ಜಾತಿ ಗಣತಿ: ವಿಪಕ್ಷ ಬೆಂಬಲ ಕೆಲ ರಾಜ್ಯಗಳಲ್ಲಿ ಕುಗ್ಗುತ್ತಿರುವುದೇಕೆ?
ಜಾತಿಗಣತಿಯ ಅಂಕಿಅಂಶಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ತೋರಿಸಬಹುದಾದ ಪರಿಣಾಮಕ್ಕೂ ಹಿಂದಿಯೇತರ ಪ್ರದೇಶಗಳಲ್ಲಿ ಉಂಟುಮಾಡಬಹುದಾದ ಪರಿಣಾಮಕ್ಕೂ ವ್ಯತ್ಯಾಸವಿದೆ. ಅಲ್ಲಿ ಜಾತಿ ಜನಗಣತಿಯ ಫಲಿತಾಂಶಗಳು ಬೇರೆಯದೇ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಬಹುದು, ತಮ್ಮ ನೆಲೆಗಳನ್ನು ನಾಶಪಡಿಸಬಹುದು ಮತ್ತದು ಬಿಜೆಪಿಗೆ ಲಾಭದಾಯಕವಾಗಬಹುದು ಎಂಬ ಆತಂಕ ಈಗ ಸರಕಾರ ನಡೆಸುತ್ತಿರುವ ಪಕ್ಷಗಳನ್ನು ಕಾಡುತ್ತಿದೆ
ಅಕ್ಟೋಬರ್ 3ರಂದು ಬಿಹಾರ ಜಾತಿ ಗಣತಿ ವರದಿ ಬಿಡುಗಡೆಯಾದಾಗಿನಿಂದಲೂ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿದೆ. ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯದ ಬೇಡಿಕೆ ಬಗ್ಗೆ ಪ್ರತಿಪಕ್ಷಗಳು ಪ್ರತಿಪಾದಿಸತೊಡಗಿವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರಾಷ್ಟ್ರ ಮಟ್ಟದಲ್ಲಿ ಜಾತಿಗಣತಿ ನಡೆಸಲಾಗುತ್ತದೆ ಮತ್ತು ಜಾತಿ ಆಧಾರಿತ ಕೋಟಾಗಳ ಮೇಲಿನ ಶೇ.50ರ ಮಿತಿಯನ್ನು ತೆಗೆದುಹಾಕಲಾಗುತ್ತದೆ ಎಂಬ ಮಾತುಗಳನ್ನೂ ಕಾಂಗ್ರೆಸ್ ಹೇಳಿದೆ.
ಬಹುತೇಕ ಹಿಂದಿ ಭಾಷಿಕ ರಾಜ್ಯಗಳಲ್ಲಿನ ರಾಜಕೀಯದ ಹಿನ್ನೆಲೆಯಲ್ಲಿ ಇದು ವಿಪಕ್ಷಗಳಿಗೆ ಲಾಭದಾಯಕವಾಗಲಿದೆ. ಅಲ್ಲಿ ಬಿಜೆಪಿಯ ಬತ್ತಳಿಕೆಯಿಂದ ಸಾಕಷ್ಟು ಹಿಂದುಳಿದ ಜಾತಿಗಳ ಮತಗಳನ್ನು ಕಸಿದುಕೊಳ್ಳುವುದು ನಿರ್ಣಾಯಕ ಎಂದು ಪ್ರತಿಪಕ್ಷಗಳು ಭಾವಿಸುತ್ತವೆ. ಎರಡು ನಿರ್ಣಾಯಕ ಹಿಂದಿ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ‘ಇಂಡಿಯಾ’ ಒಕ್ಕೂಟದ ಪ್ರಮುಖ ಪಕ್ಷಗಳಾದ ಎಸ್‌ಪಿ, ಆರ್‌ಜೆಡಿ ಮತ್ತು ಜೆಡಿಯು ಒಬಿಸಿ ಸಮುದಾಯಗಳಲ್ಲಿ ಸಾಂಪ್ರದಾಯಿಕ ಮತ ಬ್ಯಾಂಕ್‌ಗಳನ್ನು ಹೊಂದಿವೆ.
