ಕ್ಯಾನ್ಸರ್ ಬಾಧಿತ ತಿಮ್ಮಪ್ಪ ನಾಯ್ಕರಿಗೆ ಆಶ್ರಯ ನೀಡಿದ್ದ ಹಸೀನಾ ಕುಟುಂಬ

Update: 2024-07-07 06:29 GMT

ಮಂಗಳೂರು: ಕೋಮು ದ್ವೇಷ ಹಿಂಸೆ, ಅಸಹಿಷ್ಣುತೆ ಹೆಚ್ಚುತ್ತಿರುವ ಈ ಕಾಲದಲ್ಲಿ ಮಾನವೀಯತೆಗೆ ಇದ್ಯಾವುದರ ಹಂಗೂ ಇಲ್ಲ ಎಂಬುದಕ್ಕೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯರು ಗ್ರಾಮದ ಅಂಕತಡ್ಕ ಎಂಬ ಪುಟ್ಟ ಊರು ಸಾಕ್ಷಿಯಾಗಿದೆ.

ಮಾರಕ ಕ್ಯಾನ್ಸರ್ ರೋಗ ಬಾಧಿಸಿ ನೋಡಿ ಕೊಳ್ಳಲು ಯಾರೂ ಇಲ್ಲದೆ ತೀವ್ರ ಸಂಕಷ್ಟ ಎದುರಿ ಸುತ್ತಿದ್ದ ತಿಮ್ಮಪ್ಪ ನಾಯ್ಕ ಎಂಬವರನ್ನು ಮುಸ್ಲಿಮ್ ಕುಟುಂಬವೊಂದು ಉಪಚರಿಸಿ, ಆಶ್ರಯ ನೀಡಿದೆ. ನಂತರ ಆಸ್ಪತ್ರೆ ಹಾಗೂ ಆಶ್ರಮಕ್ಕೆ ದಾಖಲಿಸಿದ್ದಲ್ಲದೆ, ರೋಗ ಉಲ್ಬಣಿಸಿ ನಿಧನರಾದ ತಿಮ್ಮಪ್ಪ ನಾಯ್ಕರ ಅಂತ್ಯ ಸಂಸ್ಕಾರ ಕಾರ್ಯದಲ್ಲೂ ಕೈಜೋಡಿಸಿ ಮಾನವೀಯತೆ ಮೆರೆದಿದೆ.

ತಿಮ್ಮಪ್ಪ ನಾಯ್ಕ ಕೆಯ್ಯರು ಗ್ರಾಮದ ಅಂಕತಡ್ಕದ ಸರಕಾರಿ ಜಾಗದಲ್ಲಿ ಸಣ್ಣ ಜೋಪಡಿಯೊಂದರಲ್ಲಿ ವಾಸವಿದ್ದು, ಅವರ ಪತ್ನಿ ಅನೇಕ ವರ್ಷಗಳ ಹಿಂದೆಯೇ ಅವರಿಂದ ದೂರವಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರೂ ತಂದೆಯನ್ನು ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ತಿಮ್ಮಪ್ಪ ನಾಯ್ಕ ಒಂಟಿಯಾಗಿ ಬದುಕು ಸಾಗಿಸುತ್ತಿದ್ದರು.

ಕಳೆದೆರಡು ವರ್ಷಗಳಿಂದ ತಿಮ್ಮಪ್ಪ ನಾಯ್ಕ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸ್ಥಳೀಯರಾದ ಹಸೀನಾ ಬೇಗಂ ಎಂಬವರ ಕುಟುಂಬ ನೆರವಾಗುತ್ತಿತ್ತು. ರೋಗದ ತೀವ್ರತೆ ಹೆಚ್ಚಾದಾಗ ತಿಮ್ಮಪ್ಪ ನಾಯ್ಕ ಕೆಲವು ತಿಂಗಳ ಹಿಂದೆ ಅಂಕತ್ತಡ್ಕದ ಸಯ್ಯದ್ ಇಬ್ರಾಹೀಂ ಅವರ ಮನೆಗೆ ಬಂದಿದ್ದರು. ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ ಅಲ್ಲೇ ಉಳಿದುಕೊಳ್ಳಲು ಮನೆಯವರು ವ್ಯವಸ್ಥೆ ಮಾಡಿದ್ದರು.

''ಒಂದು ತಿಂಗಳು ಮನೆಯಲ್ಲಿದ್ದ ತಿಮ್ಮಪ್ಪ ನಾಯ್ಕರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ನಾವು ಅವರನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದೆವು. ಚಿಕಿತ್ಸೆಯ ಬಳಿಕ ಇತರರ ನೆರವಿನಿಂದ ಅವರನ್ನು ವಾಮಂಜೂರಿನಲ್ಲಿರುವ ಆವೆ ಮರಿಯ ಆಶ್ರಮಕ್ಕೆ ಸೇರಿಸಿದ್ದೆವು'' ಎಂದು ಸಯ್ಯದ್ ಇಬ್ರಾಹೀಂ ಅವರ ಸಹೋದರಿ ಹಸೀನಾ ಬೇಗಂ ಹೇಳಿದ್ದಾರೆ.

