ಇಸ್ರೇಲ್ ನಡೆಸಿದ ದಶಕಗಳ ಅತಿಕ್ರಮಣ, ನರಮೇಧಗಳ ಚರ್ಚೆ ಯಾಕಿಲ್ಲ ?

► ಇದು ಎರಡು ಸಮಾನ ದೇಶಗಳ ನಡುವಿನ ಸಂಘರ್ಷವೇ ? ಇಸ್ರೇಲ್ ಗೂ ಹಮಾಸ್ ಗೂ ಎಲ್ಲಿಂದೆಲ್ಲಿಯ ಹೋಲಿಕೆ ? ► ಯಾರನ್ನು ಯಾವ ಹೆಸರಿಂದ ಕರೆಯಬೇಕು ಎಂಬುದು ಈಗ ಮುಖ್ಯ ಪ್ರಶ್ನೆಯೇ ?

Update: 2023-10-25 11:20 GMT
Editor : Naufal

Photo: PTI

ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದದ್ದೇನು?. ಇಂದಿನ ಮಧ್ಯಪ್ರಾಚ್ಯದ ಈ ಸನ್ನಿವೇಶದ ಕುರಿತು ಸರಳವಾಗಿ ಹೇಳಬೇಕೆಂದರೆ ಅದು, ಎಲ್ಲ ಇತಿ ಮಿತಿಗಳನ್ನೂ ಮೀರಿ ತಮ್ಮ ಮೇಲೆ ಸತತ ದುರಾಕ್ರಮ ನಡೆಸುವ ಒಂದು ದೇಶದ ಮೇಲೆ, ಆಕ್ರಮಿತ ನಾಡಿನ ‘ಒಂದು ಗುಂಪು’ ನಡೆಸಿದ ಸೀಮಿತ ಪ್ರತ್ಯಾಕ್ರಮಣವಾಗಿತ್ತು.

ಹಲವು ದಶಕಗಳಿಂದ ನಿತ್ಯ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿರುವ ಇಸ್ರೇಲ್ ಎಂಬ ಒಂದು ದೇಶದ ವಿರುದ್ಧ, ಬಹುಕಾಲದಿಂದ ಕಠಿಣ ದಮನ ಮತ್ತು ದಿಗ್ಬಂಧನವನ್ನು ಎದುರಿಸುತ್ತಿರುವ ಫೆಲೆಸ್ತೀನ್‌ನ ಗಾಝಾ ಪಟ್ಟಿಯಿಂದ ನಡೆಸಲಾದ ಈ ಪ್ರತ್ಯಾಕ್ರಮಣದಲ್ಲಿ ಹಲವು ಮುಗ್ಧ ನಾಗರಿಕ ಜೀವಗಳು ಬಲಿಯಾಗಿವೆ. ಹಲವು ನಾಗರಿಕರ ಅಪಹರಣವಾಗಿದೆ.

ಆಕ್ರಮಿತರು ಇಸ್ರೇಲ್ ಮೇಲೆ ನಡೆಸಿದ ಆಕ್ರಮಣದಲ್ಲಿ ಸಂಭವಿಸಿದ ನಾಗರಿಕರ ಈ ಸಾವು ನೋವುಗಳು ಮತ್ತು ನಾಶನಷ್ಟಗಳು ಜಗತ್ತಿನ ಎಲ್ಲ ಮಾನವರ ಒಕ್ಕೊರಲಿನ ಖಂಡನೆಗೆ ಯೋಗ್ಯವಾಗಿದೆ. ಅಂತಹ ಸಾವು ನೋವು, ನಾಶನಷ್ಟಗಳು ಎಂದೂ ಎಲ್ಲೂ ನಡೆಯದಂತೆ ಖಾತರಿ ಪಡಿಸಿಕೊಳ್ಳಲು ಲಭ್ಯವಿರುವ ಉಪಕ್ರಮಗಳ ಕುರಿತು ಜಾಗತಿಕ ಸಮುದಾಯವು ಗಂಭೀರವಾಗಿ ಚರ್ಚಿಸಬೇಕಾಗಿದೆ.

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಣ ಘರ್ಷಣೆಯ ಕುರಿತಾಗಿ ಇಂದು ನಡೆಯುತ್ತಿರುವ ಹೆಚ್ಚಿನ ಚರ್ಚೆಗಳ ದುರಂತವೇನೆಂದರೆ ದೀರ್ಘ ಇತಿಹಾಸವಿರುವ ಈ ಬಿಕ್ಕಟ್ಟನ್ನು ಕೇವಲ ಇತ್ತೀಚಿನ ಒಂದು ನಿರ್ದಿಷ್ಟ ಬೆಳವಣಿಗೆಯನ್ನು ಮಾತ್ರ ಕೇಂದ್ರವಾಗಿಟ್ಟು ನೋಡಲಾಗುತ್ತಿದೆ. ಹಾಗೆಯೇ, ಈ ಕುರಿತಾದ ಹಲವು ಪ್ರಮುಖ ಚರ್ಚೆ-ಸಂವಾದಗಳ ದೊಡ್ಡ ಭಾಗವು, ಯಾರನ್ನು ಯಾವ ಹೆಸರಿಂದ ಕರೆಯಬೇಕು ಎಂಬ ಪ್ರಶ್ನೆಯ ಸುತ್ತಲೇ ಪ್ರದಕ್ಷಿಣೆ ನಡೆಸುತ್ತಿವೆ. ಮಾನವೀಯತೆಯ ಪ್ರಶ್ನೆ ಬಂದಾಗ ಕೂಡಾ ಎರಡು ಪಕ್ಷಗಳ ಮಧ್ಯೆ ಹಿಂಸಾತ್ಮಕ ಘರ್ಷಣೆ ನಡೆಯುತ್ತಿರುವಾಗ ಆ ಪೈಕಿ ಕೇವಲ ಒಂದು ಪಕ್ಷದವರನ್ನು ಮಾತ್ರ ಮಾನವರಾಗಿ ಕಾಣುವ ಮತ್ತು ಇನ್ನೊಂದು ಪಕ್ಷದವರಿಗೆ ಮಾನವೀಯ ಸ್ಥಾನಮಾನವನ್ನೇ ನಿರಾಕರಿಸುವ ಅಪಾಯಕಾರಿ ಕುರುಡು ಪ್ರವೃತ್ತಿ ದೈತ್ಯಗಾತ್ರದಲ್ಲಿ ಮೆರೆಯುತ್ತಿದೆ.

