‘‘ಮೋದೀಜಿ, ಮೌನ ಯಾವಾಗಲೂ ಬಂಗಾರವಲ್ಲ’’
ಕುಕಿಗಳನ್ನು ತಮ್ಮವರಲ್ಲವೇ ಅಲ್ಲ ಎಂಬಂತೆ ನೋಡುವ ಮನಃಸ್ಥಿತಿಯೊಂದು ಮಣಿಪುರದಲ್ಲಿ ತಲೆದೋರಿದೆ. ಅವರ ವಿರುದ್ಧ ಎಲ್ಲರೂ ನಿಂತಂತಿದೆ. ಅವರಿಗೆ ಅಕ್ರಮ ವಲಸಿಗರು, ಭಯೋತ್ಪಾದಕರು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಅಲ್ಪಸಂಖ್ಯಾತರಾಗಿರುವ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಎಲ್ಲ ಹುನ್ನಾರಗಳೂ ನಡೆದಿವೆ. ಕಳೆದಾರು ತಿಂಗಳಿನಿಂದಲೂ ಅನುಭವಿಸುತ್ತಿರುವ ಸಂಕಟದ ನಡುವೆಯೂ ಆ ಸಮುದಾಯ, ಕರಾಳ ದಿನಗಳ ಬಳಿಕ ಬೆಳಕು ಮತ್ತೆ ಬಂದೇ ಬರುತ್ತದೆ ಎಂಬ ವಿಶ್ವಾಸವನ್ನು ಮಾತ್ರ ಆರದಂತೆ ಉಳಿಸಿಕೊಂಡಿದೆ.
ದಿಲ್ಲಿಯಲ್ಲಿ ಎಂ.ಫಿಲ್. ಮಾಡುತ್ತಿರುವ ಹೊಯಿನು, ಇಂಫಾಲದಿಂದ ಸುಮಾರು 110 ಕಿಲೋಮೀಟರ್ ದೂರದಲ್ಲಿರುವ ಮತ್ತು ಮ್ಯಾನ್ಮಾರ್‌ನ ಗಡಿಯಲ್ಲಿರುವ ಮಣಿಪುರದ ಮೋರೆಹ್ ಎಂಬ ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದಾಕೆ. ಉನ್ನತ ಶಿಕ್ಷಣವನ್ನು ಪಡೆಯಲು ಆಕೆ ದಿಲ್ಲಿಗೆ ಬಂದದ್ದು 2012ರಲ್ಲಿ.
ನವೆಂಬರ್ 3ರಂದು ಜಂತರ್ ಮಂತರ್‌ನಲ್ಲಿ ತಮ್ಮ ತವರು ರಾಜ್ಯದಲ್ಲಿ ಎದುರಿಸುತ್ತಿರುವ ಶೋಷಣೆಯ ಬಗ್ಗೆ ನೋವು ವ್ಯಕ್ತಪಡಿಸಲು ಧರಣಿ ನಡೆಸಿದ ಕುಕಿ-ಜೋ ಸಮುದಾಯದ 2,000ಕ್ಕೂ ಹೆಚ್ಚು ಸದಸ್ಯರಲ್ಲಿ ಹೊಯಿನು ಕೂಡ ಇದ್ದರು.
ಮನೋವಿಜ್ಞಾನದ ವಿದ್ಯಾರ್ಥಿನಿಯಾಗಿರುವ ಅವರು, ತನ್ನ ಸಮುದಾಯಕ್ಕಾಗಿರುವ ಆಘಾತವೆಂಥದು ಎಂಬುದನ್ನು ಬಲ್ಲರು. ಕಳೆದ ಆರು ತಿಂಗಳಿನಿಂದ ದಿಲ್ಲಿಯಲ್ಲಿ ಅವರು ತನ್ನ ಸಹವರ್ತಿ ಕುಕಿ-ಜೋಗಳಿಗೆ ಸಮಾಲೋಚನೆ ಮತ್ತು ಸಾಂತ್ವನ ನೀಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ತೀವ್ರ ಆತಂಕ ಮತ್ತು ಖಿನ್ನತೆಯೊಂದಿಗೆ ಹೋರಾಡುತ್ತಿರುವವರು.
