ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ತೆರೆದುಕೊಳ್ಳಬೇಕಾದ ಕಾಂಗ್ರೆಸ್ ನಾಯಕರು

ಮೂಲತಃ ಸೈದ್ಧಾಂತಿಕವಾಗಿ ‘ಸೆಂಟರ್ ಲೆಫ್ಟ್’ ಆಗಿ ನೆಲೆಸಿರುವ ಕಾಂಗ್ರೆಸ್ಗೆ ಮತ್ತೊಮ್ಮೆ ತಾನು ಕಳೆದುಕೊಂಡಿರುವ ಚುನಾವಣಾ ಪಾರಮ್ಯವನ್ನು ಮರುಗಳಿಸಿಕೊಳ್ಳಲು ಸಮಾಜವಾದಿ ಚಿಂತನೆಗಳನ್ನು ಸಾಮಾಜಿಕ ನ್ಯಾಯದ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ತೀವ್ರವಾಗಿ ಮತ್ತು ಸೃಜನಾತ್ಮಕವಾಗಿ ಮರಳುವುದು ಅನಿವಾರ್ಯ ಎಂಬಂತೆ ಕಂಡುಬರುತ್ತಿದೆ. ಈ ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಬಲು ಆಕ್ರಮಣಕಾರಿಯಾಗಿ ಕಾಂಗ್ರೆಸ್ನ ರಾಜಕಾರಣವನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸುತ್ತಿದ್ದಾರೆ. 2024ರ ಚುನಾವಣೆಯನ್ನು ಮುಂದಿಟ್ಟುಕೊಂಡು ಆಕ್ರಮಣಕಾರಿಯಾಗಿ ಇರುವುದು ಅನಿವಾರ್ಯ ಕೂಡಾ.

Update: 2024-03-04 06:32 GMT

ದಲ್ಲಿ ಸಾಮಾಜಿಕ ಪರಿವರ್ತನೆ ಮತ್ತು ನ್ಯಾಯಕ್ಕಾಗಿ ನಡೆದ ರಾಜಕಾರಣದ ಹಾಗೂ ಚಳವಳಿಗಳ ಒಂದು ದೊಡ್ಡ ಇತಿಹಾಸವೇ ಇದೆ. ಸಮಾಜೋ ಸಾಂಸ್ಕೃತಿಕ ರಾಜಕಾರಣ ಗೌತಮ ಬುದ್ಧನಿಂದ ಆರಂಭವಾಗಿ ಕಬೀರ್ ತನಕ ವ್ಯಾಪಿಸಿದ್ದರೆ; ಸಮಾಜೋ ರಾಜಕಾರಣ ಜ್ಯೋತಿ ಬಾಫುಲೆ, ಶಾಹು ಮಹಾರಾಜರಿಂದ ಆರಂಭವಾಗಿ ಡಾ. ಅಂಬೇಡ್ಕರ್ ತನಕ ವ್ಯಾಪಿಸಿದೆ. ಇಂತಹ ಸಾಮಾಜಿಕ ನ್ಯಾಯದ ರಾಜಕಾರಣ ಭಾರತವನ್ನು ಆಮೂಲಾಗ್ರವಾಗಿ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.