ಅಕ್ಟೊಬರ್ 7ರ ಮಿಸೈಲ್ ದಾಳಿಗಳ ಕುರಿತಾದ ಯಾವುದೇ ಚರ್ಚೆಯಲ್ಲಿ, ಆಕ್ರಮಣಕಾರಿ ಇಸ್ರೇಲ್ ಸರಕಾರ ಅಕ್ಟೊಬರ್ 7 ಕ್ಕಿಂತ ಮುನ್ನ ಹಲವು ದಶಕಗಳ ಕಾಲ ನಡೆಸಿರುವ ವ್ಯಾಪಕ ಅತಿಕ್ರಮಣಗಳನ್ನು, ಘೋರ ಯುದ್ಧಾಪರಾಧಗಳನ್ನು, ನರಮೇಧಗಳನ್ನು, ವಿಧ್ವಂಸಕ ಕೃತ್ಯಗಳನ್ನು, ಅಂತರ್‌ರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯನ್ನು, ಮಾನವ ಹಕ್ಕುಗಳ ಹರಣವನ್ನು ಹಾಗೂ ಅಕ್ಟೊಬರ್ 7ರ ಬಳಿಕ ಒಂದೇ ವಾರದಲ್ಲಿ ಅದು ಮೆರೆದಿರುವ ವಿನಾಶವನ್ನು ಮತ್ತು ಇದೆಲ್ಲದರ ಪರಿಣಾಮ ಮತ್ತು ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದುದು ನ್ಯಾಯಪ್ರಜ್ಞೆಯ ಸಹಜ ಬೇಡಿಕೆಯಾಗಿದೆ.

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಣ ಘರ್ಷಣೆಯ ಕುರಿತು ಮಾತನಾಡುವಾಗ ಅನೇಕರು ಇದು ಎರಡು ಸಮಾನ ದೇಶಗಳ ನಡುವಣ ಸಂಘರ್ಷ ಎಂಬಂತೆ ಮಾತನಾಡುತ್ತಾರೆ. ಫೆಲೆಸ್ತೀನ್ ಜನತೆ ನಿಜವಾಗಿ ಇಸ್ರೇಲ್ ಜನತೆಗೆ ಸಮಾನಾಂತರವಾದ ಒಂದು ಸಮಾಜವಾಗಲಿ ಸರಕಾರವಾಗಲಿ ಅಲ್ಲ. ಆರ್ಥಿಕ ಅಥವಾ ಸೈನಿಕ ಸಾಮರ್ಥ್ಯದ ದೃಷ್ಟಿಯಿಂದ ಅವೆರಡರ ನಡುವೆ ಯಾವ ಹೋಲಿಕೆಯೂ ಇಲ್ಲ.

ಇಸ್ರೇಲ್, ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಸೇನಾ ಶಕ್ತಿಯ ದೃಷ್ಟಿಯಿಂದ ಅತ್ಯಂತ ಬಲಿಷ್ಠ ದೇಶಗಳ ಸಾಲಲ್ಲಿ ನಿಂತಿದ್ದರೆ, ಫೆಲೆಸ್ತೀನ್ ಸರಕಾರ ಮತ್ತು ಅಲ್ಲಿನ ಎಲ್ಲ ಗುಂಪುಗಳ ಒಟ್ಟು ಸಾಮರ್ಥ್ಯವನ್ನು ಹೆಚ್ಚೆಂದರೆ ಯಾವುದಾದರೂ ಕಡು ಬಡ ದೇಶದ ಮಹಾ ನಗರಪಾಲಿಕೆಗೆ ಹೋಲಿಸಬಹುದಷ್ಟೇ.

ಒಂದೇ ದಿನ ಇಸ್ರೇಲ್ ಮೇಲೆ ಐದು ಸಾವಿರ ಮಿಸೈಲ್ ಗಳನ್ನು ಎಸೆದದ್ದು, ಇಸ್ರೇಲಿನ ಸುಭದ್ರ ಗಡಿಗೋಡೆಗಳನ್ನು ಒಡೆದು ಹಾಕಿದ್ದು ಇವನ್ನೆಲ್ಲ ಕೆಲವು ಹಮಾಸ್ ಅಭಿಮಾನಿಗಳು ಹಮಾಸ್‌ನ ಸಾಹಸಮಯ ಹಾಗೂ ಜಾಣ ಸಾಧನೆಗಳೆಂದು ಪ್ರಶಂಸಿಸಿ ಪುಳಕಿತರಾಗುತ್ತಿದ್ದಾರೆ. ಇದೆಲ್ಲಾ ಇಸ್ರೇಲ್‌ನ ಗುಪ್ತಚರ ವ್ಯವಸ್ಥೆ ಸಂಪೂರ್ಣ ವಿಫಲವಾಗಿರುವುದಕ್ಕೆ ಸಾಕ್ಷಿ ಎಂದು ಸಂಭ್ರಮಿಸುತ್ತಿದ್ದಾರೆ.