ಮೇ ತಿಂಗಳಲ್ಲಿ ಹಿಂಸಾಚಾರ ಪ್ರಾರಂಭವಾದಾಗ, ದಿಲ್ಲಿ ವಿಶ್ವವಿದ್ಯಾನಿಲಯದ ಕುಕಿ ವಿದ್ಯಾರ್ಥಿಗಳಾದ ತಮಗಾರಿಗೂ ಊಟ, ನಿದ್ದೆ ಸೇರದಾಯಿತು. ಅಧ್ಯಯನ ಮಾಡುವುದಕ್ಕೂ ಮನಸ್ಸಿರಲಿಲ್ಲ. ಸಿದ್ಧಪಡಿಸುತ್ತಿರುವ ಪ್ರಬಂಧದ ಮೇಲೆ ಮನಸ್ಸು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಕುಟುಂಬದ ಬಗ್ಗೆ ತುಂಬಾ ಚಿಂತೆಯಾಗಿತ್ತು. ಒಬ್ಬ ವಿದ್ಯಾರ್ಥಿಯು ತನ್ನ ಪ್ರಾಣವನ್ನೇ ತೆಗೆದುಕೊಳ್ಳಲು ಯತ್ನಿಸಿದ್ದು ಇನ್ನೂ ಆಘಾತಕಾರಿಯಾಗಿತ್ತು. ತನ್ನ ಕುಟುಂಬದೊಂದಿಗೆ ಅವರ ಅಗತ್ಯದ ಸಮಯದಲ್ಲಿ ಇರಲು ಸಾಧ್ಯವಾಗದಿದ್ದುದಕ್ಕೆ ಆತನಿಗೆ ನೋವಿತ್ತು. ಆರು ತಿಂಗಳಿಂದ ಮನೆಗೆ ಹಿಂದಿರುಗಲು ಸಾಧ್ಯವಾಗದ ಕಾರಣ ಒಂದು ಬಗೆಯ ನಿರಾಶ್ರಿತ ಸ್ಥಿತಿ. ಬೇರು ಕಳೆದುಕೊಂಡಂಥ ಭಾವನೆ. ಮನೆಗೆ ಹಿಂದಿರುಗುವ ರಸ್ತೆ ಇಂಫಾಲ ಕಣಿವೆಯ ಮೂಲಕ ಹೋಗುತ್ತದೆ. ಅಲ್ಲೀಗ ಕುಕಿಗಳಿಗೆ ಓಡಾಟ ಸಾಧ್ಯವಿಲ್ಲವಾಗಿದೆ ಎಂಬುದು ಹೊಯಿನು ನೋವಿನ ಮಾತು.
ಧರಣಿ ನಿರತರಲ್ಲಿ ಇಂಥದೇ ಸಂಕಟ ಮಡುಗಟ್ಟಿತ್ತು. ಕಳೆದ ಆರು ತಿಂಗಳ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಕುಕಿ-ಜೋಗಳ ಪೋಸ್ಟರ್‌ಗಳನ್ನು ಹಿಡಿದು ಹತ್ತಾರು ಜನರು ವೇದಿಕೆಯ ಮೇಲೆ ನಿಂತಿದ್ದರು. ಮೃತರ ಪರಿಚಿತರು ಅವರ ಜೀವನದ ಬಗ್ಗೆ ಮತ್ತು ಅವರು ಹೇಗೆ ಬಲಿಯಾದರು ಎಂಬುದರ ಕುರಿತು ವಿವರಗಳನ್ನು ಹಂಚಿಕೊಂಡರು.
ಮಣಿಪುರದಲ್ಲಿ ಕಳೆದ ಆರು ತಿಂಗಳಿನಿಂದ ಏನು ಬದಲಾಗಿದೆ ಎಂದು ಕೇಳಿದಾಗ, ಕುಕಿ-ಜೋ ಮಹಿಳಾ ಗುಂಪಿನ ಸಂಸ್ಥಾಪಕರಲ್ಲಿ ಒಬ್ಬರಾದ ಮೇರಿ ಗ್ರೇಸ್ ಹೇಳಿದ್ದು ಏನೇನೂ ಬದಲಾಗಿಲ್ಲ ಎಂದು. ಮೈತೈ ಬಂಡುಕೋರರು ಮರುಸಂಘಟನೆ ಮತ್ತು ತರಬೇತಿಗಾಗಿ ಸ್ವಲ್ಪ ಸಮಯದವರೆಗೆ ಹಿಂಸಾಚಾರವನ್ನು ನಿಲ್ಲಿಸಿದ್ದಾರೆ ಮತ್ತು ಈಗ ಅವರು ಆರು ತಿಂಗಳ ಹಿಂದೆ ಇಂಫಾಲ ಕಣಿವೆಯಲ್ಲಿ ಮಾಡಿದ ರೀತಿಯಲ್ಲಿಯೇ ಮತ್ತೆ ಮೊರೆಹ್‌ನಲ್ಲಿ ಕುಕಿ ಜನರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ಮೇರಿ ಗ್ರೇಸ್.
