ಮೈಸೂರು: ಟಿಬೆಟಿಯನ್ ಜನಾಂಗಕ್ಕೆ ಭದ್ರತೆ ನೀಡುವಲ್ಲಿ ಜಿಲ್ಲಾಡಳಿತದಿಂದ ನಿರ್ಲಕ್ಷ್ಯ

Update: 2024-03-12 02:38 GMT

Photo: blog.via.com

ಬೆಂಗಳೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಗುಪ್ಪೆಯಲ್ಲಿ ಸ್ಥಳೀಯರು ಮತ್ತು ಟಿಬೆಟಿಯನ್ ಜನಾಂಗದವರ ಮಧ್ಯೆ ಕೋಮುವಾದ ಸೃಷ್ಟಿಗೆ ಕಾರಣವಾಗುತ್ತಿದ್ದು, ಟಿಬೆಟಿಯನ್ ಜನಾಂಗಕ್ಕೆ ಭದ್ರತೆ ಕೊಡುವ ನಿಟ್ಟಿನಲ್ಲಿ ವರದಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಪುನರ್ವಸತಿ ವಿಭಾಗವು 3 ನೆನಪೋಲೆಗಳನ್ನು ಬರೆದಿದ್ದರೂ ಮೈಸೂರು ಜಿಲ್ಲಾಧಿಕಾರಿ ಇದುವರೆಗೂ ಯಾವುದೇ ವರದಿಯನ್ನೂ ಸಲ್ಲಿಸಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರ ಪಾಳ್ಯದ ಸಮೀಪದ ಟಿಬೆಟಿಯನ್ ಕ್ಯಾಂಪ್‌ನಲ್ಲಿನ ಜೋಳದ ಫಸಲನ್ನು ತಿಂದುಹಾಕಿವೆ ಎಂದು ಆರೋಪಿಸಿ ಜಾನುವಾರುಗಳ ಕಾಲು, ಬಾಲ ಹಾಗೂ ಕೊಂಬುಗಳಿಗೆ ಹಲ್ಲೆ ಮಾಡಿರುವ ಪ್ರಕರಣದ ಬೆನ್ನಲ್ಲೇ ಸ್ಥಳೀಯರ ನಡುವೆ ಎದ್ದಿರುವ ಅಸಮಾಧಾನವು ಕೋಮುವಾದ ಸೃಷ್ಟಿಗೆ ಕಾರಣವಾಗಲಿದೆ ಎಂದು ಕಂದಾಯ ಇಲಾಖೆಯು ಬರೆದಿದ್ದ ಪತ್ರಗಳಿಗೆ ಮಹತ್ವ ಪಡೆದುಕೊಂಡಿವೆ.

ಟಿಬೆಟಿಯನ್ ಜನಾಂಗದ ರೈತರಿಗೆ ಬೆಳೆಸಾಲ, ಬೆಳೆವಿಮೆ, ಇನ್‌ಪುಟ್ ಸಬ್ಸಿಡಿ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ವಿವಿಧ ಜಿಲ್ಲಾಧಿಕಾರಿಗಳು ಸರಕಾರಕ್ಕೆ ತಿಳಿಸಿರುವ ಬೆನ್ನಲ್ಲೇ ಬೈಲುಕುಪ್ಪೆಯಲ್ಲಿ ವಾಸಿಸುತ್ತಿರುವ ಟಿಬೆಟಿಯನ್ ಜನಾಂಗಕ್ಕೆ ಭದ್ರತೆ ನೀಡುವ ವಿಚಾರದಲ್ಲಿ ಸ್ಥಳೀಯ ಜಿಲ್ಲಾಡಳಿತವು ನಿರ್ಲಕ್ಷ್ಯ ತೋರಿರುವುದು ಮುನ್ನೆಲೆಗೆ ಬಂದಿದೆ.

ಟಿಬೆಟಿಯನ್ ಜನಾಂಗಕ್ಕೆ ಭದ್ರತೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು 2023ರ ಸೆ.11ರಂದೇ ಮೈಸೂರು ಜಿಲ್ಲಾಧಿಕಾರಿಗೆ ಮೂರನೇ ನೆನಪೋಲೆಯನ್ನು ಬರೆದಿದೆ. ಇದರ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

