‘‘ಜನರು ಈ ಸಲ ಮೋದಿಗೆ ಮೋಸ ಹೋಗುವುದಿಲ್ಲ’’: ಬಿ.ಆರ್. ಪಾಟೀಲ್
ಮೋದಿಯವರು ಎಂಟೊಂಭತ್ತು ವರ್ಷಗಳಿಂದ ಜನರಿಗೆ ಸುಳ್ಳು ಹೇಳಿ ಅಧಿಕಾರದಲ್ಲಿದ್ದಾರೆ. ಅವರ ಬಣ್ಣ ಬಯಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೋದಿಯವರು ಎಷ್ಟೆಲ್ಲ ಓಡಾಡಿದರೂ ಪರಿಣಾಮ ಆಗಲಿಲ್ಲ. ಇವರ ಬೊಗಳೆ ಮಾತಿನ ಬಗ್ಗೆ ಜನರಿಗೆ ಗೊತ್ತಾಗಿದೆ. ಇವರ ಮಾತನ್ನು ನಂಬಲು ಸಾಧ್ಯವಿಲ್ಲ.
- ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ
ನೀವು ಜೆಪಿ ಚಳವಳಿಯಲ್ಲಿ ಇದ್ದವರು. ತುರ್ತುಪರಿಸ್ಥಿತಿ ವೇಳೆ ಜೈಲಿಗೆ ಹೋದವರು. ಜನರ ಪರವಾಗಿ ಕಾನೂನು ಹೋರಾಟ ಮಾಡಿದವರು. ರೈತರ ಹೋರಾಟದಲ್ಲಿ ಭಾಗಿಯಾಗಿದ್ದೀರಿ. ಇಂದಿನ ರಾಜಕಾರಣದ ಬಗ್ಗೆ ಏನೆನ್ನಿಸುತ್ತದೆ?
ಬಿ.ಆರ್. ಪಾಟೀಲ್: ಪರಿವರ್ತನೆ ಕಡೆಗಿನ ರಾಜಕೀಯ ಚಳವಳಿಗಳಿಂದ ಬಂದವರು ನಾವು. ಇಂದು ಪರಿವರ್ತನೆ ಯಾವ ಮಟ್ಟದಲ್ಲಿ ಆಗಬೇಕಿತ್ತೋ ಅದು ಆಗಿಲ್ಲ ಎಂಬುದರ ಬಗ್ಗೆ ಮನಸ್ಸಿನಲ್ಲಿ ನೋವಿದೆ. ಚಳವಳಿಯಿಂದ ಬಂದದ್ದು ಸಾರ್ಥಕವೂ ಹೌದು, ಇವತ್ತಿನ ಸಂದರ್ಭದಲ್ಲಿ ಬೇಸರವೂ ಹೌದು. ಜೆಪಿಯವರು ಕಂಡಂಥ ಕನಸು, ಗಾಂಧಿ ಕಂಡ ಕನಸನ್ನು ನನಸು ಮಾಡಬೇಕೆಂದೇ ನಾವು ಸಾರ್ವಜನಿಕ ಜೀವನಕ್ಕೆ ಬಂದಿದ್ದು. ಹೋರಾಟದ ಪ್ರತಿಫಲ ಎಷ್ಟು ಸಿಗಬೇಕಿತ್ತೋ ಅಷ್ಟು ಸಿಕ್ಕಿಲ್ಲ ಎಂಬ ಬೇಸರ ಕೂಡ ಇದೆ. ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದರ ಹೊರತು ಬೇರೆ ದಾರಿಯಿಲ್ಲ. ಬದಲಾವಣೆ ಆಗಬಹುದು ಎಂಬ ಭರವಸೆಯೊಂದಿಗೇ ಸಕ್ರಿಯ ಹೋರಾಟ ಮುಂದುವರಿಸಿದ್ದೇನೆ.
ಜೆಪಿ, ನಂಜುಂಡಸ್ವಾಮಿ, ಬೊಮ್ಮಾಯಿ ಇವರೆಲ್ಲರ ಒಡನಾಟ ನಿಮಗೆ ಏನನ್ನು ಕಲಿಸಿದೆ?
