ಮುಖ್ಯ ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಸಿಜೆಐ ಔಟ್ ?

Update: 2023-08-22 16:12 GMT
Editor : Ismail | Byline : ಆರ್. ಜೀವಿ

ಹೆಸರಿಗೆ ಅತ್ಯಂತ ಪ್ರಮುಖ ಸಾಂವಿಧಾನಿಕ ಸಂಸ್ಥೆಯಾಗಿ, ಬಹುಕಾಲದಿಂದ ಸ್ವಾಯತ್ತತೆ ಕಳೆದುಕೊಂಡಂತಿದ್ದ ಚುನಾವಣಾ ಆಯೋಗ ಇನ್ನು ಪೂರ್ತಿಯಾಗಿ ಕೇಂದ್ರದ ನಿಯಂತ್ರಣಕ್ಕೆ ಬರಲಿದೆಯೆ?. ದೇಶದ ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂಬ ಸುಪ್ರೀಂ ಕೋರ್ಟ್ನ ಕಳಕಳಿಗೆ ವಿರುದ್ಧವಾಗಿ ಚುನಾವಣಾ ಆಯೋಗದ ಸ್ವರೂಪ ಮತ್ತು ಸ್ಥಿತಿ ಬದಲಾಗಲಿದೆಯೆ?. ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಕೈಯಲ್ಲಿನ ಅಸ್ತ್ರಗಳನ್ನಾಗಿ ಮಾಡಿಕೊಂಡಿರೋ ಬಿಜೆಪಿ ಸರ್ಕಾರ, ಈಗ ಚುನಾವಣಾ ಆಯೋಗವನ್ನೂ ಸ್ವಾಧೀನ ಮಾಡಿಕೊಳ್ಳಲಿದೆಯೆ?.

ಹೀಗಾದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬುದು ಏನಾಗಲಿದೆ? ಪ್ರಜಾಪ್ರಭುತ್ವದ ಮಹತ್ವದ ವ್ಯವಸ್ಥೆಯೊಂದು ಅಲ್ಲೋಲ ಕಲ್ಲೋಲವಾಗಿ ಬಿಡುವುದೆ?. ಎದುರಲ್ಲಿಯೇ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರವನ್ನು ಪೂರ್ತಿ ಲಾಭ ಪಡೆಯಲು ಬಳಸಲಿದೆಯೆ?. ಇಂಥ ಪ್ರಶ್ನೆಗಳು ಮತ್ತು ಆತಂಕಕ್ಕೆ ಎಡೆ ಮಾಡಿಕೊಟ್ಟಿರುವುದು ಕೇಂದ್ರ ಸರ್ಕಾರದ ಹೊಸದೊಂದು ಮಸೂದೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ನೇಮಕವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮಸೂದೆ ಅದು. ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಮಸೂದೆ-2023 ಅನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಅಂದ್ರೆ ಸಿಜೆಐ ಅವರನ್ನು ಹೊರಗಿಡುವುದೇ ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ ಎಂಬುದು ಸ್ಪಷ್ಟವಾಗಿದೆ. ಆ ಮೂಲಕ ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ್ದೇ ಪರಮಾಧಿಕಾರವಾಗುವ ಹಾಗೆ ಈ ಮಸೂದೆ ಇದೆಯೆಂಬುದು ಗೊತ್ತಾಗುತ್ತದೆ. ಪ್ರತಿಪಕ್ಷಗಳು ತಕರಾರು ಎತ್ತಿರುವುದು ಕೂಡ ಅದೇ ಕಾರಣಕ್ಕೆ.

ಚುನಾವಣಾ ಆಯುಕ್ತರನ್ನು ಹೇಗೆ ನೇಮಕ ಮಾಡಬೇಕು ಎಂಬುದನ್ನು ವಿವರಿಸುವ ಯಾವುದೇ ಕಾನೂನು ಇರದ ಕಾರಣ, ನೇಮಕದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಆಗುತ್ತಲೇ ಇರುತ್ತಿತ್ತು. 2022ರ ನವೆಂಬರ್ನಲ್ಲಿ ಅರುಣ್ ಗೋಯಲ್ ಅವರನ್ನು ತರಾತುರಿಯಲ್ಲಿ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದಾಗ ಆಕ್ಷೇಪ ವ್ಯಕ್ತವಾಗಿ, ಅದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈ ಸಂಬಂಧ ಕಾನೂನು ರಚನೆಯಾಗುವವರೆಗೂ ಆಯ್ಕೆ ಸಮಿತಿ ಅಸ್ತಿತ್ವದಲ್ಲಿರಲಿದ್ದು, ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಆ ಸಮಿತಿಯಲ್ಲಿರುತ್ತಾರೆ ಎಂದು ಹೇಳಿತ್ತು.

