ಕಾಡು ಪ್ರಾಣಿಗಳ ಧ್ವನಿ ಹೊರಸೂಸುವ ಮ್ಮೆಕ್‌ಗೆ ಮಲೆನಾಡಿನಲ್ಲಿ ಭಾರೀ ಬೇಡಿಕೆ
ಚಿಕ್ಕಮಗಳೂರು, ಜ.3: ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದ್ದಂತೆ ಮಲೆನಾಡಿನ ಜಮೀನುಗಳತ್ತ ಕಿವಿಗೊಟ್ಟರೆ ಸಾಕು, ಹುಲಿಗಳು ಘರ್ಜಿಸುವ, ಆನೆಗಳು ಘೀಳಿಡುವ, ನಾಯಿ ಗಳು ಬೊಗುಳುವ ಶಬ್ಧ ಕೇಳತೊಡಗುತ್ತದೆ. ತಾಲೂಕಿನ ವಸ್ತಾರೆ ಸಮೀಪದ ಕೂದುವಳ್ಳಿ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಬಯಲಿಗೆ ತೆರಳಿ ಗಮನಿಸಿದರೆ ಈ ಪ್ರಾಣಿಗಳ ಶಬ್ದಗಳು ಕೇಳಿಬರುತ್ತದೆ.
ಮಲೆನಾಡು ಭಾಗದಲ್ಲಿ ಸದ್ಯ ಕಾಫಿ, ಭತ್ತದ ಕಟಾವು ನಡೆಯುತ್ತಿದ್ದು, ರೈತರಿಗೆ ಕಟಾವಿಗೆ ಬಂದ ಭತ್ತ, ಕಾಫಿ ಕಾಡಾನೆಗಳು, ಕಾಡು ಹಂದಿಗಳು, ನವಿಲುಗಳಂತಹ ಪ್ರಾಣಿ, ಪಕ್ಷಿಗಳ ಪಾಲಾಗುತ್ತಿದೆ. ಇದರಿಂದ ಕಟಾವಿಗೆ ಬಂದ ಬೆಳೆ ಕೈಗೆಸಿಗದೇ ಕಾಡು ಪ್ರಾಣಿಗಳ ಪಾಲಾಗುವ ಆತಂಕ ಮನೆ ಮಾಡಿದೆ. ತಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶಮಾಡುವುದನ್ನು ತಡೆಯಲು ರೈತರು ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಅದೇನೆಂದರೇ ಜಮೀನಿನ ಬದುವಿನಲ್ಲಿ ಚಿಕ್ಕ ಮೈಕ್ ಕಟ್ಟಿ ರಾತ್ರಿ ವೇಳೆ ಈ ಮೈಕ್‌ಅನ್ನು ಚಾಲನೆ ಮಾಡಿದರೇ ನಾಯಿಗಳು ಬೊಗಳುವ, ಹುಲಿಗಳು ಘರ್ಜಿಸುವ, ಆನೆಗಳು ಘೀಳಿಡುವ ಶಬ್ಧ ಇಡೀ ರಾತ್ರಿ ಕೇಳಿ ಬರುತ್ತದೆ. ಈ ಶಬ್ದವನ್ನು ಕೇಳಿದೊಡನೆ ಭತ್ತವನ್ನು ಕಾಫಿ, ಭತ್ತ ತಿನ್ನಲು ಬರುವ ಪ್ರಾಣಿಗಳು ಅಲ್ಲಿಂದ ಓಡಿ ಹೋಗುತ್ತವೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಕೂದುವಳ್ಳಿ ಗ್ರಾಮದಲ್ಲಿ ಅನೇಕ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಈ ಹೊಸ ವಿಧಾನವನ್ನು ತಮ್ಮ ಹೊಲ ತೋಟಗಳಲ್ಲಿ ಅಳವಡಿಸಿಕೊಂಡಿದ್ದು, ಇದರಿಂದ ಬೆಳೆ ಕಾಡು ಪ್ರಾಣಿಗಳ ಪಾಲಾಗುವುದು ತಪ್ಪಿಬೆಳೆ ರೈತರ ಕೈಸೇರುತ್ತಿದೆ. ಈ ರೈತರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಕಂಡುಕೊಂಡ ಹೊಸ ವಿಧಾನ ಸದ್ಯ ಮಲೆನಾಡಿನಾದ್ಯಂತ ಮನೆಮಾತಾಗಿದ್ದು, ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವಲ್ಲಿ ರೈತರು ಈ ವಿಧಾನ ಅನುಸರಿಸಲು ಮುಂದಾಗುತ್ತಿದ್ದಾರೆ.
ಭತ್ತ ಬೆಳೆಯುವುದರಿಂದ ಏನೂ ಲಾಭವಿಲ್ಲವೆಂದು ಮಲೆನಾಡಿನ ಅನೇಕ ರೈತರು ಕೈಚೆಲ್ಲಿ ಕೂತಿದ್ದಾರೆ. ಒಂದು ವೇಳೆ ಭತ್ತದ ಪೈರನ್ನು ಬೆಳೆದರೆ ನವಿಲು ಮತ್ತು ಕಾಡುಹಂದಿಗಳು ನಾಶ ಮಾಡುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಹಾಗಾಗಿ ಭತ್ತದ ಬೆಳೆಗೆ ರೈತಾಪಿ ವರ್ಗ ನಿರಾಸಕ್ತಿ ತೋರುತ್ತಿದೆ. ಮತ್ತೆ ಕೆಲವರು ಭತ್ತದ ಗದ್ದೆಗಳಲ್ಲಿ ಶುಂಠಿ, ಅಡಿಕೆ ಮತ್ತು ಕಾಫಿ ಬೆಳೆಯಲು ಮುಂದಾಗಿದ್ದಾರೆ. ಒಟ್ಟಾರೆ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಕಷ್ಟಪಟ್ಟು ಯಾವುದೇ ಬೆಳೆ ಬೆಳೆದರೂ ಆ ಬೆಳೆ ಕಾಡು ಪ್ರಾಣಿಗಳ ಪಾಲಾಗುವುದು ಮಲೆನಾಡಿನ ಸಾಮಾನ್ಯ ಸಮಸ್ಯೆಯಾಗಿದೆ.
ಈ ಸಮಸ್ಯೆಯಿಂದ ಹೈರಾಣಾಗಿದ್ದ ರೈತರು ಇದೀಗ ಕಾಡು ಪ್ರಾಣಿಗಳ ಧ್ವನಿ ಹೊರಡಿಸುವ ಮೈಕ್‌ಗಳನ್ನು ಗದ್ದೆ, ಕಾಫಿ ತೋಟಗಳಲ್ಲಿ ಅಳವಡಿಸಿ, ಅದನ್ನು ರಾತ್ರಿ ವೇಳೆ ಚಾಲನೆ ಮಾಡುವ ಹೊಸ ವಿಧಾನ ಕಂಡುಕೊಂಡಿದ್ದು, ಇದರಿಂದಾಗಿ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಬಂದು ಬೆಳೆ ರೈತರ ಕೈಸೇರುತ್ತಿದೆ ಎಂಬ ಸಾಮಾನ್ಯ ಅಭಿಪ್ರಾಯ ಕೇಳಿ ಬರುತ್ತಿದೆ.
ಕೂದುವಳ್ಳಿ ಗ್ರಾಮದ ಯುವ ರೈತ ಕೆ.ಎಂ.ಲಕ್ಷ್ಮಣ ಗದ್ದೆಗಳ ಬದುವಿನಲ್ಲಿ ಕೋಲಿಗೆ ಮೈಕ್‌ಕಟ್ಟಿದ್ದು, ಈ ಮೈಕ್ ರಾತ್ರಿ ಇಡೀ ನಾಯಿ ಬೊಗುಳುವ ಶಬ್ಧ ಮಾಡುವುದರಿಂದ ಕಾಡು ಪ್ರಾಣಿಗಳು ಲಕ್ಷ್ಮಣ್ ಅವರ ಗದ್ದೆಗಳತ್ತ ತಲೆ ಹಾಕುತ್ತಿಲ್ಲ. ಇದನ್ನು ಗಮನಿಸಿದ ಕೆ.ಎಂ.ಲೋಕೇಶ್ ಎಂಬವರು ತಮ್ಮ ಗದ್ದೆಯಲ್ಲಿರುವ ಭತ್ತದ ಪೈರನ್ನು ಉಳಿಸಿಕೊಳ್ಳಲು ತಮ್ಮ ಗದ್ದೆಗೆ ಮೈಕ್‌ಕಟ್ಟಿದ್ದಾರೆ. ಮೊದಲು ಪೈರು ಹಾಳು ಮಾಡುತ್ತಿದ್ದ ಕಾಡುಹಂದಿಗಳು ಈಗ ಇತ್ತ ಸುಳಿಯುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ಬೆವರು