ಚುನಾವಣಾ ಫಲಿತಾಂಶದ ಬಗ್ಗೆ ನಾವು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ : ಶೋಭಾ ಕರಂದ್ಲಾಜೆ
ಉಡುಪಿ: ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವ ಸಾಧ್ಯತೆಯ ಇಂಗಿತವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದ್ದಾರೆ.
ಅಂಬಲಪಾಡಿ ಗ್ರಾಪಂನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರನ್ನು ಚುನಾವಣೆಯಲ್ಲಿ ಪಕ್ಷದ ನಿರೀಕ್ಷೆಯ ಕುರಿತು ಪ್ರಶ್ನಿಸಿದಾಗ ಅವರು ಇಂಥ ಒಂದು ಸಾಧ್ಯತೆಯನ್ನು ತೆರೆದಿಟ್ಟರು. ಚುನಾವಣಾ ಫಲಿತಾಂಶದ ಬಗ್ಗೆ ನಾವು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.
ಸಿದ್ದರಾಮಯ್ಯ ಮಾದರಿಯಲ್ಲೇ ಕಾಂಗ್ರೆಸ್ ದೇಶಾದ್ಯಂತ ಹಣ ಹಂಚಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಆದರೂ ಕೆಲವು ರಾಜ್ಯದ ಜನರು ನಮ್ಮ ಬೆಂಬಲಕ್ಕೆ ನಿಲ್ಲಬಹುದು ಎಂದರು.
ಆ ರಾಜ್ಯಗಳಲ್ಲೂ ಸುಳ್ಳು ಗ್ಯಾರಂಟಿ ನೀಡಿದ್ದಾರೆ. ಹಣ ಹೆಂಡ ಹಂಚಿದ್ದಾರೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿಗಳು ವಿಫಲವಾ ಗಿರುವ ವಿಷಯ ಅಲ್ಲಿನ ಜನರಿಗೆ ಗೊತ್ತಾಗುತ್ತಿಲ್ಲ ಎಂದ ಶೋಭಾ, ಈಗ ನಮ್ಮ ಗಮನ ಇರುವುದು ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವ ಬಗ್ಗೆ. ಮತ್ತೊಮ್ಮೆ ಮೋದಿ ಇದು ನಮ್ಮ ಸಂದೇಶ. 2024ರಲ್ಲಿ ಬಿಜೆಪಿ ನೇತೃತ್ವದ ಮೋದಿ ಸರಕಾರ ಮತ್ತೆ ಬರಬೇಕು ಇದು ನಮ್ಮ ಉದ್ದೇಶ ಎಂದರು.
ಕಳ್ಳರ ಕೈಗೆ ಬೀಗ: ರಾಜ್ಯದ ಕಾಂಗ್ರೆಸ್ ಸರಕಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಯನ್ನು ಹಿಂಪಡೆದಿರುವ ಬಗ್ಗೆ ಪ್ರಶ್ನಿಸಿದಾಗ, ರಾಜ್ಯದಲ್ಲಿ ನಾವು ಕಳ್ಳರ ಕೈಗೆ ಬೀಗದ ಕೈಕೊಟ್ಟಿದ್ದೇವೆ. ರಾಜ್ಯದಲ್ಲಿ ಕಳ್ಳರ ತಂಡವೇ ಕ್ಯಾಬಿನೆಟಿನಲ್ಲಿ ಕೂತಿದೆ. ಅವರೇ ಕೇಸು ವಾಪಸ್ ತಗೊಳ್ತಾರೆ, ಅವರೇ ಜವಾಬ್ದಾರಿ ಹಂಚಿಕೊಳ್ಳುತ್ತಾರೆ. ಅವರೇ ದುಡ್ಡು ತಿಂತಾರೆ, ಅವರೇ ಸಂಗ್ರಹ ಮಾಡುತ್ತಾರೆ. ಬೇರೆ ಬೇರೆ ರಾಜ್ಯಗಳಿಗೆ ಚುನಾವಣೆ ನಡೆಸಲು ಇಲ್ಲಿಂದಲೇ ಹಣ ಹಂಚುತ್ತಾರೆ ಎಂದರು.
ಇಷ್ಟೊಂದು ಮುಂದುವರಿದ ಸಿಬಿಐ ಕೇಸ್‌ನ್ನು ಕೈ ಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಶೋಭಾ, ಸಾಕಷ್ಟು ವಿವಾದ ನಡೆದಿದೆ, ಸಾಕಷ್ಟು ವಿಚಾರಣೆ ನಡೆದಿದೆ, ಸಾಕಷ್ಟು ಖರ್ಚು ಆಗಿದೆ. ಈಗ ನಿರ್ಣಾಯಕ ಹಂತದಲ್ಲಿ ಕೇಸು ವಾಪಸು ತೆಗೆದುಕೊಳ್ಳುವುದು ಭ್ರಷ್ಟಾಚಾರಿಗಳ ರಕ್ಷಣೆಗೆ ಎಂದರು.
ಭ್ರಷ್ಟಾಚಾರಿಗಳ ರಕ್ಷಣೆ ಕಾಂಗ್ರೆಸ್‌ನ ನೀತಿ. ನ್ಯಾಯಾಂಗ, ಸಿಬಿಐ ಇದಕ್ಕೆ ಅವಕಾಶ ಕೊಡಲ್ಲ ಅನ್ನೋ ವಿಶ್ವಾಸ ಇದೆ. ಭ್ರಷ್ಟರಿಗೆ ಖಂಡಿತ ಶಿಕ್ಷೆಯಾಗುತ್ತೆ ಎಂದು ಶೋಭಾ ನುಡಿದರು.