ಆದರೆ, ಅದಾಗಿ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಈ ಮಸೂದೆ, ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೇ ಹೊರಗಿಟ್ಟಿದೆ. ಸಿಜೆಐ ಬದಲಿಗೆ, ಪ್ರಧಾನಿ ಶಿಫಾರಸು ಮಾಡುವ ಕೇಂದ್ರ ಸಂಪುಟದ ಸಚಿವರೊಬ್ಬರು ಸದಸ್ಯರಾಗುವುದಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲಿಗೆ ಕೇಂದ್ರ ಸರ್ಕಾರಕ್ಕೇ ಹೆಚ್ಚಿನ ಅಧಿಕಾರ ಇರುವ ಹಾಗೆ ಮಾಡಲಾಗಿದೆ. ಮಸೂದೆಯಲ್ಲಿರುವ ಹಲವು ಸೆಕ್ಷನ್ಗಳು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವೇ ಮುಖ್ಯವಾಗುವುದನ್ನು ಸೂಚಿಸುತ್ತವೆ.

ಸುಪ್ರೀಂ ಕೋರ್ಟ್ ಸೂಚಿಸಿದ್ದ ಸಮಿತಿಯಲ್ಲಿ ಸರ್ಕಾರದ ಪರವಾಗಿ ಪ್ರಧಾನಿ, ಪ್ರತಿಪಕ್ಷಗಳ ಪರವಾಗಿ ಪ್ರತಿಪಕ್ಷ ನಾಯಕ, ಆಡಳಿತ ಮತ್ತು ವಿರೋಧ ಪಕ್ಷ ಎರಡಕ್ಕೂ ಸೇರದವರಾಗಿ ಸಿಜೆಐ ಇರುತ್ತಿದ್ದರು. ಆದರೆ, ಸರ್ಕಾರ ಈಗ ರೂಪಿಸಿರುವ ಮಸೂದೆಯಲ್ಲಿ ಸರ್ಕಾರದ ಪರವಾಗಿ ಇಬ್ಬರು ಇರಲು ಅವಕಾಶವಾಗಿದೆ. ಪ್ರತಿಪಕ್ಷದಿಂದ ಒಬ್ಬರು ಮಾತ್ರ ಇರಲಿದ್ದು, ಸಮಿತಿಯ ನಿರ್ಧಾರ ಸರ್ಕಾರದ ಕಡೆಯೇ ಇರುವ ಸಾಧ್ಯತೆ ಹೆಚ್ಚು.

ಪ್ರತಿಪಕ್ಷ ನಾಯಕನ ಮಾತಿಗೆ ಮನ್ನಣೆ ಸಿಗದೆ ಹೋಗಲೂ ಬಹುದು.

ಇನ್ನು ಮಸೂದೆ ಯಾವ ರೀತಿಯಿದೆಯೆಂದರೆ, ಎಲ್ಲವೂ ಕಡೆಗೆ ಕೇಂದ್ರ ಸರ್ಕಾರದ ಕೈಯಲ್ಲಿಯೇ ಇರುವ ಹಾಗೆ ಅದರ ಸೆಕ್ಷನ್ಗಳನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಕ್ಕಾಗಿ ಐವರನ್ನು ಶಿಫಾರಸು ಮಾಡುವ ಅಧಿಕಾರವನ್ನು ಈ ಮಸೂದೆ ಶೋಧ ಸಮಿತಿಗೆ ನೀಡುತ್ತದೆ.

ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದ ಈ ಸಮಿತಿಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿ ರ್ಯಾಂಕ್ನ ಇಬ್ಬರು ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಚುನಾವಣಾ ಕರ್ತವ್ಯಗಳು ಮತ್ತು ಚುನಾವಣೆ ಆಯೋಜಿಸುವ ಅರಿವು, ಅನುಭವವುಳ್ಳ ಐವರು ನಿವೃತ್ತ ಅಧಿಕಾರಿಗಳನ್ನು ಈ ಶೋಧ ಸಮಿತಿ ಶಿಫಾರಸು ಮಾಡುತ್ತದೆ. ಇವರಲ್ಲಿ ಸೂಕ್ತ ಎನಿಸಿದವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡುತ್ತದೆ.

