ನಾಳಿನ ಹೋರಾಟಕ್ಕೆ ಕೀಲೆಣ್ಣೆ...

ಗ್ರಾಮೀಣ ಭಾರತಕ್ಕೆ ಕನ್ನಡಿ ಹಿಡಿಯುವ ಮಹತ್ವದ ಕೆಲಸವನ್ನು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಕೈಗೊಂಡಿದ್ದಾರೆ. ಅವರು ಹುಟ್ಟುಹಾಕಿದ ‘ಪರಿ’ ಈಗ ಜಗತ್ತಿನಾದ್ಯಂತ ಹೆಸರಾಗಿದೆ. ೫೦ಕ್ಕೂ ಹೆಚ್ಚು ಪ್ರಶಸ್ತಿಗೆ ಪಾತ್ರವಾಗಿದೆ. ಪಿ. ಸಾಯಿನಾಥ್ ಅವರು ಈಗ ತಮ್ಮ ಎರಡನೇ ಕೃತಿಯನ್ನು ಹೊರತಂದಿದ್ದಾರೆ. ಇದನ್ನು ಪತ್ರಕರ್ತ ಜಿ.ಎನ್. ಮೋಹನ್ ಅವರು ‘ಕೊನೆಯ ಹೀರೋಗಳು’ ಆಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಜಿ.ಎನ್. ಮೋಹನ್ ಅವರು ಬರೆದ ಮಾತು ಇಲ್ಲಿದೆ

Update: 2023-10-01 07:11 GMT

ಕೃತಿ: ಕೊನೆಯ ಹೀರೋಗಳು

ಲೇ: ಪಿ. ಸಾಯಿನಾಥ್

ಕನ್ನಡಕ್ಕೆ: ಜಿ.ಎನ್. ಮೋಹನ್

ಪ್ರ: ಬಹುರೂಪಿ, ಬೆಂಗಳೂರು

ನಾನು ಹುಟ್ಟಿದ್ದು ಸ್ವಾತಂತ್ರ್ಯ ಬಂದ ಹಲವು ವರ್ಷಗಳ ನಂತರ. ಹಾಗಾಗಿ ನನಗೆ ಸ್ವಾತಂತ್ರ್ಯದ ಹೋರಾಟದ ಕುದಿ ಹೇಗಿತ್ತು ಎನ್ನುವುದು ಖಂಡಿತಾ ಗೊತ್ತಾಗಲಿಲ್ಲ. ನಾವು ಕಣ್ಣು ಬಿಡುವ ವೇಳೆಗೆ ಅಪ್ಪ ಒಳ್ಳೆಯ ಕೆಲಸದಲ್ಲಿದ್ದರು, ಮನೆಯಲ್ಲಿದ್ದ ಎಲ್ಲರಿಗೂ ಶಾಲೆ ಕಾಲೇಜಿನ ಮೆಟ್ಟಿಲು ಏರಲು ಸಾಧ್ಯವಾಗಿತ್ತು. ಅಡುಗೆ ಮನೆಯಲ್ಲಿ ಬೇಕಾದಷ್ಟು ದಿನಸಿ, ಆರದ ಬೆಂಕಿ ಇತ್ತು. 

