ಕಾಂಗ್ರೆಸ್-ಎಸ್‌ಪಿ ಭಿನ್ನಮತ ‘ಇಂಡಿಯಾ’ ಮೈತ್ರಿಕೂಟಕ್ಕೆ ತೊಡಕಾಗುವುದೆ?

ಎಲ್ಲಾ ರೀತಿಯ ಅಹಂ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ‘ಇಂಡಿಯಾ’ ಮೈತ್ರಿಯನ್ನು ರಚಿಸಲಾಗಿದೆ. ಲೋಕಸಭೆಗೆ ಸ್ಥಾನಗಳನ್ನು ನಿರ್ಧರಿಸುವ ವಿಷಯಕ್ಕೆ ಬಂದಾಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರಂಥ ನಾಯಕರ ನಡುವೆ ಚರ್ಚೆ ನಡೆಯಲಿದೆ. ಆಗ ಈ ಜಗಳಗಳು ಮುಖ್ಯವಾಗುವುದಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯ.

Update: 2023-10-30 07:28 GMT

ಏನಾಗತೊಡಗಿದೆ ಇಂಡಿಯಾ ಒಕ್ಕೂಟದಲ್ಲಿ? ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ನೊಂದಿಗೆ ಅಸಮಾಧಾನಗೊಂಡಿದ್ದಾರೆಯೇ? ತಮ್ಮನ್ನು ಮೂರ್ಖರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸಮಾಜವಾದಿ ಪಕ್ಷ ಮಧ್ಯಪ್ರದೇಶದಲ್ಲಿ ಹೇಳಿಕೊಳ್ಳುವಂಥ ನೆಲೆಯುಳ್ಳ ಪಕ್ಷವಲ್ಲವಾದರೂ, ಅಖಿಲೇಶ್ ಯಾದವ್ ಅವರ ಅಸಮಾಧಾನ, ‘ಇಂಡಿಯಾ’ ಬಣದ ಪ್ರಮುಖ ಮಿತ್ರಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ವಿರುದ್ಧ ವ್ಯಕ್ತವಾಗಿರುವುದು ಒಕ್ಕೂಟದೊಳಗೆ ಕಳವಳಕ್ಕೆ ಕಾರಣವಾಗಿದೆ.

ಈ ಬಿಕ್ಕಟ್ಟು ಇಂಡಿಯಾ ಮೈತ್ರಿಕೂಟದೊಳಗಿನ ಸ್ಪಷ್ಟತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆಯೇ?

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಕಾಂಗ್ರೆಸ್‌ನ ಇತರ ನಾಯಕರು ರಾಜ್ಯದಲ್ಲಿ ಮೈತ್ರಿ ಒಪ್ಪಂದ ಮಾಡಿಕೊಳ್ಳದಿರುವುದು ರಾಷ್ಟ್ರಮಟ್ಟದ ಸಮೀಕರಣಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರೂ, ಅಖಿಲೇಶ್ ಯಾದವ್ ಅವರದು ಭಿನ್ನರಾಗ. ಮೈತ್ರಿ ಇಲ್ಲ ಎಂದಾದರೆ ಇಲ್ಲ ಎಂದು ಒಪ್ಪಿಕೊಳ್ಳುತ್ತೇವೆ ಎಂಬ ಅವರ ಮಾತಿನಲ್ಲಿ ಒಂದು ಬಗೆಯ ದೂರವನ್ನು ಕಾಯ್ದುಕೊಳ್ಳುವ ಧಾಟಿಯಿದೆ. ಸಾರ್ವತ್ರಿಕ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಳ್ಳಲು ಅವರು ಬಯಸಿದರೆ, ಸಮಯ ಬಂದಾಗ ನಾವು ನಿರ್ಧರಿಸುತ್ತೇವೆ. ಅವರು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೊ ಹಾಗೆ ನಮ್ಮ ಪ್ರತಿಕ್ರಿಯೆ ಇರುತ್ತದೆ ಎಂಬ ಅವರ ಮಾತುಗಳು ಇದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ.

