ದುಂಡಾ ಗ್ರಾಮದ ಜಾತಿ ದೌರ್ಜನ್ಯ ಸಂತ್ರಸ್ತರ ಹೋರಾಟಕ್ಕೆ ಉಚ್ಚ ನ್ಯಾಯಾಲಯದಿಂದ ಸಿಕ್ಕ ನ್ಯಾಯ!
ಮೇಲ್ಮನವಿ ಸಲ್ಲಿಸುವಲ್ಲಿ ಸರಕಾರದ
ವ್ಯವಸ್ಥಿತ ವೈಫಲ್ಯ ಬಹಿರಂಗ!
ಪ್ರಜಾಸತ್ತಾತ್ಮಕ ಸರಕಾರದ ಮೂಲಭೂತ ಸ್ತಂಭವೆಂದರೆ ಸರ್ವರಿಗೂ ಸಮಾನ ನ್ಯಾಯ. ಆದರೆ, ಈ ವ್ಯವಸ್ಥೆಯಲ್ಲಿರುವ ಶೋಷಿತರಿಗೆ ನ್ಯಾಯ ನಿರಾಕರಣೆ ಮಾಡುವಲ್ಲಿ ಸರಕಾರ ಮುಂಚೂಣಿಯಲ್ಲಿರುವುದು ಮಾತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಅಣಕ ಮಾಡುತ್ತಿದೆ. 2008ರಲ್ಲಿ ತುಮಕೂರು ಜಿಲ್ಲೆಯ ದುಂಡಾ ಗ್ರಾಮದಲ್ಲಿ ನಡೆದ ಕ್ರೂರ ಜಾತಿ ದೌರ್ಜನ್ಯಕ್ಕೆ ಒಳಗಾಗಿದ್ದ ದಲಿತ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಲು ಅಂದಿನ ಬಿಜೆಪಿ ಸರಕಾರ ವಿಫಲವಾಗಿದ್ದು ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 14.08.2008ರಂದು ತುಮಕೂರು ಜಿಲ್ಲೆಯ ದುಂಡಾ ಗ್ರಾಮದಲ್ಲಿ ಘನಘೋರವಾದ ಜಾತಿ ದೌರ್ಜನ್ಯವೊಂದು ನಡೆದಿತ್ತು. ಆ ದಿನ ದಲಿತ ಸಮುದಾಯದ ಶಿವಮೂರ್ತಿ ಮತ್ತು ದೀಲಿಪ್ ಎಂಬ ಯುವಕರು ಗೌಡರ ಜಾತಿಗೆ ಸೇರಿದ ಗೋಪಾಲ ಕೃಷ್ಣ ಎಂಬವರ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದಾಗ, ಗೋಪಾಲ ಕೃಷ್ಣರೊಂದಿಗೆ ಜಮೀನು ವಾಜ್ಯವನ್ನು ಹೊಂದಿರುವ ಆತನ ರಕ್ತ ಸಂಬಂಧಿಯಾದ ಸುದೀಪ್ ಎಂಬವನು ನಮ್ಮ ಜಮೀನಿನಲ್ಲಿ ಏಕೆ ಕೆಲಸ ಮಾಡುತ್ತಿದ್ದೀರಿ ಎಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಸುದೀಪ್‌ನ ವಿರುದ್ಧ ಶಿವಮೂರ್ತಿ ಮತ್ತು ದಿಲೀಪ್‌ರವರು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಾರೆ. ಈ ವಿಷಯ ತಿಳಿದ ಸುದೀಪ್ ಮೇಲ್ವರ್ಗದವರೆಂದು ಕರೆಸಿಕೊಳ್ಳುವ ಜನರ ಗುಂಪುಕಟ್ಟಿಕೊಂಡು ಕೈಗಳಲ್ಲಿ ಮಾರಕ ಅಸ್ತ್ರಗಳನ್ನು ಹಿಡಿದು ದಲಿತ ಸಮುದಾಯ ವಾಸಿಸುತ್ತಿದ್ದ ಬೀದಿಗೆ ಏಕಾಏಕಿ ನುಗ್ಗಿ, ‘‘ನಮ್ಮ ಮೇಲೆಯೇ ಮಾದಿಗರು ಕಂಪ್ಲೇಟ್ ಕೊಡುವ ಮಟ್ಟಿಗೆ ಬೆಳೆದಿದ್ದಾರೆ, ಇವರನ್ನು ಮುಗಿಸಿಬಿಡಬೇಕು’’ ಎಂದು ಜೋರಾಗಿ ಕಿರುಚಾಡುತ್ತಾ ಸಿಕ್ಕ ಸಿಕ್ಕವರಿಗೆಲ್ಲ ಹೊಡೆಯುತ್ತಾರೆ ಮತ್ತು ಜಾತಿ ನಿಂದನೆ ಮಾಡುತ್ತಾರೆ. ಆ ಘಟನೆಯಲ್ಲಿ ದಲಿತ ಸಮುದಾಯದ ಗೋವಿಂದರಾಜು ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಲಾಗಿತ್ತು ಮತ್ತು ಉಳಿದಂತೆ ಗೋವಿಂದರಾಜುವಿನ ತಾಯಿ ಲಕ್ಷ್ಮಮ್ಮ ಒಳಗೊಂಡಂತೆ 8 ಜನರಿಗೆ ಗಾಯಗಳಾಗಿದ್ದವು. ಗೋವಿಂದರಾಜುವಿನ ತಾಯಿ ಲಕ್ಷ್ಮಮ್ಮರವರು 11 ಜನರ ವಿರುದ್ಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 143, 147, 148, 323, 324 ಮತ್ತು ಜಾತಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(10), (11)ರ ಅಪರಾಧಗಳಲ್ಲಿ ಪೊಲೀಸರು ಎಫ್‌ಐಆರ್ ಅನ್ನು ದಾಖಲು ಮಾಡಿದ್ದರು. ತನಿಖೆ ಮುಗಿದ ನಂತರ 9 ಆರೋಪಿ ಗಳ ವಿರುದ್ಧ ಮಾತ್ರ ಪೊಲೀಸರು 04.12.2008ರಂದು 3ನೇ ಹೆಚ್ಚುವರಿ ಸೆಶನ್ ನ್ಯಾಯಾಲಯ, ತುಮಕೂರು ಇದರ ಮುಂದೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣೆಯ ಹಂತದಲ್ಲಿ, ವಿಚಾರಣಾ ನ್ಯಾಯಾಲಯವು ದೂರುದಾರ ಲಕ್ಷ್ಮಮ್ಮನವರ ಹೇಳಿಕೆಯನ್ನು ಆಧರಿಸಿ ಆರೋಪಪಟ್ಟಿಯಲ್ಲಿ ಕೈಬಿಡಲಾಗಿದ್ದ, ಉಳಿದ ಇಬ್ಬರನ್ನು ಮತ್ತೆ ವಿಚಾರಣೆಯಲ್ಲಿ ಆರೋಪಿಗಳನ್ನಾಗಿ ಸೇರಿಸಲಾಯಿತು. ವಿಚಾರಣೆ ಪೂರ್ತಿಗೊಳಿಸಿದ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಇರುವುದಾಗಿ ಕಾರಣ ನೀಡಿ, ದಿನಾಂಕ 23.06.2011ರಂದು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ತೀರ್ಪು ಸಂತ್ರಸ್ತರು ಮತ್ತು ರಾಜ್ಯದ ಎಲ್ಲಾ ದಲಿತರಲ್ಲೂ ನಿರಾಸೆಯನ್ನು ಮತ್ತು ಆಘಾತವನ್ನುಂಟು ಮಾಡಿತ್ತು ಮತ್ತು ಕಂಬಾಲಪಲ್ಲಿಯ ಅನ್ಯಾಯವೇ ಮರುಕಳಿಸಿದ್ದಕ್ಕೆ ಮರುಗುವಂತಾಗಿತ್ತು.
