ಪ್ರಜಾಸತ್ತಾತ್ಮಕ ಪ್ರತಿಭಟನೆಗಳು ರೂಪಿಸುವ ದೃಷ್ಟಿಕೋನದ ಹೆಚ್ಚುಗಾರಿಕೆ
ಮೋದಿಯ ಹೊರತಾಗಿ ಪರ್ಯಾಯ ಯಾವುದು? ಎಂದು ಪದೇ ಪದೇ ಕೇಳಲಾಗುವ ಹೊತ್ತಿನಲ್ಲಿ, ಅದರಿಂದ ಬೇಸತ್ತಿರುವವರು ಪ್ರಜಾಸತ್ತಾತ್ಮಕ ಪ್ರತಿಭಟನೆಗಳಲ್ಲಿ ಭಾಗವಹಿಸುವ ಮೂಲಕ ಹೊಸ ಭರವಸೆಯನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಅದರ ಸುದ್ದಿಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹೇಗೆ ನಿರೂಪಿತವಾಗುತ್ತವೆ ಎಂಬುದು ಗೊತ್ತಿರುವ ವಿಚಾರವೇ ಆಗಿದೆ. ಅವುಗಳನ್ನು ನೋಡಿದಾಗಲೂ, ಈಗಿನ ಸರಕಾರಕ್ಕೆ ಪ್ರಜಾಸತ್ತಾತ್ಮಕ ಪ್ರತಿರೋಧ ನಗಣ್ಯ ಮತ್ತು ನಿರರ್ಥಕ ಎಂಬ ಕಲ್ಪನೆಗಳೇ ಮತ್ತಷ್ಟು ಮುಂದೆ ಕಾಣಿಸಿಕೊಳ್ಳುತ್ತದೆ. ಆದರೆ ಅಂಥ ಎರಡೂ ಊಹೆಗಳು ನಿಜವಲ್ಲ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಭಾರತೀಯ ಗಣತಂತ್ರದ ಭವಿಷ್ಯದ ಬಗ್ಗೆ ನಿಜವಾದ ಕಳಕಳಿ ಹೊಂದಿರುವವರಲ್ಲಿ ಸ್ಪಷ್ಟವಾದ ಆತಂಕ ಕಾಣಿಸಿಕೊಳ್ಳುತ್ತಿದೆ. ನಾಗರಿಕರ ಹಕ್ಕುಗಳು ಬಹಳ ವೇಗದಿಂದ ನಾಶವಾಗುತ್ತಿರುವಾಗ, ಆರ್ಥಿಕತೆ ಹದಗೆಟ್ಟಿರುವಾಗ, ಪತ್ರಿಕಾ ಸ್ವಾತಂತ್ರ್ಯ ಇಲ್ಲದಂತಿರುವಾಗ ಸಂವಿಧಾನವೇ ಬದಲಾಗುತ್ತಿದೆ ಎಂಬ ಆತಂಕ ತಲೆದೋರುವುದು ಸಹಜವೇ ಆಗಿದೆ.
ಇಂತಹ ಸಮಯದಲ್ಲಿ ಕಳಕಳಿಯುಳ್ಳವರು ಭರವಸೆ ಕಳೆದುಕೊಳ್ಳದಂತೆ ಇರುವುದಕ್ಕೆ ಬೀದಿಗಿಳಿದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಒಂದು ಸ್ಪಷ್ಟವಾದ ದಾರಿಯಾಗಿದೆ. ಇದು ವಿರೋಧಾಭಾಸದಂತೆ ತೋರುತ್ತದೆಯಾದರೂ, ಅನ್ಯಾಯದ ವಿರುದ್ಧ ಹೋರಾಡುತ್ತಿರುವವರಲ್ಲಿ ನಿಜವಾದ ಭರವಸೆ ತುಂಬಿಸಲು ಇದು ಹೆಚ್ಚಾಗಿ ನೆರವಾಗುತ್ತದೆ.
