ತನ್ನ ಅವಧಿಯ ಸಿಎಂ ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ನೇಮಕ ಸಮರ್ಥಿಸಿದ್ದ ಬಿಜೆಪಿ ಸರಕಾರ
ಬೆಂಗಳೂರು, ಜು.24: ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರನ್ನು ನೇಮಿಸಿಕೊಳ್ಳುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರವಾಗಿದೆ. ಮುಖ್ಯಮಂತ್ರಿಗಳ ಮೇಲಿನ ಕಾರ್ಯದ ಒತ್ತಡ, ರಾಜಕೀಯ ಬೆಳವಣಿಗೆಗಳು ಮತ್ತು ಸರಕಾರದ ಹಿತರಕ್ಷಣೆಗಾಗಿಯೇ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ ಎಂದು ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಪಿಐಎಲ್ಗೆ ಆಕ್ಷೇಪಣೆ ಸಲ್ಲಿಸಿದ ಹಿಂದಿನ ಬಿಜೆಪಿ ಸರಕಾರವು ಈ ಎಲ್ಲಾ ನೇಮಕಾತಿಗಳನ್ನು ಸಮರ್ಥಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ಹುದ್ದೆ ಸೃಷ್ಟಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿವರಣಾತ್ಮಕ ಟಿಪ್ಪಣಿಯಲ್ಲಿ ಕರ್ನಾಟಕ ಸರಕಾರವು ತನ್ನ ಕ್ರಮವನ್ನು 3 ಪುಟಗಳಲ್ಲಿ ಸಮರ್ಥಿಸಿಕೊಂಡಿದೆ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾದ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ಮತ್ತು ಕೆ. ಗೋವಿಂದರಾಜ್ ಹಾಗೂ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನುಗೋಳು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ನೇಮಕಾತಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರುವ ಬೆನ್ನಲ್ಲೇ ಈ ಎಲ್ಲಾ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರವು ಸಲ್ಲಿಸಿರುವ ವಿವರಣಾತ್ಮಕ ಟಿಪ್ಪಣಿಯು ಮುನ್ನೆಲೆಗೆ ಬಂದಿದೆ. ಈ ಟಿಪ್ಪಣಿಯು ‘the-file.in’ಗೆ ಲಭ್ಯವಾಗಿದೆ.
ರಾಜಕೀಯ ಕಾಯದರ್ಶಿಗಳ ನೇಮಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇದೆ. ಮುಖ್ಯಮಂತ್ರಿಗಳ ಕಾರ್ಯಭಾರದ ಒತ್ತಡ ಕಡಿಮೆಗೊಳಿಸುವುದು, ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಣಯ ಕೈಗೊಳ್ಳುವುದು ಮತ್ತು ಸರಕಾರದ ಹಿತರಕ್ಷಣೆ ಉದ್ದೇಶವಿದೆ. ಅನುಭವ ಮತ್ತು ಜ್ಞಾನ ಆಧರಿಸಿ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಲಾಗುತ್ತಿದೆ. ಹಾಗೆಯೇ ಇಂತಹ ನೇಮಕಾತಿ ಮಾಡುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರ. ಹೀಗಾಗಿ ಇದರಲ್ಲಿ ಅಧಿಕಾರ ದುರ್ಬಳಕೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.
ಹಾಗೆಯೇ ಆಫೀಸ್ ಆಫ್ ಪ್ರಾಫಿಟ್, ಕರ್ನಾಟಕ ಕಾಯ್ದೆ ನಂ 7, 2019ರ ಅಡಿಯಲ್ಲಿ ರಾಜಕೀಯ ಕಾರ್ಯದರ್ಶಿಗಳು ಬರುವುದಿಲ್ಲ. ಕರ್ನಾಟಕ ವಿಧಾನಸಭೆ (ಅನರ್ಹತೆ ತಡೆಗಟ್ಟುವಿಕೆ) ಕಾಯ್ದೆ 1956 ಪ್ರಕಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಕರ್ನಾಟಕ ಶಾಸಕಾಂಗ ಸಭೆಯ ಸದಸ್ಯತ್ವದ ಅನರ್ಹತೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿರುವುದು ತಿಳಿದು ಬಂದಿದೆ.
ಹಿಂದಿನ ಸರಕಾರಗಳ ಅವಧಿಯಿಂದಲೂ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುವ ಪರಿಪಾಠವಿದೆ. ಮುಖ್ಯಮಂತ್ರಿ ಕಚೇರಿ ಮತ್ತು ರಾಜಕೀಯ ವಿಷಯಗಳ ಕುರಿತು ರಾಜಕೀಯ ಕಾರ್ಯದರ್ಶಿಗಳು ವ್ಯವಹರಿಸುತ್ತಾರೆ ಮತ್ತು ಇಂತಹ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ನೆರವಾಗುತ್ತಾರೆ ಎಂದು ರಾಜ್ಯ ಶಿಷ್ಟಾಚಾರದ ಅಧೀನ ಕಾರ್ಯದರ್ಶಿಯು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.