ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ನಿಜವಾಗಿಯೂ ಹೆಚ್ಚಾಗುತ್ತಿದೆಯೇ?

ಭಾರತೀಯ ಜನತಾ ಪಕ್ಷ, ಆರೆಸ್ಸೆಸ್ ಮೊದಲಾದವರ ಮೊಂಡುವಾದವೇನೆಂದರೆ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಬೇಕಾಬಿಟ್ಟಿಯಾಗಿ ಬೆಳೆಯುತ್ತಿದೆ. ಯಾಕೆಂದರೆ ಅವರು ನಾಲ್ಕು-ನಾಲ್ಕು ಮದುವೆ ಮಾಡಿಕೊಳ್ಳುತ್ತಾರೆ, ಹತ್ತಿಪ್ಪತ್ತು ಮಕ್ಕಳನ್ನು ಹುಟ್ಟಿಸುತ್ತಾರೆ ಎನ್ನುವುದು. ಆದುದರಿಂದಲೇ ಸಾಕ್ಷಿ ಮಹಾರಾಜ್, ಸಾಧ್ವಿ ಪ್ರಾಚೀ ಹಾಗೂ ಬದ್ರಿಕಾಶ್ರಮದ ಶಂಕರಾಚಾರ್ಯ ಮೊದಲಾದ ಮತಾಂಧರು ಹಿಂದೂಗಳು ಕೂಡ ಹೆಚ್ಚು ಹೆಚ್ಚು ಮಕ್ಕಳನ್ನು ಹೆರಬೇಕೆಂದು ಹೇಳುತ್ತಿದ್ದಾರೆ. ಆದರೆ ವಸ್ತುಸ್ಥಿತಿ ಅವರ ವಾದಗಳನ್ನು ಪೊಳ್ಳುವಾದಗಳೆಂದು ರುಜುವಾತು ಪಡಿಸುತ್ತದೆ.

Update: 2023-11-21 05:06 GMT

photo: freepik

ತಮ್ಮ ಎರಡನೆಯ ಅಧಿಕಾರಾವಧಿಯ ಮೊದಲ ಸ್ವಾತಂತ್ರ್ಯೋತ್ಸವದ ಭಾಷಣವನ್ನು ದಿಲ್ಲಿಯ ಕೆಂಪು ಕೋಟೆಯ ಮೇಲಿಂದ ಮಾಡುತ್ತ ಪ್ರಧಾನ ಮಂತ್ರಿ ಮೋದಿಯವರು ‘‘ಭಾರತದಲ್ಲಿ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ, ಆದುದರಿಂದ ಅದನ್ನು ನಿಯಂತ್ರಿಸುವುದು ಇಂದು ಅತ್ಯಾವಶ್ಯಕವಾಗಿದೆ’’ ಎಂದು ಹೇಳಿದ್ದರು. ಅವರು ಯಾವ ಸಮುದಾಯವನ್ನುದ್ದೇಶಿಸಿ ಈ ಮಾತುಗಳನ್ನು ಹೇಳುತ್ತಿದ್ದರು ಎನ್ನುವುದು ಯಾರಿಗಾದರೂ ಸ್ಪಷ್ಟವಾಗುತ್ತದೆ.

