ಭಾರತ ತಂಡವು ಐಸಿಸಿ ಸದಸ್ಯತ್ವ ಕಳೆದುಕೊಳ್ಳುವುದರಿಂದ ರಕ್ಷಿಸಿದ್ದ ಜವಾಹರಲಾಲ್ ನೆಹರೂ ನಿರ್ಧಾರ
ಹೊಸದಿಲ್ಲಿ: ಸದ್ಯ ಭಾರತ ತಂಡವು ವಿಶ್ವ ಕ್ರಿಕೆಟ್ ನಲ್ಲಿ ಸೂಪರ್ ಪವರ್ ಆಗಿ ಬದಲಾಗಿದೆ. ಭಾರತವು ಕೇವಲ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯನ್ನು ಮಾತ್ರ ಹೊಂದಿಲ್ಲ; ಬದಲಿಗೆ ತನ್ನ ಮೂರನೆಯ ವಿಶ್ವ ಕಪ್ ಗೆಲ್ಲುವ ಸನಿಹದಲ್ಲಿರುವ ಬಲಿಷ್ಠ ತಂಡವನ್ನೂ ಹೊಂದಿದೆ. ಆದರೆ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಜಾಗತಿಕ ಕ್ರಿಕೆಟ್ ನಿರ್ವಹಣಾ ಸಂಸ್ಥೆಯಾದ ಐಸಿಸಿಯ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾದ ಸ್ಥಿತಿಗೆ ಭಾರತೀಯ ಕ್ರಿಕೆಟ್ ತಲುಪಿತ್ತು ಎಂಬ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.
ಹಾಗಾದರೆ, ಭಾರತೀಯ ಕ್ರಿಕೆಟ್ ರಕ್ಷಿಸಿದ್ದು ಏನು?
ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ತೆಗೆದುಕೊಂಡ ಒಂದು ರಾಜಕೀಯ ನಿರ್ಧಾರವು ಭಾರತೀಯ ಕ್ರಿಕೆಟ್, ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ನ ಭಾಗವಾಗಿಯೇ ಉಳಿಯುವಂತೆ ಮಾಡಿತು. ಆಗಿನ್ನೂ ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಂದು ಮರು ನಾಮಕರಣವಾಗಿರಲಿಲ್ಲ.
ಭಾರತವನ್ನು ಬ್ರಿಟಿಷ್ ಕಾಮನ್ ವೆಲ್ತ್ ಭಾಗವಾಗಿಯೇ ಉಳಿಸುವ ನೆಹರೂ ಅವರ ನಿರ್ಧಾರವು ಅವರ ಸ್ವಪಕ್ಷೀಯರಿಂದಲೇ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ನಿರ್ಧಾರದಲ್ಲಿ ರಾಜಕೀಯ ಒಡಕಿತ್ತಾದರೂ, ಭಾರತೀಯ ಕ್ರಿಕೆಟ್ ಪಾಲಿಗೆ ಮಹತ್ವದ್ದಾಗಿ ಪರಿಣಮಿಸಿತು. ಈ ನಿರ್ಧಾರವು ಬ್ರಿಟಿಷರ ಪೋಷಣೆಯಲ್ಲಿದ್ದ ಜಾಗತಿಕ ಕ್ರಿಕೆಟ್ ಸಂಸ್ಥೆಯ ಭಾಗವಾಗಿ ಭಾರತೀಯ ಕ್ರಿಕೆಟ್ ಮುಂದುವರಿಯುವುದನ್ನು ಖಾತ್ರಿಗೊಳಿಸಿತು.