ಸುಮ್ಮನೆ ನಾಲ್ಕು ಗೋಡೆಗಳ ನಡುವೆ ಕೂತು ಮಂಕಾಗುವ ಬದಲು, ಅಲ್ಲಿ ಸೋಷಿಯಲ್ ಮೀಡಿಯಾಗಳು ಮೂಡಿಸುವ ಇನ್ನಷ್ಟು ಆತಂಕಗಳಿಂದ ಹತಾಶೆಗೆ ಒಳಗಾಗುವ ಬದಲು, ಅದರಿಂದ ಹೊರಬಂದು ಜನಾಂದೋಲನದಲ್ಲಿ ಭಾಗವಹಿಸುವುದು ಸ್ಪಷ್ಟ ದೃಷ್ಟಿಕೋನವೊಂದನ್ನು ಪಡೆಯುವುದಕ್ಕೆ ಪೂರಕವಾಗಬಹುದು. ಆಗ ಸಿಗುವ ನೋಟ ನಿಜವಾಗಿಯೂ ಭಿನ್ನವಾಗಿರಲು ಸಾಧ್ಯ ಮತ್ತು ನಾವು ಎಲ್ಲಿ ನಿಂತು ಸನ್ನಿವೇಶವನ್ನು ಗ್ರಹಿಸುತ್ತಿದ್ದೇವೆ ಮತ್ತು ಅರ್ಥ ಮಾಡಿಕೊಳ್ಳುತ್ತಿದ್ದೇವೆ ಎಂಬುದು ಮನವರಿಕೆಯಾಗಲು ಆಗಲೇ ಸಾಧ್ಯ.
ಮೋದಿಯ ಹೊರತಾಗಿ ಪರ್ಯಾಯ ಯಾವುದು? ಎಂದು ಪದೇ ಪದೇ ಕೇಳಲಾಗುವ ಹೊತ್ತಿನಲ್ಲಿ, ಅದರಿಂದ ಬೇಸತ್ತಿರುವವರು ಪ್ರಜಾಸತ್ತಾತ್ಮಕ ಪ್ರತಿಭಟನೆಗಳಲ್ಲಿ ಭಾಗವಹಿಸುವ ಮೂಲಕ ಹೊಸ ಭರವಸೆಯನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಅದರ ಸುದ್ದಿಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹೇಗೆ ನಿರೂಪಿತವಾಗುತ್ತವೆ ಎಂಬುದು ಗೊತ್ತಿರುವ ವಿಚಾರವೇ ಆಗಿದೆ. ಅವುಗಳನ್ನು ನೋಡಿದಾಗಲೂ, ಈಗಿನ ಸರಕಾರಕ್ಕೆ ಪ್ರಜಾಸತ್ತಾತ್ಮಕ ಪ್ರತಿರೋಧ ನಗಣ್ಯ ಮತ್ತು ನಿರರ್ಥಕ ಎಂಬ ಕಲ್ಪನೆಗಳೇ ಮತ್ತಷ್ಟು ಮುಂದೆ ಕಾಣಿಸಿಕೊಳ್ಳುತ್ತದೆ.ಆದರೆ ಅಂಥ ಎರಡೂ ಊಹೆಗಳು ನಿಜವಲ್ಲ.
ಆಗಸ್ಟ್ ೨೪ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅಖಿಲ ಭಾರತ ರೈತರು ಮತ್ತು ಕಾರ್ಮಿಕರ ಬೃಹತ್ ಸಮಾವೇಶ ಒಂದು ಉದಾಹರಣೆ. ಐದು ಸಾವಿರದಷ್ಟಿದ್ದ ರೈತರು ಮತ್ತು ಕಾರ್ಮಿಕರ ಸಭೆಯ ನಿರ್ಣಯಗಳಿಗೂ ಕೋಣೆಗಳೊಳಗೆ ಕೂತವರ ನಿಲುವುಗಳಲ್ಲಿ ತುಂಬಿಕೊಂಡಿರುವ ಸಿನಿಕತನಕ್ಕೂ ನಡುವೆ ಇರುವ ವ್ಯತ್ಯಾಸವೆಂಥದು ಎಂಬುದನ್ನು ಗಮನಿಸಬಹುದು.
ಭಾರತೀಯ ಕಿಸಾನ್ ಯೂನಿಯನ್ ಏಕತಾ ನಾಯಕ ಜೋಗಿಂದರ್ ಸಿಂಗ್ ಉಗ್ರಹನ್ ಹೇಳಿದರು: ‘‘ನಮಗೆ ತಿಳಿದಿರುವಂತೆ, ಸರ್ವಾಧಿಕಾರಿಯಾಗುವ ಯಾವುದೇ ಸರಕಾರ ಉಳಿಯುವುದಿಲ್ಲ. ಎಲ್ಲಿಯವರೆಗೆ ಜನರು ಅದರ ನೀತಿಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಅದು ಇರುತ್ತದೆ. ಅದಾನಿ ಮತ್ತು ಕಾರ್ಪೊರೇಟ್‌ಗಳ ಜೇಬು ತುಂಬಿಸಲು ಮಾತ್ರ ಮೋದಿ ಸರಕಾರ ಅಸ್ತಿತ್ವದಲ್ಲಿದೆ ಎಂದು ಜನರು ಅರ್ಥಮಾಡಿಕೊಂಡಿದ್ದಾರೆ ಮತ್ತು ಅವರು ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ. ಈ ಪ್ರತಿಭಟನೆಗಳು ಬಿಜೆಪಿಯ ಸೋಲನ್ನು ಖಚಿತಪಡಿಸುವ ಆಂದೋಲನಗಳಾಗುತ್ತಿವೆ.’’
