ಒಲಿಂಪಿಕ್ ಪದಕ ಎಂದರೆ ಎಲ್ಲರಿಗೂ ಇಷ್ಟ | ಪದಕ ಪಡೆಯಲು ಅಥ್ಲೀಟ್ ಪಡುವ ಕಷ್ಟ ಯಾರಿಗೂ ಬೇಕಾಗಿಲ್ಲ!

Update: 2024-08-10 22:46 IST
ಒಲಿಂಪಿಕ್ ಪದಕ ಎಂದರೆ ಎಲ್ಲರಿಗೂ ಇಷ್ಟ | ಪದಕ ಪಡೆಯಲು ಅಥ್ಲೀಟ್ ಪಡುವ ಕಷ್ಟ ಯಾರಿಗೂ ಬೇಕಾಗಿಲ್ಲ!

Photo : X

  • whatsapp icon

ಕ್ರೀಡಾಪಟುಗಳು ದೇಶಕ್ಕಾಗಿ ಪ್ರತಿಷ್ಠಿತ ಪದಕ ಗೆದ್ದಾಗ ಅವರನ್ನು ಅಭಿನಂದಿಸುವವರ ಪಟ್ಟಿ ದೊಡ್ಡದಿರುತ್ತದೆ. ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಜನರ ವರೆಗೆ ಎಲ್ಲರೂ ಅಭಿನಂದಿಸುತ್ತಾರೆ. ಪದಕಗಳು ಎಲ್ಲರಿಗೂ ಇಷ್ಟ. ಆದರೆ ಇದೇ ಪದಕಗಳನ್ನು ಗೆಲ್ಲುವುದರ ಹಿಂದೆ ಎಷ್ಟು ಪರಿಶ್ರಮ ಇದೆ ಎಂದು ತಿಳಿದುಕೊಂಡವರು ತೀರಾ ಕಡಿಮೆ.

ಆ ಪದಕ ಗೆಲ್ಲುವ ಹಾದಿಯಲ್ಲಿ ಆ ಕ್ರೀಡಾಪಟು ಅದೆಷ್ಟು ಕಷ್ಟ ನಷ್ಟ ಸಹಿಸಿದ್ದಾರೆ, ಯಾವ ರೀತಿಯ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಹೆಚ್ಚಿನವರಿಗೆ ತಿಳಿದಿರುವುದೇ ಇಲ್ಲ. ಗೆದ್ದವರು ಸ್ಟಾರ್ ಆಗ್ತಾರೆ, ಪದಕ ಪಡೆಯದವರು ತೆರೆಮರೆಗೆ ಸರಿದು ಹೋಗ್ತಾರೆ. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ಪ್ರಧಾನಿ ಮೋದಿ ಲೌಡ್ ಸ್ಪೀಕರ್ ನಲ್ಲಿ ಫೋನ್ ಮಾಡಿ ವಿಡಿಯೋ ಮಾಡುವುದನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲ.

ಆದರೆ ಇದೇ ಕುಸ್ತಿಪಟುಗಳು ಪದಕ ಗೆಲ್ಲುವುದಕ್ಕಿಂತ ಮುಂಚೆ ಇವರನ್ನು ಯಾರೂ ಕೇಳಿನೋಡುವವರೇ ಇರುವುದಿಲ್ಲ. ಹೀಗೆ ಹೇಳಿದ್ದು ಯಾರ್ಯಾರೋ ಅಲ್ಲ, ಒಲಿಂಪಿಕ್ಸ್ ಪದಕ ವಿಜೇತರೊಬ್ಬರ ಸಂಬಂಧಿಕರೇ ಈ ಅಳಲು ತೋಡಿಕೊಂಡಿದ್ದಾರೆ. ಹರಿಯಾಣದ ಡಬಲ್ ಇಂಜಿನ್ ಬಿಜೆಪಿ ಸರಕಾರವನ್ನು ಒಲಿಂಪಿಕ್ ಕಂಚಿನ ಪದಕ ವಿಜೇತ ಅಮನ್ ಅವರ ಚಿಕ್ಕಮ್ಮ ತರಾಟೆಗೆತ್ತಿಕೊಂಡಿದ್ದಾರೆ.