‘‘ನಮ್ಮ ಮನೆಯಲ್ಲಿ ಯಾವುದೇ ಮಗು ಬರುವುದಕ್ಕಿಂತ ಮೊದಲು ನಾವು ಯೋಚಿಸಬೇಕು, ಯಾವ ಮಗು ನಮ್ಮ ಮನೆಯಲ್ಲಿ ಬರುತ್ತದೆಯೋ ಅದರ ಅವಶ್ಯಕತೆಗಳನ್ನು ಪೂರ್ತಿ ಮಾಡಲು ನಾನು ನನ್ನನ್ನು ಸಿದ್ಧಗೊಳಿಸಿಕೊಂಡಿದ್ದೇನೆಯೇ? ನಾನು ಅದನ್ನು ಸಮಾಜದ ಭರವಸೆಯ ಮೇಲೆಯೇ ಅದೃಷ್ಟದ ಮೇಲೆಯೇ ಬಿಟ್ಟು ಬಿಡುತ್ತೇನೆಯೇ? ಯಾವುದೇ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಇಂತಹ ಬದುಕನ್ನು ಬದುಕಲು ಬಿಡುತ್ತಲೂ ಮಕ್ಕಳನ್ನು ಹುಟ್ಟಿಸುತ್ತಲೇ ಇರುವುದು ಸಾಧ್ಯವಿಲ್ಲ’’ ಎಂದಿದ್ದರು ಮೋದಿ. ಅವರು ಈ ಮಾತುಗಳನ್ನು ಮುಸ್ಲಿಮ್ ಸಮುದಾಯವನ್ನು ಉದ್ದೇಶಿಸಿ ಹೇಳಿದ್ದರು ಎನ್ನುವುದು ಸ್ಪಷ್ಟ. ಅವರ ಇಂತಹ ಪ್ರಚೋದನಾಕಾರಿ ಮಾತುಗಳಿಂದಾಗಿ ಭಾರತೀಯ ಜನತಾ ಪಕ್ಷದ ಆಡಳಿತವಿದ್ದ ಹಲವಾರು ರಾಜ್ಯಗಳಲ್ಲಿ ‘ಜನಸಂಖ್ಯಾ ನಿಯಂತ್ರಣ ಕಾನೂನು’ಗಳನ್ನು ತರಲಾಗಿದೆ.

ಉತ್ತರ ಪ್ರದೇಶದಲ್ಲಿ ಸರಕಾರ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಿದೆ. ಆದರೂ ಅಲ್ಲಿರುವ ‘ಜನಸಂಖ್ಯಾ ಸಮಾಧಾನ ಫೌಂಡೇಶನ್’ ಅಧ್ಯಕ್ಷ ಅನಿಲ್ ಚೌಧರಿ ಗಾಝಿಯಾಬಾದಿನಲ್ಲಿ ಹಿಂದೂಗಳ ಬೃಹತ್ ಸಭೆಯನ್ನು ಆಯೋಜಿಸಿದ್ದಾರೆ, ಆಮರಣ ಉಪವಾಸಕ್ಕೆ ಕುಳಿತಿದ್ದಾರೆ. ಹಿಂದೂಗಳು ಎಚ್ಚೆತ್ತದಿದ್ದರೆ ಬಹಳ ಬೇಗನೆ ಭಾರತದ ಪರಿಸ್ಥಿತಿ ಇರಾನ್, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಗಳಂತಾಗಿ ಹಿಂದೂಗಳಿಗೇ ಸ್ಥಾನವಿಲ್ಲದಾಗುತ್ತದೆ ಎಂದು ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.

ಹಾಗೆ ನೋಡಿದರೆ ಭಾರತದ ಜನಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳದ ಪ್ರಮಾಣ ಕಡಿಮೆಯಾಗುತ್ತಿದೆ. 1951 ಹಾಗೂ 1961ರ ನಡುವೆ ಭಾರತದ ಜನಸಂಖ್ಯೆ ಪ್ರತಿಶತ 21.6ರಷ್ಟು ಹೆಚ್ಚಿತ್ತು. 2001 ಹಾಗೂ 2010ರ ನಡುವೆ ಈ ಸಂಖ್ಯೆ 17.7ಕ್ಕೆ ಇಳಿದಿತ್ತು. ಜನಸಂಖ್ಯಾ ತಜ್ಞರ ಪ್ರಕಾರ ಭಾರತದ ಜನಸಂಖ್ಯೆ 2050ರ ಹೊತ್ತಿಗೆ 154 ಕೋಟಿ ಆಗಿ ಪರಾಕಾಷ್ಠೆಯನ್ನು ತಲುಪಿ ನಂತರ ಇಂದು ಯುರೋಪಿನ ಹಲವಾರು ದೇಶಗಳಲ್ಲಿ ಆಗುತ್ತಿರುವಂತೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾದರೆ ಈ ‘ಜನಸಂಖ್ಯಾ ನಿಯಂತ್ರಣ ಕಾನೂನು’ಗಳ ಅವಶ್ಯಕತೆ ಇದೆಯೇ?

