ಮಹಾರಾಷ್ಟ್ರದ ಸೀಸನ್ ಮುಗಿದ ಬೆನ್ನಲ್ಲೇ ಹೊಸಕೋಟೆಯ ದ್ರಾಕ್ಷಿ ಮಾರುಕಟ್ಟೆಗೆ

Update: 2024-03-04 06:17 GMT

ಹೊಸಕೋಟೆ: ಮಾರ್ಚ್, ಎಪ್ರಿಲ್, ಮೇ ತಿಂಗಳುಗಳು ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಪಾಲಿಗೆ ಸುಗ್ಗಿ ಕಾಲ. ಇನ್ನು ಕೆಲವೇ ದಿನಗಳಲ್ಲಿ ದ್ರಾಕ್ಷಿ ಕೊಯ್ಲು ಪ್ರಾರಂಭವಾಗಲಿದೆ. ಆದರೆ ಈಗಾಗಲೇ ಮಹಾರಾಷ್ಟ್ರದ ದ್ರಾಕ್ಷಿ ರಾಜ್ಯದ ಮಾರುಕಟ್ಟೆಯಲ್ಲಿದ್ದು, ಇದು ಮುಗಿದ ಕೂಡಲೇ ಜಿಲ್ಲೆಯ ದ್ರಾಕ್ಷಿ ರಾಜ್ಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಬಾರಿ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಫಸಲಿಗೆ ಕೊರತೆ ಇಲ್ಲ. ಆದರೆ ರೈತರ ಪಾಲಿಗೆ ಈ ಬಾರಿ ದರದ್ದೇ ಚಿಂತೆ. ಮಹಾರಾಷ್ಟ್ರ ದ್ರಾಕ್ಷಿಯೂ ಮಾರುಕಟ್ಟೆಯಲ್ಲಿದೆ, ಜಿಲ್ಲೆಯಲ್ಲೂ ಹೇರಳವಾಗಿ ದ್ರಾಕ್ಷಿ ಬೆಳೆಯಲಾಗಿದೆ. ಹೆಚ್ಚಿನ ಫಸಲಿನಿಂದಾಗಿ ದರ ಕುಸಿಯುವ ಭೀತಿ ದ್ರಾಕ್ಷಿ ಬೆಳೆಗಾರರನ್ನು ಕಾಡುತ್ತಿದೆ. ನಿರೀಕ್ಷಿತ ಬೆಲೆ ಸಿಗದಿದ್ದಲ್ಲಿ ಹಾಕಿದ ಬಂಡವಾಳವೂ ಸಿಗಲ್ಲ ಎನ್ನುತ್ತಾರೆ ಜಿಲ್ಲೆಯ ಬೆಳೆಗಾರರು.

ಜಿಲ್ಲೆಯಲ್ಲಿ ಸುಮಾರು 3,800 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಹೆಚ್ಚಾಗಿ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಅತೀ ಹೆಚ್ಚು ದ್ರಾಕ್ಷಿ ಕೊಯ್ಲು ಆಗುತ್ತದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೇ ನೆರೆಯ ರಾಜ್ಯ ಗಳಿಗೆ ಬಹುಪಾಲು ದ್ರಾಕ್ಷಿ ಮಾರಾಟವಾಗುತ್ತದೆ. ಈಬಾರಿ ಒಳ್ಳೆಯ ಫಸಲೂ ಬಂದಿದೆ. ಆದರೆ, ದರ ಕುಸಿದಿದೆ. ಮಹಾರಾಷ್ಟ್ರದಲ್ಲಿ ಸೀಸನ್ ಮುಗಿಯುತ್ತಲೇ ರಾಜ್ಯ ದಲ್ಲಿ ಬೆಲೆ ಏರಿಕೆ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದಾರೆ.


ರಾಜ್ಯಕ್ಕೆ ಮಹಾರಾಷ್ಟ್ರದಿಂದ ಹೇರಳವಾಗಿ ದ್ರಾಕ್ಷಿ ಬರುತ್ತಿರುವುದರಿಂದ ರಾಜ್ಯದ ದ್ರಾಕ್ಷಿಗೂ ಬೇಡಿಕೆ ಕಡಿಮೆಯಾಗಿದೆ. ಮಹಾರಾಷ್ಟ್ರ ದ್ರಾಕ್ಷಿ ರಾಜ್ಯ ಮಾರುಕಟ್ಟೆಯಲ್ಲಿ ಮುಗಿದ ನಂತರ ರಾಜ್ಯದ ದ್ರಾಕ್ಷಿ ಎಂಟ್ರಿ ಕೊಡಲಿದೆ. ಸದ್ಯ ಇಲ್ಲಿನ ವ್ಯಾಪಾರಿಗಳೆಲ್ಲ ಮಹಾರಾಷ್ಟ್ರದಲ್ಲೇ ಬೀಡುಬಿಟ್ಟಿದ್ದು, ಅಲ್ಲಿ ದ್ರಾಕ್ಷಿ ಖಾಲಿಯಾದ ನಂತರ ರಾಜ್ಯದ ತೋಟಗಳಿಗೆ ಬರಲಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಾಗಿ ದಿಲ್ಕುಷ್, ಆರ್ಕೆ ಗೋಲ್ಡ್, ಸೋನಾಕಾ. ರೆಡ್ ಬ್ಲೂ, ಶರತ್ ಹೀಗೆ ಹಲವು ತಳಿಯ ದ್ರಾಕ್ಷಿ ಬೆಳೆಯಲಾಗುತ್ತಿದೆ. ನಿರೀಕ್ಷೆಯಂತೆ ಈ ಬಾರಿ ಒಳ್ಳೆಯ ಫಸಲು ಬಂದಿದೆ. ಸಾಮಾನ್ಯವಾಗಿ ಫಸಲು ಕಡಿಮೆಯಿದ್ದಾಗ ಬೆಲೆ

