ಬೌದ್ಧಿಕ ಸವಾಲುಗಳ ನಡುವೆ ಶಿಕ್ಷಕರ ದಿನಾಚರಣೆ

Update: 2023-09-05 07:18 GMT

ಸೆಪ್ಟಂಬರ್‌೫ರಂದು ದೇಶಾದ್ಯಂತ ಆಚರಿಸಲಾಗುವ ‘ಶಿಕ್ಷಕರ ದಿನಾಚರಣೆ’ಯ ಸಂದರ್ಭದಲ್ಲಿ ಶೈಕ್ಷಣಿಕ ವಲಯ, ಬೋಧಕ ಸಿಬ್ಬಂದಿ ಹಾಗೂ ಶಿಕ್ಷಣ ತಜ್ಞರನ್ನು ಮೇಲೆ ಉಲ್ಲೇಖಿಸಿದ ಜಟಿಲ ಸಿಕ್ಕುಗಳು ಕಾಡದೆ ಹೋದರೆ ಬಹುಶಃ ನಾವು ಆತ್ಮರತಿಯಲ್ಲಿ ಬೀಗುತ್ತಿದ್ದೇವೆ ಎಂದೇ ಅರ್ಥೈಸಬೇಕಾಗುತ್ತದೆ. ನವ ಉದಾರವಾದ ಮತ್ತು ಕಾರ್ಪೊರೇಟ್ ಮಾರುಕಟ್ಟೆಯ ವಾತಾವರಣದಲ್ಲಿ ಡಿಜಿಟಲ್ ಯುಗದತ್ತ ಧಾವಿಸುತ್ತಿರುವ ನವ ಭಾರತವು, ಶೈಕ್ಷಣಿಕ ವಲಯದಲ್ಲೂ ಸಹ ಹಲವು ರೀತಿಯ ಸಾಂಸ್ಕೃತಿಕ ಸಮಸ್ಯೆಗಳನ್ನು, ಸಾಮಾಜಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗೆ ವಿಸ್ತರಿಸುವ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಕಲಿಕೆ ಹಾಗೂ ವಿದ್ಯಾರ್ಜನೆಯ ಮಾರ್ಗಗಳು ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಬೌದ್ಧಿಕ ಸರಕುಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಮಾರ್ಪಡುತ್ತಿವೆ. ರಾಜಸ್ಥಾನದ ಕೋಟಾದಲ್ಲಿ ಈ ಮಾರುಕಟ್ಟೆಯ ಬೌದ್ಧಿಕ ಕಚ್ಚಾ ಸರಕುಗಳ ಜೀವಬಲಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಸಮ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಶಿಕ್ಷಕ ವೃಂದದ ಜವಾಬ್ದಾರಿಗಳು ಜಟಿಲವಾದಷ್ಟೇ ಗಂಭೀರ ಸ್ವರೂಪದ್ದೂ ಆಗಿರುತ್ತವೆ. ಶಿಕ್ಷಕರ ದಿನಾಚರಣೆಯನ್ನು ಪ್ರಶಸ್ತಿ-ಸಮಾರಂಭ-ಸ್ಮರಣೆಗಳಿಂದಾಚೆಗೂ ನೋಡಬಹುದಾದರೆ, ಇಂದು ಇಡೀ ಬೋಧಕ ವೃಂದವೇ ತಾನು ನಿಂತ ನೆಲದ ತಲ್ಲಣಗಳನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ-ಕಾರ್ಪೊರೇಟೀಕರಣ ಪ್ರಕ್ರಿಯೆಯಿಂದ ಬೋಧಕ ವೃಂದದ ಒಂದು ಹಿತವಲಯವು ತನ್ನ ಭದ್ರಕೋಟೆಗಳನ್ನು ಮತ್ತಷ್ಟು ಸಂರಕ್ಷಿಸುವ ಧಾವಂತದಲ್ಲಿದ್ದರೆ ಮತ್ತೊಂದು ಬೃಹತ್ಬೋಧಕ ವಲಯ ನಾಳಿನ ದಿನಗಳನ್ನು ಎಣಿಸುತ್ತಾ ಸುಸ್ಥಿರ ಬದುಕಿಗಾಗಿ ಹಂಬಲಿಸುವ ಸ್ಥಿತಿಯಲ್ಲಿರುವುದನ್ನು ಸಹ ಗಮನಿಸಬೇಕಿದೆ. ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಸೃಷ್ಟಿಯಾಗಿರುವ ‘ಅತಿಥಿ ಉಪನ್ಯಾಸಕ/ಶಿಕ್ಷಕ/ಬೋಧಕರ’ ಒಂದು ಬೃಹತ್ಸಮುದಾಯದ ಪಾಲಿಗೆ ಶಿಕ್ಷಕ ವೃತ್ತಿ ಬದುಕುವ ಹಾದಿಯಾಗಿ ಮಾತ್ರವೇ ಉಳಿದಿದೆ.

ಶಿಕ್ಷಕರ ಸಾಮಾಜಿಕ ಹೊಣೆ

ಮತ್ತೊಂದೆಡೆ ಸಮಾಜವನ್ನು ತಿದ್ದಬೇಕಾದ, ಸಾಮಾಜಿಕ ಸಿಕ್ಕುಗಳನ್ನು ಬಿಡಿಸಬೇಕಾದ ಹಾಗೂ ತಳಮಟ್ಟದ ಜನತೆಯಲ್ಲಿ ಜೀವನ ಮತ್ತು ಜೀವನೋಪಾಯದ ನಿರ್ವಹಣೆಗೆ ಅಗತ್ಯವಾದ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕಾದ ದೊಡ್ಡ ಜವಾಬ್ದಾರಿ ಶಿಕ್ಷಕ ವೃಂದದ ಮೇಲಿರುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಅಸ್ಪಶ್ಯತೆಯಂತಹ ಪ್ರಾಚೀನ ನಡವಳಿಕೆಗಳನ್ನು, ಸ್ತ್ರೀಕುಲವನ್ನು ಪರಾಧೀನವಾಗಿ ನೋಡುವ ಧಾರ್ಮಿಕ-ಸಾಂಸ್ಕೃತಿಕ ಚಿಂತನೆಗಳನ್ನು ಹಾಗೂ ಗ್ರಾಂಥಿಕ ಧರ್ಮಸೂಕ್ಷ್ಮಗಳು ಸಮಾಜದ ಗರ್ಭದಲ್ಲೇ ಸೃಷ್ಟಿಸುವಂತಹ ಅಸೂಕ್ಷ್ಮತೆಗಳನ್ನು, ಅಸಮಾನತೆಯ ನೆಲೆಗಳನ್ನು ಭೇದಿಸಿ ಭವಿಷ್ಯದ ತಲೆಮಾರನ್ನು ಮಾನವೀಯಗೊಳಿಸುವ ನೈತಿಕ ಜವಾಬ್ದಾರಿ ಶಿಕ್ಷಕ ವೃಂದದ ಮೇಲಿದೆ. ವಿಶಿಷ್ಟವಾಗಿ ಭಾರತದ ಸಂದರ್ಭಲ್ಲಿ ಈ ಅಸೂಕ್ಷ್ಮತೆಗಳು ಮಕ್ಕಳ ನಿತ್ಯ ಬದುಕಿನ ನಡೆನುಡಿಗಳಲ್ಲೇ ಅಂತರ್ಗತವಾಗಿರುವುದರಿಂದ ಶಾಲಾ ಮಟ್ಟದಿಂದಲೇ ಮಕ್ಕಳಲ್ಲಿ ಲಿಂಗ ಸೂಕ್ಷ್ಮತೆ-ಮನುಜ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಪೋಷಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ ಆಗಿರುತ್ತದೆ. ಶಿಕ್ಷಕ ವಲಯವೇ ಮತಭೇದದ ಅಸ್ಮಿತೆಯ ರಾಜಕಾರಣವನ್ನು ಪೋಷಿಸುವಂತಹ ಕೆಲವು ಅಹಿತಕರ ಪ್ರಸಂಗಗಳಿಗೂ ಸಾಕ್ಷಿಯಾಗಿರುವ ಕರ್ನಾಟಕ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರಬೇಕಾಗುತ್ತದೆ.

