ಈ ಒಬ್ಬ ಸಂಸದರು ಮಾತ್ರ ಸ್ಪೀಕರ್ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಯಾಕೆ ?

Update: 2024-07-04 08:00 GMT

ಅಫ್ಝಲ್ ಅನ್ಸಾರಿ (Photo credit: abplive.com)

ಉತ್ತರ ಪ್ರದೇಶದಿಂದ ಸಮಾಜವಾದಿ ಪಕ್ಷದ ಎಲ್ಲ ಸಂಸದರು ಪ್ರಮಾಣ ವಚನ ಸ್ವೀಕರಿಸುವಾಗ ಅದರ ಓರ್ವ ಸಂಸದರ ಹೆಸರನ್ನು ಸ್ಪೀಕರ್ ಪೀಠದ ಕಡೆಯಿಂದ ಕರೆಯಲೇ ಇಲ್ಲ. ಸಂಸದ ಅಫ್ಝಲ್ ಅನ್ಸಾರಿ ಮೊದಲನೇ ಸಾಲಿನಲ್ಲಿಯೇ ಕುಳಿತಿದ್ದರೂ ಅವರ ಹೆಸರು ಕರೆಯಲಿಲ್ಲ. ಆಗ ಎಸ್ಪಿ ಸಂಸದ ಧರ್ಮೇಂದ್ರ ಯಾದವ್ ಲೋಕಸಭೆಯ ಅಧಿಕಾರಿಗಳಲ್ಲಿ ಮಾತನಾಡುತ್ತಿದ್ದುದು ಕಂಡು ಬಂದಿತ್ತು.

ಸಂಸತ್ತಿನ ಸದನದಲ್ಲಿ ಮೊದಲು ಪ್ರಮಾಣವಚನ ಸ್ವೀಕರಿಸಲು ಅವಕಾಶ ಪಡೆಯದ ಈ ಸಂಸದರು ಯಾರು? ನಂತರ ಲೋಕಸಭಾ ಅಧ್ಯಕ್ಷರ ಕಛೇರಿಯಲ್ಲೇ ಪ್ರಮಾಣವಚನ ಸ್ವೀಕರಿಸಬೇಕಾಗಿ ಬಂದ ಈ ಸಂಸದ ಯಾರು? ಎಸ್ಪಿ ಸಂಸದ ಅಫ್ಝಲ್ ಅನ್ಸಾರಿ ಪ್ರಮಾಣ ವಚನ ಸ್ವೀಕರಿಸುವಲ್ಲಿ ಇಷ್ಟು ತಡ ಯಾಕೆ ಆಯಿತು ಮತ್ತು ಯಾರು ಈ ಅಫ್ಝಲ್ ಅನ್ಸಾರಿ ಎಂಬ ಕುರಿತು ಮಾಹಿತಿ ಇಲ್ಲಿದೆ...

ಬಹುತೇಕ ಬೇರೆ ಎಲ್ಲಾ ಎಸ್ಪಿ ಸಂಸದರು ಜೂನ್ 25 ರಂದು ತಮ್ಮ ಪ್ರಮಾಣ ವಚನ ಸ್ವೀಕರಿಸಿದ್ದರೂ ಘಾಜಿಪುರದಿಂದ ಆಯ್ಕೆಯಾಗಿರುವ ಸಂಸದ ಅಫ್ಜಲ್ ಅನ್ಸಾರಿ ಮಾತ್ರ ಜುಲೈ ಒಂದರ ಸೋಮವಾರದಂದು ಲೋಕಸಭೆಯ ಸ್ಪೀಕರ್ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸದ ಅಫ್ಜಲ್ ಅನ್ಸಾರಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಅದಕ್ಕೂ ಮೊದಲು ಲೋಕಸಭೆಯ ಸದನದಲ್ಲಿ ಸಂಸದರ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದ್ದಾಗ ಅಫ್ಜಲ್ ಅನ್ಸಾರಿ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

ದರೋಡೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಎಪ್ರಿಲ್ 2023 ರಲ್ಲಿ ಆಗ ಬಿಎಸ್ಪಿ ಸಂಸದರಾಗಿದ್ದ ಅಫ್ಜಲ್ ಅನ್ಸಾರಿಗೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯದ ಈ ಆದೇಶದ ನಂತರ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದರು.

ಪ್ರಕರಣದಲ್ಲಿ ಅನ್ಸಾರಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಲೋಕಸಭೆಯು ಕಳೆದ ವರ್ಷ ಮೇ 1 ರಂದು ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಡಿಸೆಂಬರ್ 14 ರಂದು ಸುಪ್ರೀಂ ಕೋರ್ಟ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿತ್ತು.

ಯುಪಿ ಗ್ಯಾಂಗ್‌ಸ್ಟರ್ ಆಕ್ಟ್ ಪ್ರಕರಣದಲ್ಲಿ ಆಗ ಬಿಎಸ್‌ಪಿ ಸಂಸದರಾಗಿದ್ದ ಅಫ್ಜಲ್ ಅನ್ಸಾರಿ ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ 2:1 ಬಹುಮತದಿಂದ ಅಮಾನತುಗೊಳಿಸಿ, ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಲು ಅವಕಾಶ ಮಾಡಿ ಕೊಟ್ಟಿತ್ತು. ಆದರೆ ಹೀಗೆ ಮಾಡುವಾಗ ಸುಪ್ರೀಂ ಕೋರ್ಟ್ ಕೆಲವು ನಿರ್ಬಂಧಗಳನ್ನು ವಿಧಿಸಿತು. ಸುಪ್ರೀಂ ಕೋರ್ಟ್ ಸೂಚನೆಯಂತೆ ಅಫ್ಜಲ್ ಅನ್ಸಾರಿ ಅವರು ಸಂಸತ್ತಿನ ಕಲಾಪದಲ್ಲಿ ಹಾಜರಾಗಬಹುದಾದರೂ ಅವರು ಸಂಸದರಾಗಿ ಮತ ಚಲಾಯಿಸಲು ಅಥವಾ ಸವಲತ್ತುಗಳು ಅಥವಾ ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್ ಹೇಳಿತ್ತು.

ಸುಪ್ರೀಂ ಕೋರ್ಟ್ ನ ಇದೇ ತೀರ್ಪನ್ನು ಇಟ್ಟುಕೊಂಡು ಅನ್ಸಾರಿಯನ್ನು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಕರೆದಿರಲಿಲ್ಲ. ಆದರೆ ಈಗ ಪ್ರತ್ಯೇಕವಾಗಿ ಪ್ರಮಾಣ ವಚನ ಬೋಧಿಸಲಾಗಿದೆ.

ಮೊದಲು ಸಂಸತ್ತಿನಲ್ಲೇ ಅವಕಾಶ ಕೊಡದೆ ನಂತರ ಲೋಕಸಭಾ ಅಧ್ಯಕ್ಷರ ಕಛೇರಿಯಲ್ಲಿ ಯಾಕೆ ಪ್ರಮಾಣವಚನ ಬೋಧಿಸಲಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅನ್ಸಾರಿ ಅವರು ಹೈಕೋರ್ಟಿನಲ್ಲಿ ಕ್ರಿಮಿನಲ್ ಮೇಲ್ಮನವಿ ಬಾಕಿ ಇರುವಾಗ ಭವಿಷ್ಯದ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹರಾಗುವುದಿಲ್ಲ. ಅವರು ಚುನಾಯಿತರಾದರೇ, ಅಂತಹ ಚುನಾವಣೆಯು ಮೊದಲ ಕ್ರಿಮಿನಲ್ ಮೇಲ್ಮನವಿಯ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು.

ಈ ವರ್ಷ ಜೂನ್ 30 ರೊಳಗೆ ಅವರ ಕ್ರಿಮಿನಲ್ ಮೇಲ್ಮನವಿ ಬಗ್ಗೆ ತೀರ್ಮಾನಿಸುವಂತೆ ಅಲಹಾಬಾದ್ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ದಿನಾಂಕ ಈಗಾಗಲೇ ಕಳೆದಿದ್ದು ಬೇಗವೇ ಈ ಮೇಲ್ಮನವಿಯಲ್ಲಿ ತೀರ್ಮಾನ ಬರುವ ಸಾಧ್ಯತೆ ಇದೆ.

ಅಫ್ಜಲ್ ಅನ್ಸಾರಿ ಅವರು 2004 ರ ಲೋಕಸಭಾ ಚುನಾವಣೆಯಲ್ಲೂ ಗಾಝೀಪುರ ಕ್ಷೇತ್ರದಿಂದ ಗೆದ್ದಿದ್ದರು. ಅವರ ಸಹೋದರ ಮುಖ್ತಾರ್ ಅನ್ಸಾರಿ ಅವರು 'ಮೌ' ಕ್ಷೇತ್ರದಿಂದ ಐದು ಬಾರಿ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಮುಕ್ತಾರ್ ಅನ್ಸಾರಿ ಅವರನ್ನು ರಾಬಿನ್ ಹುಡ್ ತರ ಬಿಂಬಿಸಿ ಅವರನ್ನು ʼಬಡವರ ಮಸೀಹʼ ಎಂದು ಕರೆದಿದ್ದರು.

