ಜಾತಿ ಮೂಲದ ಬಡತನ ನಿವಾರಣೆಗೆ ಜಾತಿಗಣತಿ ಅನಿವಾರ್ಯ

Update: 2023-10-08 04:55 GMT

ಬರಹ ರೂಪ: ಸತ್ಯಾ ಕೆ.

ಸಮಾಜದಲ್ಲಿ ಸದ್ಯ ಸಾಮಾಜಿಕ ನ್ಯಾಯಕ್ಕೆ ಅಡ್ಡಿಯಾಗಿರು ವುದು ಜಾತಿ ಆಧಾರಿತ ಬಡತನ. ಈ ಜಾತಿ ಆಧಾರಿತ ಬಡತನವೆಂಬುದು ನಿರಂತರವಾದದ್ದು. ಆರ್ಥಿಕ ಬಡತನ ತಾತ್ಕಾಲಿಕ. ಹಾಗಾಗಿ ಜಾತಿ ಗಣತಿ ವರದಿ ಆಧಾರದಲ್ಲಿ ಬಡತನ ನಿವಾರಣೆಗೆ ಸರಕಾರ ಮುಂದಾಗಬೇಕು. ಇದಕ್ಕಾಗಿ ಈಗಾಗಲೇ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಸಿದ್ಧಪಡಿಸಿರುವ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ ಅದು ಬಿಡುಗಡೆ ಗೊಳ್ಳಬೇಕೆಂ ಬುದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾಗಿರುವ ಎಚ್. ಕಾಂತರಾಜ್ ಹಾಗೂ ಡಾ. ಸಿ.ಎಸ್. ದ್ವಾರಕಾನಾಥ್ ಅವರ ಅಭಿಪ್ರಾಯ.

ಬಿಹಾರ ಸರಕಾರ ಬಿಡುಗಡೆಗೊಳಿಸಿರುವ ಜಾತಿ ಗಣತಿ ವರದಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಬೆನ್ನಿಗೇ ಹಿರಿಯ ಕಾಂತರಾಜ್ ಅಧ್ಯಕ್ಷತೆಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ ನಡೆಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಪ್ರಕಟಿಸಬೇಕೆಂಬ ಬೇಡಿಕೆಯೂ ತೀವ್ರವಾಗುತ್ತಿದೆ. ಈ ಕುರಿತಂತೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಜಾತಿ ಜನಗಣತಿಯ ಪ್ರಮುಖರು, ಆಗಿರುವ ಕಾಂತರಾಜ್ ಹಾಗೂ ಆಯೋಗದ ಇನ್ನೋರ್ವ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್ ಅವರ ನಡುವೆ ಸಂವಾದ ಕಾರ್ಯಕ್ರಮವನ್ನು ‘ವಾರ್ತಾಭಾರತಿ’ ಸ್ಟುಡಿಯೋದಲ್ಲಿ ನಡೆಸಲಾಗಿದ್ದು, ಸಂವಾದದ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ಡಾ. ದ್ವಾರಕಾನಾಥ್: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಿದ್ಧಗೊಂಡಿರುವ ಆಯೋಗದ ವರದಿ ಬಗ್ಗೆ ಸದ್ಯ ಚರ್ಚೆ ನಡೆಯುತ್ತಿದೆ. ನಿಮಗೇನನ್ನಿಸುತ್ತದೆ.

ಕಾಂತರಾಜ್: ನನ್ನ ಅಭಿಪ್ರಾಯದಲ್ಲಿ ಅದನ್ನು ಜಾರಿಗೊಳಿಸುವಲ್ಲಿ ಕರ್ನಾಟಕ ಪ್ರಥಮ ರಾಜ್ಯ ಆಗಬೇಕಾಗಿತ್ತು. ಇದೀಗ ಅಂತಹ ವರದಿ ತಯಾರಿಸಿ ನೀಡಬೇಕೆಂಬ ವಾತಾವರಣ ಇಡೀ ದೇಶದಲ್ಲಿ ಕಂಡು ಬರುತ್ತಿದೆ. ಇದು ಸಂತೋಷದ ವಿಷಯ. ಬಿಹಾರ ರಾಜ್ಯದಲ್ಲಿ ಇದೇ ರೀತಿ ಸಿದ್ಧಪಡಿಸಲಾದ ವರದಿ ಜಾರಿಯಾಗಿದೆ. ಹಾಗಾಗಿ ನಮ್ಮಲ್ಲಿಯೂ ಆ ವರದಿ ಜಾರಿಯಾಗಬೇಕು. ಅದರ ಅವಶ್ಯಕತೆ ಇದೆ. ಅದರ ಪ್ರಯೋಜನ ತಿಳಿದುಕೊಂಡಾಗ ಅದರ ಪ್ರಾಮುಖ್ಯತೆ ಅರಿವಾಗಲಿದೆ.