ಕುಕಿಗಳು ಆಗ ಕಡೇಪಕ್ಷ ಸೇನಾ ಶಿಬಿರಗಳಿಗೆ ಓಡುವುದಕ್ಕಾದರೂ ಅವಕಾಶವಿತ್ತು. ಈಗ ಕುಕಿಗಳು ಕಾಡಿನಲ್ಲಿ ಉಳಿಯಬೇಕಾದ ಸ್ಥಿತಿ ತಲೆದೋರಿದೆ ಮತ್ತು ನೆಲೆಯೇ ಇಲ್ಲವಾಗಿದೆ. ಅವರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಲೂಟಿ ಮಾಡಲಾಗಿದೆ ಎನ್ನುತ್ತಾರೆ ಅವರು.
ಇದು ಕೇವಲ ಕುಕಿ ಜನರನ್ನು ಉಳಿಸುವ ಬಗ್ಗೆ ಅಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಇದು ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸುವ ಪ್ರಶ್ನೆಯೂ ಹೌದು. ನಾವು ಕೇವಲ ಏಳು ಲಕ್ಷ ಮಂದಿಯಿರಬಹುದು. ಆದರೆ ಕುಕಿ ಜನರು ಸೋತರೆ, ಭಾರತವೂ ಸೋತಂತೆ. ಈ ಹಿಂಸಾಚಾರ ಆರಂಭವಷ್ಟೇ. ನಿಧಾನವಾಗಿ, ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸ್ಥಾನವಿಲ್ಲ ಎಂಬುದು ಸ್ಪಷ್ಟ ಎಂದು ಅವರು ಎಚ್ಚರಿಸುತ್ತಾರೆ.
ಬಹುಸಂಖ್ಯಾತ ಮೈತೈ ಸಮುದಾಯವು ಅಲ್ಪಸಂಖ್ಯಾತ ಕುಕಿ ಸಮುದಾಯವನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳಲು ನೋಡುತ್ತಿದೆಯೋ ಅದೇ ರೀತಿಯಲ್ಲಿ ಇಡೀ ಭಾರತದಲ್ಲಿ ಆಗಲಿದೆ. ಇದು ನಿಜಕ್ಕೂ ಭಯ ಹುಟ್ಟಿಸುವ ವಿಚಾರ ಎಂಬುದು ಅವರ ಅಭಿಪ್ರಾಯ.
ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯ ಭಾರತೀಯ ತ್ರಿವರ್ಣ ಧ್ವಜಗಳನ್ನು ಎತ್ತಿ ಹಿಡಿದಿರುವುದನ್ನು ಗಮನಿಸದೇ ಇರಲಾಗಲಿಲ್ಲ. ಅಲ್ಲದೆ, ಹೆಚ್ಚಿನ ಬೀದಿ ಪ್ರತಿಭಟನೆಗಳಿಗಿಂತ ಭಿನ್ನವಾಗಿ, ಸಾಮಾನ್ಯವಾಗಿ ಘೋಷಣೆಗಳು ಮತ್ತು ಸಂದೇಶಗಳ ಸೀಮಿತ ಸಂಗ್ರಹವನ್ನು ಪ್ರದರ್ಶಿಸಲಾಗಿತ್ತು. ಬಹುತೇಕ ಎಲ್ಲರೂ ಹಿಡಿದಿದ್ದ ಪೋಸ್ಟರ್‌ಗಳಲ್ಲಿನ ಸಂದೇಶಗಳು ವೈವಿಧ್ಯತೆ ಮತ್ತು ಉದ್ದ ಎರಡರಲ್ಲೂ ಭಿನ್ನವಾಗಿದ್ದವು.