ನಿಜವಾಗಿ ಸ್ವಲ್ಪ ದೂರದೃಷ್ಟಿಯಿಂದ ನೋಡಿದರೆ ಹಮಾಸ್‌ನ ಕಾರ್ಯಾಚರಣೆಯಲ್ಲಿ ಸ್ವತಃ ಆಕ್ರಮಿತ ಹಾಗೂ ಮರ್ದಿತ ಫೆಲೆಸ್ತೀನ್ ಜನತೆಗೆ ಹಿತಕ್ಕಿಂತ ಹೆಚ್ಚು ಅಹಿತವಾಗುವ ಸಾಧ್ಯತೆ ಎದ್ದು ಕಾಣುತ್ತದೆ. ತಮ್ಮ ಶಕ್ತಿ ಸಾಮರ್ಥ್ಯಗಳಿಗೆ ಹೋಲಿಸಿದರೆ ಹತ್ತಾರು ಪಾಲು ಕಡಿಮೆ ಶಕ್ತಿ ಇರುವ ಅಸಹಾಯಕ ದುರ್ಬಲರ ಮೇಲೆ ಆಕ್ರಮಣ ಮಾಡುವವರನ್ನು ನಾವು ವೀರಶೂರರೆಂದು ಬಣ್ಣಿಸುವ ಬದಲು ಪರಮ ಹೇಡಿಗಳೆಂದು ಗುರುತಿಸುತ್ತೇವೆ.

ಹಾಗೆಯೇ, ತಮಗಿಂತ ನೂರಾರು ಪಾಲು ಹೆಚ್ಚು ಶಕ್ತಿ ಸಾಮರ್ಥ್ಯ ಇರುವವರ ಮೇಲೆ ಆಕ್ರಮಣ ಮಾಡುವವರ ಕೃತ್ಯವನ್ನು ಧೈರ್ಯ ಅಥವಾ ಪರಾಕ್ರಮ ಎಂದೆಲ್ಲ ಕರೆಯುವ ಬದಲು ಶುದ್ಧ ಭಂಡತನ ಎಂದೇ ಕರೆಯುತ್ತೇವೆ. ಹಮಾಸ್ ಮಾಡಿದ ದಾಳಿ ಕೇವಲ ಇಸ್ರೇಲ್‌ಗೆ ಒಂದಷ್ಟು ನಷ್ಟವುಂಟು ಮಾಡುವಲ್ಲಿ ಕೊನೆಗೊಳ್ಳುವುದಿಲ್ಲ. ಅದು ಸ್ವತಃ ಫೆಲೆಸ್ತೀನ್‌ನ ಅಸಹಾಯಕ ಜನತೆಯ ಮೇಲೆ ಭೀಕರ ಪ್ರಳಯವನ್ನು ಆಮಂತ್ರಿಸುವ ಮತ್ತು ಆ ಮೂಲಕ ಈಗಾಗಲೇ ತೀರಾ ದಾರುಣ ಸ್ಥಿತಿಯಲ್ಲಿರುವ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೃತ್ಯವಾಗುವ ಎಲ್ಲ ಸಾಧ್ಯತೆಗಳಿವೆ.

ಹಮಾಸ್‌ನ ಇರಾದೆ ಏನೇ ಇದ್ದರೂ ಅದರ ಈ ದಾಳಿ ಫೆಲೆಸ್ತೀನ್ ಜನತೆಯ ಯಾವುದೇ ಅಗತ್ಯವನ್ನು ಈಡೇರಿಸುವ ಬದಲು ಅವರ ಶತ್ರುವಾದ ಇಸ್ರೇಲ್ ಮತ್ತು ಅಲ್ಲಿಯ ಭ್ರಷ್ಟ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಲವು ಅಗತ್ಯಗಳನ್ನು ಈಡೇರಿಸಿರುವ ಸಾಧ್ಯತೆ ಖಂಡಿತ ಇದೆ. ಇಸ್ರೇಲ್ ಸರಕಾರಕ್ಕೆ ಈ ಎಲ್ಲ ಕಾರ್ಯಾಚರಣೆಗಳ ಬಗ್ಗೆ ಮೊದಲೇ ತಿಳಿದಿದ್ದು, ಅದು ಫೆಲೆಸ್ತೀನ್ ವಿರುದ್ಧ ತಾನು ಈ ಹಿಂದೆಯೇ ಯೋಜಿಸಿದ್ದ ಒಂದು ದೊಡ್ಡ ಅಮಾನುಷ ಕಾರ್ಯಾಚರಣೆಗೆ ಇಸ್ರೇಲಿನೊಳಗಿಂದ ಹಾಗೂ ಹೊರಜಗತ್ತಿನಿಂದ ಬೆಂಬಲ ಪಡೆಯುವುದಕ್ಕಾಗಿ ಈ ಕುರಿತು ಜಾಣ ಕುರುಡು ಪ್ರದರ್ಶಿಸಿರುವ ಸಾಧ್ಯತೆಯೂ ಇದೆ.

ದಿನೇದಿನೇ ಕುಸಿಯುತ್ತಿರುವ ತನ್ನ ಜನಪ್ರಿಯತೆಯನ್ನು ಮರಳಿ ಪಡೆದು ಇಸ್ರೇಲ್‌ನೊಳಗೆ ಕ್ಷಿಪ್ರವಾಗಿ ಬೆಳೆಯುತ್ತಿದ್ದ ತನ್ನ ವಿರೋಧಿಗಳನ್ನು ಹತ್ತಿಕ್ಕುವುದಕ್ಕೆ ಈ ಹಮಾಸ್ ದಾಳಿಯು ನೆತನ್ಯಾಹುರಿಗೆ ಒಂದು ಸುವರ್ಣಾವಕಾಶವನ್ನು ಒದಗಿಸಿದೆ ಎಂಬುದರಲ್ಲಂತೂ ಸಂದೇಹವೇ ಇಲ್ಲ. ಅಕ್ಟೊಬರ್ 7 ರಂದು ಇಸ್ರೇಲ್ ಮೇಲೆ ನಡೆದ ಮಿಸೈಲ್ ದಾಳಿ ಗಾಝಾ ಪಟ್ಟಿಯಿಂದ ನಡೆದಿತ್ತು. ಗಾಝಾ ಪಟ್ಟಿ ಎಂಬುದು ಒಂದು ಸ್ವತಂತ್ರ ದೇಶವಲ್ಲ. ಅದು ಕಳೆದ 56 ವರ್ಷಗಳಿಂದ ಇಸ್ರೇಲ್‌ನ ಅಕ್ರಮ ವಶದಲ್ಲಿರುವ ಒಂದು ಪ್ರದೇಶ. 1967ರಲ್ಲಿ ಈ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ಇಸ್ರೇಲ್ ಸರಕಾರ 2005 ರಲ್ಲಿ ತಾನು ಅದನ್ನು ಬಿಟ್ಟುಕೊಟ್ಟಿರುವುದಾಗಿ ಹೇಳಿಕೊಂಡಿತ್ತು.

ಆದರೆ ವಿಶ್ವ ಸಂಸ್ಥೆ, ಯುರೋಪಿಯನ್ ಒಕ್ಕೂಟ ಮತ್ತು ಅನೇಕ ದೇಶಗಳು ಹಾಗೂ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಅದನ್ನು ಈಗಲೂ ಆಕ್ರಮಿತ ಪ್ರದೇಶವೆಂದೇ ಗುರುತಿಸುತ್ತವೆ. ಗಾಝಾ ಪಟ್ಟಿಯ ಸ್ಥಿತಿಗತಿಗಳನ್ನು ಕೆಲವರು ‘ಜಗತ್ತಿನ ಅತಿದೊಡ್ಡ ಓಪನ್ ಏರ್ ಬಂದಿಖಾನೆ’ ಎಂದು ವರ್ಣಿಸಿದರೆ ಮತ್ತೆ ಕೆಲವರು ಅದನ್ನು ‘ಜಗತ್ತಿನ ಅತ್ಯಧಿಕ ಜನದಟ್ಟಣೆ ಇರುವ ಕೊಳಚೆ ಪ್ರದೇಶಗಳಲ್ಲೊಂದು’ ಎಂದು ಚಿತ್ರಿಸುತ್ತಾರೆ.

ನಮ್ಮ ಬೆಂಗಳೂರು ನಗರ ಜಿಲ್ಲೆಯ ವಿಸ್ತೀರ್ಣ ಸುಮಾರು 2,200 ಚದರ ಕಿಲೋ ಮೀಟರ್ ಗಳಷ್ಟಿದ್ದರೆ, ಗಾಝಾ ಪಟ್ಟಿಯ ಒಟ್ಟು ವಿಸ್ತೀರ್ಣ ಕೇವಲ 365 ಚದರ ಕಿಲೋಮೀಟರ್ ಗಳು. ಅಂದರೆ ಬೆಂಗಳೂರು ನಗರ ಜಿಲ್ಲೆಯ ಕೇವಲ ಸುಮಾರು 16ಶೇ. ಭಾಗ. ಇಷ್ಟು ಸಣ್ಣ ಭೂಭಾಗದಲ್ಲಿ 22 ಲಕ್ಷಕ್ಕೂ ಹೆಚ್ಚು ಫೆಲೆಸ್ತೀನ್ ನಾಗರಿಕರು ಎಲ್ಲ ಬಗೆಯ ಮಾನವೀಯ ಮತ್ತು ನಾಗರಿಕ ಹಕ್ಕು ಹಾಗೂ ಸವಲತ್ತುಗಳಿಂದ ವಂಚಿತರಾಗಿ ಘೋರ ಅಸ್ಥಿರತೆ, ಅಭದ್ರತೆ, ದಾರಿದ್ರ್ಯ, ನಿರ್ಬಂಧ ಮತ್ತು ಅಪಮಾನದ ಬದುಕು ಸಾಗಿಸುತ್ತಿದ್ದಾರೆ. ಇಸ್ರೇಲ್ ಸರಕಾರ ಪದೇ ಪದೇ ಅವರ ನೀರು, ವಿದ್ಯುತ್ ಮಾತ್ರವಲ್ಲ ಆಹಾರ ಸರಬರಾಜಿಗೂ ತಡೆಯೊಡ್ಡುವ ಮೂಲಕ ಅವರ ದಾಸ್ಯವನ್ನು ಅವರಿಗೆ ನೆನಪಿಸುತ್ತಿರುತ್ತದೆ.