‘‘ಲೋಕಸಭೆ ಚುನಾವಣೆಯಲ್ಲಿ ಮಾತ್ರ ಇಂಡಿಯಾ ಕೂಟದ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ತಿಳಿದಿದ್ದರೆ ನಾನು ಕಾಂಗ್ರೆಸ್ ನಾಯಕರ ಫೋನ್ ಕರೆಗಳನ್ನು ಸಹ ತೆಗೆದುಕೊಳ್ಳುತ್ತಿರಲಿಲ್ಲ’’ ಎಂದು ಅಖಿಲೇಶ್ ಸಿಟ್ಟು ವ್ಯಕ್ತಪಡಿಸಿದ್ದಾರೆ.

► ಏಕೆ ಇಂಥ ಬಿರುಕು?:

ಅಕ್ಟೋಬರ್ 15ರಂದು ಕಾಂಗ್ರೆಸ್ ತನ್ನ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಉಭಯ ಪಕ್ಷಗಳ ನಡುವಿನ ಈ ಬಿಕ್ಕಟ್ಟು ತಲೆದೋರಿದೆ. ಕಾಂಗ್ರೆಸ್ ಪಟ್ಟಿ ಬೆನ್ನಲ್ಲೇ ಸಮಾಜವಾದಿ ಪಕ್ಷ ಒಂಭತ್ತು ಅಭ್ಯರ್ಥಿಗಳನ್ನು ಹೆಸರಿಸಿತು. ಅವರಲ್ಲಿ ಐವರನ್ನು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿಸಲಾಗಿದೆ. 230 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ಒಂದು ಸ್ಥಾನವನ್ನು ಹೊರತುಪಡಿಸಿ ಕಾಂಗ್ರೆಸ್ ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ ಸಮಾಜವಾದಿ ಪಕ್ಷ ಇನ್ನೂ 24 ಅಭ್ಯರ್ಥಿಗಳನ್ನು ಮಾತ್ರ ಹೆಸರಿಸಿದೆ. ಆದರೆ ಎರಡು ಪಕ್ಷಗಳ ಅಭ್ಯರ್ಥಿಗಳು ಕನಿಷ್ಠ 20 ಸ್ಥಾನಗಳಲ್ಲಿ ಪರಸ್ಪರ ಎದುರಾಳಿಗಳಾಗಲಿದ್ದಾರೆ.

ಈ ಬೆಳವಣಿಗೆಗೆ ಮೊದಲು ಎಲ್ಲ ರೀತಿಯಲ್ಲಿ ಒಮ್ಮತಕ್ಕೆ ಬರುವ ಯತ್ನದ ಭಾಗವಾಗಿ ಮಾತುಕತೆ ನಡೆದಿದ್ದವಾದರೂ, ಅದು ಫಲಪ್ರದವಾಗಲಿಲ್ಲ. ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗದೆ, ಕಡೆಗೆ ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದವು.

ಇನ್ನೊಂದೆಡೆ, ಸಮಾಜವಾದಿ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸಲು ಕಾಂಗ್ರೆಸ್ ತನ್ನ ಕೆಲವು ಅಭ್ಯರ್ಥಿಗಳನ್ನು ಒತ್ತಾಯಿಸಿತ್ತಾದರೂ ಅದಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಒಪ್ಪಿಲ್ಲ ಎಂದೂ ಹೇಳಲಾಗಿದೆ. ಆದರೆ ಕಾಂಗ್ರೆಸ್ ಈ ದಿಸೆಯಲ್ಲಿ ಸಾಕಷ್ಟು ಪ್ರಯತ್ನಿಸಲಿಲ್ಲ ಎಂಬುದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮಾಜಿ ಶಾಸಕ ಉದಯವೀರ್ ಸಿಂಗ್ ಆಕ್ಷೇಪ. ಮಧ್ಯಪ್ರದೇಶ ಮತ್ತು ಕೇಂದ್ರದಲ್ಲಿ ಬಿಜೆಪಿಯನ್ನು ಕಿತ್ತೊಗೆಯುವ ದೊಡ್ಡ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ ಎಂಬುದು ಅವರ ಅಭಿಪ್ರಾಯ. ಪ್ರಮುಖ ಪಕ್ಷವಾಗಿರುವ ಅದು ಹೆಚ್ಚಿನ ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ. ನಾವು 2017ರಲ್ಲಿ ಕಾಂಗ್ರೆಸ್‌ಗಾಗಿ ಮತ್ತು 2019ರಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಇಂಥದೇ ಹೊಂದಾಣಿಕೆ ಮಾಡಿಕೊಂಡಿದ್ದೆವು ಎನ್ನುತ್ತಾರೆ ಅವರು.