ಸ್ವಾತಂತ್ರ್ಯದ ಕುದಿ ಹೇಗಿದ್ದಿರಬಹುದು ಎಂದು ನಮಗೆ ಗೊತ್ತು ಮಾಡಿಕೊಡಲೋ ಎಂಬಂತೆ ತುರ್ತು ಪರಿಸ್ಥಿತಿ ಜಾರಿ ಮಾಡಲಾಯಿತು. ದಬ್ಬಾಳಿಕೆ ಎಂದರೆ, ದೌರ್ಜನ್ಯ ಎಂದರೆ, ಉಸಿರುಗಟ್ಟಿಸುವಿಕೆ ಎಂದರೆ, ಅಂಚಿಗೆ ತಳ್ಳಲ್ಪಡುವುದು ಎಂದರೆ  ಏನು ಎನ್ನುವುದರ ಒಂದು ತುಣುಕು ಅನುಭವವಾಯಿತು. ಅಷ್ಟು ಮಾತ್ರಕ್ಕೇ ನಾವು ಬೆಚ್ಚಿ ಬಿದ್ದಿದ್ದೆವು. ಪ್ರತಿರೋಧದ ಅಲೆ ಎದ್ದಿತು. ಹಾಗಿದ್ದಲ್ಲಿ ಆ ಸ್ವಾತಂತ್ರ್ಯ ಹೋರಾಟದ ಅನುಭವ ಹೇಗಿದ್ದಿರಬಹುದು ಎನ್ನುವುದನ್ನು ಕಣ್ಣ ಮುಂದೆ ತಂದುಕೊಳ್ಳಲು ಹಲವು ಬಾರಿ ಯತ್ನಿಸಿದ್ದೆ. ಈಗ ಅದಕ್ಕೆ ಉತ್ತರವೇನೋ ಎನ್ನುವಂತೆ ಪಿ. ಸಾಯಿನಾಥ್ ‘The Last Heroes’ ಬರೆದು ಮುಂದಿಟ್ಟಿದ್ದಾರೆ. 

ಸ್ವಾತಂತ್ರ್ಯಾನಂತರದ ಪೀಳಿಗೆಗೆ ಇತಿಹಾಸದ ನಿಜ ಕಥನ ಕಟ್ಟಿ ಕೊಡುವವರು ಯಾರು? ಕಟ್ಟಿಕೊಟ್ಟಿರುವ ಇತಿಹಾಸವೆಲ್ಲವೂ ನಿಜವಲ್ಲ ಎಂದು ತಿಳಿಸುವವರು ಯಾರು? ಈ ದೇಶದ ಸ್ವಾತಂತ್ರ್ಯ ನಮ್ಮ ಚರಿತ್ರೆ ಪುಸ್ತಕಗಳು ಹೇಳುವಂತೆ ಮಾತ್ರವಲ್ಲದೆ ‘ನೆಲಕೆ ಕಾಲುಗಳ ಬರವಣಿಗೆ’ ಬರೆದ ಅಸಂಖ್ಯಾತ ಅನಾಮಿಕರಿಂದಲೂ ಬಂದಿದೆ ಎನ್ನುವುದನ್ನು ತಿಳಿಸುವವರು ಯಾರು?. 

ಇತ್ತೀಚೆಗೆ ನಾನು ಓದಿದ ಮುಖ್ಯ ಪುಸ್ತಕಗಳಲ್ಲಿ ‘Lies my teacher told me’ ಎನ್ನುವ ಪುಸ್ತಕವೂ ಒಂದು. ತರಗತಿಗಳಲ್ಲಿ ನಮ್ಮ ಪಠ್ಯ ಪುಸ್ತಕಗಳು ಮುಂದೆ ಇಡುತ್ತಿರುವ ಅರ್ಧ ಸತ್ಯಗಳನ್ನು ಕುರಿತಂತೆ ಚರ್ಚೆ ಮಾಡುವ ಕೃತಿ ಅದು. ಪಿ ಸಾಯಿನಾಥ್ ಅವರು ಈ ಕೃತಿ ಬರೆದ ತಕ್ಷಣ ನಾನು ಅದನ್ನು ಅನುವಾದಿಸಲು ಕೈಗೆತ್ತಿಕೊಳ್ಳುವುದರ ಹಿಂದೆ ನಾನು ಹಾಗೂ ನನ್ನ ನಂತರದ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕುದಿಯನ್ನು ದಾಟಿಸುವುದು ಅತ್ಯಂತ ಮುಖ್ಯವಾಗಿತ್ತು. ಅದರ ಜೊತೆಗೆ ‘Lies my teacher told me’ಯಂತೆ ಸ್ವಾತಂತ್ರ್ಯ ಹೋರಾಟದ ಬಗೆಗೆ ಕಟ್ಟಿ ಕೊಟ್ಟಿರುವ ಅರ್ಧ ಸತ್ಯಗಳನ್ನು ನಮ್ಮ ಕೈಲಾದ ಮಟ್ಟಿಗೆ ಎತ್ತಿ ತೋರಿಸುವ ಪ್ರಯತ್ನವೂ ಸೇರಿದೆ. 