ಅಮನ್ ಸೆಹ್ರಾವತ್ ಶುಕ್ರವಾರ ಪುರುಷರ 57 ಕೆಜಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವುದರ ಮೂಲಕ ಅತ್ಯಂತ ಕಿರಿಯ ವಯಸಿನಲ್ಲಿ ಒಲಂಪಿಕ್ ಪದಕ ಗೆದ್ದ ಭಾರತೀಯ ಕ್ರೀಡಾಪಟುವಾದರು. ದೇಶದ ಎಲ್ಲಾ ಪ್ರತಿಷ್ಠಿತ ಮಾಧ್ಯಮಗಳು ಹರ್ಯಾಣದ ಝಾಜರ್ ಜಿಲ್ಲೆಯಲ್ಲ ಬಿರೋಹರ್ ಗ್ರಾಮದಲ್ಲಿರುವ ಅಮನ್ ಕುಟುಂಬವನ್ನು ಭೇಟಿಯಾಗಲು ತಲುಪಿದವು. ಎಲ್ಲರೂ ಅಮನ್ ಸಾಧನೆಯ ಕುರಿತು ಮಾತನಾಡುತ್ತಿರುವಾಗ ಅಮನ್ ಚಿಕ್ಕಮ್ಮ ಸರಕಾರದ ವೈಫಲ್ಯಗಳನ್ನು ಎಣಿಸಿದರು.

ನಮ್ಮ ಮನೆಯಲ್ಲಿ ವಿದ್ಯುತ್ ಇಲ್ಲ. ಸರಿಯಾದ ರಸ್ತೆ ಇಲ್ಲ. ಅಮನ್ ಅವನ ಪರಿಶ್ರಮದಿಂದಾಗಿ ಈ ಮಟ್ಟಕ್ಕೆ ತಲುಪಿದ್ದಾನೆ ಎಂದು ಅವನ ಚಿಕ್ಕಮ್ಮ ಹೇಳಿದರು. 10ನೇ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡ ಮತ್ತು 11ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಅಮನ್ 11ನೇ ವಯಸ್ಸಿನಿಂದಲೇ ದಿಲ್ಲಿಯ ಪ್ರತಿಷ್ಠಿತ ಛತ್ರಪುರ್ ಅಖಾಡವನ್ನು ತಮ್ಮ ಮನೆಯಾಗಿಸಿಕೊಂಡಿದ್ದಾರೆ.

ಅಮನ್ ಪದಕ ಗೆದ್ದ ನಂತರ ಅಮನ್ ರೂಮಿನಲ್ಲಿ ಬರೆದಿದ್ದ ವಾಕ್ಯ ಬಹಳ ವೈರಲ್ ಆಗಿದೆ. ಪದಕ ಗೆಲ್ಲುವುದು ಅಷ್ಟು ಸುಲಭವಾಗಿದ್ದರೆ ಎಲ್ಲರೂ ಗೆದ್ದುಕೊಳ್ಳುತ್ತಿದ್ದರು ಎಂಬುದು ಆ ವಾಕ್ಯ. 21 ವರ್ಷ ವಯಸ್ಸಿನ ಅಮನ್ ಕಠಿಣ ಪರಿಶ್ರಮ ಹಾಗು ಛಲದ ಅತ್ಯುತ್ತಮ ಉದಾಹರಣೆ.

ಆದರೆ ಅಮನ್ ಚಿಕ್ಕಮ್ಮನ ಮಾತುಗಳು ದೇಶದಲ್ಲಿ ಗ್ರಾಮೀಣ ಕ್ರೀಡಾಪಟುಗಳು ಎದುರಿಸುವ ವಾಸ್ತವವನ್ನು ಬಯಲು ಮಾಡಿವೆ. ಪದಕ ಎಲ್ಲರಿಗೂ ಬೇಕು, ಅದರ ಕ್ರೆಡಿಟ್ ಎಲ್ಲರಿಗೂ ಬೇಕು, ಆದರೆ ಪದಕ ಗೆಲ್ಲುವವರನ್ನು ತಯಾರಿಸುವಲ್ಲಿ ನಾವು ಬಹಳ ಹಿಂದೆ ಬಿದ್ದಿದ್ದೇವೆ.

ದೇಶಕ್ಕೆ ಅತಿ ಹೆಚ್ಚು ಪದಕ ಗೆದ್ದು ಕೊಡುವ ರಾಜ್ಯ ಹರಿಯಾಣ. ಅದೇ ಹರಿಯಾಣದ ಖೇಲೋ ಇಂಡಿಯಾ ಬಜೆಟ್ ಕಡಿತ ಮಾಡುತ್ತದೆ ಮೋದಿ ಸರಕಾರ. ಆ ಬಳಿಕ ಅಲ್ಲಿಂದ ಗೆದ್ದವರಿಗೆ ಫೋನ್ ಕಾಲ್ ಮಾಡಿ, ಅವರ ಜೊತೆ ಫೋಟೋ ತೆಗೆಸಿ ನಾವೇ ಗೆಲ್ಲಿಸಿದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News