► ಕಾಂಗ್ರೆಸ್‌ಗೆ ತೊಂದರೆಯಾಗಲಿದೆಯೇ?:

ಮಧ್ಯಪ್ರದೇಶದಲ್ಲಿ, ಉತ್ತರ ಪ್ರದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಬುಂದೇಲ್‌ಖಂಡ್ ಮತ್ತು ವಿಂಧ್ಯ ಪ್ರದೇಶಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಅದರದ್ದೇ ಆದ ಮತಬ್ಯಾಂಕ್ ಇದೆ.

2018ರ ರಾಜ್ಯ ಚುನಾವಣೆಯಲ್ಲಿ ಅದು 52 ಸ್ಥಾನಗಳಲ್ಲಿ ಸ್ಪರ್ಧಿಸಿ ಬಿಜಾವರದ ಏಕೈಕ ಕ್ಷೇತ್ರವನ್ನು ಗೆದ್ದುಕೊಂಡಿತು. ಗೆದ್ದ ಅಭ್ಯರ್ಥಿ ರಾಜೇಶ್ ಶುಕ್ಲಾ 2022ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡರು. ಸರಕಾರ ರಚಿಸಲು ಬಹುಮತದ ನಂಬರ್ 116ಕ್ಕೆ ಎರಡು ಸ್ಥಾನಗಳು ಕಡಿಮೆಯಾದಾಗ ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದ್ದರು. ಸಮಾಜವಾದಿ ಪಕ್ಷ 52 ಸ್ಥಾನಗಳಲ್ಲಿ 45ರಲ್ಲಿ ತನ್ನ ಠೇವಣಿಗಳನ್ನು ಕಳೆದುಕೊಂಡಿತ್ತು. ಅದಕ್ಕೆ ಕೇವಲ ಶೇ.1.3ರಷ್ಟು ಮತಗಳನ್ನು ಗಳಿಸಲು ಮಾತ್ರವೇ ಸಾಧ್ಯವಾಗಿತ್ತು.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿದ್ದಿದ್ದರೆ ನಿವಾರಿ, ಗುರ್ಹ್, ಪರಸ್ವಾಡ, ಚಾಂಡ್ಲಾ, ಮೈಹಾರ್ ಮತ್ತು ಬಾಲಘಾಟ್ ಈ ಆರು ಸ್ಥಾನಗಳಲ್ಲಿ ಬಿಜೆಪಿಗೆ ಸೋಲಾಗುತ್ತಿತ್ತು ಎಂಬುದನ್ನು ಚುನಾವಣಾ ಆಯೋಗದ ಅಂಕಿಅಂಶಗಳು ತೋರಿಸುತ್ತವೆ. ಇನ್ನೊಂದು ಸ್ಥಾನವಾದ ಪೃಥ್ವಿಪುರದಲ್ಲಿ ಸಮಾಜವಾದಿ ಪಕ್ಷ ಸುಮಾರು 7,500 ಮತಗಳ ಅಂತರದಿಂದ ಕಾಂಗ್ರೆಸ್ ಎರಡನೇ ಸ್ಥಾನವನ್ನು ಗಳಿಸಿತ್ತು.

