ಫೆಲೆಸ್ತೀನ್ ಮೇಲಿನ ಇಸ್ರೇಲ್ ಆಕ್ರಮಣ ನಿಲ್ಲಬೇಕು ಅಂದ್ರೆ ಅಪರಾಧವೇ ?

► ಶಾಂತಿ ಸ್ಥಾಪನೆಯಾಗಲಿ ಎನ್ನುವವರನ್ನು ಕಾಂಗ್ರೆಸ್ ಸರಕಾರವೇಕೆ ಬಂಧಿಸುತ್ತಿದೆ ? ► ಗಾಝವನ್ನು ಸರ್ವನಾಶ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುವುದು ಕಾನೂನು ಬಾಹಿರವೇ ?

Update: 2023-10-19 18:33 GMT
Editor : Naufal | By : ಆರ್. ಜೀವಿ

Photo : PTI

ಸಾರ್ವಭೌಮ, ಸ್ವತಂತ್ರ, ಕಾರ್ಯಸಾಧು ಫೆಲೆಸ್ತೀನ್ ದೇಶ ಸ್ಥಾಪನೆ ಆಗಬೇಕು ಎಂಬ ಬಗ್ಗೆ ಭಾರತದ ಸುದೀರ್ಘ ಹಾಗೂ ಸ್ಥಿರ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಭಾರತ ಸರಕಾರವೇ ಮೊನ್ನೆ ಅಕ್ಟೊಬರ್ 12 ಕ್ಕೆ ಸ್ಪಷ್ಟವಾಗಿ ಹೇಳಿದೆ.

ಹಾಗಾದರೆ ಫೆಲೆಸ್ತೀನ್ ಮೇಲಾಗುತ್ತಿರುವ ಆಕ್ರಮಣ ಸಲ್ಲದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿರುವವರ ಮೇಲೇಕೆ ಇಲ್ಲಿ ಕೇಸು ಜಡಿಯಲಾಗುತ್ತಿದೆ ? ಅವರನ್ನೇಕೆ ಬಂಧಿಸಲಾಗುತ್ತಿದೆ ?. ಫೆಲೆಸ್ತೀನ್ ​ಮೇಲೆ ಇಸ್ರೇಲ್ ಇನ್ನಿಲ್ಲದಂತೆ ಆಕ್ರಮಣ ಮಾಡುತ್ತಿರುವ ಈ ಹೊತ್ತಿನಲ್ಲಿ,​

ಅಲ್ಲಿ ಸಾವಿರಾರು ಅಮಾಯಕರನ್ನು ಕೊಂದು ಹಾಕುತ್ತಿರುವಾಗ, ಅವರಿಗೆ ಅನ್ನ, ನೀರು, ಔಷಧಿ ಯಾವುದೂ ಸಿಗದಂತೆ ಮಾಡಿರುವಾಗ

​ಫೆಲೆಸ್ತೀನಿಯರ​ ಪರ ಸಹಾನುಭೂತಿ ವ್ಯಕ್ತಪಡಿಸುವ, ಮಾನವೀಯತೆ ತೋರಿಸುವ ಈ ದೇಶದ ಜನರನ್ನು ಅಪರಾಧಿಗಳೆಂಬಂತೆ ನೋಡಲಾಗುತ್ತಿರುವುದು ಯಾಕೆ ?.

ಭಾರತ ಸರಕಾರವೇ ತಾನು ಸ್ವತಂತ್ರ ​ಫೆಲೇಸ್ತೀನ್​ ಪರವಾಗಿದ್ದೇನೆ ಎಂದು ಹೇಳಿರುವಾಗ ಫೆಲೆಸ್ತೀನ್ ಮೇಲೆ ನಡೆಯುತ್ತಿರುವ​ ಇಸ್ರೇಲ್ ನ ದೌರ್ಜನ್ಯವನ್ನು​ ಶಾಂತಿಯುತವಾಗಿ ವಿರೋಧಿಸುವುದು​ ಈ ದೇಶದಲ್ಲಿ ​ತಪ್ಪಾಗೋದು ಹೇಗೆ ​ ?. ತಾನು ಸ್ವತಂತ್ರ ಫೆಲೆಸ್ತೀನ್ ಪರವಾಗಿದ್ದೇನೆ ಎಂದು ನರೇಂದ್ರ ಮೋದಿ ಸರಕಾರವೇ ಹೇಳುತ್ತಿರುವಾಗ ಫೆಲೆಸ್ತೇನಿ ಜನರಿಗೆ ಬೆಂಬಲ ಸೂಚಿಸುವುದು, ಅವರಿಗಾಗಿ ಪ್ರಾರ್ಥಿಸುವುದು, ಅವರನ್ನು ಬೆಂಬಲಿಸಿ ಶಾಂತಿಯುತ ಪ್ರದರ್ಶನ ನಡೆಸುವುದು ಭಾರತದಲ್ಲಿ ಅಪರಾಧ​ ಹೇಗಾಗುತ್ತದೆ ​ ?.