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಬಾಬ್ಲಿ ರಾವತ್ ಸಮಾವೇಶದ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿದರು. ‘‘ಮೊದಲ ಬಾರಿಗೆ, ದೇಶದಾದ್ಯಂತದ ರೈತರು ಮತ್ತು ಕಾರ್ಮಿಕರು ಈ ದೊಡ್ಡ ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಿದ್ದಾರೆ. ೨೦೨೧ರಲ್ಲಿ ಮೋದಿ ಸರಕಾರ ಕೃಷಿ ಕಾನೂನುಗಳಿಂದ ಹಿಂದೆ ಸರಿಯುವಂತೆ ಮಾಡಿದ ರೈತ ಹೋರಾಟದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಮತ್ತು ಈ ಸರಕಾರವನ್ನು ಸೋಲಿಸಲು ನಾವು ಅವರೊಂದಿಗೆ ಹೋರಾಡುತ್ತೇವೆ.’’
ಹರ್ಯಾಣದ ರೈತ ಮತ್ತು ಮಾಜಿ ಕೌನ್ಸಿಲರ್ ಅಜ್ಮೀರ್ ಖಂಡಾ ಅವರ ಮಾತುಗಳು ಹೀಗಿದ್ದವು: ‘‘ಯಾವುದಕ್ಕೂ ಪ್ರಯೋಜನವಿಲ್ಲದ ಈ ಸರಕಾರ ಹೋಗುವುದರಿಂದ ಮಾತ್ರ ಒಳ್ಳೆಯದಾಗಲಿದೆ. ಅವರು ಈ ಸಮಯವನ್ನು ‘ಅಮೃತ ಕಾಲ’ ಎಂದು ಕರೆಯುತ್ತಾರೆ! ಇನ್ನು ಟೊಮೆಟೊ ಚಟ್ನಿ ಮಾಡಲೂ ಆಗದ ಸ್ಥಿತಿಗೆ ಬಡವರನ್ನು ಕೊಂಡೊಯ್ದು ‘ಅಮೃತ ಕಾಲ’ ಎನ್ನುತ್ತಾರಾ? ಅವರು ನಿಮಗೆ ೭೦೦ ಕೋಟಿ ರೂ. ವೆಚ್ಚದ ದೇವಾಲಯದ ಭರವಸೆ ನೀಡುತ್ತಾರೆ. ಆದರೆ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಆಸ್ಪತ್ರೆಗಳ ಬಗ್ಗೆ ಮಾತನಾಡುವುದಿಲ್ಲ! ನಮಗೆ ಉದ್ಯೋಗ ಕೊಡಿ! ನಮಗೆ ಕೆಲಸ ಬೇಕು’’
ಬಿಜೆಪಿಗೆ ಮತ ಹಾಕಿದ್ದು ತಪ್ಪು ಎಂದು ಖಂಡಾ ಹೇಳುತ್ತಾರೆ. ‘‘ಇದು ನಮ್ಮ ತಪ್ಪು. ಬಿಜೆಪಿಯವರ ಸುಳ್ಳುಗಳನ್ನು ನಂಬಿ ಅವರನ್ನು ಬೆಂಬಲಿಸುವ ಮೂಲಕ ನಾವು ಇಡೀ ಪೀಳಿಗೆಯನ್ನು ಹಾಳು ಮಾಡಿದ್ದೇವೆ. ಆದರೆ ಜನರು ಈಗ ಎಚ್ಚೆತ್ತುಕೊಂಡಿದ್ದಾರೆ ಮತ್ತು ಈ ಸರಕಾರವನ್ನು ಅದರ ದುಷ್ಕೃತ್ಯಗಳಿಗಾಗಿ ಶಿಕ್ಷಿಸುತ್ತಾರೆ ಎಂದು ನಮಗೆ ತಿಳಿದಿದೆ!’’
