ರಾಜ್ಯದ 10,053 ರೈತರಿಗೆ 3 ವರ್ಷಗಳಿಂದ ಜಮೆಯಾಗದ ಬೆಳೆವಿಮೆ ಪರಿಹಾರ

ರಾಜ್ಯ ದಲ್ಲಿ ರೈತರ ಸರಣಿ ಆತ್ಮಹತ್ಯೆ ಗಳು ನಡೆಯುತ್ತಿರುವ ಬೆನ್ನಲ್ಲೇ ಬೆಳೆ ವಿಮೆ ಪರಿಹಾರದ ಮೊತ್ತವು ಕಳೆದ ಮೂರು ವರ್ಷಗಳಿಂದಲೂ ಪಾವತಿಯಾಗದೇ ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.

Update: 2023-10-13 09:03 GMT

ಬೆಂಗಳೂರು, ಅ.12: ಆಧಾರ್ ಜೋಡಣೆಯಲ್ಲಿನ ಲೋಪವೂ ಸೇರಿದಂತೆ ಇನ್ನಿತರ ತಾಂತ್ರಿಕ ದೋಷಗಳಿಂದಾಗಿ ಕಳೆದ 3 ವರ್ಷದಿಂದಲೂ ರಾಜ್ಯದ 10,053 ರೈತರಿಗೆ 9.68 ಕೋಟಿ ರೂ. ಬೆಳೆ ವಿಮೆ ಪರಿಹಾರದ ಮೊತ್ತವೇ ಜಮೆಯಾಗಿಲ್ಲ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ರೈತರಿಗೆ ಹಿಂದಿನ ಸಾಲುಗಳಲ್ಲಿ ಬಾಕಿ ಇರುವ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವೈಫಲ್ಯಗಳದ್ದೇ ಮೇಲುಗೈಯಾಗಿರುವುದು ಇದೀಗ ಬಹಿರಂಗವಾಗಿದೆ.

ಬಾಕಿ ಇರುವ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಸಂಬಂಧ ಕೃಷಿ ಇಲಾಖೆಯ ಆಯುಕ್ತರು ಮತ್ತು ಕಂದಾಯ ಇಲಾಖೆ ಆಯುಕ್ತರು, ಬ್ಯಾಂಕ್, ವಿಮೆ ಕಂಪೆನಿಗಳ ನಡುವಿನ ಸಮನ್ವಯತೆಯಲ್ಲಿ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಬೆಳೆ ವಿಮೆ ಪರಿಹಾರ ಮೊತ್ತ ಪಾವತಿ ಸಂಬಂಧ ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್ ಅವರು 2023ರ ಸೆ.22ರಂದು ಕಂದಾಯ ಇಲಾಖೆಯ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಕಂದಾಯ ಇಲಾಖೆ ಯಡಿ ಬರುವ ಗ್ರಾಮ್ ಒನ್ ಸೆಂಟರ್, ಬಾಪೂಜಿ ಸೇವಾ ಕೇಂದ್ರಗಳು ಇತ್ಯಾದಿಗಳ ಸೇವೆಗಳನ್ನು ಬಳಸಿಕೊಂಡು ಬಾಕಿ ಇರುವ ಪ್ರತೀ ರೈತರಿಗೆ ವಿಮೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕಿದ್ದ ಕಂದಾಯ ಇಲಾಖೆಯ ಬೇಜವಾಬ್ದಾರಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಎಲ್ಲಾ ಜಿಲ್ಲೆಗಳ ಬ್ಯಾಂಕ್ ಹಾಗೂ ವಿಮಾ ಸಂಸ್ಥೆಗಳೊಂದಿಗೆ ಸತತವಾಗಿ ಪ್ರಯತ್ನಿಸಿ, ಬಾಕಿ ಮೊತ್ತ ಪಾವತಿಸಲು ಕ್ರಮವಹಿಸಲಾಗಿದೆ. ಆದಾಗ್ಯೂ 2019-20ರಿಂದ 2022ರ ಮುಂಗಾರು ಹಂಗಾಮಿನವರೆಗೆ 10.053 ರೈತರಿಗೆ 9.68 ಕೋಟಿ ರೂ. ಮೊತ್ತದ ಬೆಳೆವಿಮೆ ಪರಿಹಾರ ಪಾವತಿಸಲು ಬಾಕಿ ಇದೆ ಎಂದು ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್ ಅವರು ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.

