ಕನ್ನಡಿಗರು ಜಾತಿ, ಧರ್ಮದ ಬಡಿದಾಟ ಬಿಟ್ಟು ಉದ್ಯೋಗ ಮತ್ತು ಉದ್ಯಮಶೀಲರಾಗಬೇಕು

‘‘ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ! ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು, ದೇವನುಡಿಯೆಂದೊಂದು ಹತ್ತಿ ಜಗ್ಗಿ ನಿರಿನಿಟಿಲು ನಿಟಿಲೆಂದು ಮೂಳೆ ಮುರಿಯುತಿದೆ, ಕನ್ನಡಮ್ಮನ ಬೆನ್ನು ಬಳಕಿ ಬಗ್ಗಿ!’’

Update: 2023-11-07 06:43 GMT

Photo: freepik

ರಾಷ್ಟ್ರಕವಿ ಕುವೆಂಪುರವರು ಈ ಸಾಲುಗಳನ್ನು ರಚಿಸಿ ಮುಕ್ಕಾಲು ಶತಮಾನಗಳೇ ಕಳೆದಿವೆ. ಆದರೆ ಕನ್ನಡದ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆಯೇ ಹೊರತು ಸುಧಾರಣೆಯಾಗಿಲ್ಲ. ಇದಕ್ಕೆ ಕನ್ನಡಿಗರಲ್ಲಿ ನಾಡು-ನುಡಿಯ ಬಗೆಗಿನ ಕಾರ್ಯತತ್ಪರತೆಯ ಕೊರತೆಯೇ ಕಾರಣ. ಇದು ಇನ್ನೂ ಅಂಚಿಗೆ ತಳ್ಳಲ್ಪಡುತ್ತಿರುವುದಕ್ಕೆ ಇತ್ತೀಚಿನ ದಿನಗಳಲ್ಲಿ ಸಮ್ಮೋಹನಗೊಳಿಸುವ ಚಟವಾಗುತ್ತಿರುವ ಹುಸಿ ಅಥವಾ ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವ ರಾಷ್ಟ್ರೀಯತೆಯೂ ಪ್ರಮುಖ ಕಾರಣಗಳಲ್ಲೊಂದು. ಇದು ನಮ್ಮ ಆತ್ಮಗೌರವವನ್ನೂ ಹಾಗೂ ನಮಗೆ ನ್ಯಾಯಯುತವಾಗಿ ಸಿಗಬೇಕಾದುದಕ್ಕೆ ಒಕ್ಕೂಟ ಸರಕಾರವನ್ನು ಪ್ರಶ್ನಿಸುವಿಕೆಯನ್ನೂ ನಾಶ ಮಾಡಿ ಹಾಕುತ್ತಿದೆ.

ನಾವು ಇದುವರೆಗೆ ಒಂದಿಷ್ಟು ಏನನ್ನಾದರೂ ಪಡೆದುಕೊಂಡಿರುವುದಕ್ಕೆ ಪ್ರಶ್ನಿಸುವಿಕೆಯೇ ಕಾರಣ. ಐಬಿಪಿಎಸ್, ಸಿಬ್ಬಂದಿ ನೇಮಕಾತಿ ಆಯೋಗ ಹಾಗೂ ರೈಲ್ವೆ ಇಲಾಖೆಯ ಕೆಲ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ಸಿಗುತ್ತಿದೆ ಅಂದರೆ ಅದಕ್ಕೆ ಕನ್ನಡಿಗರು ನಡೆಸಿದ ಹಕ್ಕೊತ್ತಾಯಗಳೇ ಕಾರಣ. ಆದರೆ ಈಗ ಸಿಕ್ಕಿರುವುದು ತೀರಾ ಕಡಿಮೆ. ಒಕ್ಕೂಟ ಸರಕಾರದ ಇಲಾಖೆಗಳು ನಡೆಸುವ ಬಹುತೇಕ ಪರೀಕ್ಷೆಗಳು ಇನ್ನೂ ಸಂಪೂರ್ಣವಾಗಿ ಹಿಂದಿ ಮತ್ತು ಇಂಗ್ಲಿಷ್‌ಮಯವಾಗಿಯೇ ಉಳಿದಿವೆ. ಇತ್ತೀಚೆಗೆ ಉತ್ತರ ಭಾರತದಿಂದ ನಾವು ಎರವಲು ಪಡೆದ ಧರ್ಮಾಂಧತೆ, ಏಕಸಂಸ್ಕೃತಿ-ಏಕನಾಯಕ-ಏಕಭಾಷೆಯ ಪ್ರತಿಪಾದಕತೆಯು ನಮ್ಮ ಹಕ್ಕುಗಳನ್ನು ಕೇಳುವ ಮನಸ್ಥಿತಿಯನ್ನು ಕ್ಷೀಣವಾಗಿಸುತ್ತಿದೆ. ಬಲಿಪೀಠಕ್ಕೆ ಸಂಭ್ರಮಿಸಿ ಹೋಗುವ ಕುರಿಗಳಾಂತಾಗಿದ್ದೇವೆ ನಾವು.

