರಾಜ್ಯಗಳ ಬಿಜೆಪಿ ಶಾಸಕರಲ್ಲಿ ಶೇ.27ರಷ್ಟು ಈ ಸಮುದಾಯದವರಿದ್ದಾರೆ. ಅಲ್ಲದೆ, ನಮ್ಮ ಕೇಂದ್ರ ಸಂಪುಟದಲ್ಲಿ 29 ಒಬಿಸಿ ಸಚಿವರಿದ್ದಾರೆ’’ ಎಂಬುದು ಅವರ ಮಾತಿನ ಸಾರಾಂಶ. ಅಷ್ಟೇ ಅಲ್ಲ, ಅಹಮದಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘‘ಮೋದಿಯವರ ಮೂಲಕ ದೇಶಕ್ಕೆ ಮೊದಲ ಒಬಿಸಿ ಪ್ರಧಾನಿಯನ್ನು ನೀಡಲು ಬಿಜೆಪಿಯೇ ಅಧಿಕಾರಕ್ಕೆ ಬರಬೇಕಾಯಿತು’’ ಎಂದು ಒಬಿಸಿ ಜೊತೆಗೆ ಬಿಜೆಪಿಯ ನಂಟನ್ನು ಅವರು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ, ಕರ್ನಾಟಕದವರೇ ಆದ ಹಾಗೂ ಬಿಜೆಪಿಯ ಹೊಸ ಮೈತ್ರಿಪಕ್ಷವಾಗಿ ಗುರುತಿಸಿಕೊಂಡ ಜೆಡಿಎಸ್ ಪಕ್ಷದ ಎಚ್.ಡಿ.ದೇವೇಗೌಡರು ‘‘ದೇಶದ ಮೊದಲ ಒಬಿಸಿ ಪ್ರಧಾನಿ ಮೋದಿಯಲ್ಲ, ನಾನು’’ ಎಂದು ತಿರುಗೇಟು ನೀಡಿದ್ದರು. ಬಿಹಾರದ ಸಿಎಂ ನಿತೀಶ್ ಕುಮಾರ್ ಕೂಡಾ ದೇವೇಗೌಡರ ಹೇಳಿಕೆಯನ್ನು ಸಮರ್ಥಿಸಿದ್ದುಂಟು. ಆದರೆ ವಾಸ್ತವದಲ್ಲಿ, ಭಾರತದ ಐದನೇ ಪ್ರಧಾನಿಯಾಗಿ ಆಯ್ಕೆಯಾದ ಚೌಧರಿ ಚರಣ್‌ಸಿಂಗ್ ಅವರು ಭಾರತದ ಮೊದಲ ಒಬಿಸಿ ಪ್ರಧಾನಿ ಎನಿಸಿಕೊಳ್ಳಲು ಅರ್ಹರು. ಅವರ ಜಾಟ್ ಸಮುದಾಯವು ಭಾರತದ ಏಳು ರಾಜ್ಯಗಳಲ್ಲಿ ಒಬಿಸಿ ಪಂಗಡಕ್ಕೆ ಸೇರಿಸಲ್ಪಟ್ಟಿದೆ. ಸಮಗ್ರವಾಗಿ ನೋಡುವುದಾದರೆ, ಚುನಾವಣಾ ರ್ಯಾಲಿಯಲ್ಲಿ ಜಾತಿಗಣತಿ ಕುರಿತು ಮೋದಿಯವರು ಆಡಿದ ಆ ಆತಂಕದ ಮಾತು ಹಾಗೂ ಒಬಿಸಿ ಸಮುದಾಯವನ್ನು ಬಿಜೆಪಿ ಜೊತೆಗೆ ಸಮೀಕರಿಸಲು ಅಮಿತ್ ಶಾ ನೀಡುತ್ತಿರುವ ಹೇಳಿಕೆಗಳು, ಬಿಜೆಪಿ ಎದುರಿಸುತ್ತಿರುವ ಭೀತಿಯನ್ನು ಅರ್ಥಮಾಡಿಸುತ್ತವೆ.