ಆದರೆ ಇದೇ ಸಮೀಕರಣ ಹಿಂದಿ ಭಾಷಿಕ ಪ್ರದೇಶಗಳ ಆಚೆಗಿನ ರಾಜ್ಯಗಳಲ್ಲಿ ಪ್ರತಿಪಕ್ಷಗಳಿಗೆ ಪೂರಕವಾಗಿಲ್ಲ ಎಂಬುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಮೂರು ರಾಜ್ಯಗಳನ್ನು ಗಮನಿಸಬೇಕು. ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಕೇರಳ. ಈ ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ಸರಕಾರಗಳು ವಾಸ್ತವವಾಗಿ ಜಾತಿ ಗಣತಿಯ ಅಂಶಗಳಿಗೆ ಪೂರ್ಣ ಮನಸ್ಸಿನಿಂದ ಸ್ಪಂದಿಸುವ ಸ್ಥಿತಿಯಲ್ಲಿಲ್ಲ.
ಈ ರಾಜ್ಯಗಳಲ್ಲಿ ಜಾತಿ ಜನಗಣತಿಯ ಮೂಲಕ ಹೊರಬೀಳುವ ಫಲಿತಾಂಶಗಳು ಬೇರೆಯದೇ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಬಹುದು, ತಮ್ಮ ನೆಲೆಗಳನ್ನು ನಾಶಪಡಿಸಬಹುದು ಮತ್ತದು ಬಿಜೆಪಿಗೆ ಲಾಭದಾಯಕವಾಗಬಹುದು ಎಂಬ ಆತಂಕ ಈಗ ಸರಕಾರ ನಡೆಸುತ್ತಿರುವ ಪಕ್ಷಗಳನ್ನು ಕಾಡುತ್ತಿದೆ.
ಲಿಂಗಾಯತ ಮತ್ತು ಒಕ್ಕಲಿಗರ ವಿರೋಧದ ಭೀತಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ವಿರೋಧ ಎದುರಾಗಬಹುದಾದ ಆತಂಕದಲ್ಲಿ ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡುವ ಬಗ್ಗೆ ಹಿಂಜರಿಕೆ ತೋರುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ರಾಜ್ಯದಲ್ಲಿ ಜಾತಿ ಗುಂಪುಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅಧ್ಯಯನ ಮಾಡಲು 2015ರಲ್ಲಿ ಸಮೀಕ್ಷೆಗೆ ಮುಂದಾದರು. ವರದಿ 2018ರಲ್ಲಿ ಸಿದ್ಧವಾಗಿತ್ತು. ಆದರೆ ಆನಂತರದ ಬಿಜೆಪಿ ಸರಕಾರವಾಗಲಿ, ಎಚ್‌ಡಿಕೆ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವಾಗಲಿ ವರದಿ ಬಿಡುಗಡೆ ಮಾಡಲಿಲ್ಲ.
ಜಾತಿಗಣತಿಯ ವರದಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ವಿರೋಧ ಎದುರಿಸಬೇಕಾಗಬಹುದು ಎಂಬ ವಿಚಾರ ಸಮೀಕ್ಷೆಗೆ ಸೂಚಿಸಿದ್ದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿದಿತ್ತು.
ಕುಮಾರಸ್ವಾಮಿ ನೇತೃತ್ವದ ಸರಕಾರವಿದ್ದಾಗ ಜಾತಿ ಸಮೀಕ್ಷೆಯ ವರದಿ ಸೋರಿಕೆಯಾದದ್ದು ಕೂಡ ವಿವಾದಾಸ್ಪದ. ಸೋರಿಕೆಯಾದ ಮಾಹಿತಿಯಂತೆ, 1931ರ ಕೊನೆಯ ಜಾತಿ ಗಣತಿಯಲ್ಲಿ ಕಂಡುಬಂದಂತೆ ಲಿಂಗಾಯತರು ರಾಜ್ಯದ ಜನಸಂಖ್ಯೆಯ ಶೇ.14ರಷ್ಟಿದ್ದಾರೆಯೇ ಹೊರತು ಶೇ.17 ಅಲ್ಲ ಎಂದು ಅಂಕಿಅಂಶಗಳು ತೋರಿಸಿರುವುದಾಗಿ ವರದಿಯಾಯಿತು. ಹಾಗೆಯೇ, ಒಕ್ಕಲಿಗ ಜನಸಂಖ್ಯೆ ಶೇ.14ರಿಂದ ಶೇ.11ಕ್ಕೆ ಇಳಿದಿದೆ ಎಂಬ ಅಂಶವೂ ಬಹಿರಂಗವಾಗಿತ್ತು. ಸೋರಿಕೆಯಾದ ಅಂಕಿಅಂಶಗಳ ಪ್ರಕಾರ, ಪರಿಶಿಷ್ಟ ಜಾತಿಗಳು ಶೇ.19.5ರಷ್ಟಿದ್ದು, ರಾಜ್ಯದಲ್ಲಿನ ಅತಿ ದೊಡ್ಡ ಸಮುದಾಯವಾಗಿದೆ ಮತ್ತು ಆನಂತರದ ಸ್ಥಾನದಲ್ಲಿ ಮುಸ್ಲಿಮರು ಶೇ.16ರಷ್ಟಿದ್ದಾರೆ ಎಂಬುದು ತಿಳಿದುಬಂದಿತ್ತು.
ಜಾತಿ ಸಮೀಕ್ಷೆಯ ಪ್ರಕಾರ ಲಿಂಗಾಯತರು ಮತ್ತು ಒಕ್ಕಲಿಗರ ಜನಸಂಖ್ಯೆ ಇಳಿಮುಖವಾಗಿದ್ದರೂ, ಅದರ ವರದಿಯನ್ನು ಬಿಡುಗಡೆ ಮಾಡುವುದರಿಂದ ರಾಜ್ಯದ ಶೇ.25ರಷ್ಟು ಮತದಾರರ ಅಸಮಾಧಾನಕ್ಕೆ ಕಾರಣವಾಗುವ ಅಪಾಯವನ್ನು ಕಾಂಗ್ರೆಸ್ ಎದುರಿಸಲಿದೆ. ತ್ರಿವೇದಿ ಸೆಂಟರ್ ಫಾರ್ ಪೊಲಿಟಿಕಲ್ ಡೇಟಾದ ವಿಶ್ಲೇಷಣೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಈ ಎರಡೂ ಸಮುದಾಯಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂಬುದನ್ನು ಹೇಳಿದೆ.
ವಾಸ್ತವವಾಗಿ, ಕಾಂಗ್ರೆಸ್ ಶೇ.49ರಷ್ಟು ಒಕ್ಕಲಿಗ ಮತಗಳನ್ನು ಪಡೆದಿದೆ. ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪ್‌ಮೆಂಟ್ ಸೊಸೈಟೀಸ್ ಮಾಹಿತಿಯ ಪ್ರಕಾರ ಈ ಪ್ರಮಾಣ ಬೇರೆಲ್ಲ ಪಕ್ಷಗಳಿಗಿಂತಲೂ ಹೆಚ್ಚು, ರಾಜ್ಯದ ಒಕ್ಕಲಿಗ ಸಮುದಾಯದ ಸಾಂಪ್ರದಾಯಿಕ ಬೆಂಬಲ ಹೊಂದಿರುವ ಜೆಡಿಎಸ್‌ಗೆ ಒಕ್ಕಲಿಗ ಸಮುದಾಯದಿಂದ ಕಳೆದ ಚುನಾವಣೆಯಲ್ಲಿ ಬಂದಿರುವ ಮತಗಳು ಶೇ.17 ಮಾತ್ರ.