ಹಿಂದಿರಾಷ್ಟ್ರ ಭಾಷೆ ಎಂಬ ಹಸಿ ಸುಳ್ಳನ್ನು ಒಕ್ಕೂಟ ಸರಕಾರವು ವ್ಯವಸ್ಥಿತವಾಗಿ ಹರಡುತ್ತಾ, ಒಕ್ಕೂಟ ವ್ಯವಸ್ಥೆಯ ಮೂಲ ಆಶಯ ಕಡೆಗಣಿಸಿ ಬಲವಂತದ ಹೇರಿಕೆಯ ಮುಖಾಂತರ ಹಿಂದಿಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದರಿಂದ ರಾಜ್ಯದ ಜನರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನತೆಗೆ ತೊಂದರೆಗಳಾಗುತ್ತಿವೆ. ಕೇಂದ್ರ ಸರಕಾರದ ಉದ್ಯೋಗ ನೇಮಕಾತಿಗಳಲ್ಲಿ ಹಿಂದಿಯೇತರರಿಗೆ ಅದರಲ್ಲೂ ಕನ್ನಡಿಗರಿಗೆ ತುಂಬಾ ಅನ್ಯಾಯವಾಗುತ್ತಿದೆ. ಕರ್ನಾಟಕದ ಯಾವುದೇ ಮೂಲೆಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋದರೂ ಹೊಸ ಉದ್ಯೋಗಿಯಾಗಿ ಆ ಶಾಖೆಗೆ ನೇಮಕವಾಗುತ್ತಿರುವವರು ಹಿಂದಿವಾಲನೊ, ತೆಲುಗನೋ ಅಥವಾ ಬಿಹಾರಿಯೋ ಆಗಿರುತ್ತಾರೆ. ಈಗ ಎಸ್‌ಬಿಐನಲ್ಲಿ 2,000 ಅಧಿಕಾರಿಗಳ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಪರೀಕ್ಷೆ ಬರೆಯಲು ಅವಕಾಶ ಇರುವುದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ.

ರೈಲ್ವೆ ನೇಮಕಾತಿಗಳಿಗಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿರುವ ಕನ್ನಡಿಗರ ಸಂಖ್ಯೆ ಶೇ. ಎರಡಕ್ಕಿಂತ ಕಡಿಮೆ ಇದೆ. ನೀಟ್ ಪರೀಕ್ಷೆಯಿಂದಾಗಿ ರಾಜ್ಯದ ಅಭ್ಯರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆದ ಅನ್ಯಾಯ ಅಷ್ಟಿಷ್ಟಲ್ಲ.

ದೇಶದಲ್ಲಿಯೇ ಎರಡನೇ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾದ ನಾವು ನಮ್ಮ ಸಂಪತ್ತನ್ನೆಲ್ಲ ಜಿಎಸ್‌ಟಿ ರೂಪದಲ್ಲಿ ಒಕ್ಕೂಟ ಸರಕಾರಕ್ಕೆ ಧಾರೆ ಎರೆದು, ಅವರು ಚೂರುಪಾರು ವಾಪಸ್ ಕೊಡುವುದನ್ನು ಪಡೆದುಕೊಳ್ಳಲು ಕೈಚಾಚಿ ನಿಲ್ಲುವ ದೈನೇಸಿ ಸ್ಥಿತಿಗೆ ತಲುಪಿದ್ದೇವೆ. ನಾವು 1 ರೂ. ತೆರಿಗೆ ಪಾವತಿಸಿದರೆ ನಮಗೆ ವಾಪಸ್ ಸಿಗುತ್ತಿರುವುದು ಕೇವಲ 15 ಪೈಸೆ ಮಾತ್ರ. ಉಳಿದ 85 ಪೈಸೆಯನ್ನು ಉತ್ತರ ಭಾರತದವರನ್ನು ಸಾಕಲು ನೀಡುತ್ತಿದ್ದೇವೆ. ನಮ್ಮದೇ ನೆಲದಲ್ಲಿ ಹುಟ್ಟಿದ ನಮ್ಮ ಅಸ್ಮಿತೆಯ ಪ್ರತೀಕಗಳೇ ಆದಂತಿದ್ದ ಎಸ್‌ಬಿಎಂ, ವಿಜಯಾ, ಕಾರ್ಪೊರೇಷನ್, ಸಿಂಡಿಕೇಟ್‌ನಂತಹ ಬ್ಯಾಂಕುಗಳು ವಿಲೀನಿಕರಣದ ಹೆಸರಿನಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡವು.