ಅಲ್ಲಿ ಎಷ್ಟೇ ಗಟ್ಟಿಯ ಕಟ್ಟಡಗಳನ್ನು ಕಟ್ಟಿದರೂ ಅವು ಎಷ್ಟು ತಿಂಗಳು ನಿಂತಿರುತ್ತವೆಂದು ಹೇಳಲು ಯಾರಿಗೂ ಸಾಧ್ಯವಾಗುವುದಿಲ್ಲ. ಇದು ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನ್ ಜನತೆಯ ಕಥೆಯಾದರೆ, ಪಶ್ಚಿಮದಂಡೆಯಲ್ಲಿರುವ ಫೆಲೆಸ್ತೀನಿಗಳು, ವಿವಿಧ ಅರಬ್ ದೇಶಗಳಲ್ಲಿ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ನೆಲೆಯಿಲ್ಲದೆ ನಿರಾಶ್ರಿತರಾಗಿ ಬದುಕುತ್ತಿರುವ ಫೆಲೆಸ್ತೀನಿಗಳು ಮತ್ತು ಸಾಕ್ಷಾತ್ ಇಸ್ರೇಲ್ ನೊಳಗೆ ಎರಡನೇ ದರ್ಜೆಯ ನಾಗರಿಕರಾಗಿರುವ ಫೆಲಸ್ತೀನಿಗಳ ಕಥೆ ಬೇರೆಯೇ ಇದೆ.

ಈ ಹಿನ್ನೆಲೆಯಲ್ಲಿ ಹಮಾಸ್‌ನ ದಾಳಿಯು, ಎಲ್ಲ ಬಗೆಯ ದಮನಕ್ಕೆ ತುತ್ತಾಗಿರುವ ಒಂದು ಅಸಹಾಯಕ ವರ್ಗದ ಹತಾಶ ಕ್ರಮವೆಂಬಂತೆ ತೋರುತ್ತದೆ. ಕೆಲವರಿಗೆ ಈ ಒಟ್ಟು ಬಿಕ್ಕಟ್ಟಿನಲ್ಲಿ, ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯಬೇಕೆಂದು ಆಗ್ರಹಿಸುವ ಅವಕಾಶ ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ. ಅವರು ಸೂಕ್ಷ್ಮದರ್ಶಕ ಹಿಡಿದು, ಹಾಗೆ ಕರೆಯಲು ಹಿಂಜರಿಯುವವರಿಗಾಗಿ ಹುಡುಕುತ್ತಲೇ ಇರುತ್ತಾರೆ.

ಮೊನ್ನೆ ನಮ್ಮ ದೇಶದ ವಿದೇಶಾಂಗ ವ್ಯವಹಾರಗಳ ತಜ್ಞ ಶಶಿತರೂರ್, ಹಮಾಸ್ ಅನ್ನು ಹೊಗಳಲಿಲ್ಲ. ಅದರ ಆಕ್ರಮಣವನ್ನು ಸ್ಪಷ್ಟವಾಗಿ ಖಂಡಿಸಿದರು. ಆದರೆ ಅವರು ಹಮಾಸ್ ಕುರಿತು ‘ಭಯೋತ್ಪಾದಕ’ ಎಂಬ ಪದವನ್ನು ಬಳಸಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಹಲವಾರು ಮಂದಿ ಅವರನ್ನು ಬೇಟೆಯಾಡಲು ಹೊರಟರು.

ಸಾಕ್ಷಾತ್ ಭಾರತ ಸರಕಾರವೇ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಹೆಸರಿಸಿಲ್ಲ ಎಂದು ತರೂರ್ ಒತ್ತಿ ಹೇಳಿದಾಗ ಬೇಟೆಯಾಳುಗಳು ತುಸು ಸುಮ್ಮನಾದರು. ಅತ್ತ ಜಗದ್ವಿಖ್ಯಾತ ಸುದ್ದಿ ಸಂಸ್ಥೆ ಬಿಬಿಸಿ ಕೂಡಾ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯದೆ ಇದ್ದುದಕ್ಕಾಗಿ ಆಕ್ಷೇಪ ಮತ್ತು ಬೈಗಳಗಳ ಸುರಿ ಮಳೆಯನ್ನೇ ಎದುರಿಸಬೇಕಾಯಿತು.

ಈ ಕುರಿತು ಸ್ಪಷ್ಟನೆ ನೀಡಿದ ಬಿಬಿಸಿಯ ಜಾಗತಿಕ ವ್ಯವಹಾರಗಳ ಸಂಪಾದಕ ಜಾನ್ ಸಿಂಪ್ಸನ್ ಅವರು ಹೀಗೆ ಬರೆದರು: ‘ಯಾರನ್ನು ಬೆಂಬಲಿಸಬೇಕು, ಯಾರನ್ನು ಖಂಡಿಸಬೇಕು, ಯಾರು ಸಜ್ಜನರು ಮತ್ತು ಯಾರು ದುಷ್ಟರು ಎಂಬುದನ್ನೆಲ್ಲ ಜನರಿಗೆ ತಿಳಿಸುವುದು ಬಿಬಿಸಿಯ ಕೆಲಸವಲ್ಲ. ನಾನು ಕಳೆದ 50 ವರ್ಷಗಳಿಂದ ಮಧ್ಯ ಪ್ರಾಚ್ಯದ ಬೆಳವಣಿಗೆಗಳ ಕುರಿತು ವರದಿ ಮಾಡುತ್ತಾ ಬಂದಿದ್ದೇನೆ. ಇದೀಗ ಇಸ್ರೇಲ್ ನಲ್ಲಿ ನಡೆದಿರುವಂತಹ ದಾಳಿಯ ನಂತರ ಏನಾಗುತ್ತದೆಂಬುದನ್ನು ನೋಡಿದ್ದೇನೆ. ಹಾಗೆಯೇ, ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸರಕಾರ ನಾಗರಿಕರನ್ನು ಗುರಿಯಾಗಿಸಿ ಲೆಬನಾನ್ ಮತ್ತು ಗಾಝಾದಲ್ಲಿ ನಡೆಸುವ ಬಾಂಬ್ ಮತ್ತು ಆರ್ಟಿಲರಿ ದಾಳಿಗಳ ನಂತರ ಏನಾಗುತ್ತದೆಂಬುದನ್ನೂ ನೋಡಿದ್ದೇನೆ. ಅವೆಲ್ಲಾ ಮನಸ್ಸಿನಿಂದ ಎಂದೂ ಮಾಸಿಹೋಗದಷ್ಟು ಭಯಾನಕವಾಗಿರುತ್ತವೆ.’