ಆದರೆ, ಪತ್ರಿಪಕ್ಷಗಳು ಎಣಿಸುತ್ತಿರುವಂತೆ ಜಾತಿಗಣತಿ ಅಸ್ತ್ರದಿಂದ ಬಿಜೆಪಿಯನ್ನು ಕಟ್ಟಿಹಾಕುವುದು ಅಷ್ಟು ಸುಲಭವೇ? ಇದಕ್ಕೆ ಪ್ರತಿತಂತ್ರವನ್ನು ಹೆಣೆಯದೆ ಬಿಜೆಪಿ ಸುಮ್ಮನಿದ್ದೀತೆ?

ಜಾತಿಗಣತಿಯನ್ನು ಹಲವರು ‘ಮಂಡಲ್ 2.0’ ಎಂದು ವಿಶ್ಲೇಷಿಸುತ್ತಿದ್ದಾರೆ. ಹಿಂದುಳಿದ ಜಾತಿಗಳ ನಡುವೆ ಸಾಮುದಾಯಿಕ ಜಾಗೃತಿಯನ್ನು ಮೂಡಿಸುವ ಮೂಲಕ ಧರ್ಮ ರಾಜಕಾರಣಕ್ಕೆ ಹಿನ್ನಡೆ ಉಂಟುಮಾಡಲಿದೆ ಎನ್ನುವುದು ಅವರ ಲೆಕ್ಕಾಚಾರ. ಆದರೆ ಪರಿಸ್ಥಿತಿ ಅಷ್ಟು ಸರಳವಿಲ್ಲ. ಮಂಡಲ್ ವರದಿ ಜಾರಿಗೆ ಬಂದ ಸಂದರ್ಭದಲ್ಲಿ ಬಿಜೆಪಿ, ಅರ್ಥಾತ್ ಕೋಮುರಾಜಕಾರಣವಿನ್ನೂ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಎಳಸು ಹಂತದಲ್ಲಿತ್ತು. ಆದರೆ ಈಗ ಬಲಾಢ್ಯವಾಗಿ ಬೆಳೆದು ನಿಂತಿದೆ. ಆಡಳಿತಾಂಗದ ಅಧಿಕಾರ ಮಾತ್ರವಲ್ಲದೆ, ಸಮಾಜದಲ್ಲಿ ನೆರೇಟಿವಿಟಿಯನ್ನು ಕಟ್ಟಿನಿಲ್ಲಿಸಬಲ್ಲ ಮಾಧ್ಯಮಗಳನ್ನೂ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಮಂಡಲ್ ಪರಿಣಾಮದಿಂದಾಗಿ ಹಿಂದುಳಿದ ಸಮುದಾಯಗಳ ಪಾಲಿಗೆ ಪ್ರಾದೇಶಿಕ ಪಕ್ಷಗಳ ಹೊಸ ಭರವಸೆಯಂತೆ ಗೋಚರಿಸಿದ್ದವು. ಅವುಗಳ ಪ್ರಭಾವ, ಜನರನ್ನು ಕೋಮುರಾಜಕಾರಣದಿಂದ ವಿಮುಖಗೊಳಿಸಿತ್ತು. ಆದರೆ ಈಗ ಪ್ರಾದೇಶಿಕ ಪಕ್ಷಗಳು ಇದೇ ಹಿಂದುಳಿದ ಸಮುದಾಯಗಳ ಭ್ರಮನಿರಸನಕ್ಕೆ ಕಾರಣವಾಗಿವೆ.