ಗ್ರಾಮೀಣಾಭಿವೃದ್ಧಿ, ಶಾಲಾ ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ ಸೇರಿದಂತೆ 21 ಇಲಾಖೆಗಳ ಒಕ್ಕೂಟ ಸರಕಾರ ಪುರಸ್ಕೃತ ಒಟ್ಟೂ 61 ಯೋಜನೆಗಳಿಗೆ ಈ ವರ್ಷ ನಯಾಪೈಸೆಯೂ ಬಿಡುಗಡೆಯಾಗಿಲ್ಲ.

ಇಷ್ಟೆಲ್ಲಾ ನಡೆಯುತ್ತಿದ್ದರೂ ನಾವು ಕನ್ನಡಿಗರು, ರಾಜಕಾರಣಿಗಳು ಸೃಷ್ಟಿಸುವ ಜಾತಿ, ಧರ್ಮಕೇಂದ್ರಿತ ಅಜೆಂಡಾಗಳಿಗೆ ಬಲಿಬೀಳುತ್ತಾ ಆರೋಪ-ಪ್ರತ್ಯಾರೋಪ, ಕಡಿದಾಟ-ಬಡಿದಾಟ ಮಾಡಿಕೊಂಡು ನಾಡು-ನುಡಿಯ ಮತ್ತು ಮುಂದಿನ ನಾಡಮಕ್ಕಳ ಭವಿಷ್ಯದ ಕುರಿತು ಚಿಂತಿಸದೇ ಅಭಿಮಾನಶೂನ್ಯರಾಗಿ ಕುಳಿತಿದ್ದೇವೆ. ಆಗಾಗ ಇಲ್ಲಿ ನಡೆಯುವ ಇಂತಹ ಗಲಭೆಗಳಿಂದಾಗಿ ರಾಜ್ಯದಲ್ಲಿ ಕೆಲಸ ನಿರ್ವಹಿಸಿ ಒಂದಿಷ್ಟು ಉದ್ಯೋಗ ಸೃಷ್ಟಿಸಬೇಕಾದ ಬಹುರಾಷ್ಟ್ರೀಯ ಕಂಪೆನಿಗಳು ನಿಧಾನವಾಗಿ ಆಂಧ್ರ, ತಮಿಳುನಾಡಿನತ್ತ ಮುಖ ಮಾಡುತ್ತಿವೆ.

ಜೊತೆಗೆ ಹಿಂದಿವಾಲಾಗಳು, ರಾಜಸ್ಥಾನಿ, ಗುಜರಾತಿ, ಬಿಹಾರಿ, ತೆಲುಗು, ತಮಿಳು, ಮಲಯಾಳಿಗಳು ನಮ್ಮ ರಾಜ್ಯಕ್ಕೆ ನುಗ್ಗಿ ನಮ್ಮ ಉದ್ಯೋಗ, ವ್ಯವಹಾರ, ಉದ್ಯಮ ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಮಾರ್ವಾಡಿ, ಗುಜರಾತಿಗಳು ಚಿಕ್ಕಪೇಟೆ, ಬೆಂಗಳೂರು ಅಷ್ಟೇ ಅಲ್ಲದೆ ಬೆಂಗಳೂರಿನಿಂದ 500-600 ಕಿ.ಮೀ. ದೂರದಲ್ಲಿರುವ ತಾಲೂಕು ಕೇಂದ್ರಗಳಿಗೂ ನುಗ್ಗಿ ಅಲ್ಲಿನ ವ್ಯಾಪಾರ ವ್ಯವಹಾರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಜವಳಿ, ಮೊಬೈಲ್- ಕಂಪ್ಯೂಟರ್-ಇಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರ, ಆಟಿಕೆ ಸಾಮಾನುಗಳು, ಗೃಹಬಳಕೆ ವಸ್ತುಗಳು, ಬೇಕರಿ ತಿಂಡಿ ತಿನಿಸುಗಳು, ಹಾರ್ಡ್ವೇರ್, ಇಲೆಕ್ಟ್ರಿಕಲ್ಸ್ ಹೀಗೆ ಎಲ್ಲೆಡೆ ಏಕಸ್ವಾಮ್ಯ ಸಾಧಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಪಂಜಾಬಿ ಶೈಲಿ, ಆಂಧ್ರ ಶೈಲಿ, ಉತ್ತರ ಭಾರತ ಶೈಲಿ, ಚೈನೀಸ್, ನಾಯ್ಡು ಹೊಟೇಲ್, ಕೈರಾಲಿ ಹೀಗೆ ಏನೇನೋ ಹೆಸರಿನಲ್ಲಿ ಪರಭಾಷಿಕರ ಫಾಸ್ಟ್ ಫುಡ್ ಮತ್ತು ಹೊಟೇಲ್‌ಗಳು ಹಾದಿ ಬೀದಿಯಲ್ಲಿ ತಲೆಯೆತ್ತಿ ಅಲ್ಲೂ ಕನ್ನಡಿಗರ ಉದ್ಯಮ ಕಿತ್ತುಕೊಳ್ಳುವಿಕೆ ಪ್ರಾರಂಭವಾಗಿದೆ.