ಭಾರತೀಯ ಜನತಾ ಪಕ್ಷ, ಆರೆಸ್ಸೆಸ್ ಮೊದಲಾದವರ ಮೊಂಡುವಾದವೇನೆಂದರೆ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಬೇಕಾಬಿಟ್ಟಿಯಾಗಿ ಬೆಳೆಯುತ್ತಿದೆ. ಯಾಕೆಂದರೆ ಅವರು ನಾಲ್ಕು-ನಾಲ್ಕು ಮದುವೆ ಮಾಡಿಕೊಳ್ಳುತ್ತಾರೆ, ಹತ್ತಿಪ್ಪತ್ತು ಮಕ್ಕಳನ್ನು ಹುಟ್ಟಿಸುತ್ತಾರೆ ಎನ್ನುವುದು. ಆದುದರಿಂದಲೇ ಸಾಕ್ಷಿ ಮಹಾರಾಜ್, ಸಾಧ್ವಿ ಪ್ರಾಚೀ ಹಾಗೂ ಬದ್ರಿಕಾಶ್ರಮದ ಶಂಕರಾಚಾರ್ಯ ಮೊದಲಾದ ಮತಾಂಧರು ಹಿಂದೂಗಳು ಕೂಡ ಹೆಚ್ಚು ಹೆಚ್ಚು ಮಕ್ಕಳನ್ನು ಹೆರಬೇಕೆಂದು ಹೇಳುತ್ತಿದ್ದಾರೆ. ಆದರೆ ವಸ್ತುಸ್ಥಿತಿ ಅವರ ವಾದಗಳನ್ನು ಪೊಳ್ಳುವಾದಗಳೆಂದು ರುಜುವಾತು ಪಡಿಸುತ್ತದೆ.

2011ರ ಜನಗಣತಿಯ ಪ್ರಕಾರ ಭಾರತದ ಮುಸ್ಲಿಮರಲ್ಲಿ ಲಿಂಗ ಅನುಪಾತ 1,000/951 ಅಂದರೆ ಮುಸ್ಲಿಮರಲ್ಲಿ 1,000 ಗಂಡಸರಿದ್ದರೆ ಬರಿ 951 ಹೆಂಗಸರಿದ್ದಾರೆ ಎಂದರ್ಥ. ಇದರ ಅರ್ಥ ಮುಸ್ಲಿಮ್ ಗಂಡಸರು ನಾಲ್ಕು-ನಾಲ್ಕು ಹೆಂಗಸರನ್ನು ಮದುವೆಯಾದರೆ 1,000 ಮುಸ್ಲಿಮ್ ಗಂಡಸರಲ್ಲಿ ಬರಿ 237 ಗಂಡಸರು ಮಾತ್ರ ಮದುವೆಯಾಗಬಹುದು, ಮಿಕ್ಕುಳಿದ 763 ಗಂಡಸರಿಗೆ ಹೆಣ್ಣುಗಳೇ ಉಳಿದಿರುವುದಿಲ್ಲ. ನಾಲ್ಕು ಮದುವೆಯಾಗುವುದು ಹಾಗಿರಲಿ, ಒಬ್ಬ ಮುಸ್ಲಿಮ್ ಗಂಡಸು ಒಬ್ಬಳೇ ಮುಸ್ಲಿಮ್ ಹೆಂಗಸನ್ನು ಮದುವೆಯಾದರೂ 1,000 ಮುಸ್ಲಿಮ್ ಗಂಡಸರಲ್ಲಿ 49 ಗಂಡಸರಿಗೆ ಹೆಣ್ಣುಗಳೇ ಉಳಿದಿರುವುದಿಲ್ಲ. ಹಾಗೆ ನೋಡಿದರೆ 1961ರ ಜನಗಣತಿಯ ಪ್ರಕಾರ ನಾಲ್ಕು ಹೆಂಗಸರನ್ನು ಮದುವೆಯಾಗಲು ಇಸ್ಲಾಮ್‌ನಲ್ಲಿ ಅನುಮತಿ ಇದ್ದರೂ ಬಹುಪತ್ನಿತ್ವ ಮುಸ್ಲಿಮರಲ್ಲಿ ಪ್ರತಿಶತ 5.7 ಇತ್ತು, ಆದರೆ ಒಬ್ಬಳನ್ನೇ ಮದುವೆಯಾಗಬೇಕೆಂದು ಹಿಂದೂಗಳಲ್ಲಿ ಕಾನೂನು ಇದ್ದರೂ ಅವರಲ್ಲಿ ಬಹುಪತ್ನಿತ್ವ ಪ್ರತಿಶತ 5.8 ಇತ್ತು.