ಘಟನೆಯಲ್ಲಿ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಗೊವಿಂದರಾಜು ಧೃತಿಗೆಡದೆ, ತಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ದಲಿತ ಸಂಘಟನೆಗಳ ಜೊತೆ ಟೊಂಕ ಕಟ್ಟಿ ನಿಲ್ಲುತ್ತಾರೆ. ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಲು ನೀಡಿದ್ದ ಕಾರಣಗಳು ಸೂಕ್ತ ಮತ್ತು ಸಮಂಜಸವಾಗಿರುವುದಿಲ್ಲ ಎಂಬುದನ್ನು ಸಾಕಷ್ಟು ಬಾರಿ ಸರಕಾರದ ಗಮನಕ್ಕೂ ತಂದಿರುತ್ತಾರೆ. ಆದರೆ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ವಿಫಲವಾಗಿತ್ತು. ಇದಕ್ಕೆ ಕಾರಣ ಸರಕಾರಕ್ಕೆ ದಲಿತರ ಮೇಲಿರುವ ತಾತ್ಸಾರ ಮನೋಭಾವ ಮತ್ತು ನಿರ್ಲಕ್ಷ್ಯ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿಲ್ಲ.
ಸರಕಾರ ನೊಂದ ದಲಿತರಿಗೆ ನ್ಯಾಯ ದೊರಕಿಸಿಕೊಡಲು ವಿಫಲವಾಗಿದ್ದರೂ ಛಲಬಿಡದ ಸಂತ್ರಸ್ತ ದಲಿತ ಸಮುದಾಯದವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಿನಾಂಕ 23.08.2011ರಂದು ಮೇಲ್ಮನವಿ ಸಲ್ಲಿಸಿದ್ದರು.
ಸುದೀರ್ಘಕಾಲ ವಾದ ವಿವಾದಗಳನ್ನು ಆಲಿಸಿ ಮತ್ತು ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಪರಿಗಣಿಸಿದ ಕರ್ನಾಟಕ ಉಚ್ಚ ನ್ಯಾಯಾಲಯವು, ವಿಚಾರಣಾ ನ್ಯಾಯಾಲಯವು ತೀರ್ಪು ನೀಡುವಾಗ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಕಾನೂನಾತ್ಮಕವಾಗಿ ಪರಿಗಣಿಸಿರುವುದಿಲ್ಲ ಎಂದು ಹೇಳಿ ದಿನಾಂಕ 31.10.2023 ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ರದ್ದುಗೊಳಿಸುತ್ತದೆಮತ್ತು ದಿನಾಂಕ 16.11.2023ರಂದು ಎಲ್ಲಾ 11 ಆರೋಪಿಗಳಿಗೂ ಶಿಕ್ಷೆಯನ್ನು ಪ್ರಕಟಿಸುತ್ತದೆ. ಈ ಮೂಲಕ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶದಲ್ಲಿನ ಲೋಪಗಳನ್ನು ಸರಿಪಡಿಸಿ, ದಲಿತರಿಗೆ ನ್ಯಾಯ ದೊರಕಿಸುವಲ್ಲಿ ತನಗಿರುವ ಬದ್ಧತೆಯನ್ನು ಉಚ್ಚ ನ್ಯಾಯಾಲಯ ಪ್ರದರ್ಶಿಸಿದೆ.
11 ಆರೋಪಿಗಳನ್ನು ಅಪರಾಧಿಗಳೆಂದು ನಿರ್ಣಯಿಸಿದ ಉಚ್ಚ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಕಲಂ 143ರಡಿ ಎಲ್ಲಾ ಆರೋಪಿಗಳಿಗೆ 2 ತಿಂಗಳ ಸಜೆ, 147ರಡಿ 6 ತಿಂಗಳ ಸಜೆ ಮತ್ತು ರೂ. 500 ದಂಡ, 148 ರಡಿ 6 ತಿಂಗಳ ಸಜೆ ಮತ್ತು ರೂ. 500 ದಂಡ, 323ರಡಿ 4 ತಿಂಗಳ ಸಜೆ ಮತ್ತು ರೂ. 500 ದಂಡ, 324ರಡಿ 1 ವರ್ಷ ಸಜೆ ಮತ್ತು ರೂ. 1,000 ದಂಡ ಹಾಗೂ ಜಾತಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3 (10)ರಡಿ ಒಂದು ವರ್ಷ ಸಜೆ ಮತ್ತು ರೂ. 3,000 ದಂಡ ಮತ್ತು ಕಲಂ 3 (11)ರಡಿ ಒಂದು ವರ್ಷ ಸಜೆ ಮತ್ತು ರೂ. 3,000 ದಂಡವನ್ನು ವಿಧಿಸಿದೆ ಹಾಗೂ ಎಲ್ಲಾ ಅಪರಾಧಿಗಳನ್ನು ತುಮಕೂರು ಕಾರಾಗೃಹಕ್ಕೆ ಅದೇ ದಿನ ಕಳುಹಿಸಲಾಗಿದೆ. ಕಾರಾಗೃಹದಲ್ಲಿಯಾದರೂ ಇವರು ಸುಧಾರಣೆ ಹೊಂದಿ ಹೊರಬಾರಬೇಕೆಂಬುದನ್ನು ಸಂತ್ರಸ್ತ ಕುಟುಂಬಗಳು ಬಯಸುತ್ತಿವೆ.