ಬಿ.ಆರ್. ಪಾಟೀಲ್: ಜೀವನಕ್ಕಾಗಿ ವಕೀಲಿ ವೃತ್ತಿ ಶುರು ಮಾಡಿದ್ದೆ. ಪಕ್ಷದ ಕಚೇರಿಗೆ ಹೋಗಿ ಸ್ನೇಹಿತರನ್ನೆಲ್ಲ ಭೇಟಿ ಮಾಡುವ ಸ್ವಭಾವವಿತ್ತು. ಅವತ್ತು ಅಕಸ್ಮಾತ್ತಾಗಿ ಬೊಮ್ಮಾಯಿಯವರು ಕರೆದು, ಆಳಂದಕ್ಕೆ ಅಭ್ಯರ್ಥಿಯಾಗಬೇಕು ಎಂದರು. ನನಗೆ ಆಶ್ಚರ್ಯವಾಯಿತು. ನಾನು ಆಕಾಂಕ್ಷಿಯಾಗಲೀ ಟಿಕೆಟ್ ಕೇಳಿದವನಾಗಲೀ ಆಗಿರಲಿಲ್ಲ. ಸಂಪನ್ಮೂಲವೂ ಇರಲಿಲ್ಲ. ಆಮೇಲೆ ಊರಿಗೆ ಹೋದೆ. ಒಂದು ದಿನ ನಾಮಪತ್ರ ಸಲ್ಲಿಸುವಂತೆ ಕೇಳಿ ಟೆಲಿಗ್ರಾಂ ಬಂತು. ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದಿಂದ ಆದೇಶ ಬಂದ ಮೇಲೆ ಕೆಲ ಸ್ನೇಹಿತರ ಬಳಿ ಮಾತನಾಡಿದೆ. ಒಂದು ಪೈಸೆಯನ್ನೂ ಖರ್ಚು ಮಾಡದೆ ಚುನಾವಣೆ ಮಾಡೋಣ, ಓಡಾಡೋಣ ಎಂದರು. ಬೊಮ್ಮಾಯಿಯವರು ಐದು ಸಾವಿರ ರೂ. ಪಾರ್ಟಿ ಫಂಡ್ ಕಳಿಸಿದ್ದರು. ಅದನ್ನು ತರಲು ಕಲಬುರ್ಗಿಯಿಂದ ಒಬ್ಬರನ್ನು ಕಳಿಸಿದ್ದೆ. ಅಂದು ಅದೇ ದೊಡ್ಡ ಮೊತ್ತವಾಗಿತ್ತು. ಅಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ. ನನಗಂತೂ ಹೆದರಿಕೆಯಾಗುತ್ತಿದೆ. ದುಡ್ಡಿದ್ದವರು ಇಡೀ ಪ್ರಜಾಪ್ರಭುತ್ವವನ್ನೇ ಹೈಜಾಕ್ ಮಾಡಿ ಮತ್ತೆ ಬಂಡವಾಳಶಾಹಿ ರಾಜಕಾರಣವನ್ನೇ ಮಾಡುವ ಎಲ್ಲ ಪ್ರಯತ್ನವೂ ನಡೆಯುತ್ತದೇನೋ ಎಂಬ ಭಯ.
ಪ್ರಜಾಪ್ರಭುತ್ವದ ಹೈಜಾಕ್ ಒಂದು ಹಂತದಲ್ಲಿ ಈಗಾಗಲೇ ನಡೆದಿದೆ ಎಂದು ಅನ್ನಿಸುವುದಿಲ್ಲವೆ?
ಬಿ.ಆರ್. ಪಾಟೀಲ್: ಇವತ್ತು ಕೂಡ ರೈತರ ಹೋರಾಟ, ಮಹಿಳಾ ಹೋರಾಟ, ಕಾರ್ಮಿಕರ ಹೋರಾಟಗಳು ಅಲ್ಲಲ್ಲಿ ಆಶಾಭಾವನೆ ಮೂಡಿಸುತ್ತಿವೆ. ಹಾಗಾಗಿ ನಾನು ಇನ್ನೂ ಭರವಸೆ ಕಳೆದುಕೊಂಡಿಲ್ಲ. ರೈತ ಚಳವಳಿ ನಮ್ಮ ದೇಶದಲ್ಲಿ ಚೀನಾ ಮಹಾನಡಿಗೆಗಿಂತಲೂ ದೀರ್ಘವಾಗಿ ನಡೆದದ್ದು ಐತಿಹಾಸಿಕ. ರೈತ ಚಳವಳಿಗೆ ಮಣಿದ ಮೋದಿ, ಮೂರೂ ಮಸೂದೆಗಳನ್ನು ವಾಪಸ್ ತೆಗೆದುಕೊಂಡರು.
ರೈತ ಚಳವಳಿಯನ್ನು ದಿಕ್ಕು ತಪ್ಪಿಸುವ ಆ ಸಂದರ್ಭದ ಪ್ರಯತ್ನಗಳು ಮತ್ತು ನರೇಂದ್ರ ಮೋದಿ ಸರಕಾರದ ನಿಲುವುಗಳ ಬಗ್ಗೆ ತಮಗೆ ಏನೆನ್ನಿಸುತ್ತದೆ?