ವೇದಿಕೆಯಲ್ಲಿ ಯಾರೂ ಮಾತನಾಡದಿದ್ದರೂ, ಪೋಸ್ಟರ್‌ಗಳು ಕಳೆದ ಆರು ತಿಂಗಳ ಕುಕಿ-ಜೋ ಸಂಕಟದ ಕಥೆಯನ್ನು ಹೇಳುವಲ್ಲಿ ಯಶಸ್ವಿಯಾದವು.
‘ಕುಕಿ ಮಹಿಳೆಯರ ದೇಹಗಳು ಯುದ್ಧಭೂಮಿಯಲ್ಲ. ದಮನಿತರ ಜತೆಗಿದ್ದೇವೆ.’
‘ದುಃಸ್ವಪ್ನ ಕೊನೆಗಾಣಿಸಿ, ಬಿರೇನ್ ದಬ್ಬಾಳಿಕೆ ಕೊನೆಗೊಳಿಸಿ’
‘ಆಯ್ದ ನ್ಯಾಯದಿಂದ ಕುಕಿ-ಜೋಗಳಿಗೆ ಅನ್ಯಾಯವಾಗಿದೆ’
‘ಭಾರತೀಯ ಆದಿವಾಸಿಗಳನ್ನು ರಾಷ್ಟ್ರವಿರೋಧಿ ಪ್ರತ್ಯೇಕತಾವಾದಿ ಮೈತೈಗಳಿಂದ ರಕ್ಷಿಸಿ’
‘ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆಯ ನಂತರ ಇಂಫಾಲ ಮೋರ್ಗ್ಸ್‌ನಲ್ಲಿರುವ ಆದಿವಾಸಿಗಳ ಮೃತ ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿ’
‘‘ಮಣಿಪುರದಲ್ಲಿ ಬಲವಂತದ ಮೌನ. ಮೋದೀಜಿ, ಮೌನ ಯಾವಾಗಲೂ ಬಂಗಾರವಲ್ಲ’’
‘ನಮ್ಮ ಭವಿಷ್ಯದ ಮಕ್ಕಳಿಗೆ - ನಾವು ಮೌನವಾಗಿ ಉಳಿಯಲಿಲ್ಲ. ನಿಮ್ಮ ನಾಳೆಗಾಗಿ ನಾವು ಕಷ್ಟಪಟ್ಟು ಹೋರಾಡಿದ್ದೇವೆ.’
ತಮ್ಮನ್ನು ಕೈಬಿಟ್ಟಿರುವ ಕಹಿ ಭಾವನೆಯನ್ನು ಬಹುಶಃ ಅತ್ಯುತ್ತಮವಾಗಿ ಸೆರೆಹಿಡಿದ ಪೋಸ್ಟರ್ ಹೀಗಿತ್ತು:
‘ಹೌದು, ಮಣಿಪುರದಲ್ಲಿ ನಾವು ವಿದೇಶಿಯರೆಂದು ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ ಆದರೆ ನಮ್ಮ ಪೂರ್ವಜರ ನಾಡಿನಲ್ಲಿ ನಾವು ಭಾರತೀಯರು. ನಾವು 1917ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದೇವೆ. ನಾವು ನೇತಾಜಿಯವರ ಐಎನ್‌ಎ ಸೈನಿಕರ ಪರಿತ್ಯಕ್ತ ಮಕ್ಕಳು.
ಹಿಂಸಾಚಾರ ಭುಗಿಲೆದ್ದ ಕೂಡಲೇ ಸತ್ಯಶೋಧನಾ ತಂಡದ ಭಾಗವಾಗಿ ಮಣಿಪುರಕ್ಕೆ ಭೇಟಿ ನೀಡಿದ್ದ ಹೋರಾಟಗಾರ ಮತ್ತು ಪತ್ರಕರ್ತ ಜಾನ್ ದಯಾಳ್, ಪ್ರತಿಭಟನಾ ಕಾರ್ಯಕ್ರಮದ ಭಾಷಣಕಾರರಲ್ಲಿ ಒಬ್ಬರಾಗಿ, ‘‘ನರಮೇಧದ ಬಲಿಪಶುಗಳು ಅಂತಿಮವಾಗಿ ಏಕಾಂಗಿಯಾಗಿ ನಿಲ್ಲಬೇಕಾಗಿದೆ’’ ಎಂಬ ಹಿಂದಿನ ಭಾಷಣಕಾರರ ಮಾತುಗಳನ್ನು ತಿದ್ದಿದರು.