ಅಂಥ ಶಾಂತಿಯುತ ಪ್ರದರ್ಶನಕಾರರ ಮೇಲೇಕೆ ಪೊಲೀಸರು ಮುಗಿಬಿದ್ದು ಬಂಧಿಸುತ್ತಿದ್ದಾರೆ ? ಅವರನ್ನೇಕೆ ಗೂಂಡಾಗಳಂತೆ, ಕ್ರಿಮಿನಲ್ಗಳಂತೆ ನಡೆಸಿಕೊಳ್ಳಲಾಗುತ್ತಿದೆ​ ?. ​ಅಕ್ಟೊಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದಾಗ ಭಾರತ ಸರಕಾರ ಇಸ್ರೇಲ್ ಗೆ ಬೆಂಬಲ ವ್ಯಕ್ತಪಡಿಸಿತ್ತು.

ಆದರೆ ಇದು ಈಗ ಭಾರೀ ಆಕ್ರಮಣಕ್ಕೆ ತುತ್ತಾಗಿ ನಲುಗುತ್ತಿರುವ ​ಫೆಲೆಸ್ತೀನಿಯರ ನೋವಿಗೆ, ಸಂಕಟಕ್ಕೆ ಸ್ಪಂದಿಸುವ ಭಾರತೀಯರ ಸ್ವಾತಂತ್ರ್ಯವನ್ನೂ ಕಸಿಯುವ ಮಟ್ಟಕ್ಕೆ ಏಕೆ ಹೋಗಿದೆ​ ?. ಐತಿಹಾಸಿಕವಾಗಿ ನೋಡಿದರೆ, ​ಫೆಲೆ​ಸ್ತೀನ್ಗೆ ಬೆಂಬಲವಾಗಿರುವುದು ಭಾರತ ವಿದೇಶಾಂಗ ನೀತಿಯ ಅವಿಭಾಜ್ಯ ಭಾಗವೇ ಆಗಿದೆ.

ನೆಹರೂ ಕಾಲದಿಂದಲೂ, ಅಲಿಪ್ತ ನೀತಿಯ ನಡುವೆಯೂ ​ಫೆಲೆಸ್ತೀನ್ ಪರ ತನ್ನ ಸೈದ್ಧಾಂತಿಕ ಬೆಂಬಲವನ್ನು ಭಾರತ ವ್ಯಕ್ತಪಡಿಸಿತ್ತು.​ ಇವತ್ತಿಗೂ ಭಾರತದ ವಿದೇಶಾಂಗ ನೀತಿ ಆ ವಿಷಯದಲ್ಲಿ ಬದಲಾಗಿಲ್ಲ. 1974ರಲ್ಲಿ ​ಫೆಲೆ​ಸ್ತೀನ್ ಲಿಬರೇಶನ್ ಆರ್ಗನೈಸೇಶನ್ (PLO) ಅನ್ನು ​ಫೆಲೆಸ್ತೀನ್ ಜನರ ಏಕೈಕ ಮತ್ತು ಕಾನೂನುಬದ್ಧ ಪ್ರತಿನಿಧಿಯಾಗಿ ಗುರುತಿಸಿದ ಮೊದಲ ಅರಬ್ ಯೇತರ ದೇಶವೂ ಭಾರತವೇ.