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಜೇನ್ ನಗರ್, ‘‘ಸರಕಾರ ತನಗೆ ಬೇಕಾದುದನ್ನೇ ಮಾಡುವಾಗ ಈ ಪ್ರತಿಭಟನೆಗಳ ಅರ್ಥವೇನು? ಎಂದು ನೀವು ಕೇಳಬಹುದು. ೧೫೦ ವರ್ಷಗಳ ಹೋರಾಟವನ್ನು ನಾನು ನಿಮಗೆ ನೆನಪಿಸುತ್ತೇನೆ. ನಮ್ಮ ಸ್ವಾತಂತ್ರ್ಯ ಪಡೆಯಲು ಬ್ರಿಟಿಷರ ವಿರುದ್ಧ ನಡೆಸಿದ್ದ ಹೋರಾಟ ಅದು. ಕಾರ್ಮಿಕರು ಮತ್ತು ನೌಕರರ ಸಂಘಗಳು ಕಳೆದ ಒಂಭತ್ತೂವರೆ ವರ್ಷಗಳಿಂದ ಧ್ವನಿ ಎತ್ತುತ್ತಿವೆ. ಇಂದು ನಾವು ರೈತರೊಂದಿಗೆ ಕೈಜೋಡಿಸಿದ್ದೇವೆ. ಒಟ್ಟಾಗಿ ನಾವು ದೇಶದ ಅತ್ಯಂತ ದೊಡ್ಡ ಸಮುದಾಯವನ್ನು ಪ್ರತಿನಿಧಿಸುತ್ತೇವೆ. ಬದಲಾವಣೆ ಬರುತ್ತದೆ ಎಂದು ನೀವು ಖಚಿತವಾಗಿ ಹೇಳಬಹುದು.’’
ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕರಪತ್ರಗಳನ್ನು ಹಂಚುವ ಸ್ವಯಂಸೇವಕಿ ಕವಿತಾ ಅವರನ್ನು, ‘‘ಚುನಾವಣೆಗೆ ಮುನ್ನ ಬಿಜೆಪಿಯ ಪ್ರಚಾರಾಂದೋಲನಗಳು ಮತ್ತು ಜಾಹೀರಾತುಗಳ ಬಿರುಗಾಳಿಯೇ ಎದುರಿಗೆ ಇರುವಾಗ ಈ ಸಣ್ಣ ಕರಪತ್ರಗಳು ಏನನ್ನಾದರೂ ಮಾಡಲು ಸಾಧ್ಯವೆ?’’ ಎಂದು ನಾನು ಕೇಳಿದೆ.
‘‘ಬಿಜೆಪಿ ಬೃಹತ್ ಸಂಪನ್ಮೂಲಗಳನ್ನು ಹೊಂದಿರಬಹುದು, ಹೆಚ್ಚಿನ ಸರಕಾರಿ ಸಂಸ್ಥೆಗಳ ನಿಯಂತ್ರಣವನ್ನು ಹೊಂದಿರಬಹುದು. ಆದರೆ ಭಾರತ ಪ್ರತಿರೋಧ ಮತ್ತು ಭಿನ್ನಾಭಿಪ್ರಾಯದ ಸುದೀರ್ಘ ಇತಿಹಾಸವನ್ನು ಹೊಂದಿದೆ ಎಂಬುದನ್ನು ಅದು ಮರೆತುಬಿಡುತ್ತದೆ. ನಾವು ಆ ಸಮಯದಲ್ಲಿ ವಿಶ್ವದ ಅತಿದೊಡ್ಡ ಸಾಮ್ರಾಜ್ಯವಾದ ಬ್ರಿಟಿಷರೊಂದಿಗೆ ಹೋರಾಡಿದ್ದೇವೆ ಮತ್ತು ಗೆದ್ದಿದ್ದೇವೆ. ಇದು ಅಸಂಖ್ಯಾತ ಜನರ ಸಾಮೂಹಿಕ ಹೋರಾಟದ ಫಲ ಎಂಬುದನ್ನು ನಾವು ಮರೆಯುತ್ತೇವೆ. ನೀವು ಇರುವಲ್ಲಿ ಹೋರಾಟ ಇಲ್ಲ ಎಂದ ಮಾತ್ರಕ್ಕೆ ಅದು ಬೇರೆಡೆ ನಡೆಯುತ್ತಿಲ್ಲ ಎಂದು ಅರ್ಥವಲ್ಲ.’’ ಕವಿತಾ ಅವರ ಮಾತುಗಳು ಸೌಮ್ಯವಾಗಿದ್ದವು ನಿಜ. ಆದರೆ ಅಷ್ಟೇ ಮೊನಚಾಗಿದ್ದವು.
ಜಾತ್ಯತೀತ ಪ್ರಜಾಪ್ರಭುತ್ವವನ್ನು ನಾಶಮಾಡಲು ಹೊರಟವರು, ವಾಸ್ತವವಾಗಿ, ಅದರ ಬಗ್ಗೆ ಕಳಕಳಿ ಉಳ್ಳವರಿಗಿಂತಲೂ ಆತಂಕಕ್ಕೆ ಒಳಗಾಗಲು ಹೆಚ್ಚು ಕಾರಣಗಳಿರಬಹುದು. ಮುಂಬರುವ ತಿಂಗಳುಗಳೇ ಇದಕ್ಕೆಲ್ಲ ಉತ್ತರ ಹೇಳಲಿವೆ.
(ಕೃಪೆ:thewire.in)