ಡಾ. ದ್ವಾರಕಾನಾಥ್: ವಾಸ್ತವದಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಜಾತಿವಾರು ಗಣತಿ ಆರಂಭವಾಗಿತ್ತು. ನಮ್ಮ ವರದಿ ಪೂರ್ಣಗೊಂಡು ಹಲವು ವರ್ಷಗಳಾಗಿವೆ. ಸಾಮಾಜಿಕ ನ್ಯಾಯದ ವಿಷಯದಲ್ಲಿ ಭಾರತದಲ್ಲಿ ತಮಿಳುನಾಡು, ಕರ್ನಾಟಕ ಹಾಗೂ ಬಿಹಾರ ರಾಜ್ಯಗಳು ಹೆಚ್ಚಿನ ಒತ್ತು ನೀಡಿವೆ. ಬಿಹಾರದಲ್ಲಿ ಕರ್ಪೂರಿ ಠಾಕೂರ್, ತಮಿಳುನಾಡಿನಲ್ಲಿ ಪೆರಿಯಾರ್, ಕರ್ನಾಟಕದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬಿಹಾರ ಎರಡು ವರ್ಷಗಳಲ್ಲಿ ವರದಿ ತಯಾರಿಸಿ ಮುಗಿಸಿಬಿಟ್ಟಿದೆ. ಕರ್ನಾಟಕ ಪ್ರಥಮವಾಗಿ ನೀಡಿರುತ್ತಿದ್ದರೆ ಆ ಹೆಮ್ಮೆ ನಮ್ಮದಾಗುತ್ತಿತ್ತು.

ಕಾಂತರಾಜ್: ಹೌದು ಪ್ರಾರಂಭ ಮಾಡಿದ್ದೇ ನಾವು. ಬಿಹಾರ ಇತ್ತೀಚೆಗೆ ಆರಂಭಿಸಿದ್ದು, 2014ರಲ್ಲಿ ನಮ್ಮಲ್ಲಿ ಆರಂಭ ಆಗಿತ್ತು. ಹಿಂದೆ ಸಮೀಕ್ಷೆ ಆಗಿಲ್ಲವೆಂದಲ್ಲ. ಆದರೆ ಇಷ್ಟೊಂದು ವಿಶಾಲ ರೀತಿಯಲ್ಲಿ ಆಗಿಲ್ಲ. ಸಂವಿಧಾನದ ಪ್ರಕಾರ, ಮಾಡಬೇಕೆಂಬ ಒತ್ತಡದ ಜತೆಗೆ, ವೈಜ್ಞಾನಿಕವಾಗಿ ಅಂಕಿ ಅಂಶಕೊಟ್ಟಾಗ ಮಾತ್ರ ಮೀಸಲಾತಿ ಹೆಚ್ಚುಕಡಿಮೆ ಎಂಬ ಸಮಸ್ಯೆಗೆ ಪೂರ್ಣ ವಿರಾಮ ಹಾಕಲು ಸಾಧ್ಯ. ಇದಕ್ಕಾಗಿ ಜಾತಿ ಜನಗಣತಿ, ಸಮೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಇಂತಹ ಪ್ರಯತ್ನ ಆಗಿದೆ. ಈಗಲಾದರೂ ಜಾರಿಗೊಳಿಸುವ ಪ್ರಯತ್ನ ಆದರೆ, ಸಮುದಾಯಗಳಿಗೆ ಪೂರಕವಾಗಿ ಕಾರ್ಯಕ್ರಮ ಜಾರಿಗೊಳಿಸಲು ಸಾಧ್ಯ ಆಗಲಿದೆ.

ಜಾತಿ ಭಾರತದ ವಾಸ್ತವ !

ಕಾಂತರಾಜ್: ಜಾತಿಗಣತಿಯನ್ನು ವಿರೋಧಿಸುವವರು, ‘ಬಡವರಿಗೆ ಪರಿಹಾರ ನೀಡಿ. ಜಾತಿ ಹಿಡಿದುಕೊಂಡು ಯಾಕೆ ಹೋಗುತ್ತೀರಿ. ಸಂವಿಧಾನ ಹೇಳುವುದು ಜಾತಿರಹಿತವಾದ ಸಮಾಜ ಬೇಕು ಎಂಬುದಾಗಿ. 21ನೇ ಶತಮಾನದಲ್ಲಿ ಜಾತಿ ಹಿಂದೆ ಯಾಕೆ ಹೋಗುತ್ತಿದ್ದೇವೆ’ ಎನ್ನುತ್ತಿದ್ದಾರೆ.

