ಕೊಲ್ಹಾಪುರ: ಮಸೀದಿ, ಮನೆಗಳ ಮೇಲೆ ದಾಳಿ; ಶಿವಾಜಿಯ ಹೆಸರಲ್ಲಿ ಪ್ರಚೋದನೆ, ಹಿಂಸಾಚಾರ

Update: 2024-07-17 12:15 GMT

PC: clarionindia.net

ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರವಿವಾರ ಉದ್ರಿಕ್ತ ಗುಂಪೊಂದರ ಸದಸ್ಯರು ಮಸೀದಿಯೊಂದರ ಮೇಲೆ ದಾಳಿ ನಡೆಸಿ, ಅದರ ಮೇಲೆ ಕೇಸರಿ ಧ್ವಜ ಹಾರಿಸಿರುವ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಹಾರಾಷ್ಟ್ರದ ವಿಶಾಲ್ ಗಢದಲ್ಲಿನ ಮಸೀದಿಯ ಮೇಲೆ ಗುಂಪು ಹಲ್ಲೆ ನಡೆಸಿದೆ. ಅಲ್ಲಿದ್ದ ಜನರ ಮೇಲೆ ಮತ್ತು ಮನೆಗಳ ಮೇಲೆಯೂ ಗುಂಪು ದಾಳಿ ನಡೆಸಿದೆ.

ತಮ್ಮನ್ನು ಶಿವಭಕ್ತರೆಂದು ಕರೆದುಕೊಳ್ಳುವ ನೂರಕ್ಕೂ ಹೆಚ್ಚು ಜನರ ಗುಂಪೊಂದು ದಿಢೀರನೆ ಬಂದು ದಾಳಿ ನಡೆಸಿದ್ದು, ಮಸೀದಿ, ಮನೆಗಳು ಇತರ ಸೊತ್ತುಗಳು ಧ್ವಂಸವಾಗಿವೆ. ದಾಳಿಯಲ್ಲಿ 12 ಸ್ಥಳೀಯರು ಮತ್ತು 6 ಪೊಲೀಸರೂ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ಹೊರ ಬರಬಾರದೆಂಬ ಕಾರಣಕ್ಕೆ ದಾಳಿ ನಡೆಸಿದ ಗುಂಪು ಪತ್ರಕರ್ತರನ್ನು ಬೆದರಿಸಿದೆ ಎಂಬ ಆರೋಪವೂ ಕೇಳಿ ಬಂದಿದೆ.

ವಿಶಾಲಗಡ ಕೋಟೆಯು ಮಹಾರಾಷ್ಟ್ರ ಇತಿಹಾಸದ ಪ್ರಮುಖ ಕೋಟೆಗಳಲ್ಲೊಂದು. ಈ ಕೋಟೆಯ ಸಮೀಪದ ಸ್ಥಳಗಳಲ್ಲಿ ಜನರ ವಾಸ ಇದೆ. 30 ರಿಂದ 60 ವರ್ಷಗಳಿಂದ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿರುವ ಮನೆಗಳು ಕಾನೂನು ಬಾಹಿರ ಎಂಬ ಆರೋಪ ಆಗಾಗ ಕೇಳಿ ಬರುತ್ತಿತ್ತು. 1980ರ ದಶಕದಲ್ಲಿ ಇಲ್ಲಿ ಹಲವು ಮನೆಗಳಿಗೆ ಕಾನೂನು ಮಾನ್ಯತೆ ನೀಡಲಾಗಿತ್ತು. ಅಲ್ಲದೇ ಸರಕಾರದ ಇಂದಿರ ಆವಾಸ್ ಯೋಜನೆ ಅಡಿಯಲ್ಲೂ ಹಲವು ಮನೆಗಳನ್ನು ನಿರ್ಮಿಸಲಾಗಿತ್ತು.

ಈಗ ಕೆಲವು ಸಮಯದಿಂದ ಹಿಂದುತ್ವವಾದಿ ಗುಂಪುಗಳು ವಿಶಾಲಗಡವನ್ನು ಅತಿಕ್ರಮಣದಿಂದ ಸ್ವತಂತ್ರಗೊಳಿಸಬೇಕು ಎಂಬ ಅಭಿಯಾನವನ್ನು ನಡೆಸುತ್ತಿವೆ. ಶಿವಾಜಿಯ ಹೆಸರಲ್ಲಿ ಈ ಅಭಿಯಾನ ನಡೆಯುತ್ತಿದೆ.

