ಕುಮಾರಸ್ವಾಮಿಯ ಹತಾಶೆ : ಪೆನ್ ಡ್ರೈವ್ ನ ಸಾಕ್ಷ್ಯ ಬಹಿರಂಗ ಪಡಿಸಿಲ್ಲ ಏಕೆ ?

Update: 2023-07-19 11:24 GMT
Editor : Safwan | Byline : ಆರ್. ಜೀವಿ

​ನಿಮಗೆ ನೆನಪಿರಬಹುದು. ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆಯ ದಿನ ಬೆಳಗ್ಗೆಯೇ ಮಾಧ್ಯಮದೆದುರು ಬಂದ ಕುಮಾರಸ್ವಾಮಿ, ಎಷ್ಟೋ ಸೀಟು ಗೆಲ್ತೀವಿ ಅಂತಿದ್ದಾರೆ, ನೋಡೋಣ. ಆಮೇಲೆ ಮಾತಾಡ್ತೀನಿ ಎಂದಿದ್ದರು. ಅವರ ಆ ಕೊಂಕು ಕಾಂಗ್ರೆಸ್ ಕುರಿತಾಗಿತ್ತು. ಆಗ ಅವರಲ್ಲಿದ್ದ ಆತ್ಮವಿಶ್ವಾಸ ನೋಡಬೇಕಿತ್ತು. ಕಾಂಗ್ರೆಸ್ ಬಹುಮತ ಪಡೆಯೋದು ಅಷ್ಟರಲ್ಲೇ ಇದೆ. ಕೊನೆಗೆ ತನ್ನ ಬಳಿಯೇ ಬರಬೇಕಾಗುತ್ತದೆ ಎಂಬ ಭಾವನೆಯಿಂದಲೇ ಅವರು, ಆಮೇಲೆ ಮಾತಾಡ್ತೀನಿ ಎಂದಿದ್ದರು.

ಆದರೆ ಆಮೇಲೆ ಮಾತಾಡೋ ಸನ್ನಿವೇಶವೇ ಬರಲಿಲ್ಲ. ಫಲಿತಾಂಶ ಬಂದಾಗ ಜೆಡಿಎಸ್ ಪತನವಾಗಿತ್ತು. ಹಳೇ ಮೈಸೂರು ಭಾಗದಲ್ಲಿಯೂ ಜನ ಸರಿಯಾಗಿಯೇ ಏಟು ಕೊಟ್ಟಿದ್ದರು. ಅವರ ಮಗ ನಿಖಿಲ್ನನ್ನು ಗೆಲ್ಲಿಸಿಕೊಳ್ಳೋಕೂ ಕುಮಾರಸ್ವಾಮಿಯಿಂದ ಆಗಿರಲಿಲ್ಲ. ಆ ಕಡೆ ಕಾಂಗ್ರೆಸ್ ಭರ್ಜರಿ ಬಹುಮತ ಪಡೆಯಿತು. ಯಾರದೇ ಹಂಗಿಲ್ಲದೆ ಸರಕಾರ ರಚಿಸಿತು. ಯಾರು ಮುಖ್ಯಮಂತ್ರಿ ಆಗಲೇಬಾರದು ಎಂದು ಕುಮಾರಸ್ವಾಮಿ ಬಯಸಿದ್ದರೋ ಅದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರ ಸರಕಾರ ಒಂದೊಂದೇ ಗ್ಯಾರಂಟಿಗಳನ್ನು ಜಾರಿಗೊಳಿಸಲು ಪ್ರಾರಂಭಿಸಿ ಜನಪ್ರಿಯತೆ ಗಳಿಸಲಾರಂಭಿಸಿತು.

ಇದಾದ ಬಳಿಕ ಶುರುವಾದದ್ದೇ ಕುಮಾರಸ್ವಾಮಿಯವರ ಹತಾಶೆ ಮತ್ತು ಸೇಡಿನ ಮಾತುಗಳು. ಕಾಂಗ್ರೆಸ್ ಗ್ಯಾರಂಟಿಯೇ ತಮ್ಮ ಪುತ್ರನ ಸೋಲಿಗೆ ಕಾರಣ ಎನ್ನುವಲ್ಲಿಂದ ಶುರುವಾಗಿತ್ತು ಅವರ ಹತಾಶ ಪ್ರತಿಕ್ರಿಯೆ. ಕಾಂಗ್ರೆಸ್ ವಿರುದ್ಧ, ಅದರಲ್ಲೂ ಸಿದ್ದರಾಮಯ್ಯ ವಿರುದ್ಧ, ತಾವೇ ಮುಖ್ಯಮಂತ್ರಿಯಾಗಿದ್ದ ಮೈತ್ರಿ ಸರ್ಕಾರವಿದ್ದಾಗಲೂ, ಅನಂತರ ಬಿಜೆಪಿ ಸರ್ಕಾರವಿದ್ಧಾಗಲೂ ಉರಿದುರಿದು ಬೀಳುತ್ತಿದ್ದೋರು ಇದೇ ಕುಮಾರಸ್ವಾಮಿ.