ಜನಸಂಖ್ಯೆಯಲ್ಲಿ ಹೆಚ್ಚಳವಾಗುವುದು ಒಬ್ಬ ಗಂಡಸು ಎಷ್ಟು ಹೆಂಗಸರನ್ನು ಮದುವೆಯಾಗುತ್ತಾನೆ ಎಂಬುದನ್ನು ಅವಲಂಬಿಸಿರುವುದಿಲ್ಲ, ಆದರೆ ಒಬ್ಬ ಹೆಂಗಸು ಎಷ್ಟು ಮಕ್ಕಳನ್ನು ಹೆರುತ್ತಾಳೆ ಎನ್ನುವುದನ್ನು ಅವಲಂಬಿಸಿರುತ್ತದೆ. ಇದನ್ನು ಒಟ್ಟು ಫಲವತ್ತತೆಯ ಪ್ರಮಾಣ (ಖಿoಣಚಿಟ ಈeಡಿಣiಟiಣಥಿ ಖಚಿಣe-ಖಿಈಖ) ಎನ್ನುತ್ತಾರೆ. ಒಬ್ಬ ಗಂಡಸು ಹಾಗೂ ಒಬ್ಬ ಹೆಂಗಸು ಸೇರಿ ಇಬ್ಬರು ಮಕ್ಕಳನ್ನು ಹೆತ್ತರೆ ಜನಸಂಖ್ಯೆಯಲ್ಲಿ ಹೆಚ್ಚಳವಾಗುವುದಿಲ್ಲ ಯಾಕೆಂದರೆ ಹುಟ್ಟಿದ ಇಬ್ಬರು ಮಕ್ಕಳು ತಮ್ಮ ತಂದೆತಾಯಿಯ ನಂತರ ಜನಸಂಖ್ಯೆಯಲ್ಲಿ ಅವರ ಸ್ಥಾನ ಆಕ್ರಮಿಸುತ್ತಾರೆ.

1991ರಲ್ಲಿ ನಡೆಸಿದ ಮೊದಲ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಹಿಂದೂ ಮಹಿಳೆಯರ ಟಿಎಫ್‌ಆರ್ 3.3 ಇದ್ದರೆ ಮುಸ್ಲಿಮ್ ಮಹಿಳೆಯರ ಟಿಎಫ್‌ಆರ್ 4.41 ಇತ್ತು. 2015ರಲ್ಲಿ ನಡೆಸಿದ ನಾಲ್ಕನೇ ಸಮೀಕ್ಷೆಯ ಪ್ರಕಾರ ಹಿಂದೂ ಮಹಿಳೆಯರ ಟಿಎಫ್‌ಆರ್ 2.13 ಇದ್ದರೆ ಮುಸ್ಲಿಮ್ ಮಹಿಳೆಯರ ಟಿಎಫ್‌ಆರ್ 2.6 ಇತ್ತು. ಅಂದರೆ 1991 ಹಾಗೂ 2015ರ ನಡುವೆ ಹಿಂದೂ ಮಹಿಳೆಯರಲ್ಲಿ ಟಿಎಫ್‌ಆರ್ ಬರೀ 1.17 ರಷ್ಟು ಕಡಿಮೆಯಾಗಿದ್ದರೆ ಅದು ಮುಸ್ಲಿಮ್ ಮಹಿಳೆಯರಲ್ಲಿ 1.81ರಷ್ಟು ಕಡಿಮೆಯಾಗಿದೆ. ಅಂದರೆ ಹಿಂದೂ ಮಹಿಳೆಯರಿಗಿಂತ ಮುಸ್ಲಿಮ್ ಮಹಿಳೆಯರಲ್ಲಿ ಟಿಎಫ್‌ಆರ್‌ನಲ್ಲಿ ಹೆಚ್ಚು ಇಳಿತವಾಗುತ್ತಿದೆ. ಈ ವರದಿಗಳು ಹಿಂದೂ ಮಹಿಳೆಯರಿಗಿಂತ ಹೆಚ್ಚು ಮುಸ್ಲಿಮ್ ಮಹಿಳೆಯರು ಕುಟುಂಬ ಯೋಜನೆ ವಿಧಾನಗಳನ್ನು ಬಳಸುತ್ತಿದ್ದಾರೆ ಎಂದೂ ದಾಖಲಿಸಿವೆ. ಉದಾಹರಣೆಗೆ ಹಿಂದೂ ಬಾಹುಳ್ಯವಿರುವ ಉತ್ತರ ಪ್ರದೇಶ (ಶೇ. 89), ಬಿಹಾರ (ಶೇ. 83) ಹಾಗೂ ಮಧ್ಯ ಪ್ರದೇಶಗಳಲ್ಲಿ (ಶೇ. 90) ಟಿಎಫ್‌ಆರ್ ಕ್ರಮವಾಗಿ 2.74, 3.41 ಮತ್ತು 2.32 ಇದೆ. ಆದರೆ ಹಿಂದೂ ಜನಸಂಖ್ಯೆ ಕಡಿಮೆ ಇರುವ ಅಸ್ಸಾಂ (ಶೇ. 61), ಕೇರಳ (ಶೇ. 54) ಹಾಗೂ ಜಮ್ಮು-ಕಾಶ್ಮೀರ (ಶೇ. 28)ಗಳಲ್ಲಿ ಟಿಎಫ್‌ಆರ್ ಕ್ರಮವಾಗಿ ಶೇ. 2.21, ಶೇ. 1.56 ಹಾಗೂ ಶೇ. 2.01 ಇದೆ.