ವಿಶಾಲ್ ಗಡದ ದರ್ಗಾದ ಮೇಲೆ ಕಳೆದ ವರ್ಷ ಸಣ್ಣ ಫಿರಂಗಿ ತೋಪು ಮೂಲಕ ಗುಂಡು ಹಾರಿಸಿದ ವಿಡಿಯೋ ಒಂದು ವೈರಲ್ ಆಗಿತ್ತು. ವಿಶಾಲ್ ಗಡದಲ್ಲಿ ಕೋಮು ದ್ವೇಷವನ್ನು ಹೆಚ್ಚಿಸುವ ಉದ್ದೇಶದಿಂದ ಅಲ್ಲಿ ಅನೇಕ ಸಭೆಗಳನ್ನು ಇತ್ತೀಚೆಗೆ ನಡೆಸಲಾಗಿದೆ. ಆದರೆ ಜುಲೈ 14ರಂದು ನಡೆದ ಘಟನೆಯ ಮುಂಚೂಣಿಯಲ್ಲಿದ್ದದ್ದು ಮಾಜಿ ರಾಜ್ಯಸಭಾ ಸಂಸದ ಸಂಬಾಜಿರಾಜೇ ಛತ್ರಪತಿ. ವಿಶಾಲ್ ಗಡ ಕೋಟೆಯಿಂದ ಅತಿಕ್ರಮಣವನ್ನು ಇಲ್ಲವಾಗಿಸಿ ನಾವು ಇಲ್ಲಿ ಹಿಂದವೀ ಸ್ವರಾಜ್ ಸ್ಥಾಪಿಸುತ್ತೇವೆ ಎಂದು ಸಂಬಾಜಿರಾಜೇ ಛತ್ರಪತಿ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್ ರವರು ಬಡವರ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಿದ ಹಿಂದವೀ ಸ್ವರಾಜ್ ಹೆಸರು ಬಳಸಿ ಈಗ ಹಿಂದುತ್ವ ಶಕ್ತಿಗಳು ಬಡವರ ಮನೆಗಳನ್ನು ದ್ವಂಸ ಮಾಡುತ್ತಿವೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈಗ ಸಂಬಾಜಿರಾಜೇ "ಚಲೋ ವಿಶಾಲ್ ಗಡ್' ಹೆಸರಲ್ಲಿ ಶುರು ಮಾಡಿರುವ ಅಭಿಯಾನವೇ ಈಗ ಹಿಂಸೆಗೆ ತಿರುಗಿದೆ. ಅಥವಾ ಹಿಂಸೆಯ ಉದ್ದೇಶ ಇಟ್ಟುಕೊಂಡೇ ಈ ಅಭಿಯಾನ ಶುರು ಮಾಡಿರುವ ಹಾಗೆ ಕಾಣಿಸುತ್ತಿದೆ.

ಸಂಬಾಜಿರಾಜೇ ಛತ್ರಪತಿ ತಮ್ಮ ಬೆಂಬಲಿಗರಿಗೆ ವಿಶಾಲ್ ಗಡದ ಕಡೆಗೆ ಬರಲು ಹೇಳಿದ್ದರು. ಇದರ ನಂತರ ನೂರಕ್ಕೂ ಹೆಚ್ಚು ಜನರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಅಲ್ಲಿನ ಮುಸ್ಲಿಮರ ಹೊಲಗಳಿಗೆ ನುಗ್ಗಿದರು. ಅಲ್ಲಿ ದಾಳಿ ನಡೆಸಿದರು. ನಾವು ಕೋಮುವಾದಿಗಳಲ್ಲ, ಕೇವಲ ಅತಿಕ್ರಮಣದ ವಿರುದ್ಧವಾಗಿದ್ದೇವೆ ಎಂದು ಸಂಬಾಜಿರಾಜೇ ಛತ್ರಪತಿ ಹೇಳುತ್ತಿದ್ದಾರೆ.