ಜಬೇರಾದಲ್ಲಿ ಬಿಜೆಪಿ ಗೆದ್ದಿದ್ದು ತೀರಾ ಅಲ್ಪ ಮತಗಳ ಅಂತರದಿಂದ. ಬಿಜೆಪಿ 48,901 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಗಳಿಸಿದ್ದು 45,416 ಮತಗಳನ್ನು. ಆದರೆ ಈ ಬಾರಿ ಸಮಾಜವಾದಿ ಪಕ್ಷ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಿಜೆಪಿಯ ಗೆಲುವನ್ನು ಸುಲಭಗೊಳಿಸಬಹುದು.

ಕಾಂಗ್ರೆಸ್ ನಮ್ಮೊಂದಿಗೆ ಸೀಟುಗಳನ್ನು ಹಂಚಿಕೊಳ್ಳಲು ಸಿದ್ಧವಿಲ್ಲ, ಆದ್ದರಿಂದ ನಾವು ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದ್ದೇವೆ ಎಂದು ಜಬೇರಾದ ಸಮಾಜವಾದಿ ಪಕ್ಷದ ಅಭ್ಯರ್ಥಿ ಲಖನ್ ಲಾಲ್ ಯಾದವ್ ಹೇಳಿದ್ದಾರೆ. ಕಾಂಗ್ರೆಸ್ ಮತಗಳು ಇಲ್ಲಿ ವಿಭಜನೆಯಾಗಲಿದ್ದು, ಈ ಸ್ಥಾನವನ್ನು ಅದು ಕಳೆದುಕೊಳ್ಳುತ್ತದೆ ಎಂಬುದು ಅವರ ಅಭಿಪ್ರಾಯ.

ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಕಾಂಗ್ರೆಸ್ ಸೋಲಲಿದೆ. ಪೈಪೋಟಿ ತೀವ್ರಗೊಂಡರೆ ಸಮಾಜವಾದಿ ಪಕ್ಷದ ಶೇ.1ರಷ್ಟು ಮತವೂ ಸಹಕಾರಿಯಾಗುತ್ತದೆ ಎನ್ನುತ್ತಾರೆ ಉದಯವೀರ್ ಸಿಂಗ್.

ಇದೇನೇ ಇದ್ದರೂ ಸಮಾಜವಾದಿ ಪಕ್ಷ ಬಿಜೆಪಿಯ ಉದ್ದೇಶಕ್ಕೆ ಸಹಾಯ ಮಾಡುವುದಿಲ್ಲ ಎಂಬ ವಿಶ್ವಾಸ ನಮ್ಮದು. ನಾವು ಕುಳಿತು ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತೇವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ನ ಮಾಧ್ಯಮ ಘಟಕದ ಮುಖ್ಯಸ್ಥ ಕೆ.ಕೆ. ಮಿಶ್ರಾ ಹೇಳುತ್ತಿದ್ದಾರೆ.

ಸಮಾಜವಾದಿ ಪಕ್ಷ ಅದಕ್ಕೆ ಬೆಂಬಲವಿರುವ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಅದರಿಂದ ಆತಂಕವೇನಿಲ್ಲ. ಅವರು ಗೆದ್ದರೆ ಅದು ಬಿಜೆಪಿ ವಿರುದ್ಧದ ಗೆಲುವು ಎಂಬುದು ಕಾಂಗ್ರೆಸ್ ನಾಯಕ ಗೌರವ್ ಕಪೂರ್ ಮಾತು.

