ಸಂಸತ್ತಿನಲ್ಲಿ ಮಾಯವಾಗುತ್ತಿರುವ ಮುಸ್ಲಿಮ್ ಸದಸ್ಯರು
✍️ ಝಿಯಾಉಸ್ಸಲಾಂ - thehindu.com
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕುರಿತು ಚರ್ಚೆಯ ಸಂದರ್ಭದಲ್ಲಿ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರು ಮಹಿಳೆಯರಿಗೆ ಶೇ.33 ಮೀಸಲಾತಿಯೊಳಗೆ ಮುಸ್ಲಿಮ್ ಮಹಿಳೆಯರಿಗಾಗಿ ಕೋಟಾ ಹೊಂದುವ ಅಗತ್ಯದ ಮೇಲೆ ಬೆಳಕು ಚೆಲ್ಲಿದ್ದರು. ಆದರೆ ಸದನದಲ್ಲಿಯ ಕೋಲಾಹಲದ ನಡುವೆ ಭಾರತದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸುವ ಅಗತ್ಯವು ಕೇವಲ ಹೇಳಿಕೆಯಾಗಿಯೇ ಗಾಳಿಯಲ್ಲಿ ತೂರಿಹೋಯಿತು. ಈವರೆಗಿನ 17 ಲೋಕಸಭೆಗಳಲ್ಲಿ ಮುಸ್ಲಿಮ್ ಮಹಿಳೆಯರು ಕೈಬೆರಳೆಣಿಕೆಯ ಸಂಖ್ಯೆಯಷ್ಟಿದ್ದಾರೆ. ಈವರೆಗೆ ಲೋಕಸಭೆಗೆ ಒಟ್ಟು 690 ಮಹಿಳೆಯರು ಆಯ್ಕೆಯಾಗಿದ್ದಾರೆ ಮತ್ತು ಅವರ ಪೈಕಿ ಕೇವಲ 25 ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದೂ ಉವೈಸಿ ಬೆಟ್ಟು ಮಾಡಿದ್ದರು.
ಕ್ಷೀಣಿಸುತ್ತಿರುವ ಪ್ರಾತಿನಿಧ್ಯ
ಮುಸ್ಲಿಮ್ ಮಹಿಳೆಯರು ಮಾತ್ರವಲ್ಲ, ಇಡೀ ಸಮುದಾಯವೇ ಲೋಕಸಭೆಯಲ್ಲಿ ಅತ್ಯಂತ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದೆ. ಸ್ವಾತಂತ್ರ್ಯಾನಂತರ ಮುಸ್ಲಿಮ್ ಪ್ರಾತಿನಿಧ್ಯವು ದೇಶದ ಜನಸಂಖ್ಯೆಯಲ್ಲಿ ಸಮುದಾಯದ ಪಾಲಿಗೆ ಹೋಲಿಸಿದರೆ ತೀರ ಕಡಿಮೆಯಿದೆ. 2011ರ ಹಿಂದಿನ ಜನಗಣತಿಯಂತೆ, ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ.14ಕ್ಕಿಂತ ಕೊಂಚವೇ ಅಧಿಕವಿದೆ, ಆದಾಗ್ಯೂ ಅಧಿಕಾರದ ಮೊಗಸಾಲೆಗಳಲ್ಲಿಯ ಪಿಸುಮಾತುಗಳು ಮತ್ತು ಹಲವು ಬಲಪಂಥೀಯ ನಾಯಕರ ಅಬ್ಬರದ ಚುನಾವಣೆ ಪ್ರಚಾರಗಳು ಈ ಸಂಖ್ಯೆಯನ್ನು ಉತ್ಪ್ರೇಕ್ಷಿಸಿವೆ. ಮುಸ್ಲಿಮ್ ಜನಸಂಖ್ಯೆಯ ಸ್ಫೋಟದ ಮಿಥ್ಯೆಯನ್ನು ಶಾಶ್ವತವಾಗಿಸುವ ಸ್ಪಷ್ಟ ಪ್ರಯತ್ನದಲ್ಲಿ ಕೆಲವರು ಈ ಸಂಖ್ಯೆಯನ್ನು ಶೇ.20ರ ಮಟ್ಟಕ್ಕೂ ತಲುಪಿಸಿದ್ದಾರೆ.