ಡಾ. ದ್ವಾರಕಾನಾಥ್: ಸಮಾಜದಲ್ಲಿರುವ ಬಡತನ ಜಾತಿಮೂಲದ ಬಡತನ. ಅದು ನಿರಂತರವಾದದ್ದು. ಆರ್ಥಿಕ ಮೂಲದ ಬಡತನ ಅದು ತಾತ್ಕಾಲಿಕ. ಸಮುದಾಯದ ಕುಲಕಸುಬಿನ ಆಧಾರದಲ್ಲಿ ಬಡತನ ನಿರ್ಧರಿಸಬೇಕು. ರಗ್ಗು ಬಂದಮೇಲೆ ಕಂಬಳಿ ನೇಯುವವನ ಗತಿ, ಸಾರಾಯಿ ಅಂಗಡಿ ಬಂದ ಮೇಲೆ ಬಿಲ್ಲವರ ಗತಿ, ಟೆಕ್ಸ್ಟೈಲ್ಸ್ ಬಂದ ಮೇಲೆ ನೇಕಾರರ ಗತಿ, ಅಲ್ಯುಮಿನಿಯಂ ಅಥವಾ ಸ್ಟೀಲ್ ಪಾತ್ರೆಗಳು ಬಂದು ಕುಂಬಾರರ ಗತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಇಂತಹ ಪ್ರಶ್ನೆ ಕೇಳುತ್ತಿದ್ದಾರೆ.

ಕಾಂತರಾಜ್: ಜಾತಿಯನ್ನು ಅನುಸರಿಸದೆ ಸಾಮಾಜಿಕ ನ್ಯಾಯ ಕೊಡಲು ಸಾಧ್ಯವಿಲ್ಲ ಎಂಬುದು ನಿಮ್ಮ ಅಭಿಪ್ರಾಯ?

ಡಾ. ದ್ವಾರಕಾನಾಥ್: ಜಾತಿಯನ್ನು ಅನುಸರಿಸಬೇಕು. ಜಾತಿ ಒಂದು ವಾಸ್ತವ. ಜಾತಿಯನ್ನು ನೀತಿ ಮಾಡಿಕೊಂಡಿರುವ ದೇಶ ನಮ್ಮದು. ಜಾತಿ ಇಲ್ಲದೆ ನಿಮ್ಮ ಗುರುತೇ ಇಲ್ಲ. ಅಂತಹ ಜಾತಿಯನ್ನು ನಗಣ್ಯಗೊಳಿಸಲು ಸಾಧ್ಯವಿಲ್ಲ. ಕಾಯಿಲೆ ಹೆಸರು ಹೇಳದೆ ಔಷಧಿ ನೀಡಲು ಸಾಧ್ಯವಿಲ್ಲ.

ಸೋರಿಕೆಯಾಗುವ ಅವಕಾಶವೇ ಇಲ್ಲ

ಡಾ. ದ್ವಾರಕಾನಾಥ್: ವರದಿ ಸೋರಿಕೆ ಆಗಿದೆ ಎಂಬುದರಲ್ಲಿ ಸತ್ಯಾಂಶವಿದೆಯೇ?

ಕಾಂತರಾಜ್: ಸೋರಿಕೆಯಾಗುವ ಅವಕಾಶವೇ ಇಲ್ಲ. ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ.

ಡಾ. ದ್ವಾರಕಾನಾಥ್: ಪ್ರಬಲ ಸಮುದಾಯಗಳಿಗೆ ಆತಂಕವಿದೆ. ಎಲ್ಲಿ ನಮ್ಮ ಸ್ಥಾನಮಾನ ಕೆಳಗಿಳಿಯುವುದೋ, ತಳ ಸಮುದಾಯ ಗಳು ಮೇಲೆ ಬರುತ್ತ ವೆಯೋ, ಮುಸ್ಲಿಂ ಮತ್ತು ದಲಿತ ವರ್ಗವನ್ನು ಹೆಚ್ಚಾಗಿ ತೋರಿಸಿ ನಾವು ಕಡಿಮೆಯಾಗಿ ಬಿಡುತ್ತೇವೋ ಎನ್ನುವುದು ಆತಂಕಕ್ಕೆ ಕಾರಣವಾಗಿರಬಹುದು?