ಟಿಎಫ್‌ಆರ್ ಹೆಚ್ಚು ಅಥವಾ ಕಡಿಮೆ ಇರುವುದಕ್ಕೆ ಧರ್ಮದಲ್ಲಿ ಕಾರಣ ಹುಡುಕುವುದು ವ್ಯರ್ಥ ಎನಿಸುತ್ತದೆ. ಅದಕ್ಕೆ ಕಾರಣಗಳನ್ನು ಶಿಕ್ಷಣದ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಹುಡುಕುವುದು ಹೆಚ್ಚು ಸಮಂಜಸವಾದೀತು. ಉದಾಹರಣೆಗೆ ಸಾಕ್ಷರತೆಯ ಪ್ರಮಾಣ ಪ್ರತಿಶತ 94.1 ಇರುವ ತುರ್ಕಿಯಲ್ಲಿ ಟಿಎಫ್‌ಆರ್ 2.1 ಇದ್ದರೆ ಸಾಕ್ಷರತೆಯ ಪ್ರಮಾಣ ಪ್ರತಿಶತ 85 ಇರುವ ಇರಾನಿನಲ್ಲಿ ಟಿಎಫ್‌ಆರ್ 1.85 ಇದೆ. ಸುಮಾರು 250 ವರ್ಷಗಳ ಹಿಂದೆಯೇ ಫ್ರೆಂಚ್‌ತತ್ವಜ್ಞಾನಿ ಹಾಗೂ ಗಣಿತಜ್ಞ ಮಾರ್ಕು ದು ಕುಂದೊರ್ಸೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಜನಸಂಖ್ಯಾ ನಿಯಂತ್ರಣ ಸಾಧ್ಯವಾಗುತ್ತದೆ ಅಷ್ಟೇ ಅಲ್ಲ, ಜನಸಂಖ್ಯೆಯನ್ನು ಕಡಿಮೆ ಮಾಡುವಲ್ಲಿಯೂ ಸಹಕಾರಿಯಾಗುತ್ತದೆ ಎಂದು ಹೇಳಿದ್ದ. ಇದೇ ಮಾತನ್ನು ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಹೇಳಿದ್ದಾರೆ. ಆದರೆ ಅಂದು ಅರ್ಥಶಾಸ್ತ್ರಜ್ಞ ರಾಬರ್ಟ್ ಮಾಲ್ಥಸ್ ಈ ವಾದವನ್ನು ಖಂಡಿಸಿದ್ದ, ಇಂದು ಭಾರತೀಯ ಜನತಾ ಪಕ್ಷದವರು ಈ ನಿಲುವನ್ನು ಖಂಡಿಸುತ್ತಿದ್ದಾರೆ.