ಒಕ್ಕಲಿಗರು ಈ ಬಾರಿ ಕಾಂಗ್ರೆಸ್ ಪರವಾಗಿ ಹೆಚ್ಚು ಮತ ಚಲಾಯಿಸಿದ್ದಾರೆ ಆದರೆ ಜನಗಣತಿ ಫಲಿತಾಂಶಗಳು ಬಿಡುಗಡೆಯಾದರೆ, ಜೆಡಿಎಸ್ ಅದನ್ನು ಸಮುದಾಯದಲ್ಲಿ ಅಸಮಾಧಾನವೇಳುವುದಕ್ಕೆ ಬಳಸುವ ಪ್ರಯತ್ನ ಮಾಡುತ್ತದೆ ಎಂಬ ವಿಶ್ಲೇಷಣೆಗಳಿವೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ, ಸಿದ್ದರಾಮಯ್ಯ ಸರಕಾರ ವರದಿ ಬಿಡುಗಡೆಯನ್ನು ಮುಂದೂಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ಮೇಲ್ಜಾತಿ ಅಸಮಾಧಾನದ ಆತಂಕ
ಇಂಡಿಯಾ ಒಕ್ಕೂಟದ ಪಕ್ಷಗಳ ಪೈಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಕೂಡ ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸೆಪ್ಟಂಬರ್‌ನಲ್ಲಿ ವಿರೋಧ ಪಕ್ಷಗಳ ಒಕ್ಕೂಟ ರೂಪಿಸಿದ್ದ ನಿರ್ಣಯದಲ್ಲಿ ಜಾತಿ ಗಣತಿಯನ್ನು ಅದರ ಉದ್ದೇಶವಾಗಿ ಸೇರಿಸುವ ಪ್ರಸ್ತಾಪವನ್ನು ಅವರು ವಿರೋಧಿಸಿದರು.
ಪಶ್ಚಿಮ ಬಂಗಾಳದಲ್ಲಿ ಜಾತಿ ಗಣತಿಯನ್ನು ನಡೆಸುವುದು ತೃಣಮೂಲ ಕಾಂಗ್ರೆಸ್‌ನ ಮೇಲ್ಜಾತಿ ಮತದಾರರ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಆತಂಕವಿದೆ. ಏಕೆಂದರೆ ಒಬಿಸಿ ಜನಸಂಖ್ಯೆ ಪ್ರಸಕ್ತ ಅಂದಾಜಿಸಿರುವುದಕ್ಕಿಂತ ಹೆಚ್ಚಾಗಿರುತ್ತದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.
2021ರ ವಿಧಾನಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಇರುವ ಅಂಕಿಅಂಶಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ ಮೇಲ್ಜಾತಿಗಳ ಮತಗಳನ್ನು ಬಿಜೆಪಿಗೆ ಸಮಸಮವಾಗಿಯೇ ಪಡೆದಿದೆ. ಬಿಜೆಪಿ ಶೇ.46ರಷ್ಟನ್ನು ಪಡೆದಿದ್ದರೆ, ಟಿಎಂಸಿ ಶೇ.42ರಷ್ಟು ಮೇಲ್ಜಾತಿ ಮತಗಳನ್ನು ಪಡೆದಿದೆ. ಇದು ಪಶ್ಚಿಮ ಬಂಗಾಳದ ವೈಶಿಷ್ಟ್ಯವನ್ನೂ ಸೂಚಿಸುತ್ತದೆ. ಅಲ್ಲಿ ಬಿಜೆಪಿ ರಾಜಕೀಯವಾಗಿ ಪ್ರಾಮುಖ್ಯತೆ ಹೊಂದಿದ್ದರೂ, ಮೇಲ್ವರ್ಗದ ಮತಗಳೆಲ್ಲ ಅದರ ಪಾಲಾಗುವುದಿಲ್ಲ.
ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಅಸ್ಮಿತೆಯ ರಾಜಕಾರಣವನ್ನು ಪರಿಚಯಿಸಿದರೂ, ಅಲ್ಲಿ ಮೇಲ್ವರ್ಗವೇ ಪ್ರಾಬಲ್ಯ ಹೊಂದಿದೆ ಎಂಬ ಭಾವನೆಯೇ ಇದೆ.
