ಕಾಫಿನಾಡಿನಲ್ಲಿ ಅರಣ್ಯರೋದನವಾದ ನಿವೇಶನ ರಹಿತರ ಬೇಡಿಕೆ

Update: 2023-11-22 09:00 GMT
Editor : Thouheed | Byline : ಕೆ.ಎಲ್.ಶಿವು

ಚಿಕ್ಕಮಗಳೂರು, ನ.21: ನಿವೇಶನ ಸಮಸ್ಯೆ ಕಾಫಿನಾಡಿನ ಜ್ವಲಂತ ಸಮಸ್ಯೆಗಳಲ್ಲಿ ಪ್ರಮುಖವಾದ ಸಮಸ್ಯೆಯಾಗಿದೆ. ಕಳೆದ ಮೂರು ದಶಕಗಳಿಂದ ನಿವೇಶನ ರಹಿತರು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ ನಿವೇಶನ ರಹಿತರ ಬೇಡಿಕೆ ಮಾತ್ರ ಅರಣ್ಯರೋದನವಾಗಿದೆ. ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ ಜಾಗವಿದ್ದರೂ ಈ ಜಾಗ ಒತ್ತುವರಿದಾರರ ಪಾಲಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಡೀಮ್ಡ್ ಅರಣ್ಯ ಭೂಮಿ ಸಮಸ್ಯೆಯಿಂದಾಗಿ ತಲೆ ಮೇಲೊಂದು ಸೂರು ನಿರ್ಮಿಸಿಕೊಳ್ಳುವ ಬಡವರು, ಕಾರ್ಮಿಕ ಸಮುದಾಯದ ಕನಸು ಕನಸಾಗಿಯೇ ಉಳಿದಿದೆ.

ಚಿಕ್ಕಮಗಳೂರು ಜಿಲ್ಲೆಯ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕುಟುಂಬಗಳು ಇಂದಿಗೂ ತೋಟಗಳ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿರುವ ದೊಡ್ಡ ದೊಡ್ಡ ಕಾಫಿ, ಟೀ ಎಸ್ಟೇಟ್‌ಗಳಲ್ಲಿ ದುಡಿಯುತ್ತಿರುವ ಹೆಚ್ಚಿನ ಕಾರ್ಮಿಕರು ಹಲವಾರು ದಶಕಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳಿಂದ ವಲಸೆ ಬಂದವರಾಗಿದ್ದಾರೆ. ಪರಿಶಿಷ್ಟ ಸಮುದಾಯದವರಾದ ಈ ಕಾರ್ಮಿಕರು ಇಂದಿಗೂ ಕಾಫಿ, ಟೀ ಎಸ್ಟೇಟ್‌ಗಳ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಸ್ವಂತ ನಿವೇಶನ ಎಂಬುದು ಇಂದಿಗೂ ಮರಿಚೀಕೆಯಾಗಿದೆ.

ಮತ್ತೊಂದೆಡೆ ಕಾಫಿನಾಡಿನಲ್ಲಿ ಅನಾದಿಕಾಲದಿಂದಲೂ ವಾಸವಿರುವ ಪರಿಶಿಷ್ಟ ಜಾತಿ ಸಮುದಾಯದ ಜನರು ವಾಸಿಸುವ ಕಾಲನಿಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಿರುವ ಗಿರಿಜನರ ಕಾಲನಿಗಳಲ್ಲಿ ಸಾವಿರಾರು ಕುಟುಂಬಗಳು ಇಂದಿಗೂ ನಿವೇಶನ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಕಾಲನಿಗಳಲ್ಲಿ ಒಂದೇ ಮನೆಯಲ್ಲಿ ಅನೇಕ ಕುಟುಂಬಗಳು ವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೇಶನ ಸೌಲಭ್ಯಕ್ಕಾಗಿ ವಿವಿಧ ಎಡಪಂಥೀಯ ಸಂಘಟನೆಗಳ ನೇತೃತ್ವದಲ್ಲಿ ನಿವೇಶನ ರಹಿತರು ಕಳೆದ ಅನೇಕ ದಶಕಗಳಿಂದ ಹೋರಾಟ ನಡೆಸುತ್ತಿದ್ದರಾದರೂ ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಂದ ಭರವಸೆ ಸಿಗುತ್ತಿದೆಯೇ ಹೊರತು ನಿವೇಶನ ಸೌಲಭ್ಯ ಮಾತ್ರ ಗಗನ ಕುಸುಮದಂತಾಗಿದೆ.

