ಚುನಾವಣೆಯಲ್ಲಿನ ‘ಕೈಚಳಕ’ ಶೋಧಿಸಿದ್ದ ಪ್ರಬಂಧ ಅಶೋಕ ವಿವಿ ವಿರುದ್ಧ ತನಿಖೆಗೆ ಕಾರಣವಾಯಿತೇ?

Update: 2023-08-24 10:35 GMT

ಎಲ್ಲ ಸ್ವಾತಂತ್ರ್ಯವನ್ನೂ ಕಸಿದದ್ದಾಯಿತು. ಈಗ ದೇಶದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯಕ್ಕೂ ಕುತ್ತು ಬಂದಿದೆ. ಅಂಥ ಒಂದು ಬೆಳವಣಿಗೆಯಲ್ಲಿ, ತನಿಖಾ ಅಧಿಕಾರಿಗಳು ಅಶೋಕ ವಿವಿಯೊಳಗೆ ಹೋಗಿದ್ದಾರೆ. ಅಶೋಕ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಸವ್ಯಸಾಚಿ ದಾಸ್ ಅವರ Democratic Backsliding in the World’s Largest Democracy ಪ್ರಬಂಧದ ಪರಿಶೀಲನೆಗೆ ತನಿಖಾ ಅಧಿಕಾರಿಗಳು ಮುಂದಾಗಿದ್ದಾರೆ. ದಾಸ್ ಮಾತ್ರವಲ್ಲದೆ, ವಿವಿಯ ಅರ್ಥಶಾಸ್ತ್ರ ವಿಭಾಗದ ಇತರರನ್ನು ಮಾತನಾಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಸವ್ಯಸಾಚಿ ದಾಸ್ ಅವರನ್ನು ಭೇಟಿ ಮಾಡಲೆಂದು ಅಧಿಕಾರಿಗಳು ಪತ್ರಿಕೆಯ ತುಣುಕುಗಳೊಂದಿಗೆ ಅಶೋಕ ವಿವಿಗೆ ಬಂದಿರುವುದು ವರದಿಯಾಗಿದೆ. ಆದರೆ ದಾಸ್ ಸದ್ಯ ಪುಣೆಯಲ್ಲಿದ್ದಾರೆ ಎನ್ನಲಾಗಿದೆ. ಇತರರು ಕೂಡ ಅವರಿಗೆ ಮಾತಿಗೆ ಸಿಕ್ಕಿಲ್ಲ. ಯಾಕೆಂದರೆ, ಪ್ರಬಂಧದ ವಿಚಾರವಾಗಿ ಚರ್ಚಿಸಲು ಲಿಖಿತವಾಗಿ ವಿನಂತಿಸುವುದಕ್ಕೆ ಅಧಿಕಾರಿಗಳು ನಿರಾಕರಿಸಿದರೆನ್ನಲಾಗಿದೆ. ವಿವಿಯಿಂದ ಬರಿಗೈಯಲ್ಲಿಯೇ ಅಧಿಕಾರಿಗಳು ತೆರಳಿದ್ದಾರಾದರೂ, ಮತ್ತೆ ಬರುವ ಸುಳಿವನ್ನೂ ಕೊಟ್ಟಿದ್ದಾರೆ.

ಕಳೆದ ತಿಂಗಳು ಆನ್‌ಲೈನ್‌ನಲ್ಲಿ ಪ್ರಕಟವಾದ ದಾಸ್ ಅವರ ಪ್ರಬಂಧ, ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದರ ಹಿಂದೆ ಬೇರೆಯದೇ ಅಸಲಿಯತ್ತು ಇತ್ತು ಎಂಬುದನ್ನು ಹೇಳಿತ್ತು. ಮತ ಗಳಿಕೆಯ ಹಿಂದೆ ಅದರ ಕೈವಾಡವಿದೆ ಎಂಬುದನ್ನು ವಿವರಿಸಿತ್ತು.

ಬಿಜೆಪಿ ವಿರುದ್ಧ ಚುನಾವಣಾ ಅಕ್ರಮ ಮತ್ತು ಇವಿಎಂ ತಿರುಚುವಿಕೆ ಆರೋಪಗಳು ಪ್ರತಿಪಕ್ಷಗಳಿಂದ ಈ ಹಿಂದೆ ಹಲವಾರು ಬಾರಿ ಕೇಳಿಬಂದಿದ್ದವು. ಆದರೆ, ಸವ್ಯಸಾಚಿ ದಾಸ್ ಅವರ ಪ್ರಬಂಧ ಇವಿಎಂ ತಿರುಚುವಿಕೆಗೆ ಹೊರತಾದ ವಿಚಾರಗಳತ್ತ ಬೆರಳು ಮಾಡಿತ್ತು. ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿಯೇ ಅದರ ಅನುಮಾನಾಸ್ಪದ ಗೆಲುವಿನ ಪ್ರಕರಣಗಳು ಹೆಚ್ಚಿದ್ದುದನ್ನು ದಾಸ್ ಎತ್ತಿ ತೋರಿಸಿದ್ದರು.