ಜಾತಿ ಗಣತಿಯ ವಿಚಾರವಾಗಿ ಟಿಎಂಸಿ ಸರಕಾರದ ವಿರುದ್ಧ ಒಬಿಸಿ ಸಮುದಾಯವನ್ನು ಎತ್ತಿಕಟ್ಟುವುದಕ್ಕೆ ಬಿಜೆಪಿ ಮುಸ್ಲಿಮ್ ಕೋಟಾದ ನೆಪ ಮುಂದಿಟ್ಟು ಪ್ರಯತ್ನಿಸಿದರೆ ಆಗ ಒಬಿಸಿ ಮತಗಳನ್ನೂ ಕಳೆದುಕೊಳ್ಳಬೇಕಾದೀತು ಎಂಬ ಭಯ ಟಿಎಂಸಿಯನ್ನು ಕಾಡುತ್ತಿದೆ. ಒಬಿಸಿ ಕೋಟಾದೊಳಗೆ ಎಡಪಕ್ಷಗಳು 2010ರಲ್ಲಿ ಪ್ರಾರಂಭಿಸಿದ ಮುಸ್ಲಿಮ್ ಪ್ರಾಬಲ್ಯದ ಉಪವರ್ಗವನ್ನು ಟಿಎಂಸಿ ಅಧಿಕಾರಕ್ಕೆ ಬಂದ ಮೇಲೆ ಗಮನಾರ್ಹವಾಗಿ ವಿಸ್ತರಿಸಿತ್ತು.
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರುವವರೆಗೂ ಜಾತಿ ಎಂದಿಗೂ ಒಂದು ಅಂಶವಾಗಿರಲೇ ಇಲ್ಲ ಎಂಬ ಅಂಶವನ್ನೂ ವಿಶ್ಲೇಷಕರು ಗಮನಿಸುತ್ತಾರೆ. ಅವರು ಹಲವಾರು ಮುಸ್ಲಿಮ್ ಗುಂಪುಗಳನ್ನು ಒಬಿಸಿ ವರ್ಗಕ್ಕೆ ಸೇರಿಸಿದ ಬಳಿಕ, ಅವರ ವಿರುದ್ಧ ತುಷ್ಟೀಕರಣದ ರಾಜಕೀಯ ಆರೋಪವನ್ನು ಬಿಜೆಪಿ ಬಹಳ ಸಮಯದಿಂದಲೂ ಮಾಡುತ್ತ ಬಂದಿದೆ.
ಮಲಯಾಳಿ ಮೇಲ್ಜಾತಿಗಳ ಆಕ್ಷೇಪ
ಇನ್ನು, ಕೇರಳದಲ್ಲಿನ ಪಿಣರಾಯಿ ವಿಜಯನ್ ಸರಕಾರ ಮತ್ತೊಂದು ಬಗೆಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಲ್ಲಿ ಬ್ರಾಹ್ಮಣರು ಮತ್ತು ನಾಯರ್‌ಗಳಂಥ ಮೇಲ್ಜಾತಿ ಸಮುದಾಯಗಳು ರಾಜ್ಯದ ಸರಕಾರಿ ಸೇವೆಗಳಲ್ಲಿ ತಮಗೆ ಸಿಗಬೇಕಾದಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪವನ್ನು ಮಾಡುತ್ತಿವೆ.
ಮೇಲ್ಜಾತಿ ಸಮುದಾಯಗಳನ್ನು ಪ್ರತಿನಿಧಿಸುವ ಎನ್‌ಜಿಒ ಒಂದರ ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ 2020ರ ತನ್ನ ತೀರ್ಪಿನಲ್ಲಿ, ರಾಜ್ಯ ಹಿಂದುಳಿದ ಆಯೋಗ ನಿಯಮಿತವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ನವೀಕರಿಸುವಲ್ಲಿ ವಿಫಲವಾಗಿದೆ ಎಂದಿತ್ತು ಮಾತ್ರವಲ್ಲದೆ, ಸಾರ್ವಜನಿಕ ಸೇವೆಗಳಲ್ಲಿ ಈಳವ ಸಮುದಾಯ ಅಸಮಾನ ಪ್ರಾತಿನಿಧ್ಯ ಹೊಂದಿದೆ ಎಂಬ ಸಾಚಾರ್ ಸಮಿತಿಯ ವರದಿಯನ್ನೂ ಉಲ್ಲೇಖಿಸಿತ್ತು.