► ಜಿಲ್ಲಾದ್ಯಂತ 1ಲಕ್ಷಕ್ಕೂ ಹೆಚ್ಚು ನಿವೇಶನ ರಹಿತರು: ಕಾಫಿನಾಡಿನಲ್ಲಿ ಒಂದು ಅಂದಾಜಿನ ಪ್ರಕಾರ 1ಲಕ್ಷ ಮಂದಿ ನಿವೇಶನ ರಹಿತರಿದ್ದಾರೆ. ಜಿಲ್ಲೆಯ 9 ತಾಲೂಕುಗಳ ವ್ಯಾಪ್ತಿಯಲ್ಲಿರುವ ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ನಿವೇಶನ ರಹಿತರ ಪಟ್ಟಿ ಇದ್ದು, ಗ್ರಾಪಂ ವ್ಯಾಪ್ತಿಯಲ್ಲಿರುವ ಪ್ರತೀ ನಿವೇಶನ ರಹಿತರು ಗ್ರಾಪಂ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನಿವೇಶನ ಸೌಲಭ್ಯಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಪ್ರತೀ ಗ್ರಾಪಂ ಮಟ್ಟದಲ್ಲಿ 200-300 ನಿವೇಶನ ರಹಿತರು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು, ಜಿಲ್ಲೆಯ 9 ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 1ಲಕ್ಷಕ್ಕೂ ಹೆಚ್ಚು ನಿವೇಶನ ರಹಿತರಿದ್ದಾರೆಂದು ನಿವೇಶನ ರಹಿತರ ಹೋರಾಟ ವೇದಿಕೆ ಮುಖಂಡರು ಮಾಹಿತಿ ನೀಡಿದ್ದಾರೆ.

ಅರಣ್ಯ-ಕಂದಾಯ ಭೂಮಿ ಜಂಟಿ ಸರ್ವೆ ವಿಳಂಬ: ಕಂದಾಯ, ಅರಣ್ಯ ಭೂಮಿ ಸಮಸ್ಯೆ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದ್ದು, ಈ ಸಮಸ್ಯೆಯಿಂದಾಗಿ ಕಂದಾಯ ಭೂಮಿ ಯಾವುದು, ಅರಣ್ಯ ಭೂಮಿ ಯಾವುದು ಎಂಬ ಗೊಂದಲ ಇಂದಿಗೂ ಮುಂದುವರಿದಿದೆ. ಕಂದಾಯ, ಅರಣ್ಯ ಭೂಮಿಗಳ ಗಡಿ ಗುರುತಿಗೆ ಜಂಟಿ ಸರ್ವೆ ಅತ್ಯಗತ್ಯವಾಗಿದ್ದು, ಇದುವರೆಗೂ ಜಂಟಿ ಸರ್ವೆ ನಡೆಯದ ಕಾರಣದಿಂದಾಗಿ ಸರಕಾರಿ ಜಾಗ ಮತ್ತು ಅರಣ್ಯ ಜಾಗದ ಬಗ್ಗೆ ಇರುವ ಗೊಂದಲಕ್ಕೆ ಪರಿಹಾರ ಸಿಗದಂತಾಗಿದೆ.