ಎಚ್. ನಾಗವೇಣಿ ಅವರ ‘ಗಾಂಧಿ ಬಂದ’ ಕೃತಿ ಓದಿದಾಗಲೂ ನನಗೆ ಹೀಗೆ ಅನಿಸಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ಅನಾಮಿಕರಾದ ಈ ದೇಶದ ಎಷ್ಟೊಂದು ಮಂದಿ ಸಹಜವಾಗಿ ಮುಂದೆ ನುಗ್ಗಿದರಲ್ಲಾ ಎಂದು. ಈ ಎಲ್ಲರಿಗೂ ಅವರದೇ ಸಮಸ್ಯೆಗಳಿದ್ದವು, ನೋವುಂಡ ಅನುಭವವಿದ್ದವು, ಎದುರಿಸಲಾಗದ ಅಸಹಾಯಕತೆಯಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಳಗೊಂದು ಆಕ್ರೋಶ ಮಡುಗಟ್ಟಿತ್ತು. ಸ್ವಾತಂತ್ರ್ಯ ಹೋರಾಟ ಆ ಮಡುಗಟ್ಟಿದ್ದ ಎಲ್ಲಕ್ಕೂ ಹಾಗೂ ಎಲ್ಲರಿಗೂ ಪರಿಹಾರವಾಗಿ ಕಂಡಿತು. 


ನೆನ್ನೆ ದಿನ / ನನ್ನ ಜನ / ಬೆಟ್ಟದಂತೆ ಬಂದರು / ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು/ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು..

ಥೇಟ್ ಸಿದ್ದಲಿಂಗಯ್ಯನವರು ‘ಸಾವಿರಾರು ನದಿಗಳು’ ಕವಿತೆಯಲ್ಲಿ ಹೇಳಿದ ಹಾಗೆ. ಇವರೇ ಕಾಲಾಳು ಯೋಧರು. ಒಬ್ಬ ಮಹಾತ್ಮನಿಗಾಗಿ, ಒಬ್ಬ ಬಾಬಾ ಸಾಹೇಬ್‌ಗಾಗಿ, ತಮ್ಮೊಳಗಿದ್ದ ಆಕ್ರೋಶವನ್ನು ಹೊರ ಚೆಲ್ಲುವ ಸಲುವಾಗಿ ಅವರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.

ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾನಂತರ ಎಂದು ವಿಭಜಿಸುತ್ತಿದ್ದ ಕಾಲ ಹೋಗಿ ತುರ್ತು ಪರಿಸ್ಥಿತಿ ಮುನ್ನ ಹಾಗೂ ನಂತರ ಎನ್ನುವ ಕಾಲಕ್ಕೆ ಹೊರಳಿಕೊಂಡೆವು. ಜಾಗತೀಕರಣ ಕಾಲಿಟ್ಟ ನಂತರ ಜಾಗತೀಕರಣವೇ ಕಾಲ ವಿಭಜನೆಯ ಮೈಲುಗಲ್ಲಾಗಿ ಹೋಯಿತು. 

ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ, ತುರ್ತು ಪರಿಸ್ಥಿತಿಯ ಸಮಯದಲ್ಲೂ ನಮ್ಮೆದುರು ವೈರಿಗಳಿದ್ದರು. ನಮ್ಮನ್ನು ಬಲಿ  ತೆಗೆದುಕೊಳ್ಳುವ ಶಸ್ತ್ರಾಸ್ತ್ರಗಳು ಕಾಣುತ್ತಿದ್ದವು. ಆದರೆ ಜಾಗತೀಕರಣ ಎನ್ನುವುದು ವೈರಿ ಯಾರು ಎಂದು ಗೊತ್ತು ಮಾಡದಂತೆ, ಶಸ್ತ್ರಾಸ್ತ್ರವೇ ಇಲ್ಲದಂತೆ ನಡೆಸುತ್ತಿರುವ ಯುದ್ಧ. 