ಚುನಾವಣಾ ವೇಳಾಪಟ್ಟಿಯಲ್ಲಿ ಪಕ್ಷಪಾತ ಮತ್ತು ನೋಂದಾಯಿತ ಮುಸ್ಲಿಮ್ ಮತದಾರರ ಹೆಸರನ್ನು ಅಳಿಸಿದ ಆರೋಪಗಳ ಕಾರಣದಿಂದ ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಎರಡೂ ಅಂಶಗಳು ಬಿಜೆಪಿಗೆ ಅನುಕೂಲಕರ ಎನ್ನುವಂತಿದ್ದವು. ಈ ಹಿನ್ನೆಲೆಯಲ್ಲಿ ದಾಸ್ ಅವರ ಸಂಶೋಧನೆ ಹೆಚ್ಚು ಗಮನ ಸೆಳೆದಿತ್ತು.

ಚುನಾವಣಾ ದತ್ತಾಂಶದಲ್ಲಿ ದೊಡ್ಡ ಮಟ್ಟದ ಅಕ್ರಮಗಳು ಕಾಣಿಸಿವೆ. ಬಿಜೆಪಿ ಅಭ್ಯರ್ಥಿ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿ ನಡುವೆ ನಿಕಟ ಸ್ಪರ್ಧೆಯಿದ್ದ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದೊಂದಿಗೆ ಬಿಜೆಪಿ ಗೆಲುವು ಅನುಮಾನಾಸ್ಪದವಾಗಿದೆ. ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಅಥವಾ ೨೦೧೯ರ ಸಾರ್ವತ್ರಿಕ ಚುನಾವಣೆಯ ಜೊತೆಜೊತೆಗೇ ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳು ಮತ್ತು ನಂತರದ ಚುನಾವಣೆಗಳಲ್ಲಿ ಈ ಥರದ ಅಕ್ರಮಗಳು ಕಂಡಿರಲಿಲ್ಲ. ಅಲ್ಲದೆ, ನಿಕಟ ಸ್ಪರ್ಧೆಯಿದ್ದ ಕ್ಷೇತ್ರಗಳಲ್ಲಿನ ಬಿಜೆಪಿಯ ಅಲ್ಪ ಅಂತರದ ಗೆಲುವು ಆಗ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿಯೇ ಹೆಚ್ಚಾಗಿ ಕಂಡುಬಂದಿದೆ ಎಂಬ ವಿಚಾರಗಳನ್ನು ಪ್ರಬಂಧ ಎತ್ತಿ ಹೇಳಿತ್ತು.

ಚುನಾವಣಾ ತಿರುಚುವಿಕೆ ಮತದಾರರ ನೋಂದಣಿ ಹಂತದಲ್ಲಿ ನಡೆಯಬಹುದು. ಇಲ್ಲವೇ, ಮತದಾನ ಅಥವಾ ಮತ ಎಣಿಕೆ ಸಮಯದಲ್ಲಿ ಆಗಬಹುದು. ಬಿಜೆಪಿ ಗೆಲುವಿನ ಅಂತರ ಶೇ.೫ಕ್ಕಿಂತ ಕಡಿಮೆ ಇದ್ದ ಸುಮಾರು ೧೧ ಲೋಕಸಭಾ ಕ್ಷೇತ್ರಗಳನ್ನು ಪ್ರಬಂಧ ವಿಶೇಷವಾಗಿ ಗಮನಿಸಿತ್ತು. ಚುನಾವಣಾ ತಿರುಚುವಿಕೆ ಪ್ರಮಾಣ ಚಿಕ್ಕದಾಗಿದ್ದರೂ, ಅದು ತರುವ ಫಲಿತಾಂಶಗಳು ದೇಶದ ಪ್ರಜಾಪ್ರಭುತ್ವದ ಭವಿಷ್ಯದಲ್ಲಿ ಆತಂಕಕಾರಿ ಎಂದು ದಾಸ್ ಅಭಿಪ್ರಾಯಪಟ್ಟಿದ್ದರು. ಇದೇ ವೇಳೆ, ಕಡಿವಾಣವಿಲ್ಲದ ತಾಂತ್ರಿಕತೆ ಕಾರಣದಿಂದ ೨೦೨೪ರಲ್ಲಿ ಇಂಥ ತಿರುಚುವಿಕೆ ಗಣನೀಯವಾಗಿ ಹೆಚ್ಚುವುದು ಖಚಿತ ಎಂದೂ ಅವರು ಎಚ್ಚರಿಸಿದ್ದರು.

