ಮುಸ್ಲಿಮರಿಗೆ ಪ್ರಾತಿನಿಧ್ಯದ ತೀವ್ರ ಕೊರತೆ: ಮಾತಾಡಲೂ ಸಿದ್ಧವಿಲ್ಲದ ಕಾಂಗ್ರೆಸ್ ನಾಯಕರು, ಕೇಳಲೂ ಸಿದ್ಧವಿಲ್ಲದ ಸಮುದಾಯ!
- ಡಾ. ಮುಹಮ್ಮದ್ ಹಬೀಬ್, ಮಾನ್ವಿ
ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೇನ್ ಅವರಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯತ್ವ ಸಿಕ್ಕಿದ ಸಂತಸಕ್ಕಾಗಿ ಇತ್ತೀಚೆಗೆ ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕವು ಬೆಂಗಳೂರಿನ ಟೆನಿಸ್ ಪೆವಿಲಿಯನ್ನಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿತ್ತು. ಸಾಮಾನ್ಯವಾಗಿ ರಾಜಕೀಯ ಸಮಾರಂಭಗಳಿಗೆ ಹೋಗದ ನಾನು ಡಾ. ನಾಸಿರ್ ಹುಸೇನ್ ಅವರ ಮೇಲಿನ ಅಭಿಮಾನಕ್ಕಾಗಿ ಹೋಗಬೇಕಾಯಿತು. ನಮ್ಮ ಹೈದರಾಬಾದ್-ಕರ್ನಾಟಕ ಭಾಗದ, ಅದರಲ್ಲೂ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ, ಅಲ್ಪಸಂಖ್ಯಾತ ಸಮುದಾಯದ ಸಾಮಾನ್ಯ ವ್ಯಕ್ತಿಯೊಬ್ಬ ರಾಜಕೀಯವಾಗಿ ಬೆಳೆಯುತ್ತಿರುವುದು ನಮ್ಮಂತಹ ಬಹಳಷ್ಟು ಯುವಕರಿಗೆ ಸ್ಫೂರ್ತಿ. ಡಾ. ನಾಸಿರ್ ಅವರು ಪಕ್ಷದ ನಿಷ್ಠಾವಂತ ಹಾಗೂ ಶಿಸ್ತಿನ ಸಿಪಾಯಿ ಮಾತ್ರವಲ್ಲದೆ ಸಮುದಾಯದ ವಿಚಾರ ಬಂದಾಗ ಮುಂಚೂಣಿ ಸಾಲಿನಲ್ಲಿ ಇರುವ ಸಮುದಾಯದ ವಿದ್ಯಾವಂತ ನಾಯಕ. ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿಯಲ್ಲಿ ನಡೆದ ಒಂದು ಘಟನೆಗೆ ಸಂಸದ ತೇಜಸ್ವಿಸೂರ್ಯ ಅವರು ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಇಡೀ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನದಲ್ಲಿದ್ದಾಗ, ಸಮುದಾಯದ ಹಾಗೂ ರಾಜಕೀಯ ನಾಯಕರಿಂದ ನಿರೀಕ್ಷಿತ, ವೈಚಾರಿಕ ಪ್ರತಿರೋಧ ವ್ಯಕ್ತವಾಗದ ಸಂದರ್ಭದಲ್ಲಿ ಡಾ. ನಾಸಿರ್ ಅವರು ಬ್ರಿಜೇಶ್ ಕಾಳಪ್ಪ ಅವರ ಜೊತೆಗೂಡಿ ಮಾಧ್ಯಮದ ಮುಖಾಂತರ ತೇಜಸ್ವಿಸೂರ್ಯರ ನಡೆಯನ್ನು ಖಂಡನೆ ಮಾಡಿದ್ದಲ್ಲದೆ, ಅದನ್ನು ‘ಗಟಾರ್ ಮೆಂಟಾಲಿಟಿ’ಗೆ ಹೋಲಿಸಿ ತರಾಟೆಗೆ ತೆಗೆದುಕೊಂಡಿದ್ದಕ್ಕೆ ಇಡೀ ಸಮುದಾಯದ ಅಭಿಮಾನಕ್ಕೆ ಪಾತ್ರರಾಗಿದ್ದರು. ಆ ಅಭಿಮಾನವೇ ಡಾ. ನಾಸಿರ್ ಅವರಿಗಾಗಿ ಏರ್ಪಡಿಸಿದ ಸನ್ಮಾನ ಸಮಾರಂಭಕ್ಕೆ ಹೋಗಲು ನಮ್ಮಂತಹ ಬಹಳಷ್ಟು ಜನರಿಗೆ ಪ್ರೇರಣೆಯಾಯಿತು.
ಸಮಾರಂಭಕ್ಕೆ ಹೋಗುವ ಮುಂಚೆ ಅದರ ಕುರಿತು ನನ್ನಲ್ಲಿ ಬಹಳಷ್ಟು ಪ್ರಶ್ನೆಗಳಿದ್ದವು. ಈ ಹುದ್ದೆ ಮಂತ್ರಿಗಿರಿಯೂ ಅಲ್ಲ, ಪಕ್ಷದ ರಾಜ್ಯ ಅಥವಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನವೂ ಅಲ್ಲ, ಸಮುದಾಯದ ವಿದ್ಯಾವಂತ ವರ್ಗ ಆಗ್ರಹಿಸುತ್ತಿರುವ ರಾಜಕೀಯ ಪ್ರಾತಿನಿಧ್ಯವೂ ಅಲ್ಲ. ಆದರೂ ಅದೇಕೆ ಇಷ್ಟೊಂದು ದೊಡ್ಡ ಸಂಭ್ರಮ-ಸಮಾರಂಭ ಅನ್ನುವುದೇ ಮುಖ್ಯವಾದ ಪ್ರಶ್ನೆಯಾಗಿತ್ತು. ಇಂತಹ ಸಮಾರಂಭವನ್ನು ಡಾ. ನಾಸಿರ್ ಹುಸೇನ್ ಅವರ ಸ್ನೇಹಿತರು, ಹಿತೈಷಿಗಳು ಅಥವಾ ಅಭಿಮಾನಿಗಳು ಹಮ್ಮಿಕೊಂಡರೆ ಸರಿ, ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಅಲ್ಪಸಂಖ್ಯಾತ ಘಟಕವೇ ನೇರವಾಗಿ ಆಯೋಜಿಸಿದ್ದು ಏಕೆ ಎಂಬುದೇ ಮತ್ತೊಂದು ಪ್ರಶ್ನೆ. ಇದನ್ನೇ ನನ್ನ ಹಿರಿಯ ಸ್ನೇಹಿತರೊಬ್ಬರ ಬಳಿ ಚರ್ಚಿಸಿದಾಗ ತಿಳಿದದ್ದು ಕರ್ನಾಟಕದ ನಮ್ಮ ಸಮುದಾಯದಿಂದ ಜನಾಬ್ ಜಾಫರ್ ಷರೀಫ್ರವರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯತ್ವ ಪಡೆದದ್ದು ಡಾ. ನಾಸಿರ್ ಹುಸೇನ್ ಮಾತ್ರ. ದೇಶದ ಇಂದಿನ ಪರಿಸ್ಥಿತಿಯಲ್ಲಿ ಸಮುದಾಯವು ರಾಜಕೀಯ ಅಸ್ಪಶ್ಯತೆಗೆ ಜಾರುತ್ತಿರುವಾಗ ನಮ್ಮ ಸಮುದಾಯದ ಯುವ ರಾಜಕಾರಣಿಗೆ ಒಲಿದು ಬಂದ ಈ ಗೌರವ ತುಂಬಾ ಮಹತ್ವದ್ದು. ಪಕ್ಷದ ವತಿಯಿಂದ ಆಯ್ಕೆಯಾದ ಬಹಳಷ್ಟು ಜನ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಹಲವು ಬಾರಿ ಮಂತ್ರಿ, ಸಂಸದ, ಶಾಸಕರಾಗಿದ್ದವರೂ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯತ್ವವನ್ನು ಇಂದಿಗೂ ಒಲಿಸಿಕೊಳ್ಳಲಾಗಿಲ್ಲ. ಹೀಗಾಗಿ ಇದು ನಿಜಕ್ಕೂ ದೊಡ್ಡ ಸಾಧನೆಯೇ. ಸಂಭ್ರಮಿಸುವುದರಲ್ಲಿ ತಪ್ಪಿಲ್ಲ ಎಂಬುದು ಮನವರಿಕೆಯಾಯಿತು. ಆದರೆ ಕಾರ್ಯಕಾರಿ ಸಮಿತಿಯಲ್ಲಿನ ಸದಸ್ಯತ್ವವು ಇಷ್ಟೊಂದು ಮಹತ್ವದ್ದಾದರೆ ರಾಜ್ಯದಿಂದ ಜಾಫರ್ ಷರೀಫ್ರವರ ಬಳಿಕ ಮತ್ತು ಇತ್ತೀಚಿನವರೆಗೆ ನಮ್ಮ ಸಮುದಾಯದ ಬೇರೆ ಯಾವ ನಾಯಕರೂ ಆ ಸ್ಥಾನಕ್ಕಾಗಿ ಯಾಕೆ ಪ್ರಯತ್ನ ಪಡಲಿಲ್ಲ ಅಥವಾ ಯಾಕೆ ಆಯ್ಕೆಯಾಗಲಿಲ್ಲ ಎಂಬುದನ್ನೂ ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕ ಮಾತ್ರವಲ್ಲದೆ ಇಡೀ ಸಮುದಾಯವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ಆತ್ಮಾವಲೋಕನದ ಪ್ರಕ್ರಿಯೆಯ ಕೊನೆಯಲ್ಲಿ ಸಮುದಾಯದಲ್ಲಿನ ನಾಯಕತ್ವದ ಕೊರತೆಯು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಮುದಾಯದ ನಾಯಕತ್ವವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ಗಳು ದೊರಕಿಸುವಲ್ಲಿ ವಿಫಲವಾಗಿ, ಪಕ್ಷ ಗೆದ್ದು ಸರಕಾರ ರಚನೆಯಾಗಿ ಮಂತ್ರಿಗಿರಿಯಲ್ಲಿಯೂ ಸಮುದಾಯದ ನಿರೀಕ್ಷೆಗೆ ತಕ್ಕ ಪ್ರಾತಿನಿಧ್ಯ ಕೊಡಿಸುವಲ್ಲಿ ವಿಫಲವಾಗಿ, ಕೊನೆಗೆ ವಿಧಾನಪರಿಷತ್ ನಾಮನಿರ್ದೇಶನದಲ್ಲಿಯೂ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಿಸುವಲ್ಲಿ ಸೋತು ಸುಣ್ಣವಾಗಿದ್ದ ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕಕ್ಕೆ ಸೆಲೆಬ್ರೇಟ್ಮಾಡಲು ಈ ಸನ್ಮಾನ ಸಮಾರಂಭಕ್ಕಿಂತಲೂ ಉತ್ತಮ ಅವಕಾಶ ಬಹುಶಃ ಬೇರೊಂದು ಸಿಕ್ಕಿರಲಿಕ್ಕಿಲ್ಲ. ಹೀಗಾಗಿ ಸಣ್ಣ-ಸಣ್ಣ ಗೆಲುವುಗಳನ್ನೂ ದೊಡ್ಡದಾಗಿ ಸೆಲೆಬ್ರೇಟ್ ಮಾಡುವ ನಿರ್ಧಾರಕ್ಕೆ ಬಂದಂತಿತ್ತು. ಇದೊಂದು ರೀತಿ ಒಳ್ಳೆಯ ಬೆಳವಣಿಗೆಯೂ ಹೌದು. ಸಮುದಾಯವು ತನಗಾಗುತ್ತಿರುವ ಸನ್ಮಾನ-ಅವಮಾನ ಸೇರಿದಂತೆ ಪ್ರತಿಯೊಂದನ್ನೂ ಅವಲೋಕಿಸುತ್ತಿದೆ ಎಂಬ ಎಚ್ಚರಿಕೆಯನ್ನು ಪಕ್ಷಕ್ಕೂ ಹಾಗೂ ಅದರ ಮುಂಚೂಣಿ ನಾಯಕರಿಗೂ ರವಾನಿಸಿದಂತಾಗುತ್ತದೆ. ಸಮುದಾಯದ ಕಾರ್ಯಕರ್ತರು, ನಾಯಕರೆಲ್ಲ ಸೇರಿ ಒಗ್ಗಟ್ಟು ಪ್ರದರ್ಶಿಸಿದಂತೆಯೂ ಆಗುತ್ತದೆ. ಜಾಫರ್ ಷರೀಫ್ ಮತ್ತು ಕೆ. ರೆಹಮಾನ್ ಖಾನ್ ಅವರ ಬಳಿಕ ಹೈಕಮಾಂಡ್ ಮಟ್ಟದಲ್ಲಿ ನಮ್ಮ ಸಮುದಾಯದ ಪರವಾಗಿ ಲಾಬಿ ಮಾಡಲು ಹೊಸ ಒಗ್ಗಟ್ಟು ಮತ್ತು ನಾಯಕತ್ವವು ಸಹಾಯಕವಾಗುತ್ತದೆ ಎಂಬ ಆಲೋಚನೆಯೂ ಕಾರ್ಯಕ್ರಮದ ಆಯೋಜಕರಲ್ಲಿ ಇದ್ದಿರಬಹುದು.
ಆದರೆ ಚುನಾವಣೆಗಿಂತ ಮುಂಚೆ ಮತ್ತು ನಂತರ ಪಕ್ಷ ಮತ್ತು ಮುಂಚೂಣಿ ನಾಯಕರ ವರಸೆ ನೋಡಿದರೆ ಸಮುದಾಯವು ಈಗಾಗಲೇ ‘ಟೇಕನ್ ಫಾರ್ ಗ್ರಾಂಟೆಡ್’ ಆಗಿ ಹೋಗಿದೆ. ಮುಸ್ಲಿಮ್ ಸಮುದಾಯದ ಯಾವುದೇ ಬೇಡಿಕೆಗಳಿಗೂ ಇವರು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಏಕೆಂದರೆ ಸನ್ಮಾನ ಸಮಾರಂಭವಿಡೀ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಡಿ.ಕೆ.ಶಿವಕುಮಾರ್, ಝಮೀರ್ ಅಹ್ಮದ್ ಸೇರಿದಂತೆ ಎಲ್ಲರೂ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯ ನೀಡಿದ ಬೆಂಬಲದ ಕುರಿತು ಹೊಗಳಿ ಧನ್ಯವಾದ ಹೇಳಿ, ದೇಶದ ಸಂವಿಧಾನ ರಕ್ಷಣೆಗಾಗಿ ಲೋಕಸಭೆ ಚುನಾವಣೆಯಲ್ಲೂ ಹೀಗೆಯೇ ಬೆಂಬಲಿಸಲೂ ಕೋರಿದರು. ಭಾಷಣದ ತುಂಬೆಲ್ಲಾ ಅಲ್ಪಸಂಖ್ಯಾತರ ರಕ್ಷಣೆಗೆ ನಮ್ಮ ಸರಕಾರ ಸದಾ ಬದ್ಧ, ಯಾರೂ ಹೆದರಬೇಕಿಲ್ಲ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂಬ ಅದೇ ಹಳೆಯ ಡೈಲಾಗುಗಳು ಬಿಟ್ಟು ಭಾಷಣ ಮುಗಿಸಿದರು (ದುರಂತವೆಂದರೆ ಅದೇ ದಿನ ಗದಗ ಜಿಲ್ಲೆಯಲ್ಲಿ ಮುಹಮ್ಮದ್ ಗೌಸ್ ಮತ್ತು ಅಶ್ಫಾಕ್ ಎಂಬವರು ದನ ಸಾಗಣೆಯ ಆರೋಪದಲ್ಲಿ ಮತೀಯ ಗೂಂಡಾಗಳಿಂದ ಹಲ್ಲೆಗೊಳಪಟ್ಟು ಗಂಭೀರ ಗಾಯಗಳೊಂದಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಸುದ್ದಿಯಾಯಿತು!). ರಾಜ್ಯದ ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಒಂದೇ ವೇದಿಕೆಯಲ್ಲಿ ಲಭ್ಯವಿದ್ದರೂ ಯಾರೊಬ್ಬರೂ ಸಮುದಾಯದ ಪ್ರಾತಿನಿಧ್ಯದ ಕುರಿತು ಚಕಾರವೆತ್ತಲಿಲ್ಲ. ಹಿಂದೆ ಆದ ಅನ್ಯಾಯ ಪಕ್ಕಕ್ಕಿಟ್ಟು ಕನಿಷ್ಠ ಪಕ್ಷ ಮುಂದಿನ ದಿನಗಳಲ್ಲಾದರೂ ನಿಗಮ-ಮಂಡಳಿಗಳಿಗೆ ನೇಮಕ, ಲೋಕಸಭಾ ಚುನಾವಣೆ, ರಾಜ್ಯಸಭೆ ನಾಮನಿರ್ದೇಶನದಲ್ಲಾದರೂ ನ್ಯಾಯ ಒದಗಿಸಿ ಸರಿಪಡಿಸಬೇಕೆಂದು ಕೇಳಬಹುದಿತ್ತು. ರಾಜ್ಯದ ಎಲ್ಲಾ ಕಡೆಯಿಂದಲೂ ಬಂದು ಸೇರಿದ್ದ ಪಕ್ಷದ ಕಾರ್ಯಕರ್ತರಿಂದಾದರೂ ಕಾರ್ಯಕ್ರಮದ ಕೊನೆಯಲ್ಲಿ ಕನಿಷ್ಠ ಪಕ್ಷ ಒಂದು ಚಿಕ್ಕ ಮನವಿಯನ್ನಾದರೂ ಸಲ್ಲಿಸಬಹುದಿತ್ತು. ಬಹುಶಃ ಪಕ್ಷದ ವೇದಿಕೆಯಲ್ಲಿ ಈ ಕುರಿತು ಚರ್ಚಿಸುತ್ತೇವೆ ಎಂಬುದು ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಉತ್ತರವಾಗಬಹುದು. ಆದರೆ ನಮ್ಮಂತಹ ಸಾಮಾನ್ಯರ ಪ್ರಕಾರ ಈ ಕಾರ್ಯಕ್ರಮದ ವೇದಿಕೆಗಿಂತ ಉತ್ತಮ ವೇದಿಕೆ ಮತ್ತೊಂದು ಇರಲಿಕ್ಕಿಲ್ಲ. ಕಾರ್ಯಕ್ರಮದಲ್ಲಿ ಮಾತನಾಡಿದ ಅಷ್ಟೂ ಜನರಲ್ಲಿ ಕೇವಲ ದಿನೇಶ್ ಗುಂಡೂರಾವ್ ಅವರ ಮಾತಿನಲ್ಲಿ ಮಾತ್ರ ಸಮುದಾಯದ ಕುರಿತ ಅಂತಃಕರಣ ಕಂಡು ಬಂತು. ತಮ್ಮ ಭಾಷಣದಲ್ಲಿ ಹಿಂದಿನ ಅಧಿಕಾರಾವಧಿಯಲ್ಲಿ ಸಮುದಾಯಕ್ಕೆ ದೊಡ್ಡಮಟ್ಟದ ಬೆಂಬಲವಾಗಿ ನಿಂತಿದ್ದೀರಿ, ಈ ಬಾರಿ ಅದಕ್ಕಿಂತಲೂ ದೊಡ್ಡ ಬೆಂಬಲವಾಗಿ ನಿಲ್ಲುವಂತೆ ಸಿದ್ದರಾಮಯ್ಯನವರಿಗೆ ವಿನಂತಿ ಮಾಡಿಕೊಂಡರು. ಆದರೆ ನಮ್ಮದೇ ಸಮುದಾಯದ ನಾಯಕರ ಭಾಷಣದಲ್ಲಿ ಇಂತಹ ಯಾವ ಅಂತಃಕರಣವೂ ಕಂಡುಬರಲಿಲ್ಲ. ನಮ್ಮವರೇ ವೇದಿಕೆಯ ಮೇಲೆ ನಿಂತು ಕಾಂಗ್ರೆಸ್ ಸರಕಾರದಿಂದಾಗಿ ರಾಜ್ಯದಲ್ಲಿ ನಾವಿಂದು ನೆಮ್ಮದಿಯಿಂದಿದ್ದೇವೆ ಎಂಬ ಮಾತುಗಳನ್ನಾಡಿ ನಮ್ಮನ್ನೆಲ್ಲ ಇಷ್ಟಕ್ಕೇ ಸಮಾಧಾನ ಪಟ್ಟುಕೊಳ್ಳುವಂತೆ ಸಂತೈಸಿದಂತಿತ್ತು. ಕೆಲಸದಲ್ಲಿ ಮಗ್ನವಾದ ತಾಯಿಗೇ ತನ್ನ ಮಗು ಅಳುವವರೆಗೆ ಅದಕ್ಕೆ ಹಸಿವಾಗಿದೆಯೆಂದು ಗೊತ್ತಾಗದ ಪ್ರಪಂಚದಲ್ಲಿ ನಾವು ನಿರತರಾಗಿದ್ದೇವೆ. ಇಂತಹದರಲ್ಲಿ ಏನೂ ಮಾತನಾಡದೆ, ಏನೂ ಕೇಳದೆ ಸೀಟುಗಳು, ಪ್ರಾತಿನಿಧ್ಯ ದೊರಕುತ್ತದೆ, ಬೇಡಿಕೆಗಳು ಈಡೇರುತ್ತವೆ ಎಂದುಕೊಂಡರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಇತರ ಎಲ್ಲಾ ಕಾರ್ಯಾಧ್ಯಕ್ಷರೂ ಮಂತ್ರಿಗಿರಿಗಿಟ್ಟಿಸಿ ಗೂಟದ ಕಾರಲ್ಲಿ ಓಡಾಡುತ್ತಾ ರಾಜ್ಯದ, ತಮ್ಮ ಸಮುದಾಯದ ಸೇವೆಯಲ್ಲಿ ನಿರತರಾಗಿರುವಾಗಲೂ ಸಲೀಂ ಅಹ್ಮದ್ ಮಾತ್ರ ಬರಿಗೈಲಿ ಓಡಾಡುತ್ತಿರುವುದು ನೋಡಿಯೂ ಮೌನವಹಿಸಿರುವುದು ಸಮುದಾಯದ ಮಂದಿಯ ಅಸಹಾಯಕತೆಯೆನ್ನಬೇಕೋ ಅಥವಾ ರಾಜಕೀಯ ಅಜ್ಞಾನವೆನ್ನಬೇಕೋ ತಿಳಿಯುತ್ತಿಲ್ಲ. ಸಮಯ ಮೀರಿದೆ, ಆದರೂ ಪರವಾಗಿಲ್ಲ, ‘ಬೆಟರ್ ಲೇಟ್ ದೆನ್ ನೆವೆರ್’ ಎಂಬ ಮಾತಿನಂತೆ ಈಗಲಾದರೂ ಒಟ್ಟಾಗಿ ಪ್ರಯತ್ನಿಸಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಿಸುವಲ್ಲಿ ಶ್ರಮಿಸೋಣ.