ಈ ಪುಸ್ತಕಕ್ಕೆ ಮುನ್ನುಡಿ ಬರೆದ ಭಗತ್ ಸಿಂಗ್ ಅವರ ಸಂಬಂಧಿ ಜಗ್ ಮೋಹನ್ ಅವರು ಒಂದು ಮಾತು ಹೇಳುತ್ತಾರೆ- ಕ್ರಮೇಣ ವ್ಯವಸ್ಥೆಯನ್ನು ಸಂಪನ್ಮೂಲ ಹೊಂದಿದ್ದ ವ್ಯಕ್ತಿಗಳು ತಮ್ಮ ಅನುಕೂಲಕ್ಕೆ ಬೇಕಾದಂತೆ ತಿರುಗಿಸಿಕೊಂಡರು.

ಹಾಗೆ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಂಡವರಿಂದ ಈಗ ಬಿಡುಗಡೆ ಬೇಕಾಗಿದೆ. ಇಲ್ಲಿರುವ ಕಾಲಾಳು ಯೋಧರು ಸ್ವಾತಂತ್ರ್ಯ ಹಾಗೂ ಬಿಡುಗಡೆಯನ್ನು ಎರಡು ಬೇರೆಯದೇ ಆಗಿ ನೋಡುತ್ತಾರೆ. ಇದು ಸಿದ್ದಲಿಂಗಯ್ಯನವರು ‘ಯಾರಿಗೆ ಬಂತು? ಎಲ್ಲಿಗೆ ಬಂತು? ೪೭ರ ಸ್ವಾತಂತ್ರ್ಯ?’ ಎಂದರಲ್ಲಾ ಹಾಗೆ. ಸ್ವಾತಂತ್ರ್ಯ ಬಂದಿದೆ ನಿಜ ಆದರೆ ಬಿಡುಗಡೆ ಸಿಕ್ಕಿದೆಯೇ ಎಂದರೆ ಖಂಡಿತಾ ಇಲ್ಲ. 

ಪಿ. ಸಾಯಿನಾಥ್ ಒಂದೆಡೆ ಹೇಳುತ್ತಾರೆ- ಭಾರತ ಎರಡಾಗಿ ಹೋಗಿದೆ. ಒಂದು ಐಪಿಎಲ್ ಭಾರತ, ಇನ್ನೊಂದು ಬಿಪಿಎಲ್ ಭಾರತ. ಈ ಪುಸ್ತಕ ಓದುವಾಗ ನಿಮಗೆ ಬಿಪಿಎಲ್ ಭಾರತ ಮತ್ತೆ ಮತ್ತೆ ಕಣ್ಣೆದುರು ಬಂದು ನಿಲ್ಲುತ್ತದೆ. ಗಟ್ಟಿಗಿತ್ತಿ ಮಲ್ಲು ಸ್ವರಾಜ್ಯಂ ಒಂದು ಮಾತು ಹೇಳಿದ್ದರು. ‘ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸಂದೇಶ ಸಾರಲು ನಿಮ್ಮ ಲ್ಯಾಪ್‌ಟಾಪ್‌ಗಳನ್ನು, ಸೆಲ್‌ಫೋನ್‌ಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಿ. ಈಗ ಸದ್ದಿಲ್ಲದೇ ಜರುಗುವ ಎಲ್ಲಾ ರೀತಿಯ ಶೋಷಣೆಯಿಂದ ಬಿಡುಗಡೆ ಹೊಂದಲು ಅವನ್ನು ಬಳಸಿ. ಈಗಿನ ಜಾಗತಿಕ ಕಾರ್ಪೊರೇಟ್ ವ್ಯವಸ್ಥೆಯ ಕಾರಣದಿಂದಾಗಿ ಜನರಿಗೆ ಏನಾಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇಲ್ಲಿ ಎಲ್ಲರೂ ಗುಲಾಮರೇ’

