ಯಾದಗಿರಿ | ಅತಿಕ್ರಮಣ ಕಟ್ಟಡಗಳನ್ನು ಕಾನೂನಿನ ಚೌಕಟ್ಟಿನಲ್ಲೇ ತೆರವುಗೊಳಿಸಿ : ಲಲಿತಾ ಅನಪೂರ
ಯಾದಗಿರಿ : ನಗರದ ಬಸವೇಶ್ವರ ಬಡಾವಣೆಯಲ್ಲಿ ಧೋಕಾ ಜೈನ್ ಶಾಲೆಯಿಂದ ಆಗಿರುವ ಅತಿಕ್ರಮಣ ಹಾಗೂ ಕಾನೂನು ಬಾಹಿರ ನಿರ್ಮಿಸಿದ ಕಟ್ಟಡವನ್ನು ಕಾನೂನು ಚೌಕಟ್ಟಿನಲ್ಲೇ ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ನಗರಸಭೆ ಆಧ್ಯಕ್ಷೆ ಲಲಿತಾ ಅನಪೂರ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರಸಭೆಗೆ ಸೇರಿದ್ದ 2,100 ಚದರ ಅಡಿ ಉದ್ಯಾನವನ್ನು ಅತಿಕ್ರಮಣ ಮಾಡಿಕೊಂಡು ಅನಧಿಕೃತವಾಗಿ ಶಾಲಾ ಆಡಳಿತ ಮಂಡಳಿಯಿಂದ ಕಂಪೌಂಡ್ ಗೋಡೆಯನ್ನು ಕಟ್ಟಿಕೊಳ್ಳಲಾಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಕಂಪೌಂಡ್ ಗೋಡೆಯನ್ನು ತೆರವುಗೊಳಿಸಿ ಉದ್ಯಾನವನ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಕಳೆದ ಎರಡು ದಶಕಗಳಿಂದ ಆಗದೇ ಇರುವ ತೆರವು ಕಾರ್ಯವನ್ನು ನಗರಸಭೆ ಕೈಗೆತ್ತಿಕೊಂಡಿದ್ದು, ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಅತಿಕ್ರಮಣಗಳ ತೆರವು ಕಾರ್ಯ ಮುಂದುವರಿಯಲಿದೆ ಸಾರ್ವಜನಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಾಲಾ ಕಟ್ಟಡ ಸೇರಿದಂತೆ ಪಕ್ಕದಲ್ಲಿ ನಿರ್ಮಿಸಿದ ನೆಲಮಹಡಿ ಸೇರಿದಂತೆ 5 ಅಂತಸ್ತಿನ ಬಹುಮಹಡಿ ಕಟ್ಟಡದ ನಗರಸಭೆಗೆ ನೀಡಿದ ಕಟ್ಟಡದ ವಿನ್ಯಾಸ, ಪರವಾನಿಗೆ ಹಾಗೂ ತೆರಿಗೆ ಪಾವತಿ ಕುರಿತು ದಾಖಲೆಗಳು ಕಚೇರಿಗೆ ಸಲ್ಲಿಸುವಂತೆ ಶಾಲಾ ಆಡಳಿತ ಮಂಡಳಿಗೆ 3 ನೋಟಿಸ್ ನೀಡಲಾಗಿದೆ. ಡಿ.4 ರಂದು ಅಂತಿಮ ನೋಟಿಸ್ ನೀಡಲಾಗಿದೆ. ಆದರೂ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಈ ಮಧ್ಯೆ ನಗರಸಭೆ ನೀಡಿದ 4ನೇ ನೋಟಿಸ್‌ಗೆ ಬಹುಮಹಡಿ ಕಟ್ಟಡಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರಿಂದ ತಡೆಯಾಜ್ಞೆಯನ್ನು ತಂದಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಿ ಅಕ್ರಮವಾಗಿ ನಿರ್ಮಿಸಿದ ಬಹುಮಹಡಿ ಕಟ್ಟಡವನ್ನು ಡೆಮಾಲಿಸ್ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ವಿಷಯದಲ್ಲಿ ಯಾರದೇ ಮುಲಾಜಿಗೆ, ಒತ್ತಡಕ್ಕೆ ಒಳಗಾಗುವ ಪ್ರಶ್ನೆಯೆ ಇಲ್ಲಾ ಎಂದು ಅಧ್ಯಕ್ಷರು ಸ್ಪಷ್ಟ ಪಡಿಸಿದರು.
ಪ್ರಸ್ತುತ ಶಾಲಾ ಕಟ್ಟಡದಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲ. ಆದ್ದರಿಂದ, ಶಿಕ್ಷಕರು ಪ್ರಕೃತಿಯ ಕರೆಗಳಿಗೆ ಹೋದಾಗಲೆಲ್ಲಾ ಹುಡುಗಿಯರನ್ನು ಅಪಾರ್ಟ್ಮೆಂಟ್‌ಗೆ ಕರೆದೊಯ್ಯುತ್ತಾರೆ.
ಕಾಂಪೌಂಡ್ ಗೋಡೆಯನ್ನು ನಿರ್ಮಿಸಿದ ನಂತರ, ಶಾಲೆಗೆ 10 ಮೀಟರ್ ಜಾಗದ ಪ್ರವೇಶದ್ವಾರವನ್ನು ಹೊರತು ಪಡಿಸಿ ಯಾವುದೇ ಆಟದ ಮೈದಾನವಿಲ್ಲ. ಅದು ಸಹ ನಗರಸಭೆಗೆ ಸೇರಿದೆ ಶಾಲೆಯ ಗೇಟನ್ನು ತ್ವರಿತವಾಗಿ ತೆರವುಗೊಳಿಸಿ ರಸ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.