ಸುರಿಸಿ ಬೆಳೆದಿರುವ ಭತ್ತದ ಪೈರನ್ನು ಉಳಿಸಿಕೊಳ್ಳಲು ಹೊಸ ಐಡಿಯಾವನ್ನು ಕಂಡುಕೊಳ್ಳುವ ಮೂಲಕ ಮಲೆನಾಡು ಭಾಗದ ರೈತರು ಬೆಳೆಗಳನ್ನು ರಕ್ಷಣೆ ಮಾಡಲಾರಂಭಿಸಿದ್ದಾರೆ. ಈ ಮೈಕ್‌ಗಳಿಂದಾಗಿ ರಾತ್ರಿ ಇಡೀ ನಿದ್ದೆಗೆಟ್ಟು ಬೆಳೆ ಕಾಯುವುದರಿಂದ ರೈತರಿಗೆ ಬಿಡುವು ಸಿಕ್ಕಿದಂತಾಗಿದೆ. ಯುವ ರೈತರು ಮಾಡಿದ ಈ ಪ್ರಯೋಗ ಸದ್ಯ ಮಲೆನಾಡು ಭಾಗದ ಬಹುತೇಕ ರೈತರಿಗೂ ಪ್ರೇರಣೆಯಾಗುತ್ತಿದೆ. ಮಲೆನಾಡು ಭಾಗದ ಕಾಫಿ, ಅಡಿಕೆ, ಭತ್ತದ ಗದ್ದೆ, ತೋಟಗಳನ್ನು ಸದ್ಯ ನಾಯಿ, ಹುಲಿ, ಆನೆಯ ಧ್ವನಿ ಅನುಕರಿಸುವ ಮೈಕ್ ಆವರಿಸಲಾರಂಭಿಸಿದ್ದು, ರೈತರ ಐಡಿಯಾಕ್ಕೆ ಕಾಡುಪ್ರಾಣಿಗಳು ಕಾಡು ಸೇರುತ್ತಿವೆ ಎಂದು ಈ ಪ್ರಯೋಗ ಮಾಡುತ್ತಿರುವ ರೈತರು ಅಭಿಪ್ರಾಯಿಸಿದ್ದಾರೆ.
ಅರ್ಧ ಎಕರೆಯಲ್ಲಿ ಭತ್ತಬೆಳೆದಿದ್ದೇನೆ. ಅಕ್ಕಪಕ್ಕದಲ್ಲಿ ಕೆಲ ರೈತರು ಭತ್ತ ಬೆಳೆದಿದ್ದಾರೆ. ಕಾಡು ಹಂದಿಗಳ ಹಾವಳಿ ಅಧಿಕಗೊಂಡಿದ್ದರಿಂದ ಪೈರನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಾಣಿಗಳ ಧ್ವನಿಯ ಶಬ್ಧ ಮಾಡುವ ಮೈಕ್ ಅನ್ನು ಗದ್ದೆಯಲ್ಲಿ ಕಟ್ಟಿದ್ದೆ. ಅಂದಿನಿಂದ ಗದ್ದೆಯತ್ತ ಕಾಡು ಪ್ರಾಣಿಗಳು ಸುಳಿದೇ ಇಲ್ಲ. ಬೆಳೆ ರಕ್ಷಣೆ ಮಾಡಿಕೊಳ್ಳಲು ಇದು ಅತ್ಯುತ್ತಮ ವಿಧಾನವಾಗಿದೆ.
ಕೆ.ಎಂ. ಲಕ್ಷ್ಮಣ, ಯುವರೈತ ಕೂದುವಳ್ಳಿ.
ಭತ್ತದ ಬೆಳೆಯಿಂದ ಯಾವುದೇ ಲಾಭವಿಲ್ಲ. ಜಾನುವಾರುಗಳ ಮೇವಿಗಾಗಿ ಭತ್ತದ ಹುಲ್ಲು ಸಿಗಲಿ, ಆರು ತಿಂಗಳು ಊಟಕ್ಕಾದರೂ ಭತ್ತ ಸಿಗಬಹುದೆನ್ನುವ ಕಾರಣಕ್ಕೆ ಎರಡು ಎಕರೆ ಗುತ್ತಿಗೆ ಜಮೀನಿನಲ್ಲಿ ಭತ್ತಬೆಳೆದಿದ್ದೇನೆ. ಆದರೆ ಕಾಡುಹಂದಿಗಳ ಕಾಟ ಅಧಿಕವಾಗಿದೆ. ಬೆಳೆರಕ್ಷಣೆಮಾಡಿಕೊಳ್ಳಲು ಗದ್ದೆಯ ಬದುವಿನಲ್ಲಿ ಮೈಕ್ ಕಟ್ಟುತ್ತಿದ್ದೇನೆ. ಈಗ ಕಾಡುಪ್ರಾಣಿಗಳ ಕಾಟ ಕಡಿಮೆಯಾಗಿದೆ.
- ಲೋಕೇಶ್, ರೈತ ಕೂದುವಳ್ಳಿ.