ಜೊತೆಗೆ ಕರ್ನಾಟಕದಲ್ಲಿ ಇತ್ತೀಚೆಗೆ ರಾಜ್ಯದ ಪರವಾಗಿ ಮಾತನಾಡುವವರನ್ನೇ ದೇಶದ್ರೋಹಿಗಳ ರೀತಿ ನೋಡುವ ದೊಡ್ಡ ಯುವ ಸಮೂಹವನ್ನೇ ರಾಜಕೀಯ ಅಥವಾ ಸಾಂಸ್ಕೃತಿಕ ರಾಜಕೀಯದ ಲಾಭ ಅಥವಾ ವ್ಯವಹಾರ-ಉದ್ಯಮದ ಲಾಭಕ್ಕಾಗಿ ಸೃಷ್ಟಿ ಮಾಡಲಾಗಿದೆ, ಮಾಡಲಾಗುತ್ತಿದೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಪರಸ್ಪರ ವಿರುದ್ಧವಾದ ಕಲ್ಪನೆಗಳಲ್ಲ. ನಮ್ಮ ನಮ್ಮ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡು ರಾಷ್ಟ್ರೀಯವಾಗಿರುವುದೇ ನಿಜವಾದ ಭಾರತೀಯತೆ ಎಂದು ಇವರಿಗೆ ತಿಳಿಸಿ ಹೇಳಬೇಕಾಗಿದೆ. ಏಕೆಂದರೆ ನಮ್ಮ ಸಂವಿಧಾನ ಒಪ್ಪಿರುವುದು ಒಕ್ಕೂಟ ವ್ಯವಸ್ಥೆಯನ್ನೇ ಹೊರತು ಕೇಂದ್ರಿಯ ವ್ಯವಸ್ಥೆಯನ್ನಲ್ಲ. ಅದೇ ಸರಿಯಾದುದು, ಸಮಂಜಸವಾದುದು.

ಹಾಗಾಗಿ ಕನ್ನಡಿಗರು ರಾಜಕೀಯ ಪ್ರೇರಿತ ರಾಷ್ಟ್ರೀಯತೆ, ಜಾತಿ-ಧರ್ಮಾಂಧತೆಯ ಕಡೆ ಸಾಗದೆ ನಮ್ಮನ್ನಾಳುವ ಸರಕಾರಗಳ ಮುಂದೆ ಈ ಕೆಳಗಿನ ಹಕ್ಕೊತ್ತಾಯಗಳನ್ನು ಮಂಡಿಸಬೇಕು ಮತ್ತು ಅವುಗಳನ್ನು ಪಡೆದುಕೊಳ್ಳಲು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು.

1. ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಈಗಾಗುತ್ತಿರುವ ಅನಿಯಂತ್ರಿತ ವಲಸೆಯನ್ನು ಕಡಿಮೆ ಮಾಡಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ 2017ರಲ್ಲಿ ಸಲ್ಲಿಸಿದ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿರುವ ಯಾರ ಅನುಮತಿ ಪಡೆಯದೆ ರಾಜ್ಯ ಸರಕಾರ ಅನುಷ್ಠಾನಕ್ಕೆ ತರಬಹುದಾದ 14 ಶಿಫಾರಸುಗಳನ್ನು ಕೂಡಲೇ ಜಾರಿ ಮಾಡಬೇಕು.