ಪಠ್ಯಕ್ರಮ ಬೋಧನೆ ಮತ್ತು ಕಲಿಕೆಯಿಂದಾಚೆಗೂ ಶಿಕ್ಷಕ ವಲಯಕ್ಕೆ ಒಂದು ಸಾಮಾಜಿಕ ಬಾಧ್ಯತೆ ಮತ್ತು ಸಾಂಸ್ಕೃತಿಕ ನೈತಿಕತೆಯ ಹೊಣೆಗಾರಿಕೆ ಇರುವುದನ್ನು ಮನಗಂಡು ಕಲಿಕೆಯ ನಡುವೆಯೇ ಶಾಲಾ ಮಕ್ಕಳಲ್ಲಿ ಸಹಬಾಳ್ವೆಯ ಮೌಲ್ಯಗಳನ್ನು, ಸೋದರತ್ವದ ಭಾವನೆಗಳನ್ನು, ಮಾನವೀಯ ಸೂಕ್ಷ್ಮತೆಗಳನ್ನು ಹಾಗೂ ಲಿಂಗ ಸಂವೇದನೆಯನ್ನು ಬೆಳೆಸುವುದು ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ. ಹೆಣ್ಣುಮಕ್ಕಳನ್ನು ಬೆತ್ತಲೆಯಾಗಿಸಿ ಅತ್ಯಾಚಾರವೆಸಗುವ ಕೃತ್ಯಗಳಿಗೆ, ಮನುಷ್ಯನನ್ನು ಪ್ರಾಣಿಗಿಂತಲೂ ಕೀಳಾಗಿ ಕಾಣುವ ಅಸ್ಪಶ್ಯತೆಯಂತಹ ಆಚರಣೆಗಳಿಗೆ ಮೌನ ವೀಕ್ಷಕರಾಗುವ ಒಂದು ಬೃಹತ್ಸಾಮಾಜಿಕ ವಲಯ ನಮ್ಮ ನಡುವೆ ಇರುವುದನ್ನು ಶಿಕ್ಷಕ ವೃಂದ ಗಮನಿಸಲೇಬೇಕಿದೆ. ವಿದ್ಯಾರ್ಜನೆಗೆಂದು ಬರುವ ಮಕ್ಕಳು ಈ ಸಮಾಜದ ಒಳಗಿನಿಂದಲೇ ಬಂದವರಾಗಿರುತ್ತಾರೆ. ಅಲ್ಲದೆ ತಮ್ಮ ನಿತ್ಯಬದುಕಿನ ಸಾಂಸ್ಕೃತಿಕ ಚಿಂತನೆಗಳಿಂದ ಪ್ರಭಾವಿತರೂ ಆಗಿರುತ್ತಾರೆ. ಈ ಮಕ್ಕಳನ್ನು ಅಂತಹ ವಿಷ ವರ್ತುಲಗಳಿಂದ ಹೊರತಂದು, ಮಾನವೀಯ ಮೌಲ್ಯಗಳೆಡೆಗೆ ಕರೆದೊಯ್ಯುವ ಜವಾಬ್ದಾರಿ ಒಬ್ಬ ಶಿಕ್ಷಕನ ಮೇಲಿರುತ್ತದೆ. ಕಲಿಕೆ-ಬೋಧನಾ ಪ್ರಕ್ರಿಯೆಯಿಂದಾಚೆಗಿನ ಈ ಕೈಂಕರ್ಯದಲ್ಲಿ ಸದ್ಭಾವನೆಯಿಂದ ತೊಡಗುವುದು ಶಿಕ್ಷಕರ ಆದ್ಯತೆಯೂ ಆಗಬೇಕಿದೆ.

ಶಾಲಾ ಕಾಲೇಜುಗಳ ಆವರಣದೊಳಗಿನ ಬೋಧಕರು ಬಾಹ್ಯ ಸಮಾಜದ ತಮ್ಮ ವ್ಯಕ್ತಿಗತ ನಿಲುಮೆಗಳಿಂದಲೇ ಪ್ರಭಾವಿತರಾಗಿರುವುದು ಸಹಜವಾದರೂ, ಸಾಮಾಜಿಕ ಔನ್ನತ್ಯದ ದೃಷ್ಟಿಯಿಂದ ಶಿಕ್ಷಕರು ತಮ್ಮ ಬಾಹ್ಯ ಸಮಾಜದ ವ್ಯಕ್ತಿಗತ ಪೊರೆಯನ್ನು ಕಳಚಿಕೊಂಡು, ಮಕ್ಕಳ ನಡುವೆ ಸಮನ್ವಯದ ಸಂಸ್ಕೃತಿಯ ಬೀಜಗಳನ್ನು ಬಿತ್ತುವ ವ್ಯವಸಾಯಿಗಳಾಗಿ ಬೋಧನೆಯಲ್ಲಿ ತೊಡಗಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಬೋಧಕರಿಂದಲೇ ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು ನಮ್ಮ ನಡುವೆ ಆಗಾಗ ಗೋಚರಿಸುತ್ತಲೇ ಇದ್ದಾರೆ. ಹಾಗೆಯೇ ಸಮವಸ್ತ್ರದ ನೆಪದಲ್ಲಿ ಮತದ್ವೇಷದ ಗೋಡೆಗಳನ್ನು ಎದುರಿಸಬೇಕಾದ ಸನ್ನಿವೇಶಗಳನ್ನೂ ಶಾಲಾ ಹೆಣ್ಣುಮಕ್ಕಳು ಎದುರಿಸುತ್ತಿದ್ದಾರೆ. ಜಾತಿ ಶ್ರೇಷ್ಠತೆಯನ್ನು ಪೋಷಿಸುವ ಅಸ್ಪಶ್ಯತೆಯ ಪ್ರಕರಣಗಳೂ ಸಂಭವಿಸಿವೆ. ಈ ಪ್ರಸಂಗಗಳಲ್ಲಿ ಶಿಕ್ಷಕರಾದವರ ಪಾತ್ರವೇನು? ಈ ಜಟಿಲ ಪ್ರಶ್ನೆಗೆ ಪ್ರತಿಯೊಬ್ಬ ಶಿಕ್ಷಕರೂ ಉತ್ತರ ಶೋಧಿಸಬೇಕಿದೆ.