ಹಿಂದಿನ ಜನಗಣತಿಯ ಅಂಕಿಅಂಶಗಳನ್ನೇ ಪರಿಗಣಿಸಿದರೂ ಅನುಪಾತದ ಪ್ರಾತಿನಿಧ್ಯದ ತತ್ತ್ವದಂತೆ ಮುಸ್ಲಿಮ್ ಸಮುದಾಯವು ಲೋಕಸಭೆಯಲ್ಲಿ ಕನಿಷ್ಠ 73 ಸಂಸದರನ್ನು ಹೊಂದಿರಬೇಕು. ಆದರೆ ಸಂಖ್ಯೆ ಎಂದಿಗೂ ಈ ಮಟ್ಟವನ್ನು ತಲುಪಿಲ್ಲ. 1980ರಲ್ಲಿ ಎಲ್ಲ ಪಕ್ಷಗಳಿಂದ ಒಟ್ಟು 49 ಮುಸ್ಲಿಮ್ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗಿದ್ದೇ ಈವರೆಗಿನ ಗರಿಷ್ಠ ಪ್ರಾತಿನಿಧ್ಯವಾಗಿದೆ. ಅದೇ ವರ್ಷ ಜನಸಂಘವು ಇತಿಹಾಸದ ಪುಟವನ್ನು ಸೇರಿತ್ತು ಮತ್ತು ಬಿಜೆಪಿ ಆಗ ತಾನೇ ಹುಟ್ಟಿತ್ತು.
ವಾಸ್ತವವು ಕಠೋರವಾಗಿದೆ. ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದಾಗಿನಿಂದ ಮುಸ್ಲಿಮ್ ಸಮುದಾಯವು ಲೋಕಸಭೆಯಲ್ಲಿ ಸರಾಸರಿ ಕೇವಲ 27 ಸಂಸದರನ್ನು ಹೊಂದಿದೆ. 2014ರಲ್ಲಿ ನರೇಂದ್ರ ಮೋದಿ ಎಂಬ ಚಂಡಮಾರುತವು ಎಲ್ಲವನ್ನೂ ಆಪೋಷನ ತೆಗೆದುಕೊಂಡಿದ್ದಾಗ ಲೋಕಸಭೆಯಲ್ಲಿ ಮುಸ್ಲಿಮ್ ಸಂಸದರ ಸಂಖ್ಯೆ ಈವರೆಗಿನ ಕನಿಷ್ಠವಾದ 23ಕ್ಕೆ ಕುಸಿದಿತ್ತು. ಆಡಳಿತಾರೂಢ ಪಕ್ಷವು ಸದನದಲ್ಲಿ ಯಾವುದೇ ಮುಸ್ಲಿಮ್ ಸದಸ್ಯರನ್ನು ಹೊಂದಿರಲಿಲ್ಲ.
2019ರಲ್ಲಿ 25 ಸಂಸದರು ಆಯ್ಕೆಯಾಗುವುದರೊಂದಿಗೆ ಮುಸ್ಲಿಮರ ಅದೃಷ್ಟ ಕೊಂಚ ಮಟ್ಟಿಗೆ ಖುಲಾಯಿಸಿತ್ತು. ಪ್ರಾಸಂಗಿಕವಾಗಿ ಮೊದಲ ಬಾರಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಪಕ್ಷವು ಯಾವುದೇ ಮುಸ್ಲಿಮ್ ಸದಸ್ಯರನ್ನು ಹೊಂದಿರಲಿಲ್ಲ. ಇಂದು ಮೂರು ದಶಕಗಳಿಂದ ಒಬ್ಬನೇ ಮುಸ್ಲಿಮ್ ಸಂಸದನನ್ನು ಆಯ್ಕೆ ಮಾಡದ ರಾಜ್ಯಗಳಿರುವಂತೆ ಎಂದಿಗೂ ಮುಸ್ಲಿಮ್ ಸಂಸದನನ್ನು ಆಯ್ಕೆ ಮಾಡಿರದ ರಾಜ್ಯಗಳೂ ಇವೆ. ಉದಾಹರಣೆಗೆ ಗುಜರಾತಿನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.10ಕ್ಕಿಂತ ಕೊಂಚ ಮಾತ್ರವೇ ಕಡಿಮೆಯಿದ್ದರೂ 1984ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಅಹ್ಮದ್ ಪಟೇಲ್ ಆ ರಾಜ್ಯದಿಂದ ಕೊನೆಯ ಮುಸ್ಲಿಮ್ ಸಂಸದರಾಗಿದ್ದಾರೆ.