ಕಾಂತರಾಜ್: ಅಂತಹ ಆತಂಕ ನನಗೆ ಕಾಣಿಸುತ್ತಿಲ್ಲ. ಇರುವ ಚಿತ್ರಣ ನಾವು ನೀಡಿದ್ದೇವೆ. ಅಂಕಿ ಅಂಶಗ ಳನ್ನು ಪಡೆಯುವ ರೀತಿಯಲ್ಲಿ, ಹೇಳಿರುವುದು ಬೇರೆ, ದಾಖಲಾಗಿ ರುವುದು ಬೇರೆ ಆಗಿದ್ದಲ್ಲಿ ಅದನ್ನು ಒಪ್ಪಬಹುದು. ಸಮು ದಾಯವೊಂದರ ಗಣತಿ ಒಂದು ಲಕ್ಷವಿದ್ದು ಅದನ್ನು 10 ಲಕ್ಷವೆಂದು ತೋರಿಸುವಂತಹ ತಪ್ಪುಗಳಾದರೆ ಅದು ಆಕ್ಷೇ ಪಾರ್ಹ. ಅಂತಹ ತಪ್ಪು ಆಗಿಲ್ಲ. ಮನೆ ಭೇಟಿ ಸಂದರ್ಭ ಹೇಳಿ ರುವ ವಾಸ್ತವ ಮಾಹಿತಿಯನ್ನು ದಾಖಲಿಸಲಾಗಿದೆ.

ಡಾ. ದ್ವಾರಕಾನಾಥ್: ಕಾಂತರಾಜ್ ಯಾಕೆ ವರದಿ ಕೊಟ್ಟಿಲ್ಲ ಎಂಬ ಪ್ರಶ್ನೆ ಸಾಮಾನ್ಯ ಜನವಲಯದಲ್ಲಿದೆ. ನಿಮಗೇನಾದರೂ ಬಲಿಷ್ಠ ಜಾತಿಗಳ ಒತ್ತಡ ಅಥವಾ ಆರೆಸ್ಸೆಸ್, ಸಂಘ ಪರಿವಾರದ ಅಡ್ಡಿಗಳಿತ್ತೇ?

ಕಾಂತರಾಜ್: ಯಾರ ಅಡ್ಡಿಯೂ ಇರಲಿಲ್ಲ. ಸಿದ್ದರಾಮಯ್ಯನವರ ಅವಧಿಯಲ್ಲೇ ವರದಿ ಕೊಡಬೇಕಾಗಿತ್ತು ಎನ್ನುವುದು ನಿಮ್ಮ ಅನಿಸಿಕೆಯಾಗಿದೆ. ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅದು ಪೂರ್ಣವಾಗಿರಲಿಲ್ಲ. ನಂತರ ಎರಡು ಸರಕಾರ ಬಂತು. ದಯವಿಟ್ಟು ವರದಿ ಸ್ವೀಕರಿಸಿ ಎಂದು ಆಯೋಗದಿಂದ ಪತ್ರವೂ ಬರೆದಿದ್ದೇವೆ. ಆದರೆ ಸ್ವೀಕಾರವಾಗಲಿಲ್ಲ. ನಮ್ಮ ಆಯೋಗದ ಅವಧಿ ಮುಗಿದಾಗ ನಾವು ಹೊರಗಡೆ ಬರಬೇಕಾಯಿತು. ಆ ಸಂದರ್ಭದಲ್ಲಿ ವರದಿ ಮಾತ್ರ ಪೂರ್ಣವಾಗಿತ್ತು.

ಡಾ. ದ್ವಾರಕಾನಾಥ್: ಕಾಂತರಾಜ್ ಅವರ ಅವಧಿಯಲ್ಲಿ ಪೂರ್ಣಗೊಂಡ ಗಣತಿ ವರದಿ, ಈಗ ಜಯಪ್ರಕಾಶ್ ಹೆಗ್ಡೆಯವರ ಅವಧಿಯಲ್ಲಿ ಸಲ್ಲಿಕೆಯಾಗಬಹುದೆ ? ಇಬ್ಬರು ಸದಸ್ಯರು ವರದಿಗೆ ಸಹಿ ಹಾಕಿಲ್ಲ, ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬ ತಾಂತ್ರಿಕ ತೊಂದರೆಗಳಿವೆ ಎಂಬ ಮಾತುಗಳು?