ಈ ಘಟನೆಗಳು ಎಲ್ಲೋ ದೂರದಲ್ಲಿ ನಡೆದಿರಬಹುದಾದರೂ, ಇದರ ಹಿಂದಿನ ಮನಸ್ಥಿತಿ, ತಾತ್ವಿಕ ನಿಲುವುಗಳು ಹಾಗೂ ಸೈದ್ಧಾಂತಿಕ ಧೋರಣೆಗಳು ನಮ್ಮ ನಡುವೆಯೇ ಜೀವಂತವಾಗಿರುವುದನ್ನು, ಸರ್ವವ್ಯಾಪಿಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಶಾಲಾ ಕಾಲೇಜು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಪ್ರಕ್ರಿಯೆಯಲ್ಲಿ ನಾವು ಹಿಂದುಳಿದಿರುವುದರಿಂದಲೇ ಇಂತಹ ಪ್ರಾಚೀನ ನಡವಳಿಕೆಗಳು ಮತ್ತೆ ಮತ್ತೆ ನಮ್ಮ ನಡುವಿನ ಬದುಕನ್ನು ಪ್ರಕ್ಷುಬ್ಧಗೊಳಿಸುತ್ತಿವೆ. ಈ ಪರಿವೆ ಶಿಕ್ಷಕರಲ್ಲಿ ಇರಬೇಕಾಗುತ್ತದೆ. ತಮ್ಮ ಜ್ಞಾನಾರ್ಜನೆಯ ಹಾದಿಯ ಕಲಿಕೆಯ ಹಂತದಲ್ಲಿ ಮಕ್ಕಳಿಗೆ ಕಣ್ತೆರೆದು ನೋಡುವ ವ್ಯವಧಾನವನ್ನೂ, ಓದಿ ತಿಳಿಯುವ ಆಸಕ್ತಿಯನ್ನೂ, ಒಳಸೂಕ್ಷ್ಮಗಳನ್ನು ಗ್ರಹಿಸುವ ಸಂವೇದನಾಶೀಲ ಗುಣಗಳನ್ನೂ ಕಲಿಸಿಕೊಡಬೇಕಾದದ್ದು ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಬೇಕು. ಆದರೆ ಮಾರುಕಟ್ಟೆಯ ಅವಶ್ಯಕತೆಗಳು, ಆಳುವವರ ಆದ್ಯತೆಗಳು ಮತ್ತು ರಾಜಕೀಯ ಸೈದ್ಧಾಂತಿಕ ಅನಿವಾರ್ಯತೆಗಳು ಈ ಪ್ರಕ್ರಿಯೆಗೆ ತೊಡಕಾಗಿಯೇ ಇರುತ್ತವೆ.

