ಅರಣ್ಯ (ಸಂರಕ್ಷಣಾ) ತಿದ್ದುಪಡಿ ಕಾಯ್ದೆ- 2023

Update: 2023-08-08 03:50 GMT

ಮಣಿಪುರದಲ್ಲಿ ಕುಕಿ, ನಾಗ ಇನ್ನಿತರ ಹತ್ತಾರು ಬುಡಕಟ್ಟು ಜನಸಮುದಾಯಗಳನ್ನು ಚದುರಿಸಿ ಅವರು ನೆಲೆಸಿರುವ ಮಣಿಪುರದ ಶೇ. ೯೦ರಷ್ಟು ಗುಡ್ಡಗಾಡು ಪ್ರದೇಶವನ್ನು ಸುಲಭವಾಗಿ ಕೈವಶಮಾಡಿಕೊಳ್ಳಲು ಇಂಡಿಯಾದ ಯೂನಿಯನ್ ಸರಕಾರ ಹಾಗೂ ಮಣಿಪುರದ ರಾಜ್ಯ ಸರಕಾರ ಭಾರೀ ಅಪಾಯಕಾರಿ ಫ್ಯಾಶಿಸ್ಟ್ ಪ್ರಯೋಗಗಳನ್ನು ಜಾರಿಯಲ್ಲಿ ಇಟ್ಟಿರುವ ಸಂದರ್ಭ ಇದಾಗಿದೆ. ಅದೇ ಹೊತ್ತಿನಲ್ಲಿ ದೇಶದ ಸಂಸತ್ತಿನ ಉಭಯ ಸದನಗಳೂ ಅರಣ್ಯ (ಸಂರಕ್ಷಣಾ)ತಿದ್ದುಪಡಿ ಕಾಯ್ದೆ ೧೯೮೦ರ ಬದಲಿಗೆ ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆ ೨೦೨೩ ಮತ್ತು ಜೀವ ವೈವಿಧ್ಯ ಕಾಯ್ದೆ ೨೦೦೨ಕ್ಕೆ ಪ್ರಮುಖ ತಿದ್ದುಪಡಿಗಳನ್ನು ಅನುಮೋದಿಸಿದೆ. ಕಳೆದ ಜೂನ್ ನಲ್ಲಿ ಲೋಕಸಬೆಯಲ್ಲಿ ಈ ತಿದ್ದುಪಡಿ ಬಹುತೇಕವಾಗಿ ಯಾವುದೇ ಚರ್ಚೆ ನಡೆಸದೆ ಅನುಮೋದಿಸಲಾಗಿದೆ. ನಂತರ ಜಂಟಿ ಸಂಸದೀಯ ಸಮಿತಿಗೆ ಇದನ್ನು ಒಪ್ಪಿಸಲಾಯಿತು. ೩೨ ಸದಸ್ಯರ ಈ ಸಮಿತಿಯಲ್ಲಿ ಬಿಜೆಪಿ ಪಕ್ಷದ ಸಂಸದರೇ ನಿರ್ಣಾಯಕ ಸಂಖ್ಯೆಯಲ್ಲಿದ್ದರು. ಅದರ ಅಧ್ಯಕ್ಷತೆ ಕೂಡ ಬಿಜೆಪಿಯದ್ದಾಗಿತ್ತು.

ಯೂನಿಯನ್ ಸರಕಾರದ ಈ ತಿದ್ದುಪಡಿ ಮಸೂದೆಗಳಿಗೆ ಜಂಟಿ ಸಂಸದೀಯ ಸಮಿತಿಯು ಯಾವುದೇ ಆಕ್ಷೇಪಣೆಗಳನ್ನಾಗಲೀ ತಿದ್ದುಪಡಿಗಳನ್ನಾಗಲೀ ಸೂಚಿಸಿರಲಿಲ್ಲವೆಂದು ವರದಿಯಾಗಿದೆ. ಜಂಟಿ ಸಂಸದೀಯ ಸಮಿತಿಯು ಈ ಕುರಿತು ಸಭೆ ನಡೆಸಿರುವ ಬಗ್ಗೆಯೇ ಅನುಮಾನಗಳಿವೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿ ಈ ಮಸೂದೆಗಳ ಅನುಮೋದನೆಗೆ ಸುಲಭ ದಾರಿ ಮಾಡಿಕೊಟ್ಟವು. ವಿರೋಧ ಪಕ್ಷಗಳು ಕಾಟಾಚಾರದ ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಈ ತಿದ್ದುಪಡಿಗಳು ಜಾರಿಯಾಗದಂತೆ ತಡೆಯುವ ಯಾವುದೇ ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಲಿಲ್ಲ. ಇದರ ಜೊತೆಗೆ ರಾಷ್ಟ್ರೀಯ ರಾಜಧಾನಿ ದಿಲ್ಲಿ (ತಿದ್ದುಪಡಿ)ಮಸೂದೆ ೨೦೨೩, ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ ೨೦೨೩ಯಂತಹ ಹಲವು ವಿವಾದಾತ್ಮಕ ಮಸೂದೆಗಳನ್ನು ಕೂಡ ಸಂಸತ್ತಿನಲ್ಲಿ ಚರ್ಚೆಗೆ ಬಿಡದೆ ವಿರೋಧ ಪಕ್ಷಗಳ ಧರಣಿ, ಅಮಾನತು, ಸಭಾತ್ಯಾಗಗಳ ನಡುವೆ ಅಂಗೀಕಾರಗೊಂಡವು.

