ಯಾದಗಿರಿ | ಕನ್ನಡ ಭಾಷೆ ಬಳಕೆ ಮಾಡದ ಬ್ಯಾಂಕುಗಳಿಗೆ ನುಗ್ಗುತ್ತೇವೆ : ಕರವೇ ಮುಖಂಡ ಭೀಮುನಾಯಕ ಎಚ್ಚರಿಕೆ
ಯಾದಗಿರಿ : ಕನ್ನಡ ಭಾಷೆ ಬಳಕೆ ಮಾಡದೇ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಉಲ್ಲಂಘಿಸುತ್ತಿರುವ ಜಿಲ್ಲೆಯ ವಿವಿಧ ಬ್ಯಾಂಕುಗಳು ಕನ್ನಡ ಭಾಷೆಯಲ್ಲಿ ಸೇವೆ ನೀಡಬೇಕು, ಇಲ್ಲದಿದ್ದರೆ ಅವರಿಗೆ ಕನ್ನಡ ಪಾಠ ಕಲಿಸಲು ನಮ್ಮ ಕಾರ್ಯಕರ್ತರು ಬ್ಯಾಂಕಿಗೆ ನುಗ್ಗುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಆರ್.ಬಿ.ಐ. ಮಾರ್ಗದರ್ಶಿ ಸೂತ್ರಗಳನ್ವಯ ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಪ್ರಸಕ್ತ ವರ್ಷ ಆರಂಭದಲ್ಲಿಯೇ ಸೂಚಿಸಿದೆ. ಆದರೆ ವರ್ಷಾಂತ್ಯಕ್ಕೆ ಬಂದರೂ ಇದುವರೆಗೆ ಬ್ಯಾಂಕುಗಳು ಆರ್ಬಿಐ ಸೂಚನೆಗಳನ್ನು ಪಾಲಿಸದೇ ಉದ್ಥಟತನವನ್ನು ಮೆರೆಯುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ, ನೀತಿ ನಿಯಮಾವಳಿ ರೂಪಿಸಿದರೂ ಅವುಗಳನ್ನು ಪಾಲನೆ ಮಾಡದೇ ಇರುವುದನ್ನು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಜಿಲ್ಲಾಧಿಕಾರಿಗಳು ತೆಪ್ಪಗಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಸೂಚನಾ ಫಲಕಗಳು, ಬ್ಯಾಂಕ್ ನ ಚಲನ್ ಗಳು ಸೇರಿದಂತೆ ಎಲ್ಲ ರಶೀದಿಗಳು ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವಂತೆ ನೋಡಿಕೊಳ್ಳಬೇಕು, ಹೊರ ರಾಜ್ಯ ಬ್ಯಾಂಕ್ ಸಿಬ್ಬಂದಿಗಳು ಬಂದರೆ ಅವರು ಸ್ಥಳೀಯ ಭಾಷೆಯ ದುಬಾಷಿಯ ನೆರವು ಪಡೆದು ರೈತರು, ಅನಕ್ಷರಸ್ಥರ ಮನವಿಯನ್ನು ಅರಿತುಕೊಂಡು ಅವರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ನಿಯಮಾವಳಿಗಳು ಹೇಳುತ್ತಿದ್ದರೂ, ಯಾರೋಬ್ಬರೂ ಇದನ್ನು ಮಾಡದೇ ರೈತರು, ಗ್ರಾಮೀಣರನ್ನು ಕಚೇರಿಗೆ ಅಲೆಯುವಂತೆ ಮಾಡುತ್ತಿರುವುದು ಕರವೇ ಗಮನಕ್ಕೆ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೇ ಬ್ಯಾಂಕ್ಗೆ ಬಂದಂತಹ ಗ್ರಾಹಕರಿಗೆ ವಿಶಾಲವಾದ ಜಾಗ ಮತ್ತು ಆಸನಗಳ ವ್ಯವಸ್ಥೆ ಅಲ್ಲದೇ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಬೇಕೆಂಬ ನಿಯಮಗಳೂ ಸಹ ಇಲ್ಲಿ ಗಾಳಿಗೆ ತೂರಲಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಲೀಡ್ ಬ್ಯಾಂಕ್ ವ್ಯವಸ್ಥಾಕರು, ಈ ಎಲ್ಲ ಅವ್ಯವಸ್ಥೆಗಳನ್ನು ಕಾಲಕಾಲಕ್ಕೆ ಸಭೆ ಕರೆದು, ಪರಿಶೀಲನೆ ನಡೆಸಿ ಸರಿಪಡಿಸುವ ಕೆಲಸ ಮಾಡಬೇಕು ಆದರೆ ಇದಾವುದು ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದರು.
ತಕ್ಷಣ ಉಭಯ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು, ಇಲ್ಲದಿದ್ದರೆ ನಮ್ಮ ಕರವೇ ಕಾರ್ಯಕರ್ತರೊಂದಿಗೆ ಬ್ಯಾಂಕುಗಳಿಗೆ ನುಗ್ಗಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಆಗ ಆಗುವ ಘಟನಾವಳಿಗಳಿಗೆ ಉಭಯ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು.