ಈಶ್ವರಪ್ಪ ಅವರು ಜನರ, ಸ್ವಾಮೀಜಿಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಡಾ.ಭೀಮಣ್ಣ ಮೇಟಿ
ಯಾದಗಿರಿ : ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಕ್ರಾಂತಿ ವೀರ ಬ್ರೀಗೇಡ್ ಕಟ್ಟಲು ಮುಂದಾಗಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮ ಶೀಘ್ರದಲ್ಲಿ ನಡೆಯಲಿದೆ ಯಾವುದೇ ಸ್ವಾಮೀಜಿಗಳು ಇದರಲ್ಲಿ ಭಾಗವಹಿಸಬಾರದು. ಇದಲ್ಲದೇ ತಿಂಥಣಿ ಸ್ವಾಮೀಜಿ ಅವರು ಕೂಡ ಹೋಗಬಾರದು ಎಂದು ಕಾಗಿನೆಲೆ ಮಹಾಂಸ್ಥಾನ ಕನಕಗುರುಪೀಠ ಧರ್ಮದರ್ಶಿ ಡಾ.ಭೀಮಣ್ಣ ಮೇಟಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನದ ಬಗ್ಗೆ ಕೇಳುವುದು ಬಿಟ್ಟು ಮನು ಸಿದ್ಧಾಂತ ಸ್ಥಾಪಿಸಲು ಮುಂದಾಗಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ತಿಂಥಣಿ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ಹೀಗಾಗಿ ಕ್ರಾಂತಿ ವೀರ ಬ್ರೀಗೇಡ್ ಉದ್ಘಾಟನೆಗೆ ಹೋಗಲು ತಿಂಥಣಿ ಸ್ವಾಮೀಜಿ ಅವರು ಮರು ಪರಿಶೀಲನೆ ಮಾಡಬೇಕು ಎಂದರು.
ಈ ಹಿಂದೆ ಸಂಗೋಳ್ಳಿ ರಾಯಣ್ಣ ಬ್ರೀಗೇಡ್ ಕಟ್ಟಿ ಇಡೀ ಸಮಾಜವನ್ನು ಹಾಳು ಮಾಡಿದ್ದಾರೆ. ಈಶ್ವರಪ್ಪ ಅವರು ಬರೀ ಜನರು ಮತ್ತು ಸ್ವಾಮೀಜಿಗಳನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಕಲ್ಯಾಣ ಕರ್ನಾಟಕ ಕುರುಬರ ಸಂಘ ಸ್ಥಾಪಿಸುವುದಕ್ಕಾಗಿ ಹೇಳಿರುವುದು ಸರಿಯಲ್ಲ. ಈಗಾಗಲೇ ಕರ್ನಾಟಕ ಪ್ರದೇಶ ಕುರುಬರ ಸಂಘವಿದೆ. ಈ ಭಾಗದ ಸಮಸ್ಯೆಗಳು ಇದ್ದರೆ ಕೇಂದ್ರ ಸಂಘದ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.