ಇಂಜಿನಿಯರ್‌ಗಳ ಆಸ್ತಿ, ಹೊಣೆಗಾರಿಕೆ ಪಟ್ಟಿಗಳನ್ನು ಪರಾಮರ್ಶಿಸಲೂ ಲಂಚಕ್ಕೆ ಬೇಡಿಕೆ; ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು

Update: 2023-11-29 03:02 GMT
Editor : Safwan | Byline : ಜಿ.ಮಹಾಂತೇಶ್

Photo: PTI

ಬೆಂಗಳೂರು, ನ.28: ಜಲಸಂಪನ್ಮೂಲ ಇಲಾಖೆಯಲ್ಲಿ ಮುಖ್ಯ, ಪ್ರಧಾನ ಇಂಜಿನಿಯರ್‌ಗಳು ಸೇರಿದಂತೆ ವಿವಿಧ ವೃಂದದ ಇಂಜಿನಿಯರ್‌ಗಳ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಗಳನ್ನು ಪರಾಮರ್ಶಿಸಲೂ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಒಬ್ಬೊಬ್ಬ ಇಂಜಿನಿಯರ್‌ಗಳಿಂದ ಕನಿಷ್ಟ 50ರಿಂದ 60 ಸಾವಿರ ರೂ.ನಂತೆ ಲಕ್ಷಾಂತರ ರೂ. ವಸೂಲು ಮಾಡಲಾಗುತ್ತಿದೆ ಎಂಬ ಪ್ರಕರಣವನ್ನು ‘The-file.in’ ಇದೀಗ ಬಹಿರಂಗಗೊಳಿಸುತ್ತಿದೆ.

ಸರಕಾರಿ ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವು ರಾಜಕೀಯಗೊಂಡಿರುವ ಬೆನ್ನಲ್ಲೇ ಇದೀಗ ಇಲಾಖೆಗಳ ಅಧಿಕಾರಿ, ನೌಕರರ ಆಸ್ತಿ, ಹೊಣೆಗಾರಿಕೆ ಪಟ್ಟಿಗಳ ಪರಾಮರ್ಶಿಸುವುದರಲ್ಲಿಯೂ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮುನ್ನೆಲೆಗೆ ಬಂದಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಈ ಸಂಬಂಧ ಇಂಜಿನಿಯರೊಬ್ಬರ ಪರವಾಗಿ ವಕೀಲರೊಬ್ಬರು ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ 2023ರ ಅಕ್ಟೋಬರ್ 16ರಂದು ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘The-file.in’ಗೆ ಲಭ್ಯವಾಗಿದೆ. ಇಂಜಿನಿಯರೊಬ್ಬರ ಪರವಾಗಿ ದೂರು ಸಲ್ಲಿಸಿರುವ ವಕೀಲ ಮನೋಜ್ ಕುಮಾರ್ ಪಿ. ಎಂಬವರು ಜಲಸಂಪನ್ಮೂಲ ಇಲಾಖೆಯಲ್ಲಿನ ಲಂಚಗುಳಿತವನ್ನು ಅನಾವರಣಗೊಳಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಯಲ್ಲಿನ ಸೇವೆಗಳು (ಎ) ಶಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಹರ್ಷ, ಅಧೀನ ಕಾರ್ಯದರ್ಶಿ ಪುಟ್ಟರಂಗ, ಶಾಖಾಧಿಕಾರಿ ಜ್ಞಾನೇಶ್, ವಿಷಯ ನಿರ್ವಾಹಕರು, ಇಲಾಖೆಗೆ ಸೇರಿದ ಪ್ರಧಾನ ಇಂಜಿನಿಯರ್, ಮುಖ್ಯ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್‌ಗಳಿಂದಲೇ 50ರಿಂದ 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಇಲಾಖೆಗಳ ಹೆಚ್ಚುವರಿ ಕಾರ್ಯದರ್ಶಿ, ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳ ಪರವಾಗಿ 50ರಿಂದ 60 ಸಾವಿರ ರೂ.ಗಳಿಗೆ ಬೇಡಿಕೆ ಇರಿಸಿದ್ದಾರೆ ಎಂದು ದೂರಿನಲ್ಲಿ ವಕೀಲ ಮನೋಜ್ ಕುಮಾರ್ ಪಿ. ಅವರು ಆಪಾದಿಸಿದ್ದಾರೆ.

ಈ ಹಿಂದೆ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ಇತರ ಇಲಾಖೆಗಳ ಪ್ರಧಾನ ಇಂಜಿನಿಯರ್ ಹಾಗೂ ಮುಖ್ಯ ಇಂಜಿನಿಯರ್‌ಗಳ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆಯಾ ಪ್ರಧಾನ ಇಂಜಿನಿಯರ್, ಮುಖ್ಯ ಇಂಜಿನಿಯರ್‌ಗಳು ಸಲ್ಲಿಸಿದ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಗಳನ್ನು ಲಿಸ್ಟ್ ಮಾಡಿ ಕಡತದಲ್ಲಿ ಇರಿಸುತ್ತಿದ್ದರು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಈ ಪ್ರಕ್ರಿಯೆ ವೇಳೆಯಲ್ಲಿ ಡಿಪಿಎಆರ್ ಅಧಿಕಾರಿಗಳಿಂದ ಯಾವುದೇ ತೊಂದರೆ ನೀಡಿರುವುದು ಕಂಡುಬಂದಿರುವುದಿಲ್ಲ. ಆದರೆ ಜಲಸಂಪನ್ಮೂಲ ಇಲಾಖೆಯಲ್ಲಿ ವಿಷಯ ನಿರ್ವಾಹಕರಿಂದ ಹಿಡಿದು ಹೆಚ್ಚುವರಿ ಕಾರ್ಯದರ್ಶಿಯವರ ಮಟ್ಟದಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಗಳ ಪರಾಮರ್ಶಿಸುವ ನೆಪದಲ್ಲಿ ಲಕ್ಷಾಂತರ ರೂ.ಗಳನ್ನು ವಸೂಲು ಮಾಡುತ್ತಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಗಳ ಪರಾಮರ್ಶಿಸುವ ನೆಪದಲ್ಲಿ ವಿವಿಧ ವೃಂದದ ಇಂಜನಿಯರ್‌ಗಳಿಗೆ ಹಿಂಸೆ ನೀಡಿ ಲಕ್ಷಾಂತರ ರೂ. ವಸೂಲು ಮಾಡುತ್ತಿರುವುದು ನನ್ನ ಕಕ್ಷಿದಾರರು ನೇರವಾಗಿ ದೂರನ್ನು ಸಲ್ಲಿಸಲಾಗದ ಕಾರಣ ನಾನು ಈ ದೂರನ್ನು ಸಲ್ಲಿಸುತ್ತಿದ್ದೇನೆ. ಈ ದೂರನ್ನು ರಹಸ್ಯವಾಗಿ ಪರಿಶೀಲಿಸಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ ಹಾಗೂ ವಿಷಯ ನಿರ್ವಾಹಕರ ವಿರುದ್ಧ ಸರಕಾರದ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಜಿ.ಮಹಾಂತೇಶ್

contributor

Similar News