ಒಂದೆಡೆ ‘ಇಂಡಿಯಾ’ ಮೈತ್ರಿಕೂಟದ ರಾಜ್ಯ ಸರಕಾರಗಳನ್ನು ಕೆಡವಲಾಗುತ್ತಿದೆ. ಜಾರ್ಖಂಡ್ನಂತಹ ಕೆಲವೆಡೆ ಸರಕಾರವನ್ನು ಅಸ್ಥಿರಗೊಳಿಸುವ ಯತ್ನವನ್ನು ಮಾಡಲಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ‘ಇಂಡಿಯಾ’ ಮೈತ್ರಿಕೂಟ 2024ರ ಚುನಾವಣೆಯನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ನ್ಯಾಯವನ್ನು ತಮ್ಮ ರಾಜಕಾರಣದ ಕೇಂದ್ರವನ್ನಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬಂತೆ ಕಂಡುಬರುತ್ತಿದೆ. ಇದನ್ನು ಗುರುತಿಸುವ ಯುವ ವಿದ್ವಾಂಸ ಸೂರಜ್ ಯೆಂಗ್ದೆ; ರಾಹುಲ್ ಗಾಂಧಿ ದಲಿತ ಜನರ ಮನೋಭಾವಗಳು ಮತ್ತು ಚಿಂತಕರು, ನಾಯಕರುಗಳಿಂದ ಇತ್ತೀಚೆಗೆ ತುಂಬಾ ಪ್ರಭಾವಿತರಾಗಿದ್ದಾರೆ ಎಂದು, ಅದರಲ್ಲೂ ಬಿಎಸ್ಪಿ ಪಕ್ಷ ಮಾಡಿದ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ತೀವ್ರವಾದ ಲೆವೆಲ್ ಹೋಗಿ ವಾದಿಸುತ್ತಾರೆ. (ನೋಡಿ: ಸೂರಜ್ ಯೆಂಗ್ಡೆ: ವೈ ರಾಹುಲ್ ಗಾಂಧಿಸ್ ಪಾಲಿಟಿಕ್ಸ್ ದ್ಯಾಟ್ ಆಫ್ ಬಿಎಸ್ಪಿ; ದ ಇಂಡಿಯನ್ ಎಕ್ಸ್ಪ್ರೆಸ್, 14 ಫೆಬ್ರವರಿ, 2024). ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ನಂತರ ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಕಾಂಗ್ರೆಸ್ ಹೆಚ್ಚು ಹೆಚ್ಚಾಗಿ ಎತ್ತುತ್ತಿದೆ. ರಾಹುಲ್ ಗಾಂಧಿ ಅವರಂತೂ ಸಾಮಾಜಿಕ ನ್ಯಾಯವನ್ನು ಒಂದು ಸಮಾಜೋ-ರಾಜಕೀಯ ಚಳವಳಿಯನ್ನಾಗಿಸಲು ಜನರ ನಡುವೆ ಪ್ರಯತ್ನಪಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ನಲ್ಲಿನ ಈ ಸಾಮಾಜಿಕ ನ್ಯಾಯದ ರಾಜಕಾರಣದ ತಾರ್ಕಿಕತೆಯನ್ನು ಹಾಗೂ ಸಮಾಜ ಕಲ್ಯಾಣ ರಾಜಕಾರಣಕ್ಕೆ ಮರಳಿದ್ದನ್ನು ಶೋಧಿಸಲು ಈ ಲೇಖನ ಪ್ರಯತ್ನ ಮಾಡುತ್ತದೆ.