2. ಖಾಸಗಿ ವಲಯದ ಉದ್ಯಮಗಳಿಗೆ ರಾಜ್ಯ ಸರಕಾರ ಭೂಮಿ, ನೀರು, ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸವಲತ್ತುಗಳನ್ನು ನೀಡುತ್ತಿರುವುದರಿಂದ ಕಟ್ಟುನಿಟ್ಟಾಗಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಪೂರ್ವ ಷರತ್ತು ಹಾಕಬೇಕು. ಕಾಲಕಾಲಕ್ಕೆ ಉದ್ಯೋಗ ನೀಡಲಾಗಿದೆಯೇ ಎಂದು ಪರಿಶೀಲಿಸಬೇಕು.

3. ರಾಜ್ಯದಲ್ಲಿ ಉದ್ಯೋಗ ನೇಮಕಾತಿ ಬಯಸುವ ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸಲು ಕನಿಷ್ಠ 15 ವರ್ಷ ಕರ್ನಾಟಕದಲ್ಲಿ ವಾಸವಾಗಿರಬೇಕು ಮತ್ತು ಕನ್ನಡ ಓದಲು, ಬರೆಯಲು, ಮಾತನಾಡಲು ಸ್ಪಷ್ಟವಾಗಿ ಬರಬೇಕೆಂಬ ನಿಯಮ ಕಡ್ಡಾಯಗೊಳಿಸಬೇಕು.

4. ರೈಲ್ವೆ, ಎಸ್‌ಎಸ್‌ಸಿ ಹಾಗೂ ಐಬಿಪಿಎಸ್ ನಡೆಸುವ ಎಲ್ಲಾ ಸ್ತರದ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ಬರೆಯಲು ಕನ್ನಡದಲ್ಲಿ ಅವಕಾಶ ಇರಬೇಕು.

5. ಕರ್ನಾಟಕದಲ್ಲಿ ಎಸೆಸೆಲ್ಸಿ, ಪಿಯುಸಿ ಅಥವಾ ಪದವಿ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಮಾತ್ರ ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೇಮಕವಾಗಲು ಅರ್ಹರು ಎಂಬುದಾಗಿ ಪರಿಗಣಿಸುವಂತೆ ಬ್ಯಾಂಕು ನೇಮಕಾತಿ ಮಂಡಳಿಗಳಿಗೆ ಸೂಚಿಸುವಂತೆ ಸರಕಾರವನ್ನು ಒತ್ತಾಯಿಸುವುದು.

6. ಕನ್ನಡಿಗ ಉದ್ಯಮಿಗಳ ಬೆಳೆಸುವ ಕನ್ನಡಪರ ಉದ್ಯಮ ನೀತಿ ರೂಪಿಸಬೇಕು

ಕರ್ನಾಟಕ ಯವತ್ತೂ ಸೌಹಾರ್ದದ ನಾಡಾಗಿತ್ತು. ಸೌಹಾರ್ದ, ಸಾಮರಸ್ಯ ಸಾರಿದ ಬಸವಾದಿ ಶರಣರು, ದಾಸರು, ಕೀರ್ತನೆಕಾರರು, ಜೊತೆಗೆ ಕ್ರಿ.ಶ. 9ನೆಯ ಶತಮಾನದಲ್ಲೇ ಮನುಷ್ಯ ಜಾತಿ ತಾನೋಂದೇ ವಲಂ ಎಂದು ಸಾರಿದ ಮಹಾಕವಿ ಪಂಪರಂತಹವರು ನಡೆದಾಡಿದ ನೆಲ ಇದು. ಈ ಸೌಹಾರ್ದವನ್ನು ಉಳಿಸಿಕೊಂಡು ಉದ್ಯೋಗ, ವ್ಯವಹಾರ, ಕ್ರೀಡೆ, ಶಿಕ್ಷಣ ಹೀಗೆ ಎಲ್ಲದರಲ್ಲಿ ಅಭಿವೃದ್ಧಿ ಹೊಂದುವುದರಲ್ಲೇ ಕರ್ನಾಟಕದ ಭವಿಷ್ಯ ಅಡಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಮಾನಂದ ನಾಯ್ಕ, ಅಂಕೋಲಾ

contributor

Similar News