‘‘ತಪ್ಪಾದ ಪ್ರತಿಯೊಂದು ಪ್ರಕರಣವನ್ನು ದಾಖಲಿಸುವುದು ಮುಖ್ಯವಾಗಿದ್ದರೂ, ಸಮುದಾಯದ ಪ್ರಜ್ಞೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಸಮುದಾಯವು ನಿಮ್ಮನ್ನು ಕೈಬಿಡುವುದಿಲ್ಲ. 1984ರ ಸಿಖ್ ವಿರೋಧಿ ಹತ್ಯಾಕಾಂಡವನ್ನು ನೋಡಿ. ಸಿಖ್ ಸಮುದಾಯವು ಸಂತ್ರಸ್ತರ ಹಿಂದೆ ಒಗ್ಗಟ್ಟಿನಿಂದ ನಿಂತಿತು, ಅವರನ್ನು ಬೆಂಬಲಿಸಿತು ಮತ್ತು ಅನೇಕ ಅಪರಾಧಿಗಳಿಗೆ ಶಿಕ್ಷೆಯಾಗುವುದಕ್ಕೆ ಕಾರಣವಾಯಿತು’’ ಎಂದು ಅವರು ಹೇಳಿದರು.
ಮಣಿಪುರದಲ್ಲಿದ್ದಾಗ ಹಲವಾರು ಉನ್ನತ ಶ್ರೇಣಿಯ ಮೈತೈ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ, ದಯಾಳ್ ಅವರು ‘ಕುಕಿ-ಜೋ’ ಹೆಸರನ್ನು ಅಳಿಸಿಹಾಕುತ್ತಿದ್ದಾರೆ ಎಂದು ಅರಿತುಕೊಂಡರು.
ಅವರನ್ನು ಕುಕಿಗಳು ಎಂದು ಕರೆಯುವ ಬದಲು, ಮೈತೈ ಅಧಿಕಾರಿಗಳು ಅಕ್ರಮ ಕುಕಿ ನಾರ್ಕೋ- ಭಯೋತ್ಪಾದಕರು ಎಂದು ಉಲ್ಲೇಖಿಸುತ್ತಾರೆ. ಒಂದೇ ಉಸಿರಿನಲ್ಲಿ, ಮಣಿಪುರಿ ಸಮಾಜದ ಒಂದು ವರ್ಗವು ಈಗ ಅಕ್ರಮ ವಲಸಿಗರು, ಮಾದಕ ವ್ಯಸನಿಗಳು ಮತ್ತು ಭಯೋತ್ಪಾದಕರು ಎಂಬ ಹಣೆಪಟ್ಟಿ ಹೊಂದುವಂತಾಗಿದೆ.
ಕುಕಿ-ಜೋ ಸಮುದಾಯದ ವಿರುದ್ಧದ ದೊಡ್ಡ ಅತಿರೇಕಗಳ ಹೊರತಾಗಿಯೂ, ಮನೋವಿಜ್ಞಾನದ ವಿದ್ಯಾರ್ಥಿನಿಯಾದ ಹೊಯಿನು ಭರವಸೆಯನ್ನು ಕಳೆದುಕೊಂಡಿಲ್ಲ.
ನಾವು ಬದುಕಿರುವವರೆಗೂ ಶ್ರಮಿಸುತ್ತೇವೆ. ಇದು ಈಗ ನಮ್ಮ ಮಾತೃಭೂಮಿಯನ್ನು ರಕ್ಷಿಸುವ ವಿಚಾರವಾಗಿದೆ. ಕೆಲವು ಕರಾಳ ದಿನಗಳು ಬರುತ್ತವೆ, ಆದರೆ ಬೆಳಕು ಮತ್ತೆ ಬಂದೇ ಬರುತ್ತದೆ ಎಂಬುದು ಆಕೆಯ ವಿಶ್ವಾಸ.
(ಕೃಪೆ:thewire.in)