ಪ್ರಶ್ನೆ ಕೇವಲ ನಾಮಕರಣದ್ದಲ್ಲ. ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವುದರಿಂದ ಯಾವುದಾದರೂ ಸಮಸ್ಯೆ ಬಗೆಹರಿಯುವುದಿದ್ದರೆ, ಖಂಡಿತ ನಾವು ಸ್ವಲ್ಪವೂ ತಡಮಾಡದೆ ಒಕ್ಕೊರಲಿನಿಂದ ಆ ಕೆಲಸ ಮಾಡಬಹುದಿತ್ತು. ಹಮಾಸ್ ಮಾಡಿರುವ ಕೆಲಸ ಪ್ರೇಮೋತ್ಪಾದನೆಯಂತೂ ಅಲ್ಲ. ಅತ್ತ ಇಸ್ರೇಲ್ ಕೂಡ ಪ್ರೇಮೋತ್ಪಾದಕ ದೇಶವೇನೂ ಅಲ್ಲ.

ಹಮಾಸ್ ನ ಕಾರ್ಯಾಚರಣೆಗೆ ಹೋಲಿಸಿದರೆ ಅದಕ್ಕಿಂತ ಸಾವಿರ ಪಟ್ಟು ಭೀಕರ ಕಾರ್ಯಾಚರಣೆಗಳನ್ನು ಇಸ್ರೇಲ್ ಸರಕಾರ ಸಾವಿರ ಬಾರಿ ಮಾಡಿದೆ. ಜಗತ್ತಿನಲ್ಲಿ ಅತ್ಯಧಿಕ ಬಾರಿ ಅಂತರ್‌ರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದ ದಾಖಲೆ ಇಸ್ರೇಲ್ ಹೆಸರಲ್ಲಿದೆ. ಅತ್ಯಧಿಕ ಬಾರಿ ವಿಶ್ವಸಂಸ್ಥೆಯಿಂದ ಖಂಡನಾ ನಿರ್ಣಯಗಳನ್ನು ಪಡೆದ ಶ್ರೇಯ ಕೂಡ ಇಸ್ರೇಲ್‌ಗೆ ಸೇರುತ್ತದೆ.

ನಿಶ್ಶಸ್ತ್ರ ನಾಗರಿಕರು, ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವ, ಅವರಿಂದ ಅವರ ಪೌರತ್ವ, ಜಮೀನು ಮತ್ತು ಮನೆಗಳನ್ನು ಕಿತ್ತುಕೊಳ್ಳುವ, ಅವರಿಗೆ ಮಾನವ ಹಕ್ಕುಗಳು, ನಾಗರಿಕ ಹಕ್ಕುಗಳು, ಅನ್ನಾಹಾರ, ಶಿಕ್ಷಣ ಮತ್ತು ಚಿಕಿತ್ಸೆಯನ್ನು ನಿರಾಕರಿಸುವ ವಿಷಯದಲ್ಲಿ ಇಸ್ರೇಲ್‌ನ ಕರಾಳ ದಾಖಲೆಗೆ ಹೋಲಿಸಿದರೆ ಹಮಾಸ್‌ನ ಕುಕೃತ್ಯಗಳು ತೀರಾ ಕುಬ್ಜವಾಗಿ ಕಾಣಿಸುತ್ತವೆ.

ಇದೇ ಕಾರಣಕ್ಕೆ ಹಲವರು ಇಸ್ರೇಲ್ ಅನ್ನು ಕಿಡಿಗೇಡಿ ದೇಶ ಹಾಗೂ ಭಯೋತ್ಪಾದಕ ದೇಶ ಎಂದು ಕರೆಯುತ್ತಾರೆ. ಒಬ್ಬರ ಭಯೋತ್ಪಾದಕ ಇನ್ನೊಬ್ಬರ ಸ್ವಾತಂತ್ರ್ಯ ಹೋರಾಟಗಾರನಾಗಿರುತ್ತಾನೆ. ನಮ್ಮ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ದೃಷ್ಟಿಯಲ್ಲಿ ಮಾತ್ರವಲ್ಲ ಅವರ ಅಧಿಕೃತ ದಾಖಲೆಗಳಲ್ಲಿ ಕೂಡಾ ಭಯೋತ್ಪಾದಕರಾಗಿದ್ದರು. ಅವರ ಇತಿಹಾಸ ಪುಸ್ತಕಗಳಲ್ಲಿ ವೀರಶೂರರೆಂದು ಬಣ್ಣಿಸಲಾದ ಅನೇಕರನ್ನು ನಾವು ಪರಮ ಕ್ರೂರ ನರಹಂತಕರ ಖಾತೆಗೆ ಸೇರಿಸಿರುತ್ತೇವೆ.