ಭಾರತದ ಸಂವಿಧಾನ ಸ್ಪಷ್ಟವಾಗಿ ಒಂದು ಸಾಮಾಜಿಕ ಗಣರಾಜ್ಯ ಹಾಗೂ ಪಾಲಿಟಿಯ ಸ್ಥಾಪನೆಯನ್ನು ನಿರ್ದೇಶಿಸುತ್ತದೆ. ಅದರಲ್ಲೂ ರಾಜ್ಯ ನಿರ್ದೇಶಕ ತತ್ವಗಳು ಸಾಮಾಜಿಕ ನ್ಯಾಯ ಆಧಾರಿತ ಒಂದು ರಾಜಕೀಯ ವ್ಯವಸ್ಥೆ ಹಾಗೂ ಸರಕಾರಗಳು ಕಾರ್ಯನಿರ್ವಹಿಸಬೇಕೆಂದು ಬಲವಾಗಿ ನಿರ್ದೇಶನಗಳನ್ನು ನೀಡಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಾಮಾಜಿಕ ನ್ಯಾಯವು ಭಾರತ ರಾಜಕಾರಣದ ಪ್ರಮುಖ ಆಧಾರ ಸ್ತಂಭ. ಈ ಹಿನ್ನೆಲೆಯಲ್ಲಿಯೇ ಇಲ್ಲಿನ ‘ಪಕ್ಷ ರಾಜಕಾರಣ’ ವಿಕಸನಗೊಂಡಿರುವಂತಹದ್ದು. ಆದ್ದರಿಂದ ಸಾಮಾಜಿಕ ನ್ಯಾಯದ ಪರ ಮತ್ತು ವಿರೋಧಿ ಸಿದ್ಧಾಂತಗಳು ಪಕ್ಷಗಳನ್ನು ಹಾಗೂ ಚುನಾವಣಾ ರಾಜಕಾರಣವನ್ನು ಪ್ರಭಾವಿಸಿ, ನಿಯಂತ್ರಣ ಮಾಡುತ್ತಿವೆ. ಸಾರ್ವಜನಿಕ ವಲಯ, ಸಾಮಾಜಿಕ ನ್ಯಾಯ ಹಾಗೂ ಖಾಸಗಿ ಮಾಲಕತ್ವದ ನಡುವಿನ ರಾಜಕಾರಣವೇ ಭಾರತದ ಸಾರ್ವಜನಿಕ ಜೀವನದ ಅಡಿಪಾಯವಾಗಿದೆ. ಇಲ್ಲಿ ಪ್ರಭುತ್ವದ ಜೊತೆಗೆ ಸಾರ್ವಜನಿಕ ವಲಯ, ಸರಕಾರಿ ಉದ್ದಿಮೆಗಳು, ಶೋಷಿತರು ಹಾಗೂ ಸಾಮಾಜಿಕ ನ್ಯಾಯ ಗುರುತಿಸಿಕೊಂಡರೆ; ಖಾಸಗಿ ವಲಯ ಇಲ್ಲವೇ ಮಾಲಕತ್ವವು ಪ್ರಭುತ್ವವು ಮಾಡುವ ಸಾಮಾಜಿಕ ನ್ಯಾಯದ ನೀತಿಗಳನ್ನು, ಕಾರ್ಯಕ್ರಮಗಳನ್ನು ಸದಾ ಸಂಶಯದಿಂದ ನೋಡಿ ಸದಾ ಪ್ರಭುತ್ವ ವಿರೋಧಿಯಾಗಿ ಇರಲು ಬಯಸುತ್ತದೆ ಮತ್ತು ತನ್ನ ಅಜೆಂಡಾಗಳ ಪರವಾಗಿ ಪ್ರಭುತ್ವವನ್ನು ಬಗ್ಗಿಸಲು ಸನ್ನದ್ಧವಾಗಿರುತ್ತದೆ. ಈ ಗುಂಪಿನಲ್ಲಿ ಭೂ ಮಾಲಕತ್ವ, ಊಳಿಗಮಾನ್ಯ ವ್ಯವಸ್ಥೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ವ್ಯವಸ್ಥೆ ಅದರಲ್ಲೂ ಜಾತಿ ವ್ಯವಸ್ಥೆ ಮುಖ್ಯವಾಗಿ ಒಳಗೊಂಡಿರುತ್ತವೆ. ಹೀಗೆ ಈ ಎರಡು ವ್ಯವಸ್ಥೆಯ ನಡುವಿನ ಸೈದ್ಧಾಂತಿಕ ಹಾಗೂ ಅಧಿಕಾರದ ಸಂಘರ್ಷವೇ ಭಾರತದ ರಾಜಕಾರಣ ಆಗಿದೆ. ಆದರೆ ಪ್ರಭುತ್ವ ಮತ್ತು