ಬಿ.ಆರ್. ಪಾಟೀಲ್: ನರೇಂದ್ರ ಮೋದಿ ಸರಕಾರದ ನಿಲುವಿನಲ್ಲಿ ಏನೂ ಬದಲಾವಣೆ ಆಗಿಲ್ಲ, ಆಗುವುದೂ ಇಲ್ಲ. ಆದರೆ ಅದು ಚಳವಳಿಗೆ ಮಣಿದಿದೆ. ಈಗ ಅಂಥದೇ ಚಳವಳಿಯಾಗಿ ವಿರೋಧಪಕ್ಷಗಳು ‘ಇಂಡಿಯಾ’ ಮೈತ್ರಿಕೂಟವಾಗಿ ಹೊರಟಿವೆ. ಈ ಒಗ್ಗಟ್ಟು ಬಹಳ ಅಗತ್ಯವಿತ್ತು. ದೇಶದ ರೈತರು, ಕಾರ್ಮಿಕರು, ಕೂಲಿ ಮಾಡುವವರು, ಬಡವರ ಆಶಾಕಿರಣವಾಗಿ ಹೊಸರಾಜಕೀಯ ವ್ಯವಸ್ಥೆಯನ್ನು ನೋಡುತ್ತಿದ್ದೇವೆ.
ಆದರೆ ಮೋದಿಯೇ ಭವಿಷ್ಯ ಎನ್ನುತ್ತಿದ್ದಾರಲ್ಲವೆ?
ಬಿ.ಆರ್. ಪಾಟೀಲ್: ಮೋದಿ ಮತ್ತೊಮ್ಮೆ ಬಂದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ಬಡವರಿಗೆ, ರೈತರಿಗೆ ನ್ಯಾಯ ಸಿಗುವುದಿಲ್ಲ. ಬಹಳ ಕೆಟ್ಟ ಪರಿಸ್ಥಿತಿ ಉಂಟಾಗುತ್ತದೆ. ಒಂದು ಹಂತಕ್ಕೆ ಈ ಒಗ್ಗಟ್ಟು ಬಹಳ ಅವಶ್ಯವಿದೆ. ಆದರೆ ಈ ಒಗ್ಗಟ್ಟಿನ ಪ್ರದರ್ಶನದಲ್ಲಿ ನಮ್ಮ ರೈತರು, ಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ವಿದ್ಯಾರ್ಥಿಗಳ ಬಗ್ಗೆ ಸ್ಪಷ್ಟ ನಿಲುವು ಮುನ್ನೆಲೆಗೆ ಬರಬೇಕು. ನಾವು ದೊಡ್ಡ ಹೋರಾಟ ಮಾಡುತ್ತಿರುವುದು ಸ್ವಾಮಿನಾಥನ್ ಆಯೋಗದ ವರದಿಯನ್ನು ಯಥಾವತ್ ಒಪ್ಪಿಕೊಳ್ಳಬೇಕು ಎಂಬುದರ ಬಗ್ಗೆ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ನಿಲುವು ಪ್ರಕಟವಾಗಬೇಕು. ಅಧಿಕಾರಕ್ಕೆ ಬಂದರೆ ಅದನ್ನು ತರುವ ಭರವಸೆಯನ್ನು ರೈತಸಮುದಾಯಕ್ಕೆ ಕೊಡಬೇಕು. ಬಡವರ ಸಮಸ್ಯೆಗಳು ಬಗೆಹರಿಯುವಂಥ ಸನ್ನಿವೇಶವನ್ನು ನಿರ್ಮಾಣ ಮಾಡಬೇಕು. ಮಾಡಲು ಸಾಧ್ಯವಿದೆ. ಚಳವಳಿ ಮಾಡುವ ಎಲ್ಲರ ಬಳಿಯೂ ನನ್ನ ವಿನಂತಿ ಏನೆಂದರೆ, ನಮ್ಮ ನಮ್ಮ ಅಜೆಂಡಾಗಳನ್ನು ಮುಂದಿಡೋಣ. ಅದನ್ನು ಒಪ್ಪಲೇಬೇಕಾದ ಸ್ಥಿತಿ ಅವರಿಗೂ ಇದೆ, ಜನರಿಗೂ ಒಳ್ಳೆಯದಾಗುತ್ತದೆ. ಅಧಿಕಾರಕ್ಕಾಗಿ ಒಗ್ಗಟ್ಟಾಗಿದ್ದಾರೆ ಎಂಬ ಭಾವನೆ ಬೇಡ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಇಟ್ಟುಕೊಳ್ಳಬೇಕು.
ನಿಮ್ಮ ನಾಲ್ಕು ದಶಕಗಳ ರಾಜಕೀಯವನ್ನು ನೋಡಿಕೊಂಡರೆ, ಇಂದು ಹಿರಿತನ ಮತ್ತು ಅನುಭವಕ್ಕೆ ಅವಕಾಶ ಇದೆ ಎನ್ನಿಸುತ್ತದೆಯೇ?
