ಯಾದಗಿರಿ | ಗ್ರಾಮೀಣ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ : ಶಾಂತಗೌಡ ಪಾಟೀಲ್

Update: 2024-12-10 14:36 GMT

ಯಾದಗಿರಿ : ಎಲೆ ಮರಿ ಕಾಯಿಯಂತೆ ತಲ ತಲಾಂತರದಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್ ಹೇಳಿದರು.

ವಡಿಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮದ ಪ್ರಜ್ಞಾವಂತ ಬಳಗ ಹಾಗೂ ಕೊಂಕಲ್ ವಲಯ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಹಜವಾಗಿ ನಗರ ಪ್ರದೇಶದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಾರೆ, ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಹೆಚ್ಚಾಗಿ ಯಾರೂ ಕೂಡ ಗುರುತಿಸುವುದಿಲ್ಲ, ಆದರೆ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಿರುವ ಕಾರ್ಯಗಳು ಪ್ರಜ್ಞಾವಂತ ಬಳಗದ ವತಿಯಿಂದ ಇನ್ನು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕಿ ಶ್ರೀದೇವಿ ಆರ್.ನಾಯಕ್ ಅರಿಕೇರಿ ಮಾತನಾಡಿ, ಕೊಂಕಲ್ ಗ್ರಾಮ ಕವಿ ಸಾಹಿತಿ ಕಲೆಗಾರರ ಬೀಡಾಗಿದೆ. ಬಡವರ ಡಾಕ್ಟರ್ ಎಂದೆ ಪ್ರಸಿದ್ಧರಾದ ಡಾ.ಎಸ್.ಎಸ್.ಗುಬ್ಬಿ ಸರ್ ಅವರ ಕಾರ್ಯ ನಮ್ಮೆಲ್ಲರಿಗೂ ಮಾದರಿ ಅವರ ವೈದ್ಯಕೀಯ ಸೇವೆ ಅಗಾಧವಾದದ್ದು. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಅವರನ್ನು ಸರಕಾರ ಆಯ್ಕೆ ಮಾಡಬೇಕಾಗಿತ್ತು, ಆದರೆ ಕೊನೆಗಳಿಗೆಯಲ್ಲಿ ಕೈತೆಪ್ಪಿತ್ತು. ನಿಸ್ವಾರ್ಥ ಸೇವೆ ಸಲ್ಲಿಸುವ ಇಂಥವರಿಗೆ ಪ್ರಶಸ್ತಿಗಳು ಸಿಗುವಂತಾಗಬೇಕು, ಸುವರ್ಣ ಕರ್ನಾಟಕ ಪ್ರಶಸ್ತಿಯಲ್ಲಿ ಇವರನ್ನು ಆಯ್ಕೆ ಮಾಡಿರುವುದು ನಮ್ಮೆಲ್ಲರಿಗೂ ಸಂತಸವಾಗಿದೆ. ಏನೇ ಕೆಲಸ ಕಾರ್ಯಗಳಿದ್ದರೂ ನನ್ನ ಗಮನಕ್ಕೆ ತನ್ನಿ ನನ್ನ ಶಕ್ತಿಮೀರಿ ಸಹಾಯ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ನಾಡಗೀತೆ ರೈತ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಈ ಸಮಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಎಸ್.ಗುಬ್ಬಿ, ಜಾನಪದ ಕಾಷ್ಟ ಶಿಲ್ಪಿ ಬನ್ನಪ್ಪ ಬಡಿಗೇರ್ ಚೆನ್ನೂರ್, ಹಾಗೂ ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಬ್ದುಲ್ ಚಿಗಾನೂರ , ನಿಂಗಣ್ಣ ಜಡಿ, ವೀರೇಶ್ ಕೂಂಕಲ್ ಹಾಗೂ ಇನ್ನಿತರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಲಿಂಗಣ್ಣ ತಾತ ಗೊಂದೆನೂರ ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಬಸವರಾಜ ಪಾಟೀಲ ಕೋದಂಡ ವಹಿಸಿದ್ದರು, ಬಸವರಾಜ್ ಕಲೆಗಾರ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಚಾಪೇಲ, ಪ್ರಜ್ಞಾವಂತರ ಬಳಗದ ಅಧ್ಯಕ್ಷ ಪ್ರೊಫೆಸರ್ ವೆಂಕಣ್ಣ ಡೊಣ್ಣೆಗೌಡರ, ಕಸಾಪ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಶಿಲ್ಪಕಲಾ ಅಕಾಡೆಮಿ ಸದಸ್ಯ ಹಣಮಂತ ಬಾಡದ, ವಲಯ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕಾವಲಿ, ಸಾಹೇಬರೆಡ್ಡಿ ಇಟಗಿ, ಚರಿತಾ ಕೊಂಕಲ್ ,ಹೊನ್ನಪ್ಪ ಗೊಂದೆನೂರ, ಶರಣು ದಿವಳಗುಡ್ಡ, ಹಾಗೂ ಪ್ರಜ್ಞಾವಂತ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಅಂಬಣ್ಣ ಕಾವಲಿ ನಿರೂಪಿಸಿದರೆ, ಶಿಕ್ಷಕ ಶರೀಫ್ ಕೊಂಕಲ್ ಸ್ವಾಗತಿಸಿದರು, ಶಿಕ್ಷಕ ವೀರೇಶ್ ಕೊಂಕಲ್ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News