ವಿರೋಧ ಪಕ್ಷಗಳು ಆಡಳಿತ ಪಕ್ಷದ ಸಂಸದರು ಎಷ್ಟು ಮಟ್ಟದಲ್ಲಿ ಇವುಗಳನ್ನು ಪರಿಶೀಲಿಸಿದವೋ/ರೋ ಎನ್ನುವುದು ಭಾರೀ ಪ್ರಶ್ನಾರ್ಥಕ ಚಿನ್ನೆಗಳೇ ಆಗಿ ಉಳಿದುಬಿಟ್ಟಿವೆ. ಇದು ದೇಶದ ಸಂಸದೀಯ ವ್ಯವಸ್ಥೆ ಇಂದು ತಲುಪಿರುವ ದುಸ್ಥಿತಿಯಾಗಿದೆ.

ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆ ೨೦೨೩ ಹಾಗೂ ಜೀವ ವೈವಿಧ್ಯ ತಿದ್ದುಪಡಿ ಮಸೂದೆಗಳು ಈ ಹಿಂದಿದ್ದ ಒಂದಷ್ಟು ರಕ್ಷಣಾತ್ಮಕ ನಿಯಮಗಳನ್ನು ಬದಲಿಸುವುದು ಹಾಗೂ ಸಡಿಲಗೊಳಿಸುವುದನ್ನು ಮಾಡಿದೆ. ಇವುಗಳು ಮುಂಬರುವ ದಿನಗಳಲ್ಲಿ ಜನಸಾಮಾನ್ಯರು ಹಾಗೂ ಅರಣ್ಯ ಪ್ರದೇಶಗಳ ಮೇಲೆ ಭಾರೀ ಪ್ರಮಾಣದಲ್ಲಿ ಎರಗಲಿವೆ. ಮಣಿಪುರದಲ್ಲಿ ಈಗ ನಡೆಯುತ್ತಿರುವುದು ಅದರ ಒಂದು ಮಾದರಿಯಾಗಿದೆ. ಮೈತೈ ಜನಾಂಗೀಯ ಕೂಟವನ್ನು ಕುಕಿ ಹಾಗೂ ನಾಗಾ ಮೊದಲಾದ ಗುಡ್ಡಗಾಡು ಪ್ರದೇಶದ ವಾಸಿಗಳಾಗಿರುವ ಜನಾಂಗೀಯ ಕೂಟಗಳ ವಿರುದ್ಧ ಹಲವಾರು ನೆಪಗಳಲ್ಲಿ ಎತ್ತಿ ಕಟ್ಟಿ ಆಧುನಿಕ ಶಸ್ತ್ರಾಸ್ತ್ರಗಳು ಹೊಂದುವಂತೆ ಅನುವು ಮಾಡಿಕೊಟ್ಟು ಮಾರಣಾಂತಿಕ ದಾಳಿಗಳಿಗೆ ಇಳಿಸಿದ್ದಾರೆ. ರಾಜ್ಯದ ಪೊಲೀಸ್ ಶಸ್ತ್ರಾಗಾರಗಳು ಬ್ರಾಹ್ಮಣ್ಯೀಕರಣಗೊಳಿಸಿದ ಮೈತೈ ಜನಾಂಗೀಯವಾದಿಗಳ ಹಿಡಿತಕ್ಕೆ ಹೋಗುತ್ತಾ ಸಾಗಿವೆ. ಮಣಿಪುರದಲ್ಲಿ ಯಾವ ಪ್ರಭುತ್ವವೂ ಕಾರ್ಯ ನಿರ್ವಹಿಸುತ್ತಿಲ್ಲ. ವ್ಯಾಪಕ ಅರಾಜಕತೆಗಳಿಗೆ ಇಡೀ ಮಣಿಪುರವನ್ನು ಈಡು ಮಾಡಲಾಗಿದೆ. ನಂತರ ಮಣಿಪುರವನ್ನು ಸಂಪೂರ್ಣವಾಗಿ ಭಾರೀ ಕಾರ್ಪೊರೇಟ್ಗಳ ಹಿಡಿತಕ್ಕೆ ತೆಗೆದುಕೊಂಡು ಹೋಗುವ ಫ್ಯಾಶಿಸ್ಟ್ ನಡೆಗಳಾಗಿವೆ ಇವು. ಆಗ ಮಣಿಪುರ ಮೈತೈ ಜನಾಂಗೀಯ ಕೂಟವೂ ಸೇರಿದಂತೆ ಯಾರಿಗೂ ಇಲ್ಲದಂತಹ ಪರಿಸ್ಥಿತಿ ಏರ್ಪಡುತ್ತದೆ ಎಂಬ ಕಟುಸತ್ಯವನ್ನು ಇವರು ಗ್ರಹಿಸುತ್ತಿಲ್ಲ.

