ಪ್ರಜ್ವಲ್ ರೇವಣ್ಣರನ್ನು ದೇವೇಗೌಡ ಅವರೇ ವಿದೇಶಕ್ಕೆ ಕಳುಹಿಸಿದ್ದಾರೆ : ಸಿಎಂ ಸಿದ್ದರಾಮಯ್ಯ
ಯಾದಗಿರಿ : ಲೈಂಗಿಕ ಹಗರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರೇ ಯೋಜನೆ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾದ ವೇಳೆ ಮಾತನಾಡಿದ ಅವರು, "ವಿದೇಶಕ್ಕೆ ಹೋಗುವವರಿಗೆ ವೀಸಾ ಕೊಡುವುದು ಬಿಜೆಪಿಯವರೇ ತಾನೇ, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಡಿಸಿಎಂ ಡಿಕೆ ಶಿವಕುಮಾರ್ಗೂ ಯಾವುದೇ ಸಂಬಂಧ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಪೆನ್ಡ್ರೈವ್ ಪ್ರಕರಣದ ಹಿಂದೆ ಡಿಕೆಶಿ ಕೈವಾಡ ಇದೆ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, " ಕಾರ್ತಿಕ್ ಎಂಬವರು ಪ್ರಜ್ವಲ್ ಕಾರು ಚಾಲಕ ಆಗಿದ್ದ. ಈ ಕಾರ್ತಿಕ್ ಬಿಜೆಪಿ ಮುಖಂಡನ ಕೈಯಲ್ಲಿ ಪೆನ್ಡ್ರೈವ್ ಕೊಟ್ಟಿದ್ದ. ಅದನ್ನು ಆತನೇ ಹೇಳಿಕೊಂಡಿದ್ದಾನೆ. ಕುಮಾರಸ್ವಾಮಿ ಕೇವಲ ರಾಜಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದ್ದಾರೆ " ಎಂದು ಹೇಳಿದರು.
ಎಲ್ಲ ವಿಚಾರ ಗೊತ್ತಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಜ್ವಲ್ಗೆ ಯಾಕೆ ಕೊಟ್ಟರು. ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದ್ದು, ಎಸ್ಐಟಿ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ಮಾಡುತ್ತಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು