ಪ್ರಭುತ್ವದ ದಮನ ನೀತಿಯ ನಡುವೆಯೂ ದಿಟ್ಟತನ

Update: 2023-07-01 12:48 GMT

✍️ ಎಚ್.ಎಚ್.ಕೆ.

ಔಟ್ಲುಕ್ ಪತ್ರಿಕೆಯ ಹಿರಿಯ ಸಂಪಾದಕಿ ಶಾಹಿನಾ ಕೆ.ಕೆ. 2023ರ ಸಿಪಿಜೆ ಇಂಟರ್ನ್ಯಾಷನಲ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಸಲದ ನಾಲ್ವರು ವಿಜೇತರಲ್ಲಿ ಅವರು ಒಬ್ಬರು. ಯುಎಪಿಎ ಅಡಿಯಲ್ಲಿ ಆರೋಪಕ್ಕೆ ಒಳಗಾಗಿರುವ ದೇಶದ ಮೊದಲ ಕೆಲವು ಪತ್ರಕರ್ತರಲ್ಲಿ ಶಾಹಿನಾ ಕೂಡ ಸೇರಿದ್ದಾರೆ. ಲಿಂಗ ತಾರತಮ್ಯ, ಮಾನವ ಹಕ್ಕುಗಳು, ದಮನಿತ ಸಮುದಾಯಗಳು ಮತ್ತು ಅವು ಎದುರಿಸುತ್ತಿರುವ ಅನ್ಯಾಯಗಳಂಥ ವಿಚಾರಗಳ ಬಗ್ಗೆ ವಿಸ್ತೃತವಾಗಿ ಬರೆದವರು ಶಾಹಿನಾ.

ಔಟ್ಲುಕ್ ನಿಯತಕಾಲಿಕೆಯ ಶಾಹಿನಾ ಕೆ.ಕೆ. 2023ರ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್(ಸಿಪಿಜೆ) ಇಂಟರ್ನ್ಯಾಷನಲ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ವರ್ಷ ಪ್ರಶಸ್ತಿ ಪಡೆದ ವಿವಿಧ ದೇಶಗಳ ನಾಲ್ವರಲ್ಲಿ ಶಾಹಿನಾ ಅವರೂ ಒಬ್ಬರು. ಸಿಪಿಜೆ ಹೇಳುವಂತೆ, ವಿಶ್ವದಾದ್ಯಂತದ ದಿಟ್ಟ ಪತ್ರಕರ್ತರನ್ನು ಗೌರವಿಸಲು ನೀಡಲಾಗುವ ಪ್ರಶಸ್ತಿ ಇದು. ನವೆಂಬರ್ 16, 2023ರಂದು ನ್ಯೂಯಾರ್ಕ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಶಾಹಿನಾ ಅವರ ಬಗ್ಗೆ ಸಿಪಿಜೆ ಹೇಳಿರುವುದು ಹೀಗೆ: ‘‘ಶಾಹಿನಾ ಹಿರಿಯ ಭಾರತೀಯ ಪತ್ರಕರ್ತೆ. ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿ ಕೆಲಸ ಮಾಡಿರುವವರು. ಲಿಂಗ ತಾರತಮ್ಯ, ಮಾನವ ಹಕ್ಕುಗಳು ಮತ್ತು ದಮನಿತ ಸಮುದಾಯಗಳಂತಹ ವಿಚಾರಗಳ ಮೇಲೆ ಅಲ್ಲಿನ ಸಮಸ್ಯೆಯ ಮಗ್ಗುಲನ್ನೂ ಒಳಗೊಂಡು ಬೆಳಕು ಚೆಲ್ಲಿದ್ದಾರೆ. ಪ್ರಸಕ್ತ ಔಟ್ಲುಕ್ ಮ್ಯಾಗಝಿನ್ನ ಹಿರಿಯ ಸಂಪಾದಕಿ. ಒಂದು ದಶಕದಿಂದೀಚೆಗೆ ದೇಶದಲ್ಲಿ ಪತ್ರಕರ್ತರ ವಿರುದ್ಧ ಅಸ್ತ್ರದಂತೆ ವ್ಯಾಪಕವಾಗಿ ಬಳಸಲಾಗುತ್ತಿರುವ ಉಗ್ರ ನಿಗ್ರಹ ಕಾನೂನಿನಡಿಯಲ್ಲಿ ಆರೋಪ ಎದುರಿಸಿದ ದೇಶದ ಮೊದಲ ಪತ್ರಕರ್ತರಲ್ಲಿ ಶಾಹಿನಾ ಅವರೂ ಒಬ್ಬರು.

2008ರ ಬೆಂಗಳೂರು ಸರಣಿ ಸ್ಫೋಟದ ಪ್ರಕರಣದಲ್ಲಿ ಅಬ್ದುಲ್ ನಾಸೀರ್ ಮದನಿ ವಿರುದ್ಧ ಕರ್ನಾಟಕ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿನ ಸಾಕ್ಷಿಗಳ ಬಗ್ಗೆ ಪ್ರಶ್ನೆಯೆತ್ತಿ ಶಾಹಿನಾ ಮಾಡಿದ್ದ ತನಿಖಾ ವರದಿಗೆ ಸಂಬಂಧಿಸಿ 2010ರಲ್ಲಿ ಅವರ ವಿರುದ್ಧ ಕರ್ನಾಟಕ ಸರಕಾರ ಪ್ರಕರಣ ದಾಖಲಿಸಿತು. ಸಾಕ್ಷಿಗಳನ್ನು ಬೆದರಿಸಿದ್ದಾರೆಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗಿದ್ದು, ವಿಚಾರಣೆಯಿನ್ನೂ ಬಾಕಿಯಿದೆ. ಇದರ ಹೊರತಾಗಿಯೂ ಶಾಹಿನಾ ಅವರ ದಿಟ್ಟ ವರದಿಗಾರಿಕೆ ಮುಂದುವರಿದೇ ಇದೆ. ವಿಚಾರಣೆ ಬಾಕಿ ಇರುವ ಈ ಪ್ರಕರಣದಲ್ಲಿ ಅವರು ಜಾಮೀನಿನ ಮೇಲಿದ್ದಾರೆ. ಆರೋಪ ಸಾಬೀತಾದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಮುಸ್ಲಿಮ್ ಸಮುದಾಯದ ಶಾಹಿನಾ ಅವರಿಗೆ, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದುರ್ಬಲ ಜಾತಿ ಗುಂಪುಗಳ ಬಗ್ಗೆ ವರದಿ ಮಾಡುವುದನ್ನು ತಡೆಯಲು ಭಾರತದ ಬಲಪಂಥೀಯ ಗುಂಪುಗಳು ವ್ಯಾಪಕ ಕಿರುಕುಳ ನೀಡಿವೆ.’’

ಔಟ್ಲುಕ್ಗಾಗಿ ಶಾಹಿನಾ ಹಲವಾರು ವಿಚಾರಗಳ ಮೇಲೆ ಬರೆದಿದ್ದಾರೆ. ಅವರ "Gender Journey' ಎಂಬ ಲೇಖನ ಕಥೆಯು ಏಕರೂಪ ನಾಗರಿಕ ಸಂಹಿತೆ ಮತ್ತದರ ಸುದೀರ್ಘ ಇತಿಹಾಸವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ನೋಡುತ್ತದೆ. "Taking the Bull by Its Horns' ಎಂಬ ಅವರ ಬರಹ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವು ರಾಚನಿಕ ತಾರತಮ್ಯದ ಹೊರತಾಗಿಯೂ ಕ್ರೀಡಾ ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಹೇಗೆ ಸಾಧಿಸುತ್ತಿದೆ ಎಂಬುದನ್ನು ವಿವರಿಸುತ್ತದೆ.

ಪ್ರಶಸ್ತಿ ಬಂದಿರುವ ಬಗ್ಗೆ ಶಾಹಿನಾ ಮಾತು: ‘‘2008ರ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾದ ಅಬ್ದುಲ್ ನಾಸೀರ್ ಮದನಿ ವಿರುದ್ಧದ ನಕಲಿ ಚಾರ್ಜ್ಶೀಟ್ ಅನ್ನು ಬಹಿರಂಗಪಡಿಸಿದ ತನಿಖಾ ವರದಿ ನಾನು ತೆಹಲ್ಕಾ ವರದಿಗಾರ್ತಿಯಾಗಿದ್ದಾಗ 2010ರಲ್ಲಿ ಮಾಡಿದ್ದು. ಪ್ರಕರಣದ ಮೂವರು ಸಾಕ್ಷಿಗಳನ್ನು (ಕರ್ನಾಟಕದ ಇಬ್ಬರು ಮತ್ತು ಕೇರಳದ ಒಬ್ಬರು) ಮಾತನಾಡಿಸಿದ್ದೆ. ಅವರ ಸಾಕ್ಷಿ ಹೇಳಿಕೆಗಳು ಕಪೋಲಕಲ್ಪಿತ ಮತ್ತು ತಿರುಚಿದವಾಗಿದ್ದವು ಎಂಬುದು ಬಯಲಾಗಿತ್ತು. ನಾನು ಕೇರಳಕ್ಕೆ ಹಿಂದಿರುಗಿದಾಗ, ಅಬ್ದುಲ್ ನಾಸೀರ್ ಮದನಿಯ ಪರವಾಗಿ ನ್ಯಾಯಾಲಯದಲ್ಲಿ ಹೇಳಿಕೆಗಳನ್ನು ಬದಲಾಯಿಸಲು ಸಾಕ್ಷಿಗಳನ್ನು ಬೆದರಿಸಿರುವ ಆರೋಪದ ಮೇಲೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂಬುದು ತಿಳಿಯಿತು. ನಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ಅವರನ್ನು ಕೊಲ್ಲುವುದಾಗಿ ನಾನು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದೇನೆ ಎಂಬುದು ನನ್ನ ಮೇಲೆ ಪೊಲೀಸರು ಹೊರಿಸಿರುವ ಆರೋಪ. ಆರಂಭದಲ್ಲಿ, ನನ್ನ ಮೇಲೆ ಐಪಿಸಿ ಸೆಕ್ಷನ್ 506, 34 ಮತ್ತು 120ಬಿ ಅಡಿ ಕೇಸ್ ಹಾಕಲಾಗಿತ್ತು. ನನ್ನ ನಿರೀಕ್ಷಣಾ ಜಾಮೀನಿನ ಮೇಲಿನ ವಾದದ ಸಮಯದಲ್ಲಿ, ಪೊಲೀಸರು ಯುಎಪಿಎ ಕಲಂ 22ನ್ನು ಕೂಡ ಸೇರಿಸಿದರು. ಕರ್ನಾಟಕ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆಯಲು ಏಳು ತಿಂಗಳು ಬೇಕಾಯಿತು.

2010ರಲ್ಲಿ ಆರಂಭವಾದ ಪ್ರಕರಣ ಇನ್ನೂ ಮುಂದುವರಿದಿದೆ. ನಾನು ಇನ್ನೂ ವಿಚಾರಣೆ ಎದುರಿಸಬೇಕಾಗಿದೆ. ಕಳೆದ 13 ವರ್ಷಗಳಿಂದ ಪೊಲೀಸ್ ಠಾಣೆಗಳು, ನ್ಯಾಯಾಲಯಗಳು ಮತ್ತು ವಕೀಲರ ಕಚೇರಿಗಳ ನಡುವೆ ಕೊನೆಯಿರದ ಓಡಾಟ. ಇದೊಂದು ಕಠಿಣ ಹಾದಿಯಾಗಿಬಿಟ್ಟಿದೆ. ಈ ಪ್ರಶಸ್ತಿಯನ್ನು ನಾನು, ತಮ್ಮ ಕೆಲಸಕ್ಕಾಗಿ ಥಳಿತಕ್ಕೊಳಗಾದ, ಕೊಲ್ಲಲ್ಪಟ್ಟ ಮತ್ತು ಪ್ರಕರಣಗಳಲ್ಲಿ ಸಿಲುಕಿಸಲ್ಪಟ್ಟ ಎಲ್ಲಾ ಪತ್ರಕರ್ತರಿಗೆ ಅರ್ಪಿಸುತ್ತೇನೆ.’’

ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಪಾತ್ರರಾಗಿರುವ ಇತರರೆಂದರೆ, ಜಾರ್ಜಿಯಾದ ಎಂಟವರಿ ಅರ್ಖಿ ಎಂಬ ಪ್ರಸಾರ ಸಂಸ್ಥೆಯ ಸ್ಥಾಪಕಿ ನಿಕಾ ಗ್ವಾಮಾರಿಯಾ, ದಿ ಅಬ್ಸರ್ವರ್ ಸಂಸ್ಥಾಪಕಿ ಮತ್ತು ಸಂಪಾದಕಿಯಾಗಿರುವ ಮೆಕ್ಸಿಕೋದ ಮಾರಿಯಾ ತೆರೇಸಾ ಮೊಂಟಾನೊ ಹಾಗೂ ಟೋಗೋ ದೇಶದ ತನಿಖಾ ಪತ್ರಿಕೆ L'Alterna-tive ನಿರ್ದೇಶಕ ಫರ್ಡಿನಾಂಡ್ ಆಯಿಟೆ.

ಇವರಲ್ಲದೆ, ನೈಟ್ ಫೌಂಡೇಶನ್ನ ನಿರ್ಗಮಿಸುತ್ತಿರುವ ಅಧ್ಯಕ್ಷ ಆಲ್ಬರ್ಟೊ ಇಬಾರ್ಗೆನ್ 2023ರ ಸಿಪಿಜೆಯ ಗ್ವೆನ್ ಇಫಿಲ್ ಪ್ರೆಸ್ ಫ್ರೀಡಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಕಾರಣಕ್ಕಾಗಿ ಅಸಾಧಾರಣ ಮತ್ತು ನಿರಂತರ ಸಾಧನೆಯನ್ನು ತೋರಿದ ವ್ಯಕ್ತಿಗೆ ಗ್ವೆನ್ ಇಫಿಲ್ ಪ್ರೆಸ್ ಫ್ರೀಡಮ್ ಪ್ರಶಸ್ತಿಯನ್ನು ನೀಡಲಾಗುತ್ತದೆ.

1991ರಲ್ಲಿ ಸ್ಥಾಪಿತವಾದ ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’, ನ್ಯೂಯಾರ್ಕ್ ಮೂಲದ ಸ್ವತಂತ್ರ, ಸರಕಾರೇತರ ಸಂಸ್ಥೆ. ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಗಂಭೀರ ಮಟ್ಟದಲ್ಲಿರುವ ಪ್ರಪಂಚದಾದ್ಯಂತದ ದೇಶಗಳಲ್ಲಿ ಸ್ಥಳೀಯ ಮತ್ತು ಅಂತರ್ರಾಷ್ಟ್ರೀಯ ಮಾಧ್ಯಮಗಳಲ್ಲಿನ ವರದಿಗಳನ್ನು ಗಮನಿಸುವ ಮೂಲಕ ವ್ಯಕ್ತಿಗಳನ್ನು ಅದು ಗುರುತಿಸುತ್ತದೆ. ಸಿಪಿಜೆ ಇಂಟರ್ನ್ಯಾಷನಲ್ ಪ್ರೆಸ್ ಫ್ರೀಡಮ್ ಅವಾರ್ಡ್ ಅನ್ನು ದಾಳಿಗಳು, ಬೆದರಿಕೆಗಳು ಅಥವಾ ಬಂಧನವನ್ನು ಎದುರಿಸುತ್ತಿದ್ದರೂ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಧೈರ್ಯ ತೋರುವ ಪತ್ರಕರ್ತರು ಮತ್ತು ಪ್ರಕಟಣೆಗಳನ್ನು ಗೌರವಿಸಲು ವಾರ್ಷಿಕವಾಗಿ ನೀಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News