ಎಂದೂ ಮುಗಿಯದ ಈ ನಾಮಕರಣದ ಪ್ರಕ್ರಿಯೆಯಿಂದ ಯಾರಿಗೂ ಲಾಭವಾಗುವ ಸಾಧ್ಯತೆಯಿಲ್ಲ. ಹಮಾಸ್ ಸಂಘಟನೆ ಎಲ್ಲ ಫೆಲೆಸ್ತೀನ್ ನಾಗರಿಕರನ್ನು ಅಥವಾ ಎಲ್ಲ ಅರಬ್ ನಾಗರಿಕರನ್ನು ಪ್ರತಿನಿಧಿಸುವುದಿಲ್ಲ ಎಂಬುದು ಎಷ್ಟು ಸತ್ಯವೋ, ಇಸ್ರೇಲ್ ಸರಕಾರವು ಯಹೂದಿ ಧರ್ಮವನ್ನಾಗಲಿ, ಜಾಗತಿಕ ಯಹೂದಿ ಸಮುದಾಯವನ್ನಾಗಲಿ ಸ್ವತಃ ಇಸ್ರೇಲ್‌ನೊಳಗಿನ ಯಹೂದಿಯರನ್ನಾಗಲಿ ಪ್ರತಿನಿಧಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ.

ಇದಕ್ಕೆ ಪುರಾವೆ ಎಂಬಂತೆ ಇಂದು ಅಮೆರಿಕ, ಯುರೋಪ್ ಮಾತ್ರವಲ್ಲ ಸಾಕ್ಷಾತ್ ಇಸ್ರೇಲ್‌ನ ಒಳಗಿರುವ ಹಮಾಸ್ ವಿರೋಧಿ ಯಹೂದಿಗಳು ದೊಡ್ಡ ಸಂಖ್ಯೆಯಲ್ಲಿ ಇಸ್ರೇಲ್ ಸರಕಾರದ ಧೋರಣೆಗಳ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಇಸ್ರೇಲ್‌ನಿಂದ ಹೊರಡುವ ಬಹುಭಾಷಾ ಪತ್ರಿಕೆ ‘ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿರುವಂತೆ, ಕೆಲವು ವರ್ಷಗಳಿಂದ ಅಮೆರಿಕದಲ್ಲಿ ಸಕ್ರಿಯವಾಗಿರುವ ಅಲ್ಲಿನ ಯಹೂದಿಗಳ ಸಂಘಟನೆ ‘ಇಫ್ ನಾಟ್ ನೌ’ ಇಸ್ರೇಲ್‌ನ ಧೋರಣೆಯನ್ನು ಖಂಡಿಸಿದೆ. ‘ಫೆಲೆಸ್ತೀನ್ ಉಗ್ರವಾದಿಗಳು ನಡೆಸಿರುವ ದಾಳಿಯನ್ನು ನಾವು ಅಪ್ರಚೋದಿತ ಎಂದು ಪರಿಗಣಿಸುವುದಿಲ್ಲ. ಇಸ್ರೇಲ್ ಸರಕಾರದ ವರ್ಣಭೇದ ವ್ಯವಸ್ಥೆಯಡಿಯಲ್ಲಿ ಪ್ರತಿಯೊಂದು ದಿನವೂ ಪ್ರಚೋದನೆಯಾಗಿದೆ. ಗಾಝಾದ ಮೇಲೆ ಹೇರಲಾಗಿರುವ ಉಸಿರುಗಟ್ಟಿಸುವ ದಿಗ್ಬಂಧನ ಕೂಡಾ ಪ್ರಚೋದನೆಯಾಗಿದೆ’ ಎಂದು ಸಂಘಟನೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

‘ಅಕ್ಟೋಬರ್ 7 ರ ದಾಳಿಯಲ್ಲಿ ಹತರಾದವರ ಕುರಿತು, ಅವರ ರಕ್ತದ ಕಲೆಗಳು ಇಸ್ರೇಲ್ ಸರಕಾರದ ಕೈಗಳ ಮೇಲಿವೆ. ಹಾಗೆಯೇ ಅವು ಇಸ್ರೇಲ್ ಸರಕಾರಕ್ಕೆ ಧನಸಹಾಯ ಮಾಡುವ ಹಾಗೂ ಅದರ ಎಲ್ಲ ಅತಿಕ್ರಮಗಳನ್ನು ಕ್ಷಮಿಸುವ ಅಮೆರಿಕ ಸರಕಾರ ಮತ್ತು ಹಲವು ದಶಕಗಳಿಂದ ಫೆಲೆಸ್ತೀನ್ ಜನತೆಯ ಮೇಲೆ ನಡೆಯುತ್ತಿರುವ ಅನ್ಯಾಯಗಳು ಹಾಗೂ ಅದರಿಂದ ಫೆಲೆಸ್ತೀನ್ ಮತ್ತು ಇಸ್ರೇಲ್ ಗಳಿಗೆ ಆಗಿರುವ ನಷ್ಟಗಳನ್ನು ಕಡೆಗಣಿಸುವ ಪ್ರತಿಯೊಬ್ಬ ಅಂತರ್‌ರಾಷ್ಟ್ರೀಯ ನಾಯಕನ ಕೈಗಳ ಮೇಲೂ ಆ ಕಲೆಗಳಿವೆ’ ಎಂದು ಪ್ರಸ್ತುತ ಹೇಳಿಕೆಯಲ್ಲಿ ವಾದಿಸಲಾಗಿದೆ.