ಅದಕ್ಕಾಗಿ ಕುಕಿ ಮೊದಲಾದ ಜನಾಂಗೀಯ ಕೂಟಗಳನ್ನು ಭಾಷಿಕವಾಗಿ, ಪ್ರಾದೇಶಿಕವಾಗಿ, ದೇಶೀಯವಾಗಿ, ಜನಾಂಗೀಯವಾಗಿ ಅನ್ಯರೆಂದು, ಮಾದಕ ಕಳ್ಳಸಾಗಣೆದಾರರೆಂದು, ಮಣಿಪುರ ಮೈತೈಗಳಿಗೆ ಮಾತ್ರ ಸೇರಿದ್ದೆಂದು, ಇತರರು ಮಣಿಪುರ ತೊರೆಯಬೇಕು ಇತ್ಯಾದಿ ಭಾವನೆಗಳು ಮೈತೈ ಜನಾಂಗೀಯ ಕೂಟದ ನಡುವೆ ಮೊದಲಿನಿಂದಲೂ ಬಲವಾಗಿ ಬಿತ್ತುತ್ತಾ ಬೆಳೆಸುತ್ತಾ ಬರಲಾಗಿದೆ. ಇವೆಲ್ಲದರ ಪರಿಣಾಮವಾಗಿ ಮಣಿಪುರದಲ್ಲಿ ಈಗ ಕುಕಿಗಳ ಮಾರಣಹೋಮ ನಡೆಯುತ್ತಿದೆ. ನೂರಾರು ಕಗ್ಗೊಲೆಗಳು ಹಾಗೂ ನೂರಾರು ಅತ್ಯಾಚಾರಗಳು ನಡೆದಿವೆ. ನೂರಾರು ಹಳ್ಳಿಗಳನ್ನು ನಾಶಮಾಡಲಾಗಿದೆ.

‘‘ಭಾರತದ ಡಿಎನ್ಎಯಲ್ಲಿ ಪ್ರಜಾಪ್ರಭುತ್ವ ಮಿಳಿತವಾಗಿ ಸೇರಿದೆ. ನಾವು ಪ್ರಜಾಪ್ರಭುತ್ವವನ್ನು ಉಸಿರಾಡುತ್ತಾ ಜೀವಿಸುತ್ತಿದ್ದೇವೆ. ನಮ್ಮ ದೇಶದ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜನರಿಗೂ ಸಮಾನ ಅವಕಾಶಗಳಿವೆ, ಪ್ರಜಾಪ್ರಭುತ್ವ ನಮ್ಮ ಶಕ್ತಿ’’ ಎಂದೆಲ್ಲ ಅಮೆರಿಕದಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳಬೇಕಾಗಿ ಬಂದ ತನ್ನ ಅಧಿಕಾರಾವಧಿಯ ಮೊದಲ ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನಿ ಹೇಳಿದ್ದರು. ಪ್ರಧಾನಿಯ ಮಾತುಗಳು ಎಷ್ಟೊಂದು ಪೊಳ್ಳಿನದು ಮತ್ತು ಹುಸಿ ಪಟಾಕಿಗಳು ಎಂಬುದು ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು ಅತ್ಯಲ್ಪ ಕಾಲದಲ್ಲೇ ಜಗತ್ತಿನೆದುರು ಮತ್ತೊಮ್ಮೆ ಬಿಚ್ಚಿಟ್ಟಿದೆ.

ಈಗ ಅನುಮೋದನೆಗೊಂಡ ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆ ೨೦೨೩ರ ಪ್ರಕಾರವೇ ನೋಡಿದರೆ ಮಣಿಪುರ, ತ್ರಿಪುರಾ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಂನಂತಹ ರಾಜ್ಯಗಳ ಬಹುತೇಕ ಪ್ರದೇಶವು ಯೂನಿಯನ್ ಸರಕಾರದ ಹಿಡಿತಕ್ಕೆ ಹೋಗುತ್ತವೆ. ಈ ರಾಜ್ಯಗಳ ಬಹುತೇಕ ಭಾಗಗಳು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಾಗಿವೆ. ಈಶಾನ್ಯ ಇಂಡಿಯಾದ ಮಣಿಪುರದ ಶೇ. ೭೪ರಷ್ಟು, ಮಿಜೋರಾಂನ ಶೇ. ೮೫ರಷ್ಟು, ನಾಗಾಲ್ಯಾಂಡ್ನ ಶೇ. ೭೪ರಷ್ಟು, ಅರುಣಾಚಲ ಪ್ರದೇಶದ ಶೇ. ೭೯ರಷ್ಟು, ಮೇಘಾಲಯದ ಶೇ. ೭೯ರಷ್ಟು, ತ್ರಿಪುರಾದ ಶೇ. ೭೪ರಷ್ಟು ಭೂಪ್ರದೇಶಗಳು ಅರಣ್ಯ ಪ್ರದೇಶಗಳಾಗಿವೆ. ಅಷ್ಟೇ ಅಲ್ಲದೆ ಈ ಪ್ರದೇಶಗಳು ಪಶ್ಚಿಮ ಘಟ್ಟ ಹಾಗೂ ಪೂರ್ವ ಘಟ್ಟಗಳಂತೆ ಜೀವ ವೈವಿಧ್ಯಗಳ ಪ್ರಮುಖ ಪ್ರದೇಶಗಳಾಗಿವೆ. ಈ ರಾಜ್ಯಗಳು ಅಂತರ್ರಾಷ್ಟ್ರೀಯ ಗಡಿಗಳನ್ನು ಹೊಂದಿವೆ. ಹೊಸ ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆಯ ಪ್ರಕಾರ ಅಂತರ್ರಾಷ್ಟ್ರೀಯ ಗಡಿಯಿಂದ ನೂರು ಕಿ.ಮೀ.ಗಳಷ್ಟು ಪ್ರದೇಶಗಳನ್ನು ಈ ಕಾಯ್ದೆಯಿಂದ ಹೊರಗಿರಿಸಿದ್ದಲ್ಲದೆ ಅಷ್ಟು ಪ್ರದೇಶದ ಹಿಡಿತವನ್ನು ರಾಜ್ಯಸರಕಾರಗಳ ಬದಲಾಗಿ ನೇರವಾಗಿ ಯೂನಿಯನ್ ಸರಕಾರಕ್ಕೆ ನೀಡಿದೆ. ಅದಕ್ಕೆ ಸೇನಾತ್ಮಕ ಹಾಗೂ ದೇಶದ ರಕ್ಷಣಾತ್ಮಕ ಕಾರಣಗಳನ್ನು ಮುಂದೊಡ್ಡಲಾಗಿದೆ. ಗಡಿಯಿಂದ ನೂರು ಕಿ.ಮೀ. ಎಂದಾಗ ಇಂತಹ ಪುಟ್ಟ ರಾಜ್ಯಗಳ ಬಹುಪಾಲು ಪ್ರದೇಶಗಳು ಅದರೊಳಗೇ ಸೇರಿಬಿಡುತ್ತವೆ. ಇದು ಸಹಜವಾಗಿ ಮುಂದಿನ ದಿನಗಳಲ್ಲಿ ಆ ಪ್ರದೇಶಗಳಲ್ಲಿ ನೆಲೆಗಳನ್ನು ಹೊಂದಿರುವ ನೂರೆಂಟು ಬುಡಕಟ್ಟು ಜನಾಂಗಗಳಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಬಾಧಿಸುತ್ತಾ ಅವರ ಬದುಕುವ ಹಕ್ಕುಗಳಿಗೇ ಗಂಡಾಂತರ ತಂದಿಡುತ್ತದೆ. ಮಣಿಪುರದ ಇಂದಿನ ಪರಿಸ್ಥಿತಿ ನಾಳಿನ ಈ ರಾಜ್ಯಗಳ ಪರಿಸ್ಥಿತಿಯಾಗುತ್ತದೆ. ಜೊತೆಗೆ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಮಧ್ಯ ಭಾರತದ ರಾಜ್ಯಗಳು ಹಾಗೂ ದಕ್ಷಿಣ ಭಾರತದ ರಾಜ್ಯಗಳ ಆದಿವಾಸಿ/ಬುಡಕಟ್ಟು ಹಾಗೂ ಇನ್ನಿತರ ಬಡ ರೈತಾಪಿಗಳ ಬದುಕಿನ ಹಕ್ಕುಗಳು ಹಾಗೂ ಅರಣ್ಯಪ್ರದೇಶಗಳ ಮೇಲೆ ದಾಳಿ ಮಾಡುತ್ತದೆ.