ಪ್ರಭಾವಿ ವಕೀಲರಾಗಿದ್ದ ಮೋತಿಲಾಲ್ ನೆಹರೂ ಅವರ ಪುತ್ರರಾದ ಜವಾಹರಲಾಲ್ ನೆಹರೂ ಅವರು ಬ್ರಿಟನ್ ನಲ್ಲಿನ ಹ್ಯಾರೊ ಶಾಲೆಯಲ್ಲಿ ವ್ಯಾಸಂಗ ಮಾಡಲು 1905ರಿಂದ 1907ರ ನಡುವೆ ಅಲ್ಲಿಗೆ ತೆರಳಿದ್ದರು. ಬ್ರಿಟಿಷರ ವಸಾಹತುಶಾಹಿ ಕಾಲಘಟ್ಟದಲ್ಲಿ ಭಾರತದಲ್ಲಿನ ಶ್ರೀಮಂತ ಕುಟುಂಬಗಳು ತಮ್ಮ ಮಕ್ಕಳಿಗೆ ಪಾಶ್ಚಿಮಾತ್ಯ ಶೈಲಿಯ ಶಿಕ್ಷಣ ಕೊಡಿಸಲು ಪ್ರತಿಷ್ಠಿತ ಬ್ರಿಟಿಷ್ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಕಳಿಸುತ್ತಿದ್ದ ರೂಢಿಯಿಂದ ಪ್ರಭಾವಿತರಾಗಿದ್ದ ಮೋತಿಲಾಲ್ ನೆಹರೂ ಕೂಡಾ ತಮ್ಮ ಪುತ್ರ ಜವಾಹರಲಾಲ್ ನೆಹರೂ ಅವರನ್ನು ಹ್ಯಾರೊ ಶಾಲೆಗೆ ದಾಖಲಿಸಿದ್ದರು.
ಯುವಕರಾದ ಜವಾಹರಲಾಲ್ ನೆಹರೂ ಹ್ಯಾರೊ ಶಾಲೆಯಲ್ಲಿ ವ್ಯಾಸಂಗ ನಡೆಸುತ್ತಿದ್ದಾಗ ಕ್ರಿಕೆಟ್ ನಂತಹ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು.
ಜವಾಹರಲಾಲ್ ನೆಹರೂ ಅವರು ಭಾರತದ ಪ್ರಧಾನಿಯಾದ ನಂತರವೂ ಕ್ರೀಡೆಯೆಡೆಗಿನ ಅವರ ಪ್ರೀತಿಯು ಮುಂದುವರಿದಿತ್ತು.
ಸೆಪ್ಟೆಂಬರ್ 1953ರಲ್ಲಿ ದಿಲ್ಲಿಯಲ್ಲಿ ಪ್ರಧಾನ ಮಂತ್ರಿ XI ಹಾಗೂ ಉಪ ರಾಷ್ಟ್ರಪತಿ XI ನಡುವೆ ಕ್ರಿಕೆಟ್ ಪಂದ್ಯ ಆಯೋಜನೆಗೊಂಡಿತ್ತು. ಆ ಪಂದ್ಯದಿಂದ ಸಂಗ್ರಹವಾಗುವ ನಿಧಿಯನ್ನು ಬಿಹಾರ, ಆಂಧ್ರಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿನ ನೆರೆ ಸಂತ್ರಸ್ತರಿಗೆ ವಿತರಿಸುವ ಉದ್ದೇಶ ಹೊಂದಲಾಗಿತ್ತು.
ಜವಾಹರಲಾಲ್ ನೆಹರೂ ಪ್ರಧಾನ ಮಂತ್ರಿ XI ನಾಯಕತ್ವ ಮಾತ್ರ ವಹಿಸದೆ, ಆ ಪಂದ್ಯದ ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. BBC ಸುದ್ದಿ ಸಂಸ್ಥೆಯ ವರದಿಯೊಂದರ ಪ್ರಕಾರ, ಜವಾಹರಲಾಲ್ ನೆಹರೂ 40 ವರ್ಷದ ಬಳಿಕ ಬ್ಯಾಟ್ ಹಿಡಿದಿದ್ದರೂ, ವೃತ್ತಿಪರ ಆಟಗಾರನಂತೆ ತಮ್ಮ ಆಟ ಪ್ರದರ್ಶಿಸಿದ್ದರು ಎಂದು ಹೇಳಲಾಗಿದೆ.