ಭಾರತ, ನೇಪಾಳ ಹಾಗೂ ಬಾಂಗ್ಲಾದೇಶಗಳ ನಂತರ ಅತ್ಯಂತ ಹೆಚ್ಚು ಹಿಂದೂಗಳು ವಾಸವಾಗಿರುವುದು ಪಾಕಿಸ್ತಾನದಲ್ಲಿ. ಭಾರತದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ವಾದದ ಇನ್ನೊಂದು ಮಗ್ಗುಲನ್ನು ಅಂದರೆ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದನ್ನು ಲೋಕಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ತೆರೆದಿಟ್ಟರು. ಹೊರದೇಶಗಳಿಂದ ಬಂದ ಹಿಂದೂಗಳಿಗೆ ಭಾರತದ ನಾಗರಿಕತೆಯನ್ನು ಕೊಡುವ ಬಗೆಗಿನ ಮಸೂದೆಯ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸುತ್ತಾ ಅಮಿತ್ ಶಾ ಅವರು ಪಾಕಿಸ್ತಾನದಲ್ಲಿದ್ದ ಅಲ್ಪಸಂಖ್ಯಾತರ ಜನಸಂಖ್ಯೆ 1947ರಲ್ಲಿ ಪ್ರತಿಶತ 23 ಇದ್ದದ್ದು 2011ರ ಹೊತ್ತಿಗೆ ಬರೀ 3.7 ಆಗಿತ್ತು ಎಂದಿದ್ದರು. ಹಾಗೆಯೇ ಬಾಂಗ್ಲಾದೇಶದಲ್ಲಿ 1947ರಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಪ್ರತಿಶತ 22 ಇದ್ದದ್ದು 2011ರಲ್ಲಿ ಪ್ರತಿಶತ 7.8 ಆಯಿತು ಎಂದಿದ್ದರು. ‘‘ಅವರೆಲ್ಲ ಎಲ್ಲಿ ಹೋದರು? ಇಲ್ಲಾ, ಅವರ ಧರ್ಮ ಪರಿವರ್ತನೆ ಮಾಡಲಾಯಿತು ಅಥವಾ ಅವರನ್ನು ಕೊಲ್ಲಲಾಯಿತು ಅಥವಾ ಅವರನ್ನು ಓಡಿಸಲಾಯಿತು ಅಥವಾ ಅವರು ಭಾರತಕ್ಕೆ ಬಂದರು’’ ಎಂದಿದ್ದರು.

ಆದರೆ ಅವರು ನೀಡಿದ ಈ ಅಂಕಿಸಂಖ್ಯೆಗಳಿಗೆ ಅವರು ಯಾವ ಆಧಾರಗಳನ್ನೂ ನೀಡಲಿಲ್ಲ. ಇಂಥದೇ ಒಂದು ಲೇಖನವನ್ನು ಪಾಕಿಸ್ತಾನದ ಮಾಜಿ-ಸಂಸದೆ ಫರಾಹ್ನಾಝ್ ಇಷ್ಫಹಾನಿ ಎಂಬವರು ಬರೆದಿದ್ದಾರೆ. ಆದರೆ ಅವರೂ ಯಾವ ಆಧಾರವನ್ನೂ ಉಲ್ಲೇಖಿಸಿಲ್ಲ.

ಪಾಕಿಸ್ತಾನದಲ್ಲಿ 1947ರಲ್ಲಿ ಯಾವ ಜನಗಣತಿಯೂ ಆಗಿರಲಿಲ್ಲವಾದುದರಿಂದ ಇವರೆಲ್ಲ ಹೀಗೆ ಹೇಳಿದ್ದು ಮೇಲ್ನೋಟಕ್ಕೇ ತಪ್ಪು ಎಂದು ಗೊತ್ತಾದರೂ ಈ ಬಗ್ಗೆ ಸರಿಯಾದ ಅಂಕಿಸಂಖ್ಯೆಗಳನ್ನು ತಿಳಿದುಕೊಳ್ಳುವುದು ಈ ವಾದಗಳ ಪೊಳ್ಳುತನವನ್ನು ಗುರುತಿಸುವಲ್ಲಿ ಸಹಕಾರಿಯಾಗುತ್ತದೆ.