ಈಗ ಅನುಮೋದನೆಗೊಂಡಿರುವ ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆ ೨೦೨೩ ಈ ಹಿಂದಿನ ಅರಣ್ಯ ಕಾಯ್ದೆಗಳಲ್ಲಿದ್ದ ರಕ್ಷಣಾತ್ಮಕ ಅಂಶಗಳಾದ ಅರಣ್ಯ ಪ್ರದೇಶಗಳಲ್ಲಿ ಯೂನಿಯನ್ ಸರಕಾರ/ರಾಜ್ಯಸರಕಾರ ಬಯಸಿದ ಯಾವುದೇ ಅಭಿವೃದ್ಧಿ ಹೆಸರಿನ ಚಟುವಟಿಕೆಗಳಿಗೆ ಗ್ರಾಮ ಸಭೆಗಳ ಪೂರ್ವಾನುಮತಿ, ಪರಿಸರ ಇಲಾಖೆಯ ಅನುಮತಿಯ ಅಗತ್ಯವನ್ನೇ ರದ್ದುಪಡಿಸಿದೆ. ಜೊತೆಗೆ ರಾಜ್ಯಸರಕಾರಗಳಿಗೆ ಆಯಾ ರಾಜ್ಯದ ಅರಣ್ಯ ಪ್ರದೇಶಗಳ ಮೇಲಿದ್ದ ಅಧಿಕಾರವನ್ನು ಮೊಟಕುಗೊಳಿಸಿ ದೇಶದ ಅರಣ್ಯ ಪ್ರದೇಶಗಳನ್ನು ಯೂನಿಯನ್ ಸರಕಾರದ ನೇರ ಹಿಡಿತಕ್ಕೆ ಒಪ್ಪಿಸುತ್ತದೆ. ದೇಶದ ಒಕ್ಕೂಟ ತತ್ವಕ್ಕೆ ಈಗಿದ್ದ ಬಲವೂ ಇಲ್ಲದಂತಾಗುತ್ತದೆ.