'ಇದಕ್ಕೆ ಮೊದಲು ಹಲವು ಬಾರಿ ತಿಮ್ಮಪ್ಪ ನಾಯ್ಕರ ಮಕ್ಕಳಿಗೆ ಅವರ ತಂದೆಯ ಅನಾರೋಗ್ಯ ಮತ್ತು ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದೆವು. ಆರಂಭದಲ್ಲಿ ಹಿರಿಯ ಪುತ್ರ ಅವರೊಂದಿಗೆ ಎರಡು ಬಾರಿ ಆಸ್ಪತ್ರೆಗೆ ಹೋಗಿದ್ದ. ಆದರೆ ಬಳಿಕ ಆತನ ಸಂಪರ್ಕ ಸಾಧ್ಯವಾಗಲಿಲ್ಲ. ಕಿರಿಯ ಪುತ್ರ ತಂದೆ ಸಾವನ್ನಪ್ಪಿದರೆ ತಿಳಿಸಿ ಅಂತ್ಯ ಸಂಸ್ಕಾರಕ್ಕೆ ಬರುವುದಾಗಿ ಹೇಳಿದ್ದ'' ಎಂದು ಬೇಗಂ ಬೇಸರ ವ್ಯಕ್ತಪಡಿಸಿದರು.

"ಮಾರ್ಚ್ ಕೊನೆಯಲ್ಲಿ ನಮ್ಮ ಮನೆಗೆ ಬಂದ ತಿಮ್ಮಪ್ಪ ನಾಯ್ಕ ನಾನು ಮೃತಪಟ್ಟರೆ ನನ್ನ ಮೃತ ದೇಹವನ್ನು ಕೊಳೆಯಲು ಬಿಡಬೇಡಿ. ಗುಂಡಿ ತೋಡಿ ದಫನ ಮಾಡಿ ಎಂದು ಹೇಳಿ ಕಣ್ಣೀರು ಹಾಕಿದ್ದರು" ಎಂದು ಹಸೀನಾ ಬೇಗಂ ಬೇಸರ ವ್ಯಕ್ತಪಡಿಸಿದರು.

"ಆಶ್ರಮದಲ್ಲಿ ಜೂನ್ 23ರಂದು ತಿಮ್ಮಪ್ಪ ನಾಯ್ಕ ಮೃತಪಟ್ಟಿದ್ದು, ವಿಷಯ ತಿಳಿದ ಕೂಡಲೇ ನಾನು ಗೆಳತಿ ಆಯಿಶಳೊಂದಿಗೆ ವಾಮಂಜೂರಿನ ಅವೆ ಮರಿಯ ಆಶ್ರಮಕ್ಕೆ ತೆರಳಿದ್ದೆ. ಮೃತರ ಕುಟುಂಬಸ್ಥರಿಗೆ, ಕೆಲವು ಸಂಘ ಸಂಸ್ಥೆಗಳಿಗೆ, ರಾಜಕೀಯ ಮುಖಂಡರಿಗೆ ತಿಮ್ಮಪ್ಪ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದೆ ಆದರೆ ಯಾವುದೇ ಸ್ಪಂದನ ವ್ಯಕ್ತವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರ ಸಹಕಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆಯನ್ನು ನಾವೇ ಮಾಡಿದೆವು" ಎನ್ನುತ್ತಾರೆ ಹಸೀನಾ ಬೇಗಂ.

ಜಾತಿ, ಧರ್ಮದ ಹೆಸರಲ್ಲೇ ಜನರನ್ನು ವಿಭಜಿಸುವ, ಪರಸ್ಪರ ಅನುಮಾನ, ಅಂತರ ಸೃಷ್ಟಿಸುವ ಈ ಕಾಲದಲ್ಲಿ ಹಸೀನಾ ಬೇಗಂ ಹಾಗೂ ಅವರ ಕುಟುಂಬದ ಮಾನವೀಯ ಕಾರ್ಯ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿದೆ.

ನಾನು ನನ್ನ ಧರ್ಮ, ತಂದೆ, ತಾಯಿ ಹೇಳಿಕೊಟ್ಟದ್ದನ್ನು ಮಾಡಿದ್ದೇನೆ. ತಿಮಪ್ಪ ನಾಯ್ಕರ ಧರ್ಮವನ್ನು ನಾನು ನೋಡಲಿಲ್ಲ. ಮಾನವೀಯತೆ ನೆಲೆಯಲ್ಲಿ ಅವರ ಕಷ್ಟಗಳಿಗೆ ನನ್ನ ಕೈಲಾದಷ್ಟು ಸ್ಪಂದಿಸಿದ್ದೇನೆ. ಮಕ್ಕಳಾದವರು ತಂದೆ, ತಾಯಿಯನ್ನು ದೂರ ಮಾಡಬೇಡಿ. ಕೊನೆಯವರೆಗೆ ಅವರನ್ನು ನೋಡಿಕೊಂಡು ಅವರ ಸೇವೆಯನ್ನು ಮಾಡಿ. ಹತ್ತು, ಹೊತ್ತು, ವಿದ್ಯಾಭ್ಯಾಸ ನೀಡಿದ ಅವರ ಋಣವನ್ನು ತೀರಿಸಿ.

- ಹಸೀನಾ ಬೇಗಂ

ಮಾನವೀಯತೆಯ ದೃಷ್ಟಿಯಿಂದ ತಿಮ್ಮಪ್ಪ ನಾಯ್ಕರಿಗೆ ಆಹಾರ, ಔಷಧಿ ನೀಡುತ್ತಿದ್ದೆವು. ಅವರನ್ನು ಉಳಿಸಲು ನಾನು ಮತ್ತು ನನ್ನ ತಂಗಿ ಹಸೀನಾ ಬೇಗಂ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ವಿಧಿಯಾಟ ಬೇರೆಯೇ ಆಗಿತ್ತು.

- ಸಯ್ಯದ್ ಇಬ್ರಾಹೀಂ, ಹಸೀನಾ ಬೇಗಂ ಸಹೋದರ

Full View

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಸಂಶುದ್ದೀನ್ ಎಣ್ಮೂರು

contributor

Similar News