ಬಿ.ಆರ್. ಪಾಟೀಲ್: ಮಂತ್ರಿಯಾಗಿಲ್ಲ ಎಂದು ಖಂಡಿತ ನನಗೆ ಬೇಸರವಿಲ್ಲ. ನಾನು ಚಳವಳಿಯಿಂದ ಬಂದವನು. ಈಗಲೂ ನನಗೆ ಚಳವಳಿಯಲ್ಲಿ ಆಸಕ್ತಿಯಿದೆ. ನಾವಿಬ್ಬರೂ ಒಟ್ಟಿಗೇ ರಾಜಕಾರಣಕ್ಕೆ ಬಂದಿರುವವರು ಎಂಬುದನ್ನು ಎಷ್ಟೋ ಸಲ ಸಿದ್ದರಾಮಯ್ಯನವರೇ ನೆನಪಿಸಿಕೊಂಡಿದ್ದಿದೆ. ೧೯೭೮ರಲ್ಲಿ ಇಬ್ಬರೂ ತಾಲೂಕು ಮಂಡಳಿ ಸದಸ್ಯರಾದೆವು. ೧೯೮೩ರಲ್ಲಿ ಅಸೆಂಬ್ಲಿಗೆ ಬಂದೆವು. ತಾನು ಮಂತ್ರಿಯಾದೆ, ಮುಖ್ಯಮಂತ್ರಿಯಾದೆ. ಬಿ.ಆರ್. ಪಾಟೀಲ್ ಆಗಲಿಲ್ಲ ಎಂಬ ಕೊರಗು ಅವರಿಗೂ ಇದೆ. ಅನಿವಾರ್ಯ ಕಾರಣಕ್ಕಾಗಿ ರಾಜಕೀಯ ಪರಿಸ್ಥಿತಿಯಲ್ಲಿ ಮಂತ್ರಿಯಾಗುವ ಅವಕಾಶ ತಪ್ಪಿರಬೇಕು. ಆದರೆ ನನಗೆ ಅದಕ್ಕಾಗಿ ಎಳ್ಳಷ್ಟೂ ಅಸಮಾಧಾನ ಇಲ್ಲ.
ಕಾವೇರಿ ವಿಚಾರದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ರಾಜ್ಯ ಸರಕಾರ ನೀರು ಬಿಡಬಾರದು, ಬಂಗಾರಪ್ಪನವರು ತೆಗೆದುಕೊಂಡಿದ್ದಂಥ ನಿಲುವನ್ನು ಸಿದ್ದರಾಮಯ್ಯನವರು ತೆಗೆದುಕೊಳ್ಳಬೇಕು ಎಂಬ ಒತ್ತಾಯಗಳಿವೆ. ಅಂಥ ಸಾಧ್ಯತೆಯಿದೆಯೇ ಒಕ್ಕೂಟ ವ್ಯವಸ್ಥೆಯಲ್ಲಿ?
ಬಿ.ಆರ್. ಪಾಟೀಲ್: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ವಾದ ಇರುವುದು ಸತ್ಯ. ಇದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುವುದಕ್ಕಿಂತ ರೈತ ರೈತರ ನಡುವೆಯೇ ಚರ್ಚೆ, ಸಂವಾದಗಳಾಗಿ ಒಂದು ಒಪ್ಪಂದಕ್ಕೆ ಬರಬೇಕಿದೆ. ಯಾಕೆಂದರೆ, ಎರಡೂ ರಾಜ್ಯಗಳ ಜನ ಒಂದೇ ಥರದ ಕಷ್ಟದಲ್ಲಿದ್ದಾರೆ. ಈ ಥರದ ಅನೇಕ ಪ್ರಯತ್ನಗಳು ಆಗಿವೆ. ಜನರ ಮಧ್ಯೆ, ರೈತ ರೈತರ ನಡುವೆ ಚರ್ಚೆಯಾದರೆ ಒಳ್ಳೆಯದು. ಆಗ ಇಷ್ಟೊಂದು ರಾಜಕೀಯ ಬಿಕ್ಕಟ್ಟು ಬರಲಾರದು. ತನ್ನಷ್ಟಕ್ಕೆ ತಾನೇ ಸಮಸ್ಯೆ ಬಗೆಹರಿಯಲು ಸಾಧ್ಯವಾಗುತ್ತದೆ.