ಇದಷ್ಟೇ ಅಲ್ಲದೆ ದೇಶದ ಅರಣ್ಯ ಪ್ರದೇಶಗಳನ್ನು ಪರಿಸರ(ಇಕೋ) ಪ್ರವಾಸೋದ್ದಿಮೆ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಮೂಲಸೌಕರ್ಯಗಳನ್ನು ನಿರ್ಮಿಸಲು ಮುಕ್ತಗೊಳಿಸಿ ಇಟ್ಟಿದೆ. ಯೂನಿಯನ್ ಸರಕಾರ ಬಯಸಿದಲ್ಲಿ ದೇಶದ ಯಾವುದೇ ಅರಣ್ಯ ಪ್ರದೇಶಗಳನ್ನು ಪ್ರವಾಸೋದ್ದಿಮೆ, ರಸ್ತೆ, ಪ್ರಾಣಿ ಸಂಗ್ರಹಾಲಯಗಳಿಗೆ, ಸಿಲ್ವಿಕಲ್ಚರ್ ಎಂಬ ಖಾಸಗೀ ಅರಣ್ಯೀಕರಣದ ಯೋಜನೆಗಳಿಗೆ ಈ ಮಸೂದೆಯು ತೆರೆದಿಟ್ಟಿದೆ. ಜೊತೆಗೆ ‘ದೇಶದ ಅಗತ್ಯತೆಗೆ’ ಎಂಬ ಹೆಸರಿನಲ್ಲಿ ಯೂನಿಯನ್ ಸರಕಾರದ ಅನುಮತಿಯೊಂದಿಗೆ ದೇಶದ ಯಾವುದೇ ಭಾಗದಲ್ಲಿ ಭಾರೀ ಗಣಿಗಾರಿಕೆ ಮೊದಲಾದ ಕಾರ್ಯಗಳಿಗೂ ಕೂಡ ಅರಣ್ಯ ಪ್ರದೇಶಗಳನ್ನು ತೆರೆದಿಡುವ ಕಾರ್ಯವನ್ನು ಈ ಮಸೂದೆಯು ಮಾಡುತ್ತದೆ. ಗಣಿಗಾರಿಕೆ ಎಂಬ ಪದ ಈ ಮಸೂದೆಯಲ್ಲಿ ಇಲ್ಲದೆ ಹೋದರೂ ‘ದೇಶದ ಅಗತ್ಯತೆ’ ಎಂಬ ಪದದೊಂದಿಗೆ ಅರಣ್ಯ ಪ್ರದೇಶಗಳನ್ನು ತೆರೆದಿಡಲು ಯೂನಿಯನ್ ಸರಕಾರಕ್ಕೆ ನೇರ ಅಧಿಕಾರವನ್ನು ಈ ಮಸೂದೆಯು ನೀಡುತ್ತದೆಯಾದ್ದರಿಂದ ಅದನ್ನು ಭಾರೀ ಮಟ್ಟದ ಗಣಿಗಾರಿಕೆಯೂ ಸೇರಿದಂತೆ ಅವರು ಬಯಸಿದ ಎಲ್ಲಾ ಚಟುವಟಿಕೆಗಳಿಗೆ ಎಂದೇ ಅರ್ಥೈಸಬೇಕಾಗುತ್ತದೆ. ಯಾಕೆಂದರೆ ಅಗತ್ಯತೆಯನ್ನು ನಿರ್ದಿಷ್ಟವಾಗಿ ಏನು ಎನ್ನುವುದನ್ನು ಈ ಮಸೂದೆಯಲ್ಲಿ ಹೇಳಿಲ್ಲ. ಅದಕ್ಕೆ ರಾಜ್ಯ ಸರಕಾರಗಳ ಅನುಮತಿ ಕೂಡ ಅಗತ್ಯವಿಲ್ಲದಂತೆ ಈ ಮಸೂದೆಯ ಮೂಲಕ ಮಾಡಲಾಗಿದೆ.

ರಾಜ್ಯಗಳಿಗೆ, ಯೂನಿಯನ್ ಆಡಳಿತದ ಪ್ರದೇಶಗಳಿಗೆ, ದೇಶದ ಯಾವುದೇ ಸರಕಾರಗಳ ಅಧೀನದ ಪ್ರಾಧಿಕಾರ/ಸಂಸ್ಥೆಗಳಿಗೆ ಅರಣ್ಯ ಪ್ರದೇಶಗಳಲ್ಲಿ ಅರಣ್ಯೇತರವೂ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸುವ ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಈ ಮಸೂದೆಯು ಯೂನಿಯನ್ ಸರಕಾರಕ್ಕೆ ನೀಡಿದೆ. ಹಾಗಾದಾಗ ಸಹಜವಾಗಿ ಯೂನಿಯನ್ ಸರಕಾರದ ಮೇಲೆ ಹಿಡಿತ ಹೊಂದುವ ಭಾರೀ ಕಾರ್ಪೊರೇಟ್ ಕೂಟಗಳ ಆಣತಿಯಂತೆಯೇ ಎಲ್ಲವೂ ಜಾರಿಯಾಗುತ್ತಾ ಹೋಗುತ್ತವೆ. ಈ ಮಸೂದೆಯು ದೇಶದ ಅರಣ್ಯ ಪ್ರದೇಶಗಳ ಮೇಲೆ ಯೂನಿಯನ್ ಸರಕಾರದ ಮೂಲಕ ಭಾರೀ ಕಾರ್ಪೊರೇಟ್ಗಳು ಏಕಸ್ವಾಮ್ಯ ಸಾಧಿಸಲು ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಮೊದಲಿನ ಕಾಯ್ದೆಯಲ್ಲಿ ದಾಖಲೆಗಾಗಿಯಾದರೂ ಇದ್ದ ಪರಿಸರ ಅರಣ್ಯ ಹಾಗೂ ಪರಿಸರ ಇಲಾಖೆ, ರಾಜ್ಯಗಳ ಅನುಮತಿ, ಗ್ರಾಮಸಭೆಗಳ ಅನುಮತಿಗಳ ಅಗತ್ಯವನ್ನೇ ಮೂಲಭೂತವಾಗಿ ಇಲ್ಲವಾಗಿಸಿದೆ. ಮೋದಿ ಸರಕಾರ ಬಂದ ನಂತರ ಹಿಂದೆ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಅದರ ಇದ್ದ ಹಲ್ಲುಗಳನ್ನೂ ಮೊಂಡಾಗಿಸಲಾಗಿತ್ತು. ಈಗಂತೂ ಆ ಮೊಂಡು ಹಲ್ಲುಗಳನ್ನೂ ಕೂಡ ಈ ಮಸೂದೆಯ ಮೂಲಕ ಕಿತ್ತು ಹಾಕಿದಂತಾಗಿದೆ. ಜೊತೆಗೆ ಅರಣ್ಯ ಹಕ್ಕು ಕಾಯ್ದೆ ೨೦೦೬ ಅಲ್ಲದೆ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಅರಣ್ಯ ಪ್ರದೇಶವೆಂದು ಗುರುತಿಸಲು ಇರುವ ಮಾನದಂಡಗಳು ಹಾಗೂ ರಕ್ಷಣೆಯ ಕುರಿತಾದ ತೀರ್ಪು ಕೂಡ ಈ ಮಸೂದೆಯ ಮೂಲಕ ನಿವಾರಿಸಲಾಗಿದೆ.