ರಾಜ್ಯದ ಸರಕಾರಿ ಸೇವೆಗಳಲ್ಲಿ ಜಾತಿಗಳು ಮತ್ತು ಸಮುದಾಯಗಳ ಪ್ರಾತಿನಿಧ್ಯ ವಿಚಾರವನ್ನು ಸಾಮಾಜಿಕ-ಆರ್ಥಿಕ ಜಾತಿ ಸಮೀಕ್ಷೆಯ ವರದಿ ಮತ್ತು ಪ್ರಾತಿನಿಧ್ಯ ಕುರಿತ ಅಂಕಿಅಂಶಗಳನ್ನು ಪಡೆದ ನಂತರವೇ ಪರಿಶೀಲಿಸಬಹುದು ಎಂಬ ಅದರ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಆದರೆ ವಿಜಯನ್ ಸರಕಾರ ಜಾತಿ ಸಮೀಕ್ಷೆಯ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
ಒಬಿಸಿ ಸಮುದಾಯದ ಹೊಸ ಚಿತ್ರಣ ರಾಜಕೀಯ ವಿವಾದಕ್ಕೆ ಎಡೆ ಮಾಡಿಕೊಡುತ್ತದೆ ಮತ್ತದು ತನಗೆ ಚುನಾವಣೆಯಲ್ಲಿ ಪ್ರತಿಕೂಲಕರವಾಗಿ ಪರಿಣಮಿಸಲಿದೆ ಎಂಬುದು ಸರಕಾರಕ್ಕೆ ಗೊತ್ತಿದೆ. ಏಕೆಂದರೆ ಎಡಪಕ್ಷಗಳಿಗೆ ಹೆಚ್ಚಿನ ಮತಗಳು ಬರುವುದೇ ಒಬಿಸಿ ಸಮುದಾಯದಿಂದ ಅದರಲ್ಲೂ ಈಳವ ಸಮುದಾಯದಿಂದ.
ರಾಜ್ಯದ ಜನಸಂಖ್ಯೆಯ ಶೇ.22ರಷ್ಟಿರುವ ಈಳವರು ಕೇರಳದಲ್ಲಿ ಅತಿ ದೊಡ್ಡ ಸಮುದಾಯ. ವಿಜಯನ್ ನೇತೃತ್ವದ ಎಲ್‌ಡಿಎಫ್ 2021ರ ರಾಜ್ಯ ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಂಡಾಗ ಅದಕ್ಕೆ ಬಂದಿದ್ದ ಈಳವರ ಮತಗಳೇ ಶೇ.53ರಷ್ಟು. ಈಳವರನ್ನು ಹೊರತುಪಡಿಸಿ ಶೇ.8ರಷ್ಟಿರುವ ಉಳಿದ ಒಬಿಸಿ ಸಮುದಾಯಗಳಿಂದ ಶೇ.61ರಷ್ಟು ಮತಗಳನ್ನು ಎಲ್‌ಡಿಎಫ್ ಪಡೆದಿತ್ತು ಎಂದು ಅಂಕಿಅಂಶಗಳು ಹೇಳುತ್ತವೆ.
ಕೇರಳ-ಕರ್ನಾಟಕ ಗಡಿಯ ಸಮೀಪ ವಾಸಿಸುವ ಕೆಲವು ಮೇಲ್ಜಾತಿ ಸಮುದಾಯಗಳು ಮೀಸಲಾತಿ ಪಡೆಯುವ ಗುಂಪುಗಳ ಪಟ್ಟಿಗೆ ತಮ್ಮನ್ನು ಸೇರಿಸಬೇಕು ಎಂದು ಒತ್ತಾಯಿಸುತ್ತಿವೆ. ಆದರೆ ಕೇರಳದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಡ ಜಾತಿ ಗಣತಿ ಬೇಡಿಕೆಯನ್ನು ಬೆಂಬಲಿಸುತ್ತಿಲ್ಲ.
ಇದಕ್ಕೆ ಕಾರಣ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಇರುವಂತಹ ಬಗೆಯದ್ದೇ ಆಗಿದೆ. ಈಗಿರುವ ರಾಜಕೀಯ ಸಮೀಕರಣವನ್ನು ಕಲಕುವುದಕ್ಕೆ ರಾಜಕೀಯ ಪಕ್ಷಗಳು ಬಯಸುತ್ತಿಲ್ಲ. ಅದು ತೊಡಕಾಗಲಿದೆ ಎಂಬುದು ಅವುಗಳ ಎದುರಿರುವ ಆತಂಕ.
(ಕೃಪೆ:scroll.in)