ಕಾಂತರಾಜ್: ಆಯೋಗದ ಅಧ್ಯಕ್ಷರೂ ಆಗಿದ್ದ ನಿಮಗೂ ಅದರ ಅರಿವಿದೆ. ತಾಂತ್ರಿಕ ಸಮಸ್ಯೆ ಇಲ್ಲ. ಕೊನೆಯ ಆವೃತ್ತಿಗೆ ಮಾತ್ರ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ. ಪೂರ್ಣ ವರದಿಗೆ ಇದು ಸಂಬಂಧಿಸಿದ್ದಲ್ಲ. ವರದಿಯಲ್ಲಿ ಸಾಕಷ್ಟು ಆವೃತ್ತಿಗಳಿವೆ (ವಾಲ್ಯೂಮ್). ಇಲ್ಲಿಯವರೆಗೆ ಸಂಪೂರ್ಣವಾಗಿ ದಾಖಲೆಗಳನ್ನು ನೋಡಿಕೊಂಡು ಯಾರೂ ಮಾತನಾಡಿಲ್ಲ. ಆಯೋಗದಲ್ಲಿ ಈ ವರದಿಯನ್ನು ಸರಕಾರಕ್ಕೆ ನೀಡಬೇಕೆಂಬ ನಿರ್ಣಯಕ್ಕೆ ಸದಸ್ಯ ಕಾರ್ಯದರ್ಶಿಯಾಗಿದ್ದವರು ಸಹಿ ಹಾಕಿದ್ದಾರೆ. ಅದು ತೀರ್ಮಾನಕ್ಕೆ ಒಪ್ಪಿಕೊಂಡಂತೆ. ನಿರ್ಣಯಕ್ಕೆ ಒಪ್ಪಿಕೊಂಡ ಬಳಿಕ ಕೊನೆಯ ಒಂದು ಆವೃತ್ತಿಗೆ ಸಹಿ ಹಾಕಿಲ್ಲ ಎಂಬುದು ತಾಂತ್ರಿಕ ಸಮಸ್ಯೆ ಆಗದು.

ಡಾ. ದ್ವಾರಕಾನಾಥ್: ಜಯಪ್ರಕಾಶ್ ಹೆಗ್ಡೆಯವರು ಸಲ್ಲಿಕೆ ಮಾಡುವುದಾದರೆ ಅದನ್ನು ಪರಿಷ್ಕರಿಸಬೇಕು. ಕೆಲವು ಅಂಶಗಳನ್ನು ತೆಗೆದು ಹಾಕಬೇಕು ಎಂಬವಾದವಿದೆಯಲ್ಲ?

ಕಾಂತರಾಜ್: ಆಯೋಗದ ಕಾಯ್ದೆ ಪ್ರಕಾರ ಹಿಂದಿನ ಆಯೋಗಗಳು ಮಾಡಿದ ಕೆಲಸವನ್ನು ಪರಿಷ್ಕರಿಸುವ ಅವಕಾಶ ಇಲ್ಲ.

ಡಾ. ದ್ವಾರಕಾನಾಥ್: ಸರಿ, ಸಲ್ಲಿಕೆಯಾಗಿರುವ ವರದಿಯನ್ನು ಪರಿಷ್ಕರಣೆ, ತಿದ್ದುಪಡಿ ಮಾಡಲಾಗದು. ಆದರೆ ಸಲ್ಲಿಕೆಯೇ ಆಗದಿರುವುದರಿಂದ ಪರಿಷ್ಕರಣೆ, ತಿದ್ದುಪಡಿ ಮಾಡಬಹುದೇ?

ಕಾಂತರಾಜ್: ಸಲ್ಲಿಕೆ ಮಾಡುವುದು ಅಥವಾ ಸಲ್ಲಿಕೆ ಮಾಡದಿರುವುದು ಎಂಬ ವಿಷಯವಲ್ಲ. ಅದಾಗಲೇ ಪೂರ್ಣಗೊಂಡಿರುವ ವರದಿಯನ್ನು ಮರು ಪರಿಶೀಲನೆ ಅಥವಾ ಪರಿಷ್ಕರಣೆ ಮಾಡಲು ಅವಕಾಶ ಇಲ್ಲ. ಹೊಸತಾಗಿ ಪ್ರತ್ಯೇಕವಾಗಿ ಮಾಡಿದ್ದರೆ ಅದನ್ನು ಕೊಡಬಹುದು.