ಭಾರತೀಯ ಕ್ರಿಕೆಟ್ ಅನ್ನು ಉಳಿಸಿದ ನೆಹರೂ
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದಕ್ಕಿದರೂ, ನೂತನ ಸರ್ಕಾರ ಭಾರತವು ಗಣರಾಜ್ಯ ಆಗುವವರೆಗೂ ಅರ್ಥಾತ್ ಸಂವಿಧಾನವನ್ನು ಅಳವಡಿಸಿಕೊಳ್ಳುವವರೆಗೂ ಬ್ರಿಟಿಷ್ ರಾಜಪ್ರಭುತ್ವವನ್ನು ಭಾರತದ ದೊರೆ ಎಂದೇ ಸ್ವೀಕರಿಸಿತ್ತು. ಭಾರತವು ಗಣರಾಜ್ಯವಾಗಬೇಕು ಹಾಗೂ ಬ್ರಿಟಿಷ್ ರಾಜಪ್ರಭುತ್ವದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷ ಬಯಸಿದಾಗ, ಅಂದಿನ ಬ್ರಿಟಿಷ್ ಪ್ರಧಾನ ಮಂತ್ರಿ ಕ್ಲೆಮೆಂಟ್ ಅಟ್ಲೀ ಹಾಗೂ ವಿರೋಧ ಪಕ್ಷದ ನಾಯಕ ವಿನ್ಸ್ಟನ್ ಚರ್ಚಿಲ್ ಅವರು ಕಾಮನ್ ವೆಲ್ತ್ ಭಾಗವಾಗುವಂತೆ ಭಾರತಕ್ಕೆ ಆಮಂತ್ರಣ ನೀಡಿದ್ದರು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಬ್ರಿಟಿಷ್ ಕಾಮನ್ ವೆಲ್ತ್ 54 ಸದಸ್ಯ ದೇಶಗಳ ಹಾಗೂ ಬಹುತೇಕ ಬ್ರಿಟಿಷ್ ಸಾಮ್ರಾಜ್ಯದ ಪೂರ್ವ ಪ್ರಾಂತ್ಯಗಳನ್ನು ಒಳಗೊಂಡಿದ್ದ ಸ್ವಯಂಸೇವಾ ಸಂಸ್ಥೆಯಾಗಿತ್ತು. ಬ್ರಿಟಿಷ್ ರಾಜಪ್ರಭುತ್ವ ಕಾಮನ್ ವೆಲ್ತ್ ನ ಮುಖ್ಯಸ್ಥನಾಗಿತ್ತು. ಹಲವಾರು ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳು ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಚಾರಿತ್ರಿಕ ಸಂಪರ್ಕ ಹೊಂದಿದ್ದುರಿಂದ, ಅವುಗಳಿಗೆ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಸಾಂವಿಧಾನಿಕ ಸಂಪರ್ಕ ಇರಬೇಕಾದ ಅಗತ್ಯವಿರಲಿಲ್ಲ.
ಆದರೆ, ಭಾರತವು ಕಾಮನ್ ವೆಲ್ತ್ ಭಾಗವಾಗುವ ಯೋಜನೆಯನ್ನು ವಿರೋಧಿಸಿದ್ದ ಕಾಂಗ್ರೆಸ್, ಸ್ವಾತಂತ್ರ್ಯ ಗಳಿಕೆಯ ನಂತರ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಯಾವುದೇ ರಾಜಕೀಯ ಅಥವಾ ಸಾಂವಿಧಾನಿಕ ಸಂಪರ್ಕವನ್ನು ಇಟ್ಟುಕೊಳ್ಳಬಾರದು ಎಂಬ ಅಭಿಪ್ರಾಯ ಹೊಂದಿತ್ತು.
ತಮ್ಮ ‘Nine waves: The extraordinary story of Indian cricket’ ಕೃತಿಯಲ್ಲಿ ಭಾರತದ ಕ್ರಿಕೆಟ್ ಪಯಣದ ಕುರಿತು ದಾಖಲಿಸಿರುವ ಭಾರತೀಯ ಮೂಲದ ಬ್ರಿಟಿಷ್ ಪತ್ರಕರ್ತ ಮಿಹಿರ್ ಬೋಸ್, ಭಾರತವು ಗಣರಾಜ್ಯವಾದರೂ, ಅದು ಗಣರಾಜ್ಯವಾಗಿಯೇ ಕಾಮನ್ ವೆಲ್ತ್ ನಲ್ಲಿ ಉಳಿಯಬಹುದು ಹಾಗೂ ರಾಜನನ್ನು ಸ್ವೀಕರಿಸಬಹುದು ಎಂದು ಚರ್ಚಿಲ್ ಸಲಹೆ ನೀಡಿದ್ದರು ಎಂದು ದಾಖಲಿಸಿದ್ದಾರೆ. ಚರ್ಚಿಲ್ ಹಾಗೂ ಬ್ರಿಟಿಷ್ ದೊರೆಯ ಪ್ರಕಾರ, ಬ್ರಿಟಿಷ್ ದೊರೆಯು ಭಾರತದ ರಾಷ್ಟ್ರಪತಿಯಾಗಬಹುದು ಎಂಬ ಉಪಾಯ ಆ ಸಲಹೆಯ ಹಿಂದೆ ಅಡಗಿತ್ತು ಎಂದು ಅವರು ನಮೂದಿಸಿದ್ದಾರೆ.