ಅಂಥದ್ದರಲ್ಲಿ ಅವರ ಕಿಂಗ್ ಮೇಕರ್ ಆಗುವ ಕನಸನ್ನೇ ಕೊಚ್ಚಿಕೊಂಡು ಬಹುಮತದಿಂದ ಗೆದ್ದ ಕಾಂಗ್ರೆಸ್ ಸರ್ಕಾರ ರಚಿಸಿದಾಗ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕುಮಾರಸ್ವಾಮಿ ಹತಾಶೆ ಇನ್ನಷ್ಟಾಗಿದೆ. ಕಾಂಗ್ರೆಸ್ ವಿರುದ್ಧ ಸೇಡಿಗೆ ಬಿದ್ದವರಂತೆ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗ ಮಾತನಾಡುತ್ತಿರೋದು ಕುಮಾರಸ್ವಾಮಿಯವರೇ.

ಈಗ ಅವರು ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೀತಿದೆ ಎಂಬ ಆರೋಪ ಹೊರಿಸಿ ದಿನಬೆಳಗಾದರೆ ಅದನ್ನೇ ಮಾತನಾಡುತ್ತಿದ್ದಾರೆ. ಅದಕ್ಕೆ ಆಗೊಮ್ಮೆ ಈಗೊಮ್ಮೆ ಬಿಜೆಪಿಯೂ ಸಾಥ್ ನೀಡುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

ಇದರ ಮುಂದುವರಿದ ಭಾಗವಾಗಿ ಅವರು ಮೊನ್ನೆ ಗುರುವಾರ ವಿಧಾನಸಭೆಯಲ್ಲಿ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪುರಾವೆ ಇಲ್ಲಿದೆ ಎಂದು ಪೆನ್ ಡ್ರೈವ್ ಒಂದನ್ನು ಪ್ರದರ್ಶಿಸಿ ಮಾತನಾಡಿದರು. ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ ಡ್ರೈವ್ ದಾಖಲೆ ಬಹಿರಂಗಪಡಿಸುತ್ತೇನೆ ಮತ್ತು ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿಯವರ ಈ ನಡೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಇಂಧನ ಸಚಿವ ಕೆ.ಜೆ.ಜಾರ್ಜ್, ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬೇಡಿ, ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ ಗೆ ನೀಡಿ ಎಂದರು.

ಕುಮಾರಸ್ವಾಮಿ ಆರೋಪವೆಲ್ಲ ಸುಳ್ಳು. ಅವರು ಹಿಟ್ ಎಂಡ್ ರನ್ ಇದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಕುಮಾರಸ್ವಾಮಿ ಮಾತ್ರ ಹೋಗಿಬಂದಲ್ಲೆಲ್ಲ ಅದನ್ನೇ ಹೇಳುತ್ತಿದ್ದಾರೆ. ಪೆನ್ ಡ್ರೈವ್ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದಿದ್ದಾರೆ.

ಹಾಗೆಂದು ಅವರು ದಾಖಲೆ ಬಿಡುಗಡೆ ಮಾಡುವ ಮಾತಾಡುತ್ತಿಲ್ಲ. ನನಗೆ ಪೆನ್ ಡ್ರೈವ್ ಬಿಡುಗಡೆ ಮಾಡುವ ಅವಸರವಿಲ್ಲ. ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ನಲ್ಲಿರುವ ದಾಖಲೆ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಸದನದಲ್ಲಿ ನಿಂತು ಈಗಲೇ ಪೆನ್ ಡ್ರೈವ್ ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲೇ ಎಲ್ಲರಿಗೂ ಆಡಿಯೋ ಕೇಳಿಸುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ, ಯಾವುದೇ ಸೂಕ್ತ ಮಾಹಿತಿ ಇಲ್ಲದೇ ಬಿಡುಗಡೆ ಮಾಡುವುದಿಲ್ಲ ಎನ್ನುತ್ತಾರೆ.