ಡಾ. ದ್ವಾರಕಾನಾಥ್: ವರದಿ ಬಿಡುಗಡೆ ಯಾದರೆ, ಬಿಹಾರದಂತೆ ರಾಜಕೀಯ ಆಂದೋಲನ ಕರ್ನಾಟಕದಲ್ಲೂ ಆಗಬಹುದೇ? ವರದಿಯಲ್ಲಿ ಶೇ. 36 ತೀರಾ ಹಿಂದುಳಿದ ವರ್ಗದವರು, ಶೇ. 86

ಎಸ್ಸಿ ಎಸ್ಟಿ ಒಬಿಸಿ ಹಾಗೂ ಅಲ್ಪಸಂಖ್ಯಾತರು ಎಂಬ ವಾಸ್ತವ ಗೊತ್ತಾದ ಮೇಲೆ ರಾಜಕೀಯ ಅಲ್ಲೋಲ ಕಲ್ಲೋಲವಾಗಿದೆಯಲ್ಲ?

ಕಾಂತರಾಜ್: ಇದು ಸಮಾಜದಲ್ಲಿರುವ ವ್ಯವಸ್ಥೆ ಹೇಗಿದೆ ಎಂಬ ವಾಸ್ತವ ಚಿತ್ರಣ ತಿಳಿಯಲು ಮಾಡಿರು ವುದು. ಅದರ ಪರಿಣಾಮ ಏನಾಗುತ್ತೆ ಎಂಬುದು ಮುಂದಿನದು. ಸತ್ಯ ಹೇಳುವ ಪ್ರಯತ್ನ ಮಾಡಲಾಗಿದೆ. ನಾನು ಆಯೋಗದಲ್ಲಿದ್ದಾಗ ಪ್ರತಿಯೊಂದು ಕ್ಷೇತ್ರಕ್ಕೆ ಹೋಗಿದ್ದೇನೆ. ಸಾರ್ವಜನಿಕವಾಗಿ ಇಂತಹ ಸಮೀಕ್ಷೆ ಬೇಡ ಎಂಬ ಮಾತು ಕೇಳಿ ಬಂದಿಲ್ಲ. ಯಾರಿಗೆ ತೊಂದರೆ ಆಗಿದೆ ಅವರು ಅದನ್ನು ಹೇಳಬಹುದು. ಆಯೋಗ ವರದಿ ಕೊಟ್ಟಾಗ ಸರಕಾರ ತಿರಸ್ಕರಿಸುವ ಅಥವಾ ಪುರಸ್ಕರಿಸುವ ಅಧಿಕಾರ ಇದೆ. ಆ ತೀರ್ಮಾನ ಸರಕಾರದ್ದು, ನಮಗೆ ನೀಡಿದ ಕೆಲಸ ಮಾಡಿದ್ದೇವೆ. ಅದೀಗ ಸರಕಾರದ ಆಸ್ತಿ.

ಡಾ. ದ್ವಾರಕಾನಾಥ್: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಈ ವರದಿ ಬಿಡುಗಡೆಯಾದರೆ ಪರಿಣಾಮ ಬೀರಲಿದೆಯೇ?

ಕಾಂತರಾಜ್: ರಾಜಕೀಯವಾಗಿ, ಸಾಮಾಜಿ ಕವಾಗಿ ಪರಿಣಾಮ ಬೀರಲಿದೆಯೇ ಎಂಬುದು ನಮಗೆ ಸಂಬಂಧಿಸಿದ್ದಲ್ಲ. ಸರಕಾರ ಹೇಳಿದೆ. ನಾವು ಮಾಡಿ ನೀಡಿದ್ದೇವೆ. ಯಾವ ರೀತಿ ಪರಿಣಾಮ ಎಂದು ನಾವು ಹೇಗೆ ಹೇಳುವುದು?

ಡಾ. ದ್ವಾರಕಾನಾಥ್: ನಮ್ಮ ಮುಂದಿರುವುದು ವರದಿ ಬಂದ ಮೇಲೆ ನಾವು ಅದನ್ನು ಯಾವ ರೀತಿ ಸ್ವೀಕರಿಸಬೇಕು ಎನ್ನುವುದು. ವರದಿ ಅವೈಜ್ಞಾನಿಕ ಎಂಬ ಆಪಾದನೆಯನ್ನೂ ಮಾಡಲಾಗುತ್ತಿದೆ.