ಜಾಗತೀಕರಣ ದೇಶದ ಗಡಿಗಳನ್ನು ಕಿತ್ತು ಹಾಕಿದೆ. ಆದರೆ ಅದೇ ಸಮಯದಲ್ಲಿ ಪ್ರತಿಯೊಬ್ಬರ ನಡುವೆಯೂ ಗೋಡೆ ಎಬ್ಬಿಸುತ್ತಿದೆ. ಯುದ್ಧ ಯಾವ ದಿಕ್ಕಿನಿಂದ ಎನ್ನುವುದೇ ಅರಿವಿಗೆ ಬಾರದಂತೆ ಪ್ರತಿಯೊಬ್ಬರನ್ನೂ ಅಂಚಿಗೆ ತಳ್ಳಲಾಗುತ್ತಿದೆ. ದಬ್ಬಾಳಿಕೆ ಎಂದರೆ, ದೌರ್ಜನ್ಯ ಎಂದರೆ, ಉಸಿರುಗಟ್ಟಿಸುವಿಕೆ ಎಂದರೆ, ಅಂಚಿಗೆ ತಳ್ಳಲ್ಪಡುವುದು ಎಂದರೆ ಏನು ಎನ್ನುವುದರ ಮತ್ತೊಂದು ‘ಡೆಮೋ’ ಸದ್ದಿಲ್ಲದೇ ಜರುಗುತ್ತಿದೆ. 

ಪ್ರತಿಯೊಬ್ಬರೊಳಗಿನ ಹತಾಶೆ ಕುದಿಬಿಂದುವಾಗ ಬೇಕಾದ ಸಮಯ ಇದು. ‘ಕೋಕಾ ಕೋಲಾ, ಸ್ಟಾರ್ ಟಿವಿಗಳಲ್ಲಿ’ ಕಳೆದು ಹೋಗುವ ಸಮಯವಲ್ಲ. 

ಈ ಕಾರಣಕ್ಕಾಗಿಯೇ ಸಹಕಾರ ಚಳವಳಿಯಲ್ಲಿದ್ದ, ಹಾಲಿನ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡಿದ ಪ್ರೊ. ಕುರಿಯನ್ ಅವರು  ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಾವು ಸ್ಟಾರ್ ಟಿವಿಯನ್ನು ನೋಡಲೆಂದೋ, ಕೋಕಾ ಕೋಲಾ ಕುಡಿಯಲೆಂದೋ ಪ್ರಾಣ ತೆರಲಿಲ್ಲ, ಅವರು ಸೆಣಸಿದ್ದು, ಪ್ರಾಣತ್ಯಾಗ ಮಾಡಿದ್ದು ಎಲ್ಲಾ ಪ್ರಜೆಗಳೂ ಏಕಾತ್ಮಕವಾಗಿ ದುಡಿದು ದೇಶವನ್ನು ಕಟ್ಟಬಲ್ಲ ವ್ಯವಸ್ಥೆಯನ್ನು ಸೃಷ್ಟಿಸಲೆಂದು. ಅಂತಹ ದೇಶದ ಉನ್ನತಿಯಿಂದ ತಾವೂ ಉತ್ತಮರಾಗಬಹುದೆಂದು. ಆದರೆ ಇಂದು ನಮ್ಮ ಹಳ್ಳಿ, ಕೊಳಗೇರಿಗಳ ಜನ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಶಕ್ತಿಯಿಂದ ವಂಚಿತರು’ ಎಂದಿದ್ದರು. 

ಹೊಸದೇ ಸ್ವಾತಂತ್ರ್ಯ ಪಡೆಯುವಲ್ಲಿ ಈ ಕೃತಿ ನಿನ್ನೆಯ ಪಾಠ 

ಹಾಗೂ ನಾಳಿನ ಹೋರಾಟಕ್ಕೆ ಕೀಲೆಣ್ಣೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಜಿ.ಎನ್. ಮೋಹನ್

contributor

Similar News