1988ರಲ್ಲಿ ​ಫೆಲೆ​ಸ್ತೀನ್ ಅನ್ನು ಮಾನ್ಯ ಮಾಡಿದ್ದ ಮೊದಲ ದೇಶಗಳಲ್ಲಿ ಭಾರತವೂ ಒಂದು. ಬಹುಪಕ್ಷೀಯ ವೇದಿಕೆಗಳಲ್ಲಿ ​ಫೆಲೆ​ಸ್ತೀನ್ ಅನ್ನು ಭಾರತ ಬೆಂಬಲಿಸುತ್ತಲೇ ಬಂದಿದೆ. ಫೆಲೆಸ್ತೇನಿಯರ ಹಕ್ಕನ್ನು ಭದ್ರಪಡಿಸುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಿರ್ಣಯಗಳ ಪರವಾಗಿ ಭಾರತ ಈ ಮೊದಲು ಯಾವತ್ತೂ ನಿಂತಿದೆ.

ಇನ್ನು ಭಾರತ ಮತ್ತು ​ಫೆಲೆಸ್ತೀನ್ ನಡುವೆ ನಿಯಮಿತವಾಗಿ ಉನ್ನತ ಮಟ್ಟದ ದ್ವಿಪಕ್ಷೀಯ ಭೇಟಿಗಳೂ ನಡೆದಿವೆ. ಪ್ರಧಾನಿ ನರೇಂದ್ರ ಮೋದಿ 2018ರ ಫೆಬ್ರುವರಿ 10ರಂದು ​ಫೆಲೆಸ್ತೀನ್‌ಗೆ ಭೇಟಿ ನೀಡಿ​ದ್ದರು​. ಭಾರತದ ಪ್ರಧಾನಿಯೊಬ್ಬರ ಮೊದಲ ​ಫೆಲೆಸ್ತೀನ್‌ ಭೇಟಿ ಅದಾಗಿತ್ತು. ಅದಕ್ಕೂ ಮೊದಲು 2015ರಲ್ಲಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ​ಫೆಲೆಸ್ತೀನ್‌ಗೆ ಭೇಟಿ ನೀಡಿದ್ದರು. ಅದು ಕೂಡ ಭಾರತದ ರಾಷ್ಟ್ರಪತಿಯೊಬ್ಬರ ಮೊಲದ ​ಫೆಲೆ​ಸ್ತೀನ್ ಭೇಟಿಯಾಗಿತ್ತು.

​ಫೆಲೆಸ್ತೀನ್ ನಾಯಕರಾಗಿದ್ದ ಯಾ​ಸಿರ್ ಅರಾಫತ್ ಕೂಡ ಭಾರತಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರು. ಈಗಿನ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೂ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಕೋವಿಡ್ ಸಮಯದಲ್ಲಿಯೂ ಪರಸ್ಪರ ಸಹಕಾರ ಕುರಿತ ಚರ್ಚೆಗಳು ಎರಡೂ ದೇಶಗಳ ನಡುವೆ ನಡೆದೇ ಇದ್ದವು.

ಹೀಗಿರುವಾಗ, ಮೊನ್ನೆ ​ಅಕ್ಟೊಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆದಾಗ ಭಾರತ ​ಇಸ್ರೇಲ್ಗೆ​ ಬೆಂಬಲ ಘೋಷಿಸಿತು. ಹಮಾಸ್ ನಡೆಯನ್ನು ಖಂಡಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಅದನ್ನು ಭಯೋತ್ಪಾದಕ ದಾಳಿ ಎಂದಿದ್ದರು. ಇಸ್ರೇಲ್ ಜೊತೆ ನಿಲ್ಲುವುದಾಗಿ ಹೇಳಿದರು.

​ಆದರೆ ಆಮೇಲೆ ಇಸ್ರೇಲ್ ತನ್ನೆಲ್ಲ ಅಗಾಧ ಮಿಲಿಟರಿ ಶಕ್ತಿಯನ್ನು ಬಳಸಿಕೊಂಡು ಅಮೇರಿಕ ಸಹಿತ ಪ್ರಭಾವೀ ದೇಶಗಳ ಬೆಂಬಲದೊಂದಿಗೆ ಗಾಝ ಮೇಲೆ ಆಕ್ರಮಣ ಶುರು ಮಾಡಿ ಅಲ್ಲಿ ಸರ್ವನಾಶ ಮಾಡುತ್ತಿದೆ. ಆ ದಾಳಿ ಇಂದಿಗೂ ನಿಂತಿಲ್ಲ. ಆ ಆಕ್ರಮಣ ಶುರುವಾಗಿ ಐದು ದಿನಗಳ ಬಳಿಕ​ ​ ​ಫೆಲೆಸ್ತೀನ್ ಪರವಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಹೇಳಿಕೆ ​ಬಂತು.

