ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಶಿಕ್ಷಕಿ ರೂಪಾ

Update: 2023-10-25 05:41 GMT

ದಾವಣಗೆರೆ: ಮಹಿಳೆ ಇಂದು ಪುರುಷನಷ್ಟೇ ಸರಿಸಮಾನಳಾಗಿ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸು ತ್ತಿದ್ದಾಳೆ.ಇದಕ್ಕೊಂದು ಉತ್ತಮ ಉದಾಹರಣೆ ರೂಪಾ ಬಿ.ಬಸಪ್ಪನವರು.

ಜಗಳೂರು ತಾಲೂಕಿನ ಕಲ್ಲೇದೇವರಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ರೂಪಾ ಬಿ.ಬಸಪ್ಪನವರ ಸಾಧನೆ ಇತರ ಶಿಕ್ಷಕಿಯರಿಗೆ ಮಾದರಿಯಾಗಿದ್ದಾರೆ. ತಮ್ಮ ಬೋಧನಾ ವೃತ್ತಿಯ ಜೊತೆ ಕ್ರೀಡೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡ ಶಿಕ್ಷಕಿ ರೂಪಾ, ಜಿಲ್ಲಾ, ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ನಡೆಯುವ ನೌಕರರ ಕಬಡ್ಡಿ ಮತ್ತು ಕುಸ್ತಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಕರಿಂದ ಪ್ರೇರಣೆ ಪಡೆದಿದ್ದ ಇವರು ಕಬಡ್ಡಿಯನ್ನು ರಾಷ್ಟ್ರಮಟ್ಟದಲ್ಲಿ ಆಡಬೇಕೆಂಬ ಕನಸು ಇಂದು ನನಸಾಗಿಸಿದೆ.

ಪರಿಶ್ರಮಕ್ಕೆ ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸರ್ವೋತ್ತಮ ಆಟಗಾರ್ತಿ, ಅನುಪಮಾ ಸೇವಾ ಶಿಕ್ಷಕಿ ಸೇರಿದಂತೆ ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. 2021-22ರಲ್ಲಿ ಹರಿಯಾಣ ರಾಜ್ಯದ ಗುರ್ಗಾಂವ್‌ನಲ್ಲಿ ನಡೆದ ರಾಷ್ಟ್ರಮಟ್ಟದ ನೌಕರರ ಕಬಡ್ಡಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರೆ, 2022-23ರಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

ಮಾತ್ರವಲ್ಲ, ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ನೌಕರರ ಕಬಡ್ಡಿ ಆಟದಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿ ಕೇರಳ ರಾಜ್ಯದ ವಿರುದ್ಧ ಹಾಗೂ ತೆಲಂಗಾಣದ ವಿರುದ್ಧ ಜಯಗಳಿಸಿದ್ದಾರೆ.

2022-23ರಲ್ಲಿ ಚಂಡಿಗಡದಲ್ಲಿ ನಡೆದ ನೌಕರರ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ 4ನೇ ಸ್ಥಾನವನ್ನು ಗಳಿಸಿ ಉತ್ತಮ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ತನ್ನ ಶಾಲೆಯ ಮಕ್ಕಳೂ ರಾಷ್ಟ್ರಮಟ್ಟದಲ್ಲಿ ಆಟ ಆಡಬೇಕೆಂಬ ಕನಸು ಹೊತ್ತಿರುವ ಇವರು ಮಕ್ಕಳಿಗೆ ದಿನಂಪ್ರತಿ ಕಬಡ್ಡಿ ಆಟದ ತರಬೇತಿ ನೀಡುತ್ತಿದ್ದಾರೆ. ಒಟ್ಟಾರೆ ಶಾಲೆಯ ಮಕ್ಕಳಿಗೆ ಜ್ಞಾನ ತುಂಬುವ ಜೊತೆಗೆ ಕ್ರೀಡೆಯನ್ನು ಕಲಿಸಿ ತಾನೂ ಸಾಧನೆ ಮಾಡಿ ಮಕ್ಕಳ ಸಾಧನೆಯನ್ನು ಪಟ್ಟಿಯಲ್ಲಿ ನೋಡಬೇಕೆಂಬ ಅವರ ತುಡಿತ ಇತರ ಶಿಕ್ಷಕರುಗಳಲ್ಲೂ ಬರಬೇಕಾಗಿದೆ.

ಪ್ರತಿಯೊಬ್ಬ ನೌಕರರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.ರೂಪಾ ಬಿ.ಬಸಪ್ಪನವರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ದೊರಕಲಿ.

-ಹಾಲಮೂರ್ತಿ

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಗಳೂರು.

ನನ್ನ ಪತ್ನಿ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ನನಗೆ ಹೆಮ್ಮೆ ಇದೆ,ಅವರ ಕ್ರೀಡಾಸಕ್ತಿಗೆ ನನ್ನ ಬೆಂಬಲ ನಿರಂತರವಾಗಿರುತ್ತದೆ.

-ಶಿವಕುಮಾರ್, ಅಗಸನಕಟ್ಟೆ

ನನ್ನಿಬ್ಬರ ಮಕ್ಕಳ ಬೆಂಬಲ, ಪತಿಯ ಸಹಕಾರ,ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಿಂದ ಮತ್ತು ನನಗೆ ತರಬೇತಿ ನೀಡಿದ ನಾಗರಾಜ್ ಚಂದ್ರನಹಳ್ಳಿ ಸಹಕಾರದಿಂದ ನಾನು ಕ್ರೀಡೆಯಲ್ಲಿ ಭಾಗವಹಿಸಲು ಅನುಕೂಲವಾಗಿದೆ.

- ರೂಪಾ ಬಸಪ್ಪನವರು, ಕ್ರೀಡಾ ಸಾಧಕಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಪ್ರಕಾಶ್ ಎಚ್.ಎನ್.

contributor

Similar News