► ಉತ್ತರ ಪ್ರದೇಶವನ್ನು ಗೆಲ್ಲುವತ್ತ:

ಮಧ್ಯಪ್ರದೇಶ ಚುನಾವಣೆಯ ಫಲಿತಾಂಶ ಏನೇ ಇರಲಿ, ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮತ್ತೆ ಕೆಲವು ತಿಂಗಳುಗಳಲ್ಲಿ ಬಹಳ ಮುಖ್ಯವಾದ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಮಧ್ಯಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿದ್ದರೆ ಉತ್ತರ ಪ್ರದೇಶದಲ್ಲಿನ ಸನ್ನಿವೇಶವನ್ನು ಎದುರಿಸುವ ತಯಾರಿ ಸುಲಭವಾಗುತ್ತಿತ್ತು ಎಂಬುದು ಸಮಾಜವಾದಿ ಪಕ್ಷದ ನಾಯಕ ಸುಧೀರ್ ಪನ್ವಾರ್ ಅಭಿಮತ.

ಮಧ್ಯಪ್ರದೇಶದಲ್ಲಿ ನಾವು ಕೆಲವೇ ಸ್ಥಾನಗಳನ್ನು ಪಡೆದಿದ್ದರೂ ಒಪ್ಪಿಕೊಳ್ಳುತ್ತಿದ್ದೆವು, ಕಾಂಗ್ರೆಸ್ ಕೂಡ ವಾಸ್ತವವನ್ನು ಅರಿತುಕೊಳ್ಳಬೇಕು. ನಾವು ತ್ಯಾಗಕ್ಕೆ ಸಿದ್ಧ. ಆದರೆ ಹಾಗೆಂದು ಪಕ್ಷವನ್ನೇ ಬಲಿಗೊಡಲು ಆಗದು ಎನ್ನುತ್ತಾರೆ ಅವರು.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಈಗಾಗಲೇ ಕಾಂಗ್ರೆಸ್‌ನ ರಾಜ್ಯ ಮುಖ್ಯಸ್ಥ ಅಜಯ್ ರೈ ಜೊತೆ ಅಸಮಾಧಾನಗೊಂಡಿರುವಂತೆ ಕಾಣಿಸುತ್ತಿದೆ. ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ತಮ್ಮ ಪಕ್ಷ ತಯಾರಿ ನಡೆಸುತ್ತಿದೆ ಎಂದು ರೈ ಹಲವಾರು ಸಂದರ್ಭಗಳಲ್ಲಿ ಹೇಳಿರುವುದು ಇಂಥ ಸ್ಥಿತಿಗೆ ಕಾರಣವಾಗಿದೆ.

ಅಖಲೇಶ್ ಯಾದವ್ ಕೂಡ ಈ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ‘ಇಂಡಿಯಾ’ ಒಕ್ಕೂಟದ ಮಹತ್ವದ ಬಗ್ಗೆ ಗೊತ್ತಿಲ್ಲದ ಇಂಥ ನಾಯಕರು ಅಂತಿಮವಾಗಿ ಬಿಜೆಪಿಗೆ ಲಾಭ ಮಾಡಿಕೊಡುತ್ತಾರೆ ಎಂಬುದು ಅಖಿಲೇಶ್ ಆಕ್ಷೇಪ.

ಆದರೆ ರಾಜ್ಯಗಳಲ್ಲಿನ ವಿಚಾರಗಳು ಇಂಡಿಯಾ ಒಕ್ಕೂಟದ ಸ್ವರೂಪದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸ.

ಎಲ್ಲಾ ರೀತಿಯ ಅಹಂ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ‘ಇಂಡಿಯಾ’ ಮೈತ್ರಿಯನ್ನು ರಚಿಸಲಾಗಿದೆ. ಲೋಕಸಭೆಗೆ ಸ್ಥಾನಗಳನ್ನು ನಿರ್ಧರಿಸುವ ವಿಷಯಕ್ಕೆ ಬಂದಾಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರಂಥ ನಾಯಕರ ನಡುವೆ ಚರ್ಚೆ ನಡೆಯಲಿದೆ. ಆಗ ಈ ಜಗಳಗಳು ಮುಖ್ಯವಾಗುವುದಿಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕ ಗೌರವ್ ಕಪೂರ್.

(ಕೃಪೆ: scroll.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಅಭಿಕ್ ದೇವ್

contributor

Similar News