​"ಫೆಲೆಸ್ತೇನ್ ವಿಚಾರದಲ್ಲಿ ಭಾರತದ ದೀರ್ಘಕಾಲದ ಮತ್ತು ಸ್ಥಿರವಾದ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ​" ಎಂಬ ಮಾತನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು. ​" ಭಾರತ ಯಾವಾಗಲೂ ​ಫೆಲೆಸ್ತೀನ್‌​ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯ​ ದೇಶವಾಗಿ, ಸುರಕ್ಷಿತ ಹಾಗು ಮಾನ್ಯತೆ ಪಡೆದ ಗಡಿಯೊಳಗೆ ಪಕ್ಕದ ಇಸ್ರೇಲ್ ಜೊತೆ ಶಾಂತಿಯುತವಾಗಿ ಬದುಕುವ ಸ್ಥಿತಿಗೆ, ನೇರ ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸುತ್ತದೆ​" ಎಂದು ಬಾಗ್ಚಿ ಹೇಳಿದರು.​

ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದೂ ಅವರು ಹೇಳಿದರು. ಆದರೆ, ಇದೆಲ್ಲದರ ಹೊರತಾಗಿಯೂ, ಭಾರತ ಹಿಂದೆಂದಿಗಿಂತಲೂ ಇಂದು ಇಸ್ರೇಲ್‌ಗೆ ಹತ್ತಿರವಾಗಿದೆ ಎಂಬು​ದು ಅಷ್ಟೇ ನಿಜ. ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೈಯಕ್ತಿಕ ಮಟ್ಟದಲ್ಲಿ ಸ್ನೇಹಿತರಂತೆ ಕಾಣುತ್ತಿದ್ದಾರೆ.

ಭಾರತ ಮತ್ತು ಇಸ್ರೇಲ್ ಆರ್ಥಿಕ ಸಂಬಂಧ ಕೂಡ ತೀರಾ ಹೊಸ​ದಲ್ಲದಿದ್ದರೂ ಅದು ಈಚಿನ ವರ್ಷಗಳಲ್ಲಿ ವಿಶೇಷವಾಗಿ ಗಾಢವಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವಸಂಸ್ಥೆಯಂತಹ ವೇದಿಕೆಗಳಲ್ಲಿ ಭಾರತ ​ಫೆಲೆಸ್ತೀನ್ ಅನ್ನು ಬೆಂಬಲಿಸುವುದೂ ಕಡಿಮೆಯಾಗಿದೆ ಎಂದೂ ಹೇಳಲಾಗುತ್ತದೆ.

ಮೋದಿ ಪ್ರಧಾನಿಯಾದ ಬಳಿಕದ ಇಸ್ರೇಲ್ ಜೊತೆಗಿನ ಸಂಬಂಧವಂತೂ ವ್ಯಾವಹಾರಿಕ ಮಾತ್ರವಾಗಿರದೆ ಸೈದ್ಧಾಂತಿಕ ಅಂಶವನ್ನೂ ಒಳಗೊಂಡಿದೆ. 2015ರಿಂದಲೂ ಭಾರತ ಅನೇಕ ವಿಚಾರಗಳಲ್ಲಿ ಇಸ್ರೇಲ್ ಪರವಾಗಿ ನಿಲ್ಲುತ್ತ ಬಂದಿದೆ. ಇಸ್ರೇಲ್ ಕೂಡ ಭಾರತದ, ಪೌರತ್ವ ತಿದ್ದುಪಡಿ​ ಕಾಯ್ದೆ ಜಾರಿ ನಿರ್ಧಾರದಂಥ ಕೆಲವು ನಿಲುವುಗಳಿಗೆ, ಹಲವು ದೇಶಗಳ ವಿರೋಧದ ನಡುವೆಯೂ ತಾನು ಬೆಂಬಲಿಸಿದ್ದಿದೆ.

