ಮಿಶ್ರ ಬೇಸಾಯ, ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ನಿವೃತ್ತ ಶಿಕ್ಷಕ

Update: 2024-03-04 07:34 GMT

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಂಗಲ ಗ್ರಾಮದ ಪ್ರಗತಿಪರ ಕೃಷಿಕ ಶ್ರೀನಿವಾಸ್ ರೆಡ್ಡಿ ಅವರ ಯಶೋಗಾಥೆ ಇತರರಿಗೆ ಮಾದರಿಯಾಗಿದೆ. ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಶ್ರೀನಿವಾಸ್ ರೆಡ್ಡಿಯವರು ಸಾವಯವ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಸುಮಾರು 25 ಎಕರೆ ಜಮೀನಿನಲ್ಲಿ ಅರಣ್ಯ ಕೃಷಿ, ವಿವಿಧ ಜಾತಿಯ ಹಣ್ಣು, ತರಕಾರಿ ಸಹಿತ ಬಹುಬೆಳೆ ಪದ್ಧತಿ ಮೂಲಕ ಅವರು ಸಾವಯವ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಶ್ರೀನಿವಾಸ್ ಅವರ ಜಮೀನಿನಲ್ಲಿ ನಿಂಬೆ, ಎರಳಿ, ಸೀತಾಫಲ, ಕಿತ್ತಳೆ, ಬೆಣ್ಣೆಹಣ್ಣು, ಲಿಚ್ಚಿ ಹಣ್ಣು, ಜಾಯಿಕಾಯಿ, ಜಂಬೂನೇರಳೆ, ವಾಟರ್ ಆ್ಯಪಲ್, ಮೆಕಾಡಮಿಯಾ, ಕರ್ಜೂರ, ಎಂಬ ವಿಶೇಷ ಹಣ್ಣು ಹೀಗೆ ನೂರಾರು ತಳಿಗಳ ಬಗೆಬಗೆಯ ಹಣ್ಣುಗಳು ಜೊತೆಗೆ ವಿದೇಶಿ ಹಣ್ಣುಗಳನ್ನೂ ಬೆಳೆಯಲು ನಾಟಿಮಾಡಿದ್ದಾರೆ.


ಅಲ್ಲದೆ ಸಿಲ್ವರ್, ಮಹಾಗನಿ, ಶಿವನಿ, ಅಗರ್ಹುಡ್, ಮಾವು, ಹಲಸು, ಪನ್ನೇರೆಳೆ, ಎಲ್ಲಕ್ಕಿ, ಸಿಹಿಹುಣಸೇ, ತೆಂಗು, ಅಡಿಕೆ, ಕಾಳುಮೆಣಸು, ಬಾಳೆ, ಅಲ್ಲದೆ ವಿವಿಧ ತರಕಾರಿ ಗಿಡಗಳು ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿವೆ.

ಕೃಷಿಯಿಂದ ದೂರ ಉಳಿದವರಿಗೂ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಪ್ರೇರಣೆಯನ್ನು ಅವರು ನೀಡುತ್ತಿದ್ದಾರೆ. ಕೇವಲ ತೋಟಗಾರಿಕೆ ಹಾಗೂ ಮಿಶ್ರ ಬೇಸಾಯಕ್ಕೆ ಸೀಮಿತವಾಗದೆ ಹೈನುಗಾರಿಕೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಶೇ. 100ರಷ್ಟು ಸಾವಯವಗೊಬ್ಬರ

ರೈತ ಶ್ರೀನಿವಾಸ್ ರೆಡ್ಡಿಯವರ 25 ಎಕರೆ ಜಮೀನಿನಲ್ಲಿ ನಾಲ್ಕು ಕೊಳವೆ ಬಾವಿ ಇದೆ. ಇದರ ಜೊತೆಗೆ ಮಳೆಯಾಶ್ರಿತ ಕೃಷಿ ಹೊಂಡವನ್ನು ಮಾಡಿ ಹನಿ ನೀರಾವರಿ ಪದ್ಧತಿಯಲ್ಲಿ ಮೋಟಾರ್ ಮೂಲಕ ನೀರು ಹರಿಸುತ್ತಾರೆ.

ಉಳುಮೆ ರಹಿತವಾಗಿ ಸಾವಯವ ಕೃಷಿ ಪದ್ಧತಿಯಲ್ಲಿ ಗೋಕೃಪಾಮೃತ, ಜೀವಾಮೃತ, ಜೈವಿಕಗೊಬ್ಬರ, ಹಸುವಿನ ಗೊಬ್ಬರವನ್ನು ತಮ್ಮ ಹೊಲಕ್ಕೆ ಬಳಸುತ್ತಾರೆ. ಹೀಗೆ ಸಾವಯವ ಹಾಗೂ ದನದ ಗೊಬ್ಬರವನ್ನು ಹೊಲಕ್ಕೆ ಬಳಸಿ ಆರ್ಥಿಕವಾಗಿ ಲಾಭಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕುಟುಂಬಸ್ಥರ ಸಹಕಾರ

ಕೃಷಿ ಕೆಲಸಗಳಿಗೆ ಕೆಲವು ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಕೊರತೆಯಾದರೆ ಶ್ರೀನಿವಾಸ್ ರೆಡ್ಡಿಯವರ ಪತ್ನಿ ಹಾಗೂ ಮನೆಯ ಸದಸ್ಯರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಇವರಿಗೆ ಸಹಕರಿಸುತ್ತಾರೆ. ಶ್ರೀನಿವಾಸ್ ರೆಡ್ಡಿಯವರ ಕುಟುಂಬ ಸಮಗ್ರ ಕೃಷಿ ಪದ್ಧತಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ನಾ.ಅಶ್ವಥ್ ಕುಮಾರ್

contributor

Similar News