► ದಶಕಗಳ ಹೋರಾಟಕ್ಕೆ ಕಿಮ್ಮತ್ತಿಲ್ಲ: ಜಿಲ್ಲಾದ್ಯಂತ ಇರುವ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕೆಂದು ಭಾರತ ಕಮ್ಯೂನಿಷ್ಟ್ ಪಕ್ಷ, ನಿವೇಶನ ರಹಿತರ ಹೋರಾಟ ವೇದಿಕೆ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಿವೇಶನ ರಹಿತರು ಗ್ರಾಪಂ ಮಟ್ಟ ಸೇರಿದಂತೆ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಳೆದ ಮೂರು ದಶಕಗಳಿಂದ ಅನೇಕ ಬಾರಿ ಕಾಲ್ನಡಿಗೆ ಜಾಥಾ, ಉಪವಾಸ ಸತ್ಯಾಗ್ರಹ, ಅನಿರ್ದಿಷ್ಟಾವಧಿ ಧರಣಿ, ಅಹೋರಾತ್ರಿ ಧರಣಿಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿಪಿಐ ಪಕ್ಷದ ನೇತೃತ್ವದಲ್ಲಿ ನಿವೇಶನ ರಹಿತರು ನಗರದಲ್ಲಿ ಮೂರು ದಿನಗಳ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಜಿಲ್ಲಾಡಳಿತದ ಭರವಸೆ ಮೇರೆಗೆ ಧರಣಿ ಹಿಂಪಡೆದಿರುವ ನಿವೇಶನ ರಹಿತರು ನಿರ್ದಿಷ್ಟ ಕಾಲಾವಧಿಯೊಳಗೆ ಜಿಲ್ಲಾದ್ಯಂತ ಇರುವ ಎಲ್ಲ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ ಜಾಗ ಗುರುತಿಸಿ ಮೀಸಲಿಡಬೇಕು ಎಂಬ ಷರತ್ತು ವಿಧಿಸಿದ್ದು, ಜಿಲ್ಲಾಡಳಿತದ ಭರವಸೆ ಮಾತ್ರ ಇದುವರೆಗೂ ಈಡೇರದ ಕಾರಣಕ್ಕೆ ನಿವೇಶನ ರಹಿತರು ಗ್ರಾಪಂ ಮಟ್ಟದಿಂದಲೇ ಹೋರಾಟ ನಡೆಸಲು ಸಜ್ಜಾಗುತ್ತಿದ್ದಾರೆ.

► ನಿವೇಶನ ಒದಗಿಸಲು ಸರಕಾರಿ ಜಾಗದ ಸಮಸ್ಯೆ: ಜಿಲ್ಲೆಯಲ್ಲಿ ಸಾವಿರಾರು ಎಕರೆ ಸರಕಾರಿ ಜಾಗ ಲಭ್ಯವಿದ್ದರೂ ಈ ಜಾಗ ಒಂದಲ್ಲ ಒಂದು ಸಮಸ್ಯೆಯೊಂದಿಗೆ ಥಳಕು ಹಾಕಿಕೊಂಡಿರುವುದರಿಂದ ನಿವೇಶನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಕಗ್ಗಂಟಾಗಿದೆ. ಜಿಲ್ಲೆಯ ಪ್ರತೀ ಗ್ರಾಪಂ ಮಟ್ಟದಲ್ಲೂ ಸರಕಾರಿ ಜಾಗ ಲಭ್ಯವಿದ್ದರೂ ಈ ಜಾಗ ಒತ್ತುವರಿದಾರರ ಪಾಲಾಗಿರುವುದು ಒಂದೆಡೆಯಾದರೇ, ಮತ್ತೊಂದೆಡೆ ಡೀಮ್ಡ್ ಅರಣ್ಯ ಸಮಸ್ಯೆ, ಅರಣ್ಯ ಭೂಮಿಯೋ, ಕಂದಾಯ ಭೂಮಿಯೋ ಎಂಬ ಗೊಂದಲದಿಂದಾಗಿ ನಿವೇಶನ ಒದಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾದ್ಯಂತ ಇರುವ ಸರಕಾರಿ ಜಾಗದ ಪೈಕಿ ಬಹುತೇಕ ಭೂಮಿ ಪ್ರಭಾವಿಗಳಿಂದ ಒತ್ತುವರಿಯಾಗಿದ್ದು, ಒತ್ತುವರಿ ಜಾಗ ಖುಲ್ಲಾ ಮಾಡಿಸಿ ನಿವೇಶನ ರಹಿತರಿಗೆ ನೀಡಬೇಕೆಂಬ ಕೂಗಿಗೆ ಜಿಲ್ಲಾಡಳಿತ ಇದುವರೆಗೂ ಸ್ಪಂದಿಸಿಲ್ಲ. ಇದಕ್ಕೆ ಕಾರಣ ಒತ್ತುವರಿದಾರರಿಗೆ ರಾಜಕಾರಣಿಗಳ ಕೃಪಾ ಕಟಾಕ್ಷ ಇರುವುದರಿಂದ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂಬುದು ಹೋರಾಟಗಾರರ ಆರೋಪವಾಗಿದ್ದು, ಜಂಟಿ ಸರ್ವೆ ಮೂಲಕ ಕಂದಾಯ, ಅರಣ್ಯ ಜಾಗಗಳ ಗಡಿ ಗುರುತು ಮಾಡಿದಲ್ಲಿ ಸರಕಾರಿ ಜಾಗದ ಬಗ್ಗೆ ಸ್ಪಷ್ಟತೆ ತಿಳಿದು ಬರಲಿದ್ದು, ನಿವೇಶನ ಒದಗಿಸಲು ಸಾಕಷ್ಟು ಜಾಗ ಇದರಿಂದ ಲಭ್ಯವಾಗಲಿದೆ ಎಂಬುದು ನಿವೇಶನ ರಹಿತರ ಆಗ್ರಹವಾಗಿದೆ.