ಹೆಚ್ಚಿರುತ್ತೆ. ಆದರೆ, ಈ ಬಾರಿ ಒಳ್ಳೆಯ ಫಸಲು ಬಂದಿದೆ. ಇನ್ನೊಂದೆಡೆ ವಾತಾವರಣ ಕೂಡಾ ಚೆನ್ನಾಗೇ ಇದ್ದು ಯಾವುದೇ ನಷ್ಟವಾಗದೇ ಪೂರ್ಣ ಫಸಲು ಸಿಗುವ ನಿರೀಕ್ಷೆ ಇದೆ.

ರೈತರಿಗೆ ಮಾರ್ಗದರ್ಶನದ ಕೊರತೆ: ರಾಜ್ಯದಲ್ಲಿ ಬೆಳೆದ ದ್ರಾಕ್ಷಿಯನ್ನು ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ದ್ರಾಕ್ಷಿ ಬೆಳೆಗಾರರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವವರಿಲ್ಲ. ಕನಿಷ್ಠ ಪಕ್ಷ ಒಂದು ದ್ರಾಕ್ಷಿ ಮಾರುಕಟ್ಟೆಯೂ ಜಿಲ್ಲೆಯಲ್ಲಿಲ್ಲ. ಹೀಗಾಗಿ ವ್ಯಾಪಾರಸ್ಥರು ಕೊಟ್ಟಷ್ಟು ಹಣ ಪಡೆದು ಫಸಲು ಮಾರುವ ಪರಿಸ್ಥಿತಿ ಜಿಲ್ಲೆಯಲ್ಲಿದೆ.

ಮಹಾರಾಷ್ಟ್ರದಿಂದ ಹೇರಳವಾಗಿ ದ್ರಾಕ್ಷಿ ರಾಜ್ಯದ ಮಾರುಕಟ್ಟೆಗೆ ಬರುತ್ತಿದೆ. ಮಹಾರಾಷ್ಟ್ರದ ದ್ರಾಕ್ಷಿ ಹೆಚ್ಚಿನ ರುಚಿ ಇರುವುದರಿಂದ ಅದಕ್ಕೆ ಬೇಡಿಕೆಯೂ ಇದೆ. ಜಿಲ್ಲೆಯಲ್ಲಿ ಕೊಯ್ಲು ಪ್ರಾರಂಭಗೊಂಡಿದ್ದು, ಮಹಾರಾಷ್ಟ್ರದ ದ್ರಾಕ್ಷಿ ಕಡಿಮೆಯಾದ ಬೆನ್ನಲ್ಲೇ ಇಲ್ಲಿನ ದ್ರಾಕ್ಷಿಗೆ ಬೇಡಿಕೆ ಬರಲಿದೆ.

ನವಾಝ್, ದ್ರಾಕ್ಷಿ ವ್ಯಾಪಾರಿ

ಮಾರ್ಚ್ 15ರ ನಂತರ ನಮ್ಮಲ್ಲಿ ದ್ರಾಕ್ಷಿ ಕೊಯ್ಲು ಆರಂಭವಾಗಲಿದೆ. ಮೇ ತಿಂಗಳವರೆಗೂ ದ್ರಾಕ್ಷಿ ಸಿಗಲಿದೆ. ಸದ್ಯ ಇಲ್ಲಿನ ವರ್ತಕರೆಲ್ಲ ಮಹಾರಾಷ್ಟ್ರದಲ್ಲೇ ಇದ್ದು, ಅಲ್ಲಿ ಮುಗಿದ ನಂತರ ರಾಜ್ಯದ ತೋಟಗಳಿಗೆ ಬರಲಿದ್ದಾರೆ. ಮಹಾರಾಷ್ಟ್ರದಲ್ಲಿ ದ್ರಾಕ್ಷಿ ಲಭ್ಯತೆ ಆಧಾರದಲ್ಲಿ ನಮ್ಮ ದ್ರಾಕ್ಷಿಗೆ ಬೆಲೆ ನಿರ್ಧಾರವಾಗಲಿದೆ.

ಪ್ರಭಾಕರ್ , ದ್ರಾಕ್ಷಿ ಬೆಳೆಗಾರ

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ನಾರಾಯಣಸ್ವಾಮಿ ಸಿ.ಎಸ್.

contributor

Similar News