ಶಿಕ್ಷಕ ದಿನಾಚರಣೆಯ ಸಾರ್ಥಕತೆ

ಹಾಗಾಗಿಯೇ ಶಾಲಾ ಆವರಣದಲ್ಲಾದರೂ ಶಿಕ್ಷಕರು ತಮ್ಮ ಬಾಹ್ಯ ಸಮಾಜದ ವ್ಯಕ್ತಿಗತ-ವೈಯಕ್ತಿಕ ತಾತ್ವಿಕ/ಸೈದ್ಧಾಂತಿಕ/ಧಾರ್ಮಿಕ ಪೊರೆಗಳನ್ನು ಕಳಚಿಟ್ಟು ಕಾರ್ಯನಿರ್ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಕಲಿಕೆ ಮತ್ತು ಜ್ಞಾನಾರ್ಜನೆಯ ಪರಿಚಾರಕರಾಗಬೇಕಾದ ಶಿಕ್ಷಕ ವೃಂದ ಬಾಹ್ಯ ಸಮಾಜದ ಆಳುವ ವರ್ಗಗಳ-ಪ್ರಭಾವಿ ವಲಯದ ಬಾಲಂಗೋಚಿಗಳಾಗಿ ಕಾಣತೊಡಗುತ್ತದೆ. ಶಿಕ್ಷಣ ಎನ್ನುವುದು ಕೇವಲ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸಬಹುದಾದ ಬೌದ್ಧಿಕ ಸರಕುಗಳ ಉತ್ಪಾದನೆಯ ವಲಯ ಅಲ್ಲ. ಅದು ಭವಿಷ್ಯದಲ್ಲಿ ಶತಮಾನಗಳ ಕಾಲ ಮನುಷ್ಯ ಕುಲವನ್ನು ಸಹಬಾಳ್ವೆಯೊಂದಿಗೆ ಬದುಕಲು ಪೂರಕವಾದಂತಹ ಮನುಷ್ಯ ಜೀವಿಗಳನ್ನು ರೂಪಿಸುವ ಒಂದು ಸಾಂಸ್ಕೃತಿಕ ಕ್ಷೇತ್ರ. ಶಾಲಾ ಕಾಲೇಜುಗಳಲ್ಲಿ ಬೆಳೆಯಬಹುದಾದ ಮಾನವೀಯ ಮೌಲ್ಯಗಳ ಹುಲುಸಾದ ಬೆಳೆಯೇ ಭವಿಷ್ಯದ ಸಮಾಜವನ್ನು ಕಟ್ಟುವ ಸುಭದ್ರ ಫಲವತ್ತಾದ ಭೂಮಿಕೆಯೂ ಆಗುತ್ತದೆ. ಕೋಟ್ಯಂತರ ಮಕ್ಕಳು ಈ ಫಲವತ್ತಾದ ಭೂಮಿಯಲ್ಲಿ ಬೆಳೆದ ವೃಕ್ಷಗಳಾಗಿ ಮುಂದಿನ ಹಲವು ತಲೆಮಾರುಗಳಿಗೆ ನೆರಳಾಗುತ್ತಾರೆ.

ಇಂತಹ ಒಂದು ಸುಂದರ ಸಮಾಜವನ್ನು ರೂಪಿಸಲು ಶಿಕ್ಷಕರಾದವರು ಸಾಮಾಜಿಕ ಶಿಲ್ಪಿಯಾಗಿಯೂ, ಸಾಂಸ್ಕೃತಿಕ ರಾಯಭಾರಿಯಾಗಿಯೂ, ಮಾನವೀಯತೆಯ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ರೂಪಿಸಲಾಗುವ ವ್ಯಕ್ತಿತ್ವಗಳೇ ಬಾಹ್ಯ ಸಮಾಜದಲ್ಲಿ ಪ್ರಭಾವ ಬೀರುವ ಪ್ರತಿಮೆಗಳಾಗಿ ಮುಂದಿನ ದಿನಗಳಲ್ಲಿ ಸಮಾಜ ನಿರ್ಮಾಣದ ಹಾದಿಯಲ್ಲಿ ಸಾಗುತ್ತವೆ. ಶಿಕ್ಷಕ ಎಂಬ ಶಿಲ್ಪಿ ಕಡೆದು ನಿಲ್ಲಿಸುವ ಶಿಲ್ಪಗಳೇ ಭವಿಷ್ಯ ಭಾರತದ ಸಮನ್ವಯತೆ, ಸೌಹಾರ್ದ, ಸೋದರತ್ವ ಹಾಗೂ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಕಾವಲುಪಡೆಗಳಾಗಿ ಸಮ ಸಮಾಜದ ಶಿಲ್ಪಿಗಳಾಗುತ್ತಾರೆ. ಇಂತಹ ಉದಾತ್ತ ಚಿಂತನೆಯ ಶಿಲ್ಪಗಳನ್ನು ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಈ ನೈತಿಕ ಹೊಣೆಗಾರಿಕೆಯನ್ನು ಅರಿತು ಮುನ್ನಡೆಯುವ ದೃಢ ಸಂಕಲ್ಪ ಇದ್ದರೆ ನಾವು ಆಚರಿಸುವ ‘ಶಿಕ್ಷಕರ ದಿನಾಚರಣೆ’ ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ಮತ್ತೊಂದು ದಿನಾಚರಣೆಯಾಗಿ ವಿಸ್ಮತಿಗೆ ಜಾರಿಬಿಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ನಾ. ದಿವಾಕರ

contributor

Similar News