ಆದರೆ, ಇಲ್ಲಿ ಮತ್ತೂ ಒಂದು ವಿಚಾರವಿದೆ. ಶೋಧ ಸಮಿತಿ ಶಿಫಾರಸು ಮಾಡಿದ ವ್ಯಕ್ತಿಗಳನ್ನು ತಿರಸ್ಕರಿಸಿ, ಬೇರೆಯೇ ವ್ಯಕ್ತಿಗಳನ್ನು ಚುನಾವಣಾ ಆಯುಕ್ತರನ್ನಾಗಿ ಮಾಡುವ ಅಧಿಕಾರವೂ ಆಯ್ಕೆ ಸಮಿತಿಗಿದೆ. ಅಲ್ಲಿಗೆ ಶೋಧ ಸಮಿತಿ ಉದ್ದೇಶ, ಶ್ರಮ ಎಲ್ಲವೂ ವ್ಯರ್ಥವಾಗಲೂ ಬಹುದು. ಇದಕ್ಕಿಂತಲೂ ಹೆಚ್ಚಾಗಿ, ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಹುದ್ದೆಗಳಿಗೆ ಅರ್ಹತೆಗಳೇನು ಎಂಬುದು ಕೂಡ ಈ ಮಸೂದೆಯಲ್ಲಿ ಸ್ಪಷ್ಟವಿಲ್ಲ. ಎಲ್ಲವನ್ನೂ ಆಯ್ಕೆ ಸಮಿತಿಯ ವಿವೇಚನೆಗೇ ಬಿಡುವ ರೀತಿಯಲ್ಲಿ ಈ ಮಸೂದೆ ಇರುವ ಹಾಗಿದೆ.

ಮತ್ತು ಇಲ್ಲಿ ಆಯ್ಕೆ ಸಮಿತಿ ಎಂದರೆ ಕೇಂದ್ರ ಸರ್ಕಾರವೇ ಎಂಬಂತಿರುವುದೇ ಆತಂಕಕ್ಕೆ ಎಡೆ ಮಾಡಿಕೊಡುವ ಸಂಗತಿಯಾಗಿದೆ. ಅರುಣ್ ಗೋಯಲ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇದೇ ಮಾರ್ಚ್ 2ರ ತೀರ್ಪಿನಲ್ಲಿ ಹೇಳಿದ್ದ ಅಂಶಗಳನ್ನೊಮ್ಮೆ ಗಮನಿಸಬೇಕು:

ಚುನಾವಣಾ ಪರಿಶುದ್ಧತೆ ಕಾಪಾಡಿಕೊಳ್ಳಬೇಕಾದ ಅಗತ್ಯ. ಪ್ರಧಾನಿ ವಿರುದ್ಧ ದೂರು ಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂಥ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ. ಹೌದಪ್ಪಗಳನ್ನೇ ಆಯುಕ್ತರನ್ನಾಗಿ ನೇಮಕ ಮಾಡುತ್ತಿರುವಾಗ ಅವರು ಪ್ರಧಾನಿ ವಿರುದ್ದ ಕ್ರಮ ಕೈಗೊಳ್ಳುತ್ತಾರೆಯೆ?. ಪ್ರಜಾಪ್ರಭುತ್ವದ ನೆಲೆಗಟ್ಟಾಗಿರುವ ಚುನಾವಣೆಯನ್ನು ಆಯೋಗ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸದೇ ಹೋದರೆ ಆಡಳಿತ ಕೂಡ ಕಾನೂನು ಸಮ್ಮತವಾಗಿರುವುದು ಸಾಧ್ಯವಿಲ್ಲ. 2004ರ ನಂತರದ ಯಾವ ಮುಖ್ಯ ಚುನಾವಣಾ ಆಯುಕ್ತರೂ 6 ವರ್ಷಗಳ ಪೂರ್ಣಾವಧಿ ಪೂರೈಸಿಲ್ಲ. ಅಧಿಕಾರದಲ್ಲಿರುವ ಎಲ್ಲ ಪಕ್ಷಗಳೂ ನಿವೃತ್ತಿಯ ಅಂಚಿನಲ್ಲಿರುವ, ಹೆಚ್ಚು ಅಧಿಕಾರಾವಧಿ ದೊರೆಯದವರನ್ನೇ ಈ ಹುದ್ದೆಗೆ ನೇಮಿಸಿವೆ. ಮುಖ್ಯ ಚುನಾವಣಾ ಆಯುಕ್ತರಾಗುವವರು ರಾಜಕೀಯ ಪ್ರಭಾವಗಳಿಂದ ಹೊರತಾಗಿ ಮತ್ತು ಸ್ವತಂತ್ರರಾಗಿರಬೇಕು.