ಇನ್ನು ಮಂಡಲ್ ವರದಿಯ ಪ್ರಯೋಜನದಿಂದಾಗಿ ಸರಕಾರಿ ಹುದ್ದೆಗಳನ್ನು ಹೊಂದಿ, ಇವತ್ತು ನಿವೃತ್ತ ಜೀವನ ನಡೆಸುತ್ತಿರುವವರೇ ಬಿಜೆಪಿಯ ಸಮರ್ಥಕರಾಗಿ ಬದಲಾಗಿದ್ದಾರೆ. ಜಾತಿ ಗಣತಿಯಿಂದ ಅತಿಹೆಚ್ಚು ಲಾಭ ದೊರಕಬಹುದಾದ 20ರಿಂದ 30ರ ವಯೋಮಾನದ ಒಬಿಸಿ, ಶೋಷಿತ ಯುವಸಮೂಹ ಸೋಶಿಯಲ್ ಮೀಡಿಯಾದ ಸಮ್ಮೋಹನಕ್ಕೆ ಸಿಲುಕಿ ಕೋಮುರಾಜಕಾರಣದ ಕಾಲಾಳುಗಳಾಗಿದ್ದಾರೆ. ಇತ್ತೀಚೆಗೆ ‘ದಿ ವಾಶಿಂಗ್ಟನ್ ಪೋಸ್ಟ್’ ಪತ್ರಿಕೆ ಬಯಲುಗೊಳಿಸಿದಂತೆ ಫೇಕ್‌ನ್ಯೂಸ್ ಮತ್ತು ಹೇಟ್‌ನ್ಯೂಸ್‌ಗಳನ್ನು ವ್ಯವಸ್ಥಿತವಾಗಿ ಹಬ್ಬಿಸುವ ಜಾಲದ ನಡುವೆ ಇಡೀ ಸಮಾಜ ಸಿಕ್ಕಿಹಾಕಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಂಡಲ್ ವರದಿ ತನ್ನ ಕೋಮುಧ್ರುವೀಕರಣ ರಾಜಕೀಯಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡುತ್ತಿದೆ ಎಂಬುದು ಅರ್ಥವಾದಾಗ, ಅಧಿಕಾರದ ಯಾವುದೇ ಆಸರೆ ಇಲ್ಲದೆ ಹೋದರೂ, ಬಾಬರಿ ಮಸೀದಿ ಧ್ವಂಸ, ರಥಯಾತ್ರೆಗಳಂತಹ ಆಕ್ರಮಣಶೀಲ ನಡೆಗಳ ಮೂಲಕ ಪ್ರತಿಕ್ರಿಯಿಸಿ, ಯಶಸ್ವಿಯಾಗಿದ್ದ ಬಿಜೆಪಿಯ ಕೈಯಲ್ಲಿ ಇಂದು ಕೇಂದ್ರ ಸರಕಾರದ ಅಧಿಕಾರವಿದೆ. ತನ್ನ ಮತಬ್ಯಾಂಕ್ ಛಿದ್ರವಾಗಲಿದೆ ಎಂಬುದು ಮನದಟ್ಟಾದರೆ, ಅದು ತೊಂಭತ್ತರ ದಶಕಕ್ಕಿಂತಲೂ ತೀವ್ರ ಆಕ್ರಮಣಶೀಲ ಪ್ರಯತ್ನಕ್ಕಿಳಿಯಬಹುದು. ಹಾಗಾದಲ್ಲಿ, ಅದನ್ನು ಎದುರುಗೊಳ್ಳುವ ತಯಾರಿಯಾಗಲಿ, ಸಾಮರ್ಥ್ಯವಾಗಲಿ ವಿರೋಧ ಪಕ್ಷಗಳ ಬಳಿ ಕಾಣುತ್ತಿಲ್ಲ.