ರಾಜಸ್ಥಾನ 1952ರಿಂದಲೂ ಒಬ್ಬರೇ ಮುಸ್ಲಿಮ್ ಸಂಸದನ್ನು ಕಂಡಿದೆ. ಕ್ಯಾ.ಅಯೂಬ್ ಖಾನ್ ಅವರು 1984 ಮತ್ತು 1991ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರಲ್ಲಿ ಎಐಎಂಐಎಂ ಅಭ್ಯರ್ಥಿ ಇಮ್ತಿಯಾಝ್ ಜಲೀಲ್ ಅವರು ಮಹಾರಾಷ್ಟ್ರದ ಔರಂಗಾಬಾದ್ ಕ್ಷೇತ್ರದಿಂದ ಗೆದ್ದಾಗ ಅವರು 2004ರಲ್ಲಿ ಎ.ಆರ್.ಅಂಟುಲೆಯವರ ಬಳಿಕ ರಾಜ್ಯದ ಮೊದಲ ಮುಸ್ಲಿಮ್ ಸಂಸದರಾದರು. ಮಧ್ಯಪ್ರದೇಶದಲ್ಲಿಯೂ ಚಿತ್ರಣ ಭಿನ್ನವಾಗಿಲ್ಲ. ಮುಸ್ಲಿಮ್ ಆಭ್ಯರ್ಥಿಗಳಿಗೆ ಟಿಕೆಟ್ ನೀಡುವಲ್ಲಿ ಜಿಪುಣತನವನ್ನು ತೋರಿಸುತ್ತಿರುವ ಬಿಜೆಪಿಯ ಯಶಸ್ಸು ಸಂಸತ್ತಿನಲ್ಲಿ ಮುಸ್ಲಿಮ್ ಪ್ರಾತಿನಿಧ್ಯವು ಕ್ಷೀಣಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಆದರೆ ಇದು ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ, ಒಡಿಶಾದಲ್ಲಿ ಬಿಜೆಡಿ ಮತ್ತು ತೆಲಂಗಾಣದಲ್ಲಿ ಟಿಆರ್ಎಸ್ (ಈಗ ಬಿಆರ್ಎಸ್) ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ದೇಶಾದ್ಯಂತ 35 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ ಒಬ್ಬನೇ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿತ್ತು.
ಆದರೆ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಸ್ಥಿತಿ ವಿಭಿನ್ನವಾಗಿತ್ತು. ಎಸ್.ಪಿ, ಬಿಎಸ್ಪಿ, ಆರ್ಜೆಡಿ ಮತ್ತು ಟಿಎಂಸಿ ಅನುಕ್ರಮವಾಗಿ 8, 38, 5 ಮತ್ತು 12 ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆದಾಗ್ಯೂ 2014ರಲ್ಲಿ ಅನುಕ್ರಮವಾಗಿ 36 ಮತ್ತು 21 ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದ ಎಸ್ಪಿ ಮತ್ತು ಟಿಎಂಸಿ ಈ ಸಲ ಅಭ್ಯರ್ಥಿಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದ್ದವು ಮತ್ತು ಇದು ಮುಸ್ಲಿಮ್ ಸಂಸದರು ಕಣ್ಮರೆಯಾಗುತ್ತಿರುವ ವರ್ಗವಾಗಿದ್ದಾರೆ ಎನ್ನುವುದನ್ನು ದೃಢಪಡಿಸಿತ್ತು. ರಾಜಕೀಯ ಇಚ್ಛಾಶಕ್ತಿಯ ಅನುಪಸ್ಥಿತಿಯಲ್ಲಿ ಈ ವರ್ಗವು ಸಂಸತ್ತಿನಿಂದ ಸಂಪೂರ್ಣವಾಗಿ ಮಾಯವಾಗಬಹುದು.
ಮೀಸಲಾತಿ ಕುರಿತು
ಇದು ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವ ವಿಷಯ ಮಾತ್ರವಲ್ಲ, ಇಡೀ ಚುನಾವಣಾ ವ್ಯವಸ್ಥೆಯೇ ಸಮುದಾಯಕ್ಕೆ ವಿರುದ್ಧವಾಗಿರುವಂತಿದೆ. ಪರಿಶಿಷ್ಟ ಜಾತಿ (ಎಸ್ಸಿ)ಗಳ ಜನಸಂಖ್ಯೆ ಶೇ.10ಕ್ಕಿಂತ ಕೊಂಚವೇ ಹೆಚ್ಚಿರುವ ಮತ್ತು ಮುಸ್ಲಿಮ್ ಜನಸಂಖ್ಯೆ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಎಸ್ಸಿಗಳಿಗೆ ಮೀಸಲಿಟ್ಟಿರುವ ಹಲವಾರು ಸ್ಪಷ್ಟ ನಿದರ್ಶನಗಳಿವೆ. ಅಸ್ಸಾಮಿನ ಕರೀಮಗಂಜ್ ಶೇ.52ರಷ್ಟು ಮುಸ್ಲಿಮ್ ಮತ್ತು ಶೇ.13ರಷ್ಟು ಪರಿಶಿಷ್ಟರನ್ನು ಹೊಂದಿದ್ದರೂ ಇತ್ತೀಚಿನವರೆಗೂ ಆ ಕ್ಷೇತ್ರವು ಎಸ್ಸಿಗಳಿಗೆ ಮೀಸಲಾಗಿತ್ತು.
ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆಗೆ ಮುನ್ನ ಜಾತಿ ಮತ್ತು ಧರ್ಮವನ್ನು ಗಣನೆಗೆ ತೆಗೆದುಕೊಳ್ಳುವ ದೇಶದಲ್ಲಿ ಮುಸ್ಲಿಮ್ ಪ್ರಾತಿನಿಧ್ಯದ ಭವಿಷ್ಯವು ತನ್ನಿಂತಾನೇ ಮಸುಕುಗೊಳ್ಳುತ್ತದೆ.