ಅಂತೂ ಒಂದು ಪೆನ್ ಡ್ರೈವ್ ತೋರಿಸುತ್ತ ಸದನದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದ್ದಾರೆ ಕುಮಾರಸ್ವಾಮಿ. ಆದರೆ ಕುಮಾರಸ್ವಾಮಿಯವರ ಆರೋಪದಲ್ಲಿ ನಿಜವಾಗಿಯೂ ಹುರುಳಿದೆಯೆ?

ಅವರ ಆರೋಪದ ಮೇಲೆ ಅವರಿಗೇ ನಂಬಿಕೆ ಇರೋದು ನಿಜವಾಗಿದ್ದಲ್ಲಿ ಕೈಯಲ್ಲಿರುವ ಪೆನ್ ಡ್ರೈವ್ ನಲ್ಲಿನ ದಾಖಲೆ ತೋರಿಸಬಹುದಿತ್ತು. ಸುಮ್ಮನೆ ಪ್ರದರ್ಶಿಸಿ ಕೋಲಾಹಲ ಸೃಷ್ಟಿಸುವ ನಾಟಕ ಬೇಕಿರಲಿಲ್ಲ. ಅವರ ಮಾತಿನ ಶೈಲಿ ನೋಡುತ್ತಿದ್ದರೆ, ಅವರಲ್ಲಿ ತುಂಬಿರೋದು ಬರೀ ಹತಾಶೆ ಮತ್ತು ಸಿದ್ದರಾಮಯ್ಯರ ವಿರುದ್ಧದ ಸಿಟ್ಟು ಎಂಬುದು ಸ್ಪಷ್ಟವಾಗುತ್ತದೆ. ಸೋತ ಹತಾಶೆ, ಕಿಂಗ್ ಮೇಕರ್ ಆಗಲು ಸಾಧ್ಯವಾಗಲಿಲ್ಲ ಎಂಬ ನಿರಾಶೆ ಅವರನ್ನು ತೀವ್ರವಾಗಿ ಕಂಗೆಡಿಸಿದಂತಿದೆ.

ಅವರ ಮಾತುಗಳಲ್ಲೆಲ್ಲ ಸಿದ್ದರಾಮಯ್ಯ ಬಗೆಗಿನ ಕುದಿ, ಸೇಡಿನ ಭಾವವೇ ಕಾಣಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿಗಳ ಬಗೆಗಿನ ಸಿಟ್ಟು ಕೂಡ ಅವರೊಳಗಿದೆ. ಕಾಂಗ್ರೆಸ್ ಅಧಿಕಾರಕ್ಕೇರುತ್ತಿದ್ದಂತೆ, ಮೊದಲು ಕೊಟ್ಟ ಭರವಸೆ ಈಡೇರಿಸಲಿ ಎಂದು ಬೆನ್ನು ಬಿದ್ದಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ಎಲ್ಲ ಭರವಸೆಗಳನ್ನೂ ಒಂದೊಂದಾಗಿ ಕಾರ್ಯರೂಪಕ್ಕೆ ತರುತ್ತಿದ್ದಂತೆ ಇನ್ನೂ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ.

ಮೊನ್ನೆ ಮಹಿಳೆಯರ ಉಚಿತ ಬಸ್ ಸಂಚಾರದ ಬಗ್ಗೆ ಮಾತನಾಡುತ್ತ, 55 ಲಕ್ಷ ಹೆಣ್ಣುಮಕ್ಕಳು ಓಡಾಟ ಮಾಡೋಕೆ ಶುರುಮಾಡಿದ ಮೇಲೆ ಧರ್ಮಸ್ಥಳದಲ್ಲಿ ಊಟ ಕೊಡೋದೂ ನಿಲ್ಲಿಸಿಬಿಟ್ಟಿದ್ದಾರಂತೆ ಎಂದು ಸದನದಲ್ಲಿಯೇ ಹೇಳಿದರು. ಅವರ ಮಾತುಗಳಿಗೆ ತಾಳಮೇಳವೇ ಇಲ್ಲವೆನ್ನುವಂತಾಗಿದೆ. ತಾವೇನು ಮಾತಾಡುತ್ತಿದ್ದೇವೆ ಎಂಬುದನ್ನು ಪರಾಂಬರಿಸುವ ಸಹನೆ ಕೂಡ ಇಲ್ಲದವರ ಹಾಗೆ ಅವರು ಮಾತಾಡೋದು ನೋಡಿದರೆ, ಕಿಂಗ್ ಮೇಕರ್ ಆಗುವ ಅವಕಾಶ ತಪ್ಪಿದ್ದಕ್ಕೆ ಈ ಪರಿ ಕನಲಿ ಬಿಟ್ಟಿದ್ದಾರೆಯೆ ಎನ್ನಿಸುತ್ತದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಸೀಟು ಗಳಿಕೆಯಲ್ಲಿ ಸ್ವಲ್ಪ ಎಡವಿದ್ದರೂ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆಯಲ್ಲಿ ಪಾತ್ರ ವಹಿಸುವ ಲೆಕ್ಕಾಚಾರದಲ್ಲಿದ್ದರು ಕುಮಾರಸ್ವಾಮಿ ಎಂಬುದು ನಿಜ. ಆದರೆ ಅದು ಆಗಲಿಲ್ಲ. ಈಗ ಪ್ರತಿಪಕ್ಷವಾಗಿ ಬಿಜೆಪಿಯದ್ದೇ ಭಾಗ ಎಂಬಂತೆ ಬಿಜೆಪಿಗಿಂತಲೂ ತೀಕ್ಷ್ಣವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವನ್ನೂ ಈಗಾಗಲೇ ಕಾಣಿಸಿದ್ದಾರೆ.