ಕಾಂತರಾಜ್: ಕೆಲವರಿಗೆ ಮಾಹಿತಿ ಇಲ್ಲ ಎಂದು ಅನಿಸುತ್ತದೆ. ಹಾಗಾಗಿ ಎಲ್ಲೋ ಕುಳಿತು ಬರೆದರು, ಹೇಗೋ ಬರೆದರು ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ವರದಿಯು ಜಾತಿ, ಉದ್ಯೋಗ ಸೇರಿದಂತೆ ೫೫ ಪ್ರಶ್ನೆಗಳನ್ನು ಒಳಗೊಂಡ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟವರ ಸಹಿ ಪಡೆಯಲಾಗಿದೆ. ಅದು ದಾಖಲೆ ಸಹಿತ ಇದೆ.

ಡಾ. ದ್ವಾರಕಾನಾಥ್: ಹೊಸ ಕಾಂಗ್ರೆಸ್ ಸರಕಾರ ಬಂದು ಮೂರ್ನಾಲ್ಕು ತಿಂಗಳಾಗಿದೆ. ಅವರು ವರದಿ ಪಡೆಯುವುದಾಗಿ ಹೇಳಿದ್ದಾರೆ. ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆೆಯವರು ವರದಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಮುಹೂರ್ತ ನಿಗದಿಯಾಗುತ್ತಿಲ್ಲ ಯಾಕೆ?

ಕಾಂತರಾಜ್: ನಾವು ಅದನ್ನು ಹೇಗೆ ಹೇಳುವುದು. ನಾವು ಆಯೋಗದಲ್ಲಿಯೂ ಇಲ್ಲ. ಸರಕಾರದಲ್ಲಿಯೂ ಇಲ್ಲ. ಹಾಗಿದ್ದರೂ, ಮುಖ್ಯ ಮಂತ್ರಿ, ಸಚಿವರು ವರದಿ ಸ್ವೀಕರಿಸುವುದಾಗಿ ಹೇಳಿರುವುದು ಸಂತಸದ ವಿಚಾರ.

ನೀವೂ ಆಯೋಗದ ಅಧ್ಯಕ್ಷರಾಗಿ ಹಿಂದೆ ಕೆಲಸ ಮಾಡಿದ್ದೀರಿ. ನಾನು ಹಿಂದೆ ರವಿವರ್ಮ ಕುಮಾರ್ ಅವರ ಆಯೋಗದಲ್ಲೂ ಕೆಲಸ ಮಾಡಿದ್ದೆ. ಆಗೆಲ್ಲಾ ಹಣಕಾಸು ಸಕಾಲಕ್ಕೆ ದೊರಕದೆ ವರದಿ ಬಿಡುಗಡೆ ಕಷ್ಟವಾಗಿತ್ತು. ನಿಮ್ಮ ಪ್ರಕಾರ ಇಂತಹ ಸಮೀಕ್ಷೆ ಬಿಡುಗಡೆಯ ಅಗತ್ಯ ಇದೆಯೋ ಇಲ್ಲವೇ?

ಡಾ. ದ್ವಾರಕಾನಾಥ್: ಖಂಡಿತಾ ಆಗಬೇಕಾಗಿದೆ. ೧೯೩೧ ಬಳಿಕ ಜಾತಿವಾರು ಸಮೀಕ್ಷೆಯೇ ನಡೆದಿಲ್ಲ. ಕೇವಲ ಜನಗಣತಿ ನಡೆದಿದೆ. ಆದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಆಗಿಲ್ಲ. ರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಡಲು ಅವಕಾಶ ಸಿಕ್ಕಿತ್ತು. ಅಂದ ಹಾಗೆ, ಸಾಮಾಜಿಕ ನ್ಯಾಯದ ಪ್ರಯತ್ನ ಟಿಪ್ಪು ಕಾಲದಲ್ಲೇ ಆರಂಭ ಆಗಿತ್ತು. ಟಿಪ್ಪು ಒಕ್ಕಲಿಗರು, ಕುರುಬರು ಮೊದಲಾದ ಸಮುದಾಯಗಳಿಗೆ ಭೂಮಿ ನೀಡಿದ್ದ. ಅಲ್ಲಿಂದ ಸಾಮಾಜಿಕ ನ್ಯಾಯ ಆರಂಭಗೊಂಡಿತ್ತು.

ಕಾಂತರಾಜ್: ಇಂತಹ ಸಮೀಕ್ಷೆ ಮಾಡಿದಾಗ ವಿರೋಧ ಸಹಜ. ಅಂತಹವರಿಗೆ ನಿಮ್ಮ ಉತ್ತರ ಏನು?