ಅಧಿಕಾರ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಅದರ ಶಕ್ತಿಗಳು ಇತ್ತೀಚಿನವರೆಗೂ ಪ್ರಾಬಲ್ಯವನ್ನು ಸಾಧಿಸಿದ್ದವು. ಇತ್ತೀಚಿನ ದಶಕಗಳಲ್ಲಿ ಸಾಮಾಜಿಕ ನ್ಯಾಯದ ರಾಜಕಾರಣ ನೇಪಥ್ಯಕ್ಕೆ ಸರಿಯುವಂತಾಯಿತು. ರಾಜಕೀಯ ವಿಜ್ಞಾನಿ ಕ್ರಿಸ್ಟೋಫರ್ ಜೆಫರ್ಲಾಟ್ ‘‘ಪ್ರಭುತ್ವ ಬಲಹೀನಗೊಂಡಿದ್ದೇ ಸಾಮಾಜಿಕ ಕಲ್ಯಾಣದ ರಾಜಕಾರಣ ದುರ್ಬಲಗೊಳ್ಳಲು ಕಾರಣ’’ ಎಂಬುದಾಗಿ ವಿಶ್ಲೇಷಿಸಿದ್ದಾನೆ. ಈ ಹಿನ್ನೆಲೆಯಲ್ಲಿಯೇ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣದ ರಾಜಕೀಯವನ್ನು ಹಲವು ದಶಕಗಳ ಕಾಲ ಬಲು ಪ್ರಬಲವಾಗಿ ನಡೆಸಿದ್ದ ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಹಿನ್ನ್ನಡೆ ಅನುಭವಿಸುವಂತಾಯಿತೇ ಎಂಬ ಸಂಶಯ ಎಲ್ಲರನ್ನೂ ಕಾಡತೊಡಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಾಂಗ್ರೆಸ್ ಒಳಗೆ ಸೋಷಿಯಲಿಸ್ಟ್ ಕಾಂಗ್ರೆಸ್ ಗುಂಪು ಬಲು ಪ್ರಬಲ ಆಗಿ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕಾಂಗ್ರೆಸ್ ಅಧಿವೇಶನಗಳ ಸಂದರ್ಭದಲ್ಲಿ ಅಲ್ಲೇ ಸಮಾಂತರವಾಗಿ ‘ಸಮಾಜವಾದಿ ಕಾಂಗ್ರೆಸಿಗರು’ ತಮ್ಮ ಅಧಿವೇಶನವನ್ನು ಕೂಡಾ ನಡೆಸುತ್ತಿದ್ದರು. ಇಂತಹ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಕಾಂಗ್ರೆಸ್ ಒಳಗೆ ಇತ್ತು. ಈ ಮೂಲಕ ಸಮಾಜವಾದಿ ಕಾಂಗ್ರೆಸಿಗರು ಮಾತೃ ಕಾಂಗ್ರೆಸ್ನ ಮೇಲೆ ಸಾಮಾಜಿಕ ನ್ಯಾಯದ ನೀತಿಗಳನ್ನು ಒಳಗೊಳ್ಳಲು ಒತ್ತಡ ಹೇರುತ್ತಿದ್ದರು ಎಂಬುದಾಗಿ ಕಂಡು ಬರುತ್ತದೆ. ಸ್ವಾತಂತ್ರ್ಯ ಬಂದ ನಂತರ ಸಂವಿಧಾನದ ಮುನ್ನುಡಿಯಲ್ಲಿಯೇ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಜನರಿಗೆ ದಯಪಾಲಿಸುವ ಕುರಿತು ಸ್ಪಷ್ಟವಾದ ಉದ್ದೇಶಗಳ ನಿರ್ಣಯವನ್ನು ಜವಾಹರ ಲಾಲ್ ನೆಹರೂ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಇದನ್ನೇ ಮುಂದೆ ಡಾ. ಅಂಬೇಡ್ಕರ್ ಒಂದು ತಾರ್ಕಿಕ ಹಂತಕ್ಕೆ ಕೊಂಡುಹೋಗಿ ಪೀಠಿಕೆಗೆ ಸ್ಫಟಿಕದ ಹೊಳಪನ್ನು ನೀಡಿ ಸಾಮಾಜಿಕ ನ್ಯಾಯವನ್ನು ಸಾಧಿಸುವ ಗಣರಾಜ್ಯದ ಮುತುವರ್ಜಿಯನ್ನು ಎತ್ತಿ ತೋರಿಸುತ್ತಾರೆ ಮತ್ತು ಅದುವೇ ಗಣರಾಜ್ಯದ ತಾತ್ವಿಕ ಅಡಿಪಾಯ ಕೂಡಾ ಆಗಿ ಬಿಡುತ್ತದೆ. ಮುಂದೆ ಇದೇ ಅಡಿಪಾಯದ ಮೇಲೆ ಶೋಷಿತರಿಗೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ಪ್ರಾತಿನಿಧ್ಯ, ಅಸ್ಪಶ್ಯತೆಯ ನಿವಾರಣೆ, ಭೂ ಸುಧಾರಣೆ, ಉಳುವವನೇ ಹೊಲದೊಡೆಯ, ಭೂ ರಹಿತರಿಗೆ ಭೂಮಿ ಹಂಚಿಕೆ, ವಸತಿ ರಹಿತರಿಗೆ ಮನೆ ನಿರ್ಮಾಣ, ವಿದ್ಯುತ್ ಮತ್ತು ನೀರು ಪೂರೈಕೆ, ರಸ್ತೆ ನಿರ್ಮಾಣ, 20 ಅಂಶಗಳ ಕಾರ್ಯಕ್ರಮ ಜಾರಿ, ಸಾಲಮೇಳ, ಬ್ಯಾಂಕುಗಳ ರಾಷ್ಟ್ರೀಕರಣ, ಜೀತ ವಿಮುಕ್ತಿ ಯೋಜನೆ, ಅಸ್ಪಶ್ಯತೆಯ ರದ್ದತಿ, ಜನತಾ ಮನೆ ಯೋಜನೆ, ಉದ್ಯೋಗ ಭರವಸೆ ಯೋಜನೆ (ದೇವರಾಜ ಅರಸು), ಗ್ರಾಮೀಣ ಕೃಪಾಂಕ ಯೋಜನೆ (ಬಂಗಾರಪ್ಪ) ಮುಂತಾದ ಯೋಜನೆಗಳನ್ನು ಕಾಂಗ್ರೆಸ್ ಮುತುವರ್ಜಿ ವಹಿಸಿಕೊಂಡು ರಾಷ್ಟ್ರೀಯ ಮತ್ತು ಸ್ಥಳೀಯ ಸ್ತರದಲ್ಲಿ ಜಾರಿ ಮಾಡಿತ್ತು.

1991ರ ಸಂದರ್ಭದಲ್ಲಿ ಜಾರಿಯಾದ ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣದ ನೀತಿಗಳು ಸಾಮಾಜಿಕ ನ್ಯಾಯದ ರಾಜಕಾರಣವನ್ನು ಮರೆಗೆ ಸರಿಸಿದವು ಎಂದು ಹೇಳಲಾಗುತ್ತದೆ. ಇದರಿಂದ ಒಟ್ಟಾರೆಯಾಗಿ, ಸಾಮಾಜಿಕ ನ್ಯಾಯದ ಶಕ್ತಿಗಳು, ಚಳವಳಿಗಳು, ಲಾಬಿ ದುರ್ಬಲಗೊಂಡವು ಎಂದು ಅಕಡಮಿಕ್ ವಲಯದಲ್ಲಿ ಸಾಮಾನ್ಯವಾಗಿ ನಂಬಲಾಗಿದೆ. ಮುಂದೆ 2005ರಿಂದ 2014ರವರೆಗಿನ ಮನಮೋಹನ್ ಸಿಂಗ್ ಅವರ ಸರಕಾರದ ಆಡಳಿತ ಅವಧಿಯಲ್ಲಿ ಹಲವಾರು ಸಾಮಾಜಿಕ ಕಲ್ಯಾಣದ ನೀತಿಗಳನ್ನು ಹಾಗೂ ಯೋಜನೆಗಳನ್ನು ಮರು ಜಾರಿಗೆ ತಂದದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದರಲ್ಲಿ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು ಕಾಯ್ದೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಆಹಾರಕ್ಕಾಗಿ ಉದ್ಯೋಗ ಯೋಜನೆ, ರೂರಲ್ ಹೆಲ್ತ್ ಮಿಷನ್, ನೇರ ನಗದು ವರ್ಗಾವಣೆ ಯೋಜನೆ, ನಿರ್ಮಲ್ ಭಾರತ್ ಅಭಿಯಾನ (ಈಗಿನ ಸ್ವಚ್ಛ ಭಾರತ್ ಯೋಜನೆ), ಸರ್ವ ಶಿಕ್ಷಾ ಅಭಿಯಾನ, ಮಿಡ್ ಡೇ ಮೀಲ್ (ಬಿಸಿಯೂಟ), ಅಗತ್ಯ ವಸ್ತುಗಳ ಕಾಯ್ದೆ, ರೈತರ ಕಮಿಷನ್, ಆಹಾರ ಭದ್ರತಾ ಕಾಯ್ದೆ, ಗ್ರಾಮೀಣ ಬಡವರ ಸಾಲ ಮನ್ನಾ ಯೋಜನೆ, ಮಹಿಳೆಯರಿಗೆ, ಮಕ್ಕಳಿಗೆ ಪೌಷ್ಠಿಕ ಆಹಾರ ಯೋಜನೆ, ಅಗ್ಗದ ಬಡ್ಡಿ ದರದಲ್ಲಿ ಸಾಲ ಯೋಜನೆ ಇವೇ ಮುಂತಾದ ಯೋಜನೆಗಳು ಪ್ರಮುಖವಾದವು.


ಸಿದ್ದರಾಮಯ್ಯರ ಗ್ಯಾರಂಟಿ ಯೋಜನೆಗಳು:

ಸಿದ್ದರಾಮಯ್ಯರ ನೇತೃತ್ವದ ಸರಕಾರ (2013-18) ಇಂದಿರಾ ಕ್ಯಾಂಟೀನ್ ಯೋಜನೆ , ಗರ್ಭಿಣಿಯರಿಗೆ ಮಾತೃಪೂರ್ಣ ಯೋಜನೆ ಈ ಸಾಮಾಜಿಕ ನ್ಯಾಯ ಹಾಗೂ ಕಲ್ಯಾಣದ ತತ್ವಗಳನ್ನು ಎತ್ತಿಹಿಡಿದ ಯೋಜನೆಗಳಾಗಿ ತೋರಿ ಬರುತ್ತಿವೆ. ಮತ್ತೆ 2023 ವಿಧಾನಸಭಾ ಚನಾವಣೆಯಲ್ಲಿ ಸಿದ್ದರಾಮಯ್ಯರ ಈ ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಸಹಾಯ ಮಾಡಿದ್ದು ಸುಳ್ಳಲ್ಲ. ಅನ್ನ ಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಸ್ತ್ರೀ ಶಕ್ತಿ ಮುಂತಾದ ಮುಖ್ಯ ಯೋಜನೆಗಳು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ತತ್ವವನ್ನು ಒಂದು ತಾರ್ಕಿಕ ಹಂತಕ್ಕೆ ಕೊಂಡೋದದ್ದು ಅಲ್ಲದೆ; ಕಾಂಗ್ರೆಸ್ನ ಸಂಕಷ್ಟ ಸಮಯದಲ್ಲಿ ಚುನಾವಣಾ ವಿಜಯಕ್ಕೆ ಕಾರಣವಾದದ್ದು ಕೂಡಾ ಗಮನೀಯ ಅಂಶ.