ಚುನಾವಣಾ ಆಯೋಗ ದುರ್ಬಲವಾಗಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿತ್ತು. ಶೇಷನ್ ಅಂಥವರು ಈ ಹುದ್ದೆಗೆ ಬರಬೇಕಿರುವುದರ ಅಗತ್ಯವನ್ನು ಅದು ಪ್ರತಿಪಾದಿಸಿತ್ತು. ಆದರೆ, ಹೊಸ ಮಸೂದೆ ಅಂಥ ಯಾವ ಆಶಯಗಳನ್ನೂ ಪೂರೈಸುವುದಿಲ್ಲ ಮತ್ತು ಅವೆಲ್ಲವನ್ನೂ ಉಲ್ಲಂಘಿಸುತ್ತದೆ ಎಂಬುದು ಸ್ಪಷ್ಟ.

ಪ್ರತಿಪಕ್ಷಗಳು ಈ ಮಸೂದೆ ಹೇಗೆ ಮುಂಬರುವ ಚುನಾವಣೆಗಳಲ್ಲಿ ಕೇಂದ್ರ ಸರ್ಕಾರದ ಕೈಯಲ್ಲಿನ ಅಸ್ತ್ರವಾಗಲಿದೆ ಎಂಬುದರ ಬಗ್ಗೆಯೇ ಬೊಟ್ಟು ಮಾಡುತ್ತಿವೆ. ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಮುಂದಿನ ಫೆಬ್ರುವರಿಯಲ್ಲಿ ನಿವೃತ್ತರಾಗಲಿದ್ದಾರೆ, ಮಾರ್ಚ್ನಲ್ಲಿ ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಹೀಗಾಗಿಯೇ, ಚುನಾವಣಾ ಆಯೋಗವನ್ನು ಸರ್ಕಾರದ ಕೈಗೊಂಬೆಯಾಗಿಸಲಿರುವ ಈ ಮಸೂದೆ, ಆಯೋಗದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಮೋದಿ ಉದ್ದೇಶವನ್ನು ಈಡೇರಿಸಲಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ಮಾತನಾಡುವವರು, ನಿಜವಾಗಿಯೂ ಕಳಕಳಿ ಇದ್ದಿದ್ದರೆ, ಸುಪ್ರೀಂ ಕೋರ್ಟ್ ಸೂಚಿಸಿದ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳಬಹುದಿತ್ತು. ಆಯುಕ್ತರ ನೇಮಕದಲ್ಲಿ ಅದು ನಿಷ್ಪಕ್ಷಪಾತಿ ವ್ಯವಸ್ಥೆಯಾಗಿತ್ತು.

ಆದರೆ ಮೋದಿ ಸರ್ಕಾರಕ್ಕೆ ಅದು ಬೇಕಿಲ್ಲ. ಅದಕ್ಕೆ ಸಿಜೆಐ ಅವರನ್ನು ಹೊರಗಿಟ್ಟು, ತನ್ನ ಅಧಿಕಾರ ಚಲಾಯಿಸುವ ವ್ಯವಸ್ಥೆ ಬೇಕು. ಹಾಗಾಗಿಯೇ ಇಂಥದೊಂದು ಮಸೂದೆಯನ್ನು ರೂಪಿಸಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದ್ದ ಸುಪ್ರೀಂ ಕೋರ್ಟ್ ಸೂಚಿಸಿದ ವ್ಯವಸ್ಥೆ, ಆಯೋಗವನ್ನು ಅರ್ಥಪೂರ್ಣ ಸಂಸ್ಥೆಯಾಗಿಸುವ ಸಾಧ್ಯತೆಯಿತ್ತು. ಆದರೆ, ಪ್ರಜಾಪ್ರಭುತ್ವದ ಬಗ್ಗೆಯೇ ಗೌರವವಿಲ್ಲದವರು ಅಂಥ ಅರ್ಥಪೂರ್ಣ ವ್ಯವಸ್ಥೆಯನ್ನು ಉಳಿಸಿಕೊಳ್ಳುತ್ತಾರೆಂದು ನಿರೀಕ್ಷಿಸುವುದಾದರೂ ಹೇಗೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News