ರಾಜ್ಯದ 2,732 ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ!
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009ರ ನಿಬಂಧನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಬಗ್ಗೆ 2013ರಲ್ಲಿಯೇ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ಬೆಂಗಳೂರು, ನ.21: ರಾಜ್ಯದ ಒಟ್ಟು ಸರಕಾರಿ ಶಾಲೆಗಳ ಮೂಲ ಸೌಕರ್ಯಗಳಿಗಾಗಿ ವಿವೇಕ, ನರೇಗಾ ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಕಳೆದ 5 ವರ್ಷದಲ್ಲಿ 1,306.05 ಕೋಟಿ ರೂ.ಗಳನ್ನು ಒದಗಿಸಿದ್ದರೂ 2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ.
464 ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. 136 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. 830 ಶಾಲೆಗಳಲ್ಲಿ ವಿದ್ಯುತ್ ಸೌಕರ್ಯವೂ ಇಲ್ಲ. 4,876 ಶಾಲೆಗಳಿಗೆ ಕಾಂಪೌಂಡ್‌ಗಳಿಲ್ಲ. 2,732 ಶೌಚಾಲಯ ರಹಿತ ಶಾಲೆಗಳ ಪೈಕಿ ಕೇವಲ 38 ಶಾಲೆಗಳಲ್ಲಿ ಮಾತ್ರ ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿದೆ.
ಸರಕಾರಿ ಶಾಲೆಗಳು ಆಗಾಗ ಮುಚ್ಚಲು ಶೌಚಾಲಯಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳ ಕೊರತೆಯೂ ಒಂದು ಕಾರಣ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ರಾಜ್ಯದ ಸರಕಾರಿ ಶಾಲೆಗಳ ಮೂಲ ಸೌಕರ್ಯಗಳ ಕುರಿತಾದ ನಿಖರವಾದ ಅಂಕಿ ಸಂಖ್ಯೆಗಳು ಬಹಿರಂಗವಾಗಿವೆ.
ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆರ್ಥಿಕ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಅಧಿಕಾರಿಗಳೊಂದಿಗೆ ಎರಡು ದಿನಗಳ ಹಿಂದೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಇಲಾಖೆಗಳು ಮಂಡಿಸಿದ್ದ ಅಂಕಿ ಸಂಖ್ಯೆಗಳು ‘The file.in’ಗೆ ಲಭ್ಯವಾಗಿವೆ.
ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯ ಪ್ರಕಾರ, 464 ಸರಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಮತ್ತು 87 ಕುಡಿಯುವ ನೀರಿನ ಸೌಲಭ್ಯದ ಕೊರತೆ ಕಂಡುಬಂದಿದೆ. ಸಮೀಕ್ಷೆಯ ನಂತರ, 87 ಶಾಲೆಗಳಲ್ಲಿ 55 ಶಾಲೆಗಳಲ್ಲಿ ಸಾಕಷ್ಟು ಕುಡಿಯುವ ನೀರು ಕಂಡುಬಂದಿದೆ, ಆದರೂ 32 ಶಾಲೆಗಳಲ್ಲಿ ಸಮಸ್ಯೆ ಉಳಿದಿತ್ತು.
ಆದರೀಗ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ 746 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು 1,986 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲ ಎಂದು ಅಧಿಕಾರಿಗಳು ಅಂಕಿ ಸಂಖ್ಯೆಗಳನ್ನು ಒದಗಿಸಿರುವುದು ಮುನ್ನೆಲೆಗೆ ಬಂದಿದೆ.
ರಾಜ್ಯದಲ್ಲಿ 20,174 ಕಿರಿಯ ಪ್ರಾಥಮಿಕ, 21,739 ಮಾಧ್ಯಮಿಕ, 4,844 ಪ್ರೌಢಶಾಲೆಗಳಿವೆ. ಈ ಪೈಕಿ 2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂದು ಅಧಿಕಾರಿಗಳು ಮಂಡಿಸಿದ್ದ ಅಂಕಿ ಸಂಖ್ಯೆಗಳಿಂದ ತಿಳಿದು ಬಂದಿದೆ.
2,732 ಶಾಲೆಗಳ ಪೈಕಿ 1,986 ಗಂಡು ಮಕ್ಕಳ ಶಾಲೆ ಮತ್ತು 746 ಹೆಣ್ಣು ಮಕ್ಕಳ ಶಾಲೆ ಸೇರಿವೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಅಂಕಿ ಸಂಖ್ಯೆಗಳನ್ನು ಒದಗಿಸಿರುವ ಅಧಿಕಾರಿಗಳು 136 ಶಾಲೆಗಳಲ್ಲಿ ಕುಡಿಯುವ ನೀರು, 4,876 ಶಾಲೆಗಳಲ್ಲಿ ಕಾಂಪೌಂಡ್ ಸೌಲಭ್ಯವಿಲ್ಲ ಎಂದು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1,215 ಗಂಡು ಮಕ್ಕಳು, 466 ಹೆಣ್ಣು ಮಕ್ಕಳು, ಮಾಧ್ಯಮಿಕ ಶಾಲೆಗಳಲ್ಲಿ 654 ಗಂಡು ಮಕ್ಕಳು, 242 ಹೆಣ್ಣು ಮಕ್ಕಳು, ಪ್ರೌಢಶಾಲೆಗಳಲ್ಲಿ 117 ಗಂಡು ಮಕ್ಕಳು, 38 ಹೆಣ್ಣು ಮಕ್ಕಳ ಶೌಚಾಲಯಗಳಿಲ್ಲ ಎಂದು ವರದಿ ಸಲ್ಲಿಸಿರುವುದು ತಿಳಿದು ಬಂದಿದೆ.
40 ಗಂಡು ಮಕ್ಕಳಿಗೆ ಒಂದು ಶೌಚಾಲಯವೆಂಬಂತೆ ಒಟ್ಟು 18,090 ಶೌಚಾಲಯಗಳ ನಿರ್ಮಾಣ ಆಗಬೇಕಿದೆ. 35 ಹೆಣ್ಣು ಮಕ್ಕಳಿಗೆ ಒಂದು ಶೌಚಾಲಯವೆಂಬಂತೆ 26,454 ಶೌಚಾಲಯ ಕೊಠಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದು ತಿಳಿದು ಬಂದಿದೆ.
ವಿವೇಕ, ವಿಶೇಷ ಅನುದಾನ, ಶಾಲೆಗಳ ಕೊಠಡಿಗಳ ದುರಸ್ತಿ, ನರೇಗಾ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 2022-23ರಿಂದ 2023-24ರವರೆಗೆ 1,306 ಕೋಟಿ ರೂ. ಅನುದಾನದ ಪೈಕಿ ಇದುವರೆಗೆ 755.12 ಕೋಟಿ ರೂ. ಬಿಡುಗಡೆಯಾಗಿದೆ. ಅದೇ ರೀತಿ ಕುಡಿಯುವ ನೀರು ಒದಗಿಸುವ ಸಂಬಂಧ 120.33 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೂ ಇನ್ನೂ ಹೆಚ್ಚುವರಿಯಾಗಿ ಅನುದಾನಕ್ಕೆ ಅಧಿಕಾರಿಗಳು ಬೇಡಿಕೆ ಇರಿಸಿರುವುದು ಗೊತ್ತಾಗಿದೆ.