ಈ ಎಲ್ಲಾ ಹಿನ್ನೆಲೆಗಳಲ್ಲಿ ರಾಹುಲ್ ಗಾಂಧಿ ‘ಭಾರತ ಜೋಡೊ ಯಾತ್ರೆ’ ಮತ್ತು ‘ಭಾರತ ಜೋಡೊ ನ್ಯಾಯ ಯಾತ್ರೆ’ ನಡೆಸುತ್ತಿದ್ದಾರೆ. ಈ ಹಿಂದಿನ ಭಾರತ ಜೋಡೊ ಯಾತ್ರೆಯು ಜನ ಸಂಘಟನಾ ಯಾತ್ರೆ ಆಗಿದ್ದರೆ; ಈ ಭಾರತ ನ್ಯಾಯ ಯಾತ್ರೆ ನೀತಿ ರಚನಾ ಇಲ್ಲವೇ ಸಂಕಥನ ರೂಪಿಸುವಿಕೆಯ ಯಾತ್ರೆ ಎಂಬಂತೆ ಕಂಡು ಬರುತ್ತಿದೆ. ಇದರ ಭಾಗವಾಗಿ ರಾಹುಲ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟು ಆದರಲ್ಲೂ ಸ್ವಲ್ಪ ಉಗ್ರವಾಗಿ ಕಂಡು ಬರುವಂತೆ ಅವುಗಳನ್ನು ಪ್ರತಿಪಾದಿಸುತ್ತಾ ಸಾಗುತ್ತಿದ್ದಾರೆ. ಮುಂದುವರಿದು ರಾಹುಲ್ ಪಾಂಚ್ ನ್ಯಾಯ್ ಎಂದು ವಿಸ್ತರಿಸಿ ಸಾಮಾಜಿಕ ನ್ಯಾಯವನ್ನು ಮರು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅನಿಸುತ್ತದೆ. ಈ ಕಾರಣಕ್ಕೆ ನ್ಯಾಯ ಯಾತ್ರೆ ಉದ್ದಕ್ಕೂ ದೇಶಕ್ಕೆ ಮತ್ತು ಕಾಂಗ್ರೆಸ್ಗೆ ಅತ್ಯಗತ್ಯವಾಗಿರುವ ಸಂಕಥನಗಳನ್ನು ಕಟ್ಟುತ್ತಾ ಸಾಗುತ್ತಿದ್ದಾರೆ. ಈ ಮೂಲಕ ಜನ ಸಾಮಾನ್ಯರ ಜೊತೆಗೆ ಒಂದು ವಿಶಿಷ್ಟವಾದ ಸಂಬಂಧ ಮತ್ತು ಸಂಪರ್ಕವನ್ನು ಸಾಧಿಸಲು ಯತ್ನಿಸುತ್ತಿರುವುದು ಮತ್ತು ಸಾಧಿಸುತ್ತಿರುವುದು ನಿಚ್ಚಳವಾಗಿ ಕಂಡುಬರುತ್ತಿದೆ. ಈ ಅರ್ಥದಲ್ಲಿ ರಾಹುಲ್ ಅವರು ಕೈಗೊಂಡ ಪ್ರಥಮ ಹಂತದ ಯಾತ್ರೆಯು ಜನರನ್ನು ಮೋಬಿಲೈಸ್ ಮಾಡುವಲ್ಲಿ ಜನರನ್ನು ತಲುಪುವಲ್ಲಿ ಯಶಸ್ವಿಯಾದರೆ; ಎರಡನೇ ಹಂತದ ಯಾತ್ರೆಯು ರಾಜಕೀಯ ಹಾಗೂ ನಾಗರಿಕ ವ್ಯವಸ್ಥೆಗಳನ್ನು ಮರು ವ್ಯಾಖ್ಯಾನಿಸಲು ಪ್ರಯತ್ನ ನಡೆಸುತ್ತಿರುವುದನ್ನು ನಿಚ್ಚಳವಾಗಿ ಮನಗಾಣಬಹುದು.