ಪಾಕಿಸ್ತಾನದಲ್ಲಿ ಮೊದಲ ಜನಗಣತಿಯಾದದ್ದು 1951ರಲ್ಲಿ. ಅದರ ಪ್ರಕಾರ ಪಾಕಿಸ್ತಾನದ ಒಟ್ಟು ಜನಸಂಖ್ಯೆ 7.5 ಕೋಟಿ ಇದ್ದು ಅದರಲ್ಲಿ 3.3 ಕೋಟಿ ಜನ ಪಶ್ಚಿಮ ಪಾಕಿಸ್ತಾನದಲ್ಲಿಯೂ 4.2 ಕೋಟಿ ಜನ ಪೂರ್ವ ಪಾಕಿಸ್ತಾನದಲ್ಲಿ, ಅಂದರೆ ಇಂದಿನ ಬಾಂಗ್ಲಾದೇಶದಲ್ಲಿಯೂ ಇದ್ದರು. ಅಂದು ಪಾಕಿಸ್ತಾನದಲ್ಲಿದ್ದ ಒಟ್ಟು ಜನರ ಪೈಕಿ 92,25,000 ಜನ ಹಿಂದೂಗಳಿದ್ದರು, ಅಂದರೆ ಜನಸಂಖ್ಯೆಯ ಪ್ರತಿಶತ 12.3ರಷ್ಟು ಜನ ಹಿಂದೂಗಳಾಗಿದ್ದರು. ಇವರಲ್ಲಿ 5,39,200 ಹಿಂದೂಗಳು ಪಶ್ಚಿಮ ಪಾಕಿಸ್ತಾನದಲ್ಲಿ ಇದ್ದರು. ಅಂದರೆ ಪಶ್ಚಿಮ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ 1.6 ಪ್ರತಿಶತ ಜನ ಹಿಂದೂಗಳಾಗಿದ್ದರು. ಪೂರ್ವ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ 92,62,000 ಹಿಂದೂಗಳಿದ್ದರು, ಅಂದರೆ ಪೂರ್ವಪಾಕಿಸ್ತಾನದ ಒಟ್ಟು ಜನಸಂಖ್ಯೆಯ 22.05 ಪ್ರತಿಶತ ಜನ ಹಿಂದೂಗಳಾಗಿದ್ದರು.

ಬಾಂಗ್ಲಾದೇಶ ಹೊರತು ಪಡಿಸಿ ಪಾಕಿಸ್ತಾನದಲ್ಲಿ 2013ರಲ್ಲಿ ದಕ್ಷಿಣ ಏಶ್ಯದಲ್ಲಿಯೇ ಮೊದಲ ಡಿಜಿಟಲ್ ಜನಗಣತಿ ನಡೆದಿದ್ದರೂ ಅಲ್ಪಸಂಖ್ಯಾತರ ಮಾಹಿತಿ ದೊರಕುವುದು 2017ರ ಜನಗಣತಿಯಲ್ಲಿ. 2017ರ ಜನಗಣತಿಯ ಪ್ರಕಾರ ಪಾಕಿಸ್ತಾನದ ಒಟ್ಟು ಜನಸಂಖ್ಯೆ 20,76,84,000. ಇದರಲ್ಲಿ ಹಿಂದೂಗಳ ಸಂಖ್ಯೆ 44,44,437. ಅಂದರೆ 1951ರಿಂದ 2017ರ ನಡುವಿನ 66 ವರ್ಷಗಳಲ್ಲಿ ಹಿಂದೂಗಳ ಜನಸಂಖ್ಯೆ 39,05,237ರಷ್ಟು ಹೆಚ್ಚಾಗಿದೆ. ಶೇಕಡಾವಾರು ಕೂಡ 1951ರಲ್ಲಿ ಶೇ. 1.6 ಇದ್ದ ಅವರು 2017ರ ಹೊತ್ತಿಗೆ ಶೇ. 2.14 ಆಗಿದ್ದಾರೆ. ಈ ಅಂಕಿಸಂಖ್ಯೆಗಳು ಭಾರತದ ಗೃಹ ಮಂತ್ರಿಗಳಾದ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸುಳ್ಳು ಹೇಳುತ್ತಿದ್ದರು ಎನ್ನುವುದನ್ನು ರುಜುವಾತು ಪಡಿಸುತ್ತವೆ.