ಆದರೆ, ಇಂತಹ ಉಪಾಯಗಳು ಬಾಲಿಶ ಎಂಬುದನ್ನು ಪತ್ತೆ ಹಚ್ಚಿದ ನೆಹರೂ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರ ವಿರೋಧದ ಹೊರತಾಗಿಯೂ ಭಾರತವು ಕಾಮನ್ ವೆಲ್ತ್ ನಲ್ಲಿ ಮುಂದುವರಿಯಲು ಸಮ್ಮತ ವ್ಯಕ್ತಪಡಿಸಿದ್ದರು.
ಆದರೆ, ಈ ನಿರ್ಧಾರ ಭಾರತೀಯ ಕ್ರಿಕೆಟ್ ಅನ್ನು ಹೇಗೆ ರಕ್ಷಿಸಿತು?
ಜುಲೈ 19, 1948ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ಲಾರ್ಡ್ಸ್ ನಲ್ಲಿ ಸಭೆ ನಡೆಸಿದಾಗ, ಭಾರತವು ತನ್ನ ಸದಸ್ಯನಾಗಿ ಉಳಿಯಲಿದೆ ಎಂದು ನಿರ್ಧರಿಸಿತಾದರೂ, ಹಂಗಾಮಿ ಆಧಾರದಲ್ಲಿ ಮಾತ್ರ ಭಾರತವು ತನ್ನೊಂದಿಗೆ ಉಳಿಯಲಿದೆ ಎಂಬ ನಿರ್ಧಾರವನ್ನೂ ಕೈಗೊಂಡಿತು. ಇದಾದ ಎರಡು ವರ್ಷಗಳ ನಂತರ ಭಾರತದ ಐಸಿಸಿ ಸದಸ್ಯತ್ವವವು ನವೀಕರಣಗೊಂಡಿತ್ತು.
ಐಸಿಸಿಯ ನಿಯಮ 5ರ ಪ್ರಕಾರ, ಯಾವುದೇ ದೇಶ ಬ್ರಿಟಿಷ್ ಕಾಮನ್ ವೆಲ್ತ್ ನ ಸದಸ್ಯನಾಗಿರದಿದ್ದರೆ, ಅದರ ಐಸಿಸಿ ಸದಸ್ಯತ್ವ ಕೊನೆಯಾಗುತ್ತದೆ ಎಂದು ನಮೂದಿಸಲಾಗಿತ್ತು.
1950ರಲ್ಲಿ ಐಸಿಸಿ ಮತ್ತೆ ಸಭೆ ಸೇರಿದ ಹೊತ್ತಿಗೆ ಭಾರತವು ಸಂವಿಧಾನವನ್ನು ಅಂಗೀಕರಿಸಿದ್ದರೂ, ಭಾರತ ಸರ್ಕಾರದ ಮೇಲೆ ಬ್ರಿಟಿಷ್ ರಾಜಪ್ರಭುತ್ವಕ್ಕೆ ಯಾವುದೇ ಅಧಿಕಾರ ಇಲ್ಲದೆ ಇದ್ದುದರಿಂದ ಭಾರತವು ಕಾಮನ್ ವೆಲ್ತ್ ಸದಸ್ಯನಾಗಿಯೇ ಮುಂದುವರಿಯಲು ನಿರ್ಧರಿಸಿತು. ಭಾರತವು ಕಾಮನ್ ವೆಲ್ತ್ ಸದಸ್ಯತ್ವವನ್ನು ಮರು ಖಾತ್ರಿಗೊಳಿಸಿದ್ದರಿಂದ, ಐಸಿಸಿ ಭಾರತವನ್ನು ಖಾಯಂ ಸದಸ್ಯ ದೇಶವನ್ನಾಗಿಸಿಕೊಂಡಿತು.