ಬಿಜೆಪಿಯು ಜಾತಿಗಣತಿಯ ಪರಿಣಾಮವನ್ನು ನಿಶ್ಯಕ್ತಗೊಳಿಸಲು ಇಂತಹ ಋಣಾತ್ಮಕ ಪ್ರತಿತಂತ್ರಗಳನ್ನು ಅನುಸರಿಸುವುದಿಲ್ಲ ಎಂದು ಭಾವಿಸಿದರೂ, ತನ್ನ ಬಳಿಯಿರುವ ಅಧಿಕಾರವನ್ನು ಬಳಸಿಕೊಂಡು ಒಬಿಸಿ ಸಮುದಾಯಗಳನ್ನು ಓಲೈಸುವ ಅಥವಾ ಅವರನ್ನು ಗೊಂದಲಗೊಳಿಸುವ ಸರಕಾರಿ ಯೋಜನೆಗಳನ್ನು ರೂಪಿಸುವ ಅವಕಾಶವಂತೂ ಬಿಜೆಪಿ ಬಳಿ ಇದೆ. ಈಗಾಗಲೇ, 45 ದಿನಗಳಿಗಿಂತ ದೀರ್ಘಾವಧಿಯ ಗುತ್ತಿಗೆ ಆಧಾರದ ತಾತ್ಕಾಲಿಕ ಹುದ್ದೆಗಳ ನೇಮಕಾತಿಯಲ್ಲೂ ಮೀಸಲಾತಿ ಕಲ್ಪಿಸಲು ತಾನು ಆದೇಶ ನೀಡಿರುವುದಾಗಿ ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರಕಾರ ಹೇಳಿದೆ. ಇದರಿಂದಾಗಿ ಎಸ್‌ಸಿ-ಎಸ್‌ಟಿ ಮಾತ್ರವಲ್ಲದೆ ಒಬಿಸಿ ಸಮುದಾಯಗಳಿಗೂ ಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ದೊರಕಲಿದೆ. ಅವಕಾಶವಂಚಿತ ಸಮುದಾಯಗಳಲ್ಲಿ ಸುಸ್ಥಿರ ಮತ್ತು ದೂರಗಾಮಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಇಂತಹ ತಾತ್ಕಾಲಿಕ ಉಪಕ್ರಮಗಳು ಹೆಚ್ಚೇನು ಪರಿಣಾಮಕಾರಿಯಲ್ಲ. ಆದರೂ, ಬಿಜೆಪಿ ಈ ಬಗೆಯ ಕಾರ್ಯಕ್ರಮಗಳನ್ನು ‘ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳುವ’ ಉಪಾಯವಾಗಿ ಬಳಸಿಕೊಳ್ಳಬಹುದು. ಮುಖ್ಯವಾದ ಇನ್ನೊಂದು ಸಂಗತಿಯಿದೆ. ಮಂಡಲ್ ವರದಿ ಜಾರಿಯಾದ ಈ 33 ವರ್ಷಗಳ ಅವಧಿಯಲ್ಲಿ ಬಿಜೆಪಿ ಹದಿನೈದು ವರ್ಷ ಆಳ್ವಿಕೆ ನಡೆಸಿದ್ದರೆ, ಹೆಚ್ಚೂಕಮ್ಮಿ ಅಷ್ಟೇ ಅವಧಿಗೆ ಆಳ್ವಿಕೆ ನಡೆಸಿರುವುದು ಇವತ್ತಿನ ‘ಇಂಡಿಯಾ’ ಮೈತ್ರಿ ಕೂಟದ ಪಕ್ಷಗಳು. ಅದರಲ್ಲೂ ವರದಿ ಅನುಷ್ಠಾನಕ್ಕೆ ಬಂದ ಮೊದಲಾರ್ಧದ ಹದಿನೈದು ವರ್ಷಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಆಳ್ವಿಕೆಯೇ ಹೆಚ್ಚು. ಮಂಡಲ್ ವರದಿಯ ನಂತರವೂ ಹಿಂದುಳಿದ ಸಮುದಾಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಸಾಧ್ಯವಾಗಿಲ್ಲ ಎನ್ನುವುದು ನಿಜವಾದರೆ, ಅದಕ್ಕೆ ಯಾರೆಲ್ಲ ಹೊಣೆಗಾರರಾಗಬೇಕಾಗಬಹುದು?

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಜಾತಿಗಣತಿಯು ಬಿಜೆಪಿಗೆ ಆತಂಕ ಹುಟ್ಟಿಸಿರುವುದು ನಿಜವಾದರೂ; ವಿರೋಧಪಕ್ಷಗಳ ಪಾಲಿಗೆ ನಿಟ್ಟುಸಿರು ಬಿಡುವಷ್ಟು ನಿರಾಳ ಹಾದಿಯಂತೂ ಅಲ್ಲ.

(ಅಂಕಿಅಂಶ ಮೂಲ: ಲೋಕ್‌ನೀತಿ-ಸಿಎಸ್‌ಡಿಎಸ್ ರಾಷ್ಟ್ರೀಯ ಚುನಾವಣಾ ಸಮೀಕ್ಷೆ)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಗಿರೀಶ್ ತಾಳಿಕಟ್ಟೆ

contributor

Similar News