ಇದೆಲ್ಲದರ ಹಿಂದೆ ಅವರಿಗಿರೋ ಉದ್ದೇಶ ಕಾಂಗ್ರೆಸ್ ಸರ್ಕಾರದ ವಿರುದ್ಧ ಕತ್ತಿ ಮಸೆಯುವುದು. ಅದನ್ನೀಗ ಪೆನ್ ಡ್ರೈವ್ ರೂಪದಲ್ಲಿ ತೋರಿಸುತ್ತ, ಬೆದರಿಸೋ ಆಟವಾಡುತ್ತಿದ್ದಾರೆ. ಅವರು ಮೊನ್ನೆ ಸದನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಜಗಳಕ್ಕಿಳಿದ ಶೈಲಿ ನೋಡಿದರೆ ತಾವೊಬ್ಬ ಮಾಜಿ ಸಿಎಂ ಎಂಬ ಗಾಂಭೀರ್ಯವನ್ನೂ ಮರೆಯುವಷ್ಟು ಮಟ್ಟಿಗೆ ಸಿಟ್ಟು, ಸೇಡಿನ ಭಾವನೆ ಅವರನ್ನು ಆವರಿಸಿಬಿಟ್ಟಂತಿದೆ.

ಪೆನ್ ಡ್ರೈವ್ ದಾಖಲೆ ಬಹಿರಂಗಪಡಿಸಿ. ನಮ್ಮ ಬಳಿಯೂ ಪೆನ್ ಡ್ರೈವ್ ಇದೆ. ನಿಮ್ಮ ಬುಟ್ಟಿಯಲ್ಲಿರೋ ಹಾವು ನೀವು ಬಿಡಿ, ನಮ್ಮ ಬುಟ್ಟಿಯಲ್ಲಿರೋ ಹಾವು ನಾವು ಬಿಡುತ್ತೇವೆ ಎಂಬ ಕಾಂಗ್ರೆಸ್ ತಿರುಗೇಟಿಗೆ ಮಾತ್ರ ಅವರು ಉತ್ತರ ಕೊಟ್ಟ ಸುದ್ದಿಯಿಲ್ಲ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರದ ನಡೆದಿದೆ ಎಂಬುದರ​​ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿಯಾಗಿದ್ದರೂ ಆಗ ಜನಪರ ಕಾಳಜಿ ಇರುವ ಸಿಎಂ ಎಂಬ ಹೆಸರು ಗಳಿಸಿದ್ದರು ಕುಮಾರಸ್ವಾಮಿ. ಸ್ವಲ್ಪ ತಾಳ್ಮೆ, ವಿವೇಚನೆ ತೋರಿದ್ದರೆ ಅಧಿಕಾರ ದಾಹ ಬಿಟ್ಟಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ - ಬಿಜೆಪಿಗೆ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಜೆಡಿಎಸ್ ಅನ್ನು ಕಟ್ಟಿ ಬೆಳೆಸುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಅವರೊಳಗಿನ ಅವಕಾಶವಾದಿತನ ಎಲ್ಲವನ್ನೂ ನುಂಗಿ ಹಾಕಿತು.

ಅಂತೂ ಇನ್ನೆಷ್ಟು ದಿನ ಕುಮಾರಸ್ವಾಮಿಯವರು ಪೆನ್ ಡ್ರೈವ್ ಹಿಡಿದು ಓಡಾಡುತ್ತಾರೊ ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಆರ್. ಜೀವಿ

contributor

Similar News