ಜಾಗ ಕಾಯ್ದಿರಿಸಿದ್ದರೂ ನಿವೇಶನ ಹಂಚಿಕೆಯಾಗಿಲ್ಲ:

ಇನ್ನು ಜಿಲ್ಲೆಯ ಮೂಡಿಗೆರೆ, ಕಳಸ, ಚಿಕ್ಕಮಗಳೂರಿನಂತಹ ತಾಲೂಕು ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಹೆಚ್ಚಿದ್ದು, ನಿವೇಶನ ರಹಿತರ ನಿರಂತರ ಹೋರಾಟದ ಫಲವಾಗಿ ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಜಾಗವನ್ನೂ ತಾಲೂಕು ಆಡಳಿತ ಕಾಯ್ದಿರಿಸಿದೆ. ಆದರೆ ಅರಣ್ಯ ಭೂಮಿ ಗೊಂದಲ, ಡೀಮ್ಡ್ ಅರಣ್ಯದ ಸಮಸ್ಯೆಯಿಂದಾಗಿ ಕಾಯ್ದಿರಿಸಿದ ಜಾಗವನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ತಾಲೂಕು ಆಡಳಿತಕ್ಕೆ ಇಂದಿಗೂ ಸಾಧ್ಯವಾಗಿಲ್ಲ ಎಂದು ನಿವೇಶನ ರಹಿತರು ಆರೋಪಿಸುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ನೂರಾರು ಎಕರೆ ಜಾಗವನ್ನು ನಿವೇಶನ ರಹಿತರಿಗಾಗಿ ಕಾಯ್ದಿರಿಸಲಾಗಿದೆ ಎಂದು ಹಿಂದಿನ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದರು. ಆದರೆ ಈ ಜಾಗವನ್ನು ಎಲ್ಲಿ ಕಾಯ್ದಿರಿಸಲಾಗಿದೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲವಾಗಿದ್ದು, ನಿವೇಶನ ರಹಿತರ ಹೋರಾಟ ಹತ್ತಿಕ್ಕಲು ಹಿಂದಿನ ಜಿಲ್ಲಾಧಿಕಾರಿ ಸುಳ್ಳು ಹೇಳಿಕೆ ನೀಡಿದ್ದಾರೆಂದು ಹೋರಾಟಗಾರರು ದೂರಿದ್ದಾರೆ.

ಒಟ್ಟಾರೆ ಕಾಫಿನಾಡಿನಲ್ಲಿ ನಿವೇಶನ ರಹಿತರ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ನಿವೇಶನ ರಹಿತರ ಬೇಡಿಕೆ ಅರಣ್ಯರೋದನವಾಗಿದ್ದರೂ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ನಿವೇಶನಕ್ಕಾಗಿ ಹೋರಾಟ ನಡೆಸಿದಾಗ ಭರವಸೆ ನೀಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಬಡಜನರು ನೆಲೆ ಕಂಡುಕೊಳ್ಳಲು ತುಂಡು ಜಾಗಕ್ಕಾಗಿ ಅಂಗಲಾಚುತ್ತಿದ್ದರೂ ನಿವೇಶನ ಒದಗಿಸಲು ಇಚ್ಛಾಶಕ್ತಿ ಪ್ರದರ್ಶಿಸದೇ ಕೇವಲ ಭರವಸೆ ನೀಡುತ್ತಾ ದುಡಿಯುವ ವರ್ಗದವರ ಬೇಡಿಕೆಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಇನ್ನಾದರೂ ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು

ಹಲವು ದಶಕಗಳ ಸೂರಿಲ್ಲದವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿರುವುದು ಇಂದಿನ ತುರ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಲ್.ಶಿವು

contributor

Similar News