ನಿನ್ನೆ ಒಂದು ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಭಾಷಣ ಮಾಡುತ್ತಿದ್ದಾಗ, "ಗಾಝಾ ದಲ್ಲಿ ಯುದ್ಧ ನಿಲುಗಡೆ ಘೋಷಿಸಬೇಕು ಮತ್ತು ನಾಗರಿಕರ ಹತ್ಯೆಯನ್ನು ತಕ್ಷಣ ನಿಲ್ಲಿಸಬೇಕು" ಎಂಬ ಘೋಷಣೆಗಳು ಮೊಳಗಿದವು. ಯುದ್ಧ ನಿಲುಗಡೆಗೆ ಆಗ್ರಹಿಸಿ ಇಸ್ರೇಲ್ ನೊಳಗೂ ಪ್ರದರ್ಶನಗಳು ನಡೆದಿವೆ.

ಸದ್ಯ ಇಸ್ರೇಲ್ ನಲ್ಲಿ ತಲೆ ಎತ್ತಿರುವ ಬೆಳವಣಿಗೆಗಳಿಗೆ ಇನ್ನೊಂದು ಭಯಾನಕ ಆಯಾಮವಿದೆ. ಪ್ರಸ್ತುತ ಬಿಕ್ಕಟ್ಟು ಕೇವಲ ಇಸ್ರೇಲ್ ಮತ್ತು ಫೆಲೆಸ್ತೀನ್‌ನವರಿಗೆ ಸೀಮಿತವಾಗಿ ಉಳಿಯದೆ ಇತರ ಹಲವು ದೇಶಗಳು ಇದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸನ್ನಿವೇಶ ಕೈ ಮೀರಿದರೆ ಇದು, ಮಾನವಕುಲದ ಮೇಲೆ, ಊಹಿಸಲಿಕ್ಕೂ ಸಾಧ್ಯವಿಲ್ಲದ ನಾಶನಷ್ಟಗಳನ್ನು ತಂದೊಡ್ಡಬಲ್ಲ ಮೂರನೆಯ ಜಾಗತಿಕ ಮಹಾ ಯುದ್ಧಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಕೂಡಾ ಇದೆ. ಜಗತ್ತಿನಲ್ಲಿ ಹೆಚ್ಚಿನ ದೇಶಗಳಿಗೆ ಮತ್ತು ಅವುಗಳನ್ನು ನಿಯಂತ್ರಿಸುವ ರಾಜಕಾರಣಿಗಳಿಗೆ ಯಾವುದೇ ತತ್ವ ಸಿದ್ಧಾಂತ ಅಥವಾ ಮೌಲ್ಯಕ್ಕಿಂತ ತಮ್ಮ ತಕ್ಷಣದ ಹಿತ ಮುಖ್ಯವಾಗಿರುತ್ತದೆ.

ನಾವಿಂದು ಇಂತಹ ಭೀಕರ ಸಾಧ್ಯತೆಗಳ ಬಗ್ಗೆ ಯೋಚಿಸಿ ಅಂಜುತ್ತಿರುವಾಗಲೇ, ಜಾಗತಿಕ ಶಾಂತಿಯ ಏಕಮಾತ್ರ ವಿಶ್ವಾಸಾರ್ಹ ಬುನಾದಿಯಾದ ನ್ಯಾಯ ಎಂಬ ಮೌಲ್ಯವನ್ನು ಎತ್ತಿ ಹಿಡಿಯಬೇಕಾಗಿದೆ. ಕರ್ಫ್ಯೂ, ಮಾರ್ಷಲ್ ಲಾ, ಯುದ್ಧ, ಬಾಂಬುದಾಳಿ ಇವೆಲ್ಲಾ ವಿನಾಶಕ್ಕೆ ಕಾರಣವಾಗುತ್ತವೆಯೇ ಹೊರತು ಶಾಂತಿಯನ್ನು ತರುವುದಿಲ್ಲ. ದೀರ್ಘ ಕಾಲ ಬಾಳುವ ಶಾಂತಿಯನ್ನು ಸ್ಥಾಪಿಸುವ ಶಕ್ತಿ ಇರುವುದು ನ್ಯಾಯಕ್ಕೆ ಮಾತ್ರ. ಜಾಗತಿಕ ರಾಜಕೀಯದ ಎಲ್ಲ ಪಾತ್ರಧಾರಿಗಳು ಸೇರಿ ಮನಸ್ಸು ಮಾಡಿದರೆ ದೇಶ, ಧರ್ಮ, ಜನಾಂಗ ಇತ್ಯಾದಿ ಎಲ್ಲ ಗೋಡೆಗಳನ್ನು ಮೀರಿ ಎಲ್ಲರಿಗೆ ನ್ಯಾಯ ಒದಗಿಸಬಲ್ಲ ಸರ್ವ ಸಮ್ಮತ ಅಂತರ್‌ರಾಷ್ಟ್ರೀಯ ಕಾನೂನುಗಳ ಮೂಲಕವೇ ಎಲ್ಲ ವಿವಾದಗಳನ್ನು ಬಗೆಹರಿಸಿ, ಎಲ್ಲರಿಗೆ ಅವರ ಹಕ್ಕುಗಳು ಸಿಗುವಂತೆ ಮಾಡಲು ಖಂಡಿತ ಸಾಧ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Similar News