ಡಾ.ದ್ವಾರಕಾನಾಥ್: ನೀವು ಮಾಡಿರುವ ಸಮೀಕ್ಷೆಯಲ್ಲಿ ಕೆಟಗರಿ 1 ಮತ್ತು 2ರಲ್ಲಿ 197 ಜಾತಿಗಳಿವೆ. ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಜೈನರು, ಬುದ್ಧರಿದ್ದಾರೆ. ಎಸ್ಸಿ ಎಸ್ಟಿ ಗಳಿದ್ದಾರೆ. ೫೧ ಆದಿವಾಸಿ ಸಮುದಾಯಗಳಿವೆ. 120 ಅಲೆಮಾರಿ ಸಮುದಾಯಗಳಿವೆ.

ಇಷ್ಟು ಸಮುದಾಯಗಳಿಗೆ ನೆರವಾಗುವ ಸಮೀಕ್ಷೆಯನ್ನು ಯಾವುದೋ ಕೆಲ ಸಮುದಾಯಗಳು ಬೇಡ ಎನ್ನು ವುದು ಸಾಮಾಜಿಕ ನ್ಯಾಯಕ್ಕೆ ಅಡ್ಡಿಯಾಗುವ ಪ್ರಕ್ರಿಯೆ. ಇದು ಪ್ರಜಾಪ್ರಭುತ್ವ, ಸಂವಿಧಾನಾತ್ಮಕ ಅಲ್ಲ.ಯಾವ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡದೆ ನಾವೇ ಅನುಭವಿಸಿದ್ದೇವೆಯೋ ಆ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಅವಕಾಶ ಸಿಕ್ಕಿರುವುದು ಮಹತ್ವದ ವಿಷಯ. ಮತ್ತು ಅದರ ಅಗತ್ಯವಿದೆ.

ಕಾಂತರಾಜ್: ಹಾಗಿದ್ದರೆ ಅಂತಹ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ಅದಕ್ಕೆ ಮಾನ್ಯತೆ ಇಲ್ಲದಾಗುತ್ತದೆಯೇ?

ಡಾ. ದ್ವಾರಕಾನಾಥ್: ನನಗೆ ಅದರ ಅರಿವಿದೆ. ನಾನು ಆಯೋಗದಲ್ಲಿ ಕೆಲಸ ಮಾಡಿದವ. ಆದರೆ ಜನ ವಲಯದಲ್ಲಿ, ಇಡೀ ವರದಿಗೆ ಸಹಿಯೇ ಹಾಕಿಲ್ಲ ಎಂಬ ಮಾತುಗಳಿವೆ.

ಕಾಂತರಾಜ್: ಜನಗಣತಿ ಆಗಬೇಕು. ಜನರಿಗೆ ಸಮಸ್ಯೆ ಇರುವುದು, ಜಾತಿ ಜನಗಣತಿ ಯಾಕೆ ಬೇಕು ಎಂಬುದು. ಜನಗಣತಿಗೆ ಸಂವಿಧಾನದಲ್ಲಿ ಅವಕಾಶ ವಿದೆ. ಜಾತಿ ಗಣತಿಗೆ ಇಲ್ಲ ಎಂದಾಗ ಅಂತಹ ಗಣತಿ ಮಾಡ ಬಹುದೇ ಎಂಬುದಾಗಿದೆ. ನಿಮ್ಮ ಅಭಿಪ್ರಾಯವೇನು?

ಡಾ. ದ್ವಾರಕಾನಾಥ್: ಈಗ ಆಗಬೇಕಾಗಿ ರುವುದು ಜಾತಿ ಜನಗಣತಿಯೇ. ೧೯೪೮ ಜನ ಗಣತಿ ಕಾಯ್ದೆ ಜಾರಿ ಆದಾಗ ಜಾತಿಗಳನ್ನು ಸೇರಿಸಿದ್ದರೆ ಏನೂ ಸಮಸ್ಯೆ ಬರುತ್ತಿರಲಿಲ್ಲ.

ಅದನ್ನು ಕಾರಣಾಂತರದಿಂದ ಹೊರಗಿಡಲಾಗಿತ್ತು. ಜಾತಿ ಗಣತಿ ಆಗದಿದ್ದರೆ ಸತ್ಯಾಂಶಗಳೇ ತಿಳಿಯದು.

ಜನಗಣತಿ ಎಂದರೆ ತಲೆ ಎಣಿಕೆ ಮಾತ್ರ. ಅದರಿಂದ ಏನು ಗೊತ್ತಾಗುತ್ತದೆ? ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಿಂದುಳಿಕೆಯನ್ನು ನಿರ್ಧರಿಸಲು ಜಾತಿ ಸಮೀಕ್ಷೆ ಆಗಲೇಬೇಕು.

Full View


Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News