ಮುಕ್ತಾರ್ ಅವರು ಜೈಲಿನಿಂದಲೇ 2009 ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ BSP ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆಗ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಎದುರು ಕೇವಲ 17,211 ಮತಗಳ ಅಲ್ಪ ಅಂತರದಿಂದ ಸೋತಿದ್ದರು. ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ ಮುಖ್ತಾರ್ ಅನ್ಸಾರಿ ಈ ವರ್ಷ ಮಾರ್ಚ್ 28 ರಂದು ತಮ್ಮ 60 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರ ಪುತ್ರ ಉಮರ್ ಅನ್ಸಾರಿ ಅವರು ತಮ್ಮ ತಂದೆಗೆ ಸ್ಲೋ ಪಾಯ್ಸನ್ ನೀಡಿದ್ದರಿಂದ ಹೃದಯಾಘಾತವಾಗಿದೆ ಎಂದು ಆರೋಪಿಸಿದ್ದರು.

ಅನ್ಸಾರಿಯವರ ಅಜ್ಜ ಮುಖ್ತಾರ್ ಅಹ್ಮದ್ ಅನ್ಸಾರಿ, ಖ್ಯಾತ ಶಸ್ತ್ರಚಿಕಿತ್ಸಕ ಮತ್ತು ಅಖಿಲ ಭಾರತ ಮುಸ್ಲಿಂ ಲೀಗ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಅವರು ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸಂಸ್ಥಾಪಕರಲ್ಲಿ ಒಬ್ಬರು. ಅವರ ತಂದೆ ಸುಭಾನ್ ಉಲ್ಲಾ ಅನ್ಸಾರಿ ಅವರು ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದರು. ಮುಖ್ತಾರ್ ಅನ್ಸಾರಿಯವರ ತಾಯಿ ತಂದೆ ಮುಹಮ್ಮದ್ ಉಸ್ಮಾನ್ ಅವರು ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದರು. ಬ್ರಿಗೇಡಿಯರ್ ಮುಹಮ್ಮದ್ ಉಸ್ಮಾನ್ ಅವರು 1947 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಅತ್ಯುನ್ನತ ಶ್ರೇಣಿಯ ಅಧಿಕಾರಿಯಾಗಿದ್ದರು.

ಆ ಕಾಲದಲ್ಲಿ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್ ಅವರು ಭಾರತದ ಜಾತ್ಯತೀತತೆಯ ದೊಡ್ಡ ಸಂಕೇತವಾಗಿ ಗುರುತಿಸಲ್ಪಟ್ಟಿದ್ದರು. ಭಾರತದ ವಿಭಜನೆಯ ಸಮಯದಲ್ಲಿ ಅವರು ಅನೇಕ ಇತರ ಮುಸ್ಲಿಂ ಅಧಿಕಾರಿಗಳೊಂದಿಗೆ ಪಾಕಿಸ್ತಾನದ ಸೇನೆಗೆ ತೆರಳಲು ನಿರಾಕರಿಸಿದ್ದರು ಮತ್ತು ಭಾರತೀಯ ಸೇನೆಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದ್ದರು. ಅವರು ಜುಲೈ 1948 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಸೇನಾಪಡೆಗಳೊಂದಿಗೆ ಹೋರಾಡುವಾಗ ಹುತಾತ್ಮರಾದರು.

ಶತ್ರುಗಳನ್ನು ಎದುರಿಸಿದ ಶೌರ್ಯಕ್ಕಾಗಿ ಅವರಿಗೆ ಎರಡನೇ ಅತ್ಯುನ್ನತ ಭಾರತೀಯ ಮಿಲಿಟರಿ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಲಾಗಿತ್ತು. ಭಾರತದ ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಹಾಮಿದ್ ಅನ್ಸಾರಿ ಅವರು ಅಫ್ಜಲ್ ಅನ್ಸಾರಿಯ ಸೋದರ ಸಂಬಂಧಿ.

ಆಫ್ಝಲ್ ಹಿರಿಯ ಸಹೋದರ ಸಿಬ್ಗತುಲ್ಲಾ ಅನ್ಸಾರಿ ಮೊಹಮ್ಮದಾಬಾದ್ ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮುಖ್ತಾರ್ ಅವರ ಪುತ್ರ ಅಬ್ಬಾಸ್ ಅನ್ಸಾರಿ ಅವರು ಮೌ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ ಮತ್ತು ಸಿಬ್ಘತುಲ್ಲಾ ಅನ್ಸಾರಿ ಅವರ ಪುತ್ರ ಸುಹೈಬ್ ಅನ್ಸಾರಿ ಮೊಹಮ್ಮದಾಬಾದ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News