ಜೆಡಿಎಸ್ ಅಧಿಕೃತವಾಗಿ ಎನ್‌ಡಿಎ ಭಾಗವಾಗಿದೆ. ಈ ಮೈತ್ರಿ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಬಿ.ಆರ್. ಪಾಟೀಲ್: ಕುಮಾರಸ್ವಾಮಿಯವರಿಗೆ ರಾಜಕೀಯವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಆಗುತ್ತಿಲ್ಲ. ದಿನದಿನಕ್ಕೆ ಅವರ ಪಕ್ಷ ಕುಗ್ಗುತ್ತಿದೆ. ಅಲ್ಲಿರುವ ನಾಯಕರು ಭರವಸೆ ಕಳೆದುಕೊಳ್ಳುತ್ತಿದ್ಧಾರೆ. ಕುಮಾರಸ್ವಾಮಿಯವರಿಗೆ ಯಾವಾಗಲೂ ಬಿಜೆಪಿ ಕಡೆಗೆ ಹೋಗುವ ಮನಸ್ಸಿತ್ತು. ದೇವೇಗೌಡರು ತಡೆಹಿಡಿದಿದ್ದರು. ಈಗ ದೇವೇಗೌಡರದೂ ಒಪ್ಪಿಗೆ ಇದೆ.
ನೀವು ಜನತಾ ಪರಿವಾರದಲ್ಲಿ ದೇವೇಗೌಡರ ಜೊತೆಗೇ ರಾಜಕಾರಣ ಮಾಡಿದವರು. ಅಲ್ಲಿ ಶಾಸಕರೂ ಆಗಿದ್ದಿರಿ. ಅದಾದ ಮೇಲೆ ನೀವು ಕಾಂಗ್ರೆಸ್ ಕಡೆ ಬಂದಿರುವುದು. ದೇವೇಗೌಡರು ಇಂಥದೊಂದು ನಿಲುವು ತೆಗೆದುಕೊಳ್ಳುತ್ತಾರೆ ಎಂದು ಯಾವತ್ತಾದರೂ ಅನ್ನಿಸಿತ್ತೆ?
ಬಿ.ಆರ್. ಪಾಟೀಲ್: ದೇವೇಗೌಡರ ಒಪ್ಪಿಗೆಯಿಲ್ಲದೆ ಕುಮಾರಸ್ವಾಮಿ ಏನೂ ಮಾಡಲು ಸಾಧ್ಯವಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಹಿಂದೆ ಬಿಜೆಪಿ-ಜೆಡಿಎಸ್ ಸರಕಾರ ಮಾಡಿದಾಗಲೂ ದೇವೇಗೌಡರ ಒಪ್ಪಿಗೆಯಿಲ್ಲದೆ ಆಗಿರಲು ಸಾಧ್ಯವಿಲ್ಲ.
ಹಾಗಾದರೆ ಆ ಸಮಯದಲ್ಲಿ ಅವರು ಕೊಟ್ಟ ಹೇಳಿಕೆ? ನನ್ನ ಮಗನ ನಿರ್ಧಾರಕ್ಕೆ ನನ್ನ ಸಹಮತ ಇರಲಿಲ್ಲ, ನನಗೆ ಬಹಳ ಬೇಸರವಾಗಿದೆ ಎಂದಿದ್ದರು?
ಬಿ.ಆರ್. ಪಾಟೀಲ್: ಜನತಾ ಪರಿವಾರದಿಂದ ಬಂದ ಸಾವಿರಾರು ಕಾರ್ಯಕರ್ತರ ಬಗ್ಗೆ ದೇವೇಗೌಡರಿಗೆ ಕಾಳಜಿಯಿಲ್ಲ. ಮಕ್ಕಳ ಬಗ್ಗೆ ಮಾತ್ರ ಕಾಳಜಿ. ದೇವೇಗೌಡರ ಕುಟುಂಬ ರಾಜಕಾರಣ ಬಹಳ ಸ್ಪಷ್ಟವಾಗಿದೆ. ದೇವೇಗೌಡರಿಂದ ಹೆಚ್ಚೇನೂ ನಿರೀಕ್ಷೆ ಮಾಡಬಾರದು.
ಲೋಕಸಭೆ ಚುನಾವಣೆ ಬರುತ್ತಿದೆ. ಅವರಿಬ್ಬರೂ ಒಂದಾಗಿರು ವುದರಿಂದ ನೇರ ಹಣಾಹಣಿ ಇರುತ್ತದೆ. ಅವರು ಗೆಲ್ಲುವುದು ಸಾಧ್ಯವಿಲ್ಲ ಎಂದು ಯಾವ ಕಾರಣಕ್ಕಾಗಿ ನಿಮಗೆ ನಂಬಿಕೆ?
