ಲೋಕಸಭಾ ಉಪಸಭಾಪತಿಯ ಕರ್ತವ್ಯಗಳೇನು? ಆಯ್ಕೆ ಹೇಗೆ?: ಇಲ್ಲಿದೆ ಮಾಹಿತಿ

Update: 2024-06-27 08:37 GMT

ಸಾಂದರ್ಭಿಕ ಚಿತ್ರ (PTI)

ಲೋಕಸಭಾ ಉಪಸಭಾಪತಿ ಸ್ಥಾನವನ್ನು ವಿಪಕ್ಷಕ್ಕೆ ಬಿಟ್ಟು ಕೊಡುವ ಸಂಸದೀಯ ಸಂಪ್ರದಾಯವಿದೆ. ಅದನ್ನು ಎನ್‌ಡಿಎ ಸರಕಾರ ಪಾಲಿಸದೇ ಇರುವುದರಿಂದ ನಾವು ಸ್ಪೀಕರ್ ಹುದ್ದೆಗೆ ಅಭ್ಯರ್ಥಿ ಹಾಕುತ್ತಿದ್ದೇವೆ ಎಂದು ಸವಾಲು ಹಾಕಿ ಕೆ ಸುರೇಶ್ ಅವರನ್ನು ಇಂಡಿಯಾ ಒಕ್ಕೂಟ ಕಣಕ್ಕಿಳಿಸಿತ್ತು. ಆದರೆ ಬಿಜೆಪಿಯ ಓಂ ಬಿರ್ಲಾ ಅವರು ಮತ್ತೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಲೋಕಸಭೆಯಲ್ಲಿ ಎನ್ ಡಿ ಎ ಗೆ ಬಹುಮತ ಇರುವುದರಿಂದ ಇದು ನಿರೀಕ್ಷಿತವಾಗಿತ್ತು. ಬಿಜೆಪಿ ಲೆಕ್ಕಾಚಾರ ನೋಡಿದರೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯೇ ಉಪ ಸ್ಪೀಕರ್ ಅಥವಾ ಉಪಸಭಾಪತಿಯ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ.

ಉಪಸಭಾಪತಿಯ ಪಾತ್ರಗಳೇನು ?

ಸಂವಿಧಾನದ ಆರ್ಟಿಕಲ್ 95ರ ಸೆಕ್ಷನ್ 1ರ ಪ್ರಕಾರ ಸ್ಪೀಕರ್ ಅವರ ಹುದ್ದೆ ಖಾಲಿಯಾದಾಗ ಉಪಸಭಾಪತಿ ಅವರು ಸ್ಪೀಕರ್ ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಸದನದ ಅಧ್ಯಕ್ಷತೆ ವಹಿಸುತ್ತಿರುವಾಗ ಅವರು ಸ್ಪೀಕರ್ ಗಿರುವ ಎಲ್ಲ ಅಧಿಕಾರವನ್ನು ಹೊಂದಿರುತ್ತಾರೆ.

ಆರ್ಟಿಕಲ್ 93ರ ಪ್ರಕಾರ ಸ್ಪೀಕರ್ ಮತ್ತು ಉಪಸಭಾಪತಿ - ಇಬ್ಬರನ್ನು ಸಂಸತ್ತಿನಲ್ಲಿ ಆದಷ್ಟು ಶೀಘ್ರವೇ ನೇಮಿಸಬೇಕು ಎಂದು ಹೇಳಲಾಗಿದೆ. ಲೋಕಸಭೆ ಆದಷ್ಟು ಶೀಘ್ರವೇ ಸದನದ ಇಬ್ಬರು ಸದಸ್ಯರನ್ನು ಕ್ರಮವಾಗಿ ಸ್ಪೀಕರ್ ಹಾಗು ಡೆಪ್ಯುಟಿ ಸ್ಪೀಕರ್ ಆಗಿ ಆಯ್ಕೆ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ.

ನಮ್ಮ ಸಂವಿಧಾನವು ಈ ನೇಮಕಾತಿಗಳಿಗೆ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಿಲ್ಲ. ಆರ್ಟಿಕಲ್ 93 ಮತ್ತು 178 ರಲ್ಲಿ "Shall" ಮತ್ತು "As Soon As May Be" ಎಂಬ ಪದಪ್ರಯೋಗ ಮಾಡಲಾಗಿದೆ . ಅಂದರೆ, ಸ್ಪೀಕರ್ ಮತ್ತು ಉಪಸಭಾಪತಿಯ ಆಯ್ಕೆ ಕಡ್ಡಾಯ ಮತ್ತು ಆ ಆಯ್ಕೆಗಳು ಆದಷ್ಟು ಶೀಘ್ರ ಆಗಬೇಕು ಎಂದು ಅಲ್ಲಿ ಹೇಳಲಾಗಿದೆ ಎನ್ನುತ್ತಾರೆ ಸಂವಿಧಾನ ತಜ್ಞರು.