ಜೊತೆಗೆ ದೇಶದ ಯೂನಿಯನ್ ಹಾಗೂ ರಾಜ್ಯ ಸರಕಾರಗಳ ಅಧೀನದಲ್ಲಿ ಇರುವ ಹಾಗೂ ಅಧೀನದಲ್ಲಿ ಇಲ್ಲದಿರುವ ಸೇರಿದಂತೆ ಯಾವುದೇ ಅರಣ್ಯ ಪ್ರದೇಶವನ್ನು ಭೋಗ್ಯಕ್ಕೆ ಇಡಲು/ ವಹಿಸಿಕೊಡಲು ಯೂನಿಯನ್ ಸರಕಾರದ ಪೂರ್ವಾನುಮತಿಯೊಂದಿಗೆ ಸರಕಾರಗಳಿಗೆ ಈ ಮಸೂದೆಯು ಅನುವು ಮಾಡಿಕೊಟ್ಟಿದೆ. ಇದು ಕೂಡ ಅರಣ್ಯ ಪ್ರದೇಶಗಳ ಖಾಸಗೀಕರಣದ ಭಾಗವಾಗಿ ವರ್ತಿಸುತ್ತದೆ. ಇದು ಅಕ್ಷರಶಃ ಜಾರಿಯಾದರೆ ಹಕ್ಕುಪತ್ರ ಹೊಂದದ ತುಂಡು ಭೂಮಿಗಳಲ್ಲಿ ಕೃಷಿ ನಡೆಸುತ್ತಾ ಜೀವನ ಕಟ್ಟಿಕೊಂಡಿರುವ ಕೋಟ್ಯಂತರ ಜನಸಾಮಾನ್ಯರ ಮೇಲೆ ಹೇಗೆಲ್ಲಾ ಪರಿಣಮಿಸಬಹುದು ಎನ್ನುವುದನ್ನು ಊಹಿಸಲೇ ಕಷ್ಟವಾಗುತ್ತದೆ.

ಕರ್ನಾಟಕದ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಪ್ರದೇಶಗಳಲ್ಲಿ ನೆಲೆ ಕಟ್ಟಿಕೊಂಡಿರುವ ಹತ್ತಾರು ಸಾವಿರ ಆದಿವಾಸಿ ಜನಸಮೂಹಗಳ ಬದುಕುಗಳ ಮೇಲೆ ನೇರವಾಗಿ ಪರಿಣಾಮ ಬೀರುವಂತಹ ಗಂಭೀರ ವಿಚಾರ ಇದಾಗಿದೆ. ಒಂದು ವೇಳೆ ರಾಜ್ಯ ಸರಕಾರ ಬಯಸಿದರೂ ಯೂನಿಯನ್ ಸರಕಾರದ ಅನುಮತಿ ಇಲ್ಲದೆ ಹೋದರೆ ರಾಜ್ಯ ಸರಕಾರ ಈ ಎಲ್ಲಾ ಪ್ರದೇಶಗಳ ರೈತಾಪಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ಏರ್ಪಡುತ್ತದೆ. ಈ ಹಿಂದೆ ಅರಣ್ಯ ಹಕ್ಕು ಕಾನೂನಿನಡಿ ಕೂಡ ಆದಿವಾಸಿ ಬುಡಕಟ್ಟು ಹಾಗೂ ಇನ್ನಿತರ ಬಡ ರೈತಾಪಿ ಜನಸಮೂಹಗಳು ಆ ಕಾಯ್ದೆಯಡಿ ಇರುವ ನಿರ್ಬಂಧಗಳು ಹಾಗೂ ಅಧಿಕಾರಶಾಹಿಗಳ ಜನವಿರೋಧಿತನಗಳಿಂದಾಗಿ ಹಕ್ಕುಪತ್ರಗಳನ್ನು ಪಡೆಯಲು ಸಾಧ್ಯವಾಗದ ದುಸ್ಥಿತಿಗಳಿಗೆ ಈಡಾಗಿರುವುದನ್ನು ನಾವು ನೋಡಬಹುದು. ಇವೆಲ್ಲಾ ಸೇರಿ ಆದಿವಾಸಿ/ಬುಡಕಟ್ಟು ಇನ್ನಿತರ ಜನಸಾಮಾನ್ಯರು ತಮ್ಮ ಬದುಕಿನ ನೆಲೆಗಳನ್ನೇ ಶಾಶ್ವತವಾಗಿ ಕಳೆದುಕೊಳ್ಳುವಂತೆಮಾಡುತ್ತವೆ. ಜೊತೆಗೆ ಅರಣ್ಯ ಪ್ರದೇಶಗಳ ಕಾರ್ಪೊರೇಟೀಕರಣ ತೀವ್ರವಾಗುತ್ತಾ ಅರಣ್ಯ ಪ್ರದೇಶಗಳ ವಿನಾಶ ಅತ್ಯಂತ ವೇಗವನ್ನು ಪಡೆಯುತ್ತದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ವಾತಾವರಣಕ್ಕೆ ಇಂಗಾಲ ಬಿಡುಗಡೆಯ ಪ್ರಮಾಣದ ಭಾರೀ ಹೆಚ್ಚಳಕ್ಕೆ ಮೂಲ ಕಾರಣವಾಗಿರುವ ದೊಡ್ಡ ಜಾಗತಿಕ ಕಾರ್ಪೊರೇಟುಗಳೇ ದೇಶದ ಅರಣ್ಯ ಪ್ರದೇಶಗಳನ್ನು ನಿರ್ವಹಿಸುವಂತಾದರೆ ಪರಿಣಾಮ ಏನಾದೀತು.