ಅದು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ದಾಸ್ ಅವರ ಸಂಶೋಧನೆಯನ್ನು ಖಂಡಿಸಿದರು. ಅಶೋಕ ವಿವಿಯಲ್ಲಿ ಹೂಡಿಕೆ ಮಾಡಿರುವ ಮತ್ತು ಅದರ ಮಂಡಳಿಯಲ್ಲಿ ಇರುವ ಕೆಲವು ಉದ್ಯಮಿಗಳಿಗೆ ಪ್ರಧಾನ ಮಂತ್ರಿ ಕಚೇರಿಯಿಂದ ಮತ್ತು ಕೇಂದ್ರ ಶಿಕ್ಷಣ ಸಚಿವರಿಂದ ಸಾಲು ಸಾಲು ಕೋಪದ ಕರೆಗಳು ಹೋಗಿದ್ದವು ಎಂಬುದೂ ವರದಿಯಾಗಿತ್ತು. ಪ್ರಬಂಧ ಬರೆದಿರುವ ಪ್ರಾಧ್ಯಾಪಕರ ಉದ್ದೇಶವೇನು ಎಂದು ಪ್ರಶ್ನಿಸಲಾಗಿತ್ತು.

ಅಶೋಕ ವಿಶ್ವವಿದ್ಯಾನಿಲಯದೊಳಕ್ಕೆ ತನಿಖೆಗಣ್ಣಿನ ಅಧಿಕಾರಿಗಳು ಹೋಗುತ್ತಿರುವುದು ಹೊಸದೇನೂ ಅಲ್ಲ. ರಾಜಕೀಯಕ್ಕೆ ಸಂಬಂಧಿಸಿ ಏನೋ ನಡೆಯಲಿದೆ ಎಂಬ ಅನುಮಾನ ಬಂದಾಗೆಲ್ಲ ಟಿಪ್ಪಣಿಗಳನ್ನು ಮಾಡಿಕೊಳ್ಳಲು ವಿಚಾರ ಸಂಕಿರಣಗಳು ಮತ್ತು ಕಾರ್ಯಕ್ರಮಗಳಿಗೆ ಅವರು ಹಾಜರಾಗುವುದಿದೆ. ಆದರೆ, ಇದೇ ಮೊದಲ ಸಲ ಮುಖ್ಯ ಕಚೇರಿಯಿಂದಲೇ ವಿವಿಯ ಸೋನೆಪತ್ ಕ್ಯಾಂಪಸ್‌ಗೆ ಭೇಟಿ ನೀಡಲು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಎಂಬುದು ಹೊಸ ವಿಚಾರ.

ಪ್ರಬಂಧದ ಹಿಂದಿನ ಉದ್ದೇಶವೇನು, ಬರೆದವರು ಯಾರದೋ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ತಿಳಿಯುವುದು ಅಧಿಕಾರಿಗಳ ಯತ್ನವಾಗಿರಬೇಕು ಎಂಬುದನ್ನು, ತನಿಖಾ ಅಧಿಕಾರಿಗಳ ಕೆಲಸದ ಬಗ್ಗೆ ಗೊತ್ತಿರುವವರು ಹೇಳುತ್ತಿದ್ದಾರೆ.