ಬಿ.ಆರ್. ಪಾಟೀಲ್: ನಮ್ಮ ಗ್ಯಾರಂಟಿಗಳನ್ನು ಜನರು ಮನಃಪೂರ್ವಕ ವಾಗಿ ಒಪ್ಪಿದ್ದಾರೆ ಮತ್ತು ಯಶಸ್ವಿಯಾಗಿವೆ. ಗೆದ್ದುಬಂದವರೆಲ್ಲ ಕೋಮುವಾದಿ ಶಕ್ತಿಗಳ ವಿರುದ್ಧವೇ ಗೆದ್ದಿದ್ದಾರೆ. ಹಾಗಾಗಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದೆ ಎಂಬ ಭರವಸೆ ನನಗಿದೆ.
ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಗ್ಯಾರಂಟಿಗಳು ಫಲ ಕೊಟ್ಟಿರಬಹುದು. ಆದರೆ ಲೋಕಸಭೆ ಚುನಾವಣೆ ಇಡೀ ದೇಶಕ್ಕೆ ಆಗಿರುವುದರಿಂದ ನಿಮ್ಮ ಅಜೆಂಡಾಗಳು ಏನೆಂಬುದು ಸ್ಪಷ್ಟವಿಲ್ಲ.
ಬಿ.ಆರ್. ಪಾಟೀಲ್: ಮೋದಿಯವರು ಎಂಟೊಂಭತ್ತು ವರ್ಷಗಳಿಂದ ಜನರಿಗೆ ಸುಳ್ಳು ಹೇಳಿ ಅಧಿಕಾರದಲ್ಲಿದ್ದಾರೆ. ಅವರ ಬಣ್ಣ ಬಯಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೋದಿಯವರು ಎಷ್ಟೆಲ್ಲ ಓಡಾಡಿದರೂ ಪರಿಣಾಮ ಆಗಲಿಲ್ಲ. ಇವರ ಬೊಗಳೆ ಮಾತಿನ ಬಗ್ಗೆ ಜನರಿಗೆ ಗೊತ್ತಾಗಿದೆ. ಇವರ ಮಾತನ್ನು ನಂಬಲು ಸಾಧ್ಯವಿಲ್ಲ. ದಿಲ್ಲಿಯಲ್ಲಿ ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕಾರ್ಯಕ್ರಮಕ್ಕೆ ಹೋಗಿದ್ದೆ. ಮೋದಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ರಾಮಮಂದಿರದ ಮೇಲೆ ತಾವೇ ಬಾಂಬ್ ಹಾಕಿ, ಮುಸ್ಲಿಮರ ಮೇಲೆ ಆರೋಪ ಹೊರಿಸುವ ಸಾಧ್ಯತೆಗಳಿವೆ. ಇದಕ್ಕೂ ಹೇಸುವುದಿಲ್ಲ ಎಂದು ಅವರು ಹೇಳಿದರು. ಪುಲ್ವಾಮಾ ಥರದ ಮತ್ತೇನನ್ನೋ ಮಾಡಿ, ಜನರನ್ನು ಭಯಭೀತರನ್ನಾಗಿಸಿ, ಹಿಂದೂಗಳನ್ನು ಒಗ್ಗಟ್ಟಾಗಿಸಿ, ಕೋಮುಭಾವನೆ ತಂದು, ಸಮಾಜವನ್ನು ಒಡೆದು, ಅಧಿಕಾರಕ್ಕೆ ಬರಲು ಇವರು ಹೇಸುವುದಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳುತ್ತಾರೆ.
ಅಂತಿಮವಾಗಿ ಅಧಿಕಾರವೇ ಮುಖ್ಯವಾಗಿರುವು ದರಿಂದ ಅಂಥದೇ ಏನಾದರೂ ನಡೆದು ಅಧಿಕಾರ ಹಿಡಿದರೆ?
ಬಿ.ಆರ್. ಪಾಟೀಲ್: ನನಗನ್ನಿಸುವುದು, ಕೋಮು ಗಲಭೆ ನಮ್ಮ ದೇಶದಲ್ಲಿ ಇನ್ನು ಆಗಲಾರದು. ನಾವೆಲ್ಲರೂ ಇಂದು ಜಾತ್ಯತೀತವಾದವನ್ನು ಒಪ್ಪಿದ್ದೇವೆ. ರಾಜಕಾರಣಿಗಳು ಸಮಾಜವನ್ನು ಎಷ್ಟೇ ಒಡೆಯುವ ಪ್ರಯತ್ನ ಮಾಡಿದರೂ, ಸಮಾಜ ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ ಒಡೆಯಲಾರದು. ಸೌಹಾರ್ದ ಇದೆ. ಪ್ರೀತಿ ವಿಶ್ವಾಸ ಇದೆ. ಎಷ್ಟೇ ಕೋಮುಭಾವನೆ ಕೆರಳಿಸಿದರೂ ಜನ ಅವರ ಬಲೆಗೆ ಬೀಳುವುದಿಲ್ಲ.
2019ರ ಚುನಾವಣೆಯಲ್ಲಿ ೩೦೩ ಸ್ಥಾನವನ್ನು ಏಕಾಂಗಿಯಾಗಿ ಬಿಜೆಪಿ ಗೆಲ್ಲುತ್ತದೆ ಎಂದಾದರೆ, ಅದಕ್ಕೆ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬುದೇ ಕಾರಣ. ೫ ವರ್ಷದಲ್ಲಿ ಸಂಪೂರ್ಣ ಬದಲಾಗಿದೆಯೇ?
ಬಿ.ಆರ್. ಪಾಟೀಲ್: ಬದಲಾವಣೆ ಆಗಿದೆ. ಪುಲ್ವಾಮಾ ಘಟನೆಯಿಂದ ಎರಡನೇ ಸಲ ಗೆದ್ದರು. ಈಗ ಅವರಿಗೆ ಮಾಡಲು ಏನೂ ಉಳಿದಿಲ್ಲ. ಜನರಿಗೂ ಇವರ ನಾಟಕ ಗೊತ್ತಾಗಿದೆ. ಜನರು ಈ ಸಲ ಮೋದಿಗೆ ಮೋಸ ಹೋಗುವುದಿಲ್ಲ.
ಕರ್ನಾಟಕದಲ್ಲಿ ಹಿಂದೂ ಭಾಷಣಕಾರರು, ಕಾರ್ಯಕರ್ತರ ಬಂಧನವಾಗುತ್ತಿದೆ. ಧರ್ಮದ ವಿಚಾರವನ್ನಿಟ್ಟುಕೊಂಡು, ಒಂದಿಡೀ ಸಮುದಾಯವನ್ನು ಕೋಮು ಪ್ರಚೋದನೆಗೆ ಒಳಪಡಿಸಿ, ಅದರಿಂದ ಇಂಥದ್ದೆಲ್ಲ ಲಾಭ ಪಡೆಯುವವರು ಮತ್ತು ಅದರ ಹಿಂದಿರುವ ಪಕ್ಷ ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಬಿ.ಆರ್. ಪಾಟೀಲ್: ಧರ್ಮ ಎಲ್ಲರಿಗೂ ಬೇಕು. ಆದರೆ ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡುವುದಕ್ಕೆ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದಕ್ಕೆ ಜನರ ಒಪ್ಪಿಗೆಯಿಲ್ಲ. ಬಿಜೆಪಿಯವರೇ ದೇಶಭಕ್ತರು ಎಂದು ಹೊಗಳಲಾಗುತ್ತಿತ್ತು. ಒಂದು ದಿನವಾದರೂ ಆರೆಸ್ಸೆಸ್‌ನವರು ಈ ದೇಶದ ನಿರುದ್ಯೋಗ, ಬಡತನ, ಮಹಿಳಾ ಸಮಾಜ, ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆಯೆ? ಅಷ್ಟು ದೊಡ್ಡ ಸಂಘಟನೆಯಾಗಿರುವ ಆರೆಸ್ಸೆಸ್ ಸಮಾಜ ಪರಿವರ್ತನೆಗೆ ಎಳ್ಳಷ್ಟಾದರೂ ಕೊಡುಗೆ ಕೊಟ್ಟಿದೆಯೇ? ಈ ಸಮಾಜ ಹೀಗೆಯೇ ಇರಬೇಕು, ಒಡೆದೇ ಇರಬೇಕು, ಈ ಸಮಾಜದಲ್ಲಿ ದ್ವೇಷ, ಅಸೂಯೆ, ಬಡತನ, ನಿರುದ್ಯೋಗ ಇರಬೇಕು. ಆಗಲೇ ಇವರಿಗೆ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಂಡು ರಾಜಕೀಯ ಮಾಡಲು ಸಾಧ್ಯ.
ಬೇರೆ ಪಕ್ಷದೊಳಗೆ, ನಿಮ್ಮ ಪಕ್ಷದೊಳಗೆ ಅಂಥ ಮನಃಸ್ಥಿತಿಯವರು ಇಲ್ಲವೇ?