ನೆನಪೋಲೆಯಲ್ಲೇನಿದೆ?: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೈಲಗುಪ್ಪೆಯಲ್ಲಿ ಟಿಬೆಟಿಯನ್ ಜನಾಂಗದವರು 1970ರಿಂದ ವಾಸಿಸುತ್ತಿದ್ದಾರೆ. ಸ್ಥಳೀಯ ನಿವಾಸಿ ಎಚ್.ಜಿ. ಸಂತೋಷ್ ಕುಮಾರ್ ಅವರು ಲಕ್ಷ್ಮೀಪುರ ಗ್ರಾಮದ ಸರ್ವೇ ನಂಬರ್ 8ರಲ್ಲಿನ ಸುಮಾರು 6 ಎಕರೆ 8 ಗುಂಟೆ ಜಮೀನನ್ನು ಸೀತಮ್ಮ ಎಂಬವರಿಂದ 2015ರ ಸೆ.4ರಂದು ಮಾರಾಟ ಹಕ್ಕು ಪತ್ರ ಪಡೆದಿರುವುದಾಗಿ ಸೃಷ್ಟಿಸಿ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿಯನ್ನು ದಾಖಲಿಸಿರುತ್ತಾರೆ.

ಇದರಿಂದಾಗಿ ಸ್ಥಳೀಯರು ಹಾಗೂ ಟಿಬೆಟಿಯನ್ ಜನಾಂಗದವರ ಮಧ್ಯೆ ಕೋಮುವಾದ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ. ಆದ್ದರಿಂದ ಭದ್ರತೆ ಒದಗಿಸಬೇಕು ಎಂದು ಪೊಲೀಸರಿಗೆ ಮತ್ತು ವಿದ್ಯುತ್ ಕಡಿತಗೊಳಿಸದಂತೆ ಸೆಸ್ಕಾಂ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಂಡು ತುರ್ತಾಗಿ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಕೋರಿದ್ದಾರೆ. ಆದರೆ ಇದುವರೆಗೂ ತಮ್ಮಿಂದ ಸರಕಾರಕ್ಕೆ ವರದಿ ಸಲ್ಲಿಕೆಯಾಗಿರುವುದಿಲ್ಲ. ಆದ್ದರಿಂದ ಈ ಕುರಿತು ನಿಯಮಾನುಸಾರ ಪರಿಶೀಲಿಸಿ ಕೈಗೊಂಡ ಕ್ರಮದ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಅವರು ಮೈಸೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

ಟಿಬೆಟಿಯನ್ ಕಾಲನಿ ರೈತರ ಜಮೀನಿನ ಆರ್‌ಟಿಸಿ ಕಲಂ 11ರಲ್ಲಿ ಇವರ ಹೆಸರುಗಳು ದಾಖಲಾಗಿವೆಯೇ ವಿನಃ ಆರ್‌ಟಿಸಿ ಕಲಂ 09ರಲ್ಲಿ ಸೇರ್ಪಡೆಯಾಗಿಲ್ಲ.

ಸರಕಾರವು ಸಹ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಇದುವರೆಗೂ ಬೆಳೆ ಸಾಲ, ಬೆಳೆ ವಿಮೆ, ಇನ್ ಪುಟ್ ಸಬ್ಸಿಡಿ ಸೇವೆಗಳು ದೊರಕಿಲ್ಲ ಎಂಬ ಸಮರ್ಥನೆ ನೀಡಿದ್ದರು. ಟಿಬೆಟಿಯನ್ ಪುನರ್ವಸತಿ ನೀತಿ 2014ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಒಳಾಡಳಿತ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ ರಜನೀಶ್ ಗೋಯಲ್ ಅವರು ಕಂದಾಯ ಇಲಾಖೆಗೆ ಸರಣಿ ಪತ್ರಗಳನ್ನು ಬರೆದಿದ್ದರೂ ಕಂದಾಯ ಇಲಾಖೆಯು ಸಭೆಗಳನ್ನು ನಡೆಸುವುದರಲ್ಲಿಯೇ ಕಾಲಹರಣ ಮಾಡಿರುವುದು ತಿಳಿದು ಬಂದಿದೆ.

ಕರ್ನಾಟಕದ ಕಾರವಾರ, ಚಾಮರಾಜನಗರ, ಮೈಸೂರು ಜಿಲ್ಲೆಯ ವಿವಿಧೆಡೆ ನೆಲೆಸಿರುವ ಟಿಬೆಟಿಯನ್ ನಿರಾಶ್ರಿತರಿಗಾಗಿ ಟಿಬೆಟಿಯನ್ ಪುನರ್ವಸತಿ ನೀತಿ-2014ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು 2020ರ ಫೆ.20ರಂದು ಪತ್ರದಲ್ಲಿ ತಿಳಿಸಿತ್ತು.

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ವೀಡಿಯೊ ಸಂವಾದ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದಿತ್ತು. ಈ ವೇಳೆಯಲ್ಲಿ ಟಿಬೆಟಿಯನ್ ಪುನರ್ವಸತಿ ನೀತಿ-2014ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂಬ ಅಂಶವನ್ನು ಗಮನಿಸಲಾಗಿತ್ತು.