ಪಾಕಿಸ್ತಾನ ಒಡೆದು ಇಬ್ಭಾಗವಾಗಿದ್ದು 1971ರಲ್ಲಿ. ಬಾಂಗ್ಲಾದೇಶದಲ್ಲಿ ಇತ್ತೀಚಿನ ಜನಗಣತಿ ಆಗಿದ್ದು 2022ರಲ್ಲಿ. ಅದರ ಪ್ರಕಾರ ಬಾಂಗ್ಲಾದೇಶದ ಒಟ್ಟು ಜನಸಂಖ್ಯೆ 16,51,58,616 ಆಗಿತ್ತು. ಅವರಲ್ಲಿ 15,03,60,405 ಜನ ಮುಸ್ಲಿಮರು ಹಾಗೂ 1,31,30,110 ಜನ ಹಿಂದೂಗಳೂ ಆಗಿದ್ದರು. ಅಂದರೆ ಮುಸ್ಲಿಮರ ಸಂಖ್ಯೆಯಲ್ಲಿ 12,31,58,616 ಹೆಚ್ಚಳವಾಗಿದ್ದರೆ ಹಿಂದೂಗಳ ಸಂಖ್ಯೆಯಲ್ಲಿ 3,90,5,069 ಹೆಚ್ಚಳವಾಗಿತ್ತು. ಮುಸ್ಲಿಮರ ಸಂಖ್ಯೆಯ ಹೆಚ್ಚಳದ ಪ್ರಮಾಣ ಶೇ. 74 ಆಗಿದ್ದರೆ ಹಿಂದೂಗಳ ಹೆಚ್ಚಳದ ಪ್ರಮಾಣ ಶೇ. 29 ಆಗಿತ್ತು. ಆದುದರಿಂದ 1951ರಲ್ಲಿ ಹಿಂದೂಗಳು ಒಟ್ಟು ಬಾಂಗ್ಲಾದೇಶದ (ಪೂರ್ವ ಪಾಕಿಸ್ತಾನದ) ಜನಸಂಖ್ಯೆಯ ಪ್ರತಿಶತ 22.05 ಆಗಿದ್ದುದ್ದು 2022ರಲ್ಲಿ ಪ್ರತಿಶತ 7.73 ಆಗಿತ್ತು. ಇದಕ್ಕೆ ಕಾರಣ ಹಿಂದೂಗಳ ಸಂಖ್ಯೆಯಲ್ಲಿ ಆದ ಹೆಚ್ಚಳಕ್ಕಿಂತ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಮುಸ್ಲಿಮರ ಸಂಖ್ಯೆಯಲ್ಲಿ ಆದ ಹೆಚ್ಚಳ. 1951ರಲ್ಲಿ ಬಾಂಗ್ಲಾದೇಶದ ಒಟ್ಟು ಫಲವತ್ತತೆಯ ಪ್ರಮಾಣ 6.36 ಆಗಿತ್ತು. ಈಗ ಅದು 1.9 ಆಗಿದೆ. ಆದುದರಿಂದ ಇನ್ನು ಮುಂದೆ ಅಲ್ಲಿ ಹಿಂದೂಗಳ ಜನಸಂಖ್ಯೆಯ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆಯಾಗದು. ಈ ಅಂಕಿಸಂಖ್ಯೆಗಳು ಕೂಡ ಭಾರತದ ಗೃಹ ಮಂತ್ರಿಗಳಾದ ಅಮಿತ್‌ಶಾ ಅವರು ಲೋಕಸಭೆಯಲ್ಲಿ ಸುಳ್ಳು ಹೇಳುತ್ತಿದ್ದರು ಎನ್ನುವುದನ್ನು ರುಜುವಾತು ಪಡಿಸುತ್ತವೆ.

ಈ ಅಂಕಿಸಂಖ್ಯೆಗಳು ಹಿಂದೂ ಮತಾಂಧರ ವಾದಗಳಲ್ಲಿ ಹುರುಳಿಲ್ಲ ಎನ್ನುವುದನ್ನು ರುಜುವಾತು ಪಡಿಸುತ್ತವೆ. ಆದರೆ ಈ ಅಂಕಿ-ಸಂಖ್ಯೆಗಳು ಮತಾಂಧರಿಗೆ ಅರ್ಥವೇ ಆಗುವುದಿಲ್ಲವಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಪು ಹೆದ್ದೂರಶೆಟ್ಟಿ

contributor

Similar News