ಅಂದಿನ ಸರಕಾರದ ನಿರ್ಲಕ್ಷ್ಯವನ್ನು ದಲಿತ
ಸಮುದಾಯಗಳು ಕ್ಷಮಿಸಬೇಕೇ?
ತುಮಕೂರು ಜಿಲ್ಲಾ ನ್ಯಾಯಾಲಯವು ನೀಡಿದ ಖುಲಾಸೆ ಆದೇಶದ ವಿರುದ್ಧ ಅಂದಿನ ಬಿಜೆಪಿ ಸರಕಾರವು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಲ್ಲಿ ವಿಫಲವಾಗಿರುವುದು ಒಂದು ಗಂಭೀರ ಜಾತಿ ದೌರ್ಜನ್ಯದ ಅಪರಾಧಿಗಳು ಕಾನೂನು ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಅನುಮತಿಸಿದ ವ್ಯವಸ್ಥಿತ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಉಚ್ಚ ನ್ಯಾಯಾಲಯದ ತೀರ್ಪು ಸಂತ್ರಸ್ತ ದಲಿತರ ಕುಟುಂಬಗಳಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆಯಾದರೂ, ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ್ದ ಆದೇಶದ ವಿರುದ್ಧ ಮೊದಲಿಗೆ ಸರಕಾರ ಮೇಲ್ಮನವಿ ಸಲ್ಲಿಸದಿರುವುದು ನ್ಯಾಯ ವ್ಯವಸ್ಥೆಯ ಪರಿಣಾಮಕಾರಿತ್ವ ಮತ್ತು ಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ದಲಿತರಲ್ಲಿ ಹುಟ್ಟುಹಾಕುತ್ತದೆ. ದುಂಡಾ ಗ್ರಾಮದಲ್ಲಿ ನಡೆದ ಜಾತಿ ದೌರ್ಜನ್ಯವನ್ನು ಕಡೆಗಣಿಸಿದ್ದ ಅಂದಿನ ಬಿಜೆಪಿ ಸರಕಾರ ದಲಿತರಿಗೆ ನ್ಯಾಯವನ್ನು ನಿರಾಕರಿಸಿತ್ತು ಎಂಬ ಕಟುಸತ್ಯವನ್ನು ಈ ಪ್ರಕರಣ ಬಹಿರಂಗಗೊಳಿಸಿದೆ.
ಸರಕಾರದ ಈ ನಿರ್ಲಕ್ಷ್ಯ ವಿಭಜಿತ ಸಮಾಜವನ್ನು ಒಂದುಗೂಡಿಸುವ ಮತ್ತು ಭ್ರಾತೃತ್ವದ ಕಲ್ಪನೆಯನ್ನು ಜಾರಿಗೊಳಿಸುವ ಸಂವಿಧಾನದ ಆಶಯವನ್ನು ಛಿದ್ರಗೊಳಿಸಿದೆ. ಜಾತಿ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳನ್ನು ಅವುಗಳ ಮೂಲ ಉದ್ದೇಶದೊಂದಿಗೆ ಜಾರಿಗೊಳಿಸುವಲ್ಲಿ ಸರಕಾರಕ್ಕೆ ಶ್ರದ್ಧೆ ಇಲ್ಲದಿದ್ದರೆ ಜಾತಿರಹಿತ ಸಮಾಜದ ಕನಸು ಮತ್ತು ಆದರ್ಶವು ಕೇವಲ ಕನಸಾಗಿ, ಮರೀಚಿಕೆಯಾಗಿ ಉಳಿಯುತ್ತದೆ ಹಾಗೂ ಜಾತಿ ದೌರ್ಜನ್ಯ ಪ್ರಕರಣಗಳು ಖುಲಾಸೆಗೊಂಡಲ್ಲಿ ತನಿಖಾಧಿಕಾರಿ ಮತ್ತು ಅಭಿಯೋಜನೆಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯ ಸಾಕಷ್ಟು ಪ್ರಕರಣಗಳಲ್ಲಿ ಹೇಳಿದೆ.
ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ‘ಹರಿರಾಮ್ ಭಾಂಬಿ ವರ್ಸಸ್ ಸತ್ಯನಾರಾಯಣ್ ಇತರರು’ ಪ್ರಕರಣದಲ್ಲಿ ಈ ರೀತಿ ಹೇಳಿದೆ: ‘‘ಭಾರತದ ಅಪರಾಧಿಕ ನ್ಯಾಯ ವ್ಯವಸ್ಥೆಯಲ್ಲಿ ಪೊಲೀಸರಿಗೆ ಅಗ್ರಸ್ಥಾನ ನೀಡಿದ್ದು, ಸಂತ್ರಸ್ತರನ್ನು ಸಾಮಾನ್ಯ ಪ್ರೇಕ್ಷಕರಂತೆ ಕಾಣಲಾಗುತ್ತದೆ. ಅದರಲ್ಲೂ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ಕಾರ್ಯವಿಧಾನದ ಲೋಪಗಳಿಂದ ಬಳಲುತ್ತಿದ್ದಾರೆ. ದೂರನ್ನು ದಾಖಲಿಸುವ ಹಂತದಿಂದ ವಿಚಾರಣೆಯ ಅಂತ್ಯದವರೆಗೆ ನ್ಯಾಯವನ್ನು ಪಡೆಯುವಲ್ಲಿ ಅವರು ದುಸ್ತರ ಅಡೆತಡೆಗಳನ್ನು ಎದುರಿಸುತ್ತಾರೆ. ಮೇಲ್ಜಾತಿ ಗುಂಪುಗಳ ಸದಸ್ಯರಿಂದ ಪ್ರತೀಕಾರದ ಭಯ, ಅರಿವು ಅಥವಾ ಪೊಲೀಸ್ ನಿರಾಸಕ್ತಿಯಿಂದಾಗಿ, ಅನೇಕ ಸಂತ್ರಸ್ತರು ಮೊದಲೇ ದೂರುಗಳನ್ನು ದಾಖಲಿಸುವುದಿಲ್ಲ. ಸಂತ್ರಸ್ತರು ಅಥವಾ ಅವರ ಸಂಬಂಧಿಕರು ಧೈರ್ಯಮಾಡಿ ದೂರು ದಾಖಲು ಮಾಡಿದರೆ, ಪೊಲೀಸ್ ಅಧಿಕಾರಿಗಳು ದೂರುಗಳನ್ನು ದಾಖಲಿಸಲು ಹಿಂಜರಿಯುತ್ತಾರೆ ಅಥವಾ ಆರೋಪಗಳನ್ನು ನಿಖರವಾಗಿ ದಾಖಲಿಸುವುದಿಲ್ಲ. ಅಂತಿಮವಾಗಿ, ಪ್ರಕರಣವು ದಾಖಲಾದರೆ, ಸಂತ್ರಸ್ತರು ಮತ್ತು ಸಾಕ್ಷಿಗಳು ಬೆದರಿಕೆ, ಹಿಂಸೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಗುರಿಯಾಗುತ್ತಾರೆ. ಇದಲ್ಲದೆ, ಜಾತಿ ಆಧಾರಿತ ದೌರ್ಜನ್ಯದ ಅನೇಕ ಅಪರಾಧಿಗಳು ಕಳಪೆ ತನಿಖೆಗಳು ಮತ್ತು ಕಾನೂನು ಕ್ರಮ ಜರುಗಿಸುವ ವಕೀಲರ ನಿರ್ಲಕ್ಷ್ಯದಿಂದಾಗಿ ಆರೋಪ ಮುಕ್ತರಾಗುತ್ತಾರೆ. ಈ ರೀತಿಯ ಖುಲಾಸೆ ಆದೇಶಗಳು ಕಾಯ್ದೆಯಡಿ ದಾಖಲಾದ ಪ್ರಕರಣಗಳು ಸುಳ್ಳು ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ತಪ್ಪು ಗ್ರಹಿಕೆಯನ್ನು ಉಂಟುಮಾಡುತ್ತದೆ. ಆದರೆ ಖುಲಾಸೆ ಪ್ರಕರಣಗಳಿಗೆ ಅಸಮರ್ಪಕ ತನಿಖೆ ಮತ್ತು ಪರಿಣಾಮ ಕಾರಿಯಾಗಿ ವಕಾಲತ್ತು ವಹಿಸದಿರುವುದು ಕಾರಣ ಎನ್ನುವುದನ್ನು ಪರಿಗಣಿಸದೇ ಇರುವುದು ಖಂಡನೀಯ’’ ಎಂದು ತನ್ನ ಅಳಲನ್ನು ಹೇಳಿದೆ.