ಧರ್ಮಾರ್ಥಕ್ಕಾಗಿ ಕ್ರಿಕೆಟ್ ಬಳಕೆ
ಇತ್ತೀಚೆಗೆ ಜವಾಹರಲಾಲ್ ನೆಹರೂ ಅವರ 134ನೇ ಜನ್ಮದಿನಾಚರಣೆ ನಡೆದ ಸಂದರ್ಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಅವರನ್ನು ‘ಕ್ರಿಕೆಟಿಗ ನೆಹರೂ’ ಎಂದು ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಲು ಸೆಪ್ಟೆಂಬರ್ 1953ರಲ್ಲಿ ಆಯೋಜನೆಗೊಂಡಿದ್ದ ಪ್ರಧಾನ ಮಂತ್ರಿ XI ಹಾಗೂ ಉಪ ರಾಷ್ಟ್ರಪತಿ XI ನಡುವೆ ನಡೆದಿದ್ದ ಪಂದ್ಯದ ಕುರಿತೂ ಅವರು ಮಾತನಾಡಿದ್ದರು.
“ನವೆಂಬರ್, 1948ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡಗಳ ನಡುವೆ ದಿಲ್ಲಿಯಲ್ಲಿ ಪಂದ್ಯ ನಡೆದಿದ್ದ ವೇಳೆ ನೆಹರೂ ಅವರು ಕೆಲವೇ ನಿಮಿಷಗಳ ಕಾಲ ಮಾತ್ರ ರೇಡಿಯೊದಲ್ಲಿ ಮಾತನಾಡಿದರಾದರೂ, ನಂತರ ಅವರು ತಮಗೆ ಕಾಣಿಕೆ ನೀಡಿದ ಕ್ರಿಕೆಟ್ ಬ್ಯಾಟ್ ಗಳು ಹಾಗೂ ಸ್ಕೋರ್ ಬುಕ್ ಗಳನ್ನು ಮಾರಾಟ ಮಾಡುವ ಹರಾಜುದಾರರಾಗಿ ಕಾರ್ಯನಿರ್ವಹಿಸಿದ್ದರು. ಹಾಗೆಯೇ ಫೆಬ್ರವರಿ, 1951ರಲ್ಲಿ ಕಾನ್ಪುರದಲ್ಲಿ ಕಾಮನ್ ವೆಲ್ತ್ ಮತ್ತು ಭಾರತ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲೂ ಅದೇ ಕೆಲಸವನ್ನು ನಿರ್ವಹಿಸಿದ್ದರು” ಎಂದು ಜೈರಾಮ್ ರಮೇಶ್ ಸ್ಮರಿಸಿಕೊಂಡಿದ್ದರು.
ರವಿವಾರ(ನವೆಂಬರ್ 19)ದಂದು ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯವಾಡಲು ಭಾರತ ತಂಡವು ಸಕಲ ಸನ್ನದ್ಧವಾಗಿದ್ದು, ಈ ಹೊತ್ತಿನಲ್ಲಿ ಹೇಗೆ ಕೆಲವು ರಾಜಕೀಯ ನಿರ್ಧಾರಗಳು ಭಾರತೀಯ ಕ್ರಿಕೆಟ್ ಮೇಲೆ ಪ್ರಭಾವ ಬೀರಿದವು ಹಾಗೂ ಹೇಗೆ ಈ ಸಭ್ಯರ ಕ್ರೀಡೆಯನ್ನು 70 ವರ್ಷಗಳ ಹಿಂದೆ ಪರಿಹಾರ ಹಾಗೂ ಪುನರ್ವಸತಿ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು ಎಂಬ ಸಂಗತಿಯು ನೆಹರೂ ಅಧ್ಯಾಯದಿಂದ ಬಹಿರಂಗಗೊಂಡಿದೆ.
ಕೃಪೆ: indiatoday.in