ಬಿ.ಆರ್. ಪಾಟೀಲ್: ಇಲ್ಲ. ಕಾಂಗ್ರೆಸ್‌ನಲ್ಲಿ, ನಮ್ಮ ನಾಯಕತ್ವದಲ್ಲಿ ಖಂಡಿತ ಇಲ್ಲ. ರಾಹುಲ್ ಗಾಂಧಿಯವರು ಆಶಾಕಿರಣವಾಗಿ ಎದ್ದು ಬರುತ್ತಿದ್ದಾರೆ. ರಾಹುಲ್ ಗಾಂಧಿಯವರ ಬಗ್ಗೆ ಜನ ಹಗುರವಾಗಿಯೇ ಮಾತನಾಡುತ್ತಿದ್ದರು. ಚಾರಿತ್ರಿಕ ‘ಭಾರತ್ ಜೋಡೊ’ ಯಾತ್ರೆ ಬಳಿಕ ಅವರ ವ್ಯಕ್ತಿತ್ವದ ಗಟ್ಟಿತನ ಕಂಡಿದೆ. ಸಮರ್ಥವಾಗಿ ಪಕ್ಷವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಮತ್ತು ನಾನು ವಿರೋಧಿ ನೆಲೆಯಲ್ಲಿ ಬೆಳೆದಂಥವರು. ಆದರೆ ರಾಜಕೀಯ ಪ್ರಬುದ್ಧತೆ, ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಶಕ್ತಿ, ಹಿರಿಮೆ ಅವರಿಗಿದೆ.
ಯಡಿಯೂರಪ್ಪನವರಿಗೂ ನೀವು ಆಪ್ತರು. ಅವರು ಕೆಜೆಪಿ ಕಟ್ಟಿದಾಗ ನೀವು ಅಲ್ಲಿ ಶಾಸಕರೂ ಆಗಿದ್ದಿರಿ. ಈಗ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಮಾನ್ಯತೆ ಸಿಗುತ್ತಿಲ್ಲ. ವೀರಶೈವ ಲಿಂಗಾಯತರಿಗೂ ಮನ್ನಣೆ ಕೊಡುತ್ತಿಲ್ಲ ಎಂಬ ಅಭಿಪ್ರಾಯ ಇದೆ. ಇದಕ್ಕೆ ಏನೆನ್ನುತ್ತೀರಿ?
ಬಿ.ಆರ್. ಪಾಟೀಲ್: ನಾನು ಇದನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಅವರು ಎಂದೂ ಲಿಂಗಾಯತರ ತತ್ವ ಸಿದ್ಧಾಂತವನ್ನೂ ಒಪ್ಪಿಲ್ಲ, ಲಿಂಗಾಯತರ ಮೇಲೆ ನಂಬಿಕೆಯನ್ನೂ ಇಟ್ಟಿಲ್ಲ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಅವರು ಲಿಂಗಾಯತರನ್ನು ಶೂದ್ರರು ಎಂದು ನೋಡುತ್ತಾರೆ. ದುರ್ದೈವವೆಂದರೆ ಲಿಂಗಾಯತರಿಗೆ ಇದು ಅರ್ಥವಾಗಿಲ್ಲ. ದಲಿತರ ಸ್ಥಿತಿಯಂತೂ ಲೆಕ್ಕಕ್ಕೇ ಇಲ್ಲ. ಯಡಿಯೂರಪ್ಪನವರನ್ನು ಎಷ್ಟು ಬಳಸಿಕೊಳ್ಳಬೇಕಿತ್ತೋ ಅಷ್ಟು ಬಳಸಿಕೊಂಡರು. ನಾನು ಯಾಕೆ ಯಡಿಯೂರಪ್ಪನವರ ಪಕ್ಷಕ್ಕೆ ಹೋದದ್ದೆಂದರೆ, ತಾವು ಜೈಲಿಗೆ ಹೋಗಲು ಇವರೇ ಕಾರಣ ಎಂಬುದನ್ನು ಯಡಿಯೂರಪ್ಪ ನನ್ನ ಬಳಿ ಹೇಳಿಕೊಂಡಿದ್ದರು. ಅವರ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ, ಶೇ. ೧೧ ಮತಗಳು ಬಂದಿದ್ದವು. ಹೆಗಡೆಯವರು, ಬಂಗಾರಪ್ಪನವರು ಕಟ್ಟಿದ ಪಕ್ಷಗಳಿಗೂ ಇಷ್ಟು ಪ್ರಮಾಣದಲ್ಲಿ ಮತಗಳು ಬಂದಿರಲಿಲ್ಲ. ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಂಡಿದ್ದರೆ ಬೇರೆಯೇ ಆಗುತ್ತಿತ್ತು. ಆದರೆ ಅವರು ಕಾರಣಾಂತರಗಳಿಂದ ವಾಪಸ್ ಹೋದರು. ಯಡಿಯೂರಪ್ಪನವರಿಗೂ ಅಲ್ಲಿ ಸಮಾಧಾನವಿಲ್ಲ. ಅವರಿಗೂ ಗೊತ್ತಾಗಿದೆ. ಆದರೆ ಬೇರೆ ದಾರಿಯಿಲ್ಲ. ಅಲ್ಲೇ ಇರಬೇಕಾಗಿದೆ.