ಹೀಗಾಗಿ ತಿದ್ದುಪಡಿ ಕಾಯ್ದೆಯ ಸೆಕ್ಷನ್ 15ಎ ಜಾತಿ ಆಧಾರಿತ ದೌರ್ಜನ್ಯಗಳು ಮತ್ತು ಸಾಕ್ಷಿಗಳ, ಬಲಿಪಶುಗಳ ಹಕ್ಕುಗಳನ್ನು ರಕ್ಷಿಸುವ ಪ್ರಮುಖ ನಿಬಂಧನೆಗಳನ್ನು ಒಳಗೊಂಡಿದೆ. ಸೆಕ್ಷನ್ 15ಎ ನ ಉಪ-ನಿಬಂಧನೆಗಳಾದ (3) ಮತ್ತು (5) ನಿರ್ದಿಷ್ಟವಾಗಿ ಸಂತ್ರಸ್ತರನ್ನು ಅಥವಾ ಅವರ ಅವಲಂಬಿತರನ್ನು ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲ್ಗೊಳ್ಳಲು ಅವಕಾಶ ಮಾಡುತ್ತದೆ. ಈ ನಿಬಂಧನೆಗಳು ಶೋಷಿತ ಜಾತಿಯ ಸದಸ್ಯರು ತಮ್ಮ ಪ್ರಕರಣವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಮತ್ತು ದೋಷಪೂರಿತ ತನಿಖೆಗಳ ಪರಿಣಾಮಗಳನ್ನು ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ. ಆದರೆ ಸರಕಾರ ಇದರ ಜಾರಿಯನ್ನು ಪರಿಣಾಮಕಾರಿಯಾಗಿ ಮಾಡಲು ಆಸಕ್ತಿ ತೋರಬೇಕಾಗಿದೆ.
ಸಂತ್ರಸ್ತ ಕುಟುಂಬಗಳು ಉಚ್ಚ ನ್ಯಾಯಾಲಯದ ತೀರ್ಪಿನಿಂದ ಸಮಾಧಾನ ಪಟ್ಟುಕೊಂಡಿದ್ದರೂ, ಶಿಕ್ಷೆಗೊಳಗಾದ ಅಪರಾಧಿಗಳು ತಮ್ಮ ಜೈಲುವಾಸದಲ್ಲಿ ಸುಧಾರಣೆಯೊಂದಿಗೆ ಸತ್ಪ್ರಜೆಗಳಾಗಿ ಹೊರಬರುವರೇ ಎಂಬ ಆತಂಕ ಹೊಂದಿರುವುದು ಮಾತ್ರ ಶೋಚನೀಯ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಂತ್ರಸ್ತರ ಪರ ಮಂಥನ್ ಲಾ ವಕೀಲರು ವಾದ ಮಂಡಿಸಿದ್ದರು.
(ಲೇಖಕರು ಸಂತ್ರಸ್ತರನ್ನು ಪ್ರತಿನಿಧಿಸಿದ ವಕೀಲರ ತಂಡದಲ್ಲಿ ಒಬ್ಬರಾಗಿದ್ದರು)