ಪ್ರಬಂಧ ಬೆಳಕಿಗೆ ಬರುತ್ತಿದ್ದಂತೆ ಅದರಿಂದ ದೂರವನ್ನು ಕಾಯ್ದುಕೊಂಡ ವಿವಿ ನಿಲುವಿನಿಂದ ಬೇಸತ್ತು ದಾಸ್ ರಾಜೀನಾಮೆ ನೀಡಿದ್ದರು. ಆದರೆ ಅವರನ್ನು ಮತ್ತೆ ಸೇರಿಸಿಕೊಳ್ಳಲು ವಿವಿ ಯತ್ನಿಸುತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ತನಿಖಾ ಅಧಿಕಾರಿಗಳು ಈಗ ದಾಸ್ ಮತ್ತವರ ಪ್ರಬಂಧದ ವಿಚಾರವಾಗಿ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಕತಾಳೀಯವೆಂಬಂತೆ, ಅಶೋಕ ವಿವಿಯ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಿಗೆ ಇದೇ ಸೆಪ್ಟ್ಟಂಬರ್‌ನಲ್ಲಿ ನವೀಕರಣಗೊಳ್ಳಬೇಕಿದೆ. ಎಫ್‌ಸಿಆರ್‌ಎ ಪರವಾನಿಗೆಗಳ ನವೀಕರಣ ವಿಚಾರವನ್ನು ಸರಕಾರ ಅಥವಾ ಬಿಜೆಪಿ ಜೊತೆ ಸಂಪೂರ್ಣವಾಗಿ ಹೊಂದಾಣಿಕೆಯಾಗದ ಸಂಸ್ಥೆಗಳ ವಿರುದ್ಧ ಒಂದು ಅಸ್ತ್ರವಾಗಿ ಗೃಹ ಸಚಿವಾಲಯ ಮತ್ತದರ ಅಂಗ ಸಂಸ್ಥೆಗಳು ಬಳಸುವುದು ಆಗಾಗ ನಡೆಯುತ್ತಿರುತ್ತದೆ. ಗುಪ್ತಚರ ಮೂಲಗಳಿಂದ ವರದಿಗಳ ತಯಾರಿಕೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ, ವಿಶೇಷವಾಗಿ ಸರಕಾರದ ಆಲೋಚನೆಗಳು ಅಥವಾ ಉದ್ದೇಶಗಳೊಂದಿಗೆ ಸಂಪೂರ್ಣ ಹೊಂದಾಣಿಕೆ ಇಲ್ಲದಿರುವ ಬಗ್ಗೆ ಗೃಹಸಚಿವಾಲಯಕ್ಕೆ ಅನುಮಾನ ಬಂದಾಗ, ಅಂಥ ವಿಷಯಗಳಲ್ಲಿ ಗುಪ್ತಚರ ಮೂಲಗಳಿಂದ ವರದಿ ಪಡೆಯಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ದಾಸ್ ರಾಜೀನಾಮೆ ನೀಡಿದ ನಂತರ ಅಶೋಕ ವಿವಿ, ಶೈಕ್ಷಣಿಕ ಸ್ವಾತಂತ್ರ್ಯದ ವಿಚಾರವಾಗಿ ಹೆಚ್ಚುತ್ತಿರುವ ಕಳವಳದ ಕೇಂದ್ರವಾಗಿದೆ. ವಿವಾದ ಉಂಟಾಗುತ್ತಿದ್ದಂತೆ, ವಿವಿ ನಿರ್ವಹಣೆಯಲ್ಲಿ ದೋಷವನ್ನು ಉಲ್ಲೇಖಿಸಿ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪುಲಪ್ರೆ ಬಾಲಕೃಷ್ಣನ್ ರಾಜೀನಾಮೆ ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ದಾಸ್ ಅವರ ಪ್ರಬಂಧ ಬೆಳಕಿಗೆ ಬಂದಿರುವುದರಲ್ಲಿ ಗಂಭೀರ ದೋಷವಿದೆ ಎಂಬ ತಮ್ಮ ನಂಬಿಕೆಯ ಆಧಾರದ ಮೇಲೆ ತಾವು ರಾಜೀನಾಮೆ ನೀಡಿರುವುದಾಗಿಯೂ, ಇಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದ್ದು, ತಾವು ಉಳಿಯುವುದು ಸರಿಯಲ್ಲವೆಂದೂ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು.

ಅರ್ಥಶಾಸ್ತ್ರ ವಿಭಾಗದ ಇತರ ಅಧ್ಯಾಪಕರು ದಾಸ್ ಅವರೊಂದಿಗೆ ತಾವು ಇರುವುದಾಗಿಯೂ, ಅವರನ್ನು ಮರಳಿ ಕರೆತರಲು ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಸ್ವಾತಂತ್ರ್ಯವನ್ನು ಗೌರವಿಸುವ ಭರವಸೆ ನೀಡಲು ವಿಶ್ವವಿದ್ಯಾನಿಲಯದ ಆಡಳಿತ ಮುಂದಾಗಬೇಕೆಂದೂ ಹೇಳಿಕೆ ನೀಡಿದ್ದರು.

ಈಗ, ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸಿದ್ಧಾರ್ಥ್ ವರದರಾಜನ್

contributor

Similar News