ಅರಣ್ಯ ಭೋಗ್ಯಕ್ಕೆ ಬಿಡುವುದು ಎಂದಾಗ ಇದು ಭಾರೀ ಕಾರ್ಪೊರೇಟ್ಗಳಿಗೆ ಹತ್ತಾರು, ನೂರಾರು ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶಗಳನ್ನು ಹತ್ತಾರು ವರ್ಷಗಳವರೆಗೆ ವಹಿಸಿಕೊಟ್ಟು ಮತ್ತೆ ನವೀಕರಿಸುತ್ತಾ ಹೋಗುವ ಭಾರೀ ಮೋಸದ ಪ್ರಹಸನವಾಗುವುದರಲ್ಲಿ ಅನುಮಾನ ಬೇಕಿಲ್ಲ. ಇವೆಲ್ಲವುಗಳನ್ನು ಅರಣ್ಯ ರಕ್ಷಣೆ ಹಾಗೂ ಬೆಳೆಸುವಿಕೆಯಲ್ಲಿ ‘ಖಾಸಗಿ ಸಹಭಾಗಿತ್ವ’ ಎಂಬ ಆಕರ್ಷಕ ಪದಪುಂಜದಡಿ ಜನಸಾಮಾನ್ಯರನ್ನು ಸಿಲುಕಿಸುತ್ತಾ ಮಾಡಲಾಗುತ್ತದೆ. ಕಾರ್ಪೊರೇಟ್ ಪರಿಸರವಾದಿಗಳು ಹೇಗಿದ್ದರೂ ಇದರ ಪರವಾಗಿ ತಮ್ಮ ಪ್ರಚಾರಾಂದೋಲನ ಇನ್ನಿತರ ಕಾರ್ಯಕಲಾಪ ಹಮ್ಮಿಕೊಳ್ಳುತ್ತಾರೆ.

ಪರಿಸರ ಪ್ರವಾಸೋದ್ದಿಮೆ ಎಂಬುದು ಆಕರ್ಷಕ ಪದವಾಗಿದ್ದರೂ ಇದರ ಸಾರ ಬಹಳ ದೇಶದ ಜನಸಾಮಾನ್ಯರಿಗೆ ಅದರಲ್ಲೂ ಆ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಹಲವು ಜನಸಮುದಾಯಗಳಿಗೆ ಕರಾಳವಾಗಿರುತ್ತದೆ. ಪರಸರ ಪ್ರವಾಸೋದ್ದಿಮೆಯೆಂದಾಗ ಪಂಚತಾರಾ ಸೌಲಭ್ಯಗಳಿರುವ ರೆಸಾರ್ಟ್ಗಳು, ಆಧುನಿಕ ಸೌಲಭ್ಯಗಳು, ಅಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಗಳು, ನುಣುಪಾದ ರಸ್ತೆಗಳು, ಸಫಾರಿ ವ್ಯವಸ್ಥೆಗಳು, ಟ್ರಕ್ಕಿಂಗ್ ಹೆಸರಿನ ಮೋಜುಗಳು, ಕ್ಯಾಂಪ್ ಫೈರ್ಗಳು, ಮದ್ಯ ಮೋಜು ಮಸ್ತಿಗಳಿಗೆ ಸೌಲಭ್ಯಗಳು, ಹೈಟೆಕ್ ವೇಶ್ಯಾವಾಟಿಕೆಗಳು, ಮಾದಕ ವಸ್ತುಗಳ ಬಳಕೆಗಳು, ರ್ಯಾಪ್ಟಿಂಗ್, ಬೋಟಿಂಗ್, ಸಾಹಸಗಳ ಹೆಸರಿನಲ್ಲಿ ನದಿಗಳನ್ನು ಮುಕ್ತವಾಗಿಸುವುದು ಇವೆಲ್ಲವೂ ಸಹಜವಾಗಿಯೇ ಸೇರಿಬಿಡುತ್ತವೆ. ಪ್ರವಾಸೋದ್ದಿಮೆಯ ಮೇಲೆ ಹಿಡಿತ ಹೊಂದಿರುವ ಭಾರೀ ಕಾರ್ಪೊರೇಟ್ಗಳ ಹಿಡಿತಕ್ಕೆ ಇಂತಹ ಪ್ರದೇಶಗಳು ಸಹಜವಾಗಿ ಸೇರಿಬಿಡುತ್ತವೆ.