ಆದರೆ ಕಳೆದ ಲೋಕಸಭೆಯಲ್ಲಿ ಮೋದಿ ಸರಕಾರ ಸಂವಿಧಾನದ ಈ ವಿಧಿಗೆ ವಿರುದ್ಧವಾಗಿ ಯಾವುದೇ ಡೆಪ್ಯುಟಿ ಸ್ಪೀಕರ್ ಅನ್ನು ಆಯ್ಕೆ ಮಾಡಲೇ ಇಲ್ಲ. ಆ ಹುದ್ದೆಯನ್ನು ಐದು ವರ್ಷಗಳ ಕಾಲವೂ ಖಾಲಿ ಇಡಲಾಗಿತ್ತು. ಸಂಪ್ರದಾಯದ ಪ್ರಕಾರ ಅದನ್ನು ವಿಪಕ್ಷಗಳಿಗೂ ಕೊಡಲಿಲ್ಲ, ಕನಿಷ್ಠ ಆಡಳಿತ ಮೈತ್ರಿಕೂಟದ ಯಾರನ್ನೂ ಅದಕ್ಕೆ ಆಯ್ಕೆ ಮಾಡಲೂ ಇಲ್ಲ.

178ನೇ ವಿಧಿಯು ರಾಜ್ಯ ಅಸೆಂಬ್ಲಿಗಳಿಗೆ ಸ್ಪೀಕರ್ , ಉಪಸ್ಪೀಕರ್ ಆಯ್ಕೆಗೆ ಇದೇ ರೀತಿಯ ನಿಯಮಗಳನ್ನು ಹೇಳುತ್ತದೆ.

ಸಾಮಾನ್ಯವಾಗಿ, ಹೊಸ ಸದನದ ಚೊಚ್ಚಲ ಅಧಿವೇಶನದ ಮೂರನೇ ದಿನಕ್ಕೆ ಸ್ಪೀಕರ್ ಅನ್ನು ಆಯ್ಕೆ ಮಾಡಲಾಗುತ್ತದೆ. ಸಂಸತ್ತಿನ ದ್ವಿತೀಯ ಅಧಿವೇಶನದಲ್ಲಿ ಉಪಸಭಾಪತಿಯ ಚುನಾವಣೆ ನಡೆಯುತ್ತದೆ. ಉಪಸಭಾಪತಿ ಸ್ಥಾನದ ಚುನಾವಣೆಗೆ ಸ್ಪೀಕರ್ ಅವರೇ ದಿನಾಂಕ ಫಿಕ್ಸ್ ಮಾಡ್ತಾರೆ ಅನ್ನುತ್ತವೆ ನಿಯಮಗಳು.

1956ರಲ್ಲಿ ಚೊಚ್ಚಲ ಸ್ಪೀಕರ್ ಜಿ.ವಿ. ಮಾವಲಂಕರ್ ಅವರು ನಿಧನರಾದಾಗ ಅವರ ಸ್ಥಾನದಲ್ಲಿ ಉಪಸಭಾಪತಿಯರಾದ ಮದಭುಷಿ ಅನಂತಶಯನಂ ಅಯ್ಯಂಗಾರ್ ಅವರು 1957ರವರೆಗೆ ಸ್ಪೀಕರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.

2002ರಲ್ಲಿ ಸ್ಪೀಕರ್ ಜಿ.ಎಂ.ಸಿ. ಬಾಲಯೋಗಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ತೀರಿಹೋದಾಗ ಮನೋಹರ್ ಜೋಶಿ ಅವರು ನೂತನ ಸ್ಪೀಕರ್ ಆಗಿ ಆಯ್ಕೆಯಾಗುವವರೆಗೆ ಉಪಸಭಾಪತಿ ಪಿ.ಎಂ. ಸಯೀದ್ ಅವರು ಸ್ಪೀಕರ್ ಹುದ್ದೆಯನ್ನು ನಿರ್ವಹಿಸಿದ್ದರು.

2004ರಿಂದ 2009ರವರೆಗಿನ ಯುಪಿಎ 1 ಸರಕಾರ ಮತ್ತು 2009ರಿಂದ 2014ರವರೆಗಿನ ಯುಪಿಎ 2 ಸರಕಾರಗಳ ಅವಧಿಯಲ್ಲಿ ವಿಪಕ್ಷದವರಿಗೆ ಉಪಸಭಾಪತಿಯ ಹುದ್ದೆಯನ್ನು ನೀಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಅಲ್ಪಾವಧಿಯ ಅಧಿಕಾರಾವಧಿಯಲ್ಲಿ ಪಿ.ಎಂ.ಸಯೀದ್ ಅವರು ವಿಪಕ್ಷದ ಪರವಾಗಿ - 1998ರಿಂದ 1999ರವರೆಗೆ ಉಪಸಭಾಪತಿ ಹುದ್ದೆಯನ್ನು ನಿರ್ವಹಿಸಿದರು.

ಉಪಸಭಾಪತಿಗಳಾದ ಇತರ ಗಣ್ಯರಲ್ಲಿ ಚರಂಜೀತ್ ಸಿಂಗ್ ಅಟ್ವಾಲ್, ಕರಿಯ ಮುಂಡಾ, ಮತ್ತು ಸೂರಜ್ ಭಾನ್ ಪ್ರಮುಖರು. ಬಿಜೆಪಿಯ ಈವರೆಗಿನ ನಡೆ ನೋಡಿದರೆ ಈ ಬಾರಿ ಎನ್ ಡಿ ಎ ಮೈತ್ರಿಕೂಟದ ಟಿ ಡಿ ಪಿ ಅಥವಾ ಬೇರಾವುದರೂ ಪಕ್ಷದ ಸಂಸದರೇ ಉಪಸಭಾಪತಿ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News