2019-20ನೇ ಸಾಲಿನಿಂದ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸಂರಕ್ಷಣೆ ಪೋರ್ಟಲ್ ತಂತ್ರಾಂಶ ಅನುಷ್ಠಾನಗೊಳಿಸಲಾಗಿತ್ತು. ರೈತರ ಖಾತೆಗೆ ಆಧಾರ್ ಆಧಾರಿತ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣವೂ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ 2019-20ನೇ ಸಾಲಿನಿಂದ ರಾಜ್ಯದಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ

ಮೊತ್ತವು ರೈತರ ಬ್ಯಾಂಕ್ ಖಾತೆಗೆ ಜಮೆ ಯಾಗದೇ ಬಾಕಿ ಇದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜ ನೆಯು ಇಳುವರಿ ಹಾಗೂ ಕ್ಷೇತ್ರ ಆಧಾರಿತ ಯೋಜನೆಯಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಿ.ಸಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ಕಳೆದ ವರ್ಷ ಬಿಜೆಪಿ ಅವಧಿಯಲ್ಲಿ ಇದೇ ಸಮಯಕ್ಕೆ 113 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಆತ್ಮಹತ್ಯೆ ಪ್ರಮಾಣ ಕಡಿಮೆ ಆಗಿದೆ. ಆತ್ಮಹತ್ಯೆಯನ್ನು ಸಂಪೂರ್ಣ ನಿಲ್ಲಿಸಲು ಸರಕಾರ ಮುಂದಾಗಿದೆ ಎಂದರು.

 ಅರ್ಜಿ ಸಲ್ಲಿಸುವುದರಿಂದ ಬೆಳೆ ಕಟಾವು ಪ್ರಯೋಗ ಹಾಗೂ ವಿಮಾ ಪರಿಹಾರ ಮೊತ್ತವನ್ನು ಅರ್ಹ ರೈತರ ಖಾತೆಗೆ ಜಮೆಯಾಗುವವರೆಗೆ ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಸಂರಕ್ಷಣೆ ಪೋರ್ಟಲ್ ಮೂಲಕ ಮಾಡಲಾಗುತ್ತಿದೆ ಎಂದು ಸರಕಾರವು ಹೆಮ್ಮೆಯಿಂದ ಬೀಗಿತ್ತು.

ಬೆಳೆ ವಿಮೆ ವಂಚನೆಗಳು ನಿರಂತರವಾಗಿ ವರದಿಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆ. ರಾಜ್ಯದ ಕೆಲವು ಜಿಲ್ಲೆಗಳ ರೈತರು ಇಳುವರಿ ಮೌಲ್ಯಮಾಪನವನ್ನು ನಿರ್ವಹಿಸುವ ಅಧಿಕಾರಿಗಳಿಗೆ ವಿಮೆ ಮೊತ್ತವನ್ನು ಪಾವತಿಸುತ್ತಾರೆ.

ಕೃಷಿ ವೆಚ್ಚವನ್ನು ಪೂರೈಸಲು ಮತ್ತು ದುಡಿಯುವ ಬಂಡವಾಳಕ್ಕಾಗಿ ರೈತರು ಸಾಲವನ್ನು ಪಡೆಯುತ್ತಾರೆ. ಅಲ್ಲದೆ ಬರ, ಪ್ರವಾಹ ಅಥವಾ ಇತ್ತೀಚೆಗೆ ಕಂಡುಬಂದಂತೆ ಅಕಾಲಿಕ ಮಳೆ ಬೆಳೆ ಹಾನಿಯಿಂದಾಗಿ ನಷ್ಟಕ್ಕೀಡಾಗುವ ರೈತರೂ ಸಾಲಕ್ಕೆ ಮೊರೆ ಹೋಗುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಜಿ.ಮಹಾಂತೇಶ್

contributor

Similar News