ರಕ್ಷಣಾ ಕ್ಷೇತ್ರದಲ್ಲಿಯೂ ಎರಡೂ ದೇಶಗಳ ನಡುವೆ ವ್ಯವಹಾರ ಬೆಳೆಯುತ್ತಿದೆ. ಇದೆಲ್ಲದರ ನಡುವೆಯೇ ಈಗ ಭಾರತ​ದಲ್ಲಿ , ದೇಶದೊಳಗಿನ ​ಫೆಲೆಸ್ತೀನ್ ಪರ ದನಿ ಮತ್ತು ಬೆಂಬಲಗಳನ್ನೂ ದಮನಿಸಲು ಮುಂದಾಗಿರುವುದು ಮಾತ್ರ ವಿಚಿತ್ರವಾಗಿದೆ.

ಕಾಂಗ್ರೆ​ಸ್ ಸಹಿತ ಹಲವು ವಿಪಕ್ಷಗಳು ​ಫೆಲೆಸ್ತೀನ್ಗೆ ಬೆಂಬಲ ವ್ಯಕ್ತಪಡಿಸಿವೆ. ​ಅದರ ಮೇಲೆ ನಡೆಯುತ್ತಿರುವ ಆಕ್ರಮಣ ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿವೆ. ಫೆಲೆಸ್ತೀನಿಯರ​ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ಆಕ್ರಮಣದ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.​ ಆ ಆಕ್ರಮಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಆದರೆ ​ಆ ಶಾಂತಿಯುತ ಪ್ರತಿಭಟನೆ, ಪ್ರದರ್ಶನಗಳನ್ನು ಹತ್ತಿಕ್ಕುವ ಯತ್ನ ಯಾಕೆ ಎಂಬುದೇ ಈಗಿನ ಪ್ರಶ್ನೆ.

ದೆಹಲಿಯಲ್ಲಿ ಅಂಥ ಪ್ರತಿಭಟನಾಕಾರರನ್ನು ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು ಬಂಧಿಸಿದ ಘಟನೆ ನಡೆದಿದೆ. ಎಡಪಂಥೀಯ ವಿದ್ಯಾರ್ಥಿ ಗುಂಪುಗಳು, ಟ್ರೇಡ್ ಯೂನಿಯನ್‌ಗಳು ಮತ್ತು ಮಾನವ ಹಕ್ಕುಗಳ ವೇದಿಕೆಗಳ ಸುಮಾರು 100 ಸದಸ್ಯರನ್ನು ಬಂಧಿಸಲಾಗಿದೆ.

ಇನ್ನೂ ವಿಚಿತ್ರವೆನ್ನಿಸುವುದು, ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿಯೂ ​ಫೆಲೆ​ಸ್ತೀನ್ ​ಗೆ ಸಹಾನುಭೂತಿ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನು ಬಂಧಿಸಲಾಗುತ್ತಿರುವ ವಿಚಾರ. ಗಾಝಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ​ಶಾಂತಿಯುತ ಪ್ರದರ್ಶನ ಪ್ರತಿಭಟನೆ ನಡೆಸಿದ್ದ ಬಹುತ್ವ ಕರ್ನಾಟಕದ ಕಾರ್ಯಕರ್ತರ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

​ಫೆಲೆಸ್ತೀನ್ ಪರವಾಗಿ ವಾಟ್ಸಾಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದ ಆರೋಪದಲ್ಲಿ ಯುವಕನೊಬ್ಬನನ್ನು ಹೊಸಪೇಟೆ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಹಮಾಸ್‌ನ ಗೆಲುವಿಗಾಗಿ ವಿಶೇಷ ಪ್ರಾರ್ಥನೆಗೆ ಕರೆ ನೀಡಿದ್ದ ಆರೋಪದಲ್ಲಿ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಸಹಜವಾಗಿಯೇ, ಯುದ್ಧ ನಿಲ್ಲಬೇಕು ಎಂಬುದು ಎಲ್ಲ ಪ್ರತಿಭಟನಾಕಾರರ ಆಶಯವಾಗಿರುತ್ತದೆ. ಅಮಾಯಕರ ಮೇಲಿನ ದೌರ್ಜನ್ಯವನ್ನು ವಿರೋಧಿಸುವುದು ಯಾರೇ ಆದರೂ ಮಾಡುವ ಕೆಲಸ. ಹಮಾಸ್ ​ ಇಸ್ರೇಲ್ ನಲ್ಲಿ ಅಮಾಯಕ ಜನರ ಹತ್ಯೆ ಮಾಡಿದ್ದನ್ನು ಖಂಡಿಸುವಷ್ಟೇ ಪ್ರಬಲವಾಗಿ ಗಾಜಾಪಟ್ಟಿಯಲ್ಲಿ​ ನಿಲ್ಲದ ಇಸ್ರೇಲ್​ ನ ಅಟ್ಟಹಾಸವನ್ನೂ ಖಂಡಿಸಬೇಕಾಗುತ್ತದೆ.​ ಇದು ಎಲ್ಲ ಪ್ರಜ್ಞಾವಂತರ ಸಹಜ ನ್ಯಾಯದ ಬೇಡಿಕೆಯಾಗಿದೆ.

