ಯಾದಗಿರಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪುನರ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸಿ : ಸಚಿವ ಸತೀಶ್ ಜಾರಕಿಹೊಳಿ

Update: 2025-01-06 17:20 GMT

ಯಾದಗಿರಿ : ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಪುನರ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸುವಂತೆ ಲೋಕೋಪಯೋಗಿ ಖಾತೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ʼಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆʼ ನಡೆಸಿ ಅವರು ಮಾತನಾಡಿದರು.

ಯಾದಗಿರಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 136.29 ಕೋಟಿ ರೂ.ಗಳ ಅನುದಾನ ಮಂಜೂರು ಆಗಿದೆ. 104.04 ಕೋಟಿ ರೂ.ಗಳ ಅನುದಾನಕ್ಕೆ ಟೆಂಡರ್ ನಿಗದಿಪಡಿಸಿದ್ದು 68.99 ಕೋಟಿ ರೂ.ಗಳಿಗೆ ಕಾಂಟ್ರಾಕ್ಟ್ ಅಮೌಂಟ್ ನಿಗದಿಪಡಿಸಿದೆ. 2023 ರಲ್ಲಿ ತಾಂತ್ರಿಕ ಬಿಡ್ ತೆರೆಯಲಾಗಿದೆ. ಒಟ್ಟು 8.75 ಕಿ.ಮೀ ಉದ್ದದ ರಸ್ತೆಗೆ ಈಗಾಗಲೇ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಪುನರ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದೆಂದು ಅವರು ಹೇಳಿದರು.

ಯಾದಗಿರಿಯಿಂದ ತೆಲಂಗಾಣ ರಾಜ್ಯಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ರಾಮಸಮುದ್ರ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದ್ದು, ತೆಲಂಗಾಣಕ್ಕೆ ಹೋಗಲು ರಾಮಸಮುದ್ರ ವ್ಯಾಪ್ತಿಯಲ್ಲಿ ಕಿರಿದಾದ ರಸ್ತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರತ್ಯೇಕ ಇಳಿಜಾರು ರಸ್ತೆ ರೂಪಿಸುವ ಕುರಿತಂತೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅದರಂತೆ ಯಾದಗಿರಿ ಹತ್ತಿಗೂಡೂರು, ಹತ್ತಿಗೂಡುರ- ತಿಂಥಣಿ, ಬೋರಬಂಡಾ, ಹತ್ತಿಕುಣಿ, ರಸ್ತೆಗಳ ದುರಸ್ತಿಗೆ ಸೂಕ್ತ ಗಮನ ನೀಡುವಂತೆ ತಿಳಿಸಿದ ಅವರು ಯಾದಗಿರಿ ನಗರದ ಹಳೆ ಪ್ರವಾಸಿ ಮಂದಿರ ತೆರವುಗೊಳಿಸಿ ನೂತನ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ಯಾದಗಿರಿ, ಹುಣಸಗಿ, ಸುರಪುರಗಳಲ್ಲಿ ಹೆಲಿಪ್ಯಾಡ್ ನಿರ್ಮಾಣದ ಪ್ರಸ್ತಾವನೆಗಳು, ರಾಜ್ಯ ಹೆದ್ದಾರಿ ಭೂಗಡಿ ನಿಗದಿಪಡಿಸಲು ಸರ್ವೆ ಕಾರ್ಯ ಪ್ರಗತಿ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿನ ರಸ್ತೆಗಳ ದುರಸ್ತಿಗೆ ಸಂಬಂಧ ಪಟ್ಟಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ 753.99 ಕಿ.ಮೀ ಉದ್ದದ ರಸ್ತೆ ನಿರ್ವಹಣೆ ಮಾಡಲಾಗುತ್ತಿದೆ. ಬಾಕಿ ಉಳಿದ ರಸ್ತೆಗಳ ನಿರ್ವಹಣಾ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಸೂಚನೆ ನೀಡಿ, ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ಸೂಕ್ತ ಗಮನ ನೀಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಪಟ್ಟಣದ ಬೈಪಾಸ್ ರಸ್ತೆ ಹಾಗೂ ಸುರಪುರ ತಾಲೂಕಿನ ಹುಣಸಗಿ ಪಟ್ಟಣಕ್ಕೆ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗಳ ಪ್ರಸ್ತಾವನೆಗಳ ಬಗ್ಗೆ ಸಚಿವರು ಮಾಹಿತಿ ಪಡೆದು, ರಾಷ್ಟ್ರೀಯ ಹೆದ್ದಾರಿ 150, ಕಲಬುರಗಿ, ವಾಡಿ, ಯಾದಗಿರಿ, ಕಡೆ ಚೂರು, ತೆಲಂಗಾಣ ಗಡಿ ಹಾಗೂ ರಾಷ್ಟ್ರೀಯ ಹೆದ್ದಾರಿ 150 ಎ, ಜೇವರ್ಗಿ, ಚಾಮರಾಜನಗರ ರಸ್ತೆ, ಸೇರಿದಂತೆ ಏಕಪಥ ರಸ್ತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಜಿಲ್ಲೆಯ ವಿವಿಧ ರಸ್ತೆಗಳ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಶಾಸಕರಾದ ಚೆನ್ನಾರಡ್ಡಿ ಪಾಟೀಲ್ ತುನ್ನೂರ್, ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ, ಸುರಪುರ ಶಾಸಕ ವೇಣುಗೋಪಾಲ ನಾಯಕ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ., ಜಿಲ್ಲಾ.ಪಂ ಸಿಇಓ ಲವೀಶ ಒರಡಿಯಾ, ಎಸ್ಪಿ ಪೃಥ್ವಿಕ್ ಶಂಕರ್, ಮುಖ್ಯ ಅಭಿಯಂತರ ಶರಣಪ್ಪ ಸುಲುಗುಂಟೆ ರಾಷ್ಟ್ರೀಯ ಹೆದ್ದಾರಿ ಮುಖ್ಯ ಅಭಿಯಂತರ ಮನ್ಮಥಯ್ಯ ಸ್ವಾಮಿ, ಯಾದಗಿರಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಅಭಿಮನ್ಯು ಸೇರಿದಂತೆ ಲೋಕೋಪಯೋಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತ ರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News