ಟಿಬೆಟಿಯನ್ ರೈತರಿಗೆ ದೊರಕದ ಬೆಳೆಸಾಲ, ಬೆಳೆವಿಮೆ

ದೊಂಡೆಲಿಂಗ್ ಟಿಬೆಟಿಯನ್ ಕಾಲನಿ ರೈತರು ಬೆಳೆ ಸಾಲ, ಬೆಳೆವಿಮೆ, ಇನ್‌ಪುಟ್ ಸಬ್ಸಿಡಿಯ ಸೇವೆಗಳನ್ನು ಪಡೆಯಲು ಬೇಡಿಕೆ ಇರಿಸಿದ್ದಾರೆ. ಟಿಬೆಟಿಯನ್ ಕಾಲನಿ ರೈತರ ಜಮೀನಿನ ಆರ್‌ಟಿಸಿ ಕಲಂ 11ರಲ್ಲಿ ಇವರ ಹೆಸರುಗಳು ದಾಖಲಾಗಿವೆ.

ಆದರೆ ಈ ಎಲ್ಲ ಸೌಲಭ್ಯಗಳನ್ನು ಪಡೆಯಬೇಕಾದಲ್ಲಿ ರೈತರ ಜಮೀನಿನ ಆರ್‌ಟಿಸಿ ಕಲಂ 09ರಲ್ಲಿದ್ದಲ್ಲಿ ಮಾತ್ರ ಈ ಸೌಲಭ್ಯಗಳು ದೊರೆಯುತ್ತವೆ. ಪುನರ್ವಸತಿ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಂತದಲ್ಲಿ ಪ್ರಮುಖ ಪಾತ್ರ ವಹಿಸುವ ಕಂದಾಯ ಇಲಾಖೆಯು ಇದುವರೆಗೂ ತಾಂತ್ರಿಕ ತೊಡಕನ್ನು ನಿವಾರಿಸಿಲ್ಲ ಎಂಬುದು ತಿಳಿದು ಬಂದಿದೆ.

‘ಬೆಳೆ ಸಾಲ, ಬೆಳೆ ವಿಮೆ, ಇನ್‌ಪುಟ್ ಸಬ್ಸಿಡಿಯ ಸೇವೆಗಳು ತಂತ್ರಾಂಶಗಳ ಮೂಲಕ ಕಾರ್ಯನಿರ್ವಹಿಸುವುದರಿಂದ ಭೂಮಿ ತಂತ್ರಾಂಶದೊಂದಿಗೆ ಜೋಡಣೆಯಾಗಿರುವುದರಿಂದ ಈ ತಂತ್ರಾಂಶಗಳಲ್ಲಿ ಬದಲಾವಣೆ ಮಾಡಿದಲ್ಲಿ ಟಿಬೆಟಿಯನ್ ರೈತರಿಗೆ ಈ ಸೌಲಭ್ಯಗಳು ದೊರೆಯುತ್ತವೆ,’ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಗೊತ್ತಾಗಿದೆ.

ಚಾಮರಾಜನಗರ ಜಿಲ್ಲೆಯ ಒಡೆಯರ್ ಪಾಳ್ಯ ಗ್ರಾಮದ ಟಿಬೆಟಿಯನ್ ಕಾಲನಿಗೆ ಪುನರ್ವಸತಿ ನೀತಿ ಅಡಿ ಬರುವ ಸವಲತ್ತುಗಳನ್ನು ಒದಗಿಸುವ ಸಂಬಂಧ 2023ರ ಮಾರ್ಚ್ 4ರಂದು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಈ ಗ್ರಾಮದ ಒಟ್ಟು 421 ಟೆಬೆಟಿಯನ್ ಜನಾಂಗದ ಕುಟುಂಬದವರಿಗೆ ಪಡಿತರ ಚೀಟಿ ವಿತರಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಕೃಷಿ ಇಲಾಖೆಯಿಂದ ಕೃಷಿ ಸಾಲವನ್ನು ಹೊರತುಪಡಿಸಿ ವಿವಿಧ ಯೋಜನೆಗಳಡಿಯಲ್ಲಿ ಹಂಗಾಮುವಾರು ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳು, ಕೃಷಿ ಸಂಸ್ಕರಣಾ ಘಟಕಗಳು, ತುಂತುರು ಹನಿನೀರಾವರಿ ಘಟಕಗಳು, ಸಾವಯವ ಗೊಬ್ಬರ, ಲಘು ಪೋಷಕಾಂಶ ಪರಿಕರಗಳನ್ನು ಸಹಾಯ ಧನದ ರೂಪದಲ್ಲಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಲ್ಲಿಸಿದ್ದ ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News