ಹೀಗಿರುವಾಗಲೂ, ​ಫೆಲೆಸ್ತೀನ್ ಪರ ಪ್ರತಿಭಟನೆಗಳ ವಿರುದ್ಧ ಪೊಲೀಸರು ಮುಗಿಬೀಳುತ್ತಿರುವುದೇಕೆ? ಪ್ರತಿಭಟನಾಕಾರರನ್ನು ಬಂಧಿಸುವುದು, ಎಫ್ಐಆರ್ ಹಾಕುತ್ತಿರುವುದು ಏಕೆ?. ​ಯಾರನ್ನು ಓಲೈಸಲು ಪೊಲೀಸರು ಹೀಗೆ ಮಾಡುತ್ತಿದ್ದಾರೆ​ ? ಅವರಿಗೆ ಪ್ರತಿಭಟನಾಕಾರರನ್ನು ಬಂಧಿಸಲು ಪರೋಕ್ಷ ಸೂಚನೆ​ ಏನಾದರೂ ಇದೆಯೇ ?​.

"ನರಮೇಧ ಮಾಡಿ, ಹತ್ಯಾಕಾಂಡ ಮಾಡಿ, ಕೈ ಕಡಿಯುತ್ತೇವೆ, ತಲವಾರು, ಬಂದೂಕು ಇಟ್ಟುಕೊಳ್ಳಿ" ಎಂದು ಸಾರ್ವಜನಿಕವಾಗಿ ಕರೆಕೊಡುವವರ ಮೇಲೆ ಇಲ್ಲಿ ಯಾವುದೇ ಕ್ರಮವಾಗುತ್ತಿಲ್ಲ, ಅವರ ಬಂಧನವಾಗುತ್ತಿಲ್ಲ. ಹಿಂದೂ - ಮುಸ್ಲಿಂ ಎಂದು ದ್ವೇಷ ಭಾಷಣ ಮಾಡುವವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.

ಆದರೆ ಫೆಲೆಸ್ತೀನ್ ಜನರ ಮೇಲಿನ ಆಕ್ರಮಣ ನಿಲ್ಲಲಿ ಎಂದು ಶಾಂತಿಯುತ ಪ್ರದರ್ಶನ ಮಾಡುವವರನ್ನು ಬಂಧಿಸಲಾಗುತ್ತದೆ. ಕಾಂಗ್ರೆಸ್ ​ಮುಖಂಡರು ​ಫೆಲೆಸ್ತೀನ್ ​ಮೇಲೆ ಆಕ್ರಮಣವಾಗುತ್ತಿದೆ, ಅದು ತಕ್ಷಣ ನಿಲ್ಲಬೇಕು ಎಂದು ದಿಲ್ಲಿಯಲ್ಲಿ ಸಹಾನುಭೂತಿ ವ್ಯಕ್ತಪಡಿಸಿರುವಾಗ ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿಯೇ ​ಫೆಲೆಸ್ತೀನ್ ಪರ ​ಹೇಳಿಕೆ ನೀಡಿದವರು, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಕೇಸ್ ಹಾಕಲಾಗುತ್ತಿರುವುದು ಏಕೆ​ ?. ಇಂಥದೊಂದು ದ್ವಂದ್ವದ ಹಿಂದಿನ ರಾಜಕೀಯ ಏನು​ ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಜೀವಿ

contributor

Similar News