ಈ ಹಿಂದೆ ಇದ್ದ ಅರಣ್ಯ ಹಾಗೂ ಪರಿಸರ ಕಾನೂನುಗಳನ್ನು ದೊಡ್ಡ ಮಟ್ಟದಲ್ಲಿ ಉಲ್ಲಂಘನೆ ಮಾಡಿ ನಾಗರಹೊಳೆ, ಬಂಡಿಪುರ, ಕಾಳಿ ನದಿ ಕಣಿವೆ, ಶರಾವತಿ ನದಿ ಕಣಿವೆ ಮೊದಲಾದ ಪ್ರದೇಶಗಳಲ್ಲಿ ಹಲವಾರು ಪಂಚತಾರಾ ರೆಸಾರ್ಟ್ಗಳು ಆಕರ್ಷಕ ಹಾಗೂ ಪಂಚಿಂಗ್ ಹೆಸರುಗಳೊಂದಿಗೆ ಈಗಾಗಲೇ ಕಾರ್ಯಾಚರಿಸುತ್ತಾ ಬರುತ್ತಿವೆ. ಅವುಗಳು ಮಾಡುತ್ತಿರುವ ಪರಿಸರ ಹಾಗೂ ಆ ಭಾಗದ ಜನಜೀವನದ ಮೇಲಿನ ಹಾನಿಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಈ ಹೊಸ ತಿದ್ದುಪಡಿ ಮಸೂದೆಯನ್ನು ಉಪಯೋಗಿಸಿಕೊಂಡು ಭಾರೀ ಕಾರ್ಪೊರೇಟ್ಗಳು ನಮ್ಮ ದೇಶದ ಅರಣ್ಯ ಪ್ರದೇಶಗಳನ್ನು ಹೇಗೆಲ್ಲಾ ಬಳಸುತ್ತಾ ಹದಗೆಡಿಸಬಹುದು ಎನ್ನುವುದು ಅರ್ಥವಾಗುತ್ತದೆ.

ಈ ತಿದ್ದುಪಡಿ ಮಸೂದೆಯ ಕರಡನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದ್ದರೂ ಸಾರ್ವಜನಿಕರಿಂದ ಬಂದ ದೂರುಗಳು, ತಕರಾರುಗಳು ಹಾಗೂ ತಿದ್ದುಪಡಿಗಳನ್ನು ಸರಕಾರ ಬಹಿರಂಗಗೊಳಿಸಲಿಲ್ಲ. ಸಂಸತ್ತಿನಲ್ಲಿ ಕೂಡ ಇವುಗಳು ಚರ್ಚೆಯಾಗದಂತೆ ಎಲ್ಲಾ ಪಕ್ಷಗಳು ಸೇರಿ ಬೇರೆ ಬೇರೆ ನೆಪಗಳಲ್ಲಿ ವರ್ತಿಸಿದವು. ಹಾಗಾಗಿ ಸಾರ್ವಜನಿಕ ವಲಯದಲ್ಲಿ ವಿರೋಧಗಳು ಬಂದಿದ್ದರೂ ಯೂನಿಯನ್ ಸರಕಾರವಾಗಲಿ ಜಂಟಿ ಸಂಸದೀಯ ಸಮಿತಿಯಾಗಲೀ ತಲೆಗೇ ಹಾಕಿಕೊಳ್ಳದೆ ಇಂತಹ ಜನಸಾಮಾನ್ಯ ವಿರೋಧಿ ಮತ್ತು ಅರಣ್ಯ ಹಾಗೂ ಪರಿಸರ ವಿರೋಧಿ ಮಸೂದೆಯು ಅನುಮೋದನೆಗೊಂಡು ಕಾಯ್ದೆಯಾಗಿ ದೇಶದ ಜನರ ಮೇಲೆ ಎರಗಲು ಸಿದ್ಧವಾಗಿದೆ.

ತಕ್ಷಣಕ್ಕೆ ರಾಷ್ಟ್ರಪತಿಗಳು ಇದಕ್ಕೆ ತಮ್ಮ ಅಂಕಿತ ಹಾಕದಂತೆ ಒತ್ತಾಯ ಮಾಡುವುದೂ ಸೇರಿದಂತೆ ಇದರ ವಿರುದ್ಧ ಜನಾಂದೋಲನ ರೂಪುಗೊಂಡು ಜನರು ಹಾಗೂ ಪರಿಸರಕ್ಕೆ ಭಾರೀ ಮಾರಕವನ್ನುಂಟುಮಾಡುವ ಈ ಕಾಯ್ದೆಯನ್ನು ರದ್ದಾಗುವಂತೆ ನೋಡಿಕೊಳ್ಳದಿದ್ದಲ್ಲಿ ದೇಶಾದ್ಯಂತ ಮಣಿಪುರಗಳಂತಹ ಹಲವಾರು ಘಟನೆಗಳು ಹುಟ್ಟಿಕೊಳ್ಳಲಿವೆ.

ಮಿಂಚಂಚೆ: nandakumarnandana67@gmail.com

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ನಂದಕುಮಾರ್ ಕುಂಬ್ರಿಉಬ್ಬು

contributor

Similar News