ಇನ್ನೊಂದು ಕಡೆ ಮಲ್ಲಿಕಾರ್ಜುನ ಖರ್ಗೆ ಕೂಡಾ ಪಕ್ಷ ರಾಜಕಾರಣದ ಮೇಲೆ ಸಾಮಾಜಿಕ ನ್ಯಾಯದ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಿ ಸಂಕಥನಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ನ್ಯಾಯವನ್ನು ಮುನ್ನಡೆಸುವ ಗ್ಯಾರಂಟಿ ಯೋಜನೆಗಳು ಚುನಾವಣಾ ವಿಜಯವನ್ನು ಕೂಡ ದಾಖಲಿಸಬಲ್ಲವು, ತಂದುಕೊಡಬಲ್ಲವು ಹಾಗೂ ಪ್ರಜಾಪ್ರಭುತ್ವವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಬಲ್ಲವು ಎಂಬುದಾಗಿ ಕರ್ನಾಟಕದ ಸಂದರ್ಭದಲ್ಲಿ (2023 ರ ಚುನಾವಣೆ ) ನಿರೂಪಿತವಾದದ್ದನ್ನು ಕಂಡುಕೊಂಡಿದ್ದಾರೆ.

ಮೂಲತಃ ಸೈದ್ಧಾಂತಿಕವಾಗಿ ‘ಸೆಂಟರ್ ಲೆಫ್ಟ್’ ಆಗಿ ನೆಲೆಸಿರುವ ಕಾಂಗ್ರೆಸ್‌ಗೆ ಮತ್ತೊಮ್ಮೆ ತಾನು ಕಳೆದುಕೊಂಡಿರುವ ಚುನಾವಣಾ ಪಾರಮ್ಯವನ್ನು ಮರುಗಳಿಸಿಕೊಳ್ಳಲು ಸಮಾಜವಾದಿ ಚಿಂತನೆಗಳನ್ನು ಸಾಮಾಜಿಕ ನ್ಯಾಯದ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ತೀವ್ರವಾಗಿ ಮತ್ತು ಸೃಜನಾತ್ಮಕವಾಗಿ ಮರಳುವುದು ಅನಿವಾರ್ಯ ಎಂಬಂತೆ ಕಂಡುಬರುತ್ತಿದೆ. ಈ ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಬಲು ಆಕ್ರಮಣಕಾರಿಯಾಗಿ ಕಾಂಗ್ರೆಸ್‌ನ ರಾಜಕಾರಣವನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸುತ್ತಿದ್ದಾರೆ. 2024ರ ಚುನಾವಣೆಯನ್ನು ಮುಂದಿಟ್ಟುಕೊಂಡು ಆಕ್ರಮಣಕಾರಿಯಾಗಿ ಇರುವುದು ಅನಿವಾರ್ಯ ಕೂಡಾ. ಅದಕ್ಕಿಂತಲೂ 2024ರ ಚುನಾವಣೆ ಭಾರತದಲ್ಲಿನ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದ ಅಳಿವು ಉಳಿವನ್ನು ನಿರ್ಧರಿಸುವ ಒಂದು ದೊಡ್ಡ ವಿದ್ಯಮಾನವಾಗಿರುವುದರಿಂದ ಸಾಮಾಜಿಕ ನ್ಯಾಯ, ಕಲ್ಯಾಣ ಹಾಗೂ ಪರಿವರ್ತನೆಯ ರಾಜಕಾರಣಕ್ಕೆ ಮರಳದೆ ಇರುವುದು ಕಾಂಗ್ರೆಸ್‌ಗೆ ಸಾಧ್ಯವೇ ಇಲ್ಲ ಎಂಬುದಾಗಿ ತೋರಿ ಬರುತ್ತದೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಸಮಾಜ ಪರಿವರ್ತನಾ ಚಳವಳಿಯಿಂದ ಪ್ರೇರೇಪಣೆಗೊಂಡು ಆಮೂಲಾಗ್ರವಾಗಿ ಪರಿವರ್ತನೆಗೊಳ್ಳಲು ತೆರೆದುಕೊಂಡಿದೆ ಎಂಬುದಾಗಿ ಸೂರಜ್ ಯೇಂಗ್ದೆ ತನ್ನ ಮಹತ್ವದ ಲೇಖನದಲ್ಲಿ ಧ್ವನಿಸಿರುವುದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ರಘು ಧರ್ಮಸೇನ

contributor

Similar News