ಅತಿಕ್ರಮಣ ಇದ್ದರೂ ಅದನ್ನು ತೆರವುಗೊಳಿಸಲು ಸಂಬಾಜಿರಾಜೇ ಯಾರು? ಈ ಕೆಲಸ ಸರಕಾರದ್ದಲ್ಲವೇ ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ವಿಶಾಲ್ ಗಡದ ಮನೆಗಳನ್ನು ತೆರವುಗೊಳಿಸುವುದಕ್ಕೆ ಈ ಹಿಂದೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲಿನವು 30 ರಿಂದ 60 ವರ್ಷಗಳು ಹಳೆಯ ಮನೆಗಳಾಗಿದ್ದು ಮುಂದಿನ ದಿನಾಂಕದವರೆಗೆ ಕೋರ್ಟ್ ತಡೆ ನೀಡಿತ್ತು. ನ್ಯಾಯಾಲಯದ ಆದೇಶವನ್ನು ಕಡೆಗಣಿಸಿ ಅತಿಕ್ರಮಣವನ್ನು ಇಲ್ಲವಾಗಿಸುವ ಹೆಸರಲ್ಲಿ ಈ ಹಿಂದುತ್ವ ಗುಂಪು ಹೊರಟಿತ್ತು. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ದ್ವೇಷ ಭಾಷಣಗಳು ಹರಡಿವೆ.

ವಿಶಾಲ್ ಗಡದ ಐದು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ದಾಳಿಗಳು ನಡೆದಿವೆ. 500ಕ್ಕೂ ಹೆಚ್ಚು ಜನರ ವಿರುದ್ಧ ವಿರುದ್ಧ ಪ್ರಕರಣ ದಾಖಲಾಗಿದೆ. 21 ಜನರನ್ನು ಬಂಧಿಸಲಾಗಿದೆ.

ಸಂಬಾಜಿರಾಜೇ ಛತ್ರಪತಿ ಹಾಗು ಕಾಂಗ್ರೆಸ್ ಟಿಕೆಟ್ ನಲ್ಲಿ ಕೊಲ್ಹಾಪುರದಿಂದ 2024ರ ಲೋಕಸಭಾ ಚುನಾವಣೆಯನ್ನು ಗೆದ್ದ ಸಾಹು ಮಹಾರಾಜ - ಇಬ್ಬರೂ ಶಿವಾಜಿಯ ವಂಶಜರಾಗಿದ್ದಾರೆ. ಆದರೆ ಸಂಭಾಜಿಯ ಕೃತ್ಯಗಳನ್ನು ಸಂಸದ ಸಾಹು ಮಹಾರಾಜ್ ಖಂಡಿಸಿದ್ದಾರೆ ಮಾತ್ರವಲ್ಲ ಈ ಘಟನೆ ನಡೆಯುವುದರ ಹಿಂದೆ ಸರಕಾರದ ವೈಫಲ್ಯವಿದೆ ಎಂದು ಹೇಳಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸರ ಕಡೆಯಲ್ಲಿ ದೊಡ್ಡ ವೈಫಲ್ಯವಿದ್ದು ಅದೇ ಈ ಘಟನೆಗೆ ಕಾರಣವಾಗಿದೆ ಎಂದು ಸಂಸದ ಸಾಹು ಮಹಾರಾಜ್ ಹೇಳಿದ್ದಾರೆ.

ಹಿಂದುತ್ವವಾದಿ ಸಂಘಟನೆಗಳು ಛತ್ರಪತಿ ಶಿವಾಜಿಯ ಚಿಂತನೆಯನ್ನು ಮುಂದೆ ತರುವ ಹೆಸರಲ್ಲಿ ಸಂಘ ಪರಿವಾರದ ಅಜೆಂಡಾವನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಹಲವು ವರ್ಷದಿಂದ ಈ ಪ್ರದೇಶದ ಕೆಲವು ದರ್ಗಾಗಳನ್ನು ಅವರು ಗುರಿ ಮಾಡಿಕೊಂಡಿದ್ದಾರೆ ವರದಿಗಳಾಗಿವೆ.

ಈ ದ್ವೇಷ ಕೋರರಿಗೆ ಇತಿಹಾಸ ಸ್ವಲ್ವವಾದರೂ ತಿಳಿದಿದೆಯೇ? ಶಿವಾಜಿಯ ತಂದೆ ಶಾಹಜಿಗೆ ಆ ಹೆಸರನ್ನು ಅಹ್ಮದ್ ನಗರದ ಶಾಹ್ ಷರೀಫ್ ದರ್ಗಾದ ಗೌರವ ಪೂರ್ವಕವಾಗಿಯೇ ಇಡಲಾಗಿತ್ತು ಎಂಬುದು ಇವರಿಗೆ ತಿಳಿದಿದೆಯೇ? ಛತ್ರಪತಿ ಶಿವಾಜಿ ಮಹಾರಾಜ್ ಅವರು ಸ್ಥಾಪಿಸಿದ ಹಿಂದ್ ಸ್ವರಾಜ್ ನಲ್ಲಿ ಮುಸಲ್ಮಾನರಿಗೂ ಸಮಾನ ಹಕ್ಕುಗಳಿತ್ತು ಎಂಬುದು ಇವರಿಗೆ ಗೊತ್ತಿದೆಯೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಇದೆ ವರ್ಷ ಅಕ್ಟೋಬರ್ ನಲ್ಲಿ ಚುನಾವಣೆ ನಡೆಯಲಿದ್ದು ಅಲ್ಲಿ ಕೋಮುಧ್ರುವೀಕರಣಕ್ಕೆ ಪ್ರಯತ್ನ ಶುರುವಾಗಿರುವುದು ಸ್ಪಷ್ಟವಾಗಿದೆ.

ಇದು ಕೋಮುವಾದದ ವಿಷಯವಲ್ಲ ಎಂದು ಸಂಭಾಜಿ ಮಹಾರಾಜ್ ಹೇಳುವಾಗಲೂ "ಇಲ್ಲಿ ಭಯೋತ್ಪಾದಕರು ಮತ್ತು ಯಾಸಿನ್ ಭಟ್ಕಲ್ ರಂತವರು ವಾಸಿಸುತ್ತಿದ್ದಾರೆ" ಎಂದು ಅವರು ಹೇಳುತ್ತಿದ್ದಾರೆ. ಇಂತಹ ಹೇಳಿಕೆಗಳಿಗೆ ಯಾವುದೇ ಪುರಾವೆ ಇಲ್ಲ. ಜನರನ್ನು ಪ್ರಚೋದಿಸುವ ಸಲುವಾಗಿಯೇ ಈ ರೀತಿ ದ್ವೇಷ ಹೇಳಿಕೆಗಳನ್ನು ನೀಡಲಾಗುತ್ತಿದೆ.

ಈಗ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರೂ ಈ ಸಂಭಾಜಿರಾಜೇ ಧಾಟಿಯಲ್ಲೇ ಹೇಳಿಕೆ ಕೊಟ್ಟಿದ್ದಾರೆ. ವಿಶಾಲ್ ಗಡ್ ಸಹಿತ ಎಲ್ಲ ಕಡೆ ಅತಿಕ್ರಮಣ ತೆರವುಗೊಳಿಸುವುದು ಖಚಿತ. ಶಿವಾಜಿ ಮಹಾರಾಜ್ ರ ಅನುಯಾಯಿಗಳ ಬೇಡಿಕೆಯಂತೆ ವಿಶಾಲ ಗಡ್ ನಲ್ಲೂ ನಾವು ಅತಿಕ್ರಮಣ ತೆರವು ಮಾಡಿಸುತ್ತೇವೆ ಎಂದಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಏಳರಲ್ಲಿ ಐದು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲನುಭವಿಸಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ ಅತಿ ಹೆಚ್ಚು ಎಂಪಿ ಸೀಟು ಗೆದ್ದಿರುವುದು ಕಾಂಗ್ರೆಸ್ ಎಂಬುದು ಗಮನಾರ್ಹ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ - ಶಿಂಧೆ ಶಿವಸೇನೆ ಹಾಗು ಎನ್ ಸಿ ಪಿ ಗೆ ಅಧಿಕಾರ ಉಳಿಸಿಕೊಳ್ಳೋದು ಬಹಳ ಕಷ್ಟವಾಗಲಿದೆ ಎಂಬ